Oct 272011
 

  34 Responses to “ಇನ್ನೊಂದು ಕಂದ ಸಮಸ್ಯೆ “ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್””

  1. ಮಿತಿಯಿರದ ಕಾಮ, ಸಿರಿ ಚಪ
    ಲತೆಯಿಂ ವಿಹ್ವಲತೆ ಕೊನೆಗೆ, ಪದವಿಬಿಡದೆ ದು-
    ರ್ಮತಿ ತಂತ್ರದ ಪಾಶದ ಕುಟಿ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಪ್ರತಾಪಿಗಳಾಗಿ ಖ್ಯಾತರಾದರೂ, ಅತಿಭೋಗಲಾಲಸೆಗೆ ಹಣದಹಿಂದೆಬಿದ್ದು, ಚಾಪಲ್ಯದ ಪರಿಣಾಮವಾಗಿ ಹತೇಂದ್ರಿಯ ವಿಹ್ವಲರಾಗಿ, ಸನ್ಮಾರ್ಗಕ್ಕೆ ಬರದೆ, ಅಧಿಕಾರವನ್ನುಳಿಸಿಕೊಳ್ಳಲು ದುರ್ಮತಿಯಿಂದ ರಾಜಕೀಯ ತಂತ್ರಗಳನ್ನು ಮಾಡಿ, ಕೊನೆಗೆ ಆ ಪಾಶದ ಕುಟಿಲತೆಯಲ್ಲಿ ಸಿಕ್ಕಿ ನಾಶವಾರಲ್ಲಾ !

  2. ಸತತ ವಿಜಯಂಗಳಲ್ ತಾಂ
    ಮತಿಗೆಟ್ಟುಂ ಬಿಟ್ಟ ಪೃಥ್ವಿರಾಜಂ ಅರಿಯನ್ |
    ಇತಿ ರಾಜರದೆಷ್ಟೋ ಸಫ –
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್ ||

    [ಸಫಲತೆ ತರುವ ಹುಂಬ ವಿಶ್ವಾಸ, ಮದ, ಗರ್ವಗಳಿಂದಲೆ ಮಡಿದ ರಾಜರೆಷ್ಟೋ !!! ಪೃಥ್ವಿರಾಜ ಚೌಹಾನ, ನಪೋಲಿಯನ್, ಮುಂತಾದವರು]

  3. ಋತಮಂ ಬಿಡೆ, ಭೀಷ್ಮಾದಿಗ
    ಳತಿ-ಮಹ ರಥಿಗಳ್ ಕುಪಕ್ಷಪಾತವದಂಟಲ್
    ಮತಿಗಂಧತೆ ಕವಿದಿರೆ, ಚಪ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಭೀಷ್ಮದ್ರೋಣಾದಿಗಳು ಪ್ರತಾಪಿಗಳು,ಅತಿರಥ ಮಹಾರಥ ಬಿರುದಾಂಕಿತರು.ಋತವನ್ನು ಬಿಟ್ಟು, ಯಾವುದೋ ಚಾಪಲ್ಯ ಮತಿಯಿಂದ, ಅಂಧಕಾರದ ವ್ಯಾಮೋಹದಿಂದ, ದುಷ್ಟರೊಡನೆ ಸಹಾಯಕರಾಗಿನಿಂತರು. ಆ ಚಪಲತೆಯೇ ಅವರಿಗೆ ಮೃತ್ಯುವಾಯ್ತು

  4. ನನ್ನದೊಂದು ಯತ್ನ ಹೀಗಿದೆ:

    ಗತದಿನದಿ ವಿಜಯಯಾತ್ರೆಯ
    ನತಿಯುಗ್ರತೆರದೊಳುಗೈದು ಮದವತಿರಥಿಗಳ
    ಮತಿಯಂ ಕವಿಯಲ್, ಸೀತಾ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್
    ಗತಕಾಲದಲ್ಲಿ ಉಗ್ರರೀತಿಯಲ್ಲಿ ವಿಜಯಯಾತ್ರೆಯನ್ನು ಕೈಗೊಂಡು ಜಯದ ಮದವು ಅತಿರಥಿಗಳ(ರಾವಣ, ಕುಂಭಕರ್ಣರ) ಮತಿಯನ್ನು ಕವಿದಾಗ ಸೀತೆಯೆಂಬ ಲತೆಯಿಂದ ಹತರಾದರು..

  5. ರಾಮ್ ಮತ್ತು ಚಂದ್ರಮೌಳಿ ಅವರ ಪರಿಹಾರಗಳು ತುಂಬ ಚೆನ್ನಾಗಿವೆ. ಸಮರ್ಥರ ಪರಿಹಾರಕ್ರಮವೂ ಸೊಗಸೇ. ಆದರೆ ಮೊದಲ ಎರಡು ಸಾಲುಗಳಲ್ಲಿ ಪದ್ಯಬಂಧವು ತುಸು ಸಡಿಲವಾಗಿದೆ, ಅಲ್ಲಲ್ಲಿ ವ್ಯಾಕರಣ ಮತ್ತು ಛಂದೋದೋಷಗಳು ನುಸುಳಿವೆ. ಹೀಗೆ ಸವರಣೆ ಮಾಡಬಹುದು:
    ಗತಮೆನೆ ಜಯಕಾಲಂ ದುರ್-
    ಗತಿಯಾಗಿರೆ ರಾಮಸೈನ್ಯದೆದುರೊಳ್ ಬಲಕಂ|
    ಮತಿಗುಂದಿರೆ ಮೇಣ್ ಸೀತಾ-
    …………………….

    ನನ್ನ ಪರಿಹಾರವಿಂತಿದೆ:

    ನೆಲಮೇ, ಗೆಲಮೇ, ಸಂಪ-
    ದ್ಬಲಮೇ ಅಧಿಕಾರದೊಂದು ಚಲಮೇ ನಿಚ್ಚಂ?
    ಪೊಲೆಮನದೊಳ್ ಬೆಳೆದಾಶಾ-
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್||

  6. ಎಲ್ಲರಿಗೂ ಧನ್ಯವಾದಗಳು 🙂

    ಚಂದ್ರಮೌಳಿಯವರ ಮತ್ತು ರಾಮ್ ಅವರ ಪೂರಣಗಳು ಬಹಳ ಚೆನ್ನಾಗಿವೆ (ಸಫಲತೆ, ಚಪಲತೆಗಳು, ಕುಟಿಲತೆ ಕಳೆದ್ದಿದ್ದರಿಂದ, ನನ್ನ ಪೂರಣಕ್ಕೆ ಹುಡುಕಾಟ ಮಾಡುವ ಹಾಗಾಯಿತು :)), ಸಮರ್ಥ ನೀವು (ನನ್ನ ಅನಿಸಿಕೆಯ ಪ್ರಕಾರ) ಮೊದಲ ಬಾರಿ ಕಂದ ಪದ್ಯ ಬರೆದಿದ್ದೀರಿ, ನಿಮ್ಮ ಪ್ರಯತ್ನ ಚೆನ್ನಾಗಿದೆ. ದಯವಿಟ್ಟು ಮುಂದುವರೆಸಿ

    ಗಣೇಶ್ ಸರ್, ‘ಪೋಲೆಮನದೊಳ್ ಬೆಳೆದಾಶಾತೆಲಯಿಂ’ ಎಂಬ ಪೂರಣ ಬಹಳ ಹಿಡಿಸಿತು

    ಪೂರಣಗಳು:

    ಕತಿಪಯ ಶಿಶುರಕ್ಷಣೆಯಂ
    ಧೃತಿಯಿಂ ಸಾಧಿಸುತೆ ಜಡಿವ ಮಳೆಯೊಳ್ ದುಡಿದರ್
    ವ್ರತಿಗಳೆನಲ್ ಜಡಿವ ತಡಿಲ್-
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ತಡಿಲ್ಲತೆ – ಸಿಡಿಲು
    ಮಳೆಯ ಪ್ರವಾಹದಲ್ಲಿ ಮಕ್ಕಳನ್ನ ರಕ್ಷಿಸಿದ ವೀರರು ಸಿಡಿಲಿಗೆ ಬಲಿಯಾದಬಗ್ಗೆ

    ಧೃತಿಯಿಂ ಯುಧ್ಧದಿವರ್ ಗೇ-
    ಯುತ ಜಯಮಂ ವಾಯುಸೆನೆಗಂ ಗಳಿಸಲ್, ಧು: –
    ಸ್ಥಿತಿಯಿರೆ, ವಿಮಾನದೊಳ್ ವಿಫ-
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

  7. ಗಣೇಶ್ ಸರ್ ಮತ್ತು ಸೋಮ ಅವರೇ, ತಮ್ಮ ಅನಿಸಿಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ವ್ಯಾಕರಣ ಹಾಗೂ ಛಂದೋದೋಷಗಳು ತಿಳಿಯುತ್ತಿಲ್ಲ. ದಯವಿಟ್ಟು ವಿವರಿಸುವಿರಾ? ಮುಂದೆ ನನಗೆ ಕಂದರಚನೆಯಲ್ಲಿ ಸಹಕಾರಿಯಾದೀತು…
    ಧನ್ಯವಾದಗಳು

    • ಸಮರ್ಥ,

      ನಿಮ್ಮ ಮೊದಲನೆಯ ಪ್ರಯತ್ನ ಶ್ಲಾಘನೀಯ

      ನನ್ನ ಅನಿಸಿಕೆಯೇನಂದರೆ, ನಾವು ಪದ್ಯ ಬರೆಯುವಾಗ ಆದಿಪ್ರಾಸಕ್ಕಾಗಿಯೇ ಶ್ರಮವನ್ನು ಪಡುತ್ತಿದ್ದೀವೆಯೇ ಎಂದು ಗಮನಿಸಿಕೊಳ್ಳಬೇಕು. ಆದಿಪ್ರಾಸದ ತೆರಿಗೆ ಹೆಚ್ಚಾದರೆ ಬಂಧದಲ್ಲಿ ಸಡಿಳತೆಬಂದು ಅರ್ಥ ಸ್ಫುರಣೆಯಲ್ಲಿ ಪದ್ಯ ಸ್ವಲ್ಪ ಹಿಂದೆ ಬೀಳುವ ಸಾಧ್ಯತೆ ಹೆಚ್ಚುತ್ತದೆ. ಅಂತೆಯೇ ಹಳೆಗನ್ನಡದ ಪ್ರಯೋಗವನ್ನು ಗಮನದಲ್ಲಿಟ್ಟು ಬರೆದರೆ ಕಂದವು ಚೆನ್ನ. ನಿಮ್ಮ ಕಲ್ಪನೆಗೆ ಒಂದು ಮಾದರಿ ಪದ್ಯವನ್ನು ಗಣೇಶರು ಕೊಟ್ಟಿರುವ ಪೂರಣದಲ್ಲಿ ಇರುವ ಅರ್ಥ ಸ್ಫಷ್ಟತೆಯನ್ನು ಮತ್ತು ಅದೇ ಚೌಕಟ್ಟಿನಲ್ಲಿ ಅಡಕವಾಗಿರುವ ಪದ್ಯದ ಭಾವಕ್ಕೆ ಒತ್ತುಕೊಡುವ ಹೆಚ್ಚಿನ ಮಾಹಿತಿಯನ್ನು (ರಾಮನ ಸೈನ್ಯದ ವಿರುದ್ಧ ಹೋರಾಟ, ಬಲ, ದುರ್ಗತಿ…) ನಾವು ಗಮನಿಸಿಕೊಳ್ಳಬೇಕು.

      • ಸೋಮ ಅವರೇ ಧನ್ಯವಾದಗಳು. ಬಹುಷಃ ಕೆಲವು ಹಳಗನ್ನಡ ಪ್ರಯೋಗಗಳನ್ನು ನೋಡಿಕೊಂಡರೆ ಸ್ಪಷ್ಟ ಚಿತ್ರ ಮೂಡೀತು..

    • ಸಮರ್ಥ –
      ಎರಡನೆಯ ಸಾಲಿನ ಕೊನೆಯ ಮಾತ್ರೆ ಗುರುವೇ ಆಗಿರಬೇಕು. ಹಾಗೂ ಎರಡನೆಯ ಸಾಲಿನ ಮೂರನೆ ಗಣ ಸರ್ವಲಘುವಾದರೆ, ಮೊದಲಕ್ಷರದ ನಂತರ ಯತಿ (break) ಬರಬೇಕು.
      ನಿಮ್ಮ ಪದ್ಯವನ್ನು ಗದ್ಯವಾಗಿ ಬರೆದರೆ ಹೀಗಾಗುತ್ತದೆ :: “ಗತದಿನದಿ ವಿಜಯಯಾತ್ರೆಯನು ಅತಿ ಉಗ್ರ ತೆರದೊಳು ಗೈದು ಮದ ಅತಿರಥಿಗಳ ಮತಿಯನು ಕವಿಯಲು, ಸೀತಾ …” – ಸ್ವಲ್ಪ ಪದಗಳನ್ನು ಸವರಿಸಿ ಹೊಂದಿಸಿದರೆ, ಅರ್ಥ ಸ್ಫುರಣೆ ಇನ್ನೂ ಚೆನ್ನಾಗಿ ಆದೀತು.

      • ರಾಮಚಂದ್ರ ಸರ್, ಈ ನಿಯಮ ನನ್ನನ್ನು ತಲುಪಿರಲಿಲ್ಲ… ಇನ್ನೊಮ್ಮೆ ಪ್ರಯತ್ನಿಸುವೆ. ಧನ್ಯವಾದಗಳು

  8. ಹಿತವಂ ಸೂನುಗಳ ಬಯಸಿ
    ವಿತರಿಸಿ ನೆಲವನಪಚಾರ ಗೈದರ್ ಸಚಿವರ್
    ಇತಿಹಾಸ ಮರೆತರೇಂ ಚಪ –
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

  9. ಇನ್ನೊಂದು ಪೂರಣ ::

    ಚತುರಾಂಗನಾಂಗಚಪಲ ತು –
    ಡಿತದಿಂ ಮರುಳಪ್ಪರೆಲ್ಲ ಮೋಹಿನಿಯರಿಗಂ |
    ಪತಿತ ಮತಿಯವರ್ ಪ್ರೇಮದ –
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್ ||

  10. ಅತಿನೇಮಿ – ರಾವಣ ಹೊತ್ತೊತ್ತಿಗೆ ಸಂಧ್ಯಾವಂದನೆ ಮಾಡುತ್ತಿದ್ದ
    ಶ್ರುತರೆನಿಸಿದರ್ರುಜುಸ್ಸಡಿಲತೆ – ವಿಶ್ರುತರೆನಿಸಿದವರು ಋಜುಸ್ಸಿನ (ನೀತಿ) ಸಡಿಲತೆಯಿಂದ

    ಅತಿನೇಮಿ ರಾವಣಲ್ಲದೆ
    ಲತಿಬಲ ಮಾರೀಚ ವೃತ್ರ ಕೋಕಾದಿ ಬಹು
    ಶ್ರುತರೆನಿಸಿದರ್ರುಜುಸ್ಸಡಿ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    • ಪ್ರಸಾದರೆ, ನಿಮ್ಮ ಪೂರಣದ ಅರ್ಥವಾಗಲಿ ಶಬ್ದಗಳಾಗಲಿ ತಿಳಿಯುತ್ತಿಲ್ಲ:-)
      ದಯಮಾಡಿ ತಿಳಿಮಾಡಿಕೊಡಿ!!
      ಕೆಲವೊಂದು ವ್ಯಾಕರಣದೋಷಗಳಿವೆ (ರಾವಣನಲ್ಲದೆ is correct form. Then metre will be the causality. ಲತಿಬಲ ಅಂದರೇನು? any typographic error? who is ಕೋಕಾರಿ? is he ಚಂದ್ರ?)

      • ರಾವಣಲ್ಲದೆಲತಿಬಲ = ರಾವಣ ಅಲ್ಲದೆಲೆ ಅತಿಬಲ(ಶಾಲಿಯಾದ). Is it not possible to sanction ರಾವಣಲ್ಲದೆಲೆ instead of ರಾವಣನಲ್ಲದೆಲೆ?

        ಕೋಕಾರಿ ಅಲ್ಲ, ಕೋಕಾದಿ. ಕೋಕ (ಎಂಬ ರಾಕ್ಷಸ) ಆದಿಯಾಗಿ

        ಅರ್ಥ: ಬಹಳ ನೇಮವಂತ ರಾವಣ ಅಲ್ಲದೆಲೆ, ಅತಿ ಬಲಶಾಲಿ ಮಾರೀಚ, ವೃತ್ರಾಸುರ, ಕೋಕಾಸುರ ಇತ್ಯಾದಿ ಬಹುಶ್ರುತರು ನೀತಿಸಡಿಲತೆಯಿಂದ……….

  11. Is this better?

    ಅತಿನೇಮಿ ರಾವಣಾಸುರ
    ನತಿಬಲಿ ಮಾರೀಚ ವೃತ್ರ ಕೋಕಾದಿ ಬಹು
    ಶ್ರುತರೆನಿಸಿದರ್ರುಜುಸ್ಸಡಿ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

  12. ಮೂರನೆಯ ಸಾಲಿನ ಅರ್ಥ ಸ್ಪಷ್ಟವಾಗಲಿಲ್ಲ. ಕಾಡುತ್ತಿರುವುದಕಾಗಿ ಕ್ಷಮೆಯಿರಲಿ:-)

    • ಕಾಡುತ್ತಿರುವವರು ನೀವೇ? ಅನರ್ಥವನ್ನು ಗೀಚಿ ನಿಮ್ಮನ್ನು irritate ಮಾಡುತ್ತಿರುವವನು ನಾನು.

      ಬಹುಶ್ರುತರೆನಿಸಿದರ್ರುಜುಸ್ಸಡಿ = ಮೇಲೆ ಹೇಳಲಾಡ ಬಹುಶ್ರುತ(ಖ್ಯಾತ)ರೆನಿಸಿದ(ವ)ರ್ (ರಾಕ್ಷಸರ್), ಋಜುಸ್(ನೀತಿ) ಸಡಿಲತೆಯಿಂದ (loose morals)……..

      • But, alas! such compounding is ungrammatical!!

      • ಪ್ರಸಾದರೆ –
        ೨ನೇ ಸಾಲಿನಾ ಕೊನೆಯ ಗಣದಲ್ಲಿ ಒಂದು ಮಾತ್ರೆ ಲೋಪವಾದಂತಿದೆ. “ಕೋಕಾದಿ ಬಹು” ಎಂಬುದನ್ನು “ಕೊಕಾದಿಯರುಂ” ಎಂದು ಮಾಡಬಹುದೆ? ಈ ಸಾಲಿನಲ್ಲಿ ಕೊನೆಯ ಮಾತ್ರೆ ಗುರುವಾಗಬೇಕಿದ್ದರಿಂದ ‘ಬಹು’ ಎಂದು ಕೊನೆಯಾಗಲಾರದು.
        ಹಾಗೂ ೩ನೇ ಸಾಲನ್ನು ಬಿಡಿಸಿ ಹೀಗೆ ಮಾಡಬಹುದೇ? ::
        “ಶ್ರುತರ್ ಋಜುಸ್ಸಿನಾ ಸಡಿ -“

        • ’ಪ್ರಸಾದರೆ’ ಎಂಬುದು ’ರಾಮರೆ’ ಎಂದಂತಿದೆ. ಬೇಡ.
          ರಾಮ್,
          ೧) ನತಿಬಲಿ/ ಮಾರೀ/ಚ ವೃತ್ರ/ ಕೋಕಾ/ದಿ ಬಹು/ಶ್ರು….. – ಇಲ್ಲಿ ’ಹು’ ಗುರು ಅಲ್ಲವೆ? ಶಿಥಿಲದ್ವಿತ್ವವೆ?
          ೨) ಶ್ರುತರ್ ಋಜುಸ್ಸಿನಾ… – ಸ್ವರಾಕ್ಷರ ಬಂದಾಗ (ಋ), ಸಂಧಿ ಮಾಡಬೇಕಲ್ಲವೆ? ಉಚ್ಚಾರಣೆ ರೇಫದಂತಿರುವುದರಿಂದ ವಿನಾಯಿತಿಯೆ?
          ೩) ಋಜುಸ್ಸಿನಾ ಸಡಿಲತೆ – ನೀತಿಸಡಿಲತೆಗೂ ನೀತಿಯ ಸಡಿಲತೆಗೂ ವ್ಯತ್ಯಾಸವಿಲ್ಲವೆ? ’ನೀತಿಯ ಸಡಿಲತೆ’, ’ಋಜುಸ್ಸಿನ ಸಡಿಲತೆ’ ಎಂದು ಮಾಡುವುದು ಬೇಡ ಎಂದು ಬಿಟ್ಟು, ’ನೀತಿಸಡಿಲತೆ’ ’ರ್ನೀತಿಸಡಿಲತೆ’ ಎರಡೂ ಹೊಂದದೆ, ’ನೀತಿ’ಗೆ ’ಋಜುಸ್’ ಬಳಸಿ….

  13. ಚತುರಂಗಬಲಂ ಮೇಣತಿ
    ಚತುರರ್ ಸೇನಾನಿ ಮಂತ್ರಿ ಗಣಮದಿರುತಿರಲ್
    ವಿತರಣ ವಿವೇಕ ಗುಣ ವಿಫ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಗತಿಗೆಟ್ಟೋಡುವ ಸೈನಿಕ
    ತತಿಯೊಳ್ ನಾಯಕರ ಮಾತ ಕೇಳ್ವರ ಕಾಣೆಂ
    ಧೃತಿಗೆಟ್ಟಳುತಿಹ ಜನಬಹು
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಸತಿಯೋ ಮಾತೆಯಳಲ ಸಂ
    ಹತಿಯೋ ಹಗೆವರ ಕಿತಾಪತಿಯ ಸಂಗತಿಯೋ
    ಕ್ಷಿತಿಯೊಳಗೆ ಮತ್ಸರದ ವಿಷ
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಅತಿಚತುರರ್ ವಿಗಡರ್ ಸ್ಥಿರ
    ಮತಿಗಳ್ ಬಹು ಗೂಢಚಾರ ಗಣಕಧಿಪತಿಗಳ್
    ಮತಿಮರೆದಾಕೆಯ ನಳಿದೋಳ್
    ಲತೆಯಿಂ ಮಡಿದರ್ ಪ್ರತಾಪಿಗಳಿವರ್ ಬಿರುದರ್

    ಹೆಂಗಳನ್ನುಪಯೋಗಿಸಿ ಸ್ಪೈ ಏಜೆಂಟುಗಳನ್ನು ಹಣಿಯುವ ಅತಿ ಹಳೆಯ ಪತ್ತೇದಾರೀ ತಂತ್ರವನ್ನು ಮನದಲ್ಲಿಟ್ಟು ರಚಿಸಿದ್ದಿದು.

    • ’ಪ್ರಸಾದರೆ’ ಎಂಬುದು ’ರಾಮರೆ’ ಎಂದಂತಿದೆ. ಬೇಡ.
      ರಾಮ್,
      ೧) ನತಿಬಲಿ/ ಮಾರೀ/ಚ ವೃತ್ರ/ ಕೋಕಾ/ದಿ ಬಹು/ಶ್ರು….. – ಇಲ್ಲಿ ’ಹು’ ಗುರು ಅಲ್ಲವೆ? ಶಿಥಿಲದ್ವಿತ್ವವೆ?
      ೨) ಶ್ರುತರ್ ಋಜುಸ್ಸಿನಾ… – ಸ್ವರಾಕ್ಷರ ಬಂದಾಗ (ಋ), ಸಂಧಿ ಮಾಡಬೇಕಲ್ಲವೆ? ಉಚ್ಚಾರಣೆ ರೇಫದಂತಿರುವುದರಿಂದ ವಿನಾಯಿತಿಯೆ?
      ೩) ಋಜುಸ್ಸಿನಾ ಸಡಿಲತೆ – ನೀತಿಸಡಿಲತೆಗೂ ನೀತಿಯ ಸಡಿಲತೆಗೂ ವ್ಯತ್ಯಾಸವಿಲ್ಲವೆ? ’ನೀತಿಯ ಸಡಿಲತೆ’, ’ಋಜುಸ್ಸಿನ ಸಡಿಲತೆ’ ಎಂದು ಮಾಡುವುದು ಬೇಡ ಎಂದು ಬಿಟ್ಟು, ’ನೀತಿಸಡಿಲತೆ’ ’ರ್ನೀತಿಸಡಿಲತೆ’ ಎರಡೂ ಹೊಂದದೆ, ’ನೀತಿ’ಗೆ ’ಋಜುಸ್’ ಬಳಸಿ….

    • ಮಂಜುನಾಥ್ ರವರೆ,
      ನಿಮ್ಮ ನಾಲ್ಕನೆಯ ಪದ್ಯ ಓದುತ್ತಿದ್ದಂತೆ, ಚಂದ್ರಪ್ರಕಾಶ್ ದ್ವಿವೇದಿಯವರ ’ಚಾಣಕ್ಯ’ ಟೆಲಿಚಿತ್ರದಲ್ಲಿ ತಕ್ಷಶಿಲಾದ ಸೇನಾಪತಿ ಸಿಂಹರಣ್, ಕೇಕಯದ ಗೂಢಚಾರಿ ಶುಭದೆಗೆ ಕೈವಶವಾದ ರೀತಿಯೇ 3Dಯಲ್ಲಿ ಕಣ್ಣಮುಂದೆ ಸುಳಿಯುತ್ತದೆ. ನನ್ರಿ ಅಯ್ಯ.

    • ಮಂಜುನಾಥರೆ,
      ನಾಲ್ಕು ನಾಲ್ಕು ಸಾಲುಗಳಲ್ಲಿ ದೊಡ್ಡ ದೊಡ್ಡ ಕತೆಗಳನ್ನೇ ಇಟ್ಟಿರುತ್ತೀರಲ್ಲಾ !, ಸ್ವಾಮಿ ಅಡ್ಬಿದ್ದೆ ನಿಮಗೆ.

    • ಮಂಜುನಾಥರೆ, ನಿಮ್ಮ ಎಲ್ಲ ಪೂರಣಗಳು ಬಹಳ ಚೆನ್ನಾಗಿವೆ 🙂

  14. ಮತಿವಿಭ್ರಮಣೆಯೊ? ಮೇಣ್ ಸೀ –
    ಮಿತ ಮತಿಯಿಂದೊ? ಹಿಸೆಯಂ ಕೊಡದಿರಲ್ ಕುರುಗಳ್ |
    ಅತಿಶಯ ನೆಂಟಸ್ತನ ಶಿಥಿ –
    ಲತಯಿಂ ಮಡಿದರ್ ಪ್ರತಾಪಿಗಳಿವರ್ ಬಿರದರ್ ||

  15. ಕಾಂಚನಾ ಅವರ ಪೂರಣನವಾಗಮನ ಮನನೀಯ.
    ಎರಡನೆಯಸಾಲಿನ ಛಂದೋಭಂಗವನ್ನು ಸವರಣಿಸಿದರೆ ಇನ್ನೂ ಸೊಗಸೀತು.

    • ಚಂದ್ರಮೌಳಿಯವರೇ,
      ನನಗೆ ಛಂದೋಭಂಗ ಕಾಣಿಸುತ್ತಿಲ್ಲ.
      ಮಿತ ಮತಿ + ಯಿಂದೊ? ಹಿ + ಸೆಯಂ ಕೊ + ಡದಿರಲ್ + ಕುರುಗಳ್
      ದಯವಿಟ್ಟು ದೋಷವನ್ನು ತಿಳಿಸುವಿರಾ?

  16. Dear Ms Kanchana,

    You are correct. I did not read it right. While reading ‘mitamatiyimdo’. I read the ending letter ‘do’ as a deerghakshara and hence it is my vAchanadhosha and mitamati. There is no chandobhaMga in the construction. Inconvenience regretted.

    Best wishes,
    Mowly

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)