Mar 222014
 

ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳೆಸಿ ದುಷ್ಟರನ್ನು ನಿಂದಿಸುವ ಪದ್ಯವನ್ನು ರಚಿಸಿರಿ.

 

  61 Responses to “ಪದ್ಯಸಪ್ತಾಹ ೧೦೧: ದತ್ತಪದಿ”

  1. ಕಾಲಿಕ್ಕರ್ತಿಗೆಯಾರ್ತಮಾನಸವಿಶುದ್ಧೋದಾಶಯಕ್ಷೋಭೆಯಂ
    ವ್ಯಾಲಂ ಗೈದಪನಂತೆ ಚೂಳಿಯೊಳು ತಾನಿಕ್ಕರ್ಚಿದಂ ಕೈಗಳಂ
    ಪಾಲಂ ಭ್ರಾತೃಕನಿಂದೆ ರೋಷದಿನೆ ಕುಕ್ಕರ್ಧೋರುವಂ ತಟ್ಟಿದಂ
    ಕಾಲಂ ಸಕ್ಕ ರಣಾಂಗಣಂ ಪೊಸೆಯೆ ದುಷ್ಟರ್ಕಳ್ಗದಾರ್ ರಕ್ಷಿಪಂ

    ಕಾಲಿಕ್ಕರ್ತಿಗೆ – ಕಾಲಿಕ್ಕಿ ಅರ್ತಿಗೆ – ಕಾಲಿಕ್ಕಿ ಅತ್ತಿಗೆ
    ಉದಾಶಯ – ಕೆರೆ
    ಚೂಳಿ – ತುರುಬು
    ತಾನಿಕ್ಕರ್ಚಿದಂ – ತಾನಿಕ್ಕಿ ಅರ್ಚಿದಂ
    ಕುಕ್ಕರ್ಧೋರುವಂ – ಕುಕ್ಕೆ ಅರ್ಧ ಉರುವಂ
    ಸಕ್ಕ – ಸಮನಾದ, ತಕ್ಕುದಾದ

    ಅತ್ತಿಗೆಯ (ದ್ರೌಪದಿಯ) ಮನಸ್ಸಿನ ಶುದ್ಧವಾದ ಸರೋವರನ್ನು ಕಾಲಿಟ್ಟು (ಕದಡಿ) ಕ್ಷೋಭೆಯನ್ನು (ದು:ಶ್ಶಾಸನನು) ಮಾಡುತ್ತ ಅವಳತುರುಬಿನಲ್ಲಿ ಕೈಯಿಟ್ಟನು, ತಮ್ಮನು ಅವಳನ್ನು ನೆಲಕ್ಕೆ ಕುಕ್ಕಲು ಅರ್ಧ ತೊಡೆಯನ್ನು ಪಾಲನು (ದುರ್ಯೋಧನನು) ತಟ್ಟಿದನು. ಕಾಲನು ಸಮನಾದ (ಇವರ ದುಷ್ಟತನಕ್ಕೆ ಸಮನಾದ) ರಣಾಂಗಣವನ್ನು ಹೊಸೆಯೆ ಇವರನ್ನು ರಕ್ಷಿಸುವರಾರು.

    ವಿಸಂಧಿ ದೋಷಗಳು ದತ್ತಪದಿ ನಿಭಾಯಿಸುವಲ್ಲಿ ಸುಳಿದಿವೆ ಎನಿಸುತ್ತದೆ 🙁

    • ಸೋಮ, ಪ್ರಯತ್ನವೇನೋ ಸ್ತುತ್ಯ. ವಸ್ತುವೂ ಉದಾರಗಂಭೀರ. ಆದರೆ ಕಾಲಿಕ್ಕಿ + ಅರ್ತಿಗೆ (ಇದು ಅಸಾಧುಶಬ್ದ. ಅಳ್ತಿಗೆ ಎಂಬುದು ಹಳಗನ್ನಡದ ರೂಪ. ಅತ್ತಿಗೆ ಎನ್ನಲೂ ಬಹುದು) = ಕಾಲಿಕ್ಕಿ ಯಳ್ತಿಗೆ ಎಂದಾಗುತ್ತದೆ.ಇದೇ ರೀತಿ ತಾನಿಕ್ಕೆ ಯರ್ಚಿ ಮತ್ತು ಕುಕ್ಕೆ ಯರ್ಧೋ… ಎಂದು ಸಂಧಿಗಳಾಗುವುವು. ಕೇವಲ ನೋಡು + ಅಲ್ಲಿ = ನೋಡಲ್ಲಿ ಬಂದ + ಅವನನ್ನು = ಬಂದವನನ್ನು ಎಂಬಲ್ಲಿ ಲೋಪಸಂಧಿಯಾಗುತ್ತದೆ.

      • ಗಣೇಶ್ ಸರ್, ಧನ್ಯವದಗಳು. ಪದ್ಯದ ವಿಸಂಧಿ ದೋಷಗಳನ್ನು ಸವರಿಸುವುದಕ್ಕೆ bomb and rebuild ಮಾಡಬೇಕಾಗಿದೆ ಪ್ರಯತ್ನಿಸುತ್ತೇನೆ 🙂

  2. ಪರರನ್ನಿಕ್ಕರಸಾಳ್ತನಂ ನಡೆಪರೀಸಕ್ಕರ್ತಿಗಾಹಾರಮಾ
    ಗಿ ರಸಾಕಾಂಕ್ಷೆಯೊಳಿಂತು ಮುಗ್ಧಜನರಂ ಪಾಲಿಕ್ಕರಲ್ವಾತಿನೊಳ್
    ಧರಮಂ ಪೊಯ್ದಸುಗೊಂಡು ದೇಹಪಲಮಂ ಕುಕ್ಕರ್ದಿಪರ್ ಪೊಟ್ಟೆಯೊಳ್
    ವಿರಜಾಸ್ನಾನಮದೇಂ ನರಾಸ್ಯರಸಮುಂ ತಾ ಪೀರ್ವುದೇಂ ದೋಷಮಂ ?

    ಪರರನ್ನಿಕ್ಕರಸಾಳ್ತನಂ – ಪರರನ್ನು + ಇಕ್ಕಿ + ಅರಸಾಳ್ತನಂ – ಪರರನ್ನು ಕೊಂದು ಅಧಿಕಾರವನ್ನು
    ಈಸಕ್ಕರ್ತಿಗಾಹಾರಂ – ಈಸು + ಅಕ್ಕು + ಅರ್ತಿಗೆ + ಆಹಾರಂ – ಇಷ್ಟು ಸಂಪತ್ತಿನ ಆಸೆಗೆ ಆಹಾರ
    ಪಾಲಿಕ್ಕರಲ್ವಾತಿನೊಳ್ – ಪಾಲಿಕ್ಕಿ + ಅರಲ್ವಾತಿನೊಳ್ – ಹಾಲನ್ನಿಕ್ಕಿ ಹೂವಿನಂತಹ ಮಾತುಗಳಿಂದ
    ಕುಕ್ಕರ್ದಿಪರ್ – ಕುಕ್ಕಿ + ಅರ್ದಿಪರ್ – ಕುಕ್ಕಿ ಅಡಗಿಸುವರು
    ದೇಹಪಲ – ದೇಹದ ಮಾಂಸ
    ಧರ – ವಿಷ
    ನರಾಸ್ಯರಸ – ಎಂಜಲು

    ಪರರನ್ನು ಕೊಂದು ಅಧಿಕಾರವನ್ನು ನಡೆಸುವವರು ಮತ್ತು ಸಂಪತ್ತಿನ ಆಸೆಗಾಗಿ ಮುಗ್ಧಜನರನ್ನು ಹೂವಿನ ಮಾತುಗಳಿಂದ ಮರುಳುಮಾಡಿ ಹಾಲಿನಲ್ಲಿ ಹಾಲಾಹಲವನ್ನು ಬೆರೆಸಿ ಕೊಂದು ಕಡೆಗೆ ಆ ಶವದ ಮಾಂಸವನ್ನೂ ಬಿಡದಂತೆ ವರ್ತಿಸುವ ಲೋಭಿಗಳು ಮತ್ತು ದುರಾಚಾರಿಗಳಿಗೆ ಗಂಗಾಸ್ನಾನವಿರಲಿ, ಎಂಜಲಿನ ಸ್ನಾನವೂ ಅವರ ಕುಕೃತ್ಯಾರ್ಜಿತ ದೋಷಗಳನ್ನು ಹೀರುವಲ್ಲಿ ಅಸಮರ್ಥವಾದೀತು.

    • ಸೋಮನ ಪದ್ಯದ ಸಂಧಿದೋಷಗಳೇ ಇಲ್ಲಿಯೂ ಬಂದಿವೆ. ಸವರಿಸುವುದಾಗಲಿ.

      • ಗುರುಗಳೇ,
        ಕೀಲಕಗಳನ್ನು ತರುವ ಉತ್ಸಾಹದಲ್ಲಿ ವಿಸಂಧಿ ದೋಷಗಳನ್ನು ಗಮನಿಸಲಿಲ್ಲ. ಸಂಧಿಪ್ರಯತ್ನವು ಪದ್ಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ನಡೆದಿರುವುದರಿಂದ, ಈ ಪದ್ಯವನ್ನು ಯಥಾವತ್ ಸವರಿಸುವುದು ಕಷ್ಟವಾದೀತು. ಅಲ್ಲದೇ ಪದ್ಯದಲ್ಲಿ ಅಂತಹ ಕವಿತಾವಿಶೇಷಣಗಳಿಲ್ಲದಿರುವುದು ಆನಂತರದಲ್ಲಿ ಸ್ವತಃ ನನ್ನ ಗಮನಕ್ಕೇ ಬಂದಿದೆ. ಆದ್ದರಿಂದ ಪದ್ಯದ ವಸ್ತುವಿನಿಂದ ಹಿಡಿದು ಎಲ್ಲವನ್ನೂ ಬದಲಿಸಿ ಬೇರೊಂದು ಅಲಂಕಾರಪ್ರಪೂರ್ಣವಾದ ಪದ್ಯವನ್ನು ರಚಿಸಲು ಪ್ರಯತ್ನಿಸುತ್ತೇನೆ. 🙂

  3. ಪಾಲನಿಕ್ಕರ್,ಬಿಲದೆ ಜೀವಿಪ (ನಿಕ್ಕರ್)
    ಕಾಲಸರ್ಪಂ ಪಸಿಯಲಿಕ್ಕರ್,(ಲಿಕ್ಕರ್)
    ಕೋಲಿನಿಂದಪ್ಪಳಿಸಿ ದುಷ್ಟರ್ ಸಂತಸಂಗೊಂಬರ್ |
    ಫಾಲಲೋಚನನಾಲಯದೆ,ಪರಿ-
    ಪಾಲಿಸುತೆ,ಸಕ್ಕರೆಯ ನೀಡುತೆ,(ಸಕ್ಕರ್)
    ಮಾಲೆಯಿಕ್ಕುತೆ,ಕಲ್ಲಿನುರಗನ ಪೂಜಿಪರ್,ಕುಕ್ಕರ್ ||( ಕುಕ್ಕರ್)

    ಕ್ಷಮಿಸಿರಿ,ವೃತ್ತದಲ್ಲಿ ರಚಿಸುವುದು ಕಷ್ಟವಾಯಿತು.ಷಟ್ಪದಿಯಲ್ಲಿ ಬರೆದರೂ “ಸಕ್ಕರ್”-ಸಕ್ಕರೆಯಾಗಬೇಕಾಯಿತು 🙁

    • ಪದ್ಯವೂ ಅದರ ಭಾಷೆ-ಬಂಧಗಳೂ ಚೆನ್ನಾಗಿವೆ.ವೃತ್ತವನ್ನು ಬರೆಯಲೇಬೇಕೆಂಬ ಆಗ್ರಹವೇನಿಲ್ಲ. ಅವುಗಳನ್ನು ಪಳಗಿಸಿಕೊಂಡರೆ ಮತ್ತಿನ್ನಾವ ಛಂದಸ್ಸಿನಲ್ಲಿಯೂ ರಚಿಸುವ ಬಲವು ಬರುವುದೆಂದೇ ಅಷ್ಟು ಒತ್ತಾಯಿಸುವುದಷ್ಟೇ 🙂
      ಸಕ್ಕರೆ ಎಂಬ ರೂಪದಿಂದ ಸಕ್ಕರ್ ಎನ್ನವುದು ನಿರೂಪಿತವಾದಲ್ಲಿ ತಪ್ಪೇನಿಲ್ಲ. ಇಂಥ ಕ್ರಮವು ಅಂಗೀಕೃತವೇ ಆಗಿದೆ.

      • ಗುರುಗಳೆ,ಧನ್ಯವಾದಗಳು.ಸಕ್ಕರೆಯ ಕುರಿತಾದ ಸಂದೇಹ ನಿವಾರಣೆಯಾಯಿತು.ನೀವೆಂದಿರುವುದು ಸರಿ,ಸಾಧ್ಯವಾದಷ್ಟು ಮಟ್ಟಿಗೆ ವೃತ್ತಗಳಲ್ಲಿ ಬರೆಯಲು ಪ್ರಯತ್ನಿಸುವೆ.

  4. ನಗೆಯಂ ಬೀರುತ ನಾಟ್ಯಮಾಡುಗುಮಿವರ್ ಮಾತಾಡಲಿಕ್ಕರ್ಹರೇಂ?
    ಬಗೆಗಂ ಕೊಳ್ಳಿಯನಿಕ್ಕರಾದೊಡಮಿವರ್ ನೋವನ್ನು ತಂದೊಡ್ಡರೇಂ?
    ಜಗವಂ ಕೊಂಬ ಚಿರಾಸ್ಥಿಗಾಣ್ಮರಿವರುಂ ಮೇಣ್ ಕುಕ್ಕರಂ ಪೋಲ್ವರುಂ
    ನೆಗೆದುಂ ಮಂತ್ರಿಯ ತಾಣಮೇರಿ ಮೆರೆವರ್ ದೇಸಕ್ಕರಂ ಬಲ್ಲರೇಂ?

    ದೇಸಕ್ಕರ=ದೇಸ,ಅಕ್ಕರ or ದೇಶದ ಅಕ್ಕರ
    ಕುಕ್ಕರ=ನಾಯಿ
    ಕೊಳ್ಳಿಯನಿಕ್ಕರ್+ಆದೊಡಂ+ಇವರ್=ಕೊಳ್ಳಿಯನಿಕ್ಕರಾದೊಡಮಿವರ್

    • ಕೊಳ್ಳಿಯನಿಕ್ಕಿ + ಕರಂ = ಕೊಳ್ಳಿಯನಿಕ್ಕರಂ ಎಂದು ಸಂಧಿಯಾಗದು. ಅದು ಹಾಗೆಯೇ ಉಳಿಯುತ್ತದೆ.

      • ಸರ್,ಈಗ ಸಾಲನ್ನು ಸವರಿ ಸಂಧಿ ಮಾಡಿದ್ದೇನೆ ಎಂದುಕೊಂಡಿದ್ದೇನೆ. 🙂

        • ” ಬಗೆಗಂ ಕೊಳ್ಳಿಯನಿಕ್ಕರಾದೊಡ…..” ಎಂದು ತಿದ್ದಿದರೆ ಎಲ್ಲ ಸರಿಯಾದೀತು.

  5. ಪಾಲಿಕ್ಕರಾರ್ಗಮೀ ಖಲ
    ರಾಲಿಸಲಾರರಿನಿತುಂ ಪಣಮನಿಕ್ಕರೆನಲ್
    ಲಾಲಿಸೆನಲ್ಕುಕ್ಕರ್ ತಾಂ
    ಬಾಳಿಸರಾರಂ ಜಸಕ್ಕರಾತಿನಿಭರ್ಕಳ್
    (ಪಾಲಿಕ್ಕರ್ (ಪಾಲು;share / ಹಾಲು) ಆರ್ಗಂ ಈ ಖಲರ್ ‘ಇನಿತುಂ ಪಣಮಂ ಇಕ್ಕರ್’ ಎನಲ್ ಆಲಿಸರಾರರ್. ಲಾಲಿಸಿ ಎನಲ್ಕೆ ಉಕ್ಕರ್ (ಹೊಗಳಿಕೆಗೆ ಉಬ್ಬದವರು) ತಾಂ ಜಸಕ್ಕೆ ಅರಾತಿನಿಭರ್ಕಳ್ ಆರಂ ಬಾಳಿಸರ್ )

    ಪಾಲಿಕ್ಕರ್ ಎಂಬುದು ಸರಿಯಾಗುತ್ತದೆಯಾ ಅಥವಾ ‘ಪಾಲನಿಕ್ಕರ್’ ಎಂದೇ ಆಗಬೇಕಾ? ಉಕ್ಕರ್ ಎಂಬುದು ಸಾಧು ರೂಪವೇ?

    • ಪದ್ಯವು ಸಲೆ ಸೊಗಸಾಗಿದೆ.ಯಾವುದೇ ದೋಷವಿಲ್ಲ. ಕಂದದಂಥ ಅಲ್ಪಕುಕ್ಷಿಬಂಧದಲ್ಲಿ ಇಷ್ಟು ಚೆನ್ನಾಗಿರುವ, ಅರ್ಥಪೂರ್ಣವೂ ಆದ ಪದ್ಯವನ್ನು ರಚಿಸಿರುವುದು ನಿಜಕ್ಕೂ ಮೆಚ್ಚುವಂಥದ್ದು. ಅಲ್ಲದೆ ಉಕ್ಕರ್ ಇತ್ಯಾದಿ ನವೀನರೀತಿಯ ಪದಚ್ಛೇದಗಳಿಂದ ಉದ್ದಿಷ್ಟವಾದ ದತ್ತಪದವನ್ನು ಉನ್ಮೀಲಿಸುವ ಯತ್ನ ಸುತರಾಂ ಸ್ತುತ್ಯರ್ಹ.

    • ಕೊಪ್ಪಲತೋಟ ಬಹಳ ಚೆನ್ನಾಗಿದೆ ನಿನ್ನ ಪದ್ಯ 🙂

  6. ಚದಪಡಿಪರು ಕಾಣ್, ಕುಕ್ಕರನಿಕ್ಕರ್
    ಬಡಿಸರುವೆಂದುಂ ಬೆರೆಸಕ್ಕರದಿಂ ।
    ಕಡುಹಿತ ನೆಂಟರು ತಾವ್ ಕಾಲಿಕ್ಕರ್
    ಕಡೆಗಣಿಸಿರಲನುಬಂಧವ ನಿಂತುಂ ।।

    (ನಂಬಿ ಅದು ನಾನಲ್ಲ, ಪರೀಕ್ಷಿಸುವುದಾದರೆ ಮನೆಗೆ ಬನ್ನಿ!!)

    • ದತ್ತಪದಗಳ ನಿರ್ವಾಹ ಬಲುಮಟ್ಟಿಗೆ ಚೆನ್ನಾಗಿದೆ. ಆದರೆ ಎರಡನೆಯ ಸಾಲಿನ ಅರ್ಥ ಸ್ಪಷ್ಟವಾಗಲಿಲ್ಲ.

      • ಧನ್ಯವಾದಗಳು ಗಣೇಶ್ ಸರ್ ,
        ನೆಂಟರು ಬಂದಾಗ ಅಡುಗೆಮಾಡಲು(ಕುಕ್ಕರ್ ಇಡಲು) ಹಿಂದೆಮುಂದೆ ನೋಡುವರು, ಮಾಡಿದ ಅಡುಗೆಯನ್ನೂ ಅಕ್ಕರೆಯಿಂದ ಬಡಿಸರು, ಅಂಥವರ ಮನೆಗೆ ನೆಂಟರು ಕಾಲಿಕ್ಕುವರೇ?! ಎಂಬ ಅರ್ಥದಲ್ಲಿ ಬರೆದದ್ದು.

  7. ಕುಕ್ಕರ ಬಡಿವೀ, ಸಿಟ್ಟಿನ ಗಂಡಿದ-
    ನಿಕ್ಕರದಾರೀ ಕುಮರಿಗದೋ!
    ಸಕ್ಕರೆಯಂತಹ ಮಾತುಗಳಾಡುತ-
    ಲಿಕ್ಕರೆ? ಕಂಟಕ ಬಾಳಿನೊಳು!

    • ಸಕ್ಕರಪೂಸಿತ ಅಂದರೆ ಏನು? ಸಕ್ಕರೆಯ ಲೇಪವುಳ್ಳದೆಂದೇ ಅರ್ಥ? ಪೂಸಿತ ಎಂಬುದು ಅಸಾಧುಶಬ್ದ. ಪೂಸು ಎಂಬುದು ಅಪ್ಪಟ ಕನ್ನಡದ ಪದ. ಪೂಸಿತ ಎಂದು ಅದಕ್ಕೆ ಸಂಸ್ಕೃತದ ಭೂತಕೃದಂತಪ್ರತ್ಯಯವನ್ನು ಹಚ್ಚಲಾಗದು:-)

      • ಹೌದು ಸರ್ 🙂 ಅದೇ ಅರ್ಥವನ್ನೇ ನಾನು ಬಯಸಿದ್ದು. ಈಗ “ಸಕ್ಕರೆಯಂತಹ”(ಸಿಹಿಯಾದ ) ಎಂದು ಮಾಡುವೆ.(ಸಕ್ಕರೆ ಪೂಸಿದ ಎಂದರೂ ಸರಿಯೇ?)
        ಮಾತುಗಳಾಡುತಲಿ+ಇಕ್ಕರೆ?
        ಇಕ್ಕರೆ? ಎಂದರೆ ಇಟ್ಟರೆ? ಎಂಬ ಅರ್ಥವೇ?,ಸರ್.

  8. ಕುಕ್ಕರಬಡಿ ತಮ್ಮ ಸಕ್ಕರೆ ಗಿಡುಗಿದ
    ಲಿಕ್ಕರಿಸ್ (licorice) ತುಂಡನೊಂದೀವೆ ಹಿರಿದಾದ
    ನಿಕ್ಕರು ತಂದು ನಿನಗೀವೆ

    ಇದು ದುಷ್ಟನಿಂದೆ ಸರ್ವಥಾ ಅಲ್ಲ. Childhood Obesityಯ ಮೇಲೆ ಒಂದು ಟೀಕೆಯಷ್ಟೆ. ಆದರೆ ಇದನ್ನು ಬೆಳೆಯಗೊಟ್ಟ ಹಿರಿಯರನ್ನು ದುಷ್ಟರೆನ್ನುವುದಾದರೆ ನಾನು ಗೋಣು ಹಾಕಲು ಸಿದ್ಧ.

    • Ha ha… 🙂

      After long time jiveM, welcome back

    • ’ಕುಕ್ಕರಬಡಿ” ಎನ್ನಲು ಅವಕಾಶವೆಲ್ಲಿ?

      ಅನಿತೊಂದುs ಹಿರಿನಿಕ್ಕsರನು ತೊಟ್ಟುಕೊಳುವsವs-
      ನನು ಕುಳ್ಳಿರೆನಲಿಕ್ಕಾ ಹೈದs|ನೆಂದಾರೆs
      ಎನಿತಾರೆs ತಾ ನಿಂದಿಹನೇನೈ||

    • Thanks!, Soma. ಒಮ್ಮೊಮ್ಮೆಯಾದರೂ ಚಿಮ್ಮಬೇಕಾಗುತ್ತೆ ಸುಮ್ಮನಿದ್ದವಗೆ ಬಲುಕಷ್ಟ ರಂಪಣ್ಣ ನೆಮ್ಮದಿಯಿಲ್ಲವಾಗುತ್ತೆ

  9. ಹೆಂಡದ ಅಮಲಿನಲ್ಲಿ ತೂರಾಡುವರು, ಎಣ್ಣೆ-ಹಿಟ್ಟು-ಸಕ್ಕರೆ ಇತ್ಯಾದಿ ಧಾನ್ಯವೇನನ್ನೂ ಕಾಲಕಾಲಕ್ಕೆ ಮನೆಗೆ ತಂದಿಕ್ಕರು, ಕಾವ ನಾಯಿಗೆ ಹಾಲಿಕ್ಕರು, ಹೊಗಳಿಕೆಗೆ ಉಬ್ಬುವರು.
    ವಸಂತತಿಲಕ|| ಓಲಾಡುವರ್ ಮದಿರೆಮತ್ತೊಳುಂ, ಏನನಿಕ್ಕರ್
    ತೈಲ-ಕ್ಷುದಂ (flour) ಋತದೆ (regularly) ಸಕ್ಕರೆಯಂ ಗೃಹಕ್ಕಂ|
    ಹಾಲಿಕ್ಕರೈ ಭವನರಕ್ಷಕ ಶ್ವಾನಕೆಂದುಂ
    ತೇಲಾಡಲಾಗಸದೆ ಶ್ಲಾಘನಕುಕ್ಕರೇಂ ತಾಂ||

    • ಹಳಗನ್ನಡದ ಬಿಗಿ ತಪ್ಪಿತೆಂಬುದೊಂದೇ ಕೊರತೆಯ ಹೊರತಾಗಿ ನಿಮ್ಮೀ ವಸಂತತಿಲಕವು ನಿಜಕ್ಕೂ ಸದ್ಯದ ದತ್ತಪದೀನವಮಲ್ಲಿಕೆಗೆ ವಸಂತತಿಲಕವೇ ಆಗಿದೆ.

  10. ಸಕ್ಕರವರ್ ಮುಗುದರನಂ ನೆಚ್ಚಿಸಿ
    ಕುಕ್ಕರ್ ಕಾಣ್ ವ್ಯವಹಾರದೊಳುಂ ।
    ಲಿಕ್ಕರ್ ಹಲ್ ಕಿಸಿಯುತೆ ಹಣ ಕಸಿವರು
    ನಿಕ್ಕರವರ ಕಿಸೆಯನೆ ಕಡೆಗುಂ ।।

    “Suck”ಕರ್ = ಹೀರುವವರು
    “Cook”ಕರ್ = ಸುಳ್ಳುಲೆಕ್ಕಬರೆಯುವವರು
    “Lick”ಕರ್ = ಆಸೆಬುರುಕರು
    “Nick”ಕರ್ = ಕತ್ತರಿಸುವವರು

    (ವಿದೇಶಿ ದುಷ್ಟರ ನಿಂದನೆಯಲ್ಲಿನ ಅಪಶಬ್ದಾರ್ಥಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕಾಗಿ ವಿನಂತಿ.)

    • ಅಪಶಬ್ದಗಳನ್ನು ಹೊಟ್ಟೆಗೆ ಹಾಕಿಕೊಂಡರೆ ಅನಾರೋಗ್ಯ ಶತಸ್ಸಿದ್ಧ:-)

    • ಶಬ್ದವನ್ನು ಹೊಟ್ಟೆಗೆ ಹಾಕಿಕೊಳ್ಳುವುದೆ?
      (ಭೇಕಶಬ್ದ=ಕಪ್ಪೆಯ ವಟರು)
      ಶಬ್ದಮನ್ನು ಪೊಡೆಯಿಂದೆ ಪೊರಗಮಟ್ಟುವರು ಕೆಲರು, ಭೇಕ-
      ಶಬ್ದಗೈಯುವರು ತಿಂಬುವಾಗಿತರರೆಂತೊ ಮಂದಿ ನೋಡಲ್|

    • (ಹಯಪ್ರಾಸದ) ದತ್ತ ಪದಗಳಲ್ಲಿ ತೋರಿದ ದುಷ್ಟತನಕ್ಕೆ ಕ್ಷಮೆಯಿರಲಿ.

  11. ಸವಿಸಕ್ಕರೆಯಮಾತಿನಿಂ ಖಳರು ಮೋಸದಿಂ
    ನವೆಸುವರು, ನಗೆಯನಿವರೆಲ್ಲಿಕ್ಕರು?
    ಜವನೆಗಪ್ಪೆಂದಿವರ ಕುಕ್ಕರಿಸಲಾಗನೀ
    ಭುವಿಗೆಸುಖವನ್ನಿಕ್ಕರೆನಿತು ಪೇಳೈ?

    Finally managed write something 🙁 please correct me if there is any mistake.. 🙂

    • ತಡವಾಗಿ ರಚಿಸಿದರೂ ಒಳ್ಳೆಯ ಪದ್ಯವೇ ಹೊಮ್ಮಿದೆ; ಅಭಿನಂದನೆಗಳು. ಮುಖ್ಯವಾಗಿ ದತ್ತಪದಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ಬಗೆ ಸೊಗಸಾಗಿದೆ; ಪದ್ಯಶೈಲಿಯೂ ಚೊಕ್ಕವಾಗಿದೆ.

    • ಜವನೆಗಪ್ಪೆಂದಿವರ = ’ಜವನೆ ಗಪ್ ಎಂದು ಇವರ’ ಎಂದಾದರೆ, ಪ್ರತ್ಯಯಯುಕ್ತಪದದ ನಂತರ space ಕೊಟ್ಟು ’ಜವನೆ ಗಪ್ಪೆಂದಿವರ’ ಎಂದು ಟಂಕಿಸುವುದೊಳ್ಳೆಯದು. ಇಲ್ಲದಿದ್ದರೆ ಅದನ್ನು ’ಜವನೆಗೆ+ಅಪ್ಪೆಂದು+ಇವರ’ ಅಥವಾ ’ಜವೆನೆ+ಕಪ್ಪು+ಎಂದು+ಇವರ’ ಎಂದು ವಿಂಗಡಿಸುವುದಾಗುತ್ತದೆ. ಇಂತಹ ಅರ್ಥಕ್ಲೇಷಕ್ಕೆ ಅವಕಾಶವಿರದಿದ್ದರೂ, ’ಸವಿಸಕ್ಕರೆಯ ಮಾತಿನಿಂ’ ಹಾಗೂ ’ಭುವಿಗೆ ಸುಖವನ್ನಿಕ್ಕರೆನಿತು’ – ಇವುಗಳನ್ನು ಹೀಗೆ ಬಿಡಿಸಿ ಬರೆಯುವುದು ಒಳ್ಳೆಯದು.

      ನಗೆಯನಿವರೆಲ್ಲಿಕ್ಕರು? = ನಗೆಯನಿವರು+ಎಲ್ಲಿ (ತಾನೆ) ಇಕ್ಕರು? = ’ಎಲ್ಲ ಕಡೆಯಲ್ಲೂ ಇಕ್ಕುತ್ತಾರೆ’ ಎಂದಾಗುತ್ತದಲ್ಲವೆ?

      ಉತ್ತರಾರ್ಧದ ಅರ್ಥ ಇಂತೆ?: ಯಮನೆ ’ಗಪ್’ ಎಂದು ಇವರನ್ನು ಕುಕ್ಕರಿಸಲು, ಆಗಳೀ (ನೀ?) ಭುವಿಗೆ ಸುಖವನ್ನಿಕ್ಕರೆನಿತು ಪೇಳೈ? ಅವರ ಲುಪ್ತಿಯೇ ಬುವಿಗೆ ಸುಖ ಎಂಬರ್ಥವೆ?

      • ಸವರಣೆಗಳಿಗೆ ಧನ್ಯವಾದಗಳು ಪ್ರಸಾದುಅವರೆ!

        ಯಮನೂ ಸಹ ಇಂಥವರನ್ನು ಸುಮ್ಮನಿರಿಸಲಾಗುವುದಿಲ್ಲ, ಹಾಗಿದ್ದಾಗ ಇವರು ಭುವಿಗೆ ಸುಖವನ್ನು ಹೇಗೆತಾನೆ ತೋರರು? ಎಂಬರ್ಥದಲ್ಲಿ ಬರೆದಿದ್ದೆ…

  12. Sarvebhyo Namah

    • ಪ್ರಿಯ ಕೇಯೂರ್,ಪದ್ಯಪಾನಕ್ಕೆ ಹಾರ್ದಿಕಸ್ವಾಗತ.
      ನೀವು ಹಿಂದೊಮ್ಮೆ ಪರಮಸುಂದರವಾದರೂ ನನ್ನ ಬಗೆಗಿನ ಮೆಚ್ಚುಗೆಯ ರಚನೆಯಾದ ಕಾರಣ ನನಗೆ ಸ್ವಲ್ಪ ಸಂಕೋಚವನ್ನು ತರುವಂಥ ಅನವದ್ಯವಾದ ಸಂಸ್ಕೃತಪದ್ಯವೊಂದನ್ನು message ಮಾಡಿದವರೇ ಇರಬೇಕೆಂದು ನನ್ನ ನಂಬಿಕೆ. ಆ ಶ್ಲೋಕವಿದೇ ತಾನೆ? :

      ಅದೃಷ್ಟಪೂರ್ವೈಕಸಮಾನಕೃಷ್ಟಿಂ
      ಶತಾವಧಾನಾದ್ಭುತಚಾರುಲೀಲಮ್ |
      ತಮಾರ್ಗಣೇಶಂ ಸುಮಮಾರ್ಗಣೇಶಂ
      ಸ್ವಾಂತೇ ವಸಂತಂ ಚಿರಮಾನತೋsಸ್ಮಿ ||

  13. I have composed a padya according to the above Dattapadas in Shardulavikridita metre… But don’t know how to type it in Kannada script here…
    Please anybody guide me

    • It I is very easy, go here
      http://www.quillpad.in/index.html
      and start typing in the Box given. if you write – Keyur – it will show you – ಕೇಯೂರ್.
      you can copy and paste the same on our website simple. you can also select languages and use the same for kannada or Sanskrit.

      Let us know if you need any info further.

  14. ಪೂಜ್ಯ ಗಣೇಶ ಅವರಿಗೆ ವಂದನೆಗಳು.
    ಹೌದು ಸರ್ , ಸ ಏವಾಹಮ್
    ತಮ್ಮ ಪ್ರತಿಕ್ರಿಯೆಯನ್ನು ಓದಿ ನನ್ನ ಕಂಗಳು ತುಂಬಿ .ಬಂದವು.. ನಾನು ಸತ್ವತಃ ಅತ್ಯಲ್ಪನಾದರೂ ಕೂಡ ಇನ್ನೂ ತಮ್ಮ ಧಾರಣಾಸುರವರ್ತ್ಮದಲ್ಲಿ ಮಿನುಗುತ್ತಿರುವ ಒಂದು ಪುಟ್ಟ ಚುಕ್ಕಿಯಾಗಿರುವೆನೆಂದು ತಿಳಿದು ಧನ್ಯತಾಭಾವ ಮೂಡಿತು.
    ತಮ್ಮ ಆಶೀರ್ವಾದವಿರಲಿ

    • ಮಾಮುದ್ದಿಶ್ಯ ಪ್ರಕಟಿತಮಿತಿ ತ್ವತ್ಕವಿತ್ವಂ ಕಥಂಚಿ-
      ದ್ದೋಷಕ್ಲಿನ್ನಂ ತದಿಹ ಸಹಸಾ ಪದ್ಯಪಾನೇ ಮಿಲಿತ್ವಾ |
      ಪ್ರಾಯಶ್ಚಿತ್ತಂ ಕಲಯಿತುಮಥೋ ಮಿತ್ರ ಕೇಯೂರ ! ತಸ್ಮಾ-
      ದ್ಯಾವಚ್ಛೀಘ್ರಂ ಕವಯ ರಸವತ್ಪದ್ಯರತ್ನಾನಿ ಹಾರ್ದಮ್ ||:-)

      • ತ್ವಾಮುದಿಶ್ಯ ಕೃತತ್ವಾದ್ಭೋಃ ಪದ್ಯಂ ಮೇ ಭಾತಿ ಸುಂದರಮ್ |
        ಕದಾಚಿದ್ವಸ್ತುವೈದಗ್ಧ್ಯಾತ್ ಕುಕವೀ ರೂಷಿತೋ ಭವೇತ್ ||

        ಪ್ರಾಕಟ್ಯ0 ಮೇ ವ್ರಜತಿ ರಸವತ್ಪದ್ಯವಿದ್ಯಾಜ್ಞತೇತಿ
        ಭೀತ್ಯಾಕ್ರಾಂತಸ್ತ್ವಹಮಭವಮೇವ0 ಸ್ಥಿತೇ ಹ್ಯದ್ಯಯಾವತ್ |
        ಪ್ರೋತ್ಸಾಹಂ ತೇ ಜನನಿಸದೃಶಂ ಪ್ರಾಪ್ಯ ಧೈರ್ಯಾನುಬದ್ಧಃ
        ಆತ್ಮನ್ಯಪ್ರತ್ಯಯಭೃದಪಿ ಕುರ್ಯಾಂ ಪ್ರಯತ್ನಂ ಕವಿತ್ವೇ ||

        • ನಿಮ್ಮ ಪದ್ಯಭಾಷೆಯು ಚೆನ್ನಾಗಿದೆ. ಮಂದಾಕ್ರಾಂತದಂಥ ಕಠಿನವೃತ್ತದ ನಿರ್ವಾಹಕ್ಕೆ ಎದೆಯೊಡ್ಡಿದ ಸಾಹಸವೂ ಸ್ತುತ್ಯ. ನಿಮಗೆ ನಾನು ಯತಿನಿಯಮದ ಬಗೆಗೆ ಸ್ವಲ್ಪ ಹೇಳುವುದಿದೆ.
          ದೂರವಾಣಿಯಲ್ಲಿ ಮಾತನಾಡೋಣ.

  15. ಕನ್ನಡ ಬರವಣಿಗೆಯ ದಾರಿ ತೋರಿದ ಶ್ರೀಶ ಕಾರಂತರಿಗೆ ತುಂಬ ಧನ್ಯವಾದಗಳು.

  16. ದತ್ತಪದಿಗೆ ಮನಬಂದಂತೆ ಏನೇನೋ ಬರೆದಿದ್ದೇನೆ. ದಯವಿಟ್ಟು ಮನ್ನಿಸಿ.

    ಸೊಕ್ಕಿಂ ಸೌಹೃದಸಾಂದ್ರಸೌಧವಿಧಿಗಂ ಕಲ್ಲಿಕ್ಕರೆದುಂ ಖಳರ್
    ದಕ್ಕರ್ ಪೆತ್ತರಿಗೆಂದು ಸತ್ಪಥದಿ ಕಾಲನ್ನಿಕ್ಕರೆ0ದುಂ ಗಡ |
    ಕುಕ್ಕರ್ ಮಾನಸವಸ್ತ್ರಮಂ ನಿಜರಜಃಪ್ರಕ್ಷಾಲನಗ್ರಾವಕಂ
    ಠಕ್ಕರ್ ಭೂಭರರಕ್ಕಜಂ ಜಗತಿಯೊಳ್ ಸಕ್ಕರ್ ಧನಾಭೋಗದೊಳ್ ||

    ಕಲ್ಲಿಕ್ಕರ್ – ಶಿಲಾನ್ಯಾಸ ಮಾಡರು
    ಭೂಭರರ್ – ಭೂಮಿಗೆ ಭಾರಭೂತರು ಅಥವಾ (ಇಂದಿನ) ರಾಜರು ಎಂದೂ ಆಗಬಹುದು.
    ಸಕ್ಕರ್ – ಶಕ್ರರ್ ಎಂಬುದರ ತದ್ಭವರೂಪವೆಂದು ಕಲ್ಪಿಸಿಕೊಂಡಿದ್ದೇನೆ

    ಸಾಧ್ವಸಾಧುಗಳ ಸಾಧ್ವಸವಿದ್ದೇ ಇದೆ.

    • ಮೂರನೆಯ ಪಾದ ಅತಿಶಯವಾಗಿದೆ. ತಮ್ಮ ಪರಿಚಯ ತಿಳಿಸಿ.

      • ಪ್ರಿಯ ಪ್ರಸಾದು,
        ದಿಟ, ನೀವೆಂದಂತೆ ಅತಿಶಯವಾಗಿದೆ; ಕೇವಲ ಮೂರನೆಯ ಪಾದವಷ್ಟೇ ಅಲ್ಲ, ಮಿಕ್ಕ ಪಾದಗಳೂ ಹೌದು. ದತ್ತಪದಿಯಂಥ ಕಠಿನನಿರ್ಬಂಧದಲ್ಲಿ ಈ ಮಟ್ಟಿಗೆ ರೂಪಕಾಲಂಕಾರಪ್ರಾಖರ್ಯವೂ ರಸಪೇಶಲಪದಪದ್ಧತಿಯೂ ಇರುವಂತೆ ಪದ್ಯವನ್ನು ರಚಿಸುವುದು ಸುತರಾಂ ಸ್ತುತ್ಯಸಾಧನೆ.

        ಪ್ರಿಯ ಕೇಯೂರ್,

        “ಮನ ಬಂದಂತೆ” ಕವಿತೆಯಂ
        ಧ್ವನಿಸಿದೆನೆಂದೆಂಬ ನಿಮ್ಮ ಮಾತದು ಸಲ್ಗುಂ |
        ಮನಕಂ ಬಂದಿರೆ ವಾಕ್ಸತಿ-
        ಯನುಪಮಕೃಪೆಯಿಂತು ಕವನಿಸಲ್ಕಕ್ಕಪ್ಪುದಲಾ !!

        ಎರಡನೆಯ ಸಾಲಿನ ಕಡೆಗೆ “ಗಡ” ಎಂದಿರುವುದನ್ನು “ಗಡಾ” ಎಂದು ಸವರಿಸಿದರೆ ಸರಿಯಾದೀತು. ಏಕೆಂದರೆ ಕನ್ನಡದಲ್ಲಿ ಸಂಸ್ಕೃತದಲ್ಲಿರುವಂತೆ ಪಾದಾಂತಯತಿಯಾಗಲಿ, ಪಾದಾಂತದ (ವಿಶೇಷತಃ ಸಮಪಾದಾಂತ್ಯದ) ಲಘುವು ಗುರುವಾಗುವ ಅಂಶವಾಗಲಿ ಇಲ್ಲ. ಉಳಿದಂತೆ ಪದ್ಯವು ಅನವದ್ಯ, ಹೃದ್ಯ. ಇಷ್ಟು ಚೆನ್ನಾಗಿ ಕನ್ನಡ-ಸಂಸ್ಕೃತಗಳಲ್ಲಿ ಕವನಿಸಬಲ್ಲ ನೀವು ಪದ್ಯಪಾನಕ್ಕೇಕೆ ಇಷ್ಟು ತಡವಾಗಿ ಬರುತ್ತಿದ್ದೀರಿ? ಈ ವಿಲಂಬದ ನಷ್ಟ ನಮ್ಮದಾಯಿತಲ್ಲಾ!!

        • ಧನ್ಯೋsಸ್ಮಿ ನೂನಮ್
          ಗುರುಗಳೇ, ಧನ್ಯವಾದಗಳು.
          ಕನ್ನಡದಲ್ಲೂ ಪಾದಾಂತ ಲಘುವು ಗುರುವಾಗುತ್ತದೆಂದು ಭಾವಿಸಿದ್ದೆ. ನನಗೆ ಕನ್ನಡ ಛಂದಸ್ಸಿನ ಪರಿಚಯ ಅಷ್ಟಾಗಿ ಇಲ್ಲ. ಇದು ನಾನು ಕನ್ನಡದಲ್ಲಿ ಛಂದೋಬದ್ಧವಾಗಿ ಬರೆದ ಮೊತ್ತಮೊದಲ ಪದ್ಯ. ಉಳಿದಂತೆ ಹೊಸಗನ್ನಡದಲ್ಲಿ ಛಂದೋವಿರಹಿತವಾಗಿ, ಆದರೆ ಯಾವುದೋ ಒಂದು ಲಯವನ್ನಿಟ್ಟುಕೊಂಡು ಪದ್ಯ ಬರೆಯುತ್ತಿದ್ದೆ.

          ದೂರವಾಣಿಯಲ್ಲಿ ತಮ್ಮಿಂದ ಯತಿನಿಯಮದ ಬಗ್ಗೆ ತಿಳಿದುಕೊಳ್ಳುವೆ.
          ತಮ್ಮ ಪ್ರೀತಿ ಸ್ನೇಹಗಳಿಗೆ ಅನಂತ ಕೃತಜ್ಞತೆಗಳು. ಮತ್ತೊಂದು ಆಗ್ರಹದ ಬಿನ್ನಹವೆಂದರೆ ತಾವು ನನ್ನನ್ನು ನೀವು-ತಾವು ಎಂದೆಲ್ಲ ಸಂಬೋಧಿಸಬಾರದು. ಏಕವಚನದಲ್ಲೇ ಕರೆಯಬೇಕು.ಅಂದರೇ ನನಗೆ ಸಂತೋಷವಾಗುತ್ತದೆ.
          Sir Please Please Please

          • ಆದರೆ ನನ್ನದೊಂದು ಕಟ್ಟುನಿಟ್ಟಾದ ಕರಾರು:
            ನೀನು ನನ್ನನ್ನೆಂದೂ ಗುರುವೆಂದು ಭಾವಿಸುವುದಾಗಲಿ, ಸಂಬೋಧಿಸುವುದಾಗಲಿ
            ಕೂಡದು. ಇದು ಎಲ್ಲರಿಗೂ ಸಲ್ಲುವ ನಿಯಮ. ನನ್ನ ದೂರವಾಣೀಸಂಖ್ಯೆ:
            ೯೪೪೯೦೮೯೮೯೮

      • ಗಣೇಶರೆ,
        ಆ ವಿಲಂಬಕ್ಕೆ ಕಾರಣ ಉಂಟು.

        ಶಾ.ವಿ.|| ಕೇಯೂರಂ ತನಿನಿಂದು ನೋಡುತುಲಿ ತಾಂ ಕರ್ಮಣ್ಯಮಂ ಪದ್ಯಪಾ-
        ನೀಯಕ್ಷೇತ್ರದೆ ನಿರ್ಣಯಂ ತಲುಪಿದಂ ತಾನಿಂತು ವರ್ಷಾಂತ್ಯದೊಳ್|
        ಮೇಯಾಮೇಯಗಳೆಂತೊ ಕಬ್ಬಗಳೊಳಂ ಶಾಬಲ್ಯದಿಂದಿರ್ದಿರಲ್
        “ಲಾಯಂ ಪ್ರಾಕೃತಮೆನ್ನ ಯೋಗ್ಯತೆಗಿನಿಂ”* ಎನ್ನುತ್ತಲೀಗೈದಿಹಂ|| 🙂
        (ಶಾಬಲ್ಯ=Medley)
        * …ಯೋಗ್ಯತೆಗಿನಿನ್ನೆನ್ನು…

      • ನನ್ನ ಹೆಸರು ಕೇಯೂರ ರಾಮಚಂದ್ರ ಕರಗುದರಿ, ಊರು ಧಾರವಾಡ ಜಿಲ್ಲೆಯ ಕಲಘಟಗಿ. ಧಾರವಾಡದಲ್ಲಿರುತ್ತೇನೆ. ವಯಸ್ಸು 28. P U ಕಾಲೇಜೊಂದರಲ್ಲಿ ಸಂಸ್ಕೃತ ಅಧ್ಯಾಪಕನಾಗಿದ್ದೇನೆ. ಸಂಸ್ಕೃತ-ಪ್ರಾಕೃತ-ಶಾಸ್ತ್ರೀಯ ಸಂಗೀತ-ಹರಿಕಥೆ-ಸಮಾಜಸೇವೆಗಳಲ್ಲಿ ಆಸಕ್ತಿ. ಸಿತಾರ್ ನುಡಿಸುತ್ತೇನೆ.

    • ರಮಣೀಯವಾದ ಪದ್ಯ 🙂
      ಮೂರನೆಯ ಪಾದವು ಬಹಳ ಮನೋಜ್ಞವಾಗಿದೆ.

      ರಾಮಚಂದ್ರ! ಭವತಃ ಕವಿತಾಯಾಃ
      ಸಾರತಾಂ ಸ್ವಹೃದಯೇ ಕಲಯನ್ತೀ |
      ಶಾರದಾ ಪ್ರಮದಸಮ್ಭವಬಾಷ್ಪೈಃ
      ಕಚ್ಛಪೀಸ್ಖಲಿತಚಾರುಕರಾಭೂತ್ ||

      • ಅಭಿನಂದನಪದ್ಯಮಿದಂ ಚ ತವಾ-
        ಸ್ಖಲಿತಂ ಲಲಿತಂ ತುಲಿತಂ ಸುಧಯಾ |
        ಸುಕವೇsತ್ರ ಮಹೇಶ ! ಮಹಾಶಯ ಸಾ-
        ಧ್ವನಸೂಯ! ರಸೋದಯಮಾತನುತೇ ||

      • ಶ್ರೀರಾಮಚಂದ್ರ ಇತಿ ಮತ್ಪಿತುರಸ್ತಿ ನಾಮ
        ಕೇಯೂರ ಇತ್ಯಯಮಹಂ ಜನನೀಕೃತಾಖ್ಯಃ |
        ಉತ್ಪ್ರೇಕ್ಷ್ಯ ಕಾವ್ಯಮಧಿಕಮ್ ಮಮ ಯತ್ತ್ವದುಕ್ತಮ್
        ಧನ್ಯೋsಸ್ಮಿ ತೇನ ನಿತರಾಮಭಿವಾದಯೇ ತ್ವಾಮ್ ||

  17. ಲಿಕ್ಕರಿನ ಹೊಳೆಹರಿಸಲನುವಾಗಿ ನಿಂತಿಹರು
    ನಿಕ್ಕರೊಳು ಗರಿಗರಿಯ ನೋಟುಗಳ ಹೊಂದಿಹರು
    ಕುಕ್ಕರಿಸುವಂತಿವರ ಸೋಲಿಸೈ ಮತದಾರ
    ಸಕ್ಕರಶನವೆ ಅದುವು ಡೆಮಾಕ್ರೆಸಿಯ ಮೊಗಕೆ
    (ಸಕ್ಕರ್+ಅಶನ-ಸಿಹಿಯಾದ ಆಹಾರ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)