Mar 302014
 

ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು 🙂

ಹಬ್ಬಗಳ ಹೊಸ ಉಡಿಗೆ-ತೊಡಿಗೆಯ ಸಂಭ್ರಮಗಳ ಬಗ್ಗೆ ಅಲಂಕಾರಯುತ ಪದ್ಯರಚನೆ ಮಾಡಿರಿ.

  75 Responses to “ಪದ್ಯಸಪ್ತಾಹ ೧೦೨: ಅಲಂಕಾರಯುತ ವರ್ಣನೆ”

  1. (ಕಾಂತಿಯಿಂದಲಿ > ಅಲಂಕಾರಯುತ. ತೊಡವು=ವಸ್ತ್ರ)
    ತರಳ|| ಉಡುಗೆಭಾಗ್ಯವ ಕಾಂತಿಯಿಂದಲಿ ವರ್ಣಿಸೆನ್ನುತ ಪೇಳುತುಂ
    ಕಡೆಗೆ ಸ್ಮೈಲಿಯನಿತ್ತ ನಿನ್ನಯ ಗುಟ್ಟದೇನದು ಪೇಳೆಯೇಂ|
    ನುಡಿಯುತಾಶಯ ನನ್ನೆ ನೋಡುತ ಹಾಸ್ಯವೇತಕೆ ಸೋಮನೆ
    ತೊಡವದೆನ್ನದು ಹಾಸ ನಿನ್ನೊಳಗುಂಟುಮಾಡುತಲಿರ್ಪುದೇಂ|| 🙂

    • ಸಹಜಧರ್ಮವು ಹಾಸ್ಯಮೆಂಬರು ಸ್ಮೈಲಿಯಂತೆಯೆ, ರಂಪರೇ
      ಅಹಗೆ ಶಲ್ಯಮನಾಂತ ನೂರವಧಾನದೊಳ್ ನೆನಪಿರ್ದುದೇಂ

      ನಗುವು ಸಹಜ ಧರ್ಮ ಅಂತ ಶುಭಾಶಯ ಹೇಳುವಾಗ ನಕ್ಕೆ. ನಿಮ್ಮ ಉಡುಪಿನ ಬಗ್ಗೆ ನೀವೇ ನೆನಪಿಸಿದಿರಿ ಹಾಗಾಗಿ ಶತಾವಧಾನದಲ್ಲಿ ನೀವು ಶಲ್ಯವನ್ನು ಹೊದೆದುದು ನೆನಪಿಗೆ ಬಂತು 😉

  2. The juvenile leaves worn by trees during the festive season (vasantakAla) are first yellow in colour. Later they morph into a more attractive green. But the white clothes worn by people turn yellow by and by. But it is okay. After all ಪೃಥ್ವಿ is always ಲಗಾದಿ (starts with a ಲಗಂ). We mostly avoid ಲಗಂ.
    ಯುಗಾದಿಯೊಳು ಭೂರುಹಂ| ಧರಿಪ ಪೀತದಂ ಪಲ್ಲವಂ
    ಪ್ರಗಾಢಮದುಮಪ್ಪುದೈ| ಸಮಯನಾತಿಯೊಳ್ ನೋಡುತುಂ
    ಅಗಾಧ ಬಿಳಿಬಟ್ಟೆಯಂ| ಮನುಜ ಪೀತಮಂ ಗೈಯಲೇಂ
    ಲಗಾದಿಯದು ಪೃಥ್ವಿಯೈ| ಬಿಡು ತಗಾದೆಯೇನಿಲ್ಲವೈ 🙂

    ಕಡೆಗೆ ಯಾರಿಗೂ ಯಾವ ಅಲಂಕಾರವೂ ಇಲ್ಲಿ ಕಾಣದಿದ್ದರೆ, ಆಗ ಇಲ್ಲಿರುವುದು ಸ್ವಭಾವೋಕ್ತ್ಯಲಂಕಾರ ಎಂದು ಗಣಿಸತಕ್ಕದ್ದು 🙂

    • ಪ್ರಯತ್ನವೇನೋ ಪ್ರಶಂಸನೀಯ. ಆದರೆ ಹಲವೆಡೆ ವ್ಯಾಕರಣದ ತೊಡಕುಗಳೂ ವಿವಕ್ಷೆಯ ಕ್ಲೇಶಗಳೂ ಸೇರಿ ನಿಮ್ಮ ಮೊದಲಿನ ವಿವರಣೆಯಿಲ್ಲದೆ ಪದ್ಯವು ಅರ್ಥವಾಗುತ್ತಿರಲಿಲ್ಲ.ಮುಖ್ಯವಾಗಿ ನೀವು ನಿಮ್ಮ ಅನೇಕಪದ್ಯಗಳಲ್ಲಿ ಸಾಮಾನ್ಯವಾದ ಭಾಷಾಮರ್ಯಾದೆಯನ್ನು (ಆರ್ಥಾತ್ ಜಾಡು ಅಥವಾ usage) ಮೀರಿ ಅನ್ಯಾನ್ಯಪ್ರಯೋಗಗಳನ್ನೂ ದುರೂಹ್ಯವೂ ಸಂದರ್ಭಶುದ್ಧವೂ ಅಲ್ಲದ ಕೇವಲ ನೈಘಂಟುಕಪದಗಳನ್ನೂ ಬಳಸಿ ವಿಚಿತ್ರವಾದ ರೂಪಗಳನ್ನೂ (ಉದಾ : ಇದೇ ಪದ್ಯದ ಪೀತದಂ ) ಹಾಗೂ ಸಮಾಸಗಳನ್ನೂ (ಉದಾ: ಸಮಯನಾತಿ ಎಂಬ ಸದ್ಯದ ಪದ್ಯದ್ಯೇ ಪ್ರಯೋಗ) ಮಾಡುವುದುಂಟು. ಇದು ಬಲುಮಟ್ಟಿಗೆ ವ್ಯುತ್ಪನ್ನರಿಗೂ ಅರ್ಥವಾಗದೆ ಉಳಿಯುತ್ತದೆ. ಮೊದಲೇ ನಿಮ್ಮ ಕಲ್ಪನೆಗಳು ವಿಲಕ್ಷಣ; ವಿಕಟವೈನೋದಿಕ. ಇನ್ನು ಭಾಷೆಯೂ ಹೀಗಾದರೆ ಓದುಗರ ಗತಿ ಯೇನು?:-) ಆದುದರಿಂದ ಪೂರ್ವಕವಿಗಳ ಭಾಷಾಮರ್ಯಾದೆಗೆ ಅನುರೋಧವಾಗಿಯೇ ಹೆಚ್ಚು ಪದ್ಯಗಳನ್ನು ರಚಿಸಿರಿ.

      • ಸಾಕಷ್ಟು ಗ್ರಾಸ ಒದಗಿಸಿದ್ದೀರಿ. ಗಮನಿಸಿಕೊಳ್ಳುವೆ. ಕೃತಜ್ಞತೆಗಳು.

  3. ಸ್ವೋಪಜ್ಞತೆಯಿಂದ ಹೊಮ್ಮುವ ಮಹಾಕವಿಯ ಸ್ವಭಾವೋಕ್ತಿಯಂತೆ ಪ್ರಕೃತಿಯ ಹಸಿರೆಲೆಯುಡುಪು ಬಣ್ಣದ ಪೂತೊಡವು. ಹೊರಗಿನಿಂದ ಕೊಂಡು ಉಡುವ ತೊಡುವ, ಒಂದೇ ದಿನಕ್ಕೆ ಹಳೆಯದಾಗುವ “ಅಲಂಕಾರ”ದ ಹೊಸಬಟ್ಟೆಗೆ ’ಬಟ್ಟೆ” (ದಾರಿ) ಒಳಗಿನಿಂದಲೇ !!

    ಒಳಗಿನಿಂ-ಜೇಡನೆಳೆ ವಸುಧೆಯಿಂ-ಬೆಟ್ಟ ಹೊಳೆ – ತನ್ನದೇ ಮುನ್ನೀರಿನುಡುಗೆ ಬುವಿಗೆ
    ತಳದಿಂ ಮರನ ಮೈಯಿನೊಳಗಿನಿಂ ಮೂಡುವೆಲೆ ಫಲಪುಷ್ಪದುಡುತೊಡುಗೆ-ತನ್ನದಡುಗೆ
    ಹೊಳೆವ ಪೀತಾಂಬರಕೆ ಲಕ್ಷ್ಮೀಕಟಾಕ್ಷ ! ವಿಷದೊಸಗೆಯೊ ದಿಗಂಬರಗೆ ! ಕಡಲ ಕೊಡುಗೆ
    ಕಳೆದನ್ಯರಂಸೇರ್ವ ಸಿರಿ – ಹರಿಗೊ ಹುಡುಕಾಟ ! ಲೋಕರಕ್ಷೆಗೆ ’ಗರಳಕೊರಳ’ ನೆರಳು

    ವಸನ ತನ್ನೊಳಗಿನಿಂ ತಳೆವ ಮತಿಯ ಋತವೆ
    ಪೊಸ ವಸಂತ ಮಾಂತ್ರಿಕ ಸೃಜಿಪ ವರ್ಣತತಿಯೆ
    ಪೊಸತು ಬಟ್ಟೆಯೆನೆ ನೀರ್ಗಿಳಿಯೆ ನಾಳೆ ಹಳತೇ
    ಅಸಮವೀಮಾಸ ಮಾಸಕುಂ ಮಾಸದುಡುಪೇ

    • ಬಹುದಾರ್ಶನಿಕವಾದ ನಿಮ್ಮ ಪದ್ಯದ ಯಾವುದೋ ಒಂದು ಅಂಶವನ್ನು ಕುರಿತ ನನ್ನ ಪ್ರತಿಕ್ರಿಯೆಗೆ ಕ್ಷಮೆ ಇರಲಿ.

      ವರುಷಕೊಂದು ಹೊಸತು ಜನ್ಮ
      ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ| (’ಯುಗಾದಿ’ಯಲ್ಲಿ ದ.ರಾ.ಬೇಂದ್ರೆ)
      ವರುಷದೆನಿತೊ ಪರ್ವಗಳೊಳು
      ಹರುಷದೆನಿತೊ ವಸ್ತ್ರ ಗಳಿಸೆ ಹರಿಯೊ ಬೇಗಬೇಗನೆ|| 🙂

      • ಹರಿಗುಮಂತೆ ಹರಿದ ಸರಿಗೆಯಿರಲು ಲಕುಮಿದೊರೆವಳೇಂ
        ವರವದೇಂ ಪ್ರಸಾದುಕೋರ್ವ ಮಿರಿಮಿರೆನುವ ವಸ್ತ್ರದಿಂ? 🙂

      • ಪೊಸಬಟ್ಟೆಯದುವೆ ಪರ್ಯವಸಾನ ಲೋಗರ್ಗ-(ರ್ಗಂ)
        (ಒ)ಮೊಸರುಪಲ್ಲವ ವನಕೆ ಹಂತ ಬರಿದೆ|
        ಬಿಸುಡಲಾ ಪರ್ಣಮಂ ಸಿದ್ಧ ತರುಸಂಕುಲವು
        ಹುಸಿಹರ್ಷರಾಹಿತ್ಯವಧ್ಯಾತ್ಮಮೇಂ||

        • ಅಲ್ಲೆನಲಾರ್ ಒಳಸತ್ವಕೆ
          ಪಲ್ಲವ ತರುಭಾಗಮಲ್ತೆ ನಮಗೋ ಹೊರಗಿಂ
          ಸಲ್ಲುವ ಪೊಸಬಟ್ಟೆಯೆಗತಿ
          ಅಲ್ಲಿಂದಿತ್ತೇಕೆ jumಪು ಹಾದಿಯ ರಂಪಾ 🙂

    • ಮೌಳಿಯವರೇ ಚೆನ್ನಾಗಿದೆ ಪದ್ಯ

      • ಧನ್ಯವಾದಗಳು ಸೋಮ. ಪದ್ಯವನ್ನು ಈಗ ಓದಿದಾಗ, ಹೇಗೆ ಹೇಳಬೇಕೆಂಬುದಕ್ಕಿಂತ ಏನನ್ನೋ ಹೇಳಿ ಧ್ವನಿಸಬೇಕೆಂಬ ತೂಕವೇ ಹೆಚ್ಚಾಗಿ ಕಾಣುತ್ತಿದೆ. “ನೀತಿ – ಉಪದೇಶ” ಗಳು ನೇರವಾಗಿ ಧ್ವನಿಸದಂತೆ ಒಂದು ಅಲಂಕಾರಕ್ಕೆ ಅಂಶಗಳ ಸಮೀಕರಣ ಮಾಡಲಾಗಲಿಲ್ಲ 🙁

  4. ಈ ಮೂರೂ ಪದ್ಯಗಳಲ್ಲಿ ಒಟ್ಟಾರೆ ಒಂದಂಶವನ್ನು ಹೇಳಬಯಸಿದ್ದೇನೆ, ಪದ್ಯದ ಎಲ್ಲಾ ಸಾಲುಗಳೂ ಉಡಿಗೆ ತೊಡಿಗೆಯ ಮೇಲೆ ಬರೆದಿಲ್ಲ ಆದರೆ 50% ಉಡಿಗೆ ತೊಡಿಗೆಯು ಸಂಭ್ರಮದ ಬಗ್ಗೆ ಬರೆದಿದ್ದೇನೆ

    ಇಂದ್ರವಜ್ರ

    ಪಣ್ಗಾಯಿ-ನೀರ್ಗಾಯವೊಲಿರ್ಪ ಚಿತ್ತಂ,
    ಕಣ್ಗರ್ಪಿಡಲ್, ಶ್ರಾಂತದೆ ಸೋಲ್ತ ಭಾವಂ,
    ಪುಣ್ಗಾಸಿಯೊಲ್ ದೈನ್ಯದರಾತಿ ಕಾಡಲ್
    ಕಣ್ಗಪ್ಪ ನೋಟಕ್ಕೆ ನೆಗಳ್ಪುದಾತ್ಮಂ

    ಮೆಯ್ವಣ್ಣಮಂ ಪೆರ್ಚಿಪ ಪಟ್ಟಛದ್ಮಂ
    ಗೆಯ್ವಾಜಿಯಾಚ್ಛಾದಮೆ, ಝಣ್ಝಣೆಂಬೊಲ್
    ಪೊಯ್ವಾಸ್ತ್ರಮೇ ನೂಪುರಕಂಕಣಂಗಳ್
    ಕಾಯ್ವೆಂಬುವಾ ಕ್ಷಾತ್ರಮೆ ವಕ್ತ್ರತೇಜಂ

    ಪೂಮಾಲೆ ಬೆಳ್ಪಿಂದೆ ಪತಾಕೆ ತೋರ್ಗುಂ
    ಸೀಮಾತಿರಿಕ್ತಂ ಸಲೆ ದಿವ್ಯಭೋಗಂ
    ವ್ಯೋಮಪ್ರಕೃಷ್ಟಂ ಸುಧೆಯಪ್ಪ ಹಾಸಂ
    ಜೀಮೂತಮೀ ಮಕ್ಕಳಿನಾಂತ ಸತ್ವಂ

    ಹಣ್ಣುಗಾಯಿ-ನೀರುಗಾಯಿಯಾದ ಮನಸ್ಸು, ಕಣ್ಣುಕಪ್ಪಿಡಲು, ಶ್ರಮದಿಂದ ಸೋತೆನೆಂಬ ಭಾವವಿರಲು, ಹುಣ್ಣಿನ ಗಾಯದಂತೆ ದೈನ್ಯವೆಂಬ ಶತ್ರು (ಮನಸ್ಸಿನ self pity ಭಾವ) ಕಾಡಲು (ಹೀಗಿರಲು), ಕಣ್ಣು ಕಪ್ಪಿನ ನೋಟಕ್ಕೆ ಆತ್ಮವು ಉತ್ಸಾಹಗೊಳ್ಳುವುದು, ಮೈಯ ಬಣ್ಣವನ್ನು ಹೆಚ್ಚಿಸುವ ರೇಷ್ಮೆಯ ಬಟ್ಟೆ ಯುದ್ಢದ ರಕ್ಷಾಕವಚವವು, ಝಣ್ ಝಣವೆಂಬ ಬಳೆ ಮತ್ತು ಗೆಜ್ಜೆಯ ಸದ್ದೇ ಹೊಡೆದಾಡುವ ಶಸ್ತ್ರಾಸ್ತ್ರಗಳು, ಅಲಂಕೃತ ಮುಖದ ತೇಜವೆ ನಿನ್ನನ್ನು ಕಾಯುವೆಯೆಂಬಾ ಕ್ಷಾತ್ರವನ್ನು ಬಿಂಬಿಸುವುದು, ಬಿಳಿಯ ಪೂಮಲೆಯ ಪತಾಕೆಯಂತೆ ತೋರುವುದು, ಸೀಮಾತಿರಿಕ್ತವಾದ ವ್ಯೋಮಪ್ರಕೃಷ್ಟವಾದ ದೈವಿಕವಾದ ಅಮೃತದ ನಗೆ, ಈಮಕ್ಕಳು ಎಂಬ ಸತ್ವವೇ ನಮ್ಮ ಜೀವಿಕೆಯ ಪೋಷಕದ್ರವ್ಯ (ಈ ಪುಟ್ಟ ಯೋಧರಿಂದ ನಮ್ಮ ದೈನ್ಯಭಾವವೆಂಬ ಶತ್ರುವನ್ನು ಹೊಡೆಯಲು ಸಾಧ್ಯ ಎಂಬರ್ಥ)

    ಮೆಯ್ವಣ್ಣ – ಮೆಯ್ಯ ಬಣ್ಣ
    ಪಟ್ಟಛದ್ಮಂ – ರೇಷ್ಮೆಯ ಬಟ್ಟೆ
    ಗೆಯ್ವಾಜಿಯಾಚ್ಛಾದಮೆ – ಯುದ್ಢದ ರಕ್ಷಾಕವಚ

    • ಪ್ರಿಯ ಸೋಮ,

      ಪ್ರಾಸದುಷ್ಕರತೆಯಿಂದಮಿಂದ್ರವ-
      ಜ್ರಾಸಲೀಲಗತಿಯುಕ್ತಿಯಿಂ ಮಹೋ-
      ಲ್ಲಾಸಕಾರಿಮಧುಮಾಸವಾಸರೋ-
      ಚ್ಛ್ವಾಸವಸ್ತ್ರವಿಧಿಯಂ ಬೆಳಂಗಿದಯ್ !

      ಆದರೆ ಕೆಲವೊಂದು ಭಾಷಾಸಂಬದ್ಧವಾದ ಸವರಣೆಗಳು ಬೇಕಿವೆ. ನಾನವನ್ನು ದೂರವಾಣಿಯ ಮೂಲಕ ತಿಳಿಸುವೆ.

      • ಧನ್ಯವಾದಗಳು ಸರ್, ನಿಮ್ಮೊಡನೆ ಮಾತಾಡಿ ತಿದ್ದಿಕೊಳುತ್ತೇನೆ 🙂

  5. ಸ್ವಾಗತ||
    ಮಾನವಂ ತೊಡುವ ನೂತನವಸ್ತ್ರಂ
    ದಾನದೊಳ್ ಪಡೆದ ಬಾಹ್ಯದ ದ್ರವ್ಯಂ|
    ಲೀನಮಿರ್ಪ ನವಪಲ್ಲವಮನ್ನುಂ
    ತಾನು ತೋರೆ ಪ್ರತಿವರ್ಷವು ವೃಕ್ಷಂ||

    ಹಾನಿಗೈಯುವೆಯ ಒಮ್ಮೆಗೆ ನೀ ಪೇಳ್
    ಹೀನಕೃತ್ಯವದು ವೃಕ್ಷವಿನಾಶಂ|
    ತಾನದಲ್ಲವದು ವ್ಯಕ್ತಿನಿಘಾತಂ
    ನೀನು ಗೈದಿರುವೆ ಗೋತ್ರವಿನಾಶಂ||

    • Just a doubt, ಎರಡನೇ ಪದ್ಯದಲ್ಲಿ, ಗೈಯುವೆಯ + ಒಮ್ಮೆಗೆ = ಗೈಯುವೆಯೊಮ್ಮೆಗೆ ಎಂದು ಸಂಧಿಯಾಗಬೇಕಲ್ಲವೆ?

    • ಅರ್ಥವು ಬದಲಾಗುವಂತಿದ್ದರೆ ಸಂಧಿ ಮಾಡಬಾರದು ಎಂದಿದೆ. ‘ಗೈಯುವೆಯ ಒಮ್ಮೆಗೆ’ ಎಂಬುದು question. ‘ಗೈಯುವೆಯೊಮ್ಮೆಗೆ’ ಎಂಬುದು statement. ಒಮ್ಮೆಗೆ ಎನ್ನುವುದು ವೊಮ್ಮೆಗೆ ಎಂದು ಉಚ್ಚಾರಣೆಗೊಳ್ಳುತ್ತದೆ. ಉದಾ: ಮನ+ಒಂದಾಗಿ=ಮನವೊಂದಾಗಿ

  6. ಪೊಸ ಬರಿಸದ ಸಂಭ್ರಮದೊಳ್
    ಪಸಿರನ್ನುಡುಪಾಗಿತೊಟ್ಟಿರಲ್ತರುವೃಂದಂ|
    ಪಸಿದಾ ಕವಿಗಳ್ ತಮ್ಮಯ
    ರಸವತ್ಕವಿತೆಯನು ನೀಡಲಾಸರೆಯಾಯ್ತಯ್|

    ಪೊಸ ಬರಿಸ (ಉಗಾದಿ) ಸಂಭ್ರಮದೊಳ್, ಪಸಿರನ್ನುಡುಪಾಗಿತೊಟ್ಟಿರಲ್ತರುವೃಂದಂ – ಮರಗಳು ಹಸಿರೆಂಬ ಉಡುಪನ್ನು ತೊಟ್ಟಿರಲು, ಪಸಿದಾ ಕವಿಗಳ್ (ಹಸಿವಿನಲ್ಲಿರುವ ಕವಿಗಳು ತಮ್ಮ) ರಸವತ್ಕವಿತೆಯನು ನೀಡಲಾಸರೆಯಾಯ್ತಯ್

    ನೀಡಲು + ಆಸರೆ = ನೀಡಲಾಸರೆ — ಇದು ಸರಿಯೆ?

    • ಹೊಗಳುವ ಭರದಲ್ಲಿ, ಸೊಪ್ಪಿಗಾಗಿ ಕಾದಿರುವ ಹಸಿದ ಕುರಿಗಳನ್ನಾಗಿಸಿದಿರಲ್ಲ ನಮ್ಮೆಲ್ಲರನ್ನು!
      ಎಮ್ಮಂ ಪೊಗಳುವ ಸಂಭ್ರಮ
      ಚಿಮ್ಮಲ್, ಕಂದಮನಿದಂ ಬಲುಹಿನೊರೆದಿರ್ದೇನ್|
      ತಮ್ಮನೆ ಭರದೊಳಗೆಂದಿಹೆ
      ಯೆಮ್ಮೆಲ್ಲರ ಪಸುರ ಭಕ್ಷಿಪಜರೆಂದೆನುತುಂ|| 🙂

      • ಅಯ್ಯೋ ಪ್ರಸಾದು ಅವರೆ! 🙂 ನನ್ನ ಕಲ್ಪನೆಯ ಪ್ರಕಾರ, ಕವಿಗೆ ವಸಂತದಲ್ಲಿ ಕಾವ್ಯ ರಚಿಸಲು ಅತಿ ಸುಲಭವಾಗಿ ಲಹರಿ ಸಿಗುತ್ತದೆಂದು…

  7. ಹರಿತವಸನದಿಂದಂ ಪೂವ ವರ್ಣಂಗಳಿಂದಂ
    ಸರದ ಮೆರಗನೀವೀ ಸಾಲು ಪಣ್ಗೊಂಚಲಿಂದಂ
    ಮರುಳುಗೊಳೆ ವಸಂತಂ, ಪಂಬಲಂ ಪುಟ್ಟಿವಂತೇಂ?
    ನರಗೆ ಪೊಸದನುಂ ತಾಂ ಪರ್ವದೊಳ್ ತೊಟ್ಟುಕೊಂಬಾ!
    (ಅಲಂಕಾರವಿಲ್ಲದ ಮಾಲಿನಿ 🙂 )

    • ಇಲ್ಲ, ಇದು ಸಾಲಂಕಾರವಾದ ಕವಿತೆಯೇ ಸರಿ! ಇಲ್ಲಿ ರೂಪಕ, ಹೇತೂಪ್ರೇಕ್ಷೆ, ಉಪಚಾರವಕ್ರತೆ, ಕಾವ್ಯಲಿಂಗಾಲಂಕಾರಗಳ ಛಾಯೆಯುಂಟು.
      ಎಲ್ಲ ಕಾಲಕ್ಕೂ ನಿರ್ದೇಶಕವಾಗುವ ಸೂತ್ರವಿಷ್ಟು: ಆಕರ್ಷಕವೂ ರಸಮಯವೂ ಆದ ಯಾವುದೇ ಮುಕ್ತಕದಲ್ಲಿಯೂ ಅಲಂಕಾರ-ವಕ್ರೋಕ್ತಿಗಳಿರುತ್ತವೆ. ಹೀಗಾಗಿ ಎಲ್ಲರೂ ರಸಮಯವಾಗುವಂಥ ಕವಿತೆಯನ್ನು ರಚಿಸಿರಿ; ಅದು ಸದಾ ಅಲಂಕಾರಮಯವಾಗಿರುತ್ತದೆ.

      ಪೊಸ + ಉಡೆ = ಪೊಸುಡೆ ಎಂದಾಗದು;ಅದು ಪೊಸವುಡೆ ಎಂದೇ ಆಗಬೇಕು.

      • ಧನ್ಯವಾದಗಳು. ಪದ್ಯವನ್ನು ತಿದ್ದಿದ್ದೇನೆ. 🙂
        ಹೌದು ಸರ್, ಪದ್ಯ ಬರೆಯುವದಕ್ಕಿಂತ ಅಲಂಕಾರವನ್ನು ಹುಡುಕುವದೇ ಪ್ರಯಾಸಪೂರ್ಣ!

    • ಪದ್ಯ ಚೆನ್ನಾಗಿದೆ

  8. ಪಲಿತಪರ್ಣಪುರಾತನವಸ್ತ್ರಮಂ
    ಕಳೆದು ಕೋಮಲಪಲ್ಲವವಾಸಮಂ |
    ತಳೆದವೊಲ್ ತರುರಾಜಿ, ಜನರ್ಕಳುಂ
    ನಲಿದಪರ್ ನವಲಾಚ್ಛಪಟಾನ್ವಿತರ್ ||

    (ಇದು ದೃಷ್ಟಾಂತಾಲಂಕಾರವಿರುವ ದ್ರುತವಿಲಂಬಿತವೃತ್ತದ ಪದ್ಯ)

    ಪಟ್ಟೆಸೀರೆಯ ಪಟ್ಟಮಂ ತೊಟ್ಟ ಕಾಂತೆಯರ್
    ಜರತಾರಿತಾರೆಗಳ್ ಪೆಣ್ಗೂಸುಗಳ್
    ಕಟ್ಟಲೆಯ ಕೈವಾರಕಾದರೆನೆ ಗಂಡಸರ್
    ಮೆರೆವಾಟದುಡೆಗೊಪ್ಪಿರಲ್ ಮಾಣಿಗಳ್
    ದಿಟ್ಟರಾಗಲ್ಕೆ ಮೇಣುಟ್ಟುಡದ ಭಾವದಿಂ
    ಮೆರೆವ ಸಿದ್ಧಾಂಬರದ ಯುವ-ಯುವತಿಯರ್
    ಪೊಟ್ಟಣಂಗಟ್ಟಿದಂದದೆ ಸಂಪ್ರದಾಯಮೇ
    ವರವಸ್ತ್ರಧಾರಿಗಳ್ ಮರ್ತೆ ಪಿರಿಯರ್

    ಚೈತ್ರದ ನವೀನವಸನವಿನ್ಯಾಸಪಥದೊಳ್
    ಮೈತ್ರಿಯೆಂಬೊಂದು ಪಾಥೇಯಮಿಲ್ಲದಾಗಳ್ |
    ಸೂತ್ರಜಾಲಮೆಂತಿರ್ದೊಡಂ ಸೇರ್ಮೆಯಿರದ
    ಜಾತ್ರೆಯಾಗಲ್ಕೆ ಸಲ್ವುದೇಂ ಬಾಳ ಬಟ್ಟೆ?

    (ಈ ಮಾತ್ರಾಸೀಸಪದ್ಯದಲ್ಲಿ ಪ್ರಧಾನವಾಗಿ ಉಲ್ಲೇಖ ಮತ್ತು ವ್ಯತಿರೇಕಗಳಿವೆಯಾದರೂ ಉತ್ಪ್ರೇಕ್ಷೆ, ಅತಿಶಯೋಕ್ತಿ, ವಿರೋಧ ಮುಂತಾದ ಇನ್ನಿತರ ಅಲಂಕಾರಗಳೂ ಗೌಣರೂಪದಿಂದ ಸೇರಿವೆ)

    • ಕಟ್ಟಲೆಯ ಕೈವಾರಕಾದರೆನೆ ಗಂಡಸರ್
      ಮೆರೆವಾಟದುಡೆಗೊಪ್ಪಿರಲ್ ಮಾಣಿಗಳ್ – Pls explain. ಕೈವಾರ=praise?

    • ಗಣೇಶ್ ಸರ್,
      ಬಹಳ ಚೆನ್ನಾಗಿದೆ, ಬಾಳಬಟ್ಟೆಗೆ ಮೈತ್ರಿಯ ಸೂತ್ರದ ಪದ್ಯವಂತೂ ಬಹಳ ಚೆನ್ನಾಗಿದೆ 🙂

    • ಮೈತ್ರಿಯಸೂತ್ರಜಾಲದೊಲು ಶೋಭಿಕುಮಲ್ತೆ ಪ್ರಸೂನ ಪದ್ಯಗಳ್ !

      • ಧನ್ಯೋsಸ್ಮಿ…

        ಪ್ರಸೂನಪದ್ಯಗಳೆಂಬ ಪ್ರಯೋಗ ಸಲೆ ಸೂಗಸಾಗಿದೆ. ಇಲ್ಲಿ ಹೂಗಳೇ ಪದ್ಯಗಳಾದ ಚಮತ್ಕಾರ ಪ್ರೇಕ್ಷಣೀಯ. ಅದು ಪದ್ಯಪ್ರಸೂನಗಳಷ್ಟೇ ಆಗಿದ್ದಲ್ಲಿ ಪದ್ಯಗಳೇ ಹೂಗಳಾದ ಪ್ರಸಿದ್ಧಸಾಮಾನ್ಯರೂಪಕವಾಗುತ್ತಿತ್ತು. ಹೀಗಾಗಿ ನನಗಿತ್ತ ಈ ಮಿಗಿಲು ಮೆಚ್ಚುಗೆಗಾಗಿ ಮತ್ತೊಮ್ಮೆ ನಮನ:-)

        • ಹೌದು ಸರ್ ‘ಪ್ರಸೂನಪದ್ಯ’ ಪ್ರಯೋಗ ಬಹಳ ಹಿಡಿಸಿತು

  9. ಕತ್ತಲಂ ನೂಕಿಟ್ಟು ಬೆಳಕೀವ ಸೂರ್ಯನೊಲ್,
    ಒತ್ತಿಟ್ಟು ಕೆಸರನ್ನು ನಗುತಿರ್ಪ ಜಲಜದೊಲ್,
    ಬತ್ತಿರುವ ಮರಮೆಟ್ಟಿ ಚಿಗುರೊಡೆದ ಹಸಿರಿನೊಲ್,
    ಕಿತ್ತೆಸೆದು ಹಳೆಯದಂ ಪೊಸವುಡೆಯು ಭಾಸಿಕುಂ!

    • ಚೊಕ್ಕವಾಗಿದೆ. ಅರ್ಥಕ್ಲೇಶವಿಲ್ಲ. ಊನಗಣವಿರದ ಚೌಪದಿ.

    • ಬಹಳ ಚೆನ್ನಾಗಿದೆ

    • ಪ್ರಸಾದು ಅವರ ಗಮನಿಕೆ ಯುಕ್ತವಾಗಿದೆ.
      ಸಮಪಾದದ ಕೊನೆಯಲ್ಲಿ ಊನಗಣಗಳಿಲ್ಲದಿರಲು ಪದ್ಯದ ನಡೆಗೆ ಮುಗಿತಾಯವೇ ಬಂದಂತೆ ತೋರದು. ಹೀಗಾಗಿ ಸಮಪಾದದ ಕೊನೆಯಲ್ಲಿ ಊನಗಣವನ್ನಿಟ್ಟು ಕವನಿಸುವುದು ಕವಿಗೂ ಕಿವಿಗೂ ಹಿತ 🙂

      • ಧನ್ಯವಾದಗಳು.
        ಇನ್ನುಮುಂದೆ ಹಾಗೆಯೇ ಮಾಡುವೆ. 🙂

  10. ಕಾವನ ಕಣೆಯಂ ಮೂಸೆಯೊ
    ಳೀ ವಸುಧೆಗೆ ರಚಿಸಲೆಂದು ಕವಚಮನೊಂದಂ
    ಕಾವಂ ಕುಡುತೆ ಕರಂಗಿಸು
    ತೋವುತೆ ಪೊಯ್ದೆರಕದಂದಮಿರ್ಕುಂ ತರುಗಳ್ ||

    (ಮೂಸೆ=Furnace, ಎರಕ=casting )

    (ಪರ್ವದ ತೊಡುಗೆಯ ಸಂಭ್ರಮ
    ಕುರ್ವಿಯ ತೊಡುಗೆಯನೆ ಬಣ್ಣಿಸಿರ್ಪೆನಿದಂ ದಲ್
    ಸರ್ವರ್ ಮನ್ನಿಸುಗೆನ್ನಯ
    ಪರ್ವದ ವಿಮುಖತೆಯುಮಂ ಕವಿತೆಯುಮನೀಗಳ್ 🙂 )

    • ವಿಮುಖಮೆನಿಸಿಯುಂ ಮಾನುಷ-
      ದಮಿತೋತ್ಸವಕೃತಿಗೆ ವಸ್ತ್ರಸಂಸ್ಕೃತಿಗೆ ಭವ-
      ತ್ಸುಮುಖತೆ ಮೂಲಪ್ರಕೃತಿಯೊ-
      ಳಮಮಾ! ಕಾವ್ಯಾಕೃತಿಯೊಳೆಸೆವುದೇಂ ಸೊಗಮೋ !

    • ಅದ್ಭುತಕಲ್ಪನೆಯಿಂ ನೀಂ
      ಸದ್ಭಾಷೆ ಮಿಡಿಸುತೆ ಭಾವಮೀಂಟಿಪೆ ಗೆಣೆಯಾ 🙂

  11. ಬಣ್ಣಬಣ್ಣದ ಬಟ್ಟೆದೊಟ್ಟೀ ಚಿಣ್ಣರೊಯ್ಯನೆ ಬೀದಿಯೊಳ್ ಬಗೆ-
    ಗಣ್ಣನೇ ಸೆಳೆಯುತ್ತೆ ಸಾಗಿರೆ ಕಲಕಲಧ್ವನಿಯಿಂ |
    ತಿಣ್ಣಮೆನೆ ಪೂವಾಂತು ಪಕ್ಕಿಗಳುಣ್ಣುವಿನಿವಣ್ಣೆಸೆಯೆ ಮೇಣ್ ಮ-
    ಣ್ವಿಣ್ಣುಗಳ ಬೆಸೆವಂಥ ಸಾಲ್ಮರನೋಳಿ ಪಡಿಮಿಸಿತೇಂ ||

    ( ಹೊಸಬಟ್ಟೆಗಳನ್ನು ತೊಟ್ಟು ಹಾದಿಯಲ್ಲಿ ಸಾಗುವ ಮಕ್ಕಳ ಗುಂಪು ಬದಿಯಲ್ಲಿ ಹೂ-ಹಣ್ಣು ತಳೆದು ಹಕ್ಕಿಗಳಿಗೆ ಆಸರೆಯಾದ ಮರಗಳೇ ಪ್ರತಿಫಲಿಸಿದಂತೆ ತೋರಿದೆಯೆಂದು ಇದರ ತಾತ್ಪರ್ಯ)

  12. ಅಧಿಕವಂ ಪಡಕೊಂಬ ಬಗೆಯನ್ನು ನಚ್ಚಿರಲು
    ವಿಧಿಯಿರದೆ(?) ಲೋಕದೊಳ್, ನಾವೆಲ್ಲರೂ
    ಒದಗಿಸಲು ಹೊಸಬಟ್ಟೆ,ಆಭರಣಗಳ ಹಬ್ಬ,
    ಹದವಾದ ಸಂಭ್ರಮವು ಮನೆಮಾಡದೇ? 🙂

    ಅಧಿಕ = ಹೆಚ್ಚಿಗೆ

    • ಮೊದಲ ಪಾದದ ಆದಿಯಲ್ಲಿಯೇ ಗಣಭಂಗವಾಗಿದೆ; ದಯಮಾಡಿ ಸವರಿಸಿಕೊಳ್ಳಿರಿ.

      • ಸರ್,ಬದಲಾವಣೆಯನ್ನು ಮಾಡಿದ್ದೇನೆ. ಸರಿಯಾಗಿದೆಯೆಂದುಕೊಂಡಿದ್ದೇನೆ.

  13. (ಶಾರ್ದೂಲವಿಕ್ರೀಡಿತ ವೃತ್ತ, ಉಪಮಾಲಂಕಾರ)

    ಚಿಣ್ಣರ್ ಪರ್ಬದ ರಂಗಿನಂಗಿಗಳ ತೊಟ್ಟಾನಂದದಿಂದಾಡುತುಂ,
    ಪಣ್ಣಂ ಸೇವಿಸಿ ವೃಕ್ಷದೊಳ್,ಕೊಳದೆ ತಣ್ಣೀರಾಟದಿಂ ತೋಷಿಸಲ್,|
    ಮಣ್ಣೊಳ್ ಕುಪ್ಪಳಿಸುತ್ತೆ ಪಾಡಿ ಕುಣಿಯಲ್,ಪೂದೋಟದೊಳ್ ಮೋದದಿಂ,
    ಕಣ್ಣಂ ರಂಜಿಪ ಚಿಟ್ಟೆಗಳ್ ನಲಿವವೋಲಿರ್ಕುಂ, ನವೋತ್ಸಾಹದಿಂ ||

    ಈ ಪದ್ಯವನ್ನು ನಿನ್ನೆಯೇ ಬರೆದೆನಾದರೂ ಪದ್ಯಪಾನಕ್ಕೆ ಬರೆಯುವುದು ತಡವಾಗಿದೆ.
    ಶತಾವಧಾನಿಗಳೂ ಚಿಣ್ಣರ ಬಗೆಗೆ ಇದೇ ಪ್ರಾಸಾಕ್ಷರದಲ್ಲಿ ಬರೆದಿರುವುದನ್ನು ಈಗಷ್ಟೇ ಗಮನಿಸಿದೆ. 🙁 ನನ್ನ ಪದ್ಯದ ಹೋಲಿಕೆ,ಛಂದಸ್ಸು ಹಾಗೂ ಗುಣಮಟ್ಟ ಭಿನ್ನವಾಗಿರುವುದರಿಂದ, ಪ್ರಕಟಿಸಿದ್ದೇನೆ.

    • ನೀವತ್ಯುತ್ತಮಕಾವ್ಯಮಂ ಬರೆದಿರೌ ಶಾರ್ದೂಲವಿಕ್ರೀಡಿತ-
      ಪ್ರಾವಣ್ಯಂ ಮಿಗಿಲಾಗೆ ಪದ್ಯರಚನಾಕಾಂತಾರಸೀಮಾಂತದೊಳ್ |
      ಶ್ರೀವಾಗ್ದೇವಿಯ ಭಾವಭಂಗಿಯೆನುವಂದಂ ಸಂದ ನಲ್ಗನ್ನಡ-
      ಪ್ರಾವೀಣ್ಯಂ ಕಮನೀಯಕಲ್ಪನೆಗಳಿಂ ಸಾರ್ಥಕ್ಯಮಂ ಪೊಂದಿತೌ ||

      • ಗುರುಗಳೆ,ತುಂಬ ಸೊಗಸಾದ ಪದ್ಯದಿಂದ ಪ್ರೋತ್ಸಾಹಿಸಿದ್ದೀರಿ,ವಿನಯಪೂರ್ವಕ ಧನ್ಯವಾದಗಳು.

    • ಶಾರ್ದೂಲವಿಕ್ರೀಡಿತ||
      Thou have now given out an idea that is| temptingly reusable
      Now he will vigilantly, pAde(ಕಲ್ಲು), pick up on| verses that are excellent|
      Sieve high-end poesies to borrow suggestions,| do plagiarism, ‘n (=and) then
      Brave heartedly declare that “I never ever| saw that poem truly there”||
      (Addressed myself in 3rd person for AdiprAsa sake)

      My observation: As you read this, you really don’t pause between words. It will be Kailasam like: ಆಸ್ಯುರೀಡ್ದಿಸ್ಯುರಿಯಲಿಡೋಣ್ಟ್ಪಾಸ್ಬಿಟ್ವೀನ್ವರ್ಡ್ಸ್. It is in this pronounced form that the syllables have to be marked. Eg. Notice how the syllables are carved out from the words ‘given out an idea that is’ in the first line of the verse: ದೌ ಹ್ಯಾವ್ ನೌ ಗಿವನೌಟೆನೈಡಿಯ ದಟೀಸ್ ಟೆಂಟಿಂಗ್ಲಿ ರೀಯೂಸಬಲ್. It is very difficult to harvest short syllables (ಲಘು) in English language.

      • ಇಂಗ್ಲಿಷ್ನಲ್ಲಿ ವೃತ್ತನಿರ್ವಹಣೆ ಮಾಡುವುದಲ್ಲದೆ ಪ್ರಾಸವನ್ನು ಕೂಡ ಗಮನಿಸಿದ್ದೀರಲ್ಲಾ ಸಾಧು ಸಾಧು ಪ್ರಸಾದು 🙂

      • Dear younger brother (ತಮ್ಮಂದಿರೆ),

        Of course,you can do that,but please don’t forget to mention my name,whenever you reuse my ideas/verses. 🙂

        • ಪಾದೆಕಲ್ಲು ಎಂಬ ನಿಮ್ಮ ಹೆಸರನ್ನು ಅಕ್ಷರಾನುಕೂಲಕ್ಕಾಗಿ ಅರ್ಧ ಬಳಸಿಕೊಂಡಿದ್ದೇನೆ.

          ಹಿಂದಿನ ಸರಣಿಯಲ್ಲಿ ಪ್ರಾಸಕ್ಕಾಗಿ ನನ್ನನ್ನು ’ತಮ್ಮ’ ಎಂದು ಕರೆದುಕೊಂಡಿದ್ದೆ. ಬಹುಶಃ ನಾನು ಅಣ್ಣ ಇರಬಹುದು. ನನಗೀಗ 55:

          ಬಂದೊಡೆ ನಿಮ್ಮಿಂದುತ್ತರ ತಿಳಿಯುವು-
          ದಿಂದೆನಗಿಂ ನೀಂ ಕಿರಿಯೆಂದುಂ|
          ಒಂದೂ ಆಡದೆ ಮೌನದಿನಿದ್ದೊಡೆ
          ವಂದಿಪೆ “ಹಿರಿಯರಿಗೆ”ನ್ನುತ್ತುಂ|| 🙂

          • ಪ್ರತಿಕ್ರಿಯೆ ಕೆಳಗಿದೆ.

    • ಬಹಳ ಚೆನ್ನಾಗಿದೆ

      • ಸೋಮರಿಗೆ ಧನ್ಯವಾದಗಳು.

    • ಪ್ರಸಾದರೆ,

      ಪಿರಿಯರ್ ನೀಮಿರಲೊಪ್ಪುತೆಯದನಾ-
      ನೆರಗುತೆ ವಂದಿಪೆನಡಿಗಳಿಗೆ |
      ಪರಸುತೆ ಮನ್ನಿಸಿರೆನ್ನಯ ಬಿನದಮ-
      ನರಿಯದೆಯಾಡಿರೆ ನಿಮ್ಮೊಡನೆ ||

  14. ಒಸಗೆಯ ತೊಡುತಂ ಚಿಣ್ಣರ್
    ಪೊಸತುಡುಗೆಯ ತೋರ್ಪ ಪಾಂಗನೀಕ್ಷಿಪ ಕಾಲಂ
    ಒಸರುತೆ ಮಂತ್ರಂಗಳನು ಬ
    ರಿಸದೊರ್ಮೆ ದಿಸೆದಿಸೆಗೀವನೇಂ ಕೌಶಲಮಂ

    ಮಕ್ಕಳ (ಹಬ್ಬದ) ಸಂಭ್ರಮದ ಮೆರೆದಾಟ ನೋಡಲೆಂದೇ ಕಾಲನೆಂಬ ಮಾಂತ್ರಿಕ ಸೌಂದರ್ಯವನ್ನು ದಿಕ್ಕುದಿಕ್ಕಿಗೂ ವರುಷಕ್ಕೊಮ್ಮೆ ಕೊಡುವನೇ?

    • ಸೋಮ, ಈ ಪದ್ಯದ ನಡೆಯೂ ನುಡಿಯೂ ಅಷ್ಟಾಗಿ ಹಿತವಾಗುತ್ತಿಲ್ಲ. ಕಲ್ಪನೆ ಮಾತ್ರ ಚೆಲುವಾಗಿದೆ. ನೀನೇ ಯೋಚಿಸಿ ಪುನಾರಚಿಸು.

      • ಹೌದು ಪದ್ಯ ಹಿತವಾಗಿಲ್ಲ, ಸರಿಪಡಿಸುತ್ತೇನೆ ಸರ್ 🙂

  15. ೧.
    ಪ೦. ಚೌ)
    ಕಡುಕೆಲಸದೊಳ್ ಭಕುತ ತಾಂ, ಥೇರನೆಳೆಯಲ್ಕೆ
    ಬಿಡುವಾಗನೇಂ? ಊರಜಾತ್ರೆಯೊಳಗೇ |
    ತೊಡಗನೇಮಿನ್ನುಮಂ ಬದಿಗಿರಿಸಿ ಕಜ್ಜಮಂ
    ಕಡುರಸಿಕ ತಾಂ ಕಬ್ಬಹಬ್ಬದೊಳಗೇ ||

    (ಪದ್ಯೋತ್ಸವಕ್ಕೆ ಪೀಠಿಕೆಯಾಗಿ ಬರೆದ ಪದ್ಯ,ಆಗ ಹಾಕಲಾಗಲಿಲ್ಲ…ಈಗ ಯುಗಾದಿಯ ಪದ್ಯದ ಜೊತೆಗೆ ಹಾಕಿದ್ದೇನೆ)

    ೨. ಯುಗಾದಿಯ ಹೊಸ ಹೊಸ ಉಡುಗೆಯ ಬಗೆಗೆ:

    ಕಂ) ಬೆಳೆದಿರೆ ವಿಪಿನಕುರುಕುಲಂ
    ತಿಳಿದುಡೆಗುಟ್ಟಂ ವಸಂತನೆನೆ ದ್ರೋಣಾರ್ಯಂ|
    ಸುಳಿದಿರೆ ಯುಗಾದಿಯುಡೆಯಂ
    ಪೊಳೆಯಿಸಿ ನರರೇಕಲವ್ಯರುಡುತುಂ ನಲಿವರ್ ||

    (ದ್ರೋಣನಂತೆ ವಸಂತನು ಗುರುವಾಗಿ, ಕುರುಕುಲದಂತೆ ಕಾಡಿಗೆ ಬಗೆ ಬಗೆಯ ಉಡುಗೆ-ತೊಡುಗೆಗಳ ಗುಟ್ಟನ್ನು (ಉಡು + ಗುಟ್ಟು) ಹೇಳಿಕೊಡುತ್ತಿದ್ದರೆ, ಮಾನವರೆಂಬ ಏಕಲವ್ಯರು, ಯುಗಾದಿಯು ಬರಲು, ತಮ್ಮ ಹೊಸ ಬಟ್ಟೆಗಳ ಹೊಳಪನ್ನು ತೋರಿಸುತ್ತಾ ನಲಿದಾಡಿದರು)

    • ಸ್ವಲ್ಪ ತಡದಾದರೂ ಕಬ್ಬಹಬ್ಬಕ್ಕೆ ಬಂದಿರುವುದಕ್ಕೆ ಧನ್ಯವಾದಗಳು. 🙂

    • ಶ್ರೀಶ! ಅಂತೂ ನಿನ್ನ ಮಾತುಗಳನ್ನು ಕಾಣುವ ಹಾಗಾದಾರೂ ಆಯಿತಲ್ಲ!! I am really really missing you!!! ನಿನ್ನ ಚೌಪದಿ ಮತ್ತು ಕಂದಪದ್ಯಗಳೆರಡರ ಭಾವ ಮತ್ತು ಕಲ್ಪನೆಗಳು ತುಂಬ ತುಂಬ ಸೊಗಸಾಗಿವೆ. ವಿಶೇಷತಃ ಮರಗಳನ್ನು ಕುರುತನಯರಿಗೂ ವಸಂತನನ್ನು ದ್ರೋಣನಿಗೂ ಮಾನವರನ್ನು ಏಕಲವ್ಯನಿಗೂ ಹೋಲಿಸಿ ಮಾಡಿರುವ ರೂಪಕವಂತೂ ತುಂಬ ಅಭಿನವ, ಅಭಿರಾಮ. ಆದರೆ ಭಾಷೆಯಲ್ಲಿ ಮಾತ್ರ ಕೆಲವೊಂದು ತಿದ್ದುಗೆ ಬೇಕಿದೆ. ಆ ಕೆಲವು ಸವರಣೆಗಳಿಂತಿವೆ:

      ತಿಳಿದುಡೆಗುಟ್ಟಂ… ವಸಂತನೆನೆ ದ್ರೋಣಾರ್ಯಂ…. ಯ್ಗುಗಾದಿಯುಡೆಯಂ….
      ನರರೇಲಲವ್ಯರುಡುತುಂ ನಲಿವರ್…

      • ಧನ್ಯವಾದಗಳು ಸಾರ್,

        ತಿದ್ದಿದ್ದೇನೆ. ಫೋನ್ ಸ್ವಲ್ಪ ಸಮಸ್ಯೆ ಇತ್ತು. ಸದ್ಯದಲ್ಲೇ ಕರೆ ಮಾಡುವೆ. ನಿಮ್ಮ ಧ್ವನಿ ಕೇಳುವ ಭಾಗ್ಯವಾಗಲಿ.

        ಕಾಂಚನ ಅವರೆ,
        ಬಯ್ದು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು 🙂

    • The rUpaka-s of 2nd verse are very fine Srisha. Seems like you needed that distance to visualize it. 🙂

    • ಶ್ರೀಶ ಬಹಳ ಚೆನ್ನಾಗಿದೆ ಪದ್ಯಗಳು 🙂

  16. ಹಳೆಯೆಲೆಗಳಂ ತೊಡೆದು ಹಸಿರೀಗ ಹಬ್ಬಿರಲು
    ತಳೆದಿರ್ಪ ನವಭಾವ ಹೂವಾಯಿತು
    ನಳನಳಿಪ ಹೊಸವಸ್ತ್ರ ಧರಿಸಿರಲು ಹಬ್ಬದೊಳು
    ಒಳಮನದ ಸಂತೃಪ್ತಿ ನಗೆಯಾಯಿತು

    • ಒಳಮನದ ಸಂತೃಪ್ತಿ ನಗೆಯಾದವೋಲಲ್ತೆ
      ತಳಿರು ಪೊರಮಟ್ಟಿಹುದು ತರುವೊಳಗಿನಿಂ|
      ತಳೆದಿಂತು ಮನಮೂಲದೊಳ್ ಪದ್ಯಮನು ಕಳುಹೆ
      ಬಳಿಕ ಡಾಲಾಂಗುಲಿಗಭಿವ್ಯಕ್ತಿಗಂ||
      ಡಾಲ=branch. ಅಂಗುಲಿ=finger. Sent from the mind to the finger for expression (penning)
      ರೂಪಕಗಳು: ಡಾಲಾಂಗುಲಿ ಹಾಗೂ ಮನಮೂಲ (ಮನವೆಂಬ ಬೇರು)

  17. ಹಚ್ಚಹಸಿರಿನ ಪೈರ ಸೀರೆಗೆ
    ಸ್ವಚ್ಛಬಾನಿನ ನೀಲಿ ಸೆರಗಿರೆ
    ಮೆಚ್ಚಿಗೆಯುಲುಹು ಹೊಮ್ಮಿರುವುದೈ ಕುಕಿಲಕಂಠದೊಳು
    ಪಚ್ಚಪರ್ಣಗಳಾಂತ ತರುಸ
    ಮುಚ್ಚಯಕೆ ನದಿ ತಟದ ಮೆರಗಿರ
    ಲುಚ್ಚಮಟ್ಟದ ವಸನವಿದಕುಂ ಭುವಿಯೊಳೆಲ್ಲಿಲ್ಲ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)