Oct 202011
 

ಕಂದ ಛಂದಸ್ಸಿನ ಸಮಸ್ಯಾಪದ್ಯದ ನಾಲ್ಕನೆಯ ಸಾಲು ಹೀಗಿದೆ ::

ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

ಮೊದಲ ಮೂರು ಸಾಲುಗಳನ್ನು ಪೂರೈಸಿರಿ.

ವಿ.ಸೂ ::‌ ಈ ಸಮಸ್ಯೆಯು ಗಣೇಶರಿಂದ ಸಿಕ್ಕದ್ದು

  52 Responses to “ಸಮಸ್ಯೆ :: ಕಂದ :: ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ”

  1. ಕೆಂಗಲಿಸಲ್ ಪೂಗಳ ತನು
    ಸಂಗಮವರೆಸುತ ವಸಂತದುನ್ಮತ್ತತೆಯೊಳ್-
    ಕಂಗಲನುಲ್ಲಾಸದೊಲು ಮು-
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    ಕೆನ್ಗಲಿಸಲ್ – ಕೆಂಪಾಗಲು
    ಉನ್ಮತ್ತತೆಯೊಳ್ ಕಂಗಲ – ಉನ್ಮಾದದಲ್ಲಿ ಕುರುಡನಾದ (ಕಂಗಲ = ಕುರುಡ)
    ಮುಡಂಗು – ತಡೆಹಿಡಿಯಲ್ಪಟ್ಟ, ರಮಂ – ಪ್ರೀತಿಯನ್ನು
    ಮುಡಂಗುರಮಂ – ಒಂದು ಹೂವಿನ ಸಂಗದಲ್ಲಿರುವ ಭ್ರಮರಕ್ಕೆ ಹೂವಿನಲ್ಲಿ ಮಕರಂದ ಇಳಿಯುತ್ತಿದ್ದಂತೆ, ಬೇರೆ ಹೂವೆಡೆ ಮನವೋಲುತ್ತದೆ. ಹಾಗಾಗಿ ಅದರ ನಿಷ್ಠೆಯು ಒಂದು ಹೂವಿಗೆ ಸೀಮಿತವಲ್ಲ ಹಾಗಾಗಿ (ತಡೆಹಿಡಿಯಲ್ಪಟ್ಟ ಪ್ರೀತಿಯನ್ನು)

  2. ಬಹುಷಃ ಅದು ‘ಸಿಕ್ಕಿದ್ದು ‘ ಆಗಬೇಕೇನೋ !. (ಸಿಗದು=ಸಿಗದೇ ಇರುವುದು=ಸಿಕ್ಕದ್ದು ಅಂದುಕೊಂಡಿದ್ದೇನೆ. ಅಥವಾ ಇಲ್ಲಿ ಹಾಗೆ ಕಾಣುತ್ತಿದೆಯೋ ಗೊತ್ತಿಲ್ಲ !! ).

  3. ಸಿ೦ಗರಿಸಿದಿಬ್ಬನಿಕರಗ
    ಲ೦ಗದಲಲರನುಡಲೆ೦ದು ಪಕ್ಕನೆ ಗಿಡಗಳ್ |
    ಪಿ೦ಗಿರುವ ಶಿಶಿರ ವಾರ್ತೆಯ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    ಮೈಮೇಲಿದ್ದ ಇಬ್ಬನಿ ಕರಗಿದೆ, ಬೇಗನೆ(ಪಕ್ಕನೆ – ನಮ್ಮ ಕಡೆಯ ಆಡು ಭಾಷೆಯ ಪದ) ನಿಮ್ಮ೦ಗಗಳಲ್ಲಿ ಹೂವು(ಅಲರ್) ಗಳನ್ನು ತೊಟ್ಟು ವಸ೦ತನನ್ನು ಸ್ವಾಗತಿಸಿ ಎ೦ದು, ಶಿಶಿರ ಗತಿಸಿದ(ಪಿ೦ಗಿದ) ವಾರ್ತೆಯನ್ನು ಭ್ರಮರ ಕಾಡಿನಲ್ಲಿ ಸಾರುತ್ತಿದೆ. ಅದಕ್ಕೆ ಬೇಕಿರುವುದು ಮಕರ೦ದವಷ್ಟೇ…

  4. ಸಂಗಡ ಬಂಧಿತ ಕೀಟಂ
    ಗುಂಗಿನ ಪೀಡನೆಗೆ ಸಿಲ್ಕಿ ರೂಪಾಂತರಿಪಾ
    ಸಂಗ ಪ್ರಭಾವ ನ್ಯಾಯದ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    (ಭ್ರಮರಕೀಟ ನ್ಯಾಯ)

  5. ಭೃಂಗವು ಕೊರೆಯುತ ರಂಧ್ರವ
    ಡಂಗುರದೊಳಸೇರಿ ಹೊರಗೆ ಬರದೊದ್ದಾಡಲ್
    ಖಂಗೆಂದು ಚರ್ಮಕೆ ಬಡಿದು
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    (ಬೇಟೆಯ ಸಂದರ್ಭದಲ್ಲಿ ಕಳಚಿ ಬಿದ್ದ ನಗಾರಿಯೊಳಗೆಸಿಕ್ಕಿದ ಭ್ರಮರದ ಹೊಯ್ದಾಟ)

  6. ಭೃಂಗವ ಹರಿಸಿ ಶಕುಂತಲೆ
    ಗಂಗಜ ದುಷ್ಯಂತನಾದ ನಲವಿನ ಕಥೆಗಂ
    ಶೃಂಗಾರ ಕರ್ತೃ ತಾನೆನೆ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    (ದುಷ್ಯಂತ ಶಕುಂತಲೆಯರ ಪ್ರೇಮಾಂಕುರಕ್ಕೆ ಕಾರಣವಾದ ಭ್ರಮರದ ಡಂಬದ ಡಂಗುರ)

    • ಮೌಳಿಯರರೆ,

      ಈ ಭ್ರಮರದ ಜಂಭದ ಪೂರಣ ಬಹಳ ಹಿಡಿಸಿತು

      • ಹೌದು, ಸೋಮ ಅವರೆಂದಂತೆ ಈ ಪೂರಣ ತುಂಬ ಸೊಗಸಾಗಿದೆ.
        ವಸ್ತುತಃ ಈ ಸಮಸ್ಯೆಯಲ್ಲಿ ಸಮಸ್ಯಾತ್ವವೇ ಇಲ್ಲ. ಹೀಗಾಗಿ ಇದನ್ನು ಅತ್ಯಂತ ಕಾವ್ಯೋಚಿತರೀತಿಯಲ್ಲಿ ಪರಿಹರಿಸಿದರೆ ಚೆನ್ನ. ಇಂಥ ಪರಿಹಾರವಿದೀಗ ನಮ್ಮೆದುರಿದೆ. ಇನ್ನೂ ಹೆಚ್ಚಿನ ಪದ್ಯಗಳು ಬೇಗ ಬರಲೆಂದು ಆಶಿಸುತ್ತೇನೆ.

    • ಸೊಗಸಾದ ಕಲ್ಪನೆ

  7. ಮುಂಡವನುಜ್ಜುತ ಪೂಗಳ
    ದಂಡಿನೊಳೆಬ್ಬಿಸೆ ಪರಾಗಮಂ, ಭುವಿ ಬಸರೊಳ್
    ಸಿಂಗರಿಸುತ ಮಲಗಲ್, ತೊಂ-
    ಡಂ ಗುರಮಂ ಬನದೆ ಸಾರುತಿರ್ಕುo ಭ್ರಮರಂ

    ತೊಂಡಂ – ಚಿಕ್ಕದಾದ
    ಗುರಮಂ – ಗೊರಕೆಯನ್ನ

  8. ಸಿಂಗಂಗೆ ಕೆಳೆಯ, ಪುಲಿಯಂ
    ಕಂಗೆಡಿಸಿದಣಿಸುವ ಪೋರ ಭರತನ ಪುಂಡಾ
    ಟಂಗಳ ಪರಿಯಂ ತಿಳಿಸಲ್
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    (http://en.wikipedia.org/wiki/File:Raja_Ravi_Varma_-_Mahabharata_-_Bharata.jpg)

    • ೨ನೇ ಸಾಲಿನಲ್ಲಿ ಯತಿಭಂಗವಾಯ್ತೇ? ಆದಲ್ಲಿ ಹೀಗೂ ಬದಲಿಸಬಹುದು
      “ಕಂಗೆಡಿಸುವನೀ ಕುಮಾರ ಭರತನ ಪುಂಡಾ”

      • ಎರಡನೆಯ ಸಾಲಿನಲ್ಲಿ ಯತಿಭಂಗವೇನೂ ಕಾಣಲಿಲ್ಲ, ಆದರೂ ನಿಮ್ಮ ತಿದ್ದುಪಡಿ ಮತ್ತಷ್ಟು ಸುಲಭವಾಗಿದೆ. ಆದರೆ ಮೂರನೆಯ ಸಾಲಿನ ಅಭಿಪ್ರಾಯವಾಗಲಿಲ್ಲ (“ಪುಂಡಾಟಂಗದ”)

        • ಅಂಗ = ಭಾಗ ಎಂಬ ಅರ್ಥವಿದೆ. ಪುಂಡಾಟದ ಈ ಭಾಗ ಎನ್ನುವುದಾಗಿ. ಅರಿಸಮಾಸವಾಯ್ತೋ?

          • ಅದನ್ನು “….ಪುಂಡಾಟಂಗಳ…..” ಎಂದು ಸವರಿಸಿದರೆ ಸರಿಯಾದೀತು…

          • ಅಹಾ! ಈಗ ಚೆನ್ನಾಯ್ತು. ಅರಿಯಿಂದ ಬಿಡುಗಡೆ 🙂

  9. ಸಂಗತಮೇ ಮಧುಕರ ಸುಮ
    ಸಂಗಂ? ಚಣದೊಳಗೆ ಚುಂಬನಕೆ ಭಂಗಂ ಕ್ಷಣ
    ಭಂಗುರಮಲ್ತೀಬದುಕೆನೆ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    ದೂರದಿರಿಮೆನ್ನ ಪೂರ್ವಾ
    ಚಾರಿಯರಭಿಮತಮಿದಲ್ತೆ ಇಹಸುಖ ಸಾರಂ
    ಮೂರುದಿನಮೆನಲ್ ಭ್ರಮರಂ
    ಸಾರಲ್ ಮೇಣಿದರೊಳಚ್ಚರಿಯದೇನಿರ್ಕುಂ? 🙂

    • ಮಂಜುನಾಥರೆ, ಎರಡನೆಯ ಪಾದದ ಕಡೆಗೆ ತೋರುವ ಛಂದಸ್ಸಿನ ತೊಡಕನ್ನು ದಯಮಾಡಿ ಸವರಿಸುವಿರಾ?

      • ಗಣೇಶರೇ, ತಿಳಿಯಲಿಲ್ಲ.

        ಮೊದಲನೆಯ ಪದ್ಯದ ಎರಡನೆಯ ಸಾಲು ಲಘುವಿನೊಂದಿಗೆ ಕೊನೆಯಾಗುತ್ತದೆ; ಅದು “ಕ್ಷಣಭಂಗುರ”ವೆಂದು ಮೂರನೆಯ ಸಾಲಿನಲ್ಲಿ ಮುಂದುವರೆಯುವುದರಿಂದ ಪಾದಾಂತ್ಯದಲ್ಲಿ ಲಘುಬರುವುದು ಸಾಧುವೆಂದೆಣಿಸಿದೆ.

        ಅಥವಾ ಮತ್ತೇನಾದರೋ, ದಯವಿಟ್ಟು ತಿಳಿಸಿ.

        • ವಿಶೇಷವೇನಿಲ್ಲ, ಯಾವುದೇ ಕಂದದ ಸಮಪಾದಗಳು ಗುರುವಿನಿಂದಲೇ ಮುಗಿಯಬೇಕು.
          ಕೇವಲ ವಿಷಮಪಾದಗಳಿಗಷ್ಟೇ ಲಘು ಅಥವಾ ಗುರುವಿನಿಂದ ಮುಗಿಯುವ ಸೌಲಭ್ಯವಿದೆ:-)
          ಆದುದರಿಂದ ತಮ್ಮ ಪದ್ಯದ ಆ ಪಾದವನ್ನು “……ಚಣದೊಳಗೆ ಚುಂಬನಕೆ ಭಂಗಂ, ಪೋ!!”
          ಎಂದು ಸವರಿಸಬಹುದು. ಇಲ್ಲಿ ’ಪೋ’ ಎನ್ನುವ ಉದ್ಗಾರದ ಮೂಲಕ ಹತಾಶೆ, ಬೇಸರ, ವಿಷಾದಗಳೆಲ್ಲ ಧ್ವನಿತವಾಗುತ್ತವೆ. ಆದರೆ ಕ್ಷಣಭಂಗುರ ಎನ್ನುವ ಪದದ ಸಮಗ್ರಾರ್ಥವನ್ನು ಭಂಗುರ ಎನ್ನುವ ಒಂದೇ ಪದದಿಂದ ಸಾಧಿಸಿಕೊಳ್ಳಬೇಕಿದೆ. ಏನು ಮಾಡೋಣ? ಇಂಥ ಒದ್ದಾಟಗಳು ಛಂದೋಲೋಕದಲ್ಲಿ ಸಾಕಷ್ಟು. ಆದರೆ ಈ ಇಡಿಯ ಲಾಭ-ನಷ್ಟಗಳ balance sheet ಕಂಡಾಗ ಕಡೆಗುಳಿವ ಲೇಸು ಹಿರಿದಾದದ್ದು. ಹೀಗಾಗಿಯೇ ಛಂದೋಬದ್ಧತೆಗೆ ನಾವಿಷ್ಟು ಒದ್ದಾಡುವುದು! ಇದೊಂದು ಬಗೆಯ ದಾಂಪತ್ಯ. ಇಲ್ಲಿ ಸಾಂಗತ್ಯವಂತೂ ತಪ್ಪುವಂತಿಲ್ಲ.

          • ಗಣೇಶರೇ,

            “ಇಡಿಯ ಲಾಭ-ನಷ್ಟಗಳ balance sheet ಕಂಡಾಗ ಕಡೆಗುಳಿವ ಲೇಸು ಹಿರಿದಾದದ್ದು” – ಇದೀಗ ನನ್ನ ವ್ಯಾವಹಾರಿಕ ಪರಿಭಾಷೆಯಲ್ಲಿ ಮಾತಾಡಿದಿರಿ 🙂 ಹಳೆಯ ಪರಿಚಿತನನ್ನು ಕಂಡಷ್ಟು ಖುಶಿಯಾಯಿತು.

            ನಿಜಹೇಳಬೇಕೆಂದರೆ ಕೇವಲ “ಭಂಗುರ”ವೆನ್ನುವ ಪದವಷ್ಟೇ ಹಿಡಿದು ಕಂದವನ್ನು ಮುಗಿಸುವ ಅನೇಕ ದಾರಿಗಳನ್ನು ಪ್ರಯತ್ನಿಸಿದೆ. ಅರ್ಥವು ಹೊಂದಿದರೂ ಅದೇಕೋ ಭಾವಪೂರ್ಣತೆ ದಕ್ಕಿರಲಿಲ್ಲ. ಅದಕ್ಕಾಗಿಯೇ ಪ್ರಯತ್ನಪಟ್ಟು ಕ್ಷಣವನ್ನು ತಂದಿದ್ದು. ಆದರೆ ನಿಮ್ಮ ಪರಿಹಾರ ಅತ್ಯುತ್ತಮವಾಗಿ “ಕ್ಷಣ”ದ ಜಾಗವನ್ನು ತುಂಬುತ್ತದೆ. ತಿದ್ದಿದ ಕಂದ ಇಗೋ ಇಲ್ಲಿದೆ:

            ಸಂಗತಮೇ ಮಧುಕರ ಸುಮ
            ಸಂಗಂ? ಚಣದೊಳಗೆ ಚುಂಬನಕೆ ಭಂಗಂ ಪೋ
            ಭಂಗುರಮಲ್ತೀಬದುಕೆನೆ
            ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

  10. ಸಂಗತಿಯುಂ ಮುಖ್ಯವಿರಲ್
    ಜಂಘಾಬಲಮುಂ,ಅನಾಧರಣೆಯುಂ ಲೆಕ್ಕಿಸಬೇಡೈ!
    ಭಂಗುರವೇನಳಿಗೆ? ಛಲದಿ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    • ಭ್ರಮರ ತನಗೆ ಸಣ್ಣ ಸ್ವರವಿದ್ದರೂ, ಕಾಡು ಬಲು ವಿಶಾಲವಾಗಿದ್ದರೂ, ಮರಗಳು insensitive ಇದ್ದರೂ, ಪ್ರತಿ ಮರದ ಹತ್ತಿರವೂ ಹೋಗಿ ತನ್ನ ಕ್ಷೀಣ ಸ್ವರದಲ್ಲಿ ಡಂಗುರ ಬಾರಿಸಿಯೇ ಬಾರಿಸುತ್ತದೆ – ಎಂಬರ್ಥದಲ್ಲಿ
      ಜಾಸ್ತಿ stretch ಆಯ್ತಾ ಎನೋ? 🙂

      • ಹೊಳ್ಳರೆ, ಎರದನೆಯ ಸಾಲಿನಲ್ಲಿ ಛಂದಸ್ಸು ತಪ್ಪಿದೆ
        ಪದ್ಯವನ್ನು ಇಂತು ಸವರಿಸಬಹುದು:
        ಭಂಗುರಮಿರ್ದುಂ ನಿಜತನು
        ತುಂಗವಿಶಾಲಂ ವನಾವಳಿಗಳೇನಿರ್ದುಂ
        ಪಿಂಗದ ಬಲ್ಪಿಂ ಸುಗ್ಗಿಯ
        ಡಂಗುರಮಂ……

      • ಗಣೇಶರೆ, ನನ್ನ ಮನಸ್ಸಿನಲ್ಲಿದ್ದದ್ದನ್ನು, ಚೆನ್ನಾಗಿ ಸೆರೆಹಿಡಿದಿದ್ದೀರಿ. ಧನ್ಯವಾದಗಳು.

  11. ತಂಗಲ್ ನಿಶೆಯೊಳು ತಾವರೆ-
    ಯಂಗದ ಬಂಧದೊಳುಮತ್ತನಂ ಪೂವರಳಲ್
    ಗುಂಗಲುದಯದೊಳ್ ಪ್ರಣಯದ-
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    ಗುಂಗಲುದಯದೊಳ್ – ಗುಂಗಲಿ (still in hangover) ಸೂರ್ಯನ ಉದಯದಲ್ಲಿ

    • Correction…
      ತಂಗಲ್ ನಿಶೆಯೊಳು ತಾವರೆ-
      ಯಂಗದ ಬಂಧದೊಳುಮತ್ತನುಂ ಪೂವರಳಲ್
      ಗುಂಗಲುದಯದೊಳ್ ಪ್ರಣಯದ-
      ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

      ಗುಂಗಲುದಯದೊಳ್ – ಗುಂಗಲಿ (still in hangover) ಸೂರ್ಯನ ಉದಯದಲ್ಲಿ

      • ಸ್ವಲ್ಪ ಸವರಿಸಿದಲ್ಲಿ ಮತ್ತೂ ಸೊಗಸಾಗುವುದು:
        ತಂಗಲ್ ನಿಶೆಯೊಳ್ ತಾವರೆ-
        ಯಂಗದ ಬಂಧನದೆ ಮತ್ತನುಂ, ಪೂವರಳಲ್
        ಗುಂಗಿನೊಳುದಯದೆ ಪ್ರಣಯದ/ನಲ್ಮೆಯ
        ಡಂಗುರ……..
        ಇದರಿಂದಲೇ ನಡುಗನ್ನಡವು ಹಳಗನ್ನಡವಾಗುವ ಹದವನ್ನು ಅರಿಯಬಹುದು

        • ಗಣೇಶ್ ಸಾರ್,
          ಸವರಿಸಿದ್ದೇನೆ

          ತಂಗಲ್ ನಿಶೆಯೊಳ್ ತಾವರೆ-
          ಯಂಗದ ಬಂಧನದೆ ಮತ್ತನುಂ, ಪೂವರಳಲ್
          ಗುಂಗಿನೊಳುದಯದೆ ನಲ್ಮೆಯ
          ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

  12. ಭಂಗಗೊಳಿಸಲರುಣಾಸುರ-
    ನಂಗಮಮಿರಿವೆನೆ ಕುಡುಕ್ಕೆ ರಕ್ಕಸನಳಿಯಲ್
    ಮಂಗಳಮಂ ತನ್ನಿಂದೆನೆ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    ಭ್ರಮರಾಂಬಿಕೆ ಅರುಣಾಸುರನ ಸಂಹಾರ ಮಾಡಿದ ಬಗ್ಗೆ
    ಕುಡುಕ್ಕೆ – ಕುಟುಕಲು

    • ಸೋಮ, ನಿಮ್ಮ ಪೂರಣಗಳು ನಿಜಕ್ಕೂ ತುಂಬ ಸೊಗಸಾಗಿವೆ. ಭಾಷೆಯ ಹದವೂ ಕುದುರುತ್ತಿದೆ. ಕಟೀಲುಕ್ಷೇತ್ರಮಾಹಾತ್ಮ್ಯವನ್ನು ಆಶ್ರಯಿಸಿದ ಪೂರಣವಂತೂ ಅತಿಸುಂದರ.

      • ಗಣೇಶ್ ಸಾರ್,

        ಧನ್ಯವಾದಗಳು

        ಈ ವಿಷಯವನ್ನು ನಮ್ಮ ತಾಯಿಯವರು ತಿಳಿಸಿಕೊಟ್ಟರು, ನಾನು ಪದ್ಯ ಬರೆದೆ. ಈ ಪದ್ಯ ನಿಮಗೆ ಹಿಡಿಸಿದ್ದು ನಮ್ಮ ತಾಯಿತವರಿಗೆ ಮತ್ತು ನನಗೆ ಬಹಳ ಸಂತೋಷವಾಯೋತು 🙂

  13. ವಿಂಗಡಿಸಿ ರಸವ, ಪುಷ್ಪದಿ
    ನಂಗಾರವನುಂಡು, ಮಧುವ ನಿರ್ಮಿಪ ಕವಿ ’ನಾನ್
    ಸಂಗೀತ ರಸಾಧಿಪನೆನೆ ’
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

  14. ಒಂದು ಸಾಂದರ್ಭಿಕ ಪದ್ಯ ::

    ಸಂಗಡ ದಿನಮಂ ಕಳೆದುಂ
    ಚಾಂಗಂ ಪಡೆಯಲ್, ಗಣೇಶ ನುಡಿಯೊಳ್ ಸಿರಿ ಛಂ –
    ದಂಗಳು ಜಾಲದಿ ಸೊಗಿಸುವ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ ||

    ಚಾಂಗು – ಹೊಗಳಿಕೆ
    ಜಾಲ – web
    🙂

  15. ಸಂಗವ ಮೋಡಗಳ ತಿಳಿದು
    ಸಂಗರದ ಗುಡುಗನು ಬಾನಿನಿಂ ಕೇಳುತ್ತಂ
    ಗುಂಗುಡುತಲ್ ಮಳೆ ವಾರ್ತೆಯ
    ದಂಗುರಮಂಬನದೆ ಸಾರುತಿರ್ಕುಂ ಭ್ರಮರಂ ||

  16. ತಿಂಗಳ ರಾತ್ರಿಯೊಳಂದದೊ –
    ಳಂಗದ ಶೃಂಗಾರ ರಾಸದಾಟದಿ ಸಖಮಂ
    ಅಂಗನೆಯೇರಿಸಿ ತಣಿಸಿದ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ ||

  17. ಆತ್ಮೀಯ ನನ್ನದೊ೦ದು ಪ್ರಯತ್ನ ತಪ್ಪಿದ್ದರೆ ತಿಳಿಸಿ

    ಸಿ೦ಗರದಿ ಭಾನು ತಾನಭ
    ದ೦ಗಳಕೇರ್ದುದ ಕ೦ಡೊಡನೆಯೆ ತು೦ಬಿ ಪೂ ರ
    ಸಾ೦ಗಳದೊಳಗಿಳ್ದು ರಸೋ
    ಸ೦ಗದೊಳು ಕವಿಯ ಕಾವ್ಯದ
    ಡ೦ಗುರಮ೦ ಬನದೆ ಸಾರುತಿರ್ಕು೦ ಭ್ರಮರ೦

    ಹರೀಶ್ ಆತ್ರೇಯ

    • ಹರೀಶರೆ,

      ಕಂದವನ್ನು ನಾಲ್ಕು ಪಾದಗಳಲ್ಲಿ ಬರೆಯಬೇಕು, ಸಮಸ್ಯೆಯಲ್ಲಿ ಒಂದು ಪಾದ ಆಗಲೇ ಇರುವುದರಿಂದ ನೀವು ೩ ಪದಗಳನ್ನಷ್ಟೇ ಬರಿಯಬೇಕು. ಕಂದದ ಇತರ ನಿಯಮಗಳನ್ನು ಸಹ ಒಮ್ಮೆ ಗಮನಿಸಿಕೊಳ್ಳಿ.

      • ಆತ್ಮೀಯ ಗಮನಿಸದೆ ಹೋದೆ ಕ್ಷಮಿಸಿ.

        ಸಿ೦ಗರದಿ ಭಾನು ತಾನಭ
        ದ೦ಗಳಕೇರ್ದುದ ಕ೦ಡೊಡನೆಯೆ ಜಾಜಿಯಸುಮ
        ಸ೦ಗದೊಳು ಕವಿಯ ಕಾವ್ಯದ
        ಡ೦ಗುರಮ೦ ಬನದೆ ಸಾರುತಿರ್ಕು೦ ಭ್ರಮರ೦
        ಈಗ ಸರಿಯಾಯ್ತೆ ?
        ಹರಿ

        ನಿರ್ವಾಹಕರಲ್ಲೊ೦ದು ಮನವೆ ನನ್ನ ಮೇಲಿನ ಪದ್ಯವನ್ನು ತೆಗೆದು ಹಾಕಿಬಿಡಿ.
        ಹರಿ

        • ಹರೀಶರೆ

          ಕಂದಕ್ಕೆ ಹತ್ತಿರ ಬಂದಿದೆ

          2ನೆ ಪಾದದ 3ನೇ ಗಣ ಜ-ಗಣ ಅಥವಾ ಸರವಲಘು ಆಗಬೇಕು.
          ‘ಕಂಡೊಡ’ (_UU) ವನ್ನು U_U ಅಥವಾ UUUU ಮಾಡಿರಿ

          ಅಂತೆಯೇ 2ನೇ ಪಾದದ ಕೊನೆಯಗಣ ‘ಜಿಯಸುಮ’ ಸರವಲಘು ಬರುವಹಾಗಿಲ್ಲ ಇದನ್ನು UU_ ಅಥವಾ _ _ ಎಂದೇ ಮಾಡಬೇಕು

          • ಸಿ೦ಗರದಿ ಭಾನು ತಾನಭ
            ದ೦ಗಳ ಕೇರ್ದುದ ತಿಳಿಡೊಡನೆಯೆ, ಮಲ್ಲಿಯ ಪೂ
            ಸ೦ಗದೊಳು ಕವಿಯ ಕಾವ್ಯದ
            ಡ೦ಗುರಮ೦ ಬನದೆ ಸಾರುತಿರ್ಕು೦ ಭ್ರಮರ೦

            ಈಗ ಸರಿಯಾಯ್ತೇ? ತಿಳಿಸಿ

            ಹರಿ

          • ಇನ್ನೊ೦ದು ಪ್ರಯತ್ನ ಮಾಡಿದ್ದೇನೆ. ತಪ್ಪಿದ್ದರೆ ತಿಳಿಸಿ

            ಮ೦ಗಳ ದನಿಯೊಳ್ ತಾಬಾ
            ಸಿ೦ಗದ ಮಿ೦ಚಿಗೆ ನಸುನಾ ಚುತಕು ಳ್ಳಿರ್ದಾ
            ಅ೦ಗನೆ ಯ೦ದದ ವಿಷಯದ
            ಡ೦ಗುರಮ೦ ಬನದೆ ಸಾರುತಿರ್ಕು೦ ಭ್ರಮರ೦

            ಮ೦ಗಳದ ದನಿಯೊಳಗೆ ಆಕೆ ಬಾಸಿ೦ಗದ ಮಿ೦ಚಿಗೆ ನಸು ನಾಚುತ ಕುಳಿದ್ದ ಆ ವಧುವಿನ ಅ೦ದದ ವಿಷಯದ ಡ೦ಗುರವನ್ನು ಭ್ರಮರ ವನದಲ್ಲಿ ಸಾರುತಿದೆ ಎ೦ದು ಬರೆಯಲು ಯತ್ನಿಸಿದೆ. ಸರಿಯೇ 🙂 ತಿಳಿಸಿ
            ಹರಿ

          • ಮ೦ಗಳ ದನಿಯೊಳ್ ತಾ ಬಾ
            ಸಿ೦ಗದ ಮಿ೦ಚಿಗೆ ನಸುನಗುತಲಿ ಕುಳ್ಳಿರ್ದಾ
            ಅ೦ಗನೆಯ೦ದದ ವಿಷಯದ
            ಡ೦ಗುರಮ೦ ಬನದೆ ಸಾರುತಿರ್ಕು೦ ಭ್ರಮರ೦

          • ಹರೀಶರೆ,

            ನಿಮ್ಮ ಪ್ರಯತ್ನದಲ್ಲಿ ಸುಧಾರಣೆ ಇದೆ, ಕೆಳಗಿನ ಅಂಶಗಳನ್ನು ಗಮನಿಸಿಕೊಳ್ಳಿ 🙂

            ನಿಮ್ಮ ಪೂರಣಗಳಲ್ಲಿ 2ನೇ ಪಾದದ ೩ ನೇ ಗಣ ಸರ್ವಲಘುವಾಗಿದೆ, ಇದಕ್ಕೆ ಇನ್ನೊಂದು ನಿಯಮ ಅನ್ವಯಿಸುತ್ತದೆ. ಈ ಗಣವು ಸರವಲಘುವಾದಲ್ಲಿ ಯತಿಯು ಮೊದಲ ಅಕ್ಷರದ ನಂತರ ಇರಬೇಕು. ‘ನಸುನಗು’ ಮತ್ತು ‘ತಿಳಿದೊಡ’ ಎಂಬುದರಲ್ಲಿ ಯತಿಯು ಮೊದಲನೇ ಅಕ್ಷರದ ನಂತರ ಬಂದಿಲ್ಲ.

  18. ಪೆಂಗಳೆಯರ್ ವಿಹರಿಸುತಿರೆ
    ಮುಂಗುರುಳೋಲಾಟವಂ ಗೆಳೆಯರೆಂ ಬಗೆದುಂ
    ಸಂಗಡಿಗರಧಿಕವಾಗಿಹ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

  19. ತೊಂಗುವಲರ್ಗಳ ಪೀರವ
    ರ್ಕುಂದಲು ನಿಮ್ಮಯ ಪರಾಗ ನಿಮ್ಮೊಳೆ ನಿಚ್ಚಂ
    ಹಂಚುವೆನೆನ್ನುತೆ ಸುಂಯನೆ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    1) ಶಿಥಿಲದ್ವಿತ್ವಗಳದು ಎಡವಟ್ಟೇ?
    2) ಮೊದಲ ಮೂರು ಸಾಲುಗಳ ಧಾಟಿಗೂ ಕೊನೆಯದಕ್ಕೂ ಗಮನಾರ್ಹ ವ್ಯತ್ಯಾಸವಿದೆ. ಏಕೆ? ’ತಾರಾಜ’ ಗಣಗಳೇ ಹೆಚ್ಚಿವೆಯೆಂಬ ಕಾರಣಕ್ಕೇ?

    ಪೀರವರ್ಕುಂದಲು > ಪೀರಿ ಅವರ್ ಕುಂದಲು – That a pollinated flower loses its color and luster is a botanical fact.

    • ಪ್ರಸಾದರೇ, ಹೌದು, ಹಲವಾರು ಎಡವಟ್ಟುಗಳಾಗಿವೆ:-) ಆದರೂ ನಿಮ್ಮ ಕೈ ಪಳಗುತ್ತಿರುವುದು ಸ್ಪಷ್ಟ. ಹಳಗನ್ನಡದ ಹದವೂ ಕಂದಗಳಂಥ ಛಂದಸ್ಸುಗಳ ಗತಿಗಮಕಗಳೂ ಈಗ ಕಾಣುತ್ತಿವೆ. ಆದರೆ ಇಲ್ಲಿ ಕೆಲವು ವ್ಯಾಕರಣದೋಷಗಳೂ ಮೂರನೆಯ ಸಾಲಿನಲ್ಲಿನಲ್ಲಿ ಛಂದೋದೋಷವೂ ಆಗಿವೆ. ಮುಖ್ಯವಾಗಿ ನಿಮ್ಮ ಆಶಯವು ಪದ್ಯದಲ್ಲಿ ಸ್ಫುಟವಾಗಿಲ್ಲ. ಇದಕ್ಕೆ ಕಾರಣ ವ್ಯಾಕರಣವೇ. ಈ ಪದ್ಯದಲ್ಲಿ ಏನನ್ನು ಹೇಳಬೇಕೆಂಬ ನಿಮ್ಮ ಆಶಯವಿದೆಯೋ ಅದನ್ನು ತಿಳಿದರೆ ಸವರಿಸಲು ಸಾಧ್ಯ. ಎಲ್ಲ ಗೆಳೆಯರಿಗೂ ಒಂದು ಸಾಮಾನ್ಯಸೂಚನೆಯೆಂದರೆ ಬರೆಯಬೇಕಿರುವ ಪದ್ಯದ ಅಡಕವಾದ ಗದ್ಯದ ಕರಡನ್ನು ಯಾವುದೇ ಆರಂಭಗಾರನೂ ಮಾಡಿಕೊಳ್ಳುವುದು ಅಪೇಕ್ಷಿತ.

      • ಮಾನನೀಯ,

        ಇಷ್ಟೊಂದು ಸಮಯ ತೆಗೆದುಕೊಂಡದ್ದಕ್ಕೆ ನಾನು ನಿಮಗೆ ಕೃತಜ್ಞ.

        ದುಂಬಿಯು (ಕೊಂಬೆಗಳಿಂದ) ತೂಗುವ ಹೂವುಗಳ ಮಕರಂದವನ್ನು ಹೀರಿದಾಗ, ಹೂವುಗಳು ಬಣ್ಣಗೆಟ್ಟು ಬಾಡುವುವು (naturally, as a result of pollination, indicating to the next pollinator to keep off!). ಚಿಂತಿಸಬೇಡಿ, ನಿಮ್ಮ ಪರಾಗವನ್ನು ನಿಮ್ಮ ಸಂಕುಲಕ್ಕೇ ಹಿಂದಿರುಗಿಸುವೆ ಎಂಬ ಆಶ್ವಾಸನೆಯನ್ನು ದುಂಬಿ ಸಾರುತ್ತಿದೆ.

        ಹ್ಹುಂ! ಒಂದೇ ಸಮಾಧಾನ. ನಿಮ್ಮಂಥವರ ಗ್ರಹಿಕೆಗೂ ಮೀರಿದ ಪ್ರೌಢಕಾವ್ಯ ರಚಿಸಿದೆನಲ್ಲ ಎಂದು! LoL.

  20. ತುಂಗಂ ಸಂಗಂ ಸ್ಮರಿಸಿ
    ಭ್ರಂಗಂ, ಪಾವನದ ಪೂಗಳಂ ಅರಸುತಲುಂ
    ಜಂಗಮದ ಬದುಕೆ ಬಲವೆಂ
    ಡಂಗುರಮಂ ಬನದೆ ಸಾರುತಿರ್ಕುಂ ಭ್ರಮರಂ

    • ಹೊಳ್ಳರೆ, ಭೃಂಗ ಸಾಧುರೂಪವಲ್ಲದೆ ಭ್ರಂಗ ಎಂಬುದಲ್ಲ. ಅಲ್ಲದೆ ಅಲ್ಲಲ್ಲಿ ಸಂಧಿಯಾಗಿಲ್ಲ. ಈ ಕಾರಣಗಳಿಂದ ಛಂದಸ್ಸು ಕೆಡುತ್ತದೆ. ಜೊತೆಗೆ ವ್ಯಾಕರಣವೂ ಸ್ವಲ್ಪ ಕೈ ಕೊಟ್ಟಿದೆ:-) ಮಿಗ್ಲಾಗಿ ಪದ್ಯದ ಭಾವವೂ ಸ್ಫುಟವಾಗುತ್ತಿಲ್ಲ. ದಯಮಾಡಿ ಮತ್ತೆ ಗಮನಿಸಿರಿ.

    • ಗಣೇಶರೆ, “ಮಧುಕರ ವೃತ್ತಿ ಎನ್ನದು” ಎಂಬ ದಾಸವಾಣಿಯಂತೆ, ಒಳ್ಳೆಯದನ್ನು ಅರಸಿಕೊಂಡು ಹೋಗಿ, ಅಲ್ಲಿಂದ ಮುಂದಕ್ಕೆ ಸಾಗುವ, ತನ್ನ ಜಂಗಮದ ಜೀವನದಾದರ್ಶವನ್ನು ಸಾರುವ ಡಂಗುರಮಮ್… – ಎಂದು ಹೇಳೋದರಲ್ಲಿ, ಎಡವಟ್ಟುಗಳಾಗಿವೆ. ಇದು ಬರೆಯುವಾಗ, ಎರ್ಡೋಶ್ ವಿಜ್ಞಾನಿಯೇ ಮನಸ್ಸಿನಲ್ಲಿದ್ದ. ಆತ, ಒಂದು ಸ್ಯೂಟ್ ಕೇಸ್ ನೊಂದಿಗೆ, ಸಹವಿಜ್ಞಾನಿಗಳನ್ನರಸಿ ಸಾಗುತ್ತಿದ್ದನಂತೆ. ಇದರಿಂದಾಗಿಯೇ ಎರ್ಡೋಶ್ ಸಂಖ್ಯೆ ಎನ್ನುವುದು ಬಲು ಪ್ರಸಿದ್ಧವಾಗಿದೆ. (http://en.wikipedia.org/wiki/Erd%C5%91s_number)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)