Oct 252011
 

ನರಕದನುಜ ಸತ್ಯಭಾಮೆಗಂ ಸೋದರನೈ

  16 Responses to “ನರಕಚತುರ್ದಶಿಯಂದು ಒಂದು ಸಮಸ್ಯೆ”

 1. ವಿಷ್ಣುವಿಗೆ ವರಾಹಾವಾತಾರಲ್ಲಿ ಹುಟ್ಟಿದವನು ನರಕಾಸುರ. ದ್ವಾಪರಾವತಾರದಲ್ಲಿ ವಿಷ್ಣುವಿನ (ಕೃಷ್ಣನ) ಪತ್ನಿಯಾದ ಸತ್ಯಭಾಮೆಗೆ ಪುತ್ರನಲ್ಲದೆ ಸೋದರನೆಂತಾದಾನು?

  ಕರಡಿಯವತಾರಜಂ ದ್ವಾ
  ಪರದೆನ್ನಯ ಪಿತನ ಪತ್ನಿಯೆನ್ನಯ ತಾಯೆಂ
  ದರಿತುದೆ ಸರಿಯಲ್ಲದಹುದೆ
  ನರಕದನುಜ ಸತ್ಯಭಾಮೆಗಂ ಸೋದರನೈ?

 2. ಪ್ರಸಾದರೇ,

  ನರಕಾಸುರ ಸತ್ಯಭಾಮೆಗೆ ಪುತ್ರಸಮನೆಂಬುದು ಸರ್ವವಿದಿತ. ಅವನು ಸತ್ಯಭಾಮೆಗೆ ಸೋದರನಾಗುತ್ತಾನೆ ಎಂದು ತೋರಿಸಿ ಪೂರಿಸುವುದೇ ಸಮಸ್ಯೆ. ನಿಮ್ಮ ಕಂದ ಛಂದೋಬದ್ಧವಾಗಿದೆ.Congrats.

 3. ಮೌಳಿಯವರೆ, ಪ್ರಯತ್ನಿಸುತ್ತಿದ್ದೇನೆ. ೩ನೆಯ ಸಾಲಿನಲ್ಲಿ ’ಅರಿತುದೆ’ ಎಂದಿದೆ. ನರಕಾಸುರ-ಭಾಮೆಯರು ಭೇಟಿಯಾದ ಸಂದರ್ಭಗಳಿವೆಯೆ? ಗೊತ್ತಿಲ್ಲ. ಹಾಗಾಗಿ ಈ ಪದ್ಯವನ್ನು ತುಸು ತಿದ್ದಿದ್ದೇನೆ:

  ಕರಡಿಯವತಾರಜಂ ದ್ವಾ
  ಪರಯುಗದೆನ್ನಯ್ಯನರಸಿಯನೆನ್ನಯ ತಾಯೆಂ
  ದರಿವುದೆ ಸರಿಯಲ್ಲದಹುದೆ
  ನರಕದನುಜ ಸತ್ಯಭಾಮೆಗಂ ಸೋದರನೈ?

 4. ೨ನೆ ಸಾಲಿನಲ್ಲಿ ಮಾತ್ರೆ ಕೆಟ್ಟಿತು. ತಿದ್ದಿದ್ದೇನೆ.

  ಕರಡಿಯವತಾರಜಂ ದ್ವಾ
  ಪರಯುಗದೆನ್ನಯ್ಯನರಸಿಯೆನ್ನಯ ತಾಯೆಂ
  ದರಿವುದೆ ಸರಿಯಲ್ಲದಹುದೆ
  ನರಕದನುಜ ಸತ್ಯಭಾಮೆಗಂ ಸೋದರನೈ?

  • ಪ್ರಸಾದರೆ – ವರಾಹಕ್ಕೂ ಕರಡಿಗೂ ಸಮನ್ವಯ ಮಾಡಿರುವಂತಿದೆ. ನಾನು ಕಾಣದಂತದ್ದೇನಾದರೂ ಇಲ್ಲಿ ಅಡಗಿದೆಯೇನು?
   ಹಾಗೇ ಸತ್ಯಭಾಮೆಯು ಭೂಮಿಯ ಅಂಶಾವತಾರವೆಂದು ಓದಿದೆ. ಆದ್ದರಿಂದಲೇ ಅವಳಿಗೆ ನರಕನನ್ನು ಕೊಲ್ಲುವ ಶಕ್ತಿ ಬಂತು ಎಂದು ಕಥೆ.

   • ಹೌದು. Boarಗೂ bearಗೂ mix up ಆಗಿದೆ (ಈ ವಾಕ್ಯದಲ್ಲಿ ಕನ್ನಡಾಂಗ್ಲಗಳು ಆದಂತೆ).
    ನೀವು ಕೇಳಿದ ಇತರ ವಿವರಗಳು entry No.1ನಲ್ಲಿದೆ. (Top)

 5. ಮೌಳಿಯವರೆ – “ನರಕದನುಜ” – ಇದು ಸರಿಯಗಿ ತಿಳಿಯಲಿಲ್ಲ. “ನರಕನನುಜ”, “ನರಕ – ದನುಜ” ಹೀಗೆಲ್ಲ ಯೋಚಿಸಿ, ಒಂದು ಸಾರ್ವತ್ರಿಕ ಪೂರಣ ಮಾಡಿದ್ದೇನೆ ::

  ನರರೆಲ್ಲಾರೀ ಧರಣಿಯು –
  ದರದಿಂ ಜನ್ಮಿಪರದೆಂದು ವಿದಿತಂ ಸರ್ವರ್ –
  ವರತಾಯ್ ಕಂದಂಗಳೆನಲ್
  ನರಕದನುಜ ಸತ್ಯಭಾಮೆಗಂ ಸೋದರನೈ ||

 6. ಸೊಗಸಾಗಿ ಪೂರಣಗೊಳಿಸಿದ ರಾಮಚಂದ್ರರಿಗೆ ಅಭಿನಂದನೆ. ನರಕ-ದನುಜ – ನರಕಾಸುರನೆಂಬುದೇ ಉದ್ದೇಶಿತ ಅರ್ಥ.

 7. ಕರಟಿಗಳೆರಡುಂ ಹೋರುವ
  ತೆರದೀ ಕದನಂ ವಿಹಾಯದಿಮ್ಮೇಕ್ಷಿಸುತಲ್ ಸುರರು
  ದ್ಗರಿಸಿದರುಂ, ಸಾಹಸದೊಳ್
  ನರಕದನುಜ ಸತ್ಯಭಾಮೆಗಂ ಸೋದರನೈ
  (ಕರಟಿ = ಆನೆ, ವಿಹಾಯ = ಆಕಾಶ)
  (ಯುದ್ಧದಲ್ಲಿ ಸಮಬಲರಾದ ನರಕ ಸತ್ಯಭಾಮೆಯರು ಸೋದರರಂತೆ ಕಾಣಿಸುತ್ತಿದ್ದರೆಂದ್ ಹೇಳುವ ಪ್ರಯತ್ನ)

 8. ಸುರರ್ಗಳಿಗೆ ಭೂದೇವಿಗೆ
  ಗುರುವಂ ಕಾಶ್ಯಪನಿರಲ್ಕೆ, ಭೂದೇವಿs ದ್ವಾ-
  ಪರದೊಳ್ ತಾನಿರಲಧಿಪಂ-
  ನರಕದನುಜ ಸತ್ಯಭಾಮೆಗಂ ಸೋದರನೈ

  ಅಧಿಪಂ ನರಕದನುಜ – ‘ನರಕದ ಅಧಿಪನ ಅನುಜ’ (ಯಮನ ತಮ್ಮ) ಎಂದು ಮಾಡಿದ್ದೇನೆ
  (ನನ್ನ ಪೂರಣದಲ್ಲಿ ಒಳ್ಳೆಯ ಅರ್ಥ ಸ್ಫುರಣೆ ಇಲ್ಲ… )

  • correction
   ಸುರರ್ಗಳಿಗೆ ಭೂದೇವಿಗೆ
   ಗುರುವುಂ ಕಾಶ್ಯಪನಿರಲ್ಕೆ, ಭೂದೇವಿs ದ್ವಾ-
   ಪರದೊಳ್ ತಾನಿರಲಧಿಪಂ-
   ನರಕದನುಜ ಸತ್ಯಭಾಮೆಗಂ ಸೋದರನೈ

   ಗುರು – ತಂದೆ
   ಅಧಿಪಂ ನರಕದನುಜ – ‘ನರಕದ ಅಧಿಪನ ಅನುಜ’ (ಯಮನ ತಮ್ಮ) ಎಂದು ಮಾಡಿದ್ದೇನೆ
   (ನನ್ನ ಪೂರಣದಲ್ಲಿ ಒಳ್ಳೆಯ ಅರ್ಥ ಸ್ಫುರಣೆ ಇಲ್ಲ… )

 9. ಆತ್ಮೀಯ ಸೋಮ ಅವರೇ ನಿಮ್ಮ ಪೂರಣದ ಕೆಲ ಅರ್ಥವನ್ನುಪಯೋಗಿಸಿ ಪ್ರಯತ್ನಿಸಿದ್ದು.

  ಕರದೊಳ್ ನಿ೦ದ ಸಿರಿಯ ಸ೦
  ಬರ ಕ೦ಡು ಕುಬೇರ ಲಕುಮಿಯ ಶ್ರೀಮನದಾ
  ದರದಿ೦ ನೆಲೆಸಲ್ ಈಶ೦
  ನರಕದನುಜ ಸತ್ಯಭಾಮೆಗ೦ ಸೋದರನೈ

  ಕುಬೇರನ ಕೈಯೊಳಗೆ ಇರುವ ಸ೦ಪತ್ತನ್ನು ಕ೦ಡು ಅವನು*ಕುಬೇರನು) ಲಕ್ಷ್ಮಿಯ ಸಿರಿ ಮನದಲ್ಲಿ ನೆಲೆಸಲು ಸ೦ಪತ್ತಿನಲ್ಲಿ ಕುಬೇರನು ಸತ್ಯಭಾಮೆ (ಲಕ್ಷ್ಮಿ)ಗೆ ಸೋದರನಾದ ಎ೦ದು ಸಮಸ್ಯೆಯನ್ನು ಬಿಡಿಸಲು ಯತ್ನಿಸಿದ್ದೇನೆ. ತಪ್ಪಿದ್ದರೆ ತಿಳಿಸಿ
  ಹರಿ

 10. ವರಪದ್ಯಪಾನಕೆನುತುಂ
  ಭರದಿಂ ಬಂದೆರಗೆ ಚಂದ್ರಮೌಳಿಗಳಿತ್ತಾ
  ಖರತರಸಮಸ್ಯೆಯದೊ ಕೇಳ್!
  ನರಕದನುಜ ಸತ್ಯಭಾಮೆಗಂ ಸೋದರನೈ!!

  ಪುರವೀಥಿಗಳೊಳದಾರೋ
  ಪುರುಷಂ ಪೂರ್ವಾವಧಾನಿ, ಇಂದೋ ಮರುಳಂ
  ಭರದಿಂದರಚುತೆ ಪೋಪಂ
  ನರಕದನುಜ ಸತ್ಯಭಾಮೆಗಂ ಸೋದರನೈ!!

  ಈ ಪರಿಯೊಳುಮವಧಾನದೆ
  ರೂಪಿಸಲಕ್ಕುಂ ಸಮಸ್ಯೆಗಳ ಪರಿಹಾರಂ|
  ಭಾಪೆನ್ನರ್ ರಸಿಕರ್ ದಿಟ-
  ಮಾ ಪೊಗಳಿಕೆಯಿರ್ಕೆ, ಪರಿಹರಿಸಿದುದೆ ಭಾಗ್ಯಂ!!

 11. ಮೊದಲಿಗೆ, ಪೂರಣಯತ್ನದಲ್ಲಿ ಕಂದರಚನೆಯನ್ನು ಪಳಗಿಸಿಕೊಳ್ಳುತ್ತಿರುವ ಪ್ರಸಾದರಿಗೆ ನನ್ನ ಹಾರ್ದಿಕ ಮೆಚ್ಚುಗೆ. ನಿಶಿತಮತಿಜನ್ಯಕೀಲಕಗ್ರಹಣಸಮರ್ಥರಾಗುತ್ತಾ ನನ್ನ ಮನಸ್ಸಿನಲ್ಲಿದ್ದ ಒಂದು ಸಾಧ್ಯತೆಯನ್ನೇ ಪೂರಣವಾಗಿಸಿದ ರಾಮಚಂದ್ರರಿಗೆ ಮತ್ತೊಮ್ಮೆ ಅಭಿನಂದನೆ. ಯುಕ್ತಯತ್ನಸಫಲಶ್ರೀಯುತರಾದ ಸೋಮ,ರವೀಂದ್ರ ಮತ್ತು ಹರೀಶರಿಗೆ ಶುಭಾಶಯಗಳು.
  ನಾವು ಊಹಿಸದ ರೀತಿಯಲ್ಲಿ ಪೂರಣಿಸಿ, ಇನ್ನೂ ಹಲವುರೀತಿಯ ಪೂರಣಮಾಡಬಲ್ಲ ಸಮರ್ಥರಾದರೂ ನಮ್ಮ ಸ್ತರಕ್ಕಿಳಿದು ಪ್ರೋತ್ಸಾಹಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಅವಧಾನಿಗಳಿಗೆ ಅಭಿವಂದನೆ.

  ನನ್ನ ಪೂರಣಗಳು :

  ಧರಣೀಸುತ ನರಕಂ ಸರಿ
  ಧರಣೀಸುತರಲ್ತೆ ಜನರು ಧರಣಿಯೊಳೆಂಬಾ
  ಸರಣಿಯಲಿ ಭಾವಿಸೆ ನಿಜಂ
  ನರಕದನುಜ ಸತ್ಯಭಾಮೆಗಂ ಸೋದರನೈ (ರಾಮಚಂದ್ರರ ಪೂರಣಕ್ಕೂ ಇದೇ ಆಶಯ)

  ನರಕವಧೆ ನಾಟಕದೊಳಗ
  ಸುರಪಾತ್ರದ ನಟನಚಿಕ್ಕತಂದೆಯಮಗಳೇ
  ಧರಿಸಲ್ ಭಾಮೆಯೆವೇಷವ
  ನರಕದನುಜ ಸತ್ಯಭಾಮೆಗಂ ಸೋದರನೈ

  • ಮೌಳಿಯವರೆ –
   ನಿಮ್ಮ ಪೂರಣಯತ್ನಕಂದರಚನಾಪಳಗಿ, ನಿಶಿತಮತಿಜನ್ಯಕೀಲಕಗ್ರಹಣಸಮರ್ಥ, ಯುಕ್ತಯತ್ನಸಫಲಶ್ರೀಯುತ, ಅಂಬಂಥಾ ಪದಪ್ರಯೊಗಗಳನ್ನು ನೋಡಿದರೆ, ಯಾರಿಗಾದರೂ ಬಿರುದು ಬಾವಲಿಗಳನ್ನು ಕೊಡುವ ಪರಿಸ್ಥಿತಿಯಿದ್ದಲ್ಲಿ, ಯಾರಿಂದ ಸಲಹೆ ಪಡೆಯಾಬಹುದೆಂಬುದು ಖಚಿತವಾಗಿದೆ 🙂
   ಗಂಭೀರವಾಗಿ ಹೇಳುವುದಾದರೆ, ನಿಮ್ಮ ಈ ರೀತಿಯ ಮಾತುಗಳು ಮತ್ತು ವಾಕ್ಯ ರಚನೆಗಳು ನನಗೆ ಬಹಳ ಸೊಗಸೆನಿಸುತ್ತವೆ.

   • Thanks.ಸಂಗ್ರಹವಾಗಿ ಹೇಳುವುದು ಹೇಗೆಂಬುದಷ್ಟೇ ಉದ್ದೇಶ. ಅದು ಸಾಂದರ್ಭಿಕ ಕಲಿಕೆ, ಎಲ್ಲರಿಂದ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)