Oct 162011
ಕೆಳಗಿನ ಸಾಲು ಕಂದ ಪದ್ಯದ ಕೊನೆಯ ಸಾಲು. ಮೇಲಿನ ಮೂರು ಸಾಲುಗಳನ್ನು ಪೂರೈಸಿರಿ ::
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ!
(ಕಮಲ ಮತ್ತು ಚಂದ್ರರಿಗೆ ಹೊಂದಿಕೆಯಿಲ್ಲವೆಂಬ ಕವಿಸಮಯವನ್ನು ಆಧರಿಸಿದ ಸಮಸ್ಯೆಯಿದು)
ವಿ.ಸೂ :: ಇದು ಗಣೇಶರು ನೀಡಿದ ಸಮಸ್ಯೆ
ಕಂದ ಪದ್ಯದ ಛಂದಸ್ಸಿನ ವಿವರಣೆ ಇಲ್ಲಿದೆ
ಕಮಲಂ ಮೊಗಮಂ ಪೋಲಿಸ-
ಲಮಿತರಚನೆಗಳ್ ನೆಗಳ್ತೆಯಕ್ಕುಂ
ಪ್ರಮೆಯುಂ ಮುಖಚಂದ್ರಮಿರಲ್
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ?
ಈ ಪೂರಣದಲ್ಲಿ ನಾಲ್ಕನೆಸಾಲಿನ ‘ಕಮಲಂ’ ಅನ್ನು ಮೂರನೇ ಸಾಲಿನ ಕೊನೆಗೆ ಅಳವಡಿಸಾಗಲ್ಲಿಲ್ಲ 🙁
ಎರಡನೆ ಸಾಲಿನಲ್ಲಿ ಒಂದು ಗಣ ಕಡಿಮೆಯಾಗಿತ್ತು ಸರಿಪಡಿಸಿದ್ದೇನೆ. ತಿಳಿಸಿಕೊಟ್ಟಿದ್ದಕ್ಕಾಗಿ ರಾಮರಿಗೆ ಧನ್ಯವಾದಗಳು
ಕಮಲಂ ಮೊಗಮಂ ಪೋಲಿಸ-
ಲಮಿತರಚನೆಗಳ್ ನೆಗಳ್ತೆಯಕ್ಕುಂ ಚಂದ್ರಗು-
ಪಮೆಯುಂ ಮೊಗಮಿರಲಂದಂದ-
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ?
ಟೈಪೋ ಸರಿಪಡಿಸಿದ್ದೇನೆ
ಕಮಲಂ ಮೊಗಮಂ ಪೋಲಿಸ-
ಲಮಿತರಚನೆಗಳ್ ನೆಗಳ್ತೆಯಕ್ಕುಂ ಚಂದ್ರಗು-
ಪಮೆಯುಂ ಮೊಗಮಿರಲಂದದ-
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ?
ನಿಮಿರಲ್ ಚಂದಿರ ಮುಖದೊಳ್
ಸುಮಕೆಂದಾವರೆಯಪೋಲುವಳಿಕಂ ಸತಿಯೊಳ್ |
ನೆಮರ್ದ ಪತಿಗೇಕಾಂತದಿ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ ||
ನಿಮಿರು = ಹರಡು, ಅಳಿಕ = ಹಣೆ, ನೆಮರು = ಮೆಲುಕು ಹಾಕು
ಕಮರುವವೀರ್ವರ ವದನಂ
ಸುಮನ ಸುಧೀರ ಸುಕುಮಾರ ಮಿತ್ರನಿರದಿರಲ್ |
ರಮಣೀಯಂ ಸಖಿ ಬಿರಿಮುಖ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ ||
{ಸಖಿಗೆ ಮಿತ್ರ (ಗೆಳೆಯ), ಚಂದ್ರಂಗೆ ಮಿತ್ರ (ಸೂರ್ಯ) ಇಲ್ಲದಿರಲು ಬಾಡುವರು ಎಂಬರ್ಥ.}
ಸೋಮ, ರಾಮ್ ಮತ್ತು ಕಾಂಚನರ ಪರಿಹಾರಗಳಲ್ಲಿ ಕಲ್ಪನೆಯ ನಾವೀನ್ಯವಿದೆ. ಆದರೆ ಸ್ವಲ್ಪ ಅನ್ವಯಕ್ಲೇಶ, ವ್ಯಾಕರಣಪ್ರಮಾದ ಹಾಗೂ ಪದ್ಯಗತಿಯ ಶೈಥಿಲ್ಯವಿದೆ. ಇವನ್ನು ವಿಸ್ತರಿಸಿ ಮುಖತಃ ತಿಳಿಸಲು ಸಾಧ್ಯ. ಏಕೆಂದರೆ ವಿವರಣೆಗೆ ಸೋದಾಹರಣಕ್ರಮವೇ ಬೇಕು ಮತ್ತದು ಹೆಚ್ಚಿನ ಕಾಲ-ಸ್ಥಲಗಲನ್ನು ಅಪೇಕ್ಷಿಸುತ್ತದೆ.
ಧನ್ಯವಾದ ಸಾರ್, ನಮ್ಮ ವ್ಯಾಕರಣದ ದೋಷ ಪರಿಹಾರದ ಪಾಠಕ್ಕಾಗಿ ನಿಮ್ಮನ್ನ ಭೇಟಿ ಮಾಡುತ್ತೇವೆ
ಪೆಣ್ಗಳ ಕ್ಷಮೆ ಕೋರಿ:
ಪ್ರಹರಿ ಸ್ವತಂತ್ರ ಗಂಡಸು
ಚಿರಾಯು ಶಿಲೆಮಣ್ಗಳಿಂದೆ ದೃಢನೆನಿಸಿದಿವ|
ಸ್ಥಗಿತಳ್ಬಾಡುವ ಕೋಮಲೆ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ?
ಕಮಲದ ಮೊಗದೊಳ್ ಶಶಿಯಾ
ಗಮಿಸಿದನೆನಿಪಂತೆಕಾಂತಿ ಬೆಳಗಲಿನಿಯನಾ
ಗಮನದಿ ಕೆಂಪೇರಿದ ಮುಖ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ಪೊಳೆವ ನಯನವದು ಮನದೊಳು
ಸುಳಿದಿರೆ ಕಳೆವುದು ವಿಷಯ ಸುಖ ಸರಸತಿ ವಾಣಿ
ಸೆಳೆದಿರೆ ನಿನ್ನಾ ಸುಮಮುಖ
ಕಮಲ೦ ಚ೦ದ್ರ೦ಗೆ ತಕ್ಕುದೆನಿಸಿತ್ತಲ್ತೇ
ಎಂದಿನಂತೆ ಮ್ಂಜುನಾಥರ ಪರಿಹಾರ ಸೊಗಸಾಗಿದೆ, ಕಲ್ಪನೆಯಲ್ಲಿ ನವಿನತೆಯಿದೆ. ಹರೀಶರ ಪರಿಹಾರದಲ್ಲಿ ಮತ್ತೆ ಛಂದೋದೋಷವೊದಗಿದೆ. ಈ ಸಮಸ್ಯೆಗೆ ನನ್ನ ಪರಿಹಾರವನ್ನು ಯಾವಾಗ ಸೂಚಿಸಲಿ? ಕಾಂಗ್ರೆಸ್ ಮತ್ತು ಬಿಜೆಪಿಗಳ ಮಂತ್ರಿಗಳೆಲ್ಲ ಸರೆಮನೆ ಸೇರಿದ ಬಳಿಕ ಕಳುಹಲೇ?;-
ಮಾನ್ಯರೇ, ಅಷ್ಟೊಂದು ದಿನ ಕಾಯಿಸಬೇಡಿ; ನಾವೆಲ್ಲಾ ಅದುವರೆಗೂ ಇರುತ್ತೇವೋ ಎನ್ನುವುದೇ ನಂಬಿಕೆಯಿಲ್ಲ 🙂
ಚೌಪದಿಯೊಳ್ ಕವಿತೆಗಳಂ
ರೂಪಿಸಲಹಮಹಮಿಕೆಯೊಳುಪಾರ್ಜಿತಬಲದಿಂ
ಭಾಪೆನೆ ಬಂದ ಸಖರೆ! ಸ-
ಲ್ಲಾಪಕೆ ತೊಡಕಾಯ್ತೆ ಕಂದಂ? ಎತ್ತಿ ಕೊಳುವುದಯ್!!!
ಗಣೇಶ್ ಸಾರ್,
ನೀವು ಹೇಳುತ್ತಿರುವುದು ಒಪ್ಪುತ್ತೇವೆ ಅಭ್ಯಾಸವಿಲ್ಲದ ನಮಗೆ ಕಂದದ(ನ) ಸುಧಾರಣೆ ಕಷ್ಟ 🙂
ಆದರೆ…
ಚೌಪದಿಯೊಳ್ ತಾ (ಚೌಪದಿಬಲದಿಂ) ನಿಲ್ಲುತ
ದಾಪಿಡೆ ಕಂದಂ ಮುಡಂಗು ನಡೆಯೊಳ್ ತೊಡರಲ್
ತಾಪಂ ನೀಗಿಪ ನಲ್ಮೆಯ
ಕಾಪಿಡುವಕರವು ತೊಡಂಕನಳಿಪುದು ನನ್ನಿs
ಮುಡಂಗು – ಡೊಂಕು
ಶ್ಲೆಷಾಲಂಕಾರದ ಪ್ರಯತ್ನ ಮಾಡಿದ್ದೇನೆ
೧. ಚೌಪದಿಯ ರಚಿಸಬಲ್ಲ ವಿದ್ಯಾರ್ಥಿಯ ಕಂದ ಕಲಿಕೆಯ ತೊಡಕುಗಳು ಮತ್ತು ಗುರುನೆರವಿನ ಸಹಾಯ ಹಸ್ತದ ಬಲದಿಂದ ಕಂದ ರಚಿಸುವ ಆಶಾವಾದ
೨. ಚೌಪದಿಯಲ್ಲಿ ನಿಲ್ಲುವ ಕಂದನ ಮೊದಲ ತೊಡರಿಕೆ ಮತ್ತು ತಾಯಿಯ ಸಹಾಯದಿಂದ ನಡಿಗೆ ಕಲಿಕೆ
ತುಂಬ ಸೊಗಸಾದ ಕಲ್ಪನೆ. ವಿಶೇಷತಃ ಚೌಪದಿ ಎನ್ನುವಾಗ ಮಗುವು ಅಂಬೆಗಾಲಿಟ್ಟು ಸಾಗುವ ಬಗೆ ಚೆನ್ನಾಗಿ ಧ್ವನಿಸುತ್ತದೆ. ಸೋಮ ಅವರೆ, ಇಮ್ಥ ಒಳ್ಳೆಯ ಕಲ್ಪನೆಳನ್ನು ಮಾಡಬಲ್ಲ ನಿಮ್ಮಂಥವರಿಗೆ ಸ್ವಲ್ಪಮಟ್ಟದ ವ್ಯುತ್ಪತ್ತಿಯೇನೂ ದೊಡ್ಡ ಸಂಗತಿಯಲ್ಲ. ಬೇಗನೆ ಅದು ಸಿದ್ಧಿಸುತ್ತದೆಂಬುದರಲ್ಲಿ ನನಗೆ ಸಂದೇಹವಿಲ್ಲ. ಮಹಾಕವಿಗಳ ಸೊಗಸಾದ ರಚನೆಗಳನ್ನು ಎಚ್ಚರವಿರಿಸಿ ಓದುವುದೊಂದೇ ದಾರಿ:
ಸರಸಕವಿಗಳ ವಚೋವೈ-
ಖರಿಯೇ ತಾಯ್, ಕೋಶ-ಶಾಸ್ತ್ರಸಂಗತಿ ಜನಕಂ|
ನೆರವೀವ ಮಿತ್ರರಾಟಿಕೆ
ದೊರಕಲ್ ಕಂದಂಗೆ ಸೋಮನುಂ ಚೆಂಡಪ್ಪಂ||
(ಕೋಶ=ನಿಘಂಟು, ಶಾಸ್ತ್ರ=ವ್ಯಾಕರಣ,ಛಂದಸ್ಸು, ಅಲಂಕಾರ ಇತ್ಯಾದಿ; ಗೆಳೆಯರಾದ ನಮ್ಮಂಥವರು ಆಟಿಕೆಗಳು (toys). ಹೀಗಿರಲು ಕಂದನಿಗೆ ಸೋಮ(ಚಂದ್ರ) ಕೂಡ ಚೇಡಾಗುವನೆಂಬುದರಲ್ಲಿ ಸಂದೇಹವೇ?)
Enappa idu……ಕಂದಂಗೆ ಸೋಮನುಂ ಚೆಂಡಪ್ಪಂ……ee swayandeepakate mattu accate yaavaaga baruttadO….
“ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ”
ಎ೦ಬ ಅಡಿಗ ಮಾತು…ಹೆಚ್ಚು ಅರ್ಥವಾಗುತ್ತಿದೆ….
ಗ್ರೇಟ್ ಸಾರ್….
ಕ೦ದ೦ಗೆ ಸೋಮನನ್ನು ಚೆ೦ಡಾಗಿಸುತ್ತಾ, ಸೋಮನಿಗೆ ೦ದವು ಚೆ೦ಡಾದಬಗೆಯನ್ನು ವಿವರಿಸಿರುವುದು…..ಒಳ್ಲೆಯ ವಿರೋಧಾಲ೦ಕಾರ…
ಈ ಚೆಂಡಾಟವು ಸೊಗಸಾಗಿದೆ; ಅವರ
ನಲ್ಮೆಯ
ಕಾಪಿಡುವಕರವು ತೊಡಂಕನಳಿಪುದು ನನ್ನಿs
ಎಂಬ ಸಾಲಿಗೆ ಇಂಬುಕೊಡುವಂತಿದೆ. ಇಷ್ಟು ಇಂಬು ಸಿಕ್ಕರೆ ಕಂದ ಇನ್ನು ಮನೆಯೆಲ್ಲಾ ಪುಟುಪುಟು ಓಡಾಡುವುದರಲ್ಲಿ ಸಂದೇಹವೇ ಇಲ್ಲ.
ಶ್ರೀಶ, ಮಂಜುನಾಥರೆ,
ಧನ್ಯವಾದಗಳು
ಗಣೇಶ್ ಸಾರ್,
ಧನ್ಯವಾದಗಳು!
ನಿಮ್ಮ ಪದ್ಯವು ಬಹಳ ಹಿಡಿಸಿತು… ಆಟದಿಂದ ಪಾಠ ಕಂದನಿಗೆ ಕಲಿಸುವಹಾಗೆ ಕಠಿಣವೆನ್ನಿಸುವ ಸಾಹಿತ್ಯದ ಅಂಶಗಳನ್ನು ಸುಲಭ ಸೂತ್ರಗಳಲ್ಲಿ ಕಲಿಯುವ ವಾತಾವರಣ ಕಲ್ಪಿಸಿರುವುದರಿಂದಲೇ.. ನಾವೆಲ್ಲ ಪದ್ಯವನ್ನು ಬರೆಯುವ ಪ್ರಯತ್ನ ಮಾಡುವಹಾಗಾಯಿತು…
ಶ್ರೀಷನ comment ನೋಡಿದಮೇಲೆ ಅದರಲ್ಲಿರುವ ಅದ್ಭುತವಾದ ವಿರೋಧಾಲಂಕರ ತಿಳಿದು ಇನ್ನು ಪದ್ಯವನ್ನು ಆಸ್ವಾದಿಸುವಂತೆ ಆಯಿತು
ನೀವು ಹೇಳಿದ ಹಾಗೆ ವ್ಯುತ್ಪತ್ತಿ ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ… ಮಹಾಕವಿಗಳ ಪದ್ಯಗಳನ್ನು ಓದುತ್ತೇನೆ.
ಭಲಾ ಭಲಾ… ಸೊಗಸಾದ ಕಲ್ಪನೆ ಸೋಮ ಅವರೆ… ಕಂದ ಈಗ ನಗುತ್ತಿದೆ
ದ್ಯುಮಣಿ ಕಿರಣಮ೦ ತಿರುಗಿಸಿ
ತಮಮ೦ ತಾತೊರೆವೆನೆ೦ದು ಬೀಗಿರಲವನಾ ||
ವಿಮಲಮುಖದೊಳಿಹ ವಿವಿಧಾ೦
ಕಮಲ೦ ಚ೦ದ್ರ೦ಗೆತಕ್ಕುದೆನಿಸಿತ್ತಲ್ತೇ ||
– ತನ್ನ ಸ್ವ೦ತ ಬೆಳಕಿಲ್ಲದೆಯೇ, ಸೂರ್ಯನ ಕಿರಣವನ್ನು ಭೂಮಿಗೆ ತಿರುಗಿಸಿ ಕತ್ತಲನ್ನು ತೊಡೆವವನು ತಾನೇ ಎ೦ದು ಬೀಗುವ ಚ೦ದ್ರ ನ ಶುದ್ಧವಾದಮುಖದಲ್ಲಿ ಹಲವಾರು ಗುರುತು(ಕಲೆ)ಗಳೆ೦ಬ ದೋಷವಿರುವುದು ಔಚಿತ್ಯವೇ ಆಗಿದೆ(ಅವನ ಜ೦ಭವನ್ನು ಕಡಿಮೆಮಾಡಲು).
ದ್ಯುಮಣಿ – ಸೂರ್ಯ, ಅ೦ಕ -ಗುರುತು(ಕಲೆ), ಮಲ – ದೋಷ, ತಕ್ಕು – ಔಚಿತ್ಯ
“ವಿವಿಧಾ೦ಕಮಲ೦” – ಸೊಗಸಾದ ಪೂರಣ
ಶ್ರೀಶ,
ಚಂದ್ರನಿಗೆ ವಿವಿಧ ಅಂಕದ ದೋಷ ಸರಿ ಎಂಬ ಪರಿಹಾರ ತುಂಬಾ ಚೆನ್ನಾಗಿದೆ
ಆತ್ಮೀಯರೇ
ಪದ್ಯದಲ್ಲಿನ ದೋಷವನ್ನು ತಿಳಿಸಿ. ಹಾಗೆಯೇ ಕೆಳಗಿನ ಪದ್ಯವನ್ನು ಮೌಲ್ಯಮಾಪನ ಮಾಡಿ
ಔಷಧಿಯೊಳ್ ಕಹಿಯಿದೆಯೆನೆ
ದೂರಲಹುದೆ? ಕಲೆಕೆಯೆ ಗುರಿಯಾರ್ದೊಡೆ ಸುಮನ೦
ಸಾಗದೆ ಛ೦ದ ಸಿರಿಯೊಳದು
ಕಾರಣ ಹರಸಿ೦ ಹರಿಯೆ೦ಬೀ ಶಿಷ್ಯನುನ೦
ಆನ್ಲೈನ್ ವಿದ್ಯಾರ್ಥಿ 🙂
ಹರೀಶ್ ಆತ್ರೇಯ
ಹರೀಶರೇ, ನಿಮ್ಮ ರಚನೆಗಳು ಸಾವಧಾನವಾಗಿ ಕಂದದ ಅಚ್ಚಿನೊಳಗೆ ಬರುತ್ತಿವೆ, ಮುಂದುವರೆಸಿ. ನಿಮ್ಮ ಮೊದಲ ಪದ್ಯಗಳಲ್ಲಿ ಗಮನಿಸಬೇಕಾದ್ದು ಒಂದೆರಡು ವಿಷಯ:
ಪೊಳೆವ ನಯನವದು ಮನದೊಳು
ಸುಳಿದಿರೆ ಕಳೆವುದು ವಿಷಯ ಸುಖ ಸರಸತಿ ವಾಣಿ
ಸೆಳೆದಿರೆ ನಿನ್ನಾ ಸುಮಮುಖ
ಕಮಲ೦ ಚ೦ದ್ರ೦ಗೆ ತಕ್ಕುದೆನಿಸಿತ್ತಲ್ತೇ
ಸಮಪಾದಗಳ ಮೂರನೆಯ ಗಣದಲ್ಲಿ ಜಗಣ ಅಥವ ಸರ್ವಲಘುವಿರಬೇಕೆಂದೂ, ಸರ್ವಲಘುವಿದ್ದರೆ ಆ ಗಣದ ಮೊದಲಕ್ಷರದ ಬಳಿಕ ಯತಿಯಿರಬೇಕೆಂದೂ ನಿಯಮ (ಈ ಸರ್ವಲಘು ಯತಿಯ ಬಗ್ಗೆ ಶ್ರೀ ಗಣೇಶರ ಸೊಗಸಾದ ವಿವರಣೆ ಇಲ್ಲಿದೆ ನೋಡಿ: http://padyapaana.com/?p=432 ).
ನಿಮ್ಮ ಈ ಮೇಲಿನ ಪದ್ಯದ ಎರಡನೆಯ ಸಾಲಿನ ಮೂರನೆಯ ಗಣ “ವಿಷಯ ಸು” ಎಂಬ ಸರ್ವಲಘುವನ್ನು ಹೊಂದಿದೆ. ಅಂತಾದಲ್ಲಿ ಮೊದಲಕ್ಷರದನಂತರ ಒಂದು ಯತಿ (ಚಿಕ್ಕ ನಿಲುಗಡೆ) ಬರಬೇಕಾಗುತ್ತದೆ; ಅಂದರೆ ವಿ ಎಂಬಲ್ಲಿ ಪದ ಕೊನೆಗೊಂಡು ಮುಂದಿನಕ್ಷರ ಹೊಸ ಪದದಿಂದ ಶುರುವಾಗಬೇಕು.
ಇನ್ನು ಅದೇ ಸಾಲಿನ ಕೊನೆಯ ಸರಸತಿವಾಣಿ ಎಂಬಲ್ಲಿ “ತಿ ವಾಣಿ” ಎಂಬ ಜಗಣದೊಡನೆ ಸಾಲು ಕೊನೆಯಾಗುತ್ತದೆ. ಸಮಸ್ಥಾನಗಳಲ್ಲಿ ಜಗಣವು ಬರಬಾರದೆಂಬ ನಿಯಮೇನೂ ಇರದಿದ್ದರೂ ಸರ್ವಲಘು ಗಣವಾದೊಡನೆ ಜಗಣವು ಬಂದು ಹಠಾತ್ತಾಗಿ ಸಾಲು ಕೊನೆಯಾಗುವುದು ತುಸು ತೊಡಕೆನಿಸುತ್ತದೆ. ಇದನ್ನು ಛಂದೋದೋಷವೆಂದು ನಾನು ಹೇಳುತ್ತಿಲ್ಲ, ಆದರೆ ಸೊಗಸೆನಿಸುವುದಿಲ್ಲ ಅಷ್ಟೇ. ಜೊತೆಗೆ ಈ ಕಂದದ ಮೂರೂ ಸಾಲುಗಳ ಎಲ್ಲ ಗಣಗಳೂ ಸರ್ವಲಘು ಗಣಗಳೇ ಎಂಬುದನ್ನು ಗಮನಿಸಿ (೮ ಮತ್ತು ೧೦ನೆಯ ಗಣಗಳನ್ನು ಬಿಟ್ಟು). ಆದರೆ ಕಂದದ ಸೊಗಸಿರುವುದೇ ವಿವಿಧ ನಡೆಯಿರುವ ಗಣಗಳ ಸಂಯೋಜನೆಯಲ್ಲಾದ್ದರಿಂದ ಲಘು ಗುರುಗಳ ವಿವಿಧ ಸಂಯೋಜನೆಯಿಟ್ಟು ರಚಿಸಲು ಯತ್ನಿಸಿ. ಇಲ್ಲಿ ತಾವು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಮೂರು ವಿಷಯ:
೧) ವಿಷಮ ಸ್ಥಾನಗಳಲ್ಲಿ ಜಗಣ (ಲಗಂಲ) ಬರಬಾರದು
೨) ಪ್ರತಿ ಪಾದದ ೬ನೆಯ ಸ್ಥಾನದಲ್ಲಿ ಜಗಣ (ಲಗಂಲ) ವಾಗಲೀ ಸರ್ವಲಘು (ಲಲಲಲ) ವಾಗಲೀ ಬರಬೇಕು. ಅದು ಸರ್ವಲಘುವಾದರೆ ಮೊದಲನೆಯ ಅಕ್ಷರವಾದನಂತರ ಯತಿಯಿರಬೇಕು
೩) ಪ್ರತಿ ಪಾದದ ಕೊನೆಯ ಗಣ ಗುರುವಿನಿಂದ ಅಂತ್ಯವಾಗುವುದು ಯುಕ್ತ (ಲಲಗಂ, ಗಂಗಂ); ಜಗಣ (ಲಗಂಲ)ವೂ ಬರಬಾರದೆಂದಲ್ಲ, ಆದರೆ ಮೊದಲೇ ವಿವರಿಸಿದಂತೆ ಅದು ನಡೆಗೂ ಅರ್ಥದ ಹರಿವಿಗೂ ಭಂಗತಾರದಂತಿದ್ದರೆ ಚೆನ್ನ.
ತಮ್ಮ ಎರಡನೆಯ ಪದ್ಯ:
ಔಷಧಿಯೊಳ್ ಕಹಿಯಿದೆಯೆನೆ
ದೂರಲಹುದೆ? ಕಲೆಕೆಯೆ ಗುರಿಯಾರ್ದೊಡೆ ಸುಮನ೦
ಸಾಗದೆ ಛ೦ದ ಸಿರಿಯೊಳದು
ಕಾರಣ ಹರಸಿ೦ ಹರಿಯೆ೦ಬೀ ಶಿಷ್ಯನುನ೦
ಇದರಲ್ಲೂ ಎರಡೂ ಪಾದಗಳ ಮೂರನೆಯ ಗಣಗಳನ್ನು ಗಮನಿಸಿ. ಮೊದಲನೆಯದು ಸರ್ವಲಘುವೂ (“ಕೆಯೆ ಗುರಿ”) ಎರಡನೆಯದು (“ಹರಿಯೆಂ”) ಇದೆ. ಮೊದಲನೆಯ ಸರ್ವಲಘುವಿನಲ್ಲಿ ಯತಿ ಕಾಣಿಸುತ್ತಿಲ್ಲ. ಎರಡನೆಯದು (ಹರಿಯೆಂ) ಇಲ್ಲಿ ಸರ್ವಲಘುವಾಗಲೀ ಜಗಣವಾಗಲೀ (ಲಗಂಲ) ಬರಬೇಕು.
ಆತ್ಮೀಯ
ಅಬ್ಭಾ! ಎಷ್ಟೊ೦ದು ತಪ್ಪಾಗಿತ್ತು. ತಿದ್ದಿಕೊಳ್ಳುತ್ತೇನೆ. ಸಾವಧಾನದಿ೦ದ ನನ್ನ ತಪ್ಪುಗಳನ್ನು ವಿವರಿಸಿ ನನ್ನನ್ನು ಬೆಳೆಸುತ್ತಿರುವುದಕೆ ಧನ್ಯವಾದಗಳು ಪದ್ಯಪಾನ ಕಾವ್ಯಕುತೂಹಲಿಗಳ ತ೦ಗುದಾಣ ಜೊತೆಗೆ ಗುರುಕುಲವೂ ಆಗುತ್ತಿದೆ 🙂 ಧನ್ಯವಾದಗಳು ಮತ್ತೊಮ್ಮೆ
ಹರಿ
ಗೆಳೆಯರೆ, ಹರೀಶರ ಪದ್ಯದ ಕೆಲವೊಂದು ಎಡವುಗನ್ನು ದಯಮಾಡಿ ಸವರಿಸಿರಿ.
ಶ್ರೀಶರ ಪದ್ಯ ತುಂಬ ಸೊಗಸಾಗಿದೆ. ಈಸಮಸ್ಯೆಯಲ್ಲಿ ಮೊದಲ ಬಾರಿಗೆ ಕಮಲ ಶಬ್ದವನ್ನು ಒಡೆದು “ವಿವಿಧ+ಅಂಕ+ಮಲ ಎನ್ನುವ ಸಮಾಸದ ಮೂಲಕ ಒಳ್ಳೆಯ ಪ್ರಕೃತಿಚಿತ್ರವನ್ನು ಸ್ವಭಾವೋಕ್ತಿಯಾಗಿ ರೂಪ್ಸಿರುವುದು ಗಮನಾರ್ಹ. ಇದು ನಿಜಕ್ಕೂ ಒಳ್ಳೆಯ ಪ್ರತಿಭಾವ್ಯುತ್ಪತ್ತಿಫಲವಾದ ಪರಿಹಾರವೆನ್ನಬೇಕು.
ಅಂದಹಾಗೆ ನಮ್ಮ ಮತ್ತೊಬ್ಬ ವಿದ್ವನ್ಮಿತ್ರರಾದ ಚಂದ್ರಮೌಲಿಯವರು ಅದೇಕೆ ಇಲ್ಲಿ ಕಾಣಿಸುತ್ತಿಲ್ಲ?
ನಾನಾಸಮಸ್ಯೆಗಳ ಸಂ-
ಧಾನಂ ಸರ್ಪಂಗಳಂತೆ ಸುತ್ತಿರೆ ಮತಿಯಂ
ಸಾನುಪಮಪದ್ಯಪಾನದೊ-
ಳಾನಿರ್ಪೆಂ ಚಂದ್ರಮೌಳಿಯನಾವಧರಿಸಲ್!!
Missed to see this wonderful garland of 27 stars, as I was away to Sikkim and had lost the net connection… here I am back with belated pooranams..
ಸ್ವಮನವದಿಲ್ಲಿರೆ, ನಾನ್ ಸಿ-
ಕ್ಕಿಮಿನಲಿ ತರಬೇತಿಯೊಂದ ನಡೆಸುವ ಕಾರ್ಯ-
ಕ್ರಮದಲಿರಲ್ ಜಾಲದ ಬಲ
ಕೆ ಮಲಂ ! ಚಂದ್ರಂಗೆ ತಕ್ಕುದಲ್ಲೆನಿಸಿತ್ತೈ
ಕುಮತಿ ಭ್ರಷ್ಟರು ನುಂಗೆ ವ-
ಸುಮತಿಯ ಸಂಪದವ, ರಕ್ಷೆ ಪಕ್ಷವೆ? ಚಂದ್ರಂ
ಕಮಲದಿ ಕಳೆಯಳಿದಡಗನೆ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
(ಕು-ಮಲಾರ್ಜಿತ ಬಣ್ಣಗೆಟ್ಟ ಕಮಲಾಶ್ರಯದಿ)
ಕಮಲಾಪ್ತ ಕುಲಾರ್ಣವ ಶಶಿ
ಕಮಲೇಕ್ಷಣ ರಾಮಚಂದ್ರ ಚಂದ್ರಾನನವೋ
ಕಮಾಲಾಲಯೆ ಮುಖಬಿಂಬವೊ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ಕಮಲ ಶಶಿ ರವಿಗೆ ಬೆದರುತ
ದಮಯಂತಿಯ ಮುಖದಿನಿಂತರಲ ’ನೈಷಧದೊಳ್ ’
ಕಮನೀಯತೆಯುಳಿದದರಿಂ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
(ಶ್ರೀಹರ್ಷನ ಸುಂದರೋಪಮೆಯೆಪೂರಣದೊಳ್)
ಭಲೇ ಚಂದ್ರಮೌಳಿಯವರೇ, ನಾಲ್ಕು ದಿನ ದೂರವಿದ್ದದ್ದಕ್ಕೂ ಸೇರಿದಂತೆ ಒಂದು ಭರ್ಜರೀ ನಾಲ್ಕನ್ನು ಬಾರಿಸಿದ್ದೀರಿ 🙂 ನಾಲ್ಕೂ ಕಂದಗಳೂ ಸೊಗಸಾಗಿ ಮೂಡಿವೆ.
ಕೆಲಕಾಲಂ ದೂರದೊಳಿ
ದ್ದಲಸಿಕೆ ಲವಲೇಶಕಾಣದೀ ನಾಲ್ಕರೊಳುಂ
ಭಲರೇ! ಸೊಗದೀ ಕಾವ್ಯದ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ರಾತ್ರಿ ಎರಡರ ನಿದ್ದೆಗಣ್ಣಿನಲ್ಲಿ ಬುದ್ಧಿಗೆ ಲಕಾರ ಮಕಾರಗಳ ವ್ಯತ್ಯಾಸ ಮರೆತಿದೆ. ಮನ್ನಿಸಿ, ದಯವಿಟ್ಟು ಮೆಚ್ಚುಗೆಯನ್ನಷ್ಟೇ ಒಪ್ಪಿಸಿಕೊಳ್ಳಿ
ಕೆಲಕಾಲಂ ದೂರದೊಳಿ
ದ್ದಲಸಿಕೆ ಲವಲೇಶಕಾಣದೀ ನಾಲ್ಕರೊಳುಂ
ಭಲರೇ! ಸೊಗದೀ ಕಾವ್ಯದ
ಚೆಲುವದು ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ಸ್ಪಂಜಿನ ತೆರದೊಳ್ ಥಟ್ಟನೆ
ಸಿಂಜಿಸಿ ಕಂದಗಳು ಇಡ್ಲಿ ಹಬೆಯಿಂದೊಗೆವೋಲ್
ಸಂಜೆ ನಡುರಾತ್ರಿ ಯೆನ್ನದೆ
ರಂಜಿಪರೈ ಮಂಜುನಾಥ ಕೊಳ್ಳೇಗಾಲಂ
ಚಂದ್ರಮೌಳಿಯವರೇ, ಧನ್ಯವಾದ. ಅದರಲ್ಲಿ ನನ್ನ ಹೆಚ್ಚುಗಾರಿಕೆಯೇನು ಇಲ್ಲ; ಎಂದರೋ ಮಹಾನುಭಾವುಲು.
ಕಂದನೆ ಕಿರುಗಾವ್ಯಮೆನಲ್
ಕಂದರ್ಗೇಂ ಕೊರತೆ ನಾಡೊಳೀ ಬಹು ಜನರಾ
ನಂದದೆ ಸೃಜಿಪರ್ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ 🙂
ಮಂಜುನಾಥರೆ, ನೀವು ತುಂಬ ಚೆನ್ನಾಗಿ ತಾಳ್ಮೆಯಿಂದ ಗೆಳೆಯ ಹರೀಶ್ ಅವರ ರಚನೆಗಳ ವಿಮರ್ಶೆಮಾಡಿ ಸರಿದಾರಿಯನ್ನು ಅರುಹಿದ್ದೀರಿ. ಈ ಸಾರಸ್ವತೋಪಕಾರಕ್ಕಾಗಿ ನನ್ನ ವೈಯಕ್ತಿಕ ಧನ್ಯವಾದಗಳು.
ಅಂದಹಾಗೆ ನನ್ನ ಈಚಿನ ಪದ್ಯ”ನಾನಾಸಮಸ್ಯೆಗಳ….”ದ ಕೊನೆಯ ಸಾಲಿನಲ್ಲಿ ಸ್ವಲ್ಪ ಟಂಕನದೋಷವಾಗಿ ಛಂದಸ್ಸು ಎಡವಿದೆ. ಅದು “……ಚಂದ್ರಮೌಳಿಯನ್ನವಧರಿಸಲ್|” ಎಂದಾಗಬೇಕಿತ್ತು. ಈಚಿನ ಎರಡು ಸಮಸ್ಯೆಗಳಿಗೆ ನಾನು ಮಾಡಿದ ಪರಿಹಾರವಿಂತಿದೆ:
ಸುಮತಿ! ಭವನ್ಮತಿಗರಿದೇಂ?
ವಿಮತಂಗಳ್ಗೆಲ್ಲಿ ರಾಜಕೀಯದೆ ಶಶ್ವತ್-
ಕ್ರಮಗತಿ? ಪದವಿಯೆ ಮಿಗಿಲಿರೆ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ಇಲ್ಲಿರುವ ಬಿಜೆಪಿ-ಕಾಂಗ್ರೆಸ್ ಮೈತ್ರಿಕೂಟದ ಸೂಚನೆಯನ್ನೇ ನನ್ನ ಹಿಂದಿನ ಪ್ರತಿಕ್ರಿಯೆಯಲ್ಲಿ ವಿನೋದದಿಂದ ನೀಡಿದ್ದೆ:-)
ಇದು ಮೂಲತಃ ನನ್ನ ಅವಧಾನವೊಂದರಲ್ಲಿ ನನ್ನ ಪ್ರಿಯಮಿತ್ರರಾಗಿದ್ದ ಕೀ.ಶೇ. ರಾಜೀವ ಲೋಚನಂ ಅವರು ಕೊಟ್ಟಿದ್ದ ಸಮಸ್ಯೆ. ಅವರನ್ನೇ ಇಲ್ಲಿ ಸುಮತಿ ಎಂದು ಸಂಬೋಧಿಸಿ, ನಿಮ್ಮಂಥ ಜಾಣರಿಗೆ ತಿಳಿಯದ್ದಾವುದು? ರಾಜಕೀಯದಲ್ಲಿ ಎಲ್ಲರೂ strange bed mates ಎನ್ನುವ ಭಾವದ ಪರಿಹಾರವನ್ನು ಇಲ್ಲಿ ರೂಪಿಸಿದ್ದೇನೆ.
ತುಂಬ ಹಿಂದೆ ನಾಣೇ ಪೂರೈಸಿದ್ದ ಈ ಸಮಸ್ಯೆಯನ್ನು ಹಲವು ವರ್ಷಗಳ ಹಿಂದೆ ಅವಧಾನಸಭೆಯಲ್ಲಿ ಸಹೃದಯರೊರ್ವರು ಭಂಗ್ಯಂತರದಿಂದ ಪ್ರೈಹರಿಸಬೇಕೆಂದು ಕೋರಿದಾಗ ಹೇಳಿದ ಪದ್ಯವೊಂದು ಹೀಗಿದೆ:
ವಿಮಲರುಚಿರಮುಖಿ! ನವಲಮೃ-
ಗಮದಲಸತ್ತಿಲಕೆ! ಸಕಲಸುಕಲಾಲಲಿತೇ!
ಪ್ರಮದೆ! ತವಾಯತಲೋಚನ-
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ
ಇಲ್ಲಿ ಪರಿಹಾರ ಬಲು ಸುಲಭವಾಗಿದೆ. ಹೀಗಾಗಿ ಮೊದಲ ಮೂರು ಸಾಲುಗಳನ್ನು ಸುಮ್ಮನೆ ತರುಣಿಯೊರ್ವಳ ಮುಖವರ್ಣನೆಯ ಸಾಭಿಪ್ರಾಯವಿಶೇಷಣಪದಗಳಿಂದ ಮಾಡಿದ್ದೇನೆ.
( ನವಲ ಎಂದರೆ ಹೊಸತನ್ನು ತರುವಂಥದ್ದೆಂದು ಅರ್ಥ. ಮೃಗಮದ+ಲಸತ್+ತಿಲಕೆ =ಕಸ್ತೂರಿಯ ಚೆಲುವಾದ ತಿಲಕವನ್ನು ತಳೆದವಳೇ, ಆಯತ=ವಿಶಾಲವಾದ)
ಫಲಮಂ ತಿನಲಕ್ಕುಮೇ ರಸಾಲಫಲದ ವೊಲ್?
ಎನ್ನುವ ಸಮಸ್ಯೆಯನ್ನು ಕೊಟ್ಟವರು ದಿವಂಗತ ಟಿ.ಎನ್. ಪದ್ಮನಾಭನ್ ಅವರು. ಇದಕ್ಕೆ ನಾನು ಅವಧಾನದಲ್ಲಿಯೇ ಮುರು ಪರಿಹಾರಗಲನ್ನು ನೀಡಿದ್ದೆ. ಅವಿಂತಿವೆ:
ಬಲುಮುಳ್ಮೆಯ್ ಮೆರೆಯುವ, ಮೇಣ್
ಬಲುಜಿಗುಟಿನ ಮೇಣಮಿರ್ಪ, ಚೂರಿಗೆಟುಕದಾ
ಸುಲಿಯಲ್ ಕಷ್ಟಮೆನೆ ಪನಸ-
ಫಲಮಂ………………….
(ಈ ಪರಿಹಾರವು ಸಳ, ಸುಕರ. ಮಾವನ್ನು ಹಲಸಿನಂತೆ ತಿನ್ನಲಾಗದೆನ್ನುವುದಷ್ಟೇ ಇಲ್ಲಿಯ ವಿಷಯ. ಇದಕ್ಕೆ ಬರಿಯ commonsense ಸಾಕು)
ಜಲಧಿಯ ತಲದಿಂ ಪೊಣ್ಮಿದ
ನಲಿವಪ್ಸರೆಯರ ಮನೋಜ್ಞಹಸಿತದ ವೊಲ್ ಮಾರ್-
ಪೊಳೆಯುವ ಚೆಲುವಿನ ಮುಕ್ತಾ-
ಫಲಮಂ…………
( ಈ ಪರಿಹಾರಕ್ಕೆ ಸ್ವಲ್ಪ ವ್ಯುತ್ಪತ್ತಿ ಬೇಕು. ಮುಕ್ತಾಫಲ=ಮುತ್ತು ಎನ್ನುವ ಪದಸಂಪದವಿರಬೇಕು. ಜೊತೆಗೆ ಇಲ್ಲಿ ಮುತ್ತನ್ನು ಹಣ್ಣಿನಂತೆ ತಿನ್ನಲಾದೆಂದು ಜಗವೆಲ್ಲ ಬಲ್ಲದ್ದನ್ನೇ ಹೇಳುವಲ್ಲಿ ಒಂದು ತೆರನಾದ ಅಣಕವೂ ಇದೆ: ಅಯ್ಯಾ! ಪೃಚ್ಛಕ ಮಹಾಶಯ! ಇಂಥ ಅಲ್ಪಸಮಸ್ಯೆಯನ್ನು ಕೊಡುವರೇ? ಎಂಬ ವಿನೋದದ ಹಮ್ಮು ಇಲ್ಲಿದೆ, ಒಟ್ಟಿನಲ್ಲಿದು I am smart ಎಂದೆನಿಸುವಂಥ ಪರಿಹಾರ.
ಕಡೆಯದಾದ ಪರಿಹಾರವಿನ್ನು ಗಮನೀಯ:
ಚಲಮಂ ತೊರೆಯಯ್! ಪಾಂಡವ-
ರೊಲವಂ ಮೆರೆಯಯ್, ವಿರೋಧಿಪೊಡೆ ಸಾಧ್ವೀಕುಂ-
ತಲಕರ್ಷಣದುರುಪಾತಕ-
ಫಲಮಂ………..
ಇದು ದಿಟವಾಗಿ ಉತ್ತಮಕೋಟಿಯ ಪರಿಹಾರ. ಇಲ್ಲಿ ಕವಿನಿಬದ್ಧಪ್ರೌಢೋಕ್ತಿಯ ಬಗೆಯಿಂದ ಸಂಧಾನಕಾಲದಲ್ಲಿ ಕೃಷ್ಣನು ದುರ್ಯೋಧನನಿಗೆ ಎಚ್ಚರ ಹೇಳುವ ಭಾವವಿದೆ. ಈ ಬಗೆಯಲ್ಲಿ (ಅಂದರೆ ಪಾಪದ ಫಲ ಎಂಬ ರೀತಿಯಲ್ಲಿ) ಹಲವರು ಗೆಳೆಯರು ಪರಿಹರಿಸಿರುವುದು ಮುದಾವಹ. ಪ್ರಕೃತ ಪರಿಹಾರದಲ್ಲಿರುವ ರಚನಾಶಿಲ್ಪವನ್ನೂ ಗಮನಿಸಬೇಕು. ಮೊದಲೆರಡು ಸಾಲುಗಳಲ್ಲಿರುವ ತಿಳಿಗನ್ನಡದ ಮಾತುಗಳು ಅಲ್ಲಿಯ ಆತ್ಮೀಯವಾದ ಹಿತಬೋಧೆಗೆ ತಕ್ಕಂತಿರುವುದು ಸಹೃದಯವೇದ್ಯ. ಜೊತೆಗೆ ತೊರೆಯಯ್, ಮೆರೆಯಯ್ ಎಂಬ ಕ್ರಿಯಾಪದಗಳ ಸಮಾನಶ್ರುತಿಯೂ ಚಿಕ್ಕ ಚಿಕ್ಕ ವಾಕ್ಯಗಳಾಗಿ ಆ ಮಾತುಗಳು ಬರುವ ಬಗೆಯೂ ಮನನೀಯ. ಎರಡನೆಯ ಸಾಲಿನ ಕೊನೆಯಲ್ಲೊಂದು ತಿರುವಿದೆ (if so ಎಂಬ ರೀತಿಯಲ್ಲಿ) ಅದು ಮೂರನೆಯ ಸಾಲಿಗೆ ಇಡಿಯಾಗಿ ವಿಸ್ತರಿಸುವ ಸಮಾಸವಾಗಿ ಸಮಸಂಸ್ಕೃತದಲ್ಲಿ ಸಾಗಿ ತನ್ಮೂಲಕ ದ್ರೌಪದಿಯ ಕರಾಳಕೇಶಪಶವನ್ನು ಧ್ವನಿಸುತ್ತಾ ಪರಿಸ್ಥಿತಿಯ ಗಾಂಭೀರ್ಯವನ್ನು ಸೂಚಿಸುವಂತೆ ನುಡಿಬೆಡಗಿನಲ್ಲಿ ಹದಗೊಂಡು ಸಾಗುವ ಪರಿ ಗಮನಾರ್ಹ. ಹೀಗೆ ಒಟ್ದಂದದ ಪದ್ಯಶಿಲ್ಪವು ಕೇವಲ ಸಮಸ್ಯಾಪೂರಣಕ್ಕೇ ಸೀಮಿತವಾಗದೆ ಒಳ್ಳೆಯ ಕವಿತೆಯಾಗಲೂ ಯತ್ನಿಸಿರುವುದು ಪರಿಶೀಲನೀಯ.
ದಯಮಾಡಿ ಕ್ಷಮಿಸಿರಿ; ಇದು ಸ್ವಲ್ಪ ಮಟ್ಟಿಗೆ “ಸ್ವಕು..ಮರ್ದನ”ವಾಯಿತು:-) ಆದರೆ ಸಮಸ್ಯಾಪೂರಣದ ಬಹುಮುಖಸ್ವಾರಸ್ಯಗಳನ್ನು ಹಂಚಿಕೊಳ್ಳಬೇಕೆಂಬ ಸ್ನೇಹಲೋಭವು ಈ ಮುಜುಗರವನ್ನು ತಂದಿದೆ. vulgarity always says I ಎನ್ನುವ ಮಾತಿದೆಯಷ್ಟೆ!! ಅದಿಲ್ಲಿ ಬಂದುದಕ್ಕಾಗಿ ಮನ್ನಿಸಿರಿ.
ಗಣೇಶ್ ಸಾರ್,
ಪರಿಹಾರಗಳು ಬಹಳ ಚೆನ್ನಾಗಿವೆ, ನೀವು ಈರೀತಿ ಅವಧಾನದ ಪರಿಹಾರಗಳನ್ನು ಅರ್ಥ ಸಹಿತ ಹಂಚಿಕೊಳ್ಳುವುದರಿಂದ ನಮಗೆ ವಿದ್ವಜ್ಜನರ ವಿಶೇಷ ಪರಿಹಾರಗಳನ್ನು ತಿಳಿಯಲು ಸಹಕಾರವಾಗುತ್ತದೆ. ನನಗೆ ಒಂದು ಸಂದೇಹವಿದೆ ಮೇಲಿನ ಪರಿಹಾರದಲ್ಲಿ “ಸಾಧ್ವೀಕುಂ-” ಎಂಬುದನ್ನು ಸ್ವಲ್ಪ ವಿಸ್ತರಿಸಿ ತಿಳಿಸಿಕೊಡಿ, ಇದರಲ್ಲಿ ‘if you’ ಎಂಬ ತಿರುವು hegide embudu ಅರ್ಥವಾಗಲಿಲ್ಲ
ಸೋಮ ಅವರೆ,
ನಿಮ್ಮ ಪ್ರಶ್ನೆ ಪೂರ್ತಿಯಾಗಿ ತಿಳಿಯಲಿಲ್ಲ. if you ಏನು???? ಸಾಧ್ವೀಕುಂತಲ…ಇತ್ಯಾದಿಗಳು ದ್ರೌಪದಿಯ ಮುಡಿಯನ್ನು ದುರ್ಯೋಧನನು ಎಳೆಸಿದ ಪ್ರಕರಣಕ್ಕೆ ಸಂಬಂಧಿಸಿವೆ. ಅಲ್ಲಿಯ ವರೆಗೆ ಕನ್ನಡದ ಸರಳಶೈಲಿಯಲ್ಲಿ ಸಾಗಿದ ಪದ್ಯ ಇದೀಗ ಸಂಸೃತಸಮಾಸಭರಿತವಾದ ಬಗೆಯು ಆಕೆಯ ಉದ್ದವಾದ, ಮಂಗಳಕರವಾದ ಮುಡಿಯನ್ನು ಧ್ವನಿಸುವಂತಿದೆಯೆನ್ನುವುದೇ ಇಲ್ಲಿಯ ರಚನಾಸ್ವಾರಸ್ಯ.
ಕುಮಾರವ್ಯಾಸನ ” ಆ ಮಹೀಶಕ್ರತುವರದೊಳುದ್ದಾಮ…..” ಇತ್ಯಾದಿ ಸಭಾಪರ್ವದ ಪದ್ಯವನ್ನು ಗಮನಿಸಿರಿ. ಜೊತೆಗೆ ಕುವೆಂಪು ಅವರ ದ್ರೌಪದಿಯ ಶ್ರೀಮುಡಿ ಎನ್ನುವ ಲೇಖನವನ್ನೂ ಪರಿಶೀಲಿಸುವುದೊಳಿತು.
ಗಣೇಶ್ ಸಾರ್,
ಸ್ವಲ್ಪ typo ಆಗಿ ನನ್ನ ಪ್ರಶ್ನೆ ಸ್ಫುಟವಾಗಿರಲಿಲ್ಲ ಆದರೆ ನನಗೆ ಅರ್ಥವಾಯಿತು
“ವಿರೋಧಪೊಡೆ ಸಾಧ್ವಿಕುಂತಲ” ಎನ್ನುವುದನ್ನು ನಾನು ಸರಿಯಾಗಿ ನೋಡಿಕೊಂಡಿರಲ್ಲಿಲ್ಲ ಈಗ ಅರ್ಥವಾಯಿತು 🙂
ಗಣೇಶರೇ, ಆಪ್ತವರ್ಗದಲ್ಲೂ ಶಿಷ್ಯವರ್ಗದಲ್ಲೂ ಸ್ವಪ್ರಶಂಸಾದೋಷವುಂಟೇ! ಸ್ನೇಹಲೋಭವು ಈ ಮುಜುಗರವನ್ನು ತರುವುದಾದರೆ ಅದು ಹೆಚ್ಚೆಚ್ಚು ಬರಲಿ ಎನ್ನೋಣ. ತಮ್ಮ ಪರಿಹಾರಗಳೂ ಅವುಗಳ ಕೂಲಂಕಶ ವಿವರಣೆಯೂ ಬೋಧಪ್ರದವಷ್ಟೇ ಅಲ್ಲ ಮೋದಪ್ರದವೂ ಹೌದು.
ಜಲಧಿಯ ತಲದಿಂ ಪೊಣ್ಮಿದ
ನಲಿವಪ್ಸರೆಯರ ಮನೋಜ್ಞಹಸಿತದ ವೊಲ್ ಮಾರ್-
ಪೊಳೆಯುವ ಚೆಲುವಿನ ಮುಕ್ತಾ-
ಫಲಮಂ…………
ಮತ್ತು
ಚಲಮಂ ತೊರೆಯಯ್! ಪಾಂಡವ-
ರೊಲವಂ ಮೆರೆಯಯ್, ವಿರೋಧಿಪೊಡೆ ಸಾಧ್ವೀಕುಂ-
ತಲಕರ್ಷಣದುರುಪಾತಕ-
ಫಲಮಂ………..
ಈ ಎರಡೂ ವಿಶೇಷವಾಗಿ ಅವುಗಳ ಭಾಷೆಯ ಹದಕ್ಕೂ ಔಚಿತ್ಯಕ್ಕೂ ಮನಮೆಚ್ಚಿದುವು. ಹಂಚಿಕೊಂಡದ್ದಕ್ಕೆ ಧನ್ಯವಾದ.
ಗಣೇಶರೆ, ನಿಮ್ಮ ಸೂಚನೆಯ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಕಮಲ ಭಾಜಪಾದ ಚಿಹ್ನೆ ಎಂದು ತಲೆಗೆ ಹೊಳೆದಿರಲಿಲ್ಲ. ಪರಿಹಾರ ಓದಿದ ಮೇಲೆ, ಪರಿಹಾರ ಸೂಚನೆ ಎರಡನ್ನೂ ಆಸ್ವಾದಿಸಿದಂತಾಯ್ತು 🙂
ಸಿನಿಮಾ ಮುಗಿದ ಮೇಲೂ, ಅದೇ ಗುಂಗಿನಿಂದ ಪರದೆ ನೋಡುವಂತೆ, ಗಣೇಶರ ಪರಿಹಾರ ಸರಮಾಲೆಯ ಸವಿದ ನಂತರದ ನನ್ನ ಪರಿಹಾರ 🙂
ತಮರಂ ರತ್ನಾಕರಮಿರೆ,
ಸಮದಲ್ ರವಿತಾರೆಪೊಳೆಯೆ, ಶೋಭಿಸಲತಿಯೇನ್!
ಕ್ರಿಮಿಕೀಟಪಂಕಸಂಗಾತ ಪೊಳೆವ
ಕಮಲಂ ಚಂದ್ರಂಗೆ ತಕ್ಕುದೆನಿಸಿತ್ತಲ್ತೇ!
(ತಮರ್ = ತವರು – ಚಂದ್ರ ಸಮುದ್ರ ಮಂಥನದಲ್ಲಿ ಹುಟ್ಟಿದ ಕಥೆಯಂತೆ)
ಚಂದ್ರಮೌಳಿಯವರೇ, ಧನ್ಯವಾದ. ಅದರಲ್ಲಿ ನನ್ನ ಹೆಚ್ಚುಗಾರಿಕೆಯೇನು ಇಲ್ಲ; ಎಂದರೋ ಮಹಾನುಭಾವುಲು.
ಕಂದನೆ ಕಿರುಗಾವ್ಯಮೆನಲ್
ಕಂದರ್ಗೇಂ ಕೊರತೆ ನಾಡೊಳೀ ಬಹು ಜನದಾ
ನಂದದೆ ಸೃಜಿಪರ್ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ 🙂
ಮಂಜುನಾಥರೇ,
ಏನು ತಿದ್ದಿದಿರೋ ತಿಳಿಯಲಿಲ್ಲ. ಕೊನೆಯ ಪಾದದಲ್ಲಿ ಪ್ರಾಸದೋಷ ಉಳಿದೇ ಇದೆ!