Mar 152014
 

ಪ್ರಿಯ ಪದ್ಯಪಾನಿಗಳೆ,

ಪದ್ಯಪಾನದ ಪದ್ಯಸಪ್ತಾಹ ಈ ಬಾರಿ ೧೦೦ನೇಯ ಸಂಚಿಕೆಗೆ ಕಾಲಿಟ್ಟಿದೆ!

ಪದ್ಯಪಾನದ ಯುವಕವಿಗಳಿಗೆ ಛಂದಸ್ಸು, ಅಲಂಕಾರಗಳನ್ನು ಪರಿಚಯಿಸಿ ಅಭಿಜಾತಪದ್ಯರಚನೆಯ ಮೊದಲ ಹೆಜ್ಜೆಯಿಡುವುದರಿಂದ ಪ್ರತಿ ಪ್ರಯತ್ನದಲ್ಲೂ ಸಂತತವಾಗಿ ಪೋಷಣೆಯನ್ನು ಕೊಡುತ್ತಾ ನಮ್ಮೆಲ್ಲರ ಸ್ಫೂರ್ತಿಯ ಚಿಲುಮೆಯಾಗಿರುವ ಶತಾವಧಾನಿ ಡಾ|| ಗಣೇಶರಿಗೆ ನಮನಗಳು. ಪದ್ಯಪಾನದಲ್ಲಿ ಆಸಕ್ತಿಯನ್ನು ತೋರಿ ಪದ್ಯರಚನೆಯಲ್ಲಿ ಭಾಗವಹಿಸುತ್ತಿರುವ ಕವಿಗಳಿಗೂ ಮತ್ತು ಪದ್ಯಪಾನದ ಪದ್ಯವನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪದ್ಯಾಭಿಮಾನಿಗಳಿಗೂ ನಮನಗಳು.

ಈ ಬಾರಿ ನಿಮ್ಮ ಇಷ್ಟದ ವಿಷಯದ ಬಗ್ಗೆ ಅದು ಯಾವುದಾದರೂ ಇರಬಹುದು ಇಷ್ಟದ ಛಂದಸ್ಸು, ಕವಿ, ಕಾವ್ಯ, ಶಿಲ್ಪ, ರಾಗ, ಕಾದಂಬರಿ, ತಾಣ, ಅನುಭವ… ಹೀಗೆ ನಿಮ್ಮ ಇಚ್ಛೆಯ ಯಾವುದೇ ವಿಷಯದಲ್ಲಿ ಅಲಂಕಾರಯುತ ಪದ್ಯ ಬರೆಯಿರಿ. ಪದ್ಯದ ಸಂಖ್ಯೆಗಳ, ಭಾಷೆಯ ಅಥವಾ ವಸ್ತುವಿನ ನಿರ್ಬಂಧವಿಲ್ಲ. ಈ ಮುಕ್ತಸಂಚಿಕೆಯಲ್ಲಿ ಅತಿ ಹೆಚ್ಚು ಪದ್ಯಗಳನ್ನು ಬರೆದು ಪದ್ಯಪಾನದ ಪದ್ಯೋತ್ಸವದಲ್ಲಿ ಭಾಗವಹಿಸಿರೆಂದು ಕೋರುತ್ತೇವೆ.

ಪದ್ಯಪಾನ ತಂಡ

  143 Responses to “ಪದ್ಯಸಪ್ತಾಹ ೧೦೦: ಪದ್ಯೋತ್ಸವ”

 1. ~ ಗಣೇಶವಂದನಂ ~
  ವಿಶ್ವವಿದ್ಯಾಲಯಗಳಂತಹ ಮಹತ್ಸಂಸ್ಥೆಗಳನ್ನು ನಡೆಸಬಲ್ಲ ಶಕ್ತಿಯಿದ್ದರೂ, ಪದ್ಯಪಾನವೆಂಬ ಈ ಸಣ್ಣ ತಾಣವನ್ನು ನಡೆಸಿ ನಮಗೆ ಉನ್ನತಿಯನ್ನು ಕಾಣಿಸುತ್ತಿರುವ ರಾ. ಗಣೇಶರಿಗೆ ನಮನ.
  ರಥೋದ್ಧತ||
  ವಿಶ್ವಮಾತ್ರಮಹ ಸಂಸ್ಥೆನೂರನಂ (ಮಾತ್ರ=ಪ್ರಮಾಣ)
  ಪೇಶ್ವರೊಲ್ ನಡೆಪ ಶಕ್ತಿಯಿದ್ದೊಡಂ|
  ಈಶ್ವರಾಂಗಜನು ಪದ್ಯಪಾನದಿಂ
  ವಿಶ್ವಕೊಯ್ಯಲೆಮನಂ ನಮಾಮ್ಯಹಂ||

  • ವೃತ್ತಮುತ್ತಮಮುದಾತ್ತಮಾಡೊಡಂ
   ಸತ್ತೆಯೇನಿರದ ವಸ್ತು ನಿಮ್ಮಯಾ|
   ಮತ್ತೆ ಭಾಷಿಕವಿಶುದ್ಧಿಲೋಪದಿಂ-
   ದುತ್ತಮತ್ವಕೆರವಾದುದಕ್ಕಟಾ ! 🙂

  • ಗೌಣಭಾಷಿಕವಿಶುದ್ಧಿಲೋಪಮ
   ನ್ನೂಣೆಯೆನ್ನುತಲಿ ಬಗೆದ ಕಾರಣಂ
   (ಏಕಲವ್ಯರೊಳು) ದ್ರೋಣಭಾವಮದು ಕೂಡದೆಂಬಿರೈ
   ಬೋಣಿಪದ್ಯವನು ಮಾನ್ಯಮಾಡಿರೈ|| 🙂

   • ಗೋಣಿ ಗೋಣಿ ರಸಪದ್ಯಪಾಲಿಯಂ
    ಬೋಣಿ ಬೋಣಿಗೆ ಮಲರ್ದು ನೀಡಿರಯ್ |
    ಗೋಣು ಗೋಣಿಗದು ಭೂಷೆಯಾಗುತುಂ
    ವಾಣಿ ವಾಣಿಯೊಳೆ ತಾಳ್ಗೆ ಜನ್ಮಮಂ ||

 2. “ಅಶ್ವಧಾಟಿ”ಯಲ್ಲಿ ಶ್ರೀಹರಿಹರೇಶ್ವರಸ್ತುತಿ..

  ಎಂದೆಂದು ತನ್ನಸುಗೆ ಕುಂದಿಲ್ಲದಾ ವರವ ಛಂದಾಗಿ ಬೊಮ್ಮನೆರೆಯೆ
  ನಿಂದಾತ್ಮ ತಾ ಗುಹನು ಕೊಂದಾಡೆ ಸಜ್ಜನರ ವಂದಾರುಲೋಕ ಕರೆಯೆ..
  ಸಿಂಧೂತ್ಠಳಾ ರಮಣ ಮಂದಾಕಿನೀಂದುಧರರೊಂದಾಗಿ ದೇಹ ತೆರೆಯೆ
  ಬಂದಾರು ದೈತ್ಯನನು ಕೊಂದಾರು ಕಲ್ಲಿನಲಿ ನಿಂದಾರು ಲೋಕ ಪೊರೆಯೆ..||೧||

  ಏನೀಗ ಬಣ್ಣಿಸಲಿ ತಾನಾಗೆ ಭೂಮಿಗಿಳಿದಾನಮ್ಯನಾಸ್ಯಸುಖವ
  ಆ ನಾಕದಾಣ್ಮರ ಭಯಾನೇಕವಂ ತೊಡೆದು ಮಾನಾದ್ಯವಿತ್ತ ಬಲವ..
  ಹೀನಾತ್ಮರಿಂ ಸಿಗದಿಹೀ ನಾಥ ದಾಸರಿಗೆ ನಾನಾರ್ಥವಿತ್ತು ಪೊರೆವ
  ಜ್ಞಾನೈಕಗಮ್ಯಸುರಗಾನಪ್ರಕೀರ್ತಿತನು ಮೀನಾದಿರೂಪಕಶಿವ..||೨||

  ಪಕ್ಷೀಶಗಾಪರಿಮಿತಾಕ್ಷೇಶನುಂ ದಿವಿಜಯಕ್ಷಾದಿಸಂನಮಿತನು
  ತ್ರ್ಯಕ್ಷಂ ಜಗತ್ರಿತಯರಕ್ಷಂ ವಿಭೂತವಿಸರಾಕ್ಷಾಯಮಾನಮೃಡನು..
  ಲಕ್ಷ್ಮೀಸಮುಲ್ಲಸಿತವಕ್ಷಸ್ಥಲಮ್ ಜನಪದಕ್ಷಾತ್ಮಜೇಕ್ಷಕಶುಭಂ
  ಆಕ್ಷೋಭಿತಾಹಿತಜನಾಕ್ಷೇಪಣಂ ತ್ರಿಪುರರಕ್ಷೋಧಿಪಕ್ಷಯಕರಂ..||೩||

  ಸೊಂಪಾದ ಕೋಲಜಳ ತಂಪಾದ ವಾರ್ಗಮನದಿಂ ಪಾಪದೋಘ ಕಳೆದು
  ಕಂಪಾದ ಪತ್ರಗಣದಿಂ ಪಾರಿಜಾತಮುಖಸಂಪುಷ್ಪದಿಂ ಪ್ರಭುವಿನ..
  ಕೆಂಪಾದ ನೀರಭವವಂ ಪೋಲ್ವ ಪಾದಯುಗವಂ ಪೂಜಿಸಿ ಪ್ರತಿದಿನಂ
  ಮಾಂಪಾಹಿ ಎಂದೆನಲಲಂ ಪಾವನಾತ್ಮಹರಿಪಂಪೇಶ್ವರಂ ಪೊರೆವನು..||೪||

  • ಪ್ರಾಸಪ್ರಯಾಸಮದು ಭಾಸಿಪ್ಪುದಶ್ವಗತಿಯಾಸತ್ತಿಯೊಳ್ ಗಡೆನುವರ್
   ವ್ಯಾಸೋಪಮರ್ ಕವನವಾಸರ್ ನಿರಾಲಸವಿಲಾಸರ್ ಬುಧರ್ ಮುಗುಳಿದೇಂ|
   ಶ್ವಾಸಸ್ಫುಟಂ ತಮಗಯಾಸಂ ಕವಿತ್ವದರಹಾಸಂ ಸೊಗಂ ಸಂದುದೇಂ?
   ಲೇಸಪ್ಪುದಿನ್ನುಮಿದಕಾಸಂಗಿಸಲ್ ನುಡಿಯೊಳಾಸಜ್ಜಶುದ್ಧಿ ಪದದಾ ||

 3. ಸ್ವಲ್ಪ ದಿನಗಳ ಹಿಂದೆ ಬರೆದ ಕಾಳಿದಾಸನ ಸ್ತುತಿ

  यस्य जन्मदिने वाण्याः ललाटे व्यलिखद्विधिः |
  चिरंजीवसि चेत्युक्तिं कालिदासं नमामि तम् || (“चिरंजीवसि च” + इति + उक्तिं )

  ಯಾರು ಹುಟ್ಟಿದ ದಿನದಂದು ಬ್ರಹ್ಮನು ಸರಸ್ವತಿಯ ಹಣೆಬರಹಕ್ಕೆ “ನೀನು ಇನ್ನು ಚಿರಂಜೀವಿಯಾಗಿರುತ್ತೀಯ” ಎಂಬ ವಾಕ್ಯವನ್ನು ಸೇರಿಸಿದನೋ ಅಂತಹ ಕಾಳಿದಾಸನನ್ನು ವಂದಿಸುತ್ತೇನೆ

  • GS, ಚೆನ್ನಾಗಿದೆ. ಇಲ್ಲಿರುವ ಅಲ್ಂಕಾರ ಯಾವುದು?

  • This one of my favourites of urs.
   AtishayOkti rocks.

  • @shreesha,

   ಧನ್ಯೋಸ್ಮಿ

   @kanchana,

   ಧನ್ಯೋಸ್ಮಿ, ಬ್ರಹ್ಮನು ಒಬ್ಬರ ಹುಟ್ಟಿದದಿನದಂದು ಇನ್ನೊಬ್ಬರ ಹಣೆಬರಹ ಬರೆಯುವುದು ಮತ್ತು ಒಮ್ಮೆ ಬರೆದ ಹಣೆಬರಹವನ್ನು ತಿದ್ದುವುದು ಎರಡೂ ಸಹ ಅಸಂಭವನೀಯವಾದ್ದರಿಂದ ಇಲ್ಲಿ ಶ್ರೀಶ ಹೇಳಿರುವಂತೆ ಅತಿಶಯೋಕ್ತಿ ಇದೆ.

   • ಪ್ರಿಯ ಶ್ರೀಶಾ! ವೈದೇಶಿಕವಸತಿಯೆಂತಿರ್ಪುದೊ? ಮುಗುಳ್
    ಜಯಂ ಸಂದಿತ್ತೇಂ ನೀನೆಣಿಸಿದುದಕಂ ನೈಜಕೃತಿಗಂ ?
    ಭಯಂ ಮೇಣ್ ಭೋಜ್ಯಕ್ಕಂ ಕಳೆದುದೆ? ವಿನೋದಂ ಮೆರೆದುದೇಂ?
    ಪ್ರಯಾಣಂಗಳ್ ಮತ್ತೇಂ ಪುದಿದುವೊ? ನಲಂ ಸಂಗಳಿಸಿತೇಂ?

  • Very good padya GS

 4. ತೂರುತ್ತ ಬರ್ಪುದದು ಬಾಲ್ಯದ ನೆಂಪದಿನ್ನೂ
  ಹೀರುತ್ತ ಕಳ್ತಲೆಯನೆನ್ನೆದೆಯಾಳದಿಂದಂ
  ತೋರುತ್ತ ದೀಪಿಕೆಯವೊಲ್ ಪ್ರತಿಹೆಜ್ಜೆಯಲ್ಲುಂ
  ಸಾರುತ್ತ ಬೆಂಬಲಮನುಂ ನಡೆವಾಗಲಿಂದುಂ
  (ವಸಂತ ತಿಲಕ,ಉಪಮಾ ಅಲಂಕಾರ?)

  • ಮೊದಲ ಸಾಲಿನಲ್ಲಿ ಛಂದಸ್ಸು ಎಡವಿದೆ ೧೪ರ ಬದಲು ೧೫ ಅಕ್ಷರಗಳು ಬಂದಿವೆ
   ಹೀಗೆ ಮಾಡಬಹುದೇನೋ
   ತೂರುತ್ತ ಬರ್ಪುದದು ಬಾಲ್ಯದ ನೆಂಪದಿನ್ನೂ

   ಮಿಕ್ಕಂತೆ ಬೇರೇನೂ ದೋಷಗಳಿಲ್ಲವೆಂದನಿಸುತ್ತದೆ

  • ಪದ್ಯದಲ್ಲಿ ಹಳಗನ್ನಡದ ಬನಿ ಸೊರಗಿದೆ. ವೃತ್ತನಿರ್ವಾಹ ಮಾತ್ರ ಸೂಗಸಾಗಿದೆ.

 5. ಮಿತ್ರರಾದ ಶ್ರೀ ಪವನಜರು ಕಳುಹಿಸಿದ ಸಿದ್ಧಾಪುರದ ಮಾತೆ ಭುವನೇಶ್ವರಿಯ ದೇಗುಲದ ದಾರಿಯ ಮೆಟ್ಟಲುಗಳ ಛಾಯಾಚಿತ್ರವನ್ನು ನೋಡಿ ಕೆಲ ಸಮಯದ ಹಿ೦ದೆ ಬರೆದ ಒ೦ದು ಕಲ್ಪನೆ :

  ಉಸಿರ ಕಟ್ಟಿಸುತಿರ್ಪ ನಗರದಿ೦ ಬೇಸತ್ತು
  ಹಸನಾದ ವನಸ೦ಪದವ ಕ೦ಡು ತನುಮನದಿ
  ಪೊಸಕಾ೦ತಿಯುದಿಸಿ ಸ೦ತಸವುಕ್ಕಿ ಸುಧೆಯವೋಲ್ ಹರಿಯಲೆ೦ಬಾಶಯದೊಳು |
  ಹಸಿರ ತರುಲತೆ ಹುಲ್ಲು ಹೊಸೆದಿರ್ಪ ಪರಿಸರದಿ
  ವಸುಮತಿಯನಾವರಿಸಿ ಹರಿವ ಸರಸಿಯ ಬಳಸಿ
  ಪಸರಿಸಿಹ ಪಡುಮಲೆಯನಾಡಸಿರಿಯರಸಲ್ಕೆ ಪೊಸನೋಟ ಬೆರಗುಗೊಳಿಸೇ ||

  ಬಯಲಾಗಸದ ನಡುವೆ ಸೇತುವನು ಬೆಸೆದ೦ತೆ
  ಮಯಮ೦ಟಪದ ತೆರದಿ ಕ೦ಗೊಳಿಸುತಮಿತ ರಸ
  ಮಯವಾಗಿ ತೋರ್ಪುದೀ ಸೋಪಾನ ಸರಣಿಯಾಗಸಕೇರ್ವ ಪಾವಟಿಗೆಯೋ |
  ಬಯಕೆಯುದಿಸಿತು ಕಾಯಕಲ್ಪವನೆ ಹಾರೈಸಿ
  ವಯಸ ಮರೆಯುತ ಸೊಗದ ಸಗ್ಗಕೇರಲು ಜವದಿ
  ಲಯಭರಿತ ಗತಿಯಲಿಡೆ ಪಜ್ಜೆಗಳನಡಿಗಡಿಗೆ ಸೇರ್ವೆನೆ೦ದಾ ನೆಲೆಯನು ||

  ನೆಟ್ಟದಿಟ್ಟಿಯಲ೦ದು ಮನದಣಿಯೆ ಪಾಡುತ್ತ
  ಮೆಟ್ಟಲುಗಳನ್ನೇರಿ ಮನದಿ ಕೊ೦ಡಾಡುತ್ತ
  ಕಟ್ಟಕಡೆಗದೊ ಕ೦ಡೆ ಮಾತೆ ಭುವನೇಶ್ವರಿಯ ದೇಗುಲದ ಭವ್ಯತೆಯನು |
  ಪಟ್ಟರೂ ಶ್ರಮ ಸಾರ್ಥವಾಯ್ತೆ೦ದು ಕರಗಳನು
  ತಟ್ಟಿ ಜೋಡಿಸಿ ಶಿರವ ಬಾಗಿ ನಿ೦ದೆನು ತಾಯೆ
  ಮಟ್ಟವೇರಿಸಿಯೆನ್ನ ನಿನ್ನೆಡೆಗೆ ಬರಮಾಡು ಧನ್ಯನಪ್ಪೆನು ಭುವಿಯೊಳು ||

  ಭಾಸವಾಯ್ತ೦ದು ಮನ ಸೂರೆಹೋಯಿತು ಮ೦ದ
  ಹಾಸವನು ಬೀರುತ್ತ ಬಿ೦ಬದಿ೦ದಿಳಿದು ತಾ
  ನೇಸರನ ಕಿರಣದೊಲು ಮು೦ಬೆಳಗ ಬೀರುತಲಿ ಕನ್ನಡಮ್ಮನು ನುಡಿದಳು |
  ವಾಸವಾಗಿಹ ನೆಲವ ಮುಟ್ಟಿ ನೀ ಪೇಳ್ಮಗುವೆ
  ಕಾಸಿನಾಸೆಯಲಿ೦ದು ಭಾಷೆಯನೆ ಮರೆತಿಹೆಯ
  ಪೂಸಿ ಹೊಡೆಯಲು ವರುಷಕೊಮ್ಮೆ ರಾಜ್ಯೋತ್ಸವದ ನಾಟಕವನೇಕಾಡುವೆ? ||

  ರನ್ನ ಪ೦ಪ ವ್ಯಾಸಕುವರರಾಡಿದ ನಡೆಯ
  ಜನ್ನ ಮುದ್ದಣರುಲಿದ ಜೊನ್ನಿನ೦ತಹ ನುಡಿಯ
  ಹೊನ್ನಿನಕ್ಕರದಿ ಬರೆ ಬೆಳೆಸು ಭಾಷೆಯ ಬಳಸಿ ಕಲಬೆರಕೆಯಿರದ೦ದದಿ |
  ಎನ್ನ ಪೂಜೆಯ ಮಾಳ್ಪ ಭಕುತ ನೀನಪ್ಪೆ ಸಿರಿ
  ಗನ್ನಡದ ಕ೦ಪ ಪಸರಿಸುತ ಬಾಳಲು ರತುನ
  ಗನ್ನಡಿಯ ಪಿಡಿದು ನೀನೋಡಲೆನ್ನಯ ಬಿ೦ಬ ಹೊಳೆಯುವುದು ಸಾರ್ಥಕ್ಯದಿ ||

  • ಆತ್ಮೀಯ ರಘು ಮುಳಿಯರೇ, ನಿಜಕ್ಕೂ ಚೆಲುವಾದ ವಾರ್ಧಕಗಳನ್ನು ಹದವಾಗಿ ಹೆಣೆದಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ಬಲುದಿನಗಳ ಬಳಿಕ ಪದ್ಯಪಾನಕ್ಕೆ ಬರುತ್ತಿದ್ದೀರಿ; ನಿಮ್ಮ ಮನೆಗೇ ನೀವಿಷ್ಟು ಅಪರೂಪವಾದರೆ ಗತಿಯೇನು?:-)

   • ಧನ್ಯವಾದಗಳು ಸರ್. ಖ೦ಡಿತಾ ಮನೆಗೆ ಬರುವೆ.

    • ಮನೆಗೆ ಅವಶ್ಯವಾಗಿ ಬನ್ನಿ. ಆದರೆ ಅದರೆ ನಾನಿಲ್ಲಿ ವಿವಕ್ಷೆಯಿರಿಸಿದ್ದು ಪದ್ಯಪಾನವೇ ನಿಮ್ಮ ಮನೆ ಎಂದು!

     • ಹೌದು,ಈ ಮನೆಗೇ ಬರುವೆನೆ೦ದದ್ದು ಸರ್. 🙂

  • ಅವಧಾನಿಗಳೆ,
   ಮಾತ ಕೇಳಿ ಮುಳಿಯರು “ಗಡಂಗಿಗಪರೂಪವಾದಿರೆಂ”ದುಂ
   ಭೀತಗೊಳ್ಳು”ತಲ್ಲೇಕೆ, ಬರುವೆ ನಿಮ್ಮ ಮನೆಗೆಂ”ದಿರುವರೇಂ|

 6. ಭಾಮಿನಿಯಲ್ಲಿ ಬರಗಾಲದ ವರ್ಣನೆ… ನಂತರ ಕಂದದಲ್ಲಿ ಮಳೆಯ ವರ್ಣನೆ…..

  ಸುಡುತಲಿರ್ಪುದು ಬಿಸಿಲ ತಾಪವು
  ತೆಡೆಲಾಗದೆ ಧರೆಯ ಜೀವಿಗ
  ಳೊಡನೆ ಕಂಬನಿ ಮಿಡಿಯುತಲಿ ಕೈಮುಗಿಯೆ ದೇವನಿಗೆ|
  ಗುಡುಗುಡೆನುವಾ ಮೋಡವಿಲ್ಲದೆ
  ಸಿಡಿಲ ಮಿಂಚಿನ ಹೊಳಪ ಕಾಣದೆ
  ಕಡೆಗೆ ದೈವವ ಶಪಿಸುತಲಿ ಚಿಂತೆಯೊಳು ಮುಳುಗಿರಲು|

  ಮರಗಿಡಗಳಲಿ ಪಸಿರುಮಿಲ್ಲದೆ
  ಕೆರೆತೊರೆಗಳುಂ ಬತ್ತಿ ಪೋಗಲ್
  ಧರೆಯೆ ಮರುಭೂಮಿಯವೊಲಾಯ್ತಿದಕೆಂತು ಪರಿಹಾರ?
  ಝರಿಯ ಕಂಡಂತಾಗಿ ಮಿಗಗಳ್
  ಬರಿಯ ನೆಲದೊಳ್ ಬೀಳುತಿರ್ದವು
  ಮರುಳನಾಗಿಸಿರಲ್ ಮರೀಚಿಕೆಮೂಕ ಜೀವಿಗಳ|

  ಸತ್ತ ತರುಗಳ ಘರ್ಷಣೆಗಳಿಂ
  ದಿತ್ತ ಬನದೊಳ್ ಬೆಂಕಿಯುಗುಳುತ
  ಪತ್ತುರಿಯುತಿರೆ ವಿಷದ ಪೊಗೆಯನ್ನೆರಚುತಾಗಸಕೆ|
  ಅತ್ತ ನೀಲಾಕಾಶದಿಂದೆ-
  ತ್ತೆತ್ತ ನೋಡಲು ಮಸಣಮೌನದೆ
  ತತ್ತರಿಸೆ ದಿನಪನ ಕಿರಣಗಳ್ ತೀಕ್ಷ್ಣಮಾಗಿರಲು|

  ಗಗನಮೇ ಕಾಣಿಸದವೊಲ್ ನೆಗೆ
  ನೆಗೆಯುತಾ ಜ್ವಾಲೆಗಳನೆಬ್ಬಿಸಿ
  ಧಗೆಯ ಪೆರ್ಚಿಸುತಗ್ನಿ ಸೂರ್ಯರ ಕಾಳಗದವೊಲಿರಲ್|
  ಜಗವೆ ಬೆಂಕಿಯ ಚೆಂಡಿನಂತೆಯೆ
  ಭಗಭಗನೆ ಪತ್ತುರಿಯುತಾಗಳ್
  ಮಿಗಗಳೆಲ್ಲವು ಜನ್ನಗಾಹುತಿಯಾಯ್ತೆ ಮಾಟದಲಿ|

  ವರುಣನಿಳೆಯ ನೋಡಲ್ಕಾ
  ಸರೆಯಂ ನೀಡಲ್ಕೆಚಿತ್ತದಾ ಮೋಡಗಳಂ|
  ಕರಗಿಸೆ ಕಂಬನಿ ಮಿಡಿಯಲ್
  ಭರದಿಂ ಧರೆಯೊಳ್ ಸಕಾಲದಾ ಮಳೆಯಾಯ್ತಯ್|

  ಒಮ್ಮೆಲೆ ಮಳೆ ಸುರಿಯುತಿರಲ್
  ಹೆಮ್ಮೆಯೊಳಿರ್ಪಾ ಸುಗಂಧಮೇ ನಾಚುವವೊಲ್|
  ನೆಮ್ಮದಿ ನೀಡುತಲಾ ಹಾ!
  ಘಮ್ಮೆನೆ ಪಸಿಮಣ್ಣವಾಸನೆಯು ಮೂಡಿಪುದೈ|

  ತಟಪಟ ಮೆನ್ನುತೆ ಸುರಿದಾ
  ರ್ಭಟಮಂ ಮಾಡದೆ ತದೇಕ ರೀತಿಯ ಪನಿಗಳ್|
  ಪುಟವೇಳುತಿರಲ್ ನೋಡಾ
  ದಿಟಮೆನ್ನಲ್ ಧರೆಗೆ ಮುತ್ತನಿಟ್ಟಂತಿಹುದೈ|

  ಬನದೊಳ್ ಸಂತಸ ದಿಂದಂ
  ಕನಸೇ ದಿಟಮಾಯ್ತೆನಲ್ಕೆ ಕುಣಿದವು ಮಿಗಗಳ್|
  ದನಿಗೂಡಿಸೆ ಪಾಡಲ್ಕೆ ನ
  ಮನಗಳ ಸಲ್ಲಿಸುತೆದೇವಗಾರತಿ ಗೈವಂ|

  • ಪ್ರಿಯ ಚೀದಿ, ತುಂಬ ಸೊಗಸಾಗಿ ಷಟ್ಪದಿ ಹಾಗೂ ಕಂದಗಳನ್ನು ನನಗೆ ಪರಮಪ್ರಿಯವೆನಿಸಿದ ಪ್ರಕೃತಿವರ್ಣನೆಯಲ್ಲಿ ತೊಡಗಿಸಿ ಅಚಿರದಲ್ಲಿಯೇ ಸಾಕಷ್ಟು ಸಂಖ್ಯೆಯ ಪದ್ಯಗಳನ್ನು ಕಾವ್ಯವಾಗಿಸಿದ ಕೌಶಲಕ್ಕಾಗಿ ಅಭಿನಂದನೆಗಳು.

  • Prolific. Keep it up.

  • ಗಣೇಶ್ ಸರ್ ಹಾಗೂ ಪ್ರಸಾದರಿಗೆ, ಧನ್ಯವಾದಗಳು 🙂

 7. ೧೦೦ನೇ ಪದ್ಯಸಪ್ತಾಹದ ಅಭಿನಂದನೆಗಳೊಂದಿಗೆ…

  ಶತ ಕವಿತಾಪುಷ್ಪಾಲಂ-
  ಕೃತೆ ಕಾವ್ಯಾಸಕ್ತರಿಂ ಸದಾಪೂಜಿತೆ ಶೋ-
  ಭಿತೆಪದ್ಯಪಾನದಧಿದೇ
  ವತೆ ರಸಕಲೆಯಮೃತನೀಯ್ದು ಪಾಲಿಸಿ ಹರಸಂ ।।

  • ಪದ್ಯವು ಸಲೆಸೊಗಸಾಗಿದೆ. ಆದರೆ ಕಡೆಯ ಪಾದದಲ್ಲಿ (ಪ್ರಾಯಶಃ ಅಂಕನಪ್ರಮಾದದ ಕಾರಣ) ಸ್ವಲ್ಪ ಭಾಷಾಕ್ಲೇಶ/ದೋಷವು ಒದಗಿದಂತಿದೆ. ದಯಮಾಡಿ ಸವರಿಸಿರಿ

   • ಧನ್ಯವಾದಗಳು ಮೇಷ್ಟ್ರೇ… ಕೊನೆಯ ಸಾಲನ್ನು ಹೀಗೆ ತಿದ್ದಬಹುದೇ..?

    ಶತ ಕವಿತಾಪುಷ್ಪಾಲಂ-
    ಕೃತೆ ಕಾವ್ಯಾಸಕ್ತರಿಂ ಸದಾಪೂಜಿತೆ ಶೋ-
    ಭಿತೆಪದ್ಯಪಾನದಧಿದೇ
    ವತೆ ರಸಕಲೆಯಮೃತನೀಯ್ದು ಹರಸಿ ಬರೆಯಿಸೆಂ।।

    • ವೇದ ಪ್ರಕಾಶರೆ ಚೆನ್ನಾಗಿದೆ, ಬರೆಯಿಸೌ ಎಂದಾದರೆ ಚೆನ್ನವಲ್ಲವೇ

  • ದೋಷವಿರುವುದು ’ಅಮೃತನು ಈಯ್ದು’ ಎಂಬಲ್ಲಿ. ಅಲ್ಲದೆ, ಬರೆಯಿಸೆಂ=ಬರೆಯಿಸೆನು ಎಂದಾಗುತ್ತದೆ, ’ನಮ್ಮಿಂದ ಬರೆಯಿಸು’ ಎಂದಾಗದು. ನೀವು ಹೇಳಲಿಚ್ಛಿಸಿರುವುದು ’ಅಧಿದೇವತೆ ರಸಕಲೆಯಮೃತವೀಯುತೆ ಬರೆಯಿಸೌ ನೀಂ’ ಎಂದಿರಬೇಕು. ನಿಮ್ಮದೇ ರೀತಿಯಲ್ಲಿ ಸವರಿಸಿ; ನನ್ನ ಸವರಣೆಯಲ್ಲಿ ಲಘುಗಳು ಜಾಸ್ತಿ ಇವೆ.

  • ಧನ್ಯವಾದಗಳು….ಸವರಿಸುವ/ ತಿದ್ದಿ ಬರೆವ ಪ್ರಯತ್ನ ಮಾಡುತ್ತೆನೆ…
   ಸಹೃದಯರಿಬ್ಬರಿಗೂ ಧನ್ಯವಾದಗಳು….

 8. ಭಗವದ್ಗೀತೆ (ಕಾವ್ಯ+ಕವಿ ) ತನ್ಮೂಲಕ ಪಂಚಮ ವೇದ ಅನ್ನಿಸಿ ಕೊಂಡ ಮಹಾಭಾರತ

  ಗುರಿಯ ಮರೆತಿಹ ರಾಜಕುವರನ
  ಕೊರಗು ನೀಗುತ ವಿಶ್ವ ರೂಪವ
  ನೊರೆದು ತೋರಿದ ಗುರುವರೇಣ್ಯರ ವೇದ ಭಾರತಕೆ I
  ಪರಮ ಪುರುಷನ ಪರಮ ಗುಣಗಳ
  ಮೆರೆದು ತೋರುವ ಧರ್ಮ ಗ್ರಂಥಕೆ
  ಶರಣುಯೆನುತಲಿ ಮನದಿ ಮಣಿಯುವೆ ವಿಶ್ವ ಚೇತನಕೆ II
  ಗುರಿ =ಉದ್ದೇಶ ,

  • ಕ್ಷಮಿಸಿ . ತಪ್ಪಾಗಿದೆ . ‘ಗ್ರಂಥ’ ಅನ್ನುವುದನ್ನು ‘ಶಾಸ್ತ್ರ’ ಎಂದು ತಿದ್ದಿ ಬರೆಯುತ್ತೇನೆ

   ಗುರಿಯ ಮರೆತಿಹ ರಾಜಕುವರನ
   ಕೊರಗು ನೀಗುತ ವಿಶ್ವ ರೂಪವ
   ನೊರೆದು ತೋರಿದ ಗುರುವರೇಣ್ಯರ ವೇದ ಭಾರತಕೆ I
   ಪರಮ ಪುರುಷನ ಪರಮ ಗುಣಗಳ
   ಮೆರೆದು ತೋರುವ ಧರ್ಮ ಶಾಸ್ತ್ರಕೆ
   ಶರಣುಯೆನುತಲಿ ಮನದಿ ಮಣಿಯುವೆ ವಿಶ್ವ ಚೇತನಕೆ II

   • ಪದ್ಯವಿದುವನವದ್ಯವಾದೊಡ-
    ಮುದ್ಯದುಕ್ತಿಯ ಭಾರತದ ನೈ-
    ರ್ವೇದ್ಯಕಾವ್ಯತ್ವವನದೇತಕೆ ಮರೆತಿರೌ ತಂಗೀ !

    • ಸರ್ ಧನ್ಯವಾದಗಳು .

     ವೇದವ್ಯಾಸರಿಗೆ ಸಿಕ್ಕಿದ ಗೌರಿ ಗಣೇಶ ವಾಲ್ಮೀಕಿ ಮಹರ್ಷಿಗಳಿಗೆ ಸಿಗಲಿಲ್ಲವಾದುದರಿಂದ ಅವರು ಪದ್ಯ ಪಾನದಲ್ಲಿ ಹಿರಿಯಣ್ಣ ಇ – (ರಾ)ಗಣೇಶರಿಗಾಗಿ ಕಾಯುತ್ತಿರಬಹುದು !

  • ಮೆರೆದು ತೋರುವಪೂರ್ವಕಾವ್ಯದ
   ಪರಮಕರ್ತೃವ ಪಾದಕೆರಗುವೆ ಬಾದರಾಯಣಗೆ||
   ಎಂದು ಬರೆಯಬೇಕಿತ್ತು ಎಂದು ಗಣೇಶರ ಮತ.

   • ಭಾರತದಲ್ಲಿ ಬರೆದ ಆದಿ ಕವಿ ಮತ್ತು ಆದಿ ಕಾವ್ಯವನ್ನು ಗಣೇಶ ಸರ್ ಉಲ್ಲೇಖಿಸಿರಬಹುದೆಂದು ನಾನು ತಪ್ಪಾಗಿ ಗ್ರಹಿಸಿದೆ .
    ಆಯ್ಕೆ ಮಾಡಿದ ವಸ್ತುವಿನ (ಕವಿ+ ಕಾವ್ಯ ) ದೃಷ್ಟಿಯಿಂದ ನೋಡಿದಾಗ , ನಾನು ಬರೆದ ಪದ್ಯವನ್ನು ಹೇಗೆ ಉತ್ತಮ ಗೊಳಿಸಬಹುದಿತ್ತು ಎಂಬುದು ಮನದಟ್ಟಾಯಿತು . ಗಣೇಶ್ ಸರ್ ಮತ್ತು ಪ್ರಸಾದ್ ಸರ್ ಇಬ್ಬರಿಗೂ ಧನ್ಯವಾದಗಳು .

    ಗುರಿಯ ಮರೆತಿಹ ರಾಜಕುವರನ
    ಕೊರಗು ನೀಗುತ ವಿಶ್ವ ರೂಪವ
    ನೊರೆದು ತೋರಿದ ಗುರುವರೇಣ್ಯರ ವೇದ ಭಾರತಕೆ I
    ಪರಮ ಪುರುಷನ ಪರಮ ಗುಣಗಳ
    ಮೆರೆದು ತೋರುವಪೂರ್ವಕಾವ್ಯದ
    ಪರಮಕರ್ತೃವ ಪಾದಕೆರಗುವೆ ಬಾದರಾಯಣಗೆ||

 9. काचोत्पन्नभया महाभवनतश्चन्द्रो रविं शङ्कते
  क्रीडाक्षेत्रकृतप्रकाशविपुलात् स्वस्यैव सूर्यस्तथा ।
  एतस्मिन्नगरे नताननयुवाज्ञात्वा पुरःसंपदं
  यन्त्रे हस्तधृते रतो भवति चेदन्धेषु किं नर्तनम् ? ॥

  ಕಾಚೋತ್ಪನ್ನಭಯಾ ಕಾಚೋತ್ಪನ್ನಕಾಂತ್ಯಾ
  ಮಹಾಭವನದ ಗಾಜಿನಿಂದ ಬರುತ್ತಿರುವ ಕಾಂತಿಯನ್ನು ನೋಡಿ ಚಂದ್ರನು ಅದು ರವಿಯೆಂದು ಶಂಕಿಸಿದನು. ಹಾಗೆಯೇ ಕ್ರೀಡಾಕ್ಷೇತ್ರದಿಂದ (ಸ್ಟೇಡಿಯಂನಿಂದ) ಬರುತ್ತಿದ್ದ ಭಾರಿ ಬೆಳಕನ್ನು ಕಂಡು ಸ್ವತಃ ಸೂರ್ಯನೇ ತನ್ನಲ್ಲೇ ಶಂಕಿಸಿದ. ಇಂತಹ (ಕಾಂತಿಯುಳ್ಳ) ನಗರದಲ್ಲಿ ಒಬ್ಬ ಯುವಕನು ಸುತ್ತಲೂ ಇದ್ದ ಸಂಪತ್ತನ್ನು ನಿರ್ಲಕ್ಷಿಸಿ ತಲೆ ತಗ್ಗಿಸಿ ಕೈಯಲ್ಲಿ ಹಿಡಿದ ಯಂತ್ರದಲ್ಲಿ ಮಗ್ನನಾಗಿದ್ದನು. ಹೀಗೆಂದ ಮೇಲೆ ಅಂಧರ ಸಮ್ಮುಖದಲ್ಲಿ ಈ ನರ್ತನದ ಪ್ರಯೋಜನವೇನು?

  • ನೂನಂ ನವೀನತರಭಾವಭರಂ ಕವಿತ್ವಂ
   ಹ್ಲಾದಾಯ ಕಸ್ಯ ನ ಭವೇದ್ರಸಿಕಸ್ಯ ಮಿತ್ರ!
   ವ್ಯಾಖ್ಯಾನುಭಾವ್ಯಮಿದಮಿತ್ಯಯಮತ್ರ ಲೋಪಃ
   ಪ್ರಾಯೇಣ ಕಶ್ಚಿದಿತಿ ಮೇ ವಿರಲಾ ಮನೀಷಾ ||

   ಇಲ್ಲಿ “…..ಪ್ರಕಾಶವಿಪುಲಾತ್ ” ಎಂಬುದು ಅಸಾಧುಪ್ರಯೋಗ. ಅದು ವಿಪುಲಪ್ರಕಾಶಾತ್ ಎಂದೋ ಪ್ರಕಾಶವೈಪುಲ್ಯಾತ್ ಎಂದೋ ಆಗಬೇಕು.ಆದರೆ ಈ ಸವರಣೆಗಳಿಂದ ಛಂದಸ್ಸು ಕೆಡುತ್ತದೆ:-(

  • नित्यं मातृकृतं हितं रुचिकरं यः सेवते भोजनं
   किं मूल्यं मनुते स तस्य सततं भाग्यस्य वा लक्षणम् ।
   इत्येवं भवतात्तथातिमधुरे पानेऽत्र मित्रैः कृते
   तद्रुच्या विगतं क्वचिच्च गलनं मध्ये नु संतोषिणाम् ॥

   ನಿತ್ಯವೂ ಅಮ್ಮ ಮಾಡಿದ ಹಿತವಾದ ರುಚಿಕರವೂ ಆದ ಭೋಜನವನ್ನು ಯಾರು ಮಾಡುತ್ತಾನೋ ಅವನು ಅದರ ಮೂಲ್ಯವಾಗಲಿ ತನ್ನ ಭಾಗ್ಯದ ಲಕ್ಷಣವನ್ನಾಗಲಿ ಯೋಚಿಸುತ್ತಾನೆಯೇ? (ಆ ಭೋಜನ ನಿತ್ಯವೂ ದೊರಕದಾಗ ಅದರ ಮೂಲ್ಯ ತಿಳಿಯುವನು).
   ಹೀಗೆ ನಮ್ಮ ಮಿತ್ರರಿಂದ ರಚಿಸುವ ಈ ಅತಿಮಧುರ ಪದ್ಯಪಾನದಲ್ಲಿ ಆ (ಸಿಹಿ) ರುಚಿಯಿಂದ ವಂಚಿತವಾದ, ಅಂದರೆ ದೋಷವುಳ್ಳ, ಪದ್ಯದ ಸೇವನೆಯಾಗಲಿ. ಅದರಿಂದ ಮಧುರಪಾನದ ಸಂತೋಷವು ಹೆಚ್ಚುವುದಲ್ಲವೇ?!

   (ಈ ಆಶಯದ ಪೀಠಿಕೆಯಾಗಿ ಸ್ವಲ್ಪ ದುರ್ಗಮವಾದ, ಅಸಾಧುಸಮಾಸವುಳ್ಳ ಹಿಂದಿನ ಪದ್ಯ ಬರೆದದ್ದು.)

   • ಸುಬೋಧಮೇತದ್ರಮಣೀಯಪದ್ಯಂ
    ಪ್ರತ್ಯಗ್ರಮಾಧುರ್ಯಮಹೋ ತನೋತಿ|

 10. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೊದಲನೇ ಬಾರಿ ಶಿಕಾಗೋ ನಲ್ಲಿ Snow fall ಕಂಡು ನನಗಾದ ಅನುಭವ

  ಎತ್ತ ನೋಡುತಿರಲು ಕಣ್ಣ
  ಸುತ್ತಲಿರುವ ಬಿಳಿಯ ಬಣ್ಣ
  ವೆತ್ತಿ ಪೊಡೆಯುತಿರಲುಮಿದನದೆಂತು ವರ್ಣಿಪೆ
  ಮೊತ್ತಮೊದಲನುಭವಮೆನಗೆ
  ನುತ್ತಕೊರೆವ ಮಂಜಿನೊಳಗೆ
  ಪೊತ್ತಕಳೆಯುತಿರ್ಪೆ ಮುಕ್ತ ಮನದೆ ನಗುತಲಿ

  • ಮೊದಲನುಭವ = ಮೊದಲು+ಅನುಭವ ಎಂದೇ ವೇದ್ಯವಾಗುತ್ತದೆ; ಮೊದಲ+ಅನುಭವ ಎಂದಲ್ಲ. ನನ್ನ ಗ್ರಹಿಕೆ ಸರಿಯೆಂದಾದರೆ, ’ಮೊತ್ತಮೊದಲಿನನುಭವಿದುಮೆ’ ಎಂದು ಸವರಬಹುದು.

 11. ಪರಿಣಯದ ಕಲ್ಪನೆಯಲ್ಲಿ ಪೌರ್ಣಿಮೆಯ ವರ್ಣನೆ..

  [ ಕಂದಪದ್ಯ ಮತ್ತು ಪ್ರಮಿತಾಕ್ಷರಾವೃತ್ತಕ್ಕೆ ಅನ್ವಯಿಸುವಂತೆ..]

  ಕುಮುದವ್ರಜೋತ್ಸವಕರಂ
  ಹಿಮಭಾಪ್ರಕರಂ ನಭೋಗೃಹಕೆ ಬಂದನಹೋ.
  ಶ್ರಮಹಂ ತಮೋರಿ ಭರದಿಂ
  ಸುಮನಾರಥಗಂ ವಿವಾಹಕೆ ವರಾರ್ಯತೆಯಿಂ..||

  ದಿವಿಜರ್ ಸದೌಘಸುಮವಂ
  ರವದಿಂ ಸ್ತವಮಂ ಸಮುದ್ರಕವಿಗಳ್ ಸುರಿದರ್
  ಭವಭೂಷಣಂ ಕ್ರಮಿಸಿದಂ
  ಭವದೊಳ್ ತರುಣೀಕರಾಂಬುಭವವಂ ಪಿಡಿದು ||.

  ಪೊಳೆವಂಥ ಬಾಳೆಯೆಲೆಯೊಳ್
  ಬೆಳದಿಂಗಳಿನೂಟವಂ ಸವಿದು ದಂಪತಿಗಳ್
  ನಳಿನಾಕ್ಷಿಯಂ ರಮಿಸುತಂ
  ಜಲದಾದ್ಭುತಮಂಚದೊಳ್ ಶಶಿಯು ರಾಜಿಸಿದಂ ||

  ( ಸದೌಘ – ನಕ್ಷತ್ರಸಮೂಹ
  “ತಾರಾ ಭಂ ರಾತ್ರಿಜಂ ಧಿಷ್ಣಮ್ ಸನ್ನಕ್ಷತ್ರಂ” – ವೈಜಯಂತೀಕೋಶ )

  • ಸ್ತುತ್ಯವಾದ ಗರ್ಭಕವಿತೆ. ಆದರೆ ಪ್ರಮಿತಾಕ್ಷರಕ್ಕೆ ಆದಿಪ್ರಾಸ ಇಲ್ಲವಾಯಿತಲ್ಲ! ಸುಮನೋರಥಗಂ,ಸುಮಮಂ, ಪಿಡಿದಂ ಎಂದು ಸವರಿಸಿಕೊಳ್ಳುವುದು ಯುಕ್ತ.

   • ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..:)
    ಪ್ರಾಸ ಹುಡುಕಿದೆ, ಸಿಗಲಿಲ್ಲ.:D

    ಸುಮನಸ್ + ರಥಗಂ
    ಎಂದಿದ್ದಾಗ, “ಢೃಲೋಪೆ ಪೂರ್ವಸ್ಯ ದೀರ್ಘೋಣಃ” ಎಂಬುದರಿಂದ ಅಕಾರಕ್ಕೆ, ಆಕಾರ ಬರುತ್ತದೆಂದು ಭಾವಿಸಿ “ಸುಮನಾ” ಎಂದು ಮಾಡಿದೆ.
    ಪ್ರಯೋಗಗಳನ್ನು ಸರಿಪಡಿಸುತ್ತೇನೆ.

 12. ಶಂಕರಾಚಾರ್ಯರ ಸ್ತುತಿ:

  ಜಗದೊಳ್ ಜ್ಯೋತಿಯ ಪೊತ್ತಿಸಲ್ಕೆ ಶಿವನೇ ಬಂದಿರ್ಪನೆಂಬಂತಿರಲ್
  ಮೊಗದಿಂ ಕಾಂತಿಯು ಚಿಮ್ಮುತಿರ್ಪುದವಗಂ ವಾಗ್ದೇವಿಯಾ ರಕ್ಷೆಯಿಂ
  ಮುಗಿಲಿಂದೆತ್ತರ ಕೆತ್ತಿ ಸಾರುತಿರೆ ಹಿಂದೂಧರ್ಮಮೇ ಸೈಯೆನಲ್
  ಬಗೆಯಂದೋರುತ ಸರ್ವಮೇಕಮೆನುವರ್ ಶ್ರೀಶಂಕರಾಚಾರ್ಯರಂ

  • ಶಂಕರಾಚಾರ್ಯಸ್ತುತಿ, ಚಿಮ್ಮುತಿರ್ದಿಹುದುಮಾ ವಾಗ್ದೇವಿಯಳ್, ಮುಗಿಲಿಂದೆತ್ತರಕೆತ್ತಿ ಹಾಗೂ ಶ್ರೀಶಂಕರಾಚಾರ್ಯರುಂ ಎಂದು ಸವರಿದರೆ ಸರಿಯಾಗುತ್ತದೆ. ಕೊನೆಯ ಪಾದ ತುಂಬ ಚೆನ್ನಾಗಿದೆ – ಬಗೆಯಂ ಏಕಮೆನುವರ್!

   • ಧನ್ಯವಾದಗಳು.. ಶಂಕರಾಚಾರ್ಯರುಂ ಎಂದರೆ ಶಂಕರಾಚಾರ್ಯರೂ ಕೂಡ ಎಂದಾಗುತ್ತದೆಯಲ್ಲವೇ?

  • ಪ್ರಯತ್ನ ಸ್ತುತ್ಯ. “ಬಗೆಯಂ ದೋರುತೆ …….ಶ್ರೀಶಂಕರಾರ್ಯರ್ ಕರಂ” ಎಂದು ಸವರಿಸಿದರೆ ಸರಿಯಾದೀತು. ಪ್ರಸಾದು ಅವರ ತಿದ್ದುಗೆಯೂ ನಿಮ್ಮಮೂಲವೂ ಯುಕ್ತವಾಗವು.

 13. ವಿರಹ:

  ಚಣಮಂ ಪೋರ್ದ ದಿನಂಗಳಿಂ ಬಿಜಯಮಂ ತಾನೊಯ್ಯೆ ಸಂವತ್ಸರಂ
  ತೃಣದಿಂದೈಸಿರಿ ಸೋಲ್ವುದಂತೆ ತನುವೊಳ್ ಸಿಂಗಾರಮುಂ ಭೂರಿ ಕಾಂ-
  ಚನಮುಂ ಪೂವಿನಕಾವ ಭಾರದಿನೆ ಗಾತ್ರಂ ಕುಗ್ಗೆ ನಿಸ್ತ್ರಾಣರೇ-
  ಚನದಿಂ ದಗ್ಧನಿರೀಕ್ಷೆಯಲ್ತಿದಮಮಾ ಘೋರಂಗಡಾ ಮಾರನಯ್

  ಕ್ಷಣವನ್ನು ಹೋರಾಡಿ ಗೆದ್ದ ದಿನದ ವಿಜಯವನ್ನು ಸಂವತ್ಸರವು ಕಸಿಯಲು (ಕ್ಷಣ ದಿನವಾಗಿ, ದಿನ ಸಂವತ್ಸರವಾಗಲು)… ಸಂಪತ್ತು, ದೇಹದ ಸಿಂಗಾರ ಮತ್ತು ಕಾಂಚನವು (ಮೌಲ್ಯದಲ್ಲಿ) ಹುಲ್ಲಿನಿಂದ ಸೋಲಲು… ಹೂವಿನದಂಟಿನ ಭಾರ ದೇಹವನ್ನೇ ಕುಗ್ಗಿಸುತ್ತಿರಲು… ತ್ರಾಣರಹಿತ ನಿಟ್ಟುಸಿರಿನ (ಬೇಗೆಯಿಂದ) ನಿರೀಕ್ಷೆಯೇ ಸುಡುತ್ತಿರಲು… ಅಯ್ಯೋ ಮಾರನು ಘೋರನಯ್ಯಾ

  • ಪದ್ಯ ಅದ್ಭುತವಾಗಿದೆ. ಆದರೆ ಒಂದೆರಡು ಸವರಣೆಗಳು ಬೇಕಿವೆ:
   ಸೋಲ್ವುದಂತೆ ತನುವೊಳ್ ಎಂದಾದರೆ ಅಸಾಧುಸಂಧಿಯ ಸಮಸ್ಯೆ ತಪ್ಪೀತು. ಕಾಂಚನ ಸಾಧುರೂಪ. ನಿಸ್ತ್ರಾಣರೇ ಚಣ ಎಂದು ಪದಚ್ಛೇದವಾಗಬೇಕಲ್ಲವೇ!

   • ಗಣೇಶ್ ಸರ್, ಸವರಿಸಿದ್ದೇನೆ… ‘ನಿಸ್ತ್ರಾಣರೇಚನ’ ವೆಂಬುದು ಸರಿಯೇ? ಅದೇ ಆಶಯವಿತ್ತು… ತ್ರಾಣವಿಲ್ಲದ ನಿಟ್ಟುಸಿರು ಎನ್ನುವ ಅರ್ಥಮಾಡೋಣವೆಂದಿದ್ದೆ

    • ನಿಸ್ತ್ರಾಣರೇಚನ ಸೊಗಸಾಗಿದೆ. ಒಳ್ಳೆಯ ಹೊಸಪದವನ್ನೇ ನಿರ್ಮಿಸಿದ್ದೀಯೆ!

  • ರಾಮರಲ್ಲಿ (h/o Smt. Kanchana) ನಿಮಗೇನದಿದ್ದಿತೋ ಕೋಪ, ’ಪುಲ್ಲೆ’ನುತ್ತುಂ
   ನಾಮಮಿತ್ತುಮವರಿಂಗೆ ಗೆಲ್ಲಿಸಿರ್ದೊಡಮದಳವೆ ಸೋಮ|

 14. ಬೆಂಗಳೂರಿನ ಹೊಸ ಭವನಗಳನ್ನು, ಮೆಟ್ರೊವನ್ನು ಕುರಿತು …

  रम्ये देशे विपिनसदृशे शोभमाने तडागैः
  मासे मासे जनहितकरैस्तापमानैः प्रशान्तैः । (शोभमाने)
  मन्दं मन्दं हरितरहितो जायते शुभ्रसौधः
  वक्त्रे वध्वोः सुभगगमको दृष्टिबिन्दुर्यथाಽयम् ॥
  ಕೆರೆಗಳಿಂದ ಕೂಡಿದ, ಹಿತವಾತಾವರಣವುಳ್ಳ ಉದ್ಯಾನನಗರದಲ್ಲಿ ಮೆಲ್ಲನೆ ದೊಡ್ಡ ಭವನವೊಂದು ಆ ಹರಿತಪ್ರದೇಶದೊಳಗೆ ವಧುವಿನ ಮುಖದಲ್ಲಿಟ್ಟ ದೃಷ್ಟಿಬೊಟ್ಟಿನಂತೆ ಹುಟ್ಟಿತು.

  एकः सौधः स च सहरुहं वाञ्छतीव प्रकामं
  तद्वद्देशे तदनु बहवो बन्धुभूता भवन्तु ।
  श्रुत्वा दीनं सहजवचनं चक्रिरे चक्रमार्गे
  धीराः सौधान् सहजमृदुला व्यापनेनेव दिक्षु ॥
  ಒಂಟಿತನವನ್ನು ಕಳೆಯಲು ಮತ್ತೊಂದು ಭವನವನ್ನು ಇಚ್ಚಿಸಿತು. ಹಾಗೆ ಬಂಧುಬಳಗ ನನಗಾಗಲಿ ಎಂದು ಇಚ್ಚಿಸಿತು. ಇದರ ದೀನ ಪ್ರಾರ್ಥನೆಯನ್ನು ಕೇಳಿ ಅಯ್ಯೋ ಪಾಪ ಎಂದು ಜನರು ಚಕ್ರಮಾರ್ಗದಲ್ಲಿ ಭವನಗಳನ್ನು ಕಟ್ಟಿದರು. ಹಾಗೆ ಎಲ್ಲ ಪ್ರದೇಶಗಳಲ್ಲಿಯೂ ಕೂಡ. (ವಸ್ತುತಃ ಅನುಕೂಲಸಿಂಧುಗಳಾಗಿ ಕಾರಣ ಹೇಳಿ ತಮ್ಮ ಐಶ್ವರ್ಯ ಬೆಳಸಿದರು).

  कालेनैवं गगनगतयस्तेऽत्यतिष्ठन् च मेरुं
  ग्रीवाभङ्गं पुनरपि जने प्रेरयन्तो यदूर्ध्वम् ।
  काचैः स्पष्टैः परिविखचितैः सर्जयन्तीव भूम्या:
  इन्दोर्भायै तदपररविं दीप्तये सानुकूल्यम् ॥
  ಎತ್ತರವಾಗಿ ಬೆಳದವು ಭವನಗಳು. ಗಾಜಿನಿಂದ ರಾಜಿಸಿದವು. ಚಂದ್ರನಿಗೆ ಎರಡನೆಯ ಸೂರ್ಯರಾದವು.

  स्थाने स्थाने यदपि विविधाः सन्ति नैजप्रतिष्ठाः
  तेष्वन्योन्यं ननु जिगमिषा दृश्यते ह्यात्मतृप्त्यै ।
  किं भो कुर्वे यदहमचलो बन्धुना मे न सङ्गः
  दीनं चैवं श्रवणकठिनं प्रार्थनेनाह सौधः ॥
  ಎಲ್ಲಾ ಕಡೆ ಆತ್ಮಪ್ರತಿಷ್ಠೆಯೊಂದಿಗೆ ಭವನಗಳಿದ್ದರೂ ಅವುಗಳಲ್ಲಿ ಬೇರೆ ಕಡೆ ಹೋಗುವ ಇಚ್ಛೆಯಾಯಿತು. ಆದರೆ ನಾನು ಅಚಲನಲ್ಲಾ ಎಂದು ದೀನ ವಚನದಿಂದ ಹೇಳಿತು ಅದರಲ್ಲೊಂದು ಭವನ.

  भूयो धीराः सहजमृदुलाश्चिन्ययित्वोपशान्तिं
  स्थानात्स्थानं विकटशकटं सृष्टवन्तोऽनुगन्तुम् ।
  वादं वादं तदपि च जनान् मेतरो वाहकः स्यात्
  मेट्रो नाम्ना सुजनमनसि प्राप्तपादं तदाभूत् ॥
  ಇದನ್ನು ಕೇಳಿ ಜನರು ಸೌಧದಿಂದ ಸೌಧಕ್ಕೆ ಹೋಗಲು ದೊಡ್ಡ ಶಕಟವನ್ನೇ ನಿರ್ಮಿಸಿದರು. ಆ ಶಕಟವು ’ಮಾ ಇತರೋ ವಾಹಕಃ ಸ್ಯಾತ್’ (ಬೇರೆ ವಾಹನ ಬೇಡ) ಎಂದು ಜನರಿಗೆ ಹೇಳಿ ಹೇಳಿ ಮೇತರೋ ಮೇತರೋ ಮೆಟ್ರೋ ಆಯಿತು.

  एतेषां ते प्रथितयशसां यूथमीर्षन्ति देवाः
  यच्चास्माकं दिवि न तनुते लेशमात्रं नु धिङ्नः ।
  पद्मस्थस्त्वं विगतकरुणो देवतानां कलौ किं
  भूमौ वक्त्रान् यदसि चतुरो न्यस्य दृष्ट्या न्वदिष्ट्या ॥
  ಇದನ್ನು ನೋಡಿ ದೇವತೆಗಳು ಅಸೂಯೆಪಟ್ಟರು. ಬ್ರಹ್ಮನಲ್ಲಿ ಕಷ್ಟತೋಡಿಕೊಂಡರು. ಕಲಿಯುಗದಲ್ಲಿ ನಮ್ಮನ್ನು ಮರೆತು ನಾಲ್ಕು ಮುಖಗಳನ್ನೂ ಭೂಮಿಯಲ್ಲಿಟ್ಟೆಯಾ ಅಂದರು.

  विधाता स्मयेनाथ देवान् च दृष्ट्वा
  -ब्रवीत् गाढवाचं हरन्नार्तिभीती ।
  परिवर्तनबुद्धियुता मनुजा
  सुचिरं पदमस्ति नु वः सततम् ॥
  ಬ್ರಹ್ಮದೇವನು ಕಷ್ಟವನ್ನು ಭಯವನ್ನೂ ನಿವಾರಿಸುತ್ತ ’ಚಿಂತೆ ಬೇಡ, ಮನುಷ್ಯರು ಬೇಗ ಬದಲಾಯಿಸುತ್ತಾರೆ. ನಿಮ್ಮ ಸ್ಥಾನ ಶಾಶ್ವತ’ ಎಂದು ಹೇಳಿ ಸಾಂತ್ವನ ನೀಡಿದನು. (ನಿರಂತರವಾಗಿ, ಶೀಘ್ರವಾಗಿ ಪರಿವರ್ತನೆಯಾಗುವುದೆಂದು ಹೇಳಲು ಭುಜಂಗಪ್ರಯಾತದಲ್ಲಿ ಪೂರ್ವಾರ್ಧ, ಆದರೆ ಓಟದ ತೋಟಕ ಉತ್ತರಾರ್ಧದಲ್ಲಿ).

  • ಪದ್ಯಗಳ ಭಾವವೂ ಹಲವೆಡೆ ಅವುಗಳ ಹೆಣಿಗೆಯೂ ಸೊಗಸಾಗಿದೆ. ಆದರೆ ಒಂದೆರಡು ಸವರಣೆಗಳು;
   ವಧ್ವಾಃ ಎಂಬುದಲ್ಲವೇ ಸಾಧುರೂಪ? ವಕ್ತ್ರಾನ್ ಎಂಬುದು ಸಾಧುವಾಗದು. ಅದು ವಸ್ತುತಃ ನಪುಂಸಕರೂಪ ತಾನೆ! ಇದರ ವಿಶೇಷಣವಾದ ಚತುಶ್ಶಬ್ದವೂ ಹಾಗೆಯೇ ಆಗಬೇಕಲ್ಲವೇ! ಭೀತೀಃ ಎಂದೂ ಮನುಜಾಃ ಎಂದೂ ಇರಬೇಕಲ್ಲವೇ! ದಯಮಾಡಿ ಪರಿಶೀಲಿಸಿರಿ. ನಾನೇನಾದರೂ ಆತುರದಿಂದ ತಪ್ಪಾಗಿ ಗ್ರಹಿಸಿದ್ದಲ್ಲಿ ಮನ್ನಿಸಿರಿ.

   • – ವಧ್ವಾಃ ಎಂದು ಹೇಳಬೇಕದಲ್ಲಿ ವಧ್ವೋಃ ಅಂತ ತಪ್ಪಾಯಿತು.
    – ವಕ್ತ್ರದ ಲಿಂಗದೋಷ ಆಗಿದೆ.
    “ವಕ್ತ್ರಾಣ್ಯೇವಂ ಯದಸಿ ಭುವಿ ಹಿ ನ್ಯಸ್ಯ …” ಎಂದು ಆ ಪಂಕ್ತಿಯನ್ನು ತಿದ್ದಿದರೆ ಸರಿಹೋಗುವುದೆಂದು ತಿಳಿವೆ.
    – (ದೇವಾನಾಮ್) ಆರ್ತಿಭೀತೀ ಆರ್ತಿಂ ಚ ಭೀತಿಂ ಚ ಹರನ್ .. ಎಂಬ ವಿವಕ್ಷೆ. ಇಲ್ಲಿ ಇತರೇತರ ದ್ವಂದ್ವ ಸಾಧು ಅಲ್ಲವೇ?
    ಪರಿಷ್ಕಾರಕ್ಕೂ, ಪ್ರತಿಸ್ಪಂದನೆಗೂ ಧನ್ಯವಾದಗಳು.

 15. ಕನಸು:

  ಇರುವುದೆಲ್ಲವನ್ನು ಬಿಟ್ಟು
  ಇರದಿರುವುದ ತೋರುತೆನ್ನ
  ಮರುಳನಾಗಿಸಿರ್ಪುದಿದುಮೆ ನಿಚ್ಚವೆನುವವೊಲ್|
  ಬೆರೆತಿರುವೆನುಮಿದರೊಡನೆಯೆ
  ಸೆರೆಯಪಿಡಿಯದಾದೆ ಮನದೆ
  ಮರುಕಳಿಸುವುದರೆನೆನಪುಗಳನು ಕರೆಯುತ|

 16. ಯಕ್ಷಗಾನದ ಚಿತ್ರಪಟವೊಂದಕ್ಕೆ ನನ್ನ ಚಿತ್ತದ ಭಾವ

  ನಡುತಿಮಿರ ಪರದೆಯೆಳೆ
  ಸುಡುರಂಗ ನಿಗಿನಿಗಿಸೆ
  ಹಿಡಿಜೀವವೊಂದಿಲ್ಲಿ ಕುಣಿಯಲೆದ್ದು
  ಜಡ ಮುರಿದು ಬಯಲಲ್ಲಿ
  ಅಡಿ ಮೇಲೆ ಹಾರಿರಲು
  ಬಡಿದಂತೆ ಮಾರ್ದನಿಸಲದುವೆ ಸದ್ದು ||

  ಬಿಳಲುಗಳನಡಗಿಸಿದ
  ಪುಳಕಿತವು ಭರಪೂರ
  ಗಳಿಸಿರಲು ಸಭೆತುಂಬ ಕರತಾಡನ
  ಹಳೆಹಳಿಯ ಪಯಣಿಗನೊ
  ಸುಳುಹಿಂದ ಕಲ್ಪನೆಯೊ
  ತಳಪಾಯ ಗುರುತರದಯೆದೆಯಭಿಯಾನ ||

  ಬಣ್ಣಗಳ ಲೇಪದಲಿ
  ಕಣ್ಣುಗಳೆ ದನಿಯಾಗೆ
  ತಣ್ಣನೆಯ ಛಳಿಯೆಲ್ಲ ಧೂಳಿಪಟವೊ
  ಬಣ್ಣನೆಗೆ ದಂಡವಿರೆ
  ಹುಣ್ಣಿಮೆಯೆ ಕಂದುತಿಹ
  ನುಣ್ಣನೆಯ ಹಾಳೆಯೆಡೆ ರಂಗಪುಟವೊ ||

  • ಮೊದಲ ಷಡ್ಪದಿಯ ೪ ಮತ್ತು ೫ನೇ ಗೆರೆ ಸವರಿಸಿ,

   ಜಡ ಮುರಿದು ಬಯಲಿನ
   ಲ್ಲಡಿ ಮೇಲೆ ಹಾರಿರಲು

  • ಯೆದೆಯಭಿಯಾ – 1 mAtre excess.

 17. ತೋಟಕ ಛಂದ್ದಸ್ಸಿನ ಬಗ್ಗೆ – ದೋಧಕ ವೃತ್ತದಲ್ಲಿ

  ಆಟವನಾಡುವ ಮಾಟದ ಕಂದಂ
  ನೋಟಕರಿದ್ದೊಡೆ ಕಾಣುವನಂದಂ I
  ತೋಟದ ಕಾಲುವೆ ನೀರನದೊೈಯಲ್
  ಓಟದಿ ತೋಟಕ ದಾಟಿಯದೇ ಸೈ II

  ನೋಟಕರಿಗೆ ಆಟ ಆಡುವ ಮಗು ಚಂದ ಕಾಣುವ೦ತೆ , ತೋಟಕ ವೃತ್ತವು ಓಟವು ಕಾಲುವೆಯಲ್ಲಿ ಸರಾಗವಾಗಿ ಹರಿವ ನೀರಿನಂತೆ ಚಂದ ಎಂಬ ಅರ್ಥದಲ್ಲಿ –

 18. ಇಹ-ಪರಗಳೆರಡೂ ಇಲ್ಲಿಯೇ ಇವೆ, ಬಯಲು-ಬೆಟ್ಟಗಳ ನಡುವಿನ ಸೀಮಾರೇಖೆಯನ್ನು ಗುರುತಿಸಲಾಗದಂತೆ.
  ಕಂದ – ರೂಪಕ
  ಇಹಕೇದಾರದೆ ದುಡಿದುಂ
  ಸಹನೆಯಿನಿಂ ಸಾಧಿಸಿರ್ದಿಹಾತ್ಮೋನ್ನತಿ ತಾನ್|
  ಅಹುದಲ್ತೆಲೆ ಪರನಗಮದು
  ಸಹಿರ-ಪ್ರಸ್ಥವ ಪೃಥಕ್ಕರಿಪ ರೇಖೆಯಿನೇಂ||
  (ಕೇದಾರ & ಪ್ರಸ್ಥ-plain land. ಸಹಿರ-a mountain)

 19. ನನಗೆ ಪರಮಪ್ರಿಯವಾದ ಒಂದು ರಾಗ ಹಿಂದೋಳದ ಬಗೆಗೆ:

  ನಿನ್ನಂ ಕೇಳ್ವಾಗಲೆನ್ನೊಳ್ ಯಮುನೆಯ ಕೆಲದೊಳ್ ಶರ್ವರೀಪರ್ವದೊಳ್ ಸಂ-
  ಪನ್ನಂ ಗೊಂಡಿರ್ಪ ಗೋಪೀಚರಣಮಣಿತುಲಾಕೋಟಿಧಾಟೀಕನಾಟೀ-
  ನುನ್ನಶ್ರೀಕೃಷ್ಣವೇಣುಪ್ರಣಯಮಧುಝರೀಮಾಧುರೀಧಾರೆಯೆಲ್ಲಂ
  ಬನ್ನಂಗೊಂಡೆನ್ನ ಬಾಳ್ಗೊಂದೆರಕದ ಸೊದೆಯಂ ತುಂಬುವಂತಲ್ತೆ ತೋರ್ಕುಂ.

  ನನಗೆ ತುಂಬ ಇಷ್ಟವಾದ ತಿನಿಸುಗಳಲ್ಲೊಂದಾದ ದೋಸೆಯ ಬಗೆಗೆ:

  ಉಂಬಂಗೊರ್ವಂಗೇ ತ-
  ನ್ನಿಂಬೆನುತುಂ ಮರ್ತೆ ಮರ್ತೆ ಕಾವಲಿಗೆರೆಯೊಳ್ | (ಕಾವಲಿ+ಕೆರೆ = ಕಾವಲಿಗೆರೆ)
  ತುಂಬೆಸೆವಂಬುಜದವೊಲೀ
  ಬಿಂಬಿತಶಶಿಸೂರ್ಯರೋಚಿ ದೋಸೆಯದೆಸೆಗುಂ ||

 20. (ಮಂದಾಕ್ರಾಂತಾ ವೃತ್ತ, ಉಪಮಾಲಂಕಾರ)

  ಮೂಡಲ್ ಸೂರ್ಯಂ,ನಭದೆ ನಸುಕೊಳ್,ಮೂಡೊಳೇರುತ್ತೆ ಬರ್ಪಂ
  ನೀಡಲ್ಕೆಂದೇ ಜಗಕೆ ಬೆಳಕಂ,ಕಳ್ತಲಂ ಕೊಲ್ಲುತುಂ ತಾನ್ |
  ಪಾಡಲ್, ಸೇರ್ದಾ ಮರವ ಕುಕಿಲಂ,ಸಂತಸಂಗೊಂಡು ಪಾಡಂ,
  ಕಾಡೊಳ್ ಗೋಪಾಲನ ಕೊಳಲಿನಿಂ ಪೊಣ್ಮುವೊಲ್,ಶ್ರಾವ್ಯಮಿರ್ಕುಂ ||

  • ತುಂಬ ಚೆನ್ನಾಗಿರುವ ವೃತ್ತವನ್ನು ರಚಿಸಿದ್ದೀರಿ. ಮೇಘದೂತವನ್ನು ಮೂಲದ ಮಂದಾಕ್ರಾತಾವೃತ್ತದಲ್ಲಿಯೇ ಅನುವಾದಿಸಿದ ನಿಮ್ಮ ತೀರ್ಥರೂಪರಾದ ಕೀ ಶೇ ಗಣಪತಿ ಮೊಳೆಯಾರರ ಆತ್ಮಕ್ಕೆ ನಿಜಕ್ಕೂ ಹರ್ಷವುಂಟಾಗಿರಬೇಕು. (ಮೊನ್ನೆ ಉಡುಪಿಯಲ್ಲಿ ನಿಮ್ಮ ಅಣ್ಣ ಶ್ರೀ ಜಯದೇವ ಅವರು ಭೇಟಿಯಾಗಿದ್ದರು:-)

   • ಗುರುಗಳೆ, ತುಂಬ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು.ನೀವು ಬರೆದಂತೆ,ನನ್ನ ತಂದೆಯವರ ಆತ್ಮಕ್ಕೆ, ವೃತ್ತರಚನೆಯ ನನ್ನ ಈ ಕಿರುಯತ್ನದಿಂದ ಸಂತೋಷವಾಗುವುದೆಂದೇ ನನ್ನ ನಂಬಿಕೆ.ನನ್ನ ಅಣ್ಣ ನಿಮ್ಮನ್ನು ತುಂಬ ಮೆಚ್ಚಿ ಕೊಂಡಾಡಿದರು.ಅವರ”ಕಾಸುಕುಡಿಕೆ” ಪುಸ್ತಕವನ್ನು ನಿಮಗೆ ಕಳುಹಿಸಿರುವುದಾಗಿ ತಿಳಿಸಿದರು.

 21. ಸೊಗಮೆಲ್ಲಂ ಸೆರೆಗೊಂಡಿರಲ್ಕಿ ನೆಲದೊಳ್, ತಾಣಂ ಸುರರ್ದಲ್ಲಮೇಂ?
  ಜಗತೀಪಾಪವಿನಾಶೆಯೀ ಪೊಳೆಯಿರಲ್,ಗಂಗಾಜಲಂ ಶ್ರೇಷ್ಠಮೇಂ?
  ಧಗೆಗಂ ತಣ್ಪೆರೆವೀ ಹರಿದ್ಸಿರಿಯಿರಲ್, ಬೆಳ್ಛತ್ರಮಿನ್ನೇತಕಂ?
  ಮೊಗೆದುಂ ತಾಂ ಪಸು ಪಾಲಮೀಯೆ ನಿರತಂ, ದೇವಾಮೃತಂವೇಳ್ಕುಮೇಂ?
  (ಅಘನಾಶಿನಿ ನದಿಯ ತಟದೊಂದೂರು..)

  • ಪದ್ಯ ಚೆಲುವಾಗಿದೆ. ಹಳಗನ್ನಡದ ಸೊಗಸೂ ಇದೆ:-) ಕೆಲವೊಂದು ಟಂಕನದೋಷಗಳಾಗಿವೆ. ದಯಮಾಡಿ ಸವರಿಸಿಕೊಳ್ಳಿರಿ. ಎರಡನೆಯ ಸಾಲಿನಲ್ಲಿ ಅಘ ಎಂಬುದಕ್ಕೆ ಬದಲಾಗಿ ಅಗ ಎಂದರೆ ಪ್ರಾಸವೂ ಸರಿಯಾಗುವುದು. ಅಗಸ್ ಎಂಬ ಸಕಾರಾಂತ ಶಬ್ದವು ಪಾಪ ಎಂಬ ಅರ್ಥವನ್ನೇ ಉದ್ದೇಶಿಸಿದೆ.

   • ಧನ್ಯವಾದಗಳು. 🙂
    ಅಗ ಶಬ್ದದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೂ ಧನ್ಯವಾದ. ದೋಷಗಳನ್ನು ಸರಿಪಡಿಸಿರುವೆ.

   • ಕಾಂಚನಾ ಅವರಲ್ಲಿ ಕ್ಷಮೆ ಕೋರಿ:
    ಇಂದು ಮಹೇಶ್ ಭಟ್ಟ ಹಾರ್ಯಾಡಿ ಅವರಿಂದ ತಿಳಿಯಿತು; ನಾನು ಆಗಸ್ ಎಂಬ ಪದವನ್ನು ಅಗಸ್ ಎಂಬುದಾಗಿ ತಿಳಿಸಿರುವೆನೆಂದು. ಹೀಗಾಗಿ ನನ್ನ ಸವರಣೆ ತಪ್ಪಾಗುತ್ತದೆ. ನೀವು ದಯಮಾಡಿ ಸಿಗುರಂ ಎಂದೋ ಭುಗಿಲಂ ಎಂದೋ ಅಥವಾ “ಜಗತೀಪಾಪವಿನಾಶೆಯೀ ಪೊಳೆಯಿರಲ್…..” ಇತ್ಯಾದಿಯಾಗಿಯೋ ಸವರಿಸುವುದು.

    • ಸರ್, ಈಗಲೇ ಸರಿಪಡಿಸಿದ್ದೇನೆ.
     ತಮ್ಮ ಕಾಳಜಿಗೆ, ವಿನಯಪೂರ್ಣ ಮಾರ್ಗದರ್ಶನಕ್ಕೆ ಅನಂತ ವಂದನೆಗಳು.

 22. उत्क्षिप्तपद्यैर् बहुधा विभक्तैः
  संमिश्रितैर् वै रसिकास्यसक्त्या।
  विस्मायितास्यैः कविभिस्तथैव
  पद्योत्सवो होलिकया सुतुल्यः॥

  [वसन्तोत्सवस्य होलिकायाः सन्दर्भे पद्योत्सवोऽयम् आचर्यते खलु!]

  रागार्यकेन्द्रं परितो भ्रमन्ति
  तद्वाणिवेणोर् वशगा भवन्ति।
  तत्काव्यनृत्यैः ननु शङ्क्यते यत्
  पद्योत्सवो माधवरासलीला॥
  [आर्य गणेशोऽवधानी रागाख्यः खलु पद्योत्सवकेन्द्रसन्निभः!]

  पद्यैर्हि हृत्क्षेत्रविदारणञ्च
  क्षात्रोपमः काव्यकृतां सुहासः।
  अभ्यासशक्तिस् स्फुटयुक्तिर् एभिः
  पद्योत्सवस्त्वाहववद् विभाति॥

  • ಪದ್ಯಾನಿ ಸಂದರ್ಭಶುದ್ಧಾನಿ | ಕಿಂ ಚ ಪ್ರಥಮಪದ್ಯೇ ಕ್ವಚಿತ್ ಶೈಲೀಪರಿಷ್ಕಾರಃ ಅಪೇಕ್ಷಿತಃ |

 23. ಪಿಂತರ್ಕಾಸ್ತದ ವರ್ಣನೆ
  ಯಂ ತವೆ ಗೆಯ್ದಿರ್ದೆನೀಗಳಿಂದೂದಯಮಂ
  ನೋಂತಂತೆ ವರ್ಣಿಪೆಂ ಮ
  ತ್ತಂ ತಪ್ಪಿರೆ ತಿರ್ದಿ ಪೇಳ್ವುದೈ ಬುಧರೆಲ್ಲರ್||

  ಆ ವಿಧಿ ತನ್ನ ಕಜ್ಜಕೆನುತುಂ ಕರೆದಿರ್ದೊಡೆ ಬಂದತೊಳ್ತಿನಾ
  ಳೋವುತೆ ಗೆಯ್ದುದೊಕ್ಕಲೆನುವಂತರಿಲ್ಗಳ್ ನಭದೊಳ್ ಬರುತ್ತಿರಲ್
  ಭಾವಿಸಿ ನಿಷ್ಠೆಯಿಂದೆಸಗಿದಯ್ ರವಿ ನೀನಿದೊ ಕೊಂಡು ಪೋಗೆನು
  ತ್ತಾವಿಧಿಯಿತ್ತ ಬೆಳ್ಳಿಪಣದಂದದೆ ಕಾಂಬನೆ ಪೂರ್ಣಚಂದ್ರಮಂ||

  ಜಲಧಿಯೆ ಸಾರ್ದು ಸದ್ಗೃಹಿಣಿಯಂದದೆ ತೋಷದೆ ಪಾದ್ಯಮಂ ಕುಡಲ್
  ಸಲಿಲದೊಳರ್ಘ್ಯದಾತ ಯಜಮಾನನೆ ಮೇಘನೆನಲ್ಕೆ ಮಕ್ಕಳಂ
  ತೆ ಲಲಿತಮೋದರಾವಕೃತಕೇಳಿರತಂಗಳೆನಲ್ ಚಕೋರಕಂ
  ಗಳತಿಥಿಯಂತೆ ಬಂದನದೊ ಚಂದ್ರನೆ ಮೂಡಣವೆಟ್ಟವಾಗಿಲೊಳ್ ||
  (ಚಕೋರಗಳು ಚಂದ್ರನ ಬೆಳಕನ್ನು ಕುಡಿದು ಬದುಕುತ್ತವೆ ಎಂದು ಕವಿಸಮಯ; ಹಾಗಾಗಿ ಚಕೋರಗಳಿಗೆ ಚಂದ್ರ ಬಂದಾಗ ಸಂತೋಷವಾಗುವುದು ಮಕ್ಕಳಿಗೆ ಅತಿಥಿಗಳು ಬಂದಾಗ ಆಗುವ ಸಂತೋಷದಂತೆ ಎಂದು ಕಲ್ಪನೆ. ಲಲಿತ+ಮೋದ+ರಾವ+ಕೃತ+ಕೇಳಿ+ರತಂ ಮೂಡಣವೆಟ್ಟವಾಗಿಲ್-ಮೂಡಣದೆಸೆಯ ಬೆಟ್ಟವೆಂಬ ಬಾಗಿಲು)

  ಲೋಕೇಶಾಕ್ಷಿ ದಿನೇಶನೆಂಬನಲನಂ ತಾನಿರ್ಕೆ ಕಂದಾಗೆ ನೀ
  ಲಾಕಾಶಂ ಮಿಗೆಯೂದೆ ಪೊಣ್ಮಿತುಡುಗಳ್ ದಲ್ ವಿಸ್ಫುಲಿಂಗಂಗಳಾ
  ಕೋಕಂ ಕೂಗುವುದಾಗೆ ಛುಯ್ಯೆನುವ ಶಬ್ದಂ ಭೂಮಿ ತನ್ನಾಣ್ಮಗಂ
  ಭೂಕಾಂತಂಗೆರೆದಿರ್ಪ ದೋಸೆಯವೊಲೇ ದೋಷಾಕರಂ ಸಾರ್ದಪಂ ||
  (ಇರ್ಕೆ-ಇಕ್ಕಿದಾಗ; ಕಂದು=ಕಾವಲಿ, ಒಲೆಗೆ ಊದಿದಾಗ ಹಾರುವ ಕಿಡಿಗಳೇ ನಕ್ಷತ್ರಗಳು; ಕೋಕ=ಚಕ್ರವಾಕ; ರಾತ್ರಿ ಹೊತ್ತು ಚಕ್ರವಾಕಗಳಿಗೆ ವಿರಹ ಎಂದು ಕವಿಸಮಯ; ಹಾಗಾಗಿ ಅವು ಕೂಗುವ ಸದ್ದೇ ‘ಛುಯ್’ಎನ್ನುವ ದೋಸೆಯ ಕಾವಲಿಯ ಶಬ್ದ ಎಂದು ಸಮೀಕರಣ ಮಾಡಿದ್ದೇನೆ, ದೋಸೆ ಎರೆಯುವುದು=ದೋಸೆ ಹಾಕುವುದು)

  ಶಿವನಾಗಳ್ ಸ್ಮರನಂ ಕೊಲಲ್ಕೆ ತೆರೆದಾಗಳ್ ಬೆಂಕಿಗಣ್ಣಂ ಪರಾ
  ಭವಮಂ ಪೊರ್ದದೆ ನಷ್ಟದೇಹನವನಂತೀ ರೂಪದಿಂದೆಯ್ದು ಕ
  ಣ್ಣೆವೆಯಂ ದಾಂಟಿ ಗಿರೀಶಮಸ್ತಕದೆ ನಿಂತೀಗೆಲ್ಲರಂ ಪೀಡಿಪಂ
  ತವೆ ಪೋ ಚಿಃ ಖಲಯೆನ್ನುತುಂ ವಿರಹಿಗಳ್ ನಿಂದಿಪ್ಪರಿಂದಿಂದುವಂ ||
  (ವಿರಹಿಗಳು ಈ ರೀತಿ ಕಾಮನನ್ನೂ ಚಂದ್ರನನ್ನೂ ಒಂದೇ ಎಂದು ಬಗೆದು ಚಂದ್ರನನ್ನು ನಿಂದಿಸುತ್ತಾರೆಂದು ಕಲ್ಪನೆ.)

  • ಸುಂದರ ಸಾಲಂಕೃತ ಶಶಿ
   ಬಂದಂ ಮೂಡುತ್ತಲೂಹೆಕಾವಲಿಯಿಂದಂ
   ಚಂದದ ಪಳೆಗನ್ನಡಬನಿ
   ಮಂದಾಗ್ನಿಯಪಾಕಕೊಪ್ಪಲಾಹಾ ಸೊಗಸೈ

  • ಅಪ್ಪಳಿಸಿದೆಯಲ ನಲವಲೆ-
   ಯೊಪ್ಪಲ್ ನಿನ್ನೀ ಕವಿತ್ವರಸವಾರಿಧಿಯೊಳ್ |
   ಕೊಪ್ಪಲತೋಟಾ! ಇದರೊಳ್
   ಕುಪ್ಪಳಿಸುತೆ ಪುಟ್ಟಿ ಬಾರನೇಂ ಹರಿಣಾಂಕಂ ||

   ತುಂಬ ತುಂಬ ಸೊಗಸಾದ ಭಾವ-ಭಾಷೆ-ಬಂಧಗಳ ಪರಿಪೂರ್ಣತೆಯುಳ್ಳ ನಿನ್ನ ಈ ಪದ್ಯಗಳು ಪದ್ಯಪಾನಬಾಂಧವ್ಯದ ಎಲ್ಲರಿಗೂ ಆದರ್ಶವೆಂದರೆ ಅತಿಶಯವಲ್ಲ.

   ಅರ್ಘ್ಯದಾತೃ ಮತ್ತು ಪೊಣ್ಮಿದುಡುಗಳ್ ಎಂದು ಸವರಿಸಿದರೆ ಯುಕ್ತ.

  • ಹರಿಣಾಂಕಮೌಳಿಯುಂ ಮೇಣ್
   ಹರಿಣಾಂಕಾಹಿತನುಮೊಪ್ಪಿರಲ್ಕೀ ಪದ್ಯಂ
   ಹರಿಣಾಂಕಂಬೋಲ್ ಸೊದೆಯಂ
   ಹರಿಣಾಂಕಾಶ್ರಿತಚಕೋರಸಹೃದಯರ್ಗೀಗುಂ|| 😉

   ಗಣೇಶರೇ ಹಾಗೂ ಚಂದ್ರಮೌಳಿಯವರೇ
   ಧನ್ಯವಾದಗಳು 🙂

  • ಚಂದ್ರೋದಯದಲ್ಲಿ ಏನು ತಪ್ಪು ಆಗೋಕೆ ಸಾಧ್ಯ?

   ಗೀಳಾ ಚಂದ್ರಗೆ ನಿಯತತೆ
   ಗೋಳಿಡದೆಲೆ ಲೀಲೆಯಿಂದೆ ನವಪದ್ಯವ ನೀಂ|
   ಪೇಳೈ ಪೇಳ್, ಚಂದ್ರೋದಯ
   ಮೇಳೈಸದೆಲಿರ್ಪುದೇಂ ಸಮಯಧರ್ಮಕೆ ತಾಂ|| 🙂

  • ಕೊಪ್ಪಲತೋಟ ನಿನ್ನ ಪದ್ಯಗಳಲ್ಲಿ ಹಳಗನ್ನಡದ ಶೈಲಿ ಅತ್ಯದ್ಭುತವಾಗಿದೆ 🙂

  • ಭಲೇ! ತುಂಬಾ ಸಂತೋಷವಾಯಿತು 🙂

   “ಆ ವಿಧಿ…” ಎಂಬ ಪದ್ಯದ ಕಲ್ಪನೆಯಂತೂ ಪರಮರಮಣೀಯವಾಗಿದೆ.

   ಚಂದ್ರನು ಆಗಸವೆನ್ನುವ ಕಾವಲಿಯಲ್ಲಿ ಎರೆದ ದೋಸೆಯೊಂಬುದು ಅನೇಕ ಕವಿಗಳಿಗೆ ತೋರಬಹುದಾದ ಕಲ್ಪನೆಯಾದರೂ ಅದರ ಜೊತೆಗೆ ಬಂದ “ಕೋಕಂ ಕೂಗುವುದಾಗೆ ಛುಯ್ಯೆನುವ ಶಬ್ದಂ” ಎನ್ನುವ ರೂಪಕ ತುಂಬಾ ಸೊಗಸಾಗಿದೆ ಹಾಗೂ ಇದಕ್ಕೆ ಪೂರಕವಾದ ಇನ್ನಿತರ ರೂಪಕಗಳೂ ಸೊಗಸಾಗಿವೆ. ದೊಡ್ಡ ಕಾವಲಿಯನ್ನಿಟ್ಟಾಗ ಬೆಂಕಿ ಕಾಣಿಸುವುದಿಲ್ಲ, ಅದರ ಕಿಡಿಗಳು ಮಾತ್ರ ಗೋಚರಿಸುತ್ತವೆ. ತಮಸ್ಸಿನಿಂದ ನೀಲವಾದ ಆಗಸ ತೋರುವಾಗ ಸೂರ್ಯ ಕಾಣಿಸುವುದಿಲ್ಲ, ನಕ್ಷತ್ರಗಳು ಗೋಚರಿಸುತ್ತವೆ. ರೂಪಕ ಎಷ್ಟು ಚೆನ್ನಾಗಿ ಹೊಂದಿಕೆಯಾಗುತ್ತಿದೆ.

   ಮಿಕ್ಕ ಪದ್ಯಗಳೂ ಚೆನ್ನಾಗಿವೆ. ಭಾಷೆಯು ಹದವಾಗಿದೆ. ಇನ್ನೂ ಈ ತೆರನಾದ ಪದ್ಯಗಳು ನಿನ್ನಿಂದ ಹೊರಹೊಮ್ಮಲಿ 🙂

   ಮಾತನ್ನು ಮುಗಿಸಿದರೂ “ಆ ವಿಧಿ…” ಎಂಬ ನಿನ್ನ ಪದ್ಯವು ಮತ್ತೆ ಮಾತನಾಡಿಸುತ್ತಿದೆ. ಆ ಪದ್ಯದ ಅಭಿನವವೂ ಅಭಿರಾಮವೂ ಆದ ಕಲ್ಪನೆ ಚಿರಕಾಲ ನೆನಪಿನಲ್ಲಿ ಉಳಿಯುವಂತಿದೆ. ಅದಕ್ಕೆ ಮರುಳಾಗದ ರಸಿಕನು ಭಾವುಕಲೋಕದಲ್ಲಿಯೇ ಇರಲಿಕ್ಕಿಲ್ಲ 🙂

  • ಮನ್ಮಥಂಗನಂಗನೆನುತುಂ ಸಂದ ಪೆಸರಿಗೀಗಳಿಂತುಂ
   ಚಿನ್ಮಯದ ವಿವೃತಿಯನ್ನು ನೀಡಿರುವಿರಯ್ಯ ವಂದಿಪೆಂ ನಾಂ|

 24. ಈ ಕಾಲದಲ್ಲಿ ಹೊಳೆದಾಸವಾಳದ ಮರಗಳು ಎಲ್ಲೆಲ್ಲಿಯೂ ಕುಸುಮಿಸುತ್ತವೆ. ಇವು ಅಚ್ಚ ಭಾರತೀಯಮೂಲದವು. ನಮ್ಮ ಬೆಂಗಳೂರಿನ ಹತ್ತಾರು ಕಡೆ ಇವು ಕಾಣಸಿಗುತ್ತವೆ. ಈ ಮರಕ್ಕೆ Glory of India ಎಂದು ಆಂಗ್ಲನಾಮಧೇಯ. ಇದು ನನಗಿಷ್ಟವಾದ ಪುಷ್ಪವೃಕ್ಷಗಳಲ್ಲೊಂದು. ಇದನ್ನು ಕುರಿತೊಂದು ಪದ್ಯ:

  ಕಳೆಗೊಂಡ ಕಾಮಿನಿಯ ಲಜ್ಜೆಗೆಂಪು ಮು-
  ಮುಕ್ಕುಳಿಪಂತೆವೋಲ್ ಮಲರ್ದು ಸಂಜೆಬಾನ್ಗೆ ಪೊಂ-
  ಪುಳಿವೋಗಿಸಲ್ಕೆ ಕಸುವಾಂತುದೆಂಬವೊಲ್
  ಹೊಳೆದಾಸವಾಳಮಿದೊ ಭಾಸಿಕುಂ ಕರಂ ||

  • ಸಣ್ಣ ತಿದ್ದುಪಡಿ: ಎರಡನೆಯ ಸಾಲಿನಲ್ಲಿ ಮೊದಲು ’ಮು’ ಎಂಬ ವರ್ಣವು ಬೇಡವಾದದ್ದು. ಕೈತಪ್ಪಿನಿಂದ ಅದು ಬಂದಿದೆ.

  • ನನ್ನ ಪುಣ್ಯ ತುಸು ಹೆಚ್ಚು. ಹೀಗೆ ಪದ್ಯದಲ್ಲಲ್ಲದೆ, ಇಂದು ಬೆಳಿಗ್ಗೆ ವಿಜಯನಗರಕ್ಕೆ ಒಟ್ಟಿಗೆ ಪ್ರಯಾಣಮಾಡುವಾಗ ಗಣೇಶರು ನನಗೆ ಹಲವು ಹೊಳೆದಾಸವಾಳವೃಕ್ಷಗಳನ್ನು ತೋರಿಸಿದರು.

   ಮಂಜುಭಾಷಿಣಿ|| ಬಹುಧನ್ಯನಾನಹೆನು ಛಾತ್ರರೊಳ್ ವಲಂ
   ಗ್ರಹಿಕೆ ಪ್ರಭೂತದಿನೆ ಸಾಧ್ಯಮಾಗುವೊಲ್|
   ಮಹನೀಯ ’ರಾಗ’ ಹೊಳೆದಾಸವಾಳಭೂ
   ರುಹಹತ್ತ ತೋರಿದರು ಯಾನವೇಳೆಯೊಳ್||

   • ಅತ್ಯಲ್ಪಮಪ್ಪುದನುಮಿಂತು ಕೃತಜ್ಞತಾತ್ಮ-
    ಪ್ರತ್ಯಗ್ರಮೋದದಿನೆ ನೀಂ ನೆನೆವೊಂದು ಭಾವಂ |
    ಸ್ತುತ್ಯರ್ಹಮಾದುದನಿಶಂ; ನತಿಯಿತ್ತೆನೀಗಳ್
    ಸತ್ಯಾಶಯಾ! ಕೊಳುವುದೊಪ್ಪುತೆ ಹಾದಿರಂಪಾ!!

 25. ಸಂಗೀತ ಕಛೇರಿಗೆ ಪ್ರೇಕ್ಷಕರ ಚಪ್ಪಾಳೆಯೇ ದೊಡ್ಡ ಆಸರೆ ಎಂಬ ಕಲ್ಪನೆ

  ವಿರಳಾತಿವಿರಳ ರಾಗದೆ
  ಸೆರೆಪಿಡಿಯಲ್ಪ್ರೇಕ್ಷರ್ಗೆರಸವನ್ನುಣಿಸಲ್
  ಸಿರಿಕಂಠದೆ ಪಾಡಲ್ಕಾ
  ಕರತಾಡನಮೇ ಕಛೇರಿಗಾಸರೆಯಾಯ್ತಯ್

 26. ಸತತಂ ಶ್ರಮದಿಂದಿರುವೆಯು
  ಜತೆಗೂಡಿಸೆಜೇಡಿಮಣ್ಣ ಪುತ್ತವ ಕಟ್ಟಲ್|
  ಸತಿಯರ್ಗಳ್ ಪಾಲೆರೆವರ್
  ಖತಿಯಂ ಗೈದಿರ್ಪಸರ್ಪಗಂ ಪೂಜಿಸುತುಂ|

 27. ೨೦೧೧ನೆಯ ಇಸವಿಯಲ್ಲಿ ರಚಿಸಿದ್ದ ಒಂದು ಕವನವನ್ನು ಇಲ್ಲಿ ಓದುಗರಿಗೆ ಸಮರ್ಪಿಸುತ್ತಿದ್ದೇನೆ. ಆಗ ನಮ್ಮ ಮನೆಯ ಹಿಂದೆ ಇದ್ದ ಒಂದು ದೊಡ್ಡ ಮರ Irene ಬಿರುಗಾಳಿಯ ಹೊಡೆತದಿಂದ ಬಿದ್ದಿತ್ತು. ದೇವರ ದಯೆಯಿಂದ ಮನೆಯ ಮೇಲೆ ಬೀಳಲಿಲ್ಲ. ಅದನ್ನು ವಿದ್ಯುತ್-ಗರಗಸದಿಂದ ಚಿಕ್ಕ ಚೂರುಗಳಾಗಿ ಕತ್ತರಿಸಿ ನಮ್ಮ ಮನೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಬಿಸಾಕಬೇಕಾಯಿತು. ಕೆಲವು ಕೊಂಬೆಗಳು ಭೂಮಿಯಲ್ಲಿ ನಾಟಿಕೊಂಡಿದ್ದವು. ಅವುಗಳನ್ನು ಚಲಿಸಲೂ ಆಗಲಿಲ್ಲ. ಇಂದಿಗೂ ಅವು ಅಲ್ಲೇ ಉಳಿದಿವೆ!

  Irene-गीतम्

  ऐरीन् इत्यबला?

  हं. क. रामप्रियः

  सेप्टेम्बर् १४, २०११

  अट्लाण्टीयमहोदधौ समुदितो यो दाक्षिणात्यो महान्
  वातो वर्तुलवर्त्मना प्रबलतां प्राप्तः कदुष्णैर्जलैः ।
  गर्जन्मेघविमुक्तवृष्टिनिवहैः सन्तर्पयन् स्वं मुदा
  ऐरीनित्यबलाभिधोऽपि सबलः प्राचीं तटं बाधते ॥१॥

  वासन्तेषु पुनः पुनः समुदितैः राराजितः पल्लवैः
  यो ग्रीष्मेषु विराजते स्म बहुभिः पर्णैर्हरिद्भिर्युतः ।
  सत्कालीनसुवृष्टिसंभृततनुः वृक्षस्स दैत्याकृतिः
  झञ्झावातविभग्नदीनवपुषा शेतेऽद्य पृष्ठाङ्गणे ॥२॥

  मूले तु वृष्टिभिः क्लिन्नः मध्ये वातेन पीडितः ।
  ऊर्ध्व उद्धूतपर्णोऽसौ भूमावत्र निपातितः ॥३॥

  दैत्याकृतेरस्य विभग्नबाहोः
  वारुण्यवाय्वस्त्रसुपीडितस्य ।
  मध्ये मह्त्यस्सुविदीर्णशाखाः
  खनन्ति भूमिं खलु शल्यतुल्याः ॥४॥

  क्षाराब्धिजातवातेन पातितेऽपि महाद्रुमे ।
  क्षीराब्ध्यावासकृपयाऽऽवासो मे परिपालितः ॥५॥

  विद्युच्चालितहारारहेतिहस्तो भवाम्यहम् ।
  भित्त्वा निपतिताश्शाखाः प्रक्षिपामि घने वने ॥६॥

  भूमौ मग्नाः शल्यरूपास्तु शाखाः
  नाहं शक्ष्ये चालयितुं कथञ्चित् ।
  स्थास्यन्त्येताः स्तम्भरूपास्तथैव
  कीटाहाराः पुष्कलास्ताश्चिराय ॥७॥

  भवाब्धिमध्ये नितरां निमग्नम्
  दयाब्धिपूर्णं शरणं गतं माम् ।
  क्षाराब्धिजानीतमहाविनाशात्
  क्षीराब्धिजानाथकृपा ह्यरक्षत् ॥८॥

  • ಪದ್ಯಭಾವವು ಸುಬೋಧವಾಗಿದೆ. ಆಶಯವೂ ಆತ್ಮೀಯವಾಗಿದೆ. ಕೇವಲ ಏಳನೆಯ ಪದ್ಯದ ಎರಡನೆಯ ಸಾಲಿನಲ್ಲಾದ ಛಂದೋಭಂಗವನ್ನು ದಯಮಾಡಿ ಸವರಿಸಿಕೊಳ್ಳಿರಿ.

   • धन्योऽस्मि । सप्तमपद्यम् उपजातिवृत्तेषु अन्यतमं विषमवृत्तम् आसीत् । समवृत्तं कर्तुं द्वितीयपादम् एवं भवितुमर्हति —
    “नैवैतासां चालनेऽहं समर्थः” ।

 28. ನನಗೆ ಶಾರ್ದೂಲವಿಕ್ರೀಡಿತವೃತ್ತವೆಂದರೆ ತುಂಬ ಇಷ್ಟವಾದ ಛಂದಸ್ಸುಗಳಲ್ಲೊಂದು (ಉಳಿದಂತೆ ಅನುಷ್ಟುಪ್, ವಸಂತತಿಲಕ, ಕಂದ, ಚೌಪದಿಗಳಿಗೆ ಮೊದಲ ಮಣೆ. ಅನಂತರ
  ಉಪಜಾತಿ, ದ್ರುತವಿಲಂಬಿತ, ರಥೋದ್ಧತಾ, ಪೃಥ್ವೀ, ಮಾಲಿನೀ, ಮಂದಾಕ್ರಾಂತಾ, ವಿಯೋಗಿನೀ, ಭಾಮಿನೀಷಟ್ಪದಿ, ಸೀಸಪದ್ಯಗಳು ಬಲು ಮೆಚ್ಚು). ಹೀಗಾಗಿ ಈ ವೃತ್ತದ ಬಗೆಗೆ ಒಂದು ಪದ್ಯ:

  ನಿನ್ನೊಳ್ ನಾಂ ಮಿಹಿಕಾಚಲೋನ್ನತಿಯನುಂ ಪಾಥೋಧಿಪಾರಮ್ಯಮಂ
  ಸ್ಕನ್ನೋತ್ತುಂಗನಯಾಗರಾಸ್ರುತಿಯನುಂ ಸಹ್ಯಾದ್ರಿಕಾಂತಾರಮಂ |
  ಛನ್ನಾಚ್ಛನ್ನರವೀಂದುಬಿಂಬದುದಯಾಸ್ತಪ್ರೀತಿಯಂ ಶ್ರಾವಣೋ-
  ದ್ಭಿನ್ನಾಭೀಲಸುವೃಷ್ಟಿಯಂ ಪಡದಪೆಂ ಶಾರ್ದೂಲವಿಕ್ರೀಡಿತಾ !!

  • ನೀವು ಶಾರ್ದೂಲವಿಕ್ರೀಡಿತದಲ್ಲಿ ಬರೆದ ಪದ್ಯವು ಇದೇ ಅನುಭವವನ್ನು ನೀಡಿತು. ಧನ್ಯವಾದಗಳು.

  • ಗಣೇಶ್ ಸರ್, ಛಂದಸ್ಸಿನ ಬಗ್ಗೆ ಬರೆದ ಪದ್ಯವು ಬಹಳ ವಿಶೇಷವಾಗಿದೆ. ನಿಮ್ಮಿಂದ ಛಂದಸ್ಸಿನ ಬಗ್ಗೆ ಪದ್ಯಬರಬಹುದೆಂಬ ನಿರೀಕ್ಷೆಯಿತ್ತು. ಯಾವ ಛಂದಸ್ಸಿರಬಹುದೆಂಬ ಕುತೂಹಲವೂ ಇತ್ತು… ಚೆನ್ನಾಗಿದೆ ಪದ್ಯ

   ಭೀಲಸುವೃಷ್ಟಿಯಂ ಎಂದರೆ ಏನಾಗುತ್ತದೆ

   • ಕಾಂಚನ ಮತ್ತು ಸೋಮರಿಗೆ ಧನ್ಯವಾದಗಳು. 🙂
    ಆಭೀಲ-ಸುವೃಷ್ಟಿ + ಭಯಂಕರವಾದ ಮಳೆ

 29. ನಾನು ಪದ್ಯವನ್ನು ರಚಿಸಲಾರೆ. ಏಕೆಂದರೆ:
  ದೇವಂ ತಾಂ ರಚಿಸಿರ್ಪ ಲೋಕದೊಳಗಂ| ದೋಷಂಗಳೆಂತೋ ವಲಂ
  ಪೂವಿಂಗೀಯುತಲಾಯುವೊಂದುದಿನದಂ| ಕಲ್ಗಂ ಚಿರಾಯುಸ್ಸನುಂ|
  ತೀವುತ್ತುಂ ಸ್ವನಕೋಕಿಲಕ್ಕೆ ಶಿತಿಯಂ| ಸ್ವರ್ಯಾಭ್ರಕಂ ಶ್ವೇತಮಂ.
  ಭಾವಂಗೊಳ್ವುದೆ ಶೀಲದಿಂದೆ ನಿಜಕಾ|ವ್ಯಂ ಮೌನದಿಂದಿರ್ಪೆನಾಂ||
  (ನಿಜ=ಸ್ವಂತದ. ಸ್ವರ್ಯ+ಅಭ್ರ=ಗುಡುಗುವ ಮೋಡ)
  ಅಲಂಕಾರರಹಿತ ಪದ್ಯ. ಕ್ಷಮೆ ಇರಲಿ. ಮಧ್ಯದೆರಡು ಪಾದಗಳು ತೆಲುಗಿನ ಸಿರಿವೆನ್ನೆಲ ಚಿತ್ರದ ಗೀತೆಯಿಂದ ಎರವಲು.

  • ಎರವಲಾದರೇನು? ರಸಪೂರ್ಣವಾದುದಯ್
   ಚರಣಯುಗಲಮಿಲ್ಲಿ ಪದ್ಯದಲ್ಲಿ |
   ಸರಿಯದಾಗದೊಂದೆ ನಿಮ್ಮ ಸತ್ಕವಿತೆಯೊಳ್
   ವರತೃತೀಯಪಾದದಾದಿಶಬ್ದಂ||

   (ಗ್ರೀವಾಶ್ರಾವ್ಯ ಎಂದರೆ ಇಂಪಾದ ಕೊರಲಿನ ಎನ್ನುವ ಅರ್ಥವು ಬಾರದು. ಅದು ಶ್ರಾವ್ಯಗ್ರೀವ ಎಂದೇ ಆಗಬೇಕು)

  • ಧನ್ಯವಾದಗಳು ಸರ್. ಮೂರನೆಯ ಪಾದವನ್ನು ತಿದ್ದಿದ್ದೇನೆ.

 30. ನೀಲಾಂಬರೆಯಾಸರೆಯೊಳ್
  ಪಾಲುಣುತುಂ ಮುದ್ದುಕಂದನಿಂದುವು ನಲಿಯಲ್
  ತೇಲುತುಮಾನಂದದೊಳಾ
  ಶೀಲಾಧರೆ ಚಿಮ್ಮಿದಳ್ ನಗೆಯರಿಲ್ಗಳನುಂ!

  • ಪದ್ಯ ಚೆನ್ನಾಗಿದೆ. “ಪಾಲುಣುತುಂ ಮುದ್ದುಕಂದನಿಂದುವು ನಲಿಯಲ್ ” ಎಂದು ಸವರಿಸಬಹುದು.

 31. ವಸ್ತು: ಆಸೆ

  ಹೊಂಚಿ ಪಿಂಛದಿ ನುಗ್ಗಿಮೊಗ್ಗೊಳು
  ಕೊಂಚ ಸುಳಿದಡಗುತ್ತ ಮಿಂಚೊಳು
  ಸಂಚಿನಿಂ ಬಳುಕುತ್ತ ಹೊಳೆಯೊಳು ಹೊಳೆದು ಸೆಳೆದೆಳೆವ
  ಅಂಚೆಯೇ, ಮಧುರಾನುರಾಗ ವಿ
  ಪಂಚಿಯೇ. ಬೇಕುಗಳ ತುಂಬುವ
  ಸಂಚಿಯೇ, ಕಾರ್ಯಗಳ ಕೀಲವಿರಿಂಚಿಯೇನಾಸೆ(ಗಳನೇನೆಂಬೆ)

  ಹೊಮ್ಮಿರಲಿಚ್ಛಾಜ್ಞಾನಂ
  ನಿರ್ಮಿಸಿದನ್ ನರನ ನಾಮ ರೂಪಮನಿಡುತುಂ
  ಸುಮ್ಮನಿರಲ್ನರನಲುಗದೆ
  ಬೊಮ್ಮಂ ಮುಂದಿಟ್ಟನಾಸೆ ಚಾಲಿಸೆ ಜಗಮನ್

  ಚಿಣ್ಣರಿಗಾಟದಬೊಂಬೆಯೊ
  ಬಣ್ಣವೊ ಭಾವುಕರ, ಸವಿಯೊ ಭೋಜನಸುಖರೊಳ್
  ಮಣ್ಣೋ ಧನಸಂಗ್ರಹಿಗಂ
  ಹೆಣ್ಣೋ ಶಿವನರ್ಧಮಾಗುತಾಸೆಯದಾಯ್ತೋ?

  ಕಾದಿಹ ವಿಚ್ಚೇದನಕಂ
  ವಾದಿಪ ಪತಿಯವಳದೂರಮಾಳ್ಪೊಂದಳಿಪಿಂ
  ಕಾದಿಹನೊರ್ವಂ ಸೇರಲ್
  ಮೋದದಿ, ವೈಚಿತ್ರಮಾದುದಾಸೆಯ ತಾಣಂ

  ದಶರಥನಾಸೆ ಪುತ್ರ, ಸತಿಗಾಸೆ ಮಗಂ ಯುವರಾಜನಾಗುವಾ
  ಶಶಿಮುಖಿಗಾಸೆ ಜಿಂಕೆಯೊಳು ಮಾರುತಿಯಾಸೆಯೆ ಸೇವೆಗೆಯ್ವುದುಂ
  ದಶಮುಖನಾಸೆಗಿಂದ್ರಿಯಮೆ ಸೂರ್ಯತನೋಜಗೆರಾಜ್ಯದಾಸೆಯೈ
  ನಶಿಸದಣಂ ಪ್ರಪಾತದೊಳು ಮತ್ತಧಿಕಾರಕೆ ಕೈ ಚಲಿಪ್ಪುದೇಂ!!

  ನವ ರಂಧ್ರಗಳಿರ್ದುಂ ಜೀ
  ವವನೆಂತೀಪ್ರಾಣವಾಯು ಬಿಡದೋಡದು ಪೇಳ್
  ಸವೆಯದುದಾಶಾಪಾಶಂ
  ನವಮಾರ್ಗೋನ್ವೇಷಿ ಶಿವನೆ ಜವನನ್ನೊದೆವನ್

  • ಮೊದಲ ಪದ್ಯದ ಕೊನೆಯ ಪಾದದಲ್ಲಿ ಐದಾರು ಮಾತ್ರೆಗಳು ಹೆಚ್ಚು ಇವೆ. ಕೊನೆಯ ಪದ್ಯವನ್ನು ಕುರಿತು:
   ಶ್ಲೋಕ|| ನವರಂಧ್ರಂಗಳಿಂ ನಿರ್ಯಾಣಕ್ಕೇಕಾತುರ ಪ್ರಾಣಕಂ|
   ಸಾರ್ದಾ ಮಾರ್ಗದಿನಿಂ ತಾನೇ ಜೀವಿಯಾಂತರ್ಯಮಂ ಮುದಲ್|| 🙂

   • Thanks. Good observation. Missed brackets are in place now.

    • ಆಸೆಯ ಮೇಲಿನಿತಾಸೆ ವಿ-
     ಲಾಸಂಗೊಂಡಂತೆ ಪದ್ಯಚಯಮಂ ಬರೆವೀ
     ಮಾಸದ ಕವಿತಾರುಚಿಗಂ
     ಲೇಸೆಂಬೆಂ ಕಾಣದರ್ಗೆ ಲಾಸ್ ಎಂದೆಂಬೆಂ 🙂

   • ಕಾಣದರ್ಗೆ ಲಾಸ್ ಎಂಬಿರೇಂ?

    ಕಾಣಲಿಲ್ಲೀತನಾಶಾವೈವಿಧ್ಯಮನ್ನೆಂಬಿರೇತಕೈ?
    ಪ್ರಾಣನಿರ್ಯಾಣ ತಾನೇನೈ ಆಶಾಭಾವನಿರೀಕ್ಷಿತಂ??

    • ಪ್ರಸಾದರೇ

     ಕೊನೆಯ ಪದ್ಯದ ಬಗ್ಗೆ ನಿಮ್ಮ ಪದ್ಯಗಳ ಹಿಂದಿನ ಭಾವ ಸ್ಪಷ್ಟವಾಗಲಿಲ್ಲ

  • ನವರಂಧ್ರಗಳಿಂದ ಪ್ರಾಣವಾಯು ಏಕೆ ಸುಲಭದಲ್ಲಿ ನಿರ್ಗಮಿಸದು ಎಂದು ಕೇಳಿರುವಿರಿ. ಹಿಂದೆ ಅದೇ ಮಾರ್ಗವಾಗಿ ತಾನೇ ಬಂದು ಸೇರಿಕೊಂಡ ಸ್ಥಳದಿಂದ ನಿರ್ಗಮಿಸಲು ಅದಕ್ಯಾವ ಆತುರ ಎಂದಿದ್ದೇನೆ ಅಷ್ಟೆ 🙂

 32. ಜಲಮಿರದಿರಲ್ಗೊಳಮತಾಂ
  ಚೆಲುವಂಬುಜ,ಮೀವ ಮತ್ಸ್ಯಗಳ್ ಬಯಸುಗುಮೇಂ?
  ಒಲವಿರದಿರ್ಪ ಹೃದಯಮಂ
  ಕುಲಿಕರ್ ಮೇಣ್ ನೆರೆಜನರ್ ಗಣಿಪರೇಂ? ಬಗೆಗೇಂ?

 33. (ಹಿಂದಿನ “ಚಿತ್ರಕ್ಕೆ ಪದ್ಯ”ದ ಪೂರ್ವೋತ್ತರ ಪದ್ಯಗಳು – ತಡವಾಗಿ)

  ಆ ಗಣಿತದ ಬಿಂದು ತಳದ
  ಮೇಗಣ ತಾಣದೊಳಿದಲ್ಲ ವಸ್ತುವದಕದೇ-
  ಯಾಗರವು ಪೂರ್ಣ ಚುಕ್ಕಿಯು
  ಸಾಗುತೆತಾನಾಗೆ ರೇಖೆಗಂತ್ಯವದಿಲ್ಲಂ ।।

  ( ಆಕಾರ ರೇಖೆ ಕೂಡಿದು
  ದೀ ಕೋನ ತ್ರಿಭುಜ ಬಂಧದೊಳು ಚದುರಂಗಂ ।
  ಸಾಕರದೀ ವಿಚಿತ್ರವ
  ದೇಕೋ ಚಕ್ರಮಿದು ರೇಖೆ ಬಿಂದುವ ಸುತ್ತಲ್ ।। )

  ಅಗಣಿತಮಿದು ರೇಖಾ ಬಿಂ-
  ದು ಗುಣಿತವದನಂತ ಬಾಹು ಬಂಧದ ಮಣಿತಂ ।
  ಸಗುಣ ಘನಗೋಲ ತತ್ತ್ವಂ
  ತ್ರಿಗುಣಾತೀತ ಗುರುವಿಂದೆ ಪರಿಧಿಯ ಗಣಿತಂ ।।

 34. ಪೃಥ್ವೀ || ಜಯಾಹ್ವಯಸುವತ್ಸರೇ ಪ್ರಥಮಮಾಸಿ ಷಷ್ಠ್ಯಾಂ ತಿಥೌ
  ಸಮುದ್ರವಿಧುಖಾಕ್ಷಿಭಿರ್ಗಣಿತಹಾಯನೇ ಕ್ರೈಸ್ತಕೇ |
  ಗಣೇಶಪರಿಪೋಷಿತಂ ಕವಿವಿತಾನಸಂಸೇವಿತಂ
  ಮುದಾವಿಶಮಹಂ ಸಖೇ ರುಚಿರಪದ್ಯಪಾನಾಲಯಮ್ ||

  • ಪ್ರವಿಶ್ಯ ಕವನಾಲಯಂ ಭಜ ವಯಸ್ಯ ! ರಸ್ಯಾದ್ವಯಂ
   ವಚೋsರ್ಥಕಮನಾಕುಲಂ ಸುಕವಿಮಿತ್ರಪದ್ಯಾಕುಲಮ್ |
   ಗಣೇಶ ಇತಿ ಸಂಜ್ಞಿತೋ ಭವತಿ ಯತ್ರ ದೌವಾರಿಕೋ
   ವಿವಿಕ್ಷುಯುವಭಾರತೀಚರಣಚಾರಣೋsಕಾರಣಮ್ ||

 35. ವಸಂತಾಗಮನ :- ರಥೋದ್ಧತಾ ||

  ಪಲ್ಗಳುಂ ಪೊಳೆವ ರತ್ನಗಳ್ಗಡಾ
  ಫಾಲ್ಗುಣಂ ಕಳೆದು ಚೈತ್ರ ಬಂದಿರಲ್ |
  ಸಲ್ಗುಮಂಗಕೆ ತುಷಾರವಲ್ಗುಕಂ
  ಗೆಲ್ಗೆ ಭೃಂಗಗುಣಘೋಷಪಾಟವಂ ||

  ವಲ್ಗುಕಂ – ಚಂದನಂ

  ರಾಜಶೇಖರನ ಕರ್ಪೂರಮಂಜರೀ ಸಟ್ಟಕದ ಪದ್ಯವೊಂದನ್ನು ಆಧರಿಸಿ ಬರೆದದ್ದು. ಅದು ಇಂತಿದೆ –
  ಛೋಲ್ಲ0ತಿ ದಂತರಅಣಾಇ ಗಏ ತುಸಾರೇ
  ಈಸೀಸ ಚಂದನರಸಮ್ಮಿ ಮಣ0 ಕುಣ0ತಿ |
  ಏಣ್ಹಿಂ ಸುವಂತಿ ಘರಮಜ್ಜಿಮಸಾಲಿಆಸು
  ಪಾಅಂತ ಪುಂಜಿಅಪಡಂ ಮಿಹುಣಾಇ ಪೇಚ್ಛ ||

  • ಪದ್ಯವೂ ಕಲ್ಪನೆಯೂ ಚೆನ್ನಾಗಿವೆ. ಹಳಗನ್ನಡದ ನಿಟ್ಟಿನಿಂದ ಸ್ವಲ್ಪ ಸವರಣೆಗಳು:
   ಹಳಗನ್ನಡದಲ್ಲಿ ಯಾವುದೇ ಅಕಾರಾಂತ-ಸಂಸ್ಕೃತಪದವು ಪ್ರಥಮವಿಭಕ್ತಿಯಲ್ಲಿ ಬಂದಾಗ ಬಿಂದುಪೂರ್ವಕವಾಗಿರುತ್ತವೆ. ಉದಾ: ರಾಮಂ, ರಥಂಗಳ್ ಇತ್ಯಾದಿ.
   ಹೀಗಾಗಿ ನಿನ್ನ ಪದ್ಯದ ಪೂರ್ವಾರ್ಧವು ಹೀಗಿದ್ದಲ್ಲಿ ಮತ್ತೂ ಯುಕ್ತ:
   ಪಲ್ಗಳುಂ ಪೊಳೆವ ರತ್ನರಾಜಿಗಳ್
   ಫಾಲ್ಗುನಂ ಕಳೆದು ಚೈತ್ರಮೊಪ್ಪಿರಲ್ |

 36. ಮೊನ್ನೆ ಧಾರವಾಡದಲ್ಲಿ ಭಾರೀ ಅಡ್ಡಮಳೆ ಸುರಿಯಿತು, ಆಗ ಬಂದ ಕಲ್ಪನೆಯ ಪದ್ಯರೂಪ – ಮೇಘವಿಸ್ಫೂರ್ಜಿತಾ ವೃತ್ತದಲ್ಲಿ

  ರಸಾಕಾಂತಾಂ ದೃಷ್ಟ್ವಾ ಗಗನರಮಣೋsತ್ಯುಗ್ರಘರ್ಮಾಭಿಭೂತಾಂ
  ಪ್ರಿಯಾಕ್ಲೇಶಾತ್ಖಿನ್ನೋ ಜಲದವಸನೈಶ್ಛನ್ನವಕ್ತ್ರಃ ಶುಶೋಚ |
  ತತಸ್ತಸ್ಯಾಸ್ತಾಪಂ ಶಮಯಿತುಮಸೌ ವಾರಿಧಾರಾ ವವರ್ಷ
  ಭುವೋ ನೀರಕ್ಷೌಮಂ ಕಲಯಿತುಮಮೂ ವಾನಸೂತ್ರಾಣಿ ಭಾಂತಿ ||

  (ಉಗ್ರತಾಪದಿಂದ ಬಳಲಿದ ತನ್ನ ಪ್ರಿಯೆ ಭೂರಮಣಿಯ ಕ್ಲೇಶವನ್ನು ನೋಡಲಾಗದೇ ಆಕಾಶನು ಕಪ್ಪು ಮೋಡಗಳೆಂಬ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಕೊಂಚ ಹೊತ್ತು ದುಃಖಿಸಿದನು. ನಂತರ ಆಕೆಯ ತಾಪವನ್ನು ಕಳೆಯಲು ನೀರಧಾರೆಗಳನ್ನು ಸುರಿಸಿದನು. ಆ ಧಾರೆಗಳಾದರೋ ಭೂಕಾಂತೆಗೆ ಜಲದುಕೂಲವನ್ನು ನೇಯ್ದುಕೊಡಲು (ಆಕಾಶನು ಇಳಿಬಿಡುತ್ತಿರುವ) ರೇಷ್ಮೆಯ ನೂಲುಗಳೋ ಎಂಬಂತೆ ತೋರುತ್ತಿವೆ. )

  • ತುಂಬ ಸುಂದರವಾದ ಕಲ್ಪನೆ; ಪದ್ಯಪದ್ಧತಿಯೂ ಸೊಗಸಾಗಿದೆ. ಮೇಘವಿಸ್ಫೂರ್ಜಿತದಂಥ (ಇದು ಸ್ತ್ರೀಲಿಂಗದ ಪದವಲ್ಲ) ದುಷ್ಕರವೂ ವಿರಳಪ್ರಚುರವೂ ಆದ ವೃತ್ತವನ್ನು ಬಲುಚೆನ್ನಾಗಿ ನಿರ್ವಹಿಸಿದ್ದೀರಿ! ಅಭಿನಂದನೆಗಳು. ಆದರೆ ಮೂರನೆಯ ಪಾದಾಂತ್ಯದಲ್ಲಿ ಗುರುವು ಬರಲೇಬೇಕು. ಈ ಬಗೆಗೆ ಸ್ವಲ್ಪ ತಿದ್ದುಪಡಿಯು ಸಾಧ್ಯವಿದ್ದಲ್ಲಿ ನೋಡಿರಿ.

   • ಧನ್ಯವಾದಗಳು ಸರ್.
    ನಾಲ್ಕನೇ ಪಾದದ ಮೊದಲ ಪದ ‘ಭುವೋ’ ಎಂಬುದನ್ನು ‘ಕ್ಷಿತೇಃ’ ಎಂದು ತಿದ್ದುತ್ತೇನೆ. (ಕ್ಷಿತೇರ್ನೀರಕ್ಷೌಮಂ).. ಆಗ ಮೂರನೇ ಪಾದದ ಅಂತ್ಯವರ್ಣವು ಗುರುವಾಗುತ್ತದೆ. ಸಮೀಚೀನವೇ ?
    ವೃತ್ತರತ್ನಾಕರದಲ್ಲಿ ‘…………..ಮೇಘವಿಸ್ಫೂರ್ಜಿತಾ ಸ್ಯಾತ್’ ಎಂದು ಇದ್ದದ್ದರಿಂದ ಸ್ತ್ರೀಲಿಂಗ ಪದವೆಂದುಕೊಂಡಿದ್ದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)