Jan 292012
 

ನಿಮಗಿಷ್ಟವಾದ ಛಂದೋಬದ್ಧವಾದ ಪದ್ಯಗಳನ್ನು ಇಲ್ಲಿ ಬರೆಯಿರಿ. ಈ ಪದ್ಯಗಳು ಯಾವ ವಿಷಯದ ಬಗ್ಗೂ ಆಗಬಹುದು.

  41 Responses to “ಪದ್ಯ ಸಪ್ತಾಹ – ೫ – ೨೦೧೨ ::‌ ಲಹರಿ”

  1. ಈ ಪದ್ಯಗಳು ಯಾವ ವಿಷಯದ ಬಗ್ಗೂ!!! ಆಗಬಹುದು.

    ಈಗಳಂ ಪಳಗನ್ನಡವ ಕಲಿತು ಪಿಂತಿರುಗ
    ಲಾಗುತಿರ್ಪುದೆನಗಂ ಪಿರಿಯ ಸಿಗ್ಗು|
    ಲಾಗ ಪೊಡೆದೊಡುಮಯೋಮಯಮಹುದು ತಿಳಿತಿಲ್ಲ
    ’ರಾಗ’, ಸಂಧಿಯಿದದಾವದಿದು ’ಬಗ್ಗೂ’||
    ರಾಗ = ಶ್ರೀ ರಾ. ಗಣೇಶ್

    • ಮತ್ತೆ ಮತ್ತೆ ಛಂದಸ್ಸಿನ ಬಗೆಗೇ ವಿಸ್ಮೃತಿಯೇಕೆ ಪ್ರಸಾದೂ???
      ಕಿತ್ತು ಕಿತ್ತು ತಿನ್ನುತ್ತಿದೆ ರಾಗನ ಮನವನ್ನೀ ಪರಿ ಕಾದೂ!!

  2. ಸದ್ಯದಲ್ಲಿ ಕಲ್ಯಾಣನಗರದಲ್ಲಿ ನಡೆದ ಅವಧಾನದಲ್ಲಿ ನಾನು ಮಾಡಿದ ಚಿತ್ರ ಕವಿತೆ – ಗೋಮೂತ್ರಿಕಾ ಬಂಧ (ಅಂದರೆ ಎರಡು ಸಾಲುಗಳಲ್ಲಿ ಪ್ರತಿ ಎರಡನೆಯ ಅಕ್ಷರವು ಒಂದೇ ಆಗಿರುತ್ತದೆ). ಮಾತ್ರಾ ಗಣಗಳ ಛಂದಸ್ಸಿನಲ್ಲಿ ಮಾಡುವಾಗ, ಒಂದು ಮತ್ತು ಮೂರನೆ ಸಾಲುಗಳಲ್ಲಿ ಹಾಗು ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ಈ ಬಂಧವನ್ನು ತರಬಹುದು. ಈ ಪದ್ಯದಲ್ಲಿ, ಚತುರ್ಮಾತ್ರಾ ಚೌಪದಿಯ ಪದ್ಯದಲ್ಲಿ ಸಾಲುಗಳನ್ನು ಕೂಡಿ ಹಾಗು ಕೊನೆಯೆರಡು ಸಾಲುಗಳನ್ನು ಕೂಡಿ ಒಂದು ಉದ್ದನೆಯ ಗೋಮೂತ್ರಿಕಾ ಬಂಧವಾಗಿದೆ. ವಿಷಯ – ಸಂಕ್ರಂತಿಯ ಯಾವುದಾದರೊಂದು ತಿಂಡಿ ::

    ಸಕ್ಕರೆಯಚ್ಚಿನ ಸವಿಯನು ಸವಿಯಲ್ ಸಂಭ್ರಮವಿದ ಮೊಗದಲಿ ತಂದು |
    ಅಕ್ಕರೆಯನ್ದಿನ ಸವಿಯನುಭವಿಪರ್ ಸಂಕ್ರಮಣದ ಸೊಗಸಲಿ ಯಿಂದು ||

    ಇಲ್ಲಿ “ಕ್ಕ, ಯ, ನ, ವಿ, ನು, ವಿ, ಸಂ, ಮ, ದ, ಗ, ಲಿ, ದು” – ಅಂದರೆ ಪ್ರತಿ ಎರಡನೆಯ ಅಕ್ಷರ ಎರಡು ಸಾಲುಗಳಲ್ಲಿ ಒಂದೇ ಆಗಿದೆ.

  3. ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರಾರಿ ಪಾದಾರ್ಪಿತ ಚಿತ್ತವೃತ್ತಿಃ|
    ದಧ್ಯಾಧಿಕಂ ಮೋಹವಶಾದವೋಚತ್ ಗೋವಿಂದ ದಾಮೋದರ ಮಾಧವೇತಿ||
    – ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫

    ಇದು ಅದರ ಅನುವಾದ, ಕೇವಲ ಭಾವಾನುವಾದವಷ್ಟೇ:

    ಮುರಹರನ ಪಾದದೊಳು ಮನವ ನೆಟ್ಟಿಹ ಯುವತಿ
    ಮೊಸರು ಮೊಸರೆಂದು ಮಾರಲು ಹೊರಟಳು
    ಮೊಸರ ಮೀರಿದ ಮೋಹ ಮೈಮರೆಯೆ ಕೂಗುವಳು
    ಗೋವಿಂದ ದಾಮೋದರ ಮಾಧವೆಂದು

    • ಅನುವಾದದ ಹದ ಹಸನಾಗಿದೆ. ಆದರೆ ನಿಮ್ಮಂಥ ಬಲಶಾಲಿಗಳೇ ಆದಿಪ್ರಾಸವನ್ನು ಮರೆತರೆ ಅಬಲೆ ಆದಿಪ್ರಾಸವೆಂಬ ಗರತಿಯ ಗತಿಯೇನು?
      (ref: ತೀನಂಶ್ರೀ ಅವರು ಆದಿಪ್ರಾಸ ಗರತಿ, ಅಂತ್ಯಪ್ರಾಸ ಗಣಿಕೆ, ಅನುಪ್ರಾಸ ಗೆಳತಿ ಎಂದಿದ್ದಾರೆ. ಇದರ ಹಿನ್ನೆಲೆಯಲ್ಲಿ ಈ ಚಿಕ್ಕ ಚೆಲ್ಲಾಟ)

      • 🙂 ಗಣೇಶರೇ ಕ್ಷಮಿಸಿ, ಭಾವಕ್ಕೆ ಮರುಳಾಗಿ ಪ್ರಾಸವನ್ನು ಮರೆತೆ. ಅಂಥಾ ಅಹಲ್ಯೆಯೇ ಇಂದ್ರವೈಭವಕ್ಕೆ ಮರುಳಾಗಲಿಲ್ಲವೇ. ಇರಲಿ, ಇಷ್ಟುಬೇಗ ರಾಮಪದಸ್ಪರ್ಷವೂ ಆಯಿತು. ಶುದ್ಧವಾಗಿ ಮತ್ತೊಂದು ಅನುವಾದವನ್ನು ಪ್ರಯತ್ನಿಸುತ್ತೇನೆ.

        ಅದೇನೇ ಇರಲಿ, ಗರತಿಯನ್ನು ಕೈಬಿಟ್ಟು ಗಣಿಕೆ ಗೆಳತಿಯರ ಹಿಂದೆ ಬಿದ್ದೆನೆಂದು ದೂರದಿರಿ. ಇದು ಅವರೆಲ್ಲರನ್ನೂ ಬಿಟ್ಟ ಸನ್ಯಾಸ 🙂 ಮತ್ತೆ ಸಂಸಾರಕ್ಕೆ ಹಿಂದಿರುಗೆನ್ನುತ್ತಿದ್ದೀರಿ. ಕರ್ಮೈಕೋದ್ದೇಶಿತನಾಗಿ ಸಂಸಾರಕ್ಕೆ ಮರಳುತ್ತೇನೆ.

        • ಮೊಸರ ಮಾರಲು ಹೊರಟ ಗೊಲ್ಲ ಯುವತಿಯ ಮನವು
          ಕುಸುಮದೊಲು ಮುರಹರನ ಪದದಿ ನಿಲ್ಲಲ್
          ಮೊಸರ ಮೀರಿದ ಮೋಹ ಮೈಮರೆಸೆ ಕೂಗುವಳು
          ಕುಸುಮಮುಖಿ ಗೋವಿಂದ ಮಾಧವೆಂದು

      • ನಮಸ್ಕಾರ
        ’ವಿಕ್ರೇತುಕಾಮಾ ಕಿಲ ಗೋಪಕನ್ಯಾ—’ ಶ್ಲೋಕದ ಭಾವಾನುವಾದವನ್ನು
        ನಾನು ಹೀಗೆಯೂ ಮಾಡಿದ್ದೆ– (ಕ್ಷಮೆ ಇರಲಿ ಆದಿಪ್ರಸವನ್ನು ಇಲ್ಲಿ ತರಲಾಗಲಿಲ್ಲ)

        ’ಹಾಲ್ಮೊಸರು ಬೇಕೇ’ ಎನುತ ಬೀದಿಯಲಿ
        ಮಾರುತಿಹ ಗೋಪೀ ಕೂಗಿದಳು ಇಂದು |
        ಹರಿಪ್ರೇಮವಡರೆ ನುಡಿಗಳವು ತೊಡರೆ
        ’ಗೋವಿಂದ ದಾಮೋದರ ಬೇಕೇ’ ಎಂದು! ||
        ಆರತಿ

        • ಇಲ್ಲೊಂದು ಸೂಕ್ಷ್ಮವಿದೆ. ಮೂಲದಲ್ಲಿ “ಬೇಕೇ” ಎಂಬ ಪದ ಇಲ್ಲ. ಬರೀ ಮೊಸರು ಮೊಸರೆಂದು ಕೂಗಿದರೆ ಮೊಸರು ಬೇಕೇ ಎಂದೂ, ಬರೀ ಗೋವಿಂದ ದಾಮೋದರನೆಂದು ಕೂಗಿದರೆ ಅದು ಸ್ವಗತವಿಲಾಪವೂ ಆಗುತ್ತದೆ.

          ಮೊಸರು ಮಾರುವವಳು ಮೊಸರು ಮೊಸರೆಂದು ಕೂಗಬೇಕು, ಬೇಕಾದವರು ಕೊಳ್ಳುತ್ತಾರೆ. ಆದರೆ ಇಲ್ಲಿ ನಮ್ಮ ಹುಡುಗಿ ಅದೆಷ್ಟು ಮೋಹವಶಳಾಗಿದ್ದಾಳೆಂದರೆ, ಮೊಸರು ಬೇಕೇ ಎಂದು ಕೂಗುವುದಿರಲಿ, ತಾನೇನನ್ನಾದರೂ ಮಾರುತ್ತಿದ್ದೇನೆಂಬ ಪರಿವೆಯೂ ಅವಳಿಗಿದ್ದಂತಿಲ್ಲ. ಆದ್ದರಿಂದ ಮೊಸರು ಕೂಗುವ ಬದಲು ಸುಮ್ಮನೇ ಗೋವಿಂದಾ, ದಾಮೋದರಾ ಎಂದು ಕೂಗುತ್ತಿದ್ದಾಳೆ.

          ಮೂಲದಲ್ಲಿರುವಂತೆಯೇ “ಬೇಕೇ” ಎಂಬುದನ್ನು ಸೂಚ್ಯವಾಗಿಯೇ ಉಳಿಸಿಕೊಳ್ಳುವುದರಿಂದ ಮೂಲದಲ್ಲಿರುವ ಉತ್ಕಟತೆಯನ್ನು ಕಾಯ್ದುಕೊಳ್ಳಬಹುದೆಂದು ನನ್ನ ಅನಿಸಿಕೆ.

  4. ಹಿಗ್ಗುತಿದೆ ನನ್ನುದರ ಕಂದ ಬೆಳೆಯುತಿರೆ ತಾ
    ಸಗ್ಗವದು ಬಸಿರೊಳಾ ಪುಟ್ಟನೊದೆತ
    ಜಗ್ಗುತಿದೆ ತೋಟದಾ ಮರ ಹಣ್ಣ ಭಾರದಲಿ
    ಸುಗ್ಗಿಯದು ಮನಕೆ ತುಂಬು ಹರ್ಷದಲಿ

    ಇದನ್ನು ‘ ಚೊಚ್ಚಲ ಬಸುರಿ’ ಗೆ ತಡವಾದ ಕಾಣಿಕೆಯನ್ನಾಗಿ ಕೊಡಬೇಕೆಂದು ಅಂದುಕೊಂಡಿದ್ದೆ, ಇಲ್ಲಿಯೇ ಸ್ವೀಕರಿಸಿ.

    (ಬಗ್ಗೂ ಬಗ್ಗೆ ಪ್ರಸಾದ್ ಅವರು ಹೇಳಿಯಾಗಿದೆ. ಇಲ್ಲಿಯೂ ಕೆಲವು ಗ್ಗ ಗಳೂ, ಗ್ಗು ಗಳು ಬಂದಿವೆ. ಆದ್ದರಿಂದ ಈ ಪದ್ಯ ಇಲ್ಲಿಗೇ ಸಲ್ಲುತ್ತದೇನೊ !!!!)

    • ಇಲ್ಲ, ನಿಮ್ಮ ಪದ್ಯವು ಕೊನೆಯ ಪಾದದ ಒಂದು ಪುಟ್ಟ ಗತಿಭಂಗವನ್ನುಳಿದು ಮಿಕ್ಕಂತೆ ಅನವದ್ಯ. ಹೀಗಾಗಿ ಗ್ಗೂ ಕಾಡುತ್ತಿಲ್ಲ:-)

      • ಧನ್ಯವಾದಗಳು ಗಣೇಶ್ ರವರೆ, ಈಗ ಸರಿಯಾಗಿದೆಯೇ ತಿಳಿಸಿ.

        ಹಿಗ್ಗುತಿದೆ ನನ್ನುದರ ಕಂದ ಬೆಳೆಯುತಿರೆ ತಾ
        ಸಗ್ಗವದು ಬಸಿರೊಳಾ ಪುಟ್ಟನೊದೆತ
        ಜಗ್ಗುತಿದೆ ತೋಟದಾ ಮರ ಹಣ್ಣ ಭಾರದಲಿ
        ಸುಗ್ಗಿಯದು ಮನಕೆ ಹೊಸ ಅನುಭವದಲಿ

        (ಪಾದದ ಮಧ್ಯದಲ್ಲಿ ಸ್ವರ ಬಂದಿರುವುದು ನಿಯಮಕ್ಕೆ ವಿರುದ್ಧವೇನೊ…ಇದರ ಬಗ್ಗೆ ಒಂದು ಚರ್ಚೆಯಾಗಿತ್ತು. ಯಾವ ಸಂದರ್ಭದಲ್ಲಿ ನೆನಪಿನಲ್ಲಿಲ್ಲ).

  5. Chitra kavite:

    ಬಂಧ: ಗೋಮೂತ್ರಿಕ
    ಛಂದಸ್ಸು: ಅನುಷ್ಟುಪ್
    ವಸ್ತು: ಗೀತೆಯ ೧೫ನೇ ಅಧ್ಯಾಯದಲ್ಲಿ ಬರುವ ಅಶ್ವತ್ಥ ವೃಕ್ಷದಬಗ್ಗೆ

    ನಶ್ವರಂ ಮೌಧ್ಯಸಂಘಾತಂ ಬಾಹ್ಯಮಿರ್ಕುದುಮಸ್ಥಿರಂ
    ಶಾಶ್ವತಂ ಮೌಲ್ಯಸಂಯುಕ್ತಂ ಗುಹ್ಯಮಿರ್ಕುದುಮಕ್ಷರಂ

    ನ ರಂ ಧ್ಯ ಘಾ ಬಾ ಮಿ ದು ಸ್ಥಿ
    ಶ್ವ ಮೌ ಸಂ ತಂ ಹ್ಯ ರ್ಕು ಮ ರಂ
    ಶಾ ತಂ ಲ್ಯ ಯುಕ್ ಗು ಮಿ ದು ಕ್ಷ

    • ಎಲ್ಲ ಸರಿ, ಇರ್ಕುದು ವ್ಯಾಕರಣಶುದ್ಧವಲ್ಲ. ಅಲ್ಲಿ ಇರ್ಪುದು ಬಂದರೆ ಸರಿಯಾದೀತು.

      • ಗಣೇಶ್ ಸರ್, ಸರಿಪಡಿಸಿದ್ದೇನೆ,
        ನಶ್ವರಂ ಮೌಧ್ಯಸಂಘಾತಂ ಬಾಹ್ಯಮಿರ್ಪುದುಮಸ್ಥಿರ೦
        ಶಾಶ್ವತಂ ಮೌಲ್ಯಸಂಯುಕ್ತಂ ಗುಹ್ಯಮಿರ್ಪುದುಮಕ್ಷರ೦

  6. ಮಂಜುನಾಥರೆ, ಅನುವಾದ ಒಳ್ಳೆಯ ಐಡಿಯ.
    ಅಬ್ಧಿರ್ಲಂಘಿತಮೇವ ವಾನರಭಟೈಃ ಕಿಂ ತಸ್ಯ ಗಂಭೀರತಾ|
    ಅಪಾತಾಲನಿಮಗ್ನ ಪೀವರತನುರ್ಜಾನಾತಿ ಮಂಥಾಚಲಃ||
    ಇದರ ಕನ್ನಡಾನುವಾದ:
    ಅಬ್ಧಿಯ ಪಾರಿದ ವಾನರ ಸೇನೆಗೆ
    ಲಬ್ಧವೆ ಅದರಾಳದ ತಿಳಿವುಂ|
    ಸ್ತಬ್ಧದಿ ಸಾಗರತಲಕಂ ಮುಳುಗಿ
    ಕ್ಷುಬ್ಧವು, ಗೊತ್ತದು ಮಂದರಕಂ||
    ಕ್ಷುಬ್ಧವು = ಕಡೆಯಲ್ಪಟ್ಟದ್ದು

  7. ನನ್ನುದರ – ಅರಿಸಮಾಸವೇ?

  8. (ಮಾತ್ರೆಗಳು ಕಗ್ಗದ ರೀತಿಯಲ್ಲಿವೆ.
    5 5 5 5/5 5 5 3/ 5 5 5 5/ 5 5 5 1, ದ್ವಿತೀಯಾಕ್ಷರ ಪ್ರಾಸ)

    ಹಳೆಯದಾಗದ ಛಂದ-ಕಂದಗಳೆ ನೀವೆಲ್ಲಿ
    ಕೊಳೆತಿರುವ ಆಧುನಿಕ ಗೀಚುಗಳೆ ತುಂಬಿ |
    ಬೆಳಗುತಿದೆ ಪಾನಿಗಳ ಕೂಟವೊಂದಿಲ್ಲಿಂದು
    ಕುಳಿತಿರುವೆ ನಾನಿಲ್ಲಿ – ಪದ್ಯಪಾನಿ ||

    • ಒಪ್ಪಣ್ಣನವರೆ – ಪದ್ಯಪಾನಕ್ಕೆ ಸ್ವಾಗತ. ತಪ್ಪಾಗಿ ನಿಮ್ಮ ಪದ್ಯ spam ಎಂದು ಸಿಕ್ಕಿಹಾಕಿಕೊಂಡುಬಿಟ್ಟಿತ್ತು. ನೋಡುವುದಕ್ಕೆ ತಡವಾಯಿತು. ಕ್ಷಮಿಸಿರಿ. 🙁
      ನಿಮ್ಮಿಂದ ಇನ್ನೂ ಅನೇಕ ಪದ್ಯಗಳು ಬರುವುದೆಂದು ಅಪೇಕ್ಷಿಸುತ್ತೇವೆ.

  9. ಅನುವಾದ ತಪ್ಪೇನಿಲ್ಲವೆಂಬ ಅಭಿಪ್ರಾಯ ಕಂಡಿದ್ದರಿಂದ, ಈ ಬಾಲಮುಕುಂದಾಷ್ಟಕದ ಅನುವಾದವನ್ನಿಲ್ಲಿ ಹಾಕುತ್ತಿದ್ದೇನೆ. ಹಿಂದೆ ಮಾಡಿದ್ದ ಅನುವಾದದಲ್ಲಿ ಪ್ರಾಸಕ್ಕೆ, ಮತ್ತೆ ಛಂದಸ್ಸಿಗೆ ಗಮನನವಿಟ್ಟಿರಲಿಲ್ಲ. ಈ ಬಾರಿ ಅವುಗಳನ್ನು ಹೊಂದಿಸುವ ಪ್ರಯತ್ನ, ಮತ್ತೆ ಆದಷ್ಟೂ ಮೂಲದ ಭಾವಕ್ಕೆ ದೂರಹೋಗದ ಪ್ರಯತ್ನವನ್ನು ಮಾಡಿದ್ದೇನೆ.

    ಲ-ಮತ್ತು-ಳ ಗಳನ್ನು ಪ್ರಾಸದಲ್ಲಿ ಒಂದರ ಜಾಗಗಲ್ಲಿನ್ನೊಂದನ್ನು ಬಳಸಬಹುದೇ ಇಲ್ಲವೇ ಎಂಬುದು ಸರಿಯಾಗಿ ತಿಳಿದಿಲ್ಲ. ಇದನ್ನೂ ಹೊರತಾಗಿಯೂ ಕೆಲವು ತಪ್ಪುಗಳಿವೆ ಅನ್ನಿಸುತ್ತಿದೆ – ತೋರಿಸಿಕೊಟ್ಟರೆ ಉಪಯೋಗವಾಗುತ್ತದೆ.

    ಪಂಚಮಾತ್ರಾ ಚೌಪದಿಯಲ್ಲಿ ಬಾಲಮುಕುಂದಾಷ್ಟಕ: ಈ ಬಾರಿಯ ಲಹರಿಗೆ ನನ್ನ ಉತ್ತರ
    ================================================

    ಕೈಯ ತಾವರೆಯಿಂದ ಕಾಲದಾವರೆಯನ್ನು
    ಬಾಯ ತಾವರೆಯಲ್ಲಿ ಇರಿಸಿದವನ
    ಮಾಯದಾ ಶಿಶು ಆಲದೆಲೆ ಮೇಲೆ ಪವಡಿಸಿದೆ-
    ಳೆಯ ಮುಕುಂದನ ನಾನು ನೆನೆವೆನಿಂದು ||೧||

    ಜಗಗಳನೆ ಕೊನೆಗೊಳಿಸಿ ಆಲದೆಲೆ ಮೇಗಡೆ ಮ-
    ಲಗಿಹಂಥ ಕೊನೆಮೊದಲು ಇಲ್ಲದವನ
    ಜಗದೊಡೆಯ ಜನವೆಲ್ಲರೊಳಿತಿಗೈತಂದವನ
    ಮಗುಮುಕುಂದನ ನಾನು ನೆನೆವೆ ಮನದಿ ||೨||

    ಕನ್ನೈದಿಲೆಯ ನೀಲ ಕೋಮಲಾಂಗದ ಹರಿಯ
    ಮುನ್ನ ಇಂದ್ರಾದಿಗಳ ಪೂಜೆವಡೆದ
    ಚೆನ್ನಾಗಿ ಆಸರೆಯಲಿಹರನ್ನು ಕಾಯ್ವಂಥ
    ಚಿನ್ನ ಕಂದನ ನಾನು ನೆನೆವೆ ಮನದಿ ||೩||

    ಮುಂಗುರಳಲೆಸೆಯುವನ ಸರಗಳಲಿ ಮೆರೆಯುವನ
    ಸಿಂಗರದಿ ಮೂಡಿರುವ ಸುಲಿಪಲ್ಲ ಚೆಲುವ
    ತೊಂಡೆತುಟಿಯಲಿ ಕೊಳಲ ನಾದವನು ತುಂಬಿರುವ
    ಚಂದಚನ್ನಿಗ ಮುಕುಂದನ್ನ ನೆನೆವೆ ||೪||

    ಚೆಲುವೆ ಗೋಪಿಯರೆಲ್ಲ ಮನೆಹೊರಗೆ ಹೋಗಿರಲು
    ನಿಲುವಿನಲಿ ಹಾಲ್ಬೆಣ್ಣೆ ಮೊಸರೆಲ್ಲವನ್ನು
    ಸುಳಿವು ಬಿಡದೆಲೆ ತಿಂದು ಕಪಟದಲಿ ಮಲಗಿರುವ
    ಖಳನಿವನ ಮುಕುಂದನನೀಗ ನೆನೆವೆ || ೫||

    ಕಾಳಿ ಯಮುನೆಯೊಳಗಡಗಿರುತಿದ್ದ ಕಾಳಿಯನ
    ಏಳುಹೆಡೆಗಳ ಮೇಲೆ ಕುಣಿಯುತ್ತಲವನ
    ಬಾಲವನು ಹಿಡಿದವನ ಚಂದಿರನ ಮೊಗದವನ
    ಬಾಲಕನ ಮುಕುಂದನ ನಾನು ನೆನೆವೆ || ೬ ||

    ಒರಳುಕಲ್ಲಿಗೆ ಬಿಗಿದು ಕಟ್ಟಿರಲು ಶೌರಿಯಿವ
    ಮರವೆರಡನೊಟ್ಟಿಗೇ ಬೀಳಿಸಿಹನ
    ಅರಳಿರುವ ಕಮಲ ಹೂದಳದಗಲ ಕಣ್ಣಿರುವ
    ಪೋರನಿವ ಮುಕುಂದನ ನಾನು ನೆನೆವೆ ||೭||

    ಮೊಲೆಹಾಲ ಕುಡಿಯುತಲಿ ತಾಯಮೊಗದಲ್ಲಿ ಕಂ-
    ಡೆಳೆನಗುವ ನೋಡುತಿಹ ಕಮಲಾಕ್ಷನ
    ಅಳವಿರದ ಮೊದಲುಕೊನೆಯಿಲ್ಲದಿಹ ಚಿನ್ಮಯನ
    ಎಳೆಯ ಮುಕುಂದನ ಮನದಿ ನೆನೆವೆ ||೮||

    (ಬಾಲಂ ಮುಕುಂದಂ ಮನಸಾ ಸ್ಮರಾಮಿ ಎನ್ನುವ ಕಡೆಯ ಸಾಲಿನ ಅನುವಾದದಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರವನ್ನೇ ತೆಗೆದುಕೊಂಡಿದ್ದೇನೆ ಎನ್ನಿಸುತ್ತೆ. ಮನ್ನಿಸಿರಿ!)

  10. ಕೃಷ್ಣ ಕಾಮಿನಿ ಮೀರಾ

    ರಾಜಪುತ್ರರ ಕುಲದ ನೀರೆಯು
    ಕೃಷ್ಣಕಾಮಿನಿ ರಾಣಿ ಮೀರೆಯು
    ಅನ್ನ ನಿದ್ರೆಯ ತೊರೆದದೇಕೋ ಬನ್ನವಡುತಿಹಳು |
    ಅರಸುತನ ಸುಖ ಭೋಗ ಭಾಗ್ಯಗ-
    ಳನ್ನು ಲೆಕ್ಕಿಸದವಳು ತವಕದಿ
    ತನ್ನ ಗಿರಿಧರನನ್ನೆ ಕರೆಯುತ ದಿನವ ನೂಕುವಳು || ೧ ||

    ರನ್ನದರಮನೆಯಂಗಳದಿ ಬೆಳ-
    ದಿಂಗಳಂದದಿ ಸುಳಿಯುವಳು ಶರ-
    ದಿಂದುಮುಖಿಯುನ್ಮತ್ತಳಂದದಿ ಮೈಯ ಮರೆಯುವಳು |
    ಉಚ್ಚ ಯೌವನದಲ್ಲಿ ಏಕೀ
    ಹುಚ್ಚು ಹಿಡಿಯಿತು ಚೆಂದದರಸಿಗೆ
    ಹಚ್ಚಿ ಮನವನು ಕಾಣದಿನಿಯಗೆ ಬರಿದೆ ಶೋಕಿಪಳು || ೨ ||

    ವಿಷವು ಸುಧೆಯೀ ಶಾಂತಚಿತ್ತೆಗೆ
    ಮುಳ್ಳು ಮೃದುತರ ಸುಮದ ಹಾಸಿಗೆ
    ಲೋಕನಿಂದೆಯು ಮೋಜನೀಯುವ ಹಾಸ್ಯರಸಕಾವ್ಯ |
    ಕೋಟಿ ಕೋಟಲೆ ಸಹಿಸಿ ನಿಂದು
    ಸತತ ಕೃಷ್ಣಾ ಕೃಷ್ಣ ಎಂದು
    ಕೂಗಿಯಾಚರಿಸುವಳು ಭರದಲಿ ಪ್ರೇಮವನು ದಿವ್ಯ || ೩ ||

    ಸುಗ್ಗಿಯಂದದಿ ಒಲವು ಮೂಡಲು
    ಹಿಗ್ಗಿದೆದೆಯಿಂದುಕ್ಕಿ ಹರಿಯಲು
    ಕುಗ್ಗಿ ಲಜ್ಜೆಯ ಸೆರಗು ಜಾರಲು ಪಾದಕುರುಳುತಲಿ |
    ಹೃದಯ ಮೇಳದ ರಾಗತಾಳಕೆ
    ಸರಸೆ ಕುಣಿವಳು ಸ್ವಾನುಭಾವಕೆ
    ರಸಿಕ ಕೃಷ್ಣನ ರಾಸನಾಟ್ಯಕೆ ಮೀಸಲಾಗುತಲಿ || ೪ ||

    – ಆರತಿ

    • ರಸಪೂರ್ಣ ಲಹರಿ, ಮನಮುಟ್ಟುವ ಭಾವ, ಅದಕ್ಕೆ ತಕ್ಕ ಭಾಷೆ, ಅದಕ್ಕೆ ತಕ್ಕ ಛಂದಸ್ಸು. ಸೊಗಸಾಗಿದೆ.

      ಆದಿಪ್ರಾಸವನ್ನೊಂದಷ್ಟು ಪಾಲಿಸಿದ್ದರೆ ಚೆನ್ನಿತ್ತೇನೋ, ಅದೇನು ಕಷ್ಟವಲ್ಲ.
      ಮೂರನೆಯ ಪದ್ಯದಲ್ಲಿ (ನಾಲ್ಕು, ಐದನೆಯ ಸಾಲುಗಳಲ್ಲಿ) ಗತಿ ಸ್ವಲ್ಪ ಎಡವಿದೆ, ದಯವಿಟ್ಟು ಸರಿಪಡಿಸಿ.

      ಕೋಟಿ ಕೋಟಲೆ ಸಹಿಸಿ ನಿಲ್ಲುತ
      ಸತತ ಕೃಷ್ಣಾ ಕೃಷ್ಣ ಎನ್ನುತ

      ಎಂದರೆ ಸರಿಹೋಗುವುದು.

      • ನೀವು ಸೂಚಿಸಿದಂತೆ-
        ಕೋಟಿಕೋಟಲೆ ಸಹಿಸಿ ನಿಲ್ಲುತ
        ಸತತ ಕೃಷ್ಣಾ ಕೃಷ್ಣ ಎನ್ನುತ—
        ಎಂದೇ ಆಗಲಿ, ಚೆನ್ನಾಗಿದೆ

        ಈ ಪದ್ಯವನ್ನು ರಚಿಸುವಾಗ (೫-೬ ವರ್ಷಗಳ ಹಿಂದೆ) ಆದಿಪ್ರಾಸಕ್ಕಾಗಿ ನಾನು ಅಷ್ಟಾಗಿ ತ್ರಾಸಪಟ್ಟಿಲ್ಲ, ಗಮನವನ್ನೇ ಹರಿಸಿಲ್ಲ. ನಿಮ್ಮ ಸೂಚನೆಯನ್ನು ಗಮನದಲ್ಲಿಟ್ಟುಕೊಳ್ಳುವೆ
        ಧನ್ಯವಾದಗಳು

  11. ನಮಸ್ಕಾರ
    ಡಾ ಗಣೇಶ್ ರವರ ಒಂದು ಅಷ್ಟಾವಧಾನದಲ್ಲಿನ ನನ್ನ ಪೃಚ್ಛಕಪದ್ಯ-

    ಮಂಕುತಿಮ್ಮನ ಕಗ್ಗದ ಸ್ತುತಿ

    ಪರತತ್ವ ರಸಭಾವ ಜೀವ ಸಂಬಂಧಗಳ
    ಸರಿಹೋಲಿಕೆಯಲಿ ಹೂರಣಿಸುತುಣಬಡಿಪ |
    ಸರಸಗತಿ ಛಂದಗಳ ಕನ್ನಡದ ಸಿರಿವೇದ
    ವರದ ಗುಂಡಪ್ಪ ಕೃತಿ ಮಂಕುತಿಮ್ಮ ||

    ಆರತಿ

    • ಪದ್ಯಪಾನಕ್ಕೆ ಸ್ವಾಗತ…
      ದ್ವಿತೀಯಪಾದದಲ್ಲಿ ಛಂದಸ್ಸು ಎಡವಿದೆ. ದಯಮಾಡಿ ಸವರಿಸಿರಿ. ಸಿರಿವೇದ ಎನ್ನುವುದು ಅರಿಸಮಾಸ.

  12. ಸ್ತುತಿಪದ್ಯಗಳಿಂದಾಚೆ ಬರಲು ಯತ್ನಿಸುತ್ತಾ
    ಸುಗ್ರೀವನು ರಾವಣನನ್ನು ನೋಡಿದಾಕ್ಷಣ ವರ್ತಿಸಿದುದನ್ನು ವರ್ಣಿಸಲು ಯತ್ನಿಸಿದ್ದೇನೆ
    रामदूतसखवानरेश्वरः रावणं दनुसुताञ्च वीक्षितः |
    चिन्त्य वै जनकराजकन्यकाम् लङ्घयन्क्षमनुशास्तुमुत्सुकः ||
    क्षम् = राक्षसम्

    • ಸಾಕಷ್ಟು ಸವರಣೆಗಳಿವೆ:-) ಫೋನಿನಲ್ಲಿ/ನೇರವಾಗಿ ವಿವರಿಸಬಹುದು….

  13. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುದ್ದು(ತ್ತು)ಸ್ವಾಮಿ ದೀಕ್ಷಿತರ ಬಗ್ಗೆ – ಲಹರಿ:

    ಇದ್ದನೊಬ್ಬನು ಮುದ್ದುಸ್ವಾಮಿಯು ಸಿದ್ಧನಾತನು ಖಂಡಿತ
    ಮುದ್ದುಕುವರನ ಬಿಡದೆ ಭಜಿಸುತ ವೀಣೆ ಬಾರಿಸಿ ಸಂತತ
    ಸಿದ್ಧಿವಡೆದನು ರಾಮಸ್ವಾಮಿಯ ಸುತನು ದೀಕ್ಷೆಯ ಹಿಡಿದವ
    ಸುದ್ದಿ ಮಾಡದೆ ತಿದ್ದಿ ತೀಡಿದ ಸೊಗದಿ ಗೀತೆಯ ಹಾಡುತ

    (ಮುದ್ದುಸ್ವಾಮಿದೀಕ್ಷಿತರು ವೀಣಾಗಾನ ಕೋವಿದರೂ, ಯೋಗಸಿದ್ಧಿಯನ್ನು ಪಡೆದಿದ್ದವರೂ ಆಗಿದ್ದ ವಾಗ್ಗೇಯಕಾರರು)

    • ನಾಗರಾಜನ ಹೆಸರು ಹೊಂದಿದ ಸಾಧ್ವಿತಾಯಿಯ ಮಗನಿವ
      ರಾಗಸಾಗರ ಭಕ್ತಿಯಾಗರ ಮೇಳಪದ್ಧತಿ ನಿಲಿಸಲು |
      ಹೋಗಲಾಡಿಸಿ ದೋಷವೆನ್ನುವ ಸುಳ್ಳುಮಾತುಗಳಡಗಿಸಿ
      ಸಗ್ಗವಿಲ್ಲಿಗೆ ತಂದುಕೊಟ್ಟನು ತನ್ನ ಕೃತಿಗಳ ಮೂಲಕ ||

      ಇದೇ ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಇನ್ನೊಂದು ಪದ್ಯ – ಇವೆರಡನ್ನೂ ನಾನು ಮತ್ತಕೋಕಿಲಮತ್ತಕೋಕಿಲಮತ್ತಕೋಕಿಲಕೋಕಿಲಾ (ಮತ್ತಕೋಕಿಲ/ಮಲ್ಲಿಕಾಮಾಲೆ) ಎಂಬ ನಡೆಗೆ ಹೊಂದುವಂತೆ ಬರೆಯಲು ಯತ್ನಿಸಿದ್ದೇನೆ.

      ನಾನು ಬರೆದದ್ದರಲ್ಲಿ ಕೆಲವೆಡೆ ಕೋಕಿಲ (ಗುರು-ಲಘು-ಲಘು) ಬದಲು ನಾಲ್ಕು ಲಘುಗಳು ಬಂದಿವೆ. ಇದಕ್ಕೆ ಪರವಾನಗಿ ಇದೆಯೆ, ಇಲ್ಲವೆ ಎಂದು ತಿಳಿಸಿದರೆ, ಮುಂದಿನಬಾರಿ ತಿದ್ದಿಕೊಳ್ಳಲು ಉಪಯೋಗವಾಗುತ್ತೆ. ಧನ್ಯವಾದಗಳು!

      (ಪದ್ಯದ ಹಿನ್ನೆಲೆಗೆ ಎರಡು ಮಾತು ಹೇಳುವುದು ಅವಶ್ಯಕ: ಮುತ್ತುಸ್ವಾಮಿ ದೀಕ್ಷಿತರ ತಂದೆ ರಾಮಸ್ವಾಮಿ, ತಾಯಿ ಸುಬ್ಬಮ್ಮ. ಮತ್ತೆ (ಮುದ್ದು)ವೆಂಕಟಮಖಿ ಸಂಪ್ರದಾಯದ ಎಪ್ಪತ್ತೆರಡೂ ಮೇಳಗಳಿಗೆ ಲಕ್ಷ್ಯರೂಪ ಕೊಟ್ಟು ಅವಕ್ಕೆ ರಾಗ ರೂಪನೀಡಿದ್ದರಲ್ಲಿ ಮುತ್ತುಸ್ವಾಮಿ ದೀಕ್ಷಿತರೇ ಮೊದಲು – ಅದರಲ್ಲೂ ವಿವಾದಿ ದೋಷವಿದೆಯೆಂದು ಹೇಳಲಾದ ೪೦ ಮೇಳಗಳಿಗೆ)

  14. ಬಯಕೆ
    (ಒಂದು ಭಾವಗೀತೆ)
    ಯಾಕೊ ಕಾಣೆ ನನ್ನ ಮನವು ನಿನ್ನ ಬಯಸಿತು
    ನಿನ್ನ ಮಧುರ ಮಾತುಗಳನು ಸವಿಯಲೆಳಸಿತು |

    ನೀನು ಅಲ್ಲಿ ನಾನು ಇಲ್ಲಿ
    ಎನಿತು ದೂರ ನಮ್ಮ ನಡುವೆ
    ಹೊಮ್ಮುತಿರುವ ಭಾವವೊಂದೆ
    ಮಿಡಿವ ಎದೆಯ ಲಯವು ಒಂದೆ |

    ಎನಿತು ಜನ್ಮ ಬಂದರೇನು?
    ನಮ್ಮ ಋಣವು ಹರಿವುದೇನು?
    ನೀನು ನನ್ನ ಬಾಳ ಜೇನು
    ಒಲವಿಗೆಂದು ಮಿತಿಯು ಬಾನು |

  15. ಮೊದಲ ಬಾರಿಗೆ ಪದ್ಯಪಾನ ಮಾಡಿ ಮತ್ತಳಾದೆ. ಮಂಜುನಾಥರ ಅನುವಾದ ತುಂಬಾ ಹಿಡಿಸಿತು, ಅದರಲ್ಲೂ ಆದಿಪ್ರಾಸವಿಲ್ಲದಿರುವ ಮೊದಲ ಅನುವಾದದ ಸೊಗಸೇ ಸೊಗಸು. ಈ ಲಹರಿಯಲ್ಲಿ ತೇಲುತ್ತಾ-ಮುಳುಗುತ್ತಾ ಈ ತಿಂಗಳ ಪದ್ಯಪಾನದ ಲಹರಿಗೆ ನನ್ನದೊಂದೆರಡು ಆವರ್ತ
    ಮಗಳ ಹೆತ್ತ ತಂದೆ ತಾಯ್ಗೆ
    ಈಗ ಮೂಡಿತಲ್ಲ ಕೋಡು
    ಹೆಣ್ಗಳೆಲ್ಲ ಪ್ಯಾಸು ಮಾಡೆ ಬೀಯಿ ಗೀಯಿಯಾ
    ಮಗನ ಹೆತ್ತ ಅಪ್ಪ ಅಮ್ಮ
    ಈಗ ತೊರೆದು ಹಮ್ಮುಬಿಮ್ಮು
    ಮಗನಿಗೊಂದು ಗಂಡು ಹುಡುಕಲೆಂದು ಹೊರಟರೇ

    ಓದು ಗೀದು ಕಲಿತ ಹೆಣ್ಣು
    ಒದ್ದು ಗಂಡ ಮುಂದೆ ಸಾಗಿ
    ಚೆಂದದಲ್ಲಿ ತರಲು ರೊಕ್ಕ ಝಣ ಝಣಾಝಣಾ
    ಊದು ಒಲೆಯ ಎಂಬುದೆಲ್ಲ
    ಎಂದೋ ಮುಗಿದ ಜೋರದೀಗ
    ವಿದ್ಯೆಯೊಂದೆ ಶಕ್ತಿ ತನಗೆ ಎಂಬುದರಿತಳೇ

    ದನಿಯು ದೊರಗು ನಡೆಯು ಸೊಟ್ಟ
    ಎನುವುದೆಲ್ಲ ಸವೆದ ಜೋರು
    ತನ್ನ ಇತಿಯ ಮಿತಿಯ ಅರಿತ ಚತುರೆಯಾದಳೇ
    ಇನ್ಗ್ಲೆಂಡ್ ಗಂಡು ಬೇಡ ಎನಗೆ
    ಇನ್ಫೋಸಿಸ್ಲಿ ನಾನೇ ದುಡಿವೆ
    ಇನ್ಡಿಯಾದ್ದೆ ಗಂಡು ಸಾಕು ಎನುವ ಠೀವಿಯೇ

    ತನಯನೆನಲು ಕುಲದ ದೀಪ
    ತನುಜೆಯೆನಲು ಕುಲದ ಶಾಪ
    ಎನುತ ಬಸುರ ಹೊಸಕ ಹೊರಟ ಖೂಳರೆಲ್ಲರೂ
    ನೆನೆದು ಕೈಯ ಹಿಸುಕುತಿಹರು
    ಮನದಿ ತಾವೆ ಮರುಗುತಿಹರು
    ಮನುವ ಮಾತ ಮರೆತ ನಾವು ಮೂರ್ಖರಾದೆವೇ
    (ಒಮ್ಮೆ ಪರಾಗ ಸ್ಪರ್ಶ ಅಂಕಣ ದ ಶ್ರೀವತ್ಸ ಜೋಶಿಯವ ಭೋಗ ಷಟ್ಪದಿಯಲ್ಲಿ ಪದ್ಯ ಹೊಸೆಯಲು ಕೊಟ್ಟ ಕರೆಯಿಂದ ಸ್ಫೂರ್ತಿ ಬಂದ ಆಗ ಹೊಸೆದಿದ್ದ ಪದ್ತ್ಯಗಳು. ಕೊನೆಯದು ಅವರ ಪರಾಗ ಸ್ಪರ್ಶ ಅಂಕಣದಲ್ಲಿ ಪ್ರಕಟಗೊಂಡಿತ್ತು. ವಸ್ತು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿರುವ ಗಂಡು ಹೆಣ್ಣುಗಳ ಅನುಪಾತ, ಹೆಚ್ಚು-ಹೆಚ್ಚು ಡಿಗ್ರಿಧಾರಿಣಿಯಾಗುತ್ತಿರುವುದು, ಅದರಿಂದ ಮದುವೆ ಮಾರ್ಕೆಟ್ ಮೇಲಾಗುತ್ತಿರುವ ಪ್ರಭಾವ)

    • ಹೆಣ್ಣು ಕವಿಗಳಿಲ್ಲಿ ಕಮ್ಮಿ
      ಯೆನ್ನುತಿದ್ದೆವಲ್ಲ ನಾವು
      ಮುನ್ನದಂತೆ ಗಂಡು ಹಿರಿಮೆಯಿನ್ನು ನಡೆಯದು |
      ಚೆನ್ನ ಭೋಗ ಛಂದದಲ್ಲಿ
      ಹೆಣ್ಣಿನೇಳಿಗೆಗಳನಿಂದು
      ಬಣ್ಣಿಸಿರುವ ನಿಮಗೆ ನಲ್ಬರವನು ಕೋರುವೆ ||

    • ಪದ್ಯಗಳ ಭಾವ ಚೆನ್ನ್ನಾಗಿದೆ. ಕೆಲವು ತೊಡಕುಗಳನ್ನು ಇಲ್ಲಿ ತೋರುವ ಪ್ರಯತ್ನ ಮಾಡಿದ್ದೇನೆ.
      ಪ್ರಾಸಗಳಲ್ಲಿ ಕೆಲವು ತೊಡಕುಗಳಿವೆ. ಕೆಳಗಿನ ಪಾಠಗಳನ್ನು ನೋಡಿರಿ ::
      http://padyapaana.com/?page_id=635
      http://padyapaana.com/?page_id=637

      ಕೆಲವೊಂದು ಕಾಡೆ ಮಾರ್ತೆಗಳ ಲೆಕ್ಕವೂ ತಪ್ಪಿದಂತಿದೆ ::
      “ಇನ್ಗ್ಲೆಂಡ್” – ಇಲ್ಲಿ ನಾಕು ಮಾತ್ರೆಗಳಿವೆ
      “ಎಂದೋ”, “ಇನ್ಫೋ” ಗಳನ್ನು “ಎಂದೊ”, “ಇನ್ಫೊ” (ಹ್ರಸ್ವದಲ್ಲಿ) ಮಾಡಿದರೆ ಅಲ್ಲಿನ ಮಾತ್ರೆಗಳ ತೊಡಕು ನಿವಾರಣೆಯಾಗುವುದು
      ಮತ್ತು ಸಂಧಿಯಾಗುವ ಜಾಗಗಳಲ್ಲಿ ಮಾಡದಿದ್ದರೆ ವಿಸಂಧಿ ದೋಷವಾಗುವುದು. ಅದರ ಬಗ್ಗೆಯು ಗಮನವಿರಲಿ.

      ಬರಿಯ ತೊಡಕುಗಳನ್ನು ತೋರಿದ್ದಕ್ಕೆ ಕ್ಷಮೆಯಿರಲಿ 🙂

      • ಪದ್ಯ ಓದಿ ಸಲಹೆ ಕೊಟ್ಟಿರುವಿರಿ. ಧನ್ಯಳಾದೆ. ಮುಂದಿನ ಪ್ರಯತ್ನಗಳಲ್ಲಿ ಇವುಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುವೆ.

  16. ಮತ್ತೊಂದು ಸರಳವಾದ ಸ್ತುತಿ ಪದ್ಯ
    सरलसुरसभाव प्रेरकं गोपिकानां
    शकटनरकवैरिं वासुदेवं च वन्द्यं |
    सुरवनसुममालां धर्तुमीप्सुं प्रमाणं
    मनसिजपितरं त्वां रुक्मिणीशं च वन्दे ||

  17. ಮಂಜುನಾಥ್ ಅವರೇ, ಬಿಲ್ವಮಂಗಳನ ಕೃಷ್ಣಕರ್ಣಾಮೃತ ೫೫ ರ ನಿಮ್ಮ ಮೊದಲ (ಗರತಿಯ ಕೈಬಿಟ್ಟ) ಅನುವಾದ ತುಂಬಾ ಹಿಡಿಸಿತು. ಅದನ್ನು ಗರತಿಯೊಂದಿಗೆ ಹೀಗೆ ಸಮಾಗಮ ಮಾಡಿಸಬಹುದೇ?

    ಮುರಹರನ ಪಾದದೊಳು ಮನವ ನೆಟ್ಟಿಹ ಯುವತಿ
    ಮಾರಹೊರಟಳು ಮೊಸರು ಮೊಸರೆನ್ನುತ
    ಮೀರಿ ಬರುತಿರಲಾಗ ಮೊಸರ ಮೀರಿದ ಮೋಹ
    ಕರೆದಳೇ ಗೋವಿಂದ ಮಾಧವೆಂದು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)