Jan 292012
 

ಈ‌ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ಬರೆಯಿರಿ ::

ನಿರೀಕ್ಷಣ

  25 Responses to “ಪದ್ಯ ಸಪ್ತಾಹ – ೫ – ೨೦೧೨ ::‌ ಚಿತ್ರಕ್ಕೆ ಪದ್ಯ”

  1. ದಿವ್ಯಚಕ್ಷುವ ಸಾಕ್ಷಿಯೊಳಚ್ಚಾಗವು ನಿನ್ನ
    ಭವ್ಯ ಬೋಧೆಗಳು ಮನದಾಳದವುಗಳ್|
    ಹವ್ಯವೊಂದಿತ್ತಿನನಿಗೆದ್ದಾಲಸಿ ನಡೆ ಲೋ
    ಕವ್ಯವಹೃತಿಯೊಳು ತೊಡಗಿಕೊಳ್ಳಲ್||

  2. ಹಲವು ದೋಷಗಳಿದ್ದವು. ತಿದ್ದಿದ್ದೇನೆ. ಇನ್ನೂ ಇವೆಯೇನೋ?
    ದಿವ್ಯಚಕ್ಷುವ ಸಾಕ್ಷಿಯೊಳಗಚ್ಚಿರವು ನಿನ್ನ
    ಭವ್ಯ ಬೋಧೆಗಳು ಮನದಾಳದವುಗಳ್|
    ಹವ್ಯವೊಂದಿತ್ತಿನನಿಗೆದ್ದಾಲಸಿ ನಡೆ ಲೋ
    ಕವ್ಯವಹೃತಿಯೊಳಿನ್ನು ತೊಡಗಿಕೊಳ್ಳು||

    • ವ್ಯರ್ಥದ ಆಲೋಚನೆಗಳೇಕೆ? ಎಲ್ಲಕ್ಕೂ ಸಾಕ್ಷಿಯಾದ ಸೂರ್ಯನು ನಿನ್ನ ಮನದಾಳದ ಇಂತಹ ಆಲೋಚನೆಗಳನ್ನು record ಮಾಡಿಕೊಳ್ಳ (ಅಚ್ಚು ಇರವು). ಆಲಸಿಯೇ, ಒಮ್ಮೆ ಸೂರ್ಯನಿಗೆ ನಮಿಸಿ ಎದ್ದು ನಿನ್ನ ಕೆಲಸ ನೋಡು.

    • ಚೆನ್ನಾಗಿದೆಯಾದರೂ ಮೂರನೆಯ ಸಾಲಿನಲ್ಲಿ ಸ್ವಲ್ಪ ಗತಿ ಎಡವಿದೆ. ಯಮಾಡಿ ಸವರಿಸಿಕೊಳ್ಳಿರಿ.

    • ಪ್ರಸಾದರೆ,
      > … ಇನ್ನೂ ಇವೆಯೇನೋ?

      ಈರೀತಿಯಲ್ಲೇಕವಚನ ಸಂಭೋಧನೆಯು
      ಯಾರಿಗೆಂದಿಷ್ಟು ನೀಂ ಪೇಳು ಗೆಳೆಯಾ ?
      ಸಾರವ ವ್ಯಾಕರಣ ಛಂದಸ್ಸು ಪಾಠಗಳ
      ತೋರಿಕಲುಹಿದ ಗುರುವಲೀ ಪ್ರೀತಿಯೇಂ ??
      🙂

      • ರಾಮ್,
        ಪಲರಿಹರು ಗುರುಗಳೆನಗಂ
        ಕಲಿಸಿಹ ಮುಖ್ಯರ್ ಗಣೇಶವರ್ಯರು ಪೂಜ್ಯರ್|
        ಬಲಿಸಿದಿತರ ಗುರುಗಳ್ನಿ
        ನ್ನೊಲಿಹರ್ದೊಡ್ಡಪ್ಪನೆನ್ನೊಲವವರಿಗೇನೋ||
        ದೊಡ್ಡಪ್ಪ = ದುಡ್ಡು (ಕಾಂಚನ) ಇದ್ದವನು

  3. ಮತ್ತೇಭದಾಟವನ್ನು ಮೊದಲನೆಯ ಬಾರಿ ಪದ್ಯದಲ್ಲಿ ತರಲು ಯೆತ್ನಿಸಿದ್ದೇನೆ:)

    ನರನ೦ ಮಾತೆಯು ಕಣ್ಣೊಳಿಟ್ಟು ಪೊರೆವಳ್ ತನ್ನಾತ್ಮಜ೦ಯೆನ್ನುತಾ
    ಸುರಿಪಳ್ ಪ್ರೀತಿಯಮಿತ್ತು ಸ೦ಪದಗಳ೦ ತನ್ನ೦ಗವ೦ ಶೋಷಿಸಿ
    ನರನು೦ ಚಿ೦ತಿಸುತಿರ್ಪನೇನು ಜನನೀ ಕಣ್ಣೊಳ್ಕಸ೦ ಎ೦ಬುದೀ
    ಇರುವು೦ ತನ್ನಯದಾಗುತಿರ್ದುದನು ತಾ೦ ತನ್ನಿ೦ದ ಸ೦ಬಾಳಿಸಲ್

    ಮಾತೆ = ಪ್ರಕೃತಿ ಮಾತೆ

    • ಸೋಮ, ಕರೆಕ್ಟ್. ಅವನು ಕೂತಿರುವ ಸ್ಟೈಲ್ ನೋಡಿ ನನಗೂ ಹೆಚ್ಚು-ಕಮ್ಮಿ ಇಂತಹುದೇ ಭಾವನೆ ಬಂದು, ಆಲಸ್ಯ ತೊಡೆ ಎಂದು ಹೇಳಿದ್ದೇನೆ.

    • ಯತ್ನ ದಿಟವಾಗಿ ಸ್ತುತ್ಯ. ಆದರೆ ಕೆಲವೊಂದು ವ್ಯಾಕರಣದ ಸವರಣೆಗಳು ಇಂತಿವೆ:
      ……………………………ತನ್ನಾತ್ಮಸಂಜಾತನಂ
      (ನಿಮ್ಮ ರಚನೆಯಲ್ಲಿ ಸಂಧಿಯು “ತನ್ನಾತ್ಮಜನೆನ್ನುತಾ” ಎಂದಾಗಿ ಛಂದಸ್ಸು ಕೆಡುತ್ತದೆ. ಹೀಗಾಗಿ ಈ ರಿಪೇರಿ:-)
      ಸುರಿಪಳ್ ಪ್ರೀತಿಯನಿತ್ತು ಸಂಪದದೊಡಂ ತನ್ನಂಗಮಂ ತೇಯುತುಂ|
      (again for the sake of metre and grammar)
      ನರನೇಂ ಚಿಂತಿಪನೇ ನಿಜಾಂಬಿಕೆಯ ಕಣ್ಣೊಳ್ ತಾಂ ಕಸಂಬೆತ್ತು ಮ-
      ತ್ತಿರವುಂ ತನ್ನಯದಪ್ಪುತಿರ್ಪುದನೆ ಮೇಣ್ ತನ್ನಿಂದೆ ಸಂಭಾಳಿಸಲ್?
      (again for the sake of avoiding ಅರಿಸಮಾಸ, ವಿಸಂಧಿದೋಷ and non-halagannada usages, i have taken liberty to recast these lines)

      • ಗಣೇಶ್ ಸರ್, ಸರಿಪಡಿಸಿದ್ದೇನೆ,

        ನರನ೦ ಮಾತೆಯು ಕಣ್ಣೊಳಿಟ್ಟು ಪೊರೆವಳ್ ತನ್ನಾತ್ಮಸಂಜಾತನಂ
        ಸುರಿಪಳ್ ಪ್ರೀತಿಯನಿತ್ತು ಸಂಪದದೊಡಂ ತನ್ನಂಗಮಂ ತೇಯುತುಂ
        ನರನೇಂ ಚಿಂತಿಪನೇ ನಿಜಾಂಬಿಕೆಯ ಕಣ್ಣೊಳ್ ತಾಂ ಕಸಂಬೆತ್ತು ಮ-
        ತ್ತಿರವುಂ ತನ್ನಯದಪ್ಪುತಿರ್ಪುದನೆ ಮೇಣ್ ತನ್ನಿಂದೆ ಸಂಭಾಳಿಸಲ್?

  4. ನಿಜನಯನತಾರಕೆಗಳೊಳ್
    ವಿಜನವಿಭಾವರಿಯ ಬಾನಿನರಿಲ್ಗಳನೆಲ್ಲಂ|
    ಸೃಜಿಸಿಕೊಳುತ್ತಿರ್ಪಾತನ
    ವಿಜಿತಜಗತ್ತೃಷ್ಣೆಯೆಮಗೆ ಬೋಧಕಮಕ್ಕುಂ||

    (ನಯನತಾರಕೆ=eye-ball, ವಿಭಾವರಿ=ರಾತ್ರಿ, ಅರಿಲ್=ತಾರೆ)

    ಪದ್ಯವು ತುಂಬ ಗಂಭೀರವೂ ಪ್ರೌಢವೂ ಆಯಿತೇನೋ!….ಪ್ರಸಾದರಿಗೆ ಬೇಸರವಿಲ್ಲವಷ್ಟೆ?;-)
    ಸರಳವಾಗಿ ಮತ್ತೊಂದು:

    ಇವನಾರೊ ವಿಚಿತ್ರಚಿತ್ರವೀಕ್ಷಾ-
    ಪ್ರವಣಂ! ಸರ್ವಜಗತ್ತಿಗಾಗೆ ಕಣ್ಣೇ
    ತವೆ ದರ್ಪಣಮಾ ಪ್ರಬುದ್ಧನಿರ್ಮಾ-
    ಣವನೇ ನೋಡುತಲಿರ್ಪನಲ್ತೆ ನಿಚ್ಚಂ||

    • ನನ್ನ ಎರಡನೆಯ ಪದ್ಯವು ಔಪಚ್ಛಂದಸಿಕಾ ಎಂಬ ಅರ್ಧಸಮವೃತ್ತದಲ್ಲಿದೆ. ಇದು ಕ್ರಮವಾಗಿ ಸಮಪಾದಗಳಲ್ಲಿ ಹನ್ನೆರಡು ಮತ್ತು ವಿಷಮಪಾದಗಳಲ್ಲಿ ಹನ್ನೊಂದು ಅಕ್ಷರಗಳನ್ನುಳ್ಳದ್ದು. ಇದರ ಪ್ರಸ್ತಾರವಿಂತಿದೆ:
      UU – UU – U – U – – (ವಿಷಮಪಾದಗಳು)
      UU – – UU – U – U – – (ಸಮಪಾದಗಳು)

    • ಪದ್ಯಂ ಗಂಭೀರಂ ಅನ
      ವದ್ಯಂ ಪ್ರೌಢಂ ಪ್ರಸಾದಗಂ ಬೇಸರವೇಂ|
      ಗದ್ಯಂ ಅವದ್ಯಂ ಗಾಧಂ (shallow)
      ಹೃದ್ಯಮಿವಂಗಂ ಸುಲಿರ್ದ ಕದಲೀಫಲದೊಲ್||

      • ಪದ್ಯಂ ಗಂಭೀರಂ ಅನ
        ವದ್ಯಂ ಪ್ರೌಢಂ ಪ್ರಸಾದುಗಂ ಬೇಸರವೇ|
        ಗದ್ಯಂ ಅವದ್ಯಂ ಗಾಧಂ (shallow)
        ಹೃದ್ಯಮಿವಂಗಂ ಸುಲಿರ್ದ ಕದಲೀಫಲದೊಲ್||

  5. ಒಂಟಿ ಬಾಳದು ತಂತು ಬೇಸರ
    ಗಂಟು ಕಳಚಲು ಮಡದಿ ಮಕ್ಕಳ
    ನಂಟು ಮುಗಿದಿರೆ ಮದುವೆ ಬಂಧದ, ಶೂನ್ಯ ತುಂಬಿರಲು |
    ಅಂಟು ಕರಗುತ ಧೈರ್ಯ ತುಂಬಿತೊ
    ಬ್ಬಂಟಿ ಬೆಳಗುವ ರವಿಯ ನೋಡಲ
    ದುಂಟು ಮಾಡಿತು ಸಾಧಿಸುವ ಛಲ ಜೀವಮಾನದಲಿ ||

    ಅಂಟು = attachment

  6. ಕುಳಿತಂ ಕೊಂಬೆಯ ಮೇಲೆ ಚಿಂತಿಸುತಲೀ ನಾನಾ ವಿಚಾರಂಗಳಂ
    ಬಳಿಕಾ ಭೂಮಿಯೊಳಿರ್ಪ ತೇಜಧರನಾ ಮೋಡಂಗಳಲ್ ಕಾಣುತಾ |
    ತಿಳಿಯಲ್ ಬುಧ್ಧಿವಿಕಾರಮಾತ್ರವಿದುವೆಂ ಸತ್ಯಕ್ಕೆ ದೂರಾದುದಂ
    ಹಳಿದನ್ ನಿದ್ದೆಯಕಾಡುತಿರ್ದಕನಸಂ ಬೀಳುತ್ತಲೆಚ್ಚೆತ್ತವಂ ||

    ಛಂದಸ್ಸು :: ಮತ್ತೇಭ ವಿಕ್ರೀಡಿತ

    • ಒಳ್ಲೆಯ ಪ್ರಯತ್ನ. ಸ್ವಲ್ಪ ಹಳಗನ್ನಡದ ದೃಷ್ಟಿಯಿಂದ ಸವರಣೆಗಳು:
      …………………………………………………………………
      ……………….ಕಾಂತಿಧರನಾ (ತೇಜೋಧರ ಎಂದಾಗಬೇಕಾಗುತ್ತದೆ. ಏಕೆಂದರೆ ತೇಜಸ್ ಅಕಾರಾಂತವಲ್ಲ, ಸಕಾರಾಂತ ಶಬ್ದ. ಹೀಗಾಗಿ ತೇಜಸ್+ಧರ ಎನ್ನುವ ಸಂಸೃತಪದಗಳ ನಡುವೆ ಸಂಸ್ಕೃತದ್ದೇ ಸಂಧಿಯಾಗಬೇಕು. pl ref. to the Sanskrit grammar:-)………ಮೋಡಂಗಳೊಳ್ ಕಾಣುತುಂ
      …………………………………………………………………….
      ಪಳಿದಂ ನಿದ್ರೆಯ(೦) ಕಾಡುತಿರ್ದ ಕನಸಂ ಬೀಳುತ್ತಲೆಳ್ಚೆತ್ತವಂ

      • 🙂
        ಕುಳಿತಂ ಕೊಂಬೆಯ ಮೇಲೆ ಚಿಂತಿಸುತಲೀ ನಾನಾ ವಿಚಾರಂಗಳಂ
        ಬಳಿಕಾ ಭೂಮಿಯೊಳಿರ್ಪ ಕಾಂತಿಧರನಾ ಮೋಡಂಗಳೊಳ್ ಕಾಣುತಂ |
        ತಿಳಿಯಲ್ ಬುಧ್ಧಿವಿಕಾರಮಾತ್ರವಮಿದುವೆಂ ಸತ್ಯಕ್ಕೆ ದೂರಾದುದಂ
        ಪಳಿದಂ ನಿದ್ರೆಯ ಕಾಡುತಿರ್ದಕನಸಂ ಬೀಳುತ್ತಲೆಳ್ಚೆ ತ್ತವಂ ||

  7. ವನಮಯೂರ ವೃತ್ತದಲ್ಲಿ

    ಖಿನ್ನಮನ ಹೊಮ್ಮಿಸಿತೆ ಚಿತ್ರಗಳ ನೆಲ್ಲಂ
    ಭಿನ್ನತೆ ಪ್ರಸನ್ನತೆ ಮನೋವ್ಯಥೆಯ ವರ್ಣಂ
    ಹಿನ್ನೆಲೆಯದಾಗಿ ಯೆದೆಯಾಳಕಿಳಿದಾಗಳ್
    ತನ್ನದುರೆ ಬಿಂಬಿಸುತ ಕಣ್ ಪರದೆ ಯಾಯ್ತೇ

    • ಚೆಲುವಾದ ಪದ್ಯ. ಈ ವೃತ್ತಕ್ಕೆ ಇಂದುನಂದನ ಎಂಬ ಹೆಸರೂ ಗ್ರಂಥಾಂತರಗಳಲ್ಲಿ ಇದೆ. ಹಾರಬಂಧವನ್ನು ರಚಿಸಲು ನಾನು ಹಲವು ಬಾರಿ ಅವಧಾನಗಳಲ್ಲಿ ಇದನ್ನೂ ಬಳಸಿದ್ದುಂಟು.

  8. ಹಸಿರು ಕಾಡಿಗೆಕಳೆದು ಭೂರಮೆಯ ಕಣ್ಗಳಲಿ — (ಕಾಡಿಗೆ(ನಾಮಪದ) – ಕಣ್ಣಿಗೆ ಹಚ್ಚುವ ಕಪ್ಪು)
    ಪಸೆಯಾರಿಹುದುನಿತ್ಯ ವೇದನೆಯಲೀ | — (ಪಸೆ – ತೇವ)
    ಮಿಸುಕಲೀಯದೆರೆಪ್ಪೆ ಕುಳಿತಿರುವೆ ನೀನಡುವೆ
    ಕಸುವೆಲ್ಲಿ ನುಸುಳೀತು ಹೆಣನೋಟದೀ || — (ಕಸುವು – ಬಲ)

    ತವಕವೇತಕೆ ನಿನಗೆ ತಿ೦ಗಳನು ತುಳಿವುದಕೆ
    ಅವನಿಯೊಳು ದೃಢಪಾದವಿಡಬಾರದೇ ?
    ಭವರದಾತುರವೇಕೆ ಮು೦ಬರೆವ ಹು೦ಬಿನಲಿ — (ಭವರ – ಯುದ್ಧ)
    ಸವಡಿನಲಿ ಹುಣ್ಣಿಮೆಯ ಮೆಲಲಾಗದೇ ? — (ಸವಡು – ವಿರಾಮ, ಬಿಡುವು)

    • ಬಹುದಿನಗಳಾದ ಬಳಿಕಂ ಶ್ರೀಶನಾಗಮನ-
      ಮಹಹ! ಸತ್ಕಾವ್ಯವಿನತಾಪುತ್ರನೊಡನೆ|
      ವಹಿಸ್ಕೊಳ್ವುದು ಜವದೆ ಪದ್ಯಪಾನದ ಜಗ-
      ನ್ಮಹಿತರಸಭಾರವನ್ನೊಲ್ಮೆಯಿಂದಂ:-)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)