Oct 132014
 

ಈ ಸಮಸ್ಯೆಯ ಸಾಲನ್ನು ಪರಿಹರಿಸಿ:
ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್

  113 Responses to “ಪದ್ಯಸಪ್ತಾಹ ೧೩೦: ಸಮಸ್ಯಾಪೂರಣ”

 1. ಮಣ್ಣಿಂ ಗೊಂಬೆಯನೆಸಗುತ
  ಕಣ್ಣಂ ಮುಚ್ಚುತ್ತೆತೂಂಕಡಿಸೆ ಕುಂಬಾರಂ|
  ಬಣ್ಣಿಸುವಾಗಳ್, ಹಯ್ಯೋ!
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

  ಮಣ್ಣಿನ ಪಳೆಗೋಡೆಗೆ ಬಿಳಿ
  ಬಣ್ಣವ ಮೆತ್ತಲ್ಕೆಕನ್ನಡಿಗು ಸಿಂಪಡಿಸಲ್|
  ಪೆಣ್ಣೊಬ್ಬಳ್ ಮುಂಬರುತಿರೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

 2. ಬೆಣ್ಣೆಯವೊಲ್ ಬಗೆ ಕರಗಲ್
  ಕಣ್ಣೋಟದ ವೀಳ್ಯಮಾಗುತಾಸೆಯಡಕೆಗಂ |
  ಹಣ್ಣಾಗುತೆ ರಾಸಿಕ್ಯಂ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

 3. ತಣ್ಣನೆ ರಾತ್ರಿಯೊಳಿನಿಯನ
  ಬಣ್ಣನೆಯಂಕೊಳದಮೀನ್ಗಳಿಗೆಪೇಳ್ವಾಗಳ್|
  ಹುಣ್ಣಿಮೆ ಚಂದಿರ ಬಿಂಬದೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

  • ಚೀದೀ ನಿನ್ನ ಮೂರು ಪದ್ಯಗಳೂ ಚೆನ್ನಾಗಿದೆ, ಮತ್ತು ಈ ಪದ್ಯಕ್ಕೆ ನಿನಗೂ ವಾಸುವಿಗೂ 😉 ಅಭಿನಂದನೆಗಳು

 4. ಚಿಣ್ಣಂ ಸ್ತನ್ಯಮನೀಂಟುತೆ,
  ಬೆಣ್ಣೆಯವೊಲ್ ಕಾಂಬ ಚೂರ್ಣಮಂ ಮೆತ್ತಿರಲ್ |
  ಕಣ್ಣಂ ಮಿಟಕಿಸಿ ನಗುತುಂ,
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

  • ಕ್ಷಮಿಸಿರಿ,ಎರಡನೇ ಪಾದದ ಛಂದೋಭಂಗಕ್ಕಾಗಿ ವಿಷಾದಿಸುತ್ತೇನೆ.
   ……………………
   ಬೆಣ್ಣೆಯವೊಲ್ ಕಾಂಬ ಚೂರ್ಣಮಂ ಮೆತ್ತುತಿರಲ್ |
   ಎಂಬುದಾಗಿ ಸವರಿದ್ದೇನೆ. ತಪ್ಪಿನ ಅರಿವು ಮೂಡಿಸಿದ ಸಹೋದರರಿಗೆ ಧನ್ಯವಾದಗಳು.

  • ಚಿಣ್ನನ ಚೇಷ್ಟೆಯ ಪದ್ಯ ಚೆನ್ನಾಗಿದೆ

   • ಧನ್ಯವಾದಗಳು ಸೋಮರೆ. 🙂

 5. ಬಣ್ಣದ ಮಾತಿಂಗೊಲಿಯುತೆ
  ಕಣ್ಣಂ ಮುಚ್ಚಿ,, ಬಯಸಿರ್ದ ಕರಮಂ ಪಿಡಿಯಲ್
  ಮಣ್ಣಾಯ್ತು ಕನಸು! ಸುಟ್ಟದು
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್
  (ಕನಸು ಮುರಿದು ಬಿತ್ತು – ಅದು ಸುಟ್ಟುಸುಣ್ಣವಾಯಿತು)

  • ಸುಟ್ಟುಸುಣ್ಣವಾದ ಕನಸು ಪೂರಣವನ್ನು ಚೆನ್ನಾಗಿ ಬೆಳಗಿದೆ

 6. ಸಣ್ಣನ ಕುಳಿಯಂ ತೋಡುತೆ
  ಮಣ್ಣಂ ಸಲೆ ಮೊಗೆಯಲಾ ಭುವನ ಮಾನಿನಿಯಿಂ
  ಕಣ್ಣೆನದುಂ ಕಂಡಿತಿದಂ-
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್
  (ಬಾವಿಯನ್ನು ತೋಡುವಾಗ ಬರುವ ಬಿಳಿಯ ಶೇಢಿ ಮಣ್ಣನ್ನು ಕುರಿತು

  • ಸಾಲನ್ನು ತಿದ್ದಿಕೊಂಡಿದ್ದೇನೆ ಸರ್.

  • ಐಡಿಯಾ ಚೆನ್ನಾಗಿದೆ ಆದರೆ ‘ಕಣ್ಣೆನದುಂ ಕಂಡಿತಿದಂ-‘ ಸ್ವಲ್ಪ ಸವರಿಸಬೇಕಲ್ಲವೇ?

 7. ಚಿಣ್ಣನ ಜನನಶ್ರಮದೊಳ್
  ಮಣ್ಣಾಗಲ್ಕಿನಿಯಳನ್ಯಳಂ ಕಯ್ವಿಡಿದಂ
  ಉಣ್ಣಿಸಲಾ ಪಾಲ್ಗಂದಗೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್

  ಮಲತಾಯಿಯ ಕಾಟ

 8. The husband is suffering from arthritis. Due to the pain, he hardly eats anything. Thanks to medical treatment, there is remission in pain today. He ate some. The wife is happy.
  ಉಣ್ಣದೆಲಿರ್ದಿಹ ಗಂಡಂ
  ಗೆಣ್ಣೂತದ ಶೂಲೆಯುಂ ಗುಣಂಗೊಂಡಿಂದ-|
  ಕ್ಷುಣ್ಣಂ ಹರ್ಷಂ, ತಿನಲೀ-
  ಸುಣ್ಣಂ, ಸಂದಿತ್ತು ನೋಡ ಸುಂದರಿಯೆದೆಯೊಳ್||
  (ಉತ್ತರಾರ್ಧವು ಖಂಡಪ್ರಾಸದಿಂದ ಆರಂಭಗೊಂಡಿದೆ! ತಿದ್ದಲು ಯತ್ನಿಸುವೆ)

  ಅನ್ವಯ: ಉಣ್ಣದೆಲಿರ್ದಿಹ ಗಂಡಂ, ಗೆಣ್ಣೂತದ ಶೂಲೆಯುಂ ಗುಣಂಗೊಂಡು ಇಂದು ತಿನಲೀಸುಣ್ಣಂ (ಒಂದಿಷ್ಟು/ಒಂದೀಸು ಉಣ್ಣಲು), ಅಕ್ಷುಣ್ಣಂ ಹರ್ಷಂ ಸಂದಿತ್ತು ನೋಡ ಸುಂದರಿಯೆದೆಯೊಳ್||

  • ಪ್ರಸಾದು,
   ಕೀಲಕಕ್ಕೆ ಸಂಬಂಧಿಸಿದಂತೆ ಪ್ರಶ್ನೆ :: ಊಟಕ್ಕೆ, “ಉಣ್ಣಂ” ಎಂಬುದು ಸಾಧು ಪ್ರಯೋಗವೇ?
   ಅದು ನಾಮಪದವಲ್ಲದೆ, ಕ್ರಿಯಾಪದವಾಗಿದ್ದಲ್ಲಿ, ಉಣ್ಣುವಂ ಎಂದೇನಾದರೂ ಆಗಬೇಕಲ್ಲವೆ?

   • ಈ ಅನುಮಾನವಿದ್ದುಕೊಂಡೇ ರಚಿಸಿದ್ದೇನೆ. ವಿಚಾರಿಸುತ್ತೇನೆ.

  • ಉತ್ತರಾರ್ಧ ಖಂಡಪ್ರಾಸದಿಂದಾರಂಭವಾದರೆ ತೊಂದರೆಯೇನೂ ಇಲ್ಲವಲ್ಲ.

 9. ಪೆಣ್ಣೈಸಿರಿಯೆದೆ (ಪೆಣ್+ಐಸಿರಿಯೆದೆ) ಬಿರಿಯಲ್
  ಕಣ್ಣೋಟದ ಸೂಕ್ಷ್ಮ ತಲುಪೆ ಚಂದ್ರಯುಗಳರಂ |
  ಬಣ್ಣಿಪ ಹೀನೋಪಮೆ ಪಾಳ್ :
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

 10. This verse cannot be comprehended without the background story. It is the depiction of a scene from the movie bhaktakuMbAra. Being compelled by his wife and father-in-law, Gora weds his wife’s younger sister. Heeding his father-in-law’s words that he shall not differentiate between his wives (“ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣಮಾಡಬೇಡ ಗೋರಣ್ಣ”), he stays away from his younger wife, just as he had been doing with his elder wife!
  ಮಣ್ಣುಜ್ಜುಗದಾತ ವರಿಸೆ
  ಪೆಣ್ಣಂ ಬಲವಂತದಿಂದೆ ದಾರಾನುಜೆಯಂ|
  ಬೆಣ್ಣೆಯೆ ಸಲ್ಲದೆಲಾರ್ಗಂ
  ಸುಣ್ಣಂ ಸಂದಿತ್ತು ನೋಡ (ಕಿರಿಯ)ಸುಂದರಿಯೆದೆಯೊಳ್||

  • ಐಡಿಯ ಚೆನ್ನಾಗಿದೆ.
   ಸಮತ್ವದಲ್ಲಿ ಕಾಣು ಎನ್ನುವ ಗಾದೆಯನ್ನು ಮೊದಲೆರಡು ಸಾಲುಗಳಲ್ಲಿ ಅಳವಡಿಸಬಹುದು. ಆಗ ಉದ್ದನೆಯ ಪೀಠಿಕೆ ಬೇಕಾಗಲಿಕ್ಕಿಲ್ಲ.

  • ಐಡಿಯಾ ಚೆನ್ನಾಗಿದೆ

 11. ಸುಣ್ಣದೆ ಪಣ್ಯಂ ಗೈದಿಹ
  ಪೆಣ್ಣೇಂ ಪಾಂಡುರಳೊ(fair complexion)! ಕೊರಳು-ಕಟಿ-ಪೊಡೆಯೊಳ್ ಮೇಣ್|
  ಕಣ್ಣೊಳ್-ಮೂಗೊಳ್-ಕಿವಿಯೊಳ್
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್||

  Those that are in doubt are welcome to the entrance of Gauribidanur bus-stand and meet one such trader. 🙂

  • ಚೆನ್ನಾಗಿ enumerate ಮಾಡಿದ್ದೀರ ಪ್ರಸಾದು.
   ಆದರೆ, ಹಿಂದೆ ಅನೇಕ ಸಾರಿ ಕೇಳಿದ ಪರಿಯಲ್ಲಿಯೇ ಮತ್ತೊಮ್ಮೆ – “ಪಾಂಡುರಳು” ಎಂಬುದು ಸಾಧುಪ್ರಯೋಗವೇ?
   ಹಾಗೆಯೇ, ನಾವೆಲ್ಲರೂ ಗೌರಿಬಿದನೂರಿಗೆ ಹೋಗುವ ಬದಲು, ನೀವೇ ಒಂದು ಫೋಟೋ ಹೊಡೆದು ತಂದು ಹಾಕಿಬಿಡಿ 🙂

 12. ಉಣ್ಣಲೊಡನೆಂದು ಸೇರಿರ-
  ಲಣ್ಣನ ಪರಿವಾರವಂದು, ಮೋದದೆ ಪತಿತಾಂ
  ಬಣ್ಣಿಸಲತ್ತಿಗೆ ಕೈರುಚಿ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

  • The reader gets the full import of the verse. But here the ‘ಅಣ್ಣ’ is HER brother, not her husband’s: Can be rectified by saying ಮೋದದೊಳನುಜಂ instead of ಮೋದದೆ ಪತಿತಾಂ.
   (ಒಡನೆ+ಎಂದು?)

  • ಒಳ್ಳೆಯ ಕಲ್ಪನೆ. ತುಂಬಾ ಸರಳವಾಗಿ ಮತ್ತು ಸೊಗಸಾಗಿ ಸಮಸ್ಯೆ ಪರಿಹಾರವಾಗಿದೆ.

  • ಬಹಳ ಚೆನ್ನಾಗಿದೆ

  • ಧನ್ಯವಾದಗಳು ಪ್ರಸಾದ್ ಸರ್, ಶ್ರೀಶ, ಸೋಮ.
   ಪ್ರಸಾದ್ ಸರ್, ಈಗ ಚೆನ್ನಾಯಿತು. ನಿಮ್ಮ ಪ್ರಸಂಗಾವಧಾನಕ್ಕೆ ಮತ್ತೊಮ್ಮೆ ಧನ್ಯವಾದಗಳು.

   ಉಣ್ಣಲೊಡನೆಂದು ಸೇರಿರ-
   ಲಣ್ಣನ ಪರಿವಾರವಂದು, ಮೋದದೊಳನುಜಂ
   ಬಣ್ಣಿಸಲತ್ತಿಗೆ ಕೈರುಚಿ
   ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||
   (ಒಡನೆ + ಅತ್ತಿಗೆಯೊಡನೆ !!)

 13. ಕಣ್ಣಂ(ಕೃಷ್ಣಂ) ಗಣಿಸದೆ ಯವಳಂ
  ತಣ್ಣಗೆ ಪೋಗಿರ್ದೊಡನ್ಯಸಖಿಯಾಲಯಕಂ
  ಬೆಣ್ಣೆಯ ಬಗೆಯೊಳ್ ಚಿಂತಿಸೆ
  ಸುಣ್ಣಂ ಸಂದಿತ್ತು ನೋಡೆ ಸುಂದರಿಯೆರ್ದೆಯೊಳ್

 14. ವಿದ್ಯುದ್ವೇಗದಲ್ಲಿ ಈ ಪರಿಯ ಪೂರಣಗಳು ಮಹಾಪೂರವಾಗಿ ಹರಿಯುತ್ತಿರುವುದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಕಾಂಚನಾ ಮತ್ತು ಶಕುಂತಲಾ ಅವರ ಪರಿಹಾರಪದ್ಯಗಳ ಎರಡನೆಯ ಪಾದದಲ್ಲಿ ಛಂದೋಭಂಗವಾಗಿದೆ; ಪ್ರಸಾದು ಅವರು ಸಾಕಷ್ಟು ಕಡೆ ಹಳಗನ್ನಡನುಡಿಯನ್ನು ಶಿಥಿಲಗೊಳಿಸಿದ್ದಾರೆ. ಚೀದಿ, ಕೊಪ್ಪಲತೋಟರ ಪದ್ಯಸಮೃದ್ಧಿ ಮೆಚ್ಚುವಂತಿದೆ. ಸೋಮ, ಉಷಾ ಮತ್ತು ರಾಮರ ಪೂರಣಗಳೂ ಚೆನ್ನಾಗಿವೆ.

 15. ತಣ್ಣನ ಜಲಧಿಯ ಶಕ್ತಿಯ
  ಬಣ್ಣಂ ಬಯಲಾಗೆ ಶೋಧನಕವಿಯಿದೆಂದಂ
  “ಸಣ್ಣಗೆ ಚಿಪ್ಪಿನ ರೂಪದೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್”
  ಸುಣ್ಣ=ಕಾಲ್ಸಿಯಂ

 16. ಮಣ್ಣ ಕೆಲಸಮಂ ಮಾಳ್ಪಳ
  ಬಣ್ಣದ ಕುಪ್ಪಸಮಿರಲ್ ಕವಲಕೋಶದವೊಲ್,|
  ನುಣ್ಣಗೆ ಮೆತ್ತಿದ ವೀಳ್ಯದ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

 17. ಪೆಣ್ಣಿನ ಪಿಂತಿರ್ದಪನಾ-
  ನಣ್ಣಾ ಕಣ್ತೆರೆದೆಯಲ್ತೆ, ಚೆಲುವಿನ ಮೊಗದಾ
  ಕಣ್ಣೊಲ್ ಮತ್ಸರಮಂತೇ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್

  ಪಿಂತಿರ್ದಪನಾನಣ್ಣಾ – ಪಿಂತಿರ್ದಪಂ ಆಂ ಅಣ್ಣಾ
  realization of a bad alliance and relief of not pursuing the same based on eye-opening counseling from a friend

  • ಸೋಮ – ಒಳ್ಳೆಯ ಕಲ್ಪನೆ. ಸರಳ ಸುಂದರ.
   ಆದರೆ ಮೊದಲನೆಯ ಸಾಲು ಅಷ್ಟಾಗಿ ಅರ್ಥವಾಗಲಿಲ್ಲ. ನಾನು (ಆಂ) ಅನ್ನುವುದು ನನ್ನ ಆಗಬೇಕಲ್ಲವೆ?
   ಕಣ್ಣೊಲ್ ಅನ್ನುವುದು ಕಣ್ಣೊಳ್ ಆಗಬೇಕೇ?

   • Ram agreed 🙂

    How about this. Still maintained ಆಂ instead of nanna here it appears ok… alwa

    ಪೆಣ್ಣಿನ ಪಿಂತಿರುಗಲ್ಕಾ-
    ನಣ್ಣಾ ಕಣ್ತೆರೆದೆಯಲ್ತೆ, ಚೆಲುವಿನ ಮೊಗದಾ
    ಕಣ್ಣೊಲ್ ಮತ್ಸರಮಂತೇ
    ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್

    ಪಿಂತಿರುಗಲ್ಕಾನಣ್ಣಾ – ಪಿಂತಿರುಗಲ್ಕೆ ಆಂ ಅಣ್ಣಾ

 18. ತಣ್ಣನೆ ಮಧುನಿಶೆಯೊಳ್ ಬೆಲೆ-
  ವೆಣ್ಣೊಡನಾಟದಿನೆ ವೀಳ್ಯದೆಲೆಯೆನಡಕೆಯಂ
  ಕಣ್ಣಂ ಮುಚ್ಚುತಲುಣಿಸಲ್
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್

  ಬೆಲೆವೇಣ್ಣಿನೊಡನೆ ಆಟದಲ್ಲಿ ಕಣ್ಣನ್ನು ಮುಚ್ಚುತ್ತೆ ವಿಳ್ಳೇದೆಲೆಯನ್ನು ತಿನಿಸಲು ಹೋದವನ ಪೂರಣ

  • ಪೂರಣ Vs. ಪುರಾಣ
   ಸೊಗಯಿಪುದಿದು ಕೇಳ್ ಸಖ ನೀ
   ಮಿಗೆ ಪೇಳಿರ’ಲವನ ಪೂರಣ’ಕೆ ಬದಲಿಂಗಂ|
   ಒಗಟಂ ತೊರೆದಿಂತುಂ ಚೆ-
   ನ್ನಿಗನ’ಪುರಾಣ’ಮಿದೆನುತ್ತೆ ನೇರದ ಮಾತಿಂ||

 19. ಕಣ್ಣಂ ತಪ್ಪಿಸಿ ಕಣ್ಣಂ
  ಬೆಣ್ಣೆ ಕದಿಯಲಪ್ಪಿತಪ್ಪಿ ಕೈತಪ್ಪಲದೋ
  ಮಣ್ಣಾಗಿರಲೊಡೆಯೆ ಮಡಕೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ।।

  ಸುಂದರಿ ~ ಯಶೋದೆ

  • ಎರಡನೇ ಸಾಲಿನಲ್ಲಿ ಮತ್ತೆ ಮತ್ತೆ ಪ್ಪ ಕಾರ ಬಂದಿರುವುದು ತುಂಬಾ ಚೆನ್ನಾಗಿದೆ… 🙂

   • “ಪ್ರ ಕಾರ” ಮೆಚ್ಚಿದಕ್ಕೆ ಸಂತೋಷವಾಯಿತು ಚೇದಿ, “ಕಣ್ಣಂ” (=ಕಣ್ಣನ್ನು) ಪ್ರಯೋಗ ಸರಿಯೇ ತಿಳಿಯದು

  • ಉಷಾರವರೆ – ಇಲ್ಲಿ ಯಶೋದೆಗೆ ಕೋಪ ಬಂದಿತು ಎಂಬರ್ಥವೇ? ಸಮಸ್ಯೆಯ ಸಾಲು ನಿಮ್ಮ ಹಿಂದಿನ ಪದ್ಯದಷ್ಟು ಚೆನ್ನಾಗಿ ಇಲ್ಲಿ ಅಳವಡುವುದಿಲ್ಲ ಅನಿಸುತ್ತದೆ. ಅಲ್ಲಿ ಮತ್ಸರವೂ ಇದ್ದುದರಿಂದ ಹೊಂದಿತ್ತು.

   • ಇಲ್ಲ ರಾಮಚಂದ್ರ ಸರ್, ತಾಯಿ ಹೃದಯದ “ತಳಮಳ” ತೋರುವ ಪ್ರಯತ್ನ. ಸರಿ ಹೊಂದುತ್ತಿಲ್ಲವೇ?

    • ಬೆಣ್ಣೆ ಸುಣ್ಣಗಳ ತುಲನದಲ್ಲಿ, ಸುಣ್ಣ ಅಲ್ಪವಾಗುತ್ತದೆ. ಹಾಗೆಯೇ, ಸುಣ್ಣಕ್ಕೆ ಸುಡುವ ಗುಣವಿದೆ. ಈ ಎರಡು ವಿಶೇಷಗಳ ಹಿನ್ನೆಲೆಯಲ್ಲಿ, ಸುಣ್ಣ ಮಾತ್ಸರ್ಯಕ್ಕೆ ಹೊಂದುತ್ತದೆ. ಕೊಪ್ಪಲತೋಟರ ಪದ್ಯದಲ್ಲಿ ಬೆಣ್ಣೆಯ ಮನಸ್ಸು ಮತ್ಸರದಿಂದ ಸುಣ್ಣದ ಎದೆಗೆ ಎಡೆ ಮಾಡಿತು ಎಂಬ ಧ್ವನಿಯಿದ್ದು, ಸುಡುವಿಕೆ ಹಾಗೂ ಅಲ್ಪತನ – ಎರಡೂ ಗುಣಗಳು ಪ್ರಾಧಾನ್ಯ ಪಡೆದಿವೆ. ನಿಮ್ಮ ಮೊದಲ ಪದ್ಯದಲ್ಲಿ ಮಾತ್ಸರ್ಯದ ತೀವ್ರತೆಗೆ ಸುಣ್ಣ ಚೆನ್ನಾಗಿ ಹೊಂದುತ್ತದೆ.
     ಆದರೆ ಇಲ್ಲಿ ಯಶೋದೆ – ಕೃಷ್ಣರಿಗೆ ಹೊಂದಲಾರದು ಎಂದು ನನ್ನ ಅನಿಸಿಕೆ.

     ಅತಿಯಾದ ವಿಶ್ಲೇಷಣೆಗಾಗಿ ಕ್ಷಮೆಯಿರಲಿ 🙂

 20. ಬಣ್ಣಂಗಳನೆರಚುತ್ತಿರ-
  ಲಣ್ಣಂ ಮೋಜಿಂದೆ ತಂಗಿಗಂ,ಹೋಳಿಯಿರಲ್,|
  ಠಣ್ಣನೆ ಜಿಗಿದೋಡಿರೆಯುಂ,
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್||

  • ಜಿಗಿದೋಡಿರೆಯುಂ sariyE?

   • ಸೋಮರೆ,
    ಸರಿಯೆಂದೇ ಭಾವಿಸಿ ಬರೆದೆಂ.
    ತಪ್ಪೊಪ್ಪುಗಳಂ,ಬಲ್ಲರೇ ಬಲ್ಲರಲ್ತೇ ? 🙂

    • ಪ್ರಿಯ ಸೋಮ, ಸೋದರಿ ಶಕುಂತಲಾ ಅವರ ಪ್ರಯೋಗ ಸಾಧುವಾಗಿಯೇ ಇದೆ.

     • ಸೋಮರಿಂದಾಗಿ ನನಗುಂಟಾದ ಸಂದೇಹವನ್ನು ಪರಿಹರಿಸಿರುವುದಕ್ಕೆ ಧನ್ಯವಾದಗಳು.

  • ಹೋಳಿಯಲ್ಲಿ ಬಿಳಿಯ ಬಣ್ಣವನ್ನೆರಚುತ್ತರೆಯೇ? 🙂

   • ರಾಮರೆ,

    ಬಿಳಿಯ ಸುಣ್ಣಕೆ ಬಣ್ಣಮಂ ಸೇರಿಸಲ್,ಬಣ್ಣದ ಸುಣ್ಣಮಪ್ಪುದಲ್ತೇ ? ಪದ್ಯದೊಳ್, ಸುಣ್ಣದ ಬಣ್ಣಂ ಸಮಸ್ಯೆಯಲ್ಲಮಲ್ತೇ ? 🙂

 21. one more idea

  ಪೆಣ್ಣಂಚಿತ್ರಿಸುತಿರೆ, ಸೂಳ್
  ಕಣ್ಣಲುಗಾಡಿಸುತೆಕೆಡಲು ಬಿಳಿ ಕುಂಜವ ತಾಂ|
  ತಿಣ್ಣನೆ ಕೋಪಿಸುತೆಸೆಯಲ್
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

  • ಇಲ್ಲಿ “ಸೂಳ್” ಎಂಬ ಪದದ ಅರ್ಥ ಸರಿ ಹೊಂದದ ಕಾರಣ, ಹೀಗೆ ಸವರಿಸುವೆ :
   ಪೆಣ್ಣಂಚಿತ್ರಿಸುತಿರೆ, ಕಿರು
   ಗಣ್ಣಲುಗಾಡಿಸುತೆಕೆಡಲು ಬಿಳಿ ಕುಂಜವ ತಾಂ|
   ತಿಣ್ಣನೆ ಕೋಪಿಸುತೆಸೆಯಲ್
   ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

 22. ಪಣ್ಣಂ ಕೀಳಲ್ಕೆಳಸುತೆ
  ಪೆಣ್ಣೇರಿರೆ,ಜಾರಿ ಬಿಳ್ದಳಯ್ಯೋ ಮರದಿಂ,|
  ಮಣ್ಣೊಳ್ ಕ್ರೀಡಾರೇಖೆಯ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

  • ha ha chennAgide

   • ಸೋಮರೆ,ಧನ್ಯವಾದಂಗಳ್. 🙂

  • ಚೆನ್ನಾಗಿದೆ.
   ಮರಕ್ಕೆ ಅಷ್ಟು ಹತ್ತಿರದಲ್ಲೆ ಕ್ರೀಡಾರೇಖೆಯನ್ನು ಹಚ್ಚಿದವರಾರೋ? 🙂

   • ರಾಮರೆ,

    ಧನ್ಯವಾದಂಗಳ್.ಮರನಿರ್ಪುದು ಕ್ರೀಡೆಯ ಮೈದಾನದಂಚಿನೊಳೇ. 🙂

 23. ಪೆಣ್ಣೊರ್ವಳ್ವೈಯ್ಯಾರದ
  ಲೆಣ್ಣೆಯ ನೆಲದೊಳ್ಸರಕ್ಕೆನುತೆ ಜಾರಲ್ಕಾ|
  ಬಣ್ಣದ ಕುಂಡಮನಪ್ಪುತೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್|

  • ಚೀದಿಯವರೇ, ನಿಮ್ಮ ಪದ್ಯ ಚೆನ್ನಾಗಿದೆ. ವೈಯಾರದಿನೆಣ್ಣೆಯ, ಜಾರಿರಲಾ,ಕುಂಡಮನಪ್ಪಿರೆ ಎಂದು ಸವರಿದಲ್ಲಿ ಒಳಿತಲ್ಲವೇ? 🙂

   ಪೆಣ್ಣೊರ್ವಳ್ವೈಯಾರದಿ-
   ನೆಣ್ಣೆಯ ಪಸೆಯುಳ್ಳ ನೆಲದೆ ಜಾರುತೆ ಬೀಳಲ್,|
   ಬಣ್ಣದ ಕುಂಡಮನಪ್ಪಿರೆ,
   ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

   ಎಂಬುದಾಗಿ ಪದ್ಯವನ್ನು ತಿದ್ದಿದಲ್ಲಿ “ಸರಕ್ಕೆನುತೆ”ಯನ್ನೂ ತಪ್ಪಿಸಬಹುದು. ನನ್ನ ಅನಿಸಿಕೆ ತಪ್ಪಾಗಿದ್ದಲ್ಲಿ ಮನ್ನಿಸಿರಿ. 🙂

   • ನಿಮ್ಮ ಸವರಣೆಗಳಿಗೆ ಧನ್ಯವಾದಗಳು… ಸರಕ್ ಎಂದು ಬೇಕೆಂದೇ ಬಳಸಿದ್ದೆ… ಆದರೆ ನೀವೆಂದಂತೆ ಇದು ಬಹಳ ಶಿಥಿಲವಾಯ್ತು… 🙁

    • ಅಡ್ಡಿಯಿಲ್ಲ, “ಸರಕ್ಕನೆ” ಎಂಬ ಅನುಕರಣರೂಪದ ಪದಪ್ರಯೋಗವು ಯುಕ್ತವೇ ಆಗುತ್ತದೆ. ಇದನ್ನು ಮತ್ತೂ ಹಳಗನ್ನಡದ ಹದದಲ್ಲಿ ರೂಪಿಸಲು “ಜಲಕ್ಕನೆ” ಎಂದು ಸವರಿಸಬಹುದು. ಈ ಎರಡು ಪದಗಳ ಅರ್ಥವೂ ಒಂದೇ. ಈ ಮೂಲಕ ಪದ್ಯಕ್ಕೆ ಕಾವ್ಯಾತ್ಮಕನೈಜತ್ವದ ಹಾಗೂ ಲೋಕನಾಟಕೀಯತೆಯ ಪರಿಮಳ ದಕ್ಕುತ್ತದೆ.

     • ಸಹೋದರರೆ, ಧನ್ಯವಾದಗಳು.ನೀವೆಂದಂತೆ “ಸರಕ್ಕನೆ” ಎಂಬುದು ತುಂಬ ಸರಿ.ಆದರೆ “ಸರಕ್ಕೆನುತೆ” ಎಂಬುದೂ ಸಾಧುವಾಗುವುದೇ ?” ಸರಕ್ ಎಂದು ಹೇಳುತ” ಎಂಬ ಅರ್ಥ ಮೂಡುವುದಿಲ್ಲವೇ? “ಸರಕ್ಕೆನುತೆ”ಯನ್ನು “ಸರಕ್ಕನೆ” ಎಂದು ಬದಲಾಯಿಸಲು ಸಾಧ್ಯವಾಗದ ಕಾರಣ ನಾನು ಆ ಪ್ರಯೋಗವನ್ನು ಕೈಬಿಟ್ಟೆ. 🙁

  • ಬಣ್ಣದ ಕುಂಡದಲ್ಲಿ ಬಿಳಿ ಬಣ್ಣ ತುಂಬಿ, ಸುಂದರಿ ಬರುವ ನೆಲದಲ್ಲಿ ಎಣ್ಣೆಯನ್ನೂ ಚೆಲ್ಲಿಟ್ಟಿದ್ದಾರಲ್ಲಾ. ಈ ಸಮಸ್ಯೆಯನ್ನು ಸೃಷ್ಟಿಸಲೆಂದೇ ಹೀಗೆಲ್ಲಾ ಮಾಡಿಟ್ಟಿದ್ದಾರೆನಿಸುತ್ತದೆ 🙂

 24. ಮಣ್ಣಿನ ಭಿತ್ತಿಯ ಮನೆಗಂ
  ಸುಣ್ಣಂ ಸಂದಿತ್ತು ನೋಡ, ಸುಂದರಿಯೆದೆಯೊಳ್
  ಕಣ್ಣೊಳ್ ವೈಧವ್ಯಮಳಸಿ
  ಬಣ್ಣದ ಬಾಳ್ವಿಕೆಯಚಿತ್ರಮೊರೆದಂ ಯುವಕಂ

  ವೈಧವ್ಯಮಳಸಿ ಮತ್ತು ಚಿತ್ರಮೊರೆದಂ ಇವೆರಡು ಕ್ರಿಯಾಸಮಾಸವಾಗುತ್ತದೆಯಲ್ಲವೇ? ಅಥವಾ ವೈಧವ್ಯಮನಳಸಿ ಮತ್ತು ಚಿತ್ರಮನೊರೆದಂ ಎಂಬುದೇ ಸಾಧುವೇ?

  • ಒಳ್ಳೆಯ ಕಲ್ಪನೆ ಸೋಮ.
   ವೈಧವ್ಯಮಂ ಅಳಿಸಿ, ಚಿತ್ರಮಂ ಒರೆದಂ ಎಂಬುದೇ ಸಾಧುವಾಗಿದ್ದರೂ, ವಿಭಕ್ತಿ ಪಲ್ಲಟದ ವ್ಯವಸ್ಥೆಯ ಸದುಪಯೋಗ [;-)] ಮಾಡಿಕೊಂಡು, ವೈಧವ್ಯಮಳಿಸಿ, ಚಿತ್ರಮೊರೆದಂ ಎಂದೂ ಮಾಡಬಹುದು ಎನ್ನಿಸುತ್ತದೆ.
   ಗಣೇಶಾಭಿಪ್ರಾಯಕ್ಕೆ (ಅಥವಾ ಗಣೇಶರಾಭಿಪ್ರಾಯಕ್ಕೆ) ಕಾಯೋಣ

  • ಹಾಗೆಯೇ ಚಿತ್ರವನ್ನು ಒರೆದ (ಹೇಳಿದ) ಅನ್ನುವ ಬದಲು ಚಿತ್ರವನ್ನು ರಚಿಸಿದ / ತೋರಿಸಿದ / ಕಲ್ಪಿಸಿದ ಎನ್ನಲೂಬಹುದು

   • ಪ್ರಿಯ ರಾಮ್, “ಗಣೇ ಶರಾಭಿಪ್ರಾಯಃ”(ಮಹಾಜನರ ಸಮೂಹದಲ್ಲಿ ನೀರಿನ, ಅರ್ಥಾತ್ ತೀರ ಜಾಳಾದ ಅಭಿಮತ)ಕ್ಕೇನು ಬೆಲೆ? 🙂
    ಹೀಗಾಗಿ ಗಣೇಶಾಭಿಪ್ರಾಯವೇ ಸಾಕು, ಸರಿ ಕೂಡ:-)
    ಸೋಮನ ಸಮಸ್ಯಾಪೂರಣದ ಸ್ವಾರಸ್ಯವು ಅತ್ಯುತ್ತಮವಾದ ಕಾರಣ ವಿಭಕ್ತಿಪಲ್ಲಟಾದಿಗಳನ್ನೆಲ್ಲ ಬದಿಗಿರಿಸಿ ನೋಡಿ ಮೆಚ್ಚುವುದು ರಸಿಕರ ದಾರಿ. ಅಲ್ಲದೆ ಇದು ಕ್ವಾಚಿತ್ಕವಾಗಿ ಪೂರ್ವಕವಿಸಂಮತವೂ ಆಗಿದೆ.

  • ಸೋಮರೆ,

   ಸಂಸ್ಕೃತದ ಅಕಾರಾಂತಕಾರಕಪದವು ಪೂರ್ವಪದದ ಸ್ಥಾನದಲ್ಲಿದ್ದರೆ, ಕ್ರಿಯಾಸಮಾಸವಾದಾಗ,ಬಿಂದುನಿತ್ಯವೆಂಬ ನಿಯಮವಿದೆ.ಹೀಗಾಗಿ,ವೈಧವ್ಯಮಳಸಿ,ಚಿತ್ರಮೊರೆದಂ ಕ್ರಿಯಾಸಮಾಸವಾಗಿ ಸರಿಯಲ್ಲ.

   • Thanks Ram, Shakuntala avare, will correct it

    • ಸೋಮರೆ,
     ವೈಧವ್ಯಂಅಳಸಿ,ಚಿತ್ರಂಒರೆದಂ ಎಂದು ಬಿಂದುಯುಕ್ತವಾಗಿಯೇ ಇರಬೇಕೆಂದುಕೊಂಡೆ.ಆದರೆ ಅಲ್ಲಿ ಸಂಧಿಕಾರ್ಯದಿಂದಾಗಿರಬಹುದು, ವೈಧವ್ಯಮಳಸಿ,ಚಿತ್ರಮೊರೆದಂ ಸರಿಯೆಂಬುದು ಸಹೋದರ ಗಣೇಶರಿಂದ ತಿಳಿಯಿತು.ಕ್ಷಮಿಸಿರಿ,ನನ್ನ ಅನಿಸಿಕೆಯನ್ನು ಪರಿಗಣಿಸದಿರಿ.

     • ನೀವು ಕ್ಷಮೆಯನ್ನೇನೂ ಯಾಚಿಸಬೇಕಿಲ್ಲ. ವಿಭಕ್ತಿಪಲ್ಲಟವು ಪದ್ಯರಕ್ಷಣೆಗೆ lost resort ಅಷ್ಟೇ:-) ಅಲ್ಲದೆ ಕ್ರಿಯಾಸಮಾಸದ ಬಗೆಗೆ ನೀವು ಅರಿತಿರುವುದು ಸಾಧುವೇ ಆಗಿದೆ.

     • ಧನ್ಯವಾದಗಳು ಗಣೇಶ್ ಸರ್, ಶಕುಂತಲಾ ಅವರೇ 🙂

     • -^- 🙂

 25. ಪೆಣ್ಣಂ ಕರೆದು ಚಣದೆ ಕೈ
  ದೊಣ್ಣೆಯ ಮಾಂತ್ರಿಕನ ಮಾಯೆಯಿಂ ಮರುಳಾಗಲ್
  ಕಣ್ಣಿಗೆ ಮಣ್ಣೆರಚುತೆ ಕರಿ
  ಸುಣ್ಣಂ ಸಂದಿತ್ತು ನೋಡ ಸುಂದರಿ ಯೆದೆಯೊಳ್

 26. ಬಣ್ಣದ ಬೆಳಕೊಳ್ ಬಳುಕುವ
  ಹೆಣ್ಣ ನಡೆವಳಿಯ ಬೆಡಂಗ, ಬೆರಗಿಂ ಗೆಣೆಯಂ
  ಕಣ್ಣೆವೆಯಲುಕದೆ ವೀಕ್ಷಿಸೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ||

  (ramp walk ವೀಕ್ಷಣೆ !!)

 27. ಬಣ್ಣವ ತುಂಬಿರಲಂತುಂ
  ದಿಣ್ಣೆಯ ಮೇಗಡೆಯೊಳಿದ್ದ ಕೆಳದಿಯ ಮನೆಗಂ ।
  ಕಣ್ಣುರಿಗೊಂಡಿರಲಾಗಲ್
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ।।

 28. ಸಣ್ಣನ ಕೊಡಗಾಮಿನಿಯೊಳ್
  ಕಣ್ಣಳತೆಯ ಸುಟ್ಟ ಚಿಪ್ಪ ಮೇಲ್ ಬಿಸಿ ನೀರಂ
  ನುಣ್ಣಗೆ ಹಾಯ್ಕಿಸೆ,ದಿನದೊಳ್
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್
  (ಸುಣ್ಣವನ್ನು ತಯಾರಿಸುವ ಬಗೆ 🙂 )

 29. ಮಣ್ಣೊಳಗಾಡಿರುವನುಜನ
  ಬೆಣ್ಣೆನುಡಿಯೊಳಾಗ್ರಹಿಸಿರೆ ಬರೆಯಲ್, ಮುನಿಸಿಂ
  ಚಿಣ್ಣನೆಸೆಯಲಾ ಸೀಮೇ-
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ।।

 30. ಸಾರಸ್ವತಸಹೋದರಿಯರಾದ ಶ್ರೀಮತಿ ಉಷಾ, ಕಾಂಚನ, ಶಕುಂತಲಾ ಅವರೂ ಪ್ರೀತಿಯ ಗೆಳೆಯರಾದ ಚೀದಿ, ಸೋಮ, ರಾಮ, ಪ್ರಸಾದು, ಕೊಪ್ಪಲತೋಟ ಮುಂತಾದವರೂ ಪುಂಖಾನುಪುಂಖವಾಗಿ ಬಗೆಬಗೆಯ ರೀತಿಯಲ್ಲಿ ಸದ್ಯದ ಸಮಸ್ಯಾಪೂರಣವನ್ನು ಸಾಗಿಸುತ್ತಿರುವುದನ್ನು ಕಂಡು ನನ್ನ ಕಲ್ಪನಾಶಕ್ತಿಯು (ಬಗೆಬಣ್ಣ) ನಾಚಿ ನಡುಗಿ ಬೆಳ್ಪೇರಿದೆ. ಹೀಗಾಗಿ ಇದೇ ನನ್ನ ಸದ್ಯದ ಪೂರಣ:

  ತಿಣ್ಣನೆ ಕವನಿಪ ನಿಮ್ಮೀ
  ಬಣ್ಣಿಕೆಯಂ ನೋಡುತೆನ್ನ ನುಡಿವೆಣ್ಣೆರ್ದೆಯೊಳ್|
  ತಣ್ಣಗೆ ಬಗೆಬಣ್ಣಮಳಿಯೆ
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್||

  • ಸರಿಯೇ, ಪೂರ್ಣದಿ ಸುಣ್ಣಮ-
   ಡರಿರಲ್ ನುಡಿವೆಣ್ಣ ಛಾತಿಯೊಳಗವಳಂ ನೀಂ|
   ಉರದೊಳ್ ನಿಮ್ಮಯ ನಿಲಿಸಿರೆ
   ಮೆರುಗೇಂ ಸ್ಫುರಿಪಳ್? ಶರಣ್ಯಮನ್ಯಂ ದೈವಂ|| 🙂

  • ಗಣೇಶ್ ಸರ್, ನಿಮ್ಮೀ ಪೂರಣ ಸಹಜ ಪೂರ್ಣತೆಯ ಸಂಕೇತ . ನಮ್ಮದದೋ “ಸುಣ್ಣ” ಲೇಪನದಿಂದಾದದ್ದು !!

   ಪಣ್ಣಾಗಲೆನೆ ಕಾಯ್ತುದಿಗಂ
   ಸುಣ್ಣವ ಲೇಪಿಸುವ ವಾಡಿಕೆಯೊಲಿಂತದುವೈ
   ಪೆಣ್ಣಾಗುವ ಕಾಲಕೆ ಸರಿ
   ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್ ।।

   • ಪ್ರತಿಕ್ರಿಯಾಪದ್ಯದಲ್ಲಿ ಸಮಸ್ಯಾಪರಿಹಾರ! ಸುತರಾಂ ಸ್ತುತ್ಯ.
    ಮೊದಲ ಸಾಲಿನಲ್ಲಿ ಒಂದು ಮಾತ್ರೆ ಹೆಚ್ಚು ಇದೆ. ಹೀಗೊಂದು ಸವರಣೆ:
    ಪಣ್ಣಾಗಲ್ ಕಾಯ್ತುದಿಗಂ
    ಸುಣ್ಣವ ಲೇಪಿಪ ಚರಿತ್ರದವೊಲಲ್ತೆಲಿದುಂ|
    ಪೆಣ್ಣೆಂದೆನ್ನಿಪ ಕಾಲಕೆ
    ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್||

 31. ಪೆಣ್ಣಿರೆ ರಂಗೋಲೆಯಿಡುತೆ,
  ಮಣ್ಣಿಂದೇರುತ್ತೆ ಕಚ್ಚಿರಲಿರುವೆಯವಳಂ,|
  ಸಣ್ಣಗೆ ಚೀರುತೆ ತುರಿಸಲ್,
  ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್||

  • 🙂 ಸುಣ್ಣದ ಕೈಯಿಂದ ತುರಿಸಿಕೊಂಡದ್ದರಿಂದ, ತೆಲುಗಿನ ಗಾದೆಯೊಂದು ಇಲ್ಲಿ ಉಲ್ಲೇಖನೀಯ: ఊర్కుంటావా? గీర్కొంటావా?

 32. ಭಗಿನೀ ಉವಾಚ:
  ಬಣ್ಣಮನಣ್ಪಿರೆ(ಹಚ್ಚು) ಗೋಡೆಗ-
  ಮಣ್ಣಂ, ರವಿವರ್ಮಚಿತ್ರಮಂ ಮರೆಸದೆ ತಾಂ|
  ಸಣ್ಣತನಮಲ್ತೆಲಲಸಂ(laziness)?
  ಸುಣ್ಣಂ ಸಂದಿತ್ತು ನೋಡ (ಚಿತ್ರದ)ಸುಂದರಿಯೆದೆಯೊಳ್||

 33. At the countryside:
  ಪೆಣ್ಣು* ತಮಾಖುವ ಮೇಣ್ ಮಿಗೆ
  ಸುಣ್ಣಮನಗೆಯುತ್ತೆ ಕಂದನ ಕಿಲೋಲವಮಂ|
  ಬಣ್ಣಿಸೆ, ಕವಳಂ ತುಳುಕುತೆ
  ಸುಣ್ಣಂ ಸಂದಿತ್ತು ನೋಡ ಸುಂದರಿ*ಯೆದೆಯೊಳ್||

 34. I have shared with only a few a parihAra of mine to this samasye:
  ಗೈದಿಹನು ಪೂರಣಮನೀ ಸಮಸ್ಯೆಗಮೀ ಪ್ರ-
  ಸಾದು ಕೀಲಕವಿಡುತೆ ’ಸೀಮೆಸುಣ್ಣಂ’|
  ಸೋದರರೆ ನೀಂ ಬಳಸಿ ಶ್ಲೀಲದಿಂದಿದನೀತ-
  ನೈದಿಹನುಮಶ್ಲೀಲದಿಂ, ಪ್ರಕಟಿಸನ್|| 🙁
  PS: I just noticed that Smt. Usha has solved this aptly in SL. 29

  • ಪ್ರ-ಸಾದು ಸರ್, ನಂಬಿದ್ದೇವೆ, “ಚಾಕ್ ಪೀಸ್” ಎಸೆಯಬೇಕಿತ್ತಲ್ಲ ಅಂತ ಯೋಚಿಸುತ್ತಿದ್ದೆವು !!

 35. ಬಣ್ಣದಿ ಸೊಗಯಿಸೆ ಮೊಗವುಂ
  ಕಣ್ಣಂ ಬೆಳಗಿರೆ ತಿಮಿರ್ದ ಕಾಡಿಗೆಯಂದಂ ||
  ಪಣ್ಣನೆ ಗಂಧವ ಸೂಸಿಪ
  ಸುಣ್ಣಂ ಸಂದಿತ್ತು ನೋಡು ಸುಂದರಿಯೆದೆಯೊಳ್ ||

  ಸುಣ್ಣ – Powder.

  • ಚೆಂದದ ಪದ್ಯವು ಮೆರುಗಿಂ
   ಸಂದಿರ್ಪುದುಮಂತ್ಯಬಿಂದುವಿನವೊಲ್ ಶ್ರೀಶಾ|
   ಮುಂದಿನ ಸರಣಿಯೊಳೊರೆಯೈ
   ನಂದದದೀಪಗಳಕಬ್ಬಮಂನೀಂಕೆಳೆಯಾ|

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)