Oct 192014
ನರಕಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಪಟಾಕಿಗಳು, ದೀಪದಸಾಲಿನ ಅಲಂಕಾರ, ಆಕಾಶದಬುಟ್ಟಿ, ಸಿಹಿತಿಂಡಿಗಳು ಹೀಗೆ ದೀಪಾವಳಿಯ ಮೆರಗು ಒಂದೇ ಎರಡೇ… ಈ ಅದ್ಭುತವಾದ ಹಬ್ಬವನ್ನು ಕುರಿತು ಕನ್ನಡ ಅಥವಾ ಸಂಸ್ಕೃತದಲ್ಲಿ ಕನಿಷ್ಠ ಐದು ಪದ್ಯಗಳನ್ನು ಸಾಲಂಕೃತವಾಗಿ ರಚಿಸಿರಿ.
ವಿ. ಸೂ: ಐದು ಪದ್ಯಗಳಿಗಿಂತ ಒಂದೆರಡು ಕಡಿಮೆಯಾದರೂ ಅಡ್ಡಿಯಿಲ್ಲ ನಮ್ಮೊಡನೆ ಪದ್ಯದ ಸಿಹಿಯನ್ನು ಹಂಚಿಕೊಳ್ಳಿರಿ 🙂
ಯಾಕೋ ಇನ್ನು ದೀಪಾವಳಿಯ ಸಂಭ್ರಮ ಕಾಣುತ್ತಿಲ್ಲವಲ್ಲ !?
ನವೀನ,
ಚತುರ್ದಶಿ ನಾಳೆ. ಪಾಡ್ಯದವರೆಗೂ ದೀಪಾವಲಿ. ಕಾದು ನೋಡಿ ಆನಂದಿಸಿ 🙂
ಶ್ರೀಶಾ! ನಿನ್ನಯ ಪದ್ಯಚಂದ್ರಕಲೆಯಂ ದೀಪಾವಲೀಪರ್ವದೊಳ್
ಪೈಶಲ್ಯಾಸ್ಪದಪದ್ಯಪಾನಗಗನಾಲಂಕಾರಮಂ ಮೂಡಿಸಲ್|
ವೈಶಾಲ್ಯಂ ಕಿರಿದಾಯ್ತೆ? ಕಾರ್ತಿಕಶರದ್ರಾಸಿಕ್ಯಮುಂ ಸಂದಿರ-
ಲ್ಕಾಶಾಮೋಷಣಮೇತಕಯ್? ಕಳೆದುದಿಂದೇ ಮತ್ತಮಾವಾಸ್ಯೆಯುಂ!!
ಪದ್ಯಪಾನಿಗಳಲ್ಲಿ ಕ್ಷಮೆ ಕೋರಿ–ಕಳೆದ ದೀಪಾವಳಿಗೆ ಪದ್ಯಪಾನಕ್ಕಾಗಿ ಬರೆದಿಟ್ಟ ಪೂರಣ (ಒಂದು ಪದ್ಯ )ಸಣ್ಣ ಬದಲಾವಣೆಯೊಂದಿಗೆ
ಎತ್ತೆತ್ತ ನೋಡಿದರು ನಾವಿನ್ಯ ಹೊತ್ತಂಥ
ಮುತ್ತಿರುವ ದೀಪಗಳ ಕಿರಣಗಳು ಸಂಜೆ I
ಕತ್ತಲೊಳು ಹೃದಯದೀ ಹಣತೆಯನು ಹಚ್ಚುತ್ತ
ಸುತ್ತಪಸರಿಸಲಿ ಸುಜ್ಞಾನ ದೀಪII
ಮುತ್ತು =ಸುತ್ತುಗಟ್ಟು
ನಾವು ನವನವೀನ ಹಣತೆಗಳೊಂದಿಗೆ ಪ್ರತಿ ದೀಪಾವಳಿಯನ್ನು ಆಚರಿಸುತ್ತೇವೆ . ಹೃದಯವೆಂಬ ಅಂತರಂಗದ ಹಣತೆಯಲ್ಲಿ ಸಾಕಷ್ಟು ಕತ್ತಲೇ ತುಂಬಿಕೊಂಡಿದೆ.ಬಾಹ್ಯ ಆಡoಬರದ ಬದಲು ಅಥವಾ ಅದರೊಂದಿಗೆ ಅಂತರಂಗದ ಜ್ಞಾನ ದೀಪ ಹಚ್ಚುವ ಪ್ರಯತ್ನ ಮಾಡೋಣ ಅನ್ನುವ ಆಶಯದೊಂದಿಗೆ .
ಚೆನ್ನಾಗಿದೆ
ಚೆನ್ನಾಗಿದೆ
“ಸಾಲುದೀಪದ ಸಾಲು”
ಧಾರಿಣಿಯೊಳಾಶ್ವಯುಜ ಬಹುಳ ತ್ರಯೋದಶಿಯೊ
ಳಾರಂಭಗೊಂಡಿರುವ ಹಬ್ಬದೊಳುವೈ ।
ನೀರ ತುಂಬುವ ಹಂಡೆ ತೊಟ್ಟಿಗದೊ ಕೆಮ್ಮಣ್ಣ
ಕಾರಣೆಯ ಬಳಿದ ಕಾರಣವಕಾಣೈ ।।
ವರವ ಪಡೆದಾಸುರನ ವಧೆಯ ನೆನೆಸುವ ವಾರ
ನರಕಾಸುರನ ಚತುರ್ದಶಿಯದಂದು ।
ಒರೆದೆಣ್ಣೆ ಮಿಂದು ಮನೆಮಂದಿಯೆಲ್ಲರನುವಿಂ
ದೆರೆದೆಣ್ಣೆ ಬೆಳಗುವರು ದೀಪತಾವುಂ ।।
ಒಲಿಸಿ ಲಕುಮಿಯನು ಮರುದಿನದಮಾವಸೆ ಸಂಜೆ
ಬಲಿಯು ಬರುವನು ಪಾಡ್ಯಮಿಯೊಳು ಮುಂಜೆ ।
ಕಲೆಸಿಯೆಸಗುತೆ ಕೆರಕ, ಹೊಸಿಲ ಬದಿಯಿಡೆ ಬೆನಕ
ಸಲುವಳಿಯೆ ಸಂದಿಹುದು ಬಲಿಪೂಜೆಯುಂ ।।
ಲಕ್ಷಣದೊಳುಂಡುಟ್ಟು ಸಡಗರದೆ ಹಿರಿಯರಾ
ರಕ್ಷಣದೆ ಸಿಡಿಸೆ ಸಿಡಿಮದ್ದುಗುಂಡಂ ।
ಪಕ್ಷಮಾಸವ ಮುಗಿಸಿ ಸಾಗಿರುವ ಪಿತೃಗಳ್ಗೆ
ಕಕ್ಷೆ ತೋರಿವುವೇನು ಬಾಣಬಿರುಸುಂ ।।
ಹೆಚ್ಚೆ ಹೊನ್ನೆನುತೆರೆಚೆ ಹುಚ್ಚಳ್ಳ ಹೂದಳವ
ಹುಚ್ಚೆದ್ದು ಕುಣಿದಿರಲು ಮನವದಿಂತುಂ ।
ಕೊಚ್ಚಿಹೋಗೆನೆ ದೀಪದಡಿಯ ಕತ್ತಲೆಯೆಂದು
ಹಚ್ಚಿದುದುವೀಸಾಲು ಹಣತೆಯಂತುಂ ।।
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಚೆನ್ನಾಗಿದೆ.
ವಿಶೇಷವಾಗಿ “ಪಕ್ಷಮಾಸವ ಮುಗಿಸಿ ಸಾಗಿರುವ ಪಿತೃಗಳ್ಗೆ ಕಕ್ಷೆ ತೋರಿಹವೇನು ಬಾಣಬಿರುಸುಂ” 🙂
ಉಷಾ ಅವರೇ ಬಹಳ ಚೆನ್ನಾಗಿದೆ, ಕೊಪ್ಪಲತೋಟನೆಂದಂತೆ ನಾಲ್ಕನೇ ಪದ್ಯ ನನಗೂ ಬಹಳ ಹಿಡಿಸಿತು. ಅಂತೆಯೇ ಮುಂಜೆ ಎಂಬುದು ಸಾಧುವೇ? ‘ಒರೆದೆಣ್ಣೆ ಮಿಂದು ಮನೆಮಂದಿಯೆಲ್ಲರನುವಿಂ’ ಎಂಬಲ್ಲಿಗತಿಸುಭಗವಾಗಿಲ್ಲ ಗಮನಿಸಿರಿ
ದಕ್ಷರೆಲೆ ಕೇಳಿರೆನಗೀ
ಕಕ್ಷೆಯ ತೋರ್ದುದವಧಾನಿಗಳ್ ಚಂದನ(TV)ದೊಳ್ ।
ಅಕ್ಷರವು ಕೂಡಲಿಂತು ವಿ-
ಚಕ್ಷಣಕದೊ ಪದ್ಯಪಾನವೇ ಕಾರಣಮೈ ।।
ಸೋಮ, ಆ ಪಾದ – ಎಣ್ಣೆನೀರು ಕಾಕಿಕೊಂಡ ಬಚ್ಚಲಮನೆಯಲ್ಲಿ ಜಾರುತ್ತಿದೆಯಲ್ಲವೇ ?!
Last two lines are too good. Better rephrase them thus:
ಕೊಚ್ಚಿಹೋಗೆನೆ ದೀಪದಡಿye ಕತ್ತಲೆಯೆಂದು
ಹಚ್ಚಿpevumeeಸಾla ಹಣತೆyiMತುಂ ।।
ಧನ್ಯವಾದಗಳು ಪ್ರಸಾದ್ ಸರ್, ಪದ್ಯ ಸಾಲನ್ನು ಸರಿಪಡಿಸಿ ಅರ್ಥೈಸಿದ್ದಕ್ಕೆ.
**ಕೊಚ್ಚಿಹೋಗೆನೆ ದೀಪದಡಿಯ ಕತ್ತಲೆಯೆಂದು
ಹಚ್ಚಿಪೆವುಮೀಸಾಲ ಹಣತೆಯಿಂತುಂ ||
Typo again – not ದೀಪದಡಿಯ but ದೀಪದಡಿಯೆ. You can’t wish it away – the darkness.
ಮಿಂದು ನಿಂದಿಹ ತರುಗಳೆಲ್ಲರೊ
ಳಂದ ಕಾಣುತಲಿರ್ದ ಮನುಜನಿ
ಗೆಂದದಾಯ್ತಯ್ ಪ್ರಕೃತಿ ಸಾದೃಶನಪ್ಪ ಹಂಬಲವು!
ಬಂಧುಬಾಂಧವರೊಡನೆ ಸೇರುತೆ
ಗಂಧ ಬೀರುವ ತೈಲಮಜ್ಜನ
ದಿಂದಲೆಸೆವನು ವೃಕ್ಷ, ಪಸುರಂ ತಳೆದ ಹೊಸತನದಿಂ
ಕತ್ತಲನೊತ್ತುತೆ ಬೆಳಕಂ
ಬಿತ್ತುತಲೋಡೋಡಿ ಬರ್ಪ ರವಿಯಂದದೆ ತಾಂ
ಸುತ್ತಲು ಹೊತ್ತಿತೆ ದೀಪಂ
ಚಿತ್ತದೊಳಡಗಿರ್ದ ತಮವ ಬೆಳಗುವ ನೆವದಿಂ?
ಮಳೆಯಂ ಸ್ವಾಗತಿಸಲ್ಕೆ ಮಿಂಚು ಸುಳಿದುಂ ತಾನಿತ್ತಿರಲ್ ಕಾಂತಿಯಂ
ನಳಿದುಂ ಮೇಘದ ಮಾಲೆಯುಂ ಸಿಡಿಯುತುಂ ಸಂತೋಷಮಂ ತೋರ್ದವೊಲ್
ಇಳೆಯೊಳ್ ಸಂದಿರೆ ಮದ್ದುಗುಂಡ ರಭಸಂ ಹರ್ಷಕ್ಕೆ ಮೈಬಂದವೊಲ್
ತಳೆದುಂ ಸಂತಸಧಾರೆಯಂ ,ಕರೆವರೈ ದೀಪಾವಳೀ ಪರ್ವಮಂ
ಉನ್ನತ ಕೂರ್ಮೆಯ ಮೆರೆಯುತ ಮರವದು
ತನ್ನಯ ಫಲಗಳನೀಯುತಿರೆ
ಹೊನ್ನಿನ ಹೃದಯದ ಮಾನವ ಕೊಡುವನೆ
ನನ್ನಿಯ ಸಿಹಿಯಂ ಹಬ್ಬದೊಳು?
ಕಲಿತು ತಾನಡೆವ ಜಗದೆ ಮಾನವನು ಸುತ್ತಮುತ್ತಲಿಂದ
ಕಲೆವ ವಿದ್ಯೆಯನು ಕಲಿಸಿ ಸಾಗುವನು ಸೊಗದ ರೀತಿಯಿಂದ
ಬಲಿತ ಜಾಣ್ಮೆಯಿಂ ಕೂಡಿ ಬಾಳುತಲಿ ಪರ್ವ ನಿಚ್ಚ ಕಂಡ
ಒಲುಮೆ ಜೀವನದ ದೀಪವಾಗಿರಲು ,ಕತ್ತಲಿಲ್ಲವೆಂದ
(ಹಬ್ಬದ ಆಚರಣೆಯನ್ನು ಮಾನವ ಸುತ್ತಲಿನ ಪ್ರಕೃತಿಯಿಂದ ಕಲಿತನೆಂದೆನುವ ಬಯಕೆ ನನದು 🙂 )
“ತಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು”
ಸೊಗಸಾದ ಕಲ್ಪನೆಯ ಪದ್ಯಗಳು 🙂
ಅವಧಾನಿ ಕೊಪ್ಪಲತೋಟರಿಗೆ ಧನ್ಯವಾದಗಳು 🙂
ಕಾಂಚನಾ ಅವರೆ ಬಹಳ ಚೆನ್ನಾಗಿದೆ, ಕಡೆಯ ಪದ್ಯದ ಕಡೆಯ ಸಾಲಂತು ಅತ್ಯುತ್ತಮವಾಗಿದೆ “ಒಲುಮೆ ಜೀವನದ ದೀಪವಾಗಿರಲು ,ಕತ್ತಲಿಲ್ಲವೆಂದ”
ಮೊದಲಿಗೇ ನಮ್ಮ ಸಹೋದರಿಯರು (ಭಾಲ, ಉಷಾ, ಕಾಂಚನಾ) ಒಳ್ಳೆಯ ಪದ್ಯಗಳನ್ನು ರಚಿಸಿ ನವೀನನ ಸಂದೇಹವನ್ನು ನಿವಾರಿಸಿದ್ದಾರೆ. ಇದಕ್ಕಾಗಿ ಅವರಿಗೆಲ್ಲ ಅಭಿನಂದನೆಗಳು. ಮುಖ್ಯವಾಗಿ ಕಾಂಚನಾ ಅವರು ಕಂದ, ವೃತ್ತ, ಷಟ್ಪದಿ, ಸಾಂಗತ್ಯ ಮತ್ತು ಸಂತುಲಿತಮಧ್ಯಾವರ್ತಗತಿ ಎಂಬ ಬಂಧಗಳ ಮೂಲಕ ಇಡಿಯ ಕನ್ನಡಸಾಹಿತ್ಯದ ಛಂದಸ್ಸಿನ ಇತಿಹಾಸವನ್ನೇ ಧ್ವನಿಸಿದ್ದಾರೆಂದರೆ ಅತಿಶಯವಲ್ಲ. ಉಷಾ ಅವರು ದಾಸಸಾಹಿತ್ಯದ ಕೀರ್ತನವನ್ನು ನೆನಪಿಸುವಂಥ ಚೌಪದಿಗಳನ್ನು ರಚಿಸಿದ್ದಾರೆ. ಎಲ್ಲ ಚೆನ್ನಾಗಿವೆ.
ಉತ್ಸಾಹದ ಸೆಲೆಯಾದ ಸಹೋದರ ಗಣೇಶರಿಗೆ ಧನ್ಯವಾದಗಳು ಮತ್ತು ನಮನಗಳು.
ಧನ್ಯವಾದಗಳು ಗಣೇಶ್ ಸರ್, ಕೊಪ್ಪಲತೋಟ ,
ಪದ್ಯಗಳನ್ನು ಕಂದ,ವೃತ್ತಗಳಲ್ಲಿ ತರುವ ಮಹದಾಸೆ – ಸಾಧ್ಯವಾಗುತ್ತಿಲ್ಲ (ಶಕ್ತಿಸಾಲುತ್ತಿಲ್ಲ), ಪ್ರಯತ್ನಿಸುತ್ತೇನೆ.
ಪ್ರಸ್ತುತ ವರ್ಣನೆಯ ವಿವರಗಳನ್ನು ಕೇವಲ ಕನ್ನಡದಲ್ಲಲ್ಲದೆ ಇಂಗ್ಲಿಷ್ ನುಡಿಯಲ್ಲಿಯೋ ಸಂಸ್ಕೃತದಲ್ಲಿಯೋ ಪುನಃ ಕಥಿಸಿದ್ದರೆ ಒಳಿತಾಗುತ್ತಿತ್ತು. ಇಲ್ಲವಾದರೆ ಕನ್ನಡ ಬಾರದ ಸಂಸ್ಕೃತಕವಿಗಳಿಗೆ ಸದ್ಯದ ಆವೃತ್ತಿಯ ಉಪಯೋಗವಾಗದು.
ನೀರನ್ನು ತುಂಬುವ ಹಬ್ಬವು ಬಂದುದಿ-
ನ್ನೋರಂತೆ ನಾಡಿನ ಜನಕೆ|
ತೀರದ ಬಯಕೆಗಳೆಲ್ಲ ತುಂಬಿದ ಹಾಗೆ
ಸಾರಣೆಯಾದಂತೆ ಮನಕೆ||
ನರಕನ ಸೆರೆಯೊಳಗಿರ್ದಾ
ಆರಗುವರಿಯರಂ ವಿಮೋಚಿಸಿದನೆನೆ ಕೃಷ್ಣಂ|
ನಿರುತಂ ಕಳ್ತಲ ಕಡಲೊಳ್
ಮರುಗುವ ಬಿಳಿಮುತ್ತುಗಳನೆ ಎತ್ತಿದನೆಂಬೆಂ||
ಅಮಾವಾಸ್ಯೆಯಂದೇ ಮಹಾಲಕ್ಷ್ಮಿಯರ್ಚಾ-
ಕ್ರಮೋತ್ಸಾಹಮೆಂಬರ್ ವಣಿಗ್ವರ್ಯರ್; ಆಹಾ!
ಅಮೇಯಾಸಿತಶ್ರೀಯ ಪೂಜಾಕಲಾಪಾ-
ಕ್ರಮಕ್ಕೀ ದಿನಂ ದಲ್ ಸಕಾಲಂ ಸಕಾಲಂ!!
(ಅಸಿತಶ್ರೀ = Black Money)
ಬಲಿಯನೇಂ ವಾಮನಂ
ತುಳಿದನೇಂ ಭಾವಿಸಲ್?
ಬಲಿಯನಾಗಿಸಿದನೆಮ್ಮಹಮೆಂಬುದಂ|
ಬಲಿಯನೇಂ ವಾಮನಂ
ತುಳಿದನೇಂ ಭಾವಿಸಲ್
ಪೊಲೆದಾರಿಯಂ ನರಂ; ಮರೆಯಲ್ಕಿದಂ!!
(ಇದೊಂದು ಯಮಕಾಲಂಕಾರದ ಕುಸುಮಷಟ್ಪದಿ)
ಭಾವಬಿದಿಗೆಯೆಂದು ಭಾವಿಸಲ್ ಜನಪದರ್
ಜೀವಿತೇಶನ ದ್ವಿತೀಯೆ ಮಾಯೆ|
ಕಾವುದಲ್ತೆ ಮುದ್ದು ಮರಿಗಳಂ ತುರುಗಳಂ
ಬೇವಿಗೆಂಥ ಭವ್ಯಮಧುರರುಚಿಯು!!
(ಆಟವೆಲದಿಯಲ್ಲಿ ಯಮದ್ವಿತೀಯಾ ಎಂಬ ಬಲಿಪ್ರತಿಪತ್ತಿನ ಮರುದಿನದ ವರ್ಣನೆ)
ಕಡಲಿನ ಮುತ್ತಿನರೂಪಕ-
ಮಡರ್ದತ್ತೀ ಕಬ್ಬಬಾನ ನೇಸರಿನಂದಂ 🙂
ಸೊಗಸಾದ ಪದ್ಯಗಳು ಸರ್…
ಐದು ಪದ್ಯಗಳೆಂಬ ಕಟ್ಟಲೆಯನ್ನೇ ಮರೆತೆ! ಇದೋ ಮಿಕ್ಕವು:
ಇಂದ್ರವಂಶ||
ರಾಕಾಶಶಾಂಕೀಯಶರತ್ಪ್ರಪಂಚದೊಳ್
ಲೋಕೋತ್ಸವಕ್ಕಾಸ್ಪದಮಾ ಮಧು ಸ್ವಯಂ|
ಪಾಕಪ್ರತಿಷ್ಠೋಜ್ಜ್ವಲಪುಷ್ಪಪುಷ್ಟಿಗಿಂ-
ತಾಕಾಶದೀಪಂಗಳನಾಯ್ದುಕೊಂಡುದೋ!
(ಮಧು = ವಸಂತ, ಪಾಕಪ್ರತಿಷ್ಠ = ಚೆನ್ನಾಗಿ ಅರಳಿದ ಆಕಾಶದೀಪ = ಆಕಾಶಬುಟ್ಟಿ)
ಜಲೋದ್ಧತಗತಿ||
ಪಟಾಕಿ-ರಟನಂ ಮತಾಪು-ಹಸನಂ
ಚಟಾಕಿ-ಚಟನಂ ಶಿಖೇಷು-ನಟನಂ|
ವಟಾನುಕೃತಿಯಂ ತಳರ್ದು ತೊಳಗಲ್
ಪಟೀಯಮೆನಿಕುಂ ಶರನ್ಮಹಮಿದೇ ||
(ಚಟನ = ಚುರುಕುತನ, ಶಿಖೇಷು = ಬೆಂಕಿಯ ಬಾಣ, ಪಟೀಯ = ಸಾಮರ್ಥ್ಯಶಾಲಿ, ಶರನ್ಮಹ = ಶರತ್ಕಾಲದ ಬಲುದೊಡ್ಡ ದೊಡ್ಡ ಹಬ್ಬ)
ಔಪಚ್ಛಂದಸಿಕ||
ಅಳಿಯಂ ಕಮಲಾಕರಂ ಕರಂ ರಂ-
ಗುಳಿವಂತಬ್ಜಿನಿಯಯ್ಯನೊಯ್ಯನಿತ್ತಲ್|
ಕೆಳೆಯಿಂ ಕರೆವಂತೆ ಮಾವನೊಳ್ಪಿಂ-
ದಳಿಯಂಗಿತ್ತಪನಲ್ತೆ ಹೂತಿಯಂ ತಾಂ||
(ಅಳಿ = ತುಂಬಿ, ಕಮಲಾಕರ = ಕೊಳ, ಅಯ್ಯ= ತಂದೆ, ಒಯ್ಯನೆ = ಬೇಗ, ಹೂತಿ = ಆಹ್ವಾನ)
ಮಂಜುಭಾಷಿಣಿ||
ಪ್ರತಿಮಾಲೆಯಿಂದೆ ಪೊಣರ್ವಂತೆ ಪಂಡಿತರ್
ಪ್ರತಿಯೊಂದು ಮಂದಿರದ ಮುಂದೆ ಮೋದದಿಂ|
ಜತೆಯಾಗಿ ದೀಪಿಕೆಗಳಂ ನಿರಂತರ-
ಸ್ಥಿತಿಯಾಗಿ ಮುಟ್ಟಿಸುವರಲ್ತೆ ಚಟ್ಟೆಯರ್||
(ಪ್ರತಿಮಾಲೆ = ಅಂತ್ಯಾಕ್ಷರೀಕ್ರೀಡೆ, ಮುಟ್ಟಿಸು = ಬೆಳಗಿಸು, ಚಟ್ಟೆಯರ್ = ಹಿರಿಯ ಹೆಂಗಸರು)
ಪದ್ಯಪಾನದಂಗಳವನ್ನು ಪಟಪಟನೆ ಪರಿಪರಿಯ ಪದ್ಯಪಟಾಕಿಗಳು ಬೆಳಗಿವೆಯಲ್ಲಾ!! 🙂
ನೀರುತುಂಬುವ ಹಬ್ಬ ಜನರ ತೀರದ ಬಯಕೆಯು ತುಂಬಿದ ಹಾಗೆ ಬಂದಿತೆಂಬ ಪದ್ಯ ಚೆನ್ನಾಗಿದೆ, ಕತ್ತಲೆಗಡಲಿಂದ ಬಿಳಿಮುತ್ತನ್ನು ತರುವ ನರಕಚತುರ್ದಶಿಯ ಹೋಲಿಕೆ ಬಹಳ ಚೆನ್ನಾಗಿದೆ, ಅಸಿತಶ್ರೀಯ ಆರಾಧನೆಗೆ ಅಮಾವಾಸ್ಯೆಯೇ ಸರಿಯೆಂಬ ಪದ್ಯವು ವ್ಯಾಪಾರಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದೆ :), ಶರತ್ ಋತುವಿನಲ್ಲಿ ವಸಂತನ ಆಕಾಶಬುಟ್ಟಿಯಂಬ ದೀಪಗಳ ಕಲ್ಪನೆ ಸೊಗಸಾಗಿದೆ, ಎಂಟು ಜಗಣದ ಜಲೋದ್ಧಿತಗತಿಯ ಆಯ್ಕೆ ದೀಪಾವಳಿಯ ಪಟಾಕಿಗಳು ದಢಂ ಎಂದು ಹೊಡೆದ ಹಾಗಿದೆ, ಅಳಿಯನನ್ನು ಮಾವನು ದೀಪಾವಳಿಗೆ ಆಹ್ವಾನಿಸುವ ಪದ್ಯವಂತೂ ಎಲ್ಲಕ್ಕಿಂತಲೂ ಮಿಗಿಲಾಗಿದೆ ಹಾಗು ಇಲ್ಲಿ ‘ಕಮಲಾಕರಂ ಕರಂ ರಂಗುಳಿವಂತೆ’ ಎಂಬಲ್ಲಿ ಶಬ್ಧಾಲಂಕಾರವೂ ಹಾಗು ದುಂಬಿಯನ್ನು ಸರೋವರವು ಆಹ್ವಾನಿಸುವ ಉಪಮೆಯು ಬಹಳ ಚೆನ್ನಾಗಿದೆ, ಪ್ರತಿಮಾಲೆಯ ಪಂಡಿತರಂತೆ ಎದುರು ಬದುರಾದ ದೀಪಗಳು ಪ್ರಜ್ವಲಿಸಿದವು ಎಂಬ ಪದ್ಯ ಚೆನ್ನಾಗಿದೆ ಸರ್:)
ಪ್ರತಿಪದ್ಯವಿಮರ್ಶೆಯನ-
ಪ್ರತಿಮಸಹೃದಯಪ್ರಸನ್ನತೆಯಿನಿಂತೆನ್ನೊಳ್|
ಪತಿಕರಿಸಿದ ಸೋಮಣ್ಣಾ!
ನತಿಯಿತ್ತೆಂ ನಿನ್ನ ತಾಳ್ಮೆಗಿನ್ನೇವೇಳ್ವೆಂ!!
ಆನುಂ ಸೋಮರ ಮಾತಂ
ಮಾನಿಪೆನಿದರೊಳಗೆ ಸಂಶಯಮಣಮುಮಿಲ್ಲಂ
ಗಣೇಶ್ ಸರ್ ಯಮಕಾಲಂಕಾರದ ಕುಸುಮ ಷಟ್ಪದಿಯ ಉತ್ತರಾರ್ಧ ಪೂರ್ಣವಾಗಿ ತಿಳಿಯಲಿಲ್ಲ, ದಯವಿಟ್ಟು ತಿಳಿಸಿರಿ
ಸ್ವಲ್ಪ ವಿಸ್ತರದ ವಿವರಣೆ ಬೇಕಿರುವಕಾರಣ ಮುಖತಃ ತಿಳಿಸುವೆನು.
ಮನೆಯೊಳೆ ಜನರೆಲ್ಲರ್ ಜವದಿಂದೆ ನಡೆದಾಡೆ
ಘನಕಾರ್ಯಮಂ ಮಾಡಲೆಂದು
ಗುನುಗುನು ಗುನುಗುವರಂ ಕಂಡೊಡೆನಿಸುಗುಂ
ಮನೆಯಲ್ತು ಜೇಂಗೂಡಿದೆಂಬೊಲ್|
ಆ ವಿಶಿಷ್ಟಶುಭಭಕ್ಷ್ಯಮೆಲ್ಲಮುಂ
ಕಾವವಿಲ್ಲವೊಲನಿತ್ತು ರಾಜಿಕುಂ
ಧಾವಿಸಲ್ ರುಚಿಯ ಗಂಧದಾ ಶರಂ
ಭಾವದಿಂ ರಸನೆಯೇ ಬೆಮರ್ತುದೋ|
ಕಮಲಾಸನೆಯಂ ಕರೆಯಲ್
ಕಮಲಾಕರದಂದದಿಂದೆ ಮನೆಯಂ ಲೋಗರ್
ಕಮಲಜನರಿಯದ ತೆರದೊಳ್
ಕಮನೀಯಂಗೊಳಿಸಲೆಂದು ಸಿಂಗರಿಸಿರ್ಪರ್|
ಓಪಳೀ ಸಿರಿಯೆಲ್ಲಿ ಭಕ್ತಿಗಂ ಮೆಚ್ಚಿ ತಾ
ನಾ ಪೃಥ್ವಿಯೊಳಗಿರ್ಪ ಭಕ್ತರರ್ದೆಗಂ
ಪೋಪಳೋ ಎಂದೊರ್ಮೆ ಚಿಂತಿಸುತೆ ಕುಳಿತಾಗ
ಮಾಪಂಗೆ ಲೋಗರೊಳಗಾಯ್ತು ಕೋಪಂ|
ನಕ್ಷತ್ರಂಗಳೆನಿಪ್ಪವೋಲೆಸಕದಿಂ ದೀಪಂಗಳೇ ಸೌಧದೊಳ್
ನಿಕ್ಷಿಪ್ತಂಗಳೆನಲ್ಕೆ ಪೂರ್ಣಶಶಿಯೇ ಆಕಾಶದೀಪಾತ್ಮಕಂ
ರೂಕ್ಷತ್ವಂಮೆರೆವುಲ್ಕೆಯಂತೆ ಚರಿಸಲ್ ಮರ್ದಂತಿದೇಂ ಪರ್ವಮೋ (ಮರ್ದು=ಮದ್ದು/ಪಟಾಕಿ)
ಸಾಕ್ಷಾತ್ ವಿಶ್ವಮೊ ಬಾನೊ ಬ್ರಹ್ಮಕೃತಮಾಯಾಗೋಲಮೋ ಚಿತ್ರಮೋ!
ಎಲ್ಲ ಪದ್ಯಗಳೂ ತುಂಬ ಚೆನ್ನಾಗಿವೆ. ಪ್ರಧಾನವಾಗಿ ಹೇತೂತ್ಪ್ರೇಕ್ಷಾಲಂಕಾರವು ವಿಜೃಂಭಿಸಿದೆ. ಕೇವಲ ಕಂದಪದ್ಯದ ಮೂರನೆಯ ಸಾಲಿನಲ್ಲಿ ಮಾತ್ರಾಧಿಕ್ಯವಾಗಿದೆ.
ಓಹ್.. ಹೌದು…೨ ಮಾತ್ರೆಗಳಿಂದ ಸೈಡ ಎಫೆಕ್ಟ್ ಆಗಿಬಿಟ್ಟಿದೆ.. ಸರಿಪಡಿಸುತ್ತೇನೆ…
ಹಬ್ಬದಂದು ಮನೆಯೇ ಜೇನುಗೂಡಿನಂತೆ ಎಂಬ ಕಲ್ಪನೆಯು ಬಹಳ ಸತ್ಯವಾದದ್ದು ಚೆನ್ನಾಗಿದೆ, ಭಕ್ಷ್ಯಗಳ ವಾಸನೆಯ ಬಾಣಗಳಿಂದ ನಾಲಿಗೆಯು ಬೆವರಿದ ಪದ್ಯ ಅದ್ಭುತವಾಗಿದೆ, ಲಕ್ಸ್ಮಿಯನ್ನು ಆಹ್ವಾನಿಸಲು ಬ್ರಹ್ಮನಿಗೂ ತಿಳಿಯದಂಯತಹ ವಿಧಾನಗಳಲ್ಲಿ ಲೋಗರು ಮನೆಯನ್ನು ಸಿಗರಿಸಿದರು ಎಂಬ ಕಲ್ಪನೆ ಚೆನ್ನ, ಲಕ್ಸ್ಮಿಯನ್ನು ಪೂಜಿಸುವಲ್ಲಿ ವಿಷ್ಣುವಿನ ದ್ವೇಶಕಟ್ಟಿಕೊಳ್ಳುವ ರಿಸ್ಕನ್ನು ತೋರಿಸಿದ ಪದ್ಯದ ಕಲ್ಪನೆ ಬಹಳ ಚೆನ್ನಾಗಿದೆ, ಕಡೆಯ ಪದ್ಯದಲ್ಲಿ ಸಸಂದೇಹಾಲಂಕಾರ ಚೆನ್ನಾಗಿ ಮೂದಿದೆ ಕಣಯ್ಯ ಕೊಪ್ಪಲತೋಟ 🙂
ಧನ್ಯವಾದಗಳು 🙂
ಕೊನೆಯ ಪದ್ಯದಲ್ಲಿ ದೀಪಾವಳಿಯಲ್ಲಿ ಪೂರ್ಣಶಶಿ ಹೇಗೆ ಬಂದನೋ!! ಅನೌಚಿತ್ಯಕ್ಕೆ ಕ್ಷಮೆಯಿರಲಿ 😉
ಅಡ್ಡಿಯಿಲ್ಲ; ನಾನಿದನ್ನು ಮೊದಲೇ ಗಮನಿಸಿದ್ದೆ. ಆದರೆ ಕಾರ್ತಿಕಮಾಸದ ಪೌರ್ಣಮಾಸಿಯ ವರಗೆ ಅಭಿಜಾತಯುಗದ ದೀಪಾವಳಿಯ ಹಬ್ಬ ವಿಸ್ತರಿಸುತ್ತದೆ. ಹೀಗಾಗಿ ತುಂಬುತಿಂಗಳಿನ ಆಗಮನ ಅನುಚಿತವೇನಲ್ಲ….
ಐದು “ಸಾಲಂಕಾರವಾದ” ಪದ್ಯಗಳು ಅನ್ನುವುದು ನನಗೆ ಸ್ವಲ್ಪ ಕಷ್ಟವೇ – ಹಾಗಾಗಿ ಅರ್ಥಾಲಂಕಾರಕ್ಕಿಂತ (ಸ್ವಲ್ಪವಾದರೂ) ಶಬ್ದಾಲಂಕಾರವಿರಬಹುದು ( ಎಂದುಕೊಂಡಿರುವ) ಎಂಬ ಧೈರ್ಯದಲ್ಲಿ ಈ ಐದು ಷಟ್ಪದಿಗಳನ್ನು ತೆಗೆದುಕೊಳ್ಳಬೇಕಾಗಿ ಕೋರಿಕೆ!
ಪದ್ಯಪಾನಿಗಳೆಲ್ಲರಿಗೂ ದೀವಳಿಗೆಯ ಶುಭಾಶಯಗಳು!
ನೀರು ತುಂಬುವ ಹಬ್ಬ ಬಂದಿರೆ
ನೀರೆಯರು ಮನೆತುಂಬ ನಾನಾ-
ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ |
ಮಾರುಮಾರಿಗು ಬಣ್ಣಬಣ್ಣದ
ಹಾರಗಳ ಕಟ್ಟುತ್ತ ಸೊಗಸಿನ
ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು ||
ಅಂದು ನರಕಾಸುರನ ಭಯದಲಿ
ನೊಂದಿರುವ ಜಗವನ್ನು ಕಾಯಲಿ-
ಕೆಂದು ಕೃಷ್ಣನು ಕೊಂದನಾತನ ವಿಷ್ಣು ಚಕ್ರದಲಿ |
ಇಂದಿಗೂ ನೆನೆಯುವೆವು ಮಹದಾ-
ನಂದದಿಂದಲಿ ದುಷ್ಟ ದಮನವ
ಚಂದದಿಂದಲಿ ನಾವು ಹೊತ್ತಿಸಿ ವಿಷ್ಣು ಚಕ್ರಗಳ ||
ಸಾಲು ಸಾಲಿನ ಸೊಡರ ಕುಡಿಗಳು
ಮಾಲೆ ಹಾಕಿದ ಮಿಂಚು ದೀಪವು
ಮೂಲೆಮೂಲೆಗಳಲ್ಲಿ ಸುರುಸುರು ಬತ್ತಿಗಳ ಬೆಳಕು |
ಮೇಲಿನಾಗಸದಲ್ಲಿ ಹೊಳೆಯುವ
ಸಾಲು ತಾರಾಗಣವ ಮೀರಿಸಿ
ಪೇಲವವಗೈದಿರಲಿ ಮನಸಿನ ಕಾಳಕತ್ತಲೆಯ ||
ಪೇರಿಸಿರುವೊಬ್ಬಟ್ಟು ಲಡ್ಡುವು
ಗಾರಿಗೆಯು ಸಜ್ಜಪ್ಪ ಶಾವಿಗೆ
ಮಾರು ಹೋಗದೆಯಿರುವುದುಂಟೇನಿಂಥ ಪರಿಮಳಕೆ |
ಮೂರು ಸುತ್ತಲು ಹಬ್ಬುತಿರಲೀ
ಸಾರಿನೊಗ್ಗರಣೆಯು ಕಮ್ಮನೆ
ಮೇರೆ ಮೀರಿಸಿ ಹಬ್ಬದೂಟದ ಬಯಕೆ ಮನದಲ್ಲಿ ||
ಸೊಡರು ಹಬ್ಬದ ಕೊನೆಯ ದಿನ ಮನೆ
ಯೊಡತಿ ತನ್ನೊಡಹುಟ್ಟಿದವರನು
ಸಡಗರಿಸಿ ಕರೆಯುವಳು ಮರೆಯದೆ ತವರ ಕುಡಿಗಳನು |
ನುಡಿಯುತಲಿ ಸಂತಸದ ಮಾತುಗ
ಳೊಡನೆ ಸತ್ಕರಿಸುತ್ತಲವರನು
ಹಡೆದ ಮನೆಗೆಂದೆಂದು ಹದುಳವ ಕೋರಿ ಸೊಗವಡೆದು ||
ಹಂಸಾನಂದಿಗಳೇ! ನಿಮ್ಮ ಈ ಪದ್ಯಗಳಲ್ಲಿ ಅಲಂಕಾರವಿಲ್ಲ ಎಂಬವರ ಮೇಲೆ ಕ್ರಿಮಿನಲ್ ಕೇಸ್ ಹಾಕಬಹುದು!…ಸ್ವಭಾವೋಕ್ತಿಯು ಮೂರು ಪದ್ಯಗಳಲ್ಲಿ ಸ್ಪಷ್ಟ. ಉಳಿದೆರಡರಲ್ಲಿ ವಿಶೇಷ ಮತ್ತು ಅಧಿಕಾಲಂಕಾರಗಳ ಛಾಯೆ ಢಾಳಾಗಿದೆ. ಮುಖ್ಯವಾಗಿ ಎಲ್ಲ ಪದ್ಯಗಳೂ ಸೊಗಸಾಗಿವೆ; ಸೊಡರ ಹಬ್ಬ ಎಂಬ ಪದಪ್ರಯೋಗ ತುಂಬ ಅಭಿರಾಮವಾಗಿದೆ.
ಧನ್ಯವಾದಗಳು ಗಣೇಶರೆ. ಈಗ ನಾನು ವಿಶೇಷ, ಸ್ವಭಾವೋಕ್ತಿ ಮತ್ತು ಅಧಿಕಾಲಂಕಾರಗಳ ಲಕ್ಷಣಗಳನ್ನು ಓದಬೇಕಾಗುತ್ತೆ 🙂 ನಿಮ್ಮ ಈ ಮಾತುಗಳು ಬಹಳ ಹುಮ್ಮಸ್ಸನ್ನು ನೀಡುತ್ತವೆ!
ಹಂಸಾನಂದಿಯವರೇ ಎಲ್ಲ ಪದ್ಯಗಳೂ ಚೆನ್ನಾಗಿವೆ 🙂 5 ನೇ ಪದ್ಯದ 5ನೇ ಸಾಲಲ್ಲಿ ಛಂದಸ್ಸನ್ನು ಸರಿ ಪಡಿಸಬೇಕು
ಧನ್ಯವಾದಗಳು ಸೋಮ ಅವರೆ. ಎಲ್ಲಿ ಲೆಕ್ಕ ತಪ್ಪಿದೆ ಅಂತ ಗೊತ್ತಾಗ್ತಾ ಇಲ್ಲ 🙁
“ಸಾರಿನೊಗ್ಗರಣೆಯದು ಕಮ್ಮನೆ” ಎಂದು ತೀರ ಸುಲಭದಲ್ಲಿ ಸವರಿಸಿ “ಚುಂಯ್” ಎನ್ನಿಸಬಹುದು:-)
🙂 🙂 ಈಗ ಗೊತ್ತಾಯ್ತು. ನಾನು ಐದನೇ ಪದ್ಯದಲ್ಲಿ ನೋಡುತ್ತಿದ್ದೆ 🙂
ಕ್ಷಮಿಸಿ ಐದಲ್ಲ ನಾಲ್ಕನೇಯ ಪದ್ಯ, ಗಣೇಶರು ಸೂಚಿಸಿದ ಸಾಲಿನ ಬಗ್ಗೆಯೆ ನಾನು ಬರೆದದ್ದು 🙂
ಸಿಡಿಮದ್ದಿನಂಬುವಂ ಮೃತ್ಸಾರಚೂರ್ಣಮಂ-
ಪಿಡಿದಕಾಂಡದ ಕಸಿಯ ಬತ್ತಿಯೋಡಲಂ
ಕಿಡಿಯೆಂಬ ಸೂರ್ಯಕಿರಣಂ ಸೋಂಕೆ ವಿಸ್ಮಯದ
ಗಿಡಮಲ್ತೆ ಝಗಝಗಿಪ ಪೂವಕುಂಡಂ | 1 |
ಸಿಡಿಮದ್ದು ಎಂಬ ನೀರು/ಸಾರವತ್ತಾದ ಮಣ್ಣನ್ನು ಹಿಡಿದಿರುವ ಕಸಿಮಾಡಲ್ಪಡುವ ಬತ್ತಿಯೆಂಬ ಕಾಂಡಕ್ಕೆ ಕಿಡಿಯೆಂಬ ಸೂರ್ಯಕಿರಣ ಸೋಕಲು ವಿಸ್ಮಯದ ಝಗಝಗಿಪ ಗಿಡವೆಂಬ ಹೂಕೂಂಡವಾಗುವುದಲ್ಲವೆ?
ಸುಡುವ ಸ್ಫೋಟಕದಕ್ಕಜ-
ದೊಡಲಂ ಭೇದಿಸುತೆ ಚಣದ ಧೂಮದ ಮೇಘಂ
ಧಡಮೆಂದೊಂದೇ ಮಿಂಚಿಂ
ಗುಡುಗಿಂ ಸೊಗಯಿಸುತೆ ನೈಜಮೇಘಮನೇರ್ಗುಂ | 2 |
ಸುಡುವ ಸ್ಫೋಟಕ : (Hydrogen Bomb ಹೆಸರಿನ) ಢಂ ಪಟಾಕಿ
ಢಂ ಪಟಾಕಿಯ(ನ್ನು ಸುಟ್ಟಾಗ) ವಿಸ್ಮಯದ ಒಡಲನ್ನು ಭೇದಿಸುತ ಒಂದೇ ಗುಡುಗು ಮತ್ತು ಒಂದೇ ಮಿಂಚಿನಲ್ಲಿ ಕ್ಷಣಿಕವಾದ ಮೇಘವು ಸೊಗಯಿಸುತ್ತದೆ (Hydrogen Bomb ಸುಟ್ಟಾಗ ಕ್ಷಣಿಕವಾದ ಮೋಡದಂತಹ ಹೊಗೆ ತುಂಬುತ್ತದೆಯಲ್ಲ, ಅದು) ನಂತರ ನಿಜವಾದ ಮೇಘದೆಡೆಗೆ ತಲುಪುತ್ತದೆ
ಬಹುಲತ್ವಂಗೊಳಲಂಕ್ರಿಯಂಗೊಳುಮೆಯಿಂ ತಾರಾಪಥಂ ಬೆಳ್ಗೆ ಸಂ-
ವಹನಂ ಗೈದಪರೆನ್ನೊಡಂ ಜ್ವಲನಪೇಟಿವ್ರಾತಮಂ ಕೇಳೆನಲ್
ಬಹಿರಾಕಾಶಮನೆಂತು ಶೋಭಿಸಿದೊಡೇಂ ಪುಷ್ಪೇಷುಕಾ ‘ಧ್ಯಾನದೊಳ್
ಗಹರಾಕಾಶಮೆ ದೀಪ್ತಮಪ್ಪುವೊಡಮಾಂ’ ಪೇಳ್ಗುಂ ಗಡಂ ಧೂಪದಂ | 3 |
ಬಹುಲತ್ವಂಗೊಳಲಂಕ್ರಿಯಂಗೊಳುಮೆಯಿಂ – ಬಹುಲತ್ವಂಗೊಳೆ ಅಲಂಕ್ರಿಯಂಗೊಳೆ ಉಮೆಯಿಂ
ಉಮೆ – ಬೆಳಕು
ಜ್ವಲನಪೇಟಿವ್ರಾತ – ಆಕಾಶದಲ್ಲಿ ಹೊಡೆಯುವ ವಿವಿಧ ಪಟಾಕಿಗಳು
ಪುಷ್ಪೇಷುಕಾ – ಸುಸುಸುರು ಬತ್ತಿ
ಗಹರಾಕಾಶ – ಮನಸ್ಸು
ಧೂಪದ – ಗಂಧದ ಕಡ್ಡಿ
ಸುರುಸುರು ಬತ್ತಿ ಮತ್ತು ಗಂಧದ ಕಡ್ಡಿಗಳಲ್ಲಿ ಸಂವಾದದ ಕಲ್ಪನೆ:
ಅಕಾಶವು ವಿಧವಿಧವಾದ ಅಲಂಕಾರದಿಂದ ಬೆಳಗಲು ವಿವಿಧ ಪಟಾಕಿಗಳನ್ನು ನನ್ನೊಡನೆ ಬೆರೆಸುತ್ತಾರೆ (I trigger crackers which make sky beautiful) ಎಂದು ಸುರುಸುರುಬತ್ತಿ ಹೇಳಲು, ಗಂಧದ ಕಡ್ಡಿ ಹೇಳುತ್ತದೆ ಆಚೆಯ ಆಕಾಶವನ್ನು ನೀನು ಬೆಳಗಬಲ್ಲೆ ಆದರೆ ನನ್ನಿಂದ (ವಾಸನೆಯಿಂದ) ಧ್ಯಾನದೆಡೆ ಮಗ್ನವಾಗಿ ಮನಸ್ಸು ಬೆಳಗುವುದು ಎಂದು
ನೋಟsಕೆs ಮಾತ್ರsಮೆs ಸ್ಫೋಟsಕs ಚೆಂದsವುs
ಚಾಟಿsಯೆ ನೇತ್ರೇತರsರ್ಗೆs ಇಂದ್ರಿsಯs-
ಕೂಟsದೆs ಆಂಗೀಕರ್ ಪೇಳ್ವರ್ | 4 |
ಪಟಾಕಿಗಳು ಕಣ್ಣಿಗಷ್ಟೇ ಚೆನ್ನವೆಂದು ಉಳಿದ ಇಂದ್ರಿಯಗಳಿಗೆ ಚಾಟಿ(ಏಟಿಗೆ) ಸಮನೆಂದು ಇಂದ್ರಿಯಗಳ ಸಭೆಯಲ್ಲಿ ಅಲವತ್ತುಕೊಂಡವು
ಕಾರುತsಲಗ್ನಿsಯs ಲೇಖsನಿs ಗೈಯsಲುs
ಸಾರಿsಪುsದೆs ಸಂದೇಶsವs
ಮೀರುsತೆs ಸ್ವಾರ್ಥsವs ಸತ್ಯಾಗ್ನಿs ಜನ್ನsದೆs
ಪೋರುsವs ಲೇಖsಕsನೆಂದುs | 5 |
ತನ್ನ ಸ್ವಾರ್ಥವನ್ನು ಮೀರಿ ಸತ್ಯದ ಯಜ್ಞದಲ್ಲಿ ಹೋರಾಡುವನೇ ಲೇಖಕನೆಂದು ಬೆಂಕಿಯುಗುಳುವ ಲೇಖನಿ ಪಟಾಕಿ ಸಂದೇಶವನ್ನು ಸಾರುತ್ತಿದೆಯೇನು?
ಪ್ರಿಯ ಸೋಮ, ಪದ್ಯಗಳೆಲ್ಲ ಸಾಲಂಕೃತವಾಗಿ ಒಳ್ಳೆಯ ಪ್ರೌಢಶೈಲಿಯಲ್ಲಿವೆ. ಅಲ್ಲದೆ ಎಲ್ಲ ಕಲ್ಪನೆಗಳೂ ಅಭಿನವವಾಗಿ, ಸ್ವೋಪಜ್ಞವಾಗಿ ರಾಜಿಸಿವೆ. ಆದರೆ ತ್ರಿಪದಿಯ ಎರಡನೆಯ ಸಾಲಿನಲ್ಲಿ ಛಂದಸ್ಸು ಸ್ವಲ್ಪ ಜಾರಿದೆ. ದಯಮಾಡಿ ಸವರಿಸಿಕೊಳ್ಳುವುದು.
ಧನ್ಯವಾದಗಳು ಗಣೇಶ್ ಸರ್, ತ್ರಿಪದಿಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇನೆ ಸರ್
ಆದರೂ ಸ್ವಲ್ಪ ಎಡವುತ್ತಿದೆ ಸೋಮ; ಮುಗ್ಗಾಲ ಕುಣಿತದಲ್ಲಿಯೂ ಲಯಶುದ್ಧಿಯಿರುವ ಭೃಂಗಿಯನ್ನು ಚೆನ್ನಾಗಿ ಸ್ಮರಿಸಿಕೊಂಡು ಮತ್ತೊಮ್ಮೆ ಸವರಿಸು:-)
ಪಟಾಕಿಗಳ ಹಾಗೆಯೇ ಪದ್ಯಗಳೂ ಸೊಗಸಾಗಿ ಢಂಢಂ ಎನ್ನುತ್ತಿವೆ… ಚೆನ್ನಾಗಿದೆ ಸೋಮಣ್ಣ.. 🙂
ಕೊಪ್ಪಲತೋಟ ಧನ್ಯವಾದಗಳು
ಧನ್ಯೋಸ್ಮಿ.
ಶರದಾಕಾಶವಿಸ್ತಾರಕ್ಕುರೆ ಪೋಟಿಯ ದೃಶ್ಯಮೋ?
ತಿರೆಯೊಳ್ ಸೊಡರ್ಗಳ್ ಸಾಲುಂ ಅರಿಲ್ಗಳ್ ಮಾಲೆ ಬಾನೊಳುಂ
ಗುಡುಗಿದ ಮಿಂಚಿದ ಮೋಡದ
ಗಡಣಂ ಗರಿಗೆದರಿ ಚದರಿ ಪಾರಲ್ ಘಕ್ಕೆಂ
ದಡಸಿದ ಶೂನ್ಯಮನಳಿಸಲ್
ಸಿಡಿಸಿದಪರಿವರ್ ಪಟಾಕಿಯಂ ಭೂತಳದೊಳ್
ಪುರುಳಿಲ್ಲೈ ಕುಮಾತಾ ನ ಭವತಿ ಗಾದೆಮಾತಿನೊಳ್
ನರಕಾಸುರ ಬೀಳಲ್ ತಾಯ್ ಧರೆ ಕೊಂಡಾಡುವಳ್ ಕರಂ
(ಶ್ಲೋಕ ಛಂದಸ್ಸಿನಲ್ಲಿ ಪ್ರಾಸಕ್ಕೆ ರಿಯಾಯ್ತಿ ಉಂಟೆಂದು ಎಲ್ಲೋ ಕೇಳಿದ ಹಾಗೆ ನೆನಪು 😀 )
ಶ್ಲೋಕದಲ್ಲಿ ಪೂರ್ವೋತ್ತರಾರ್ಧಗಳ ಮಟ್ಟಿಗೆ ಪ್ರಾಸವನ್ನು ಪಾಲಿಸಿದರೆ ಸಾಕಾದೀತು.
ಆದರೆ ನಿಮ್ಮ ಕವಿತೆಯ ಕಡೆಯ ಶ್ಲೋಕದಲ್ಲಿ “ನ ಭವತಿ” ಎಂದು ಅವ್ಯವಹಿತವಾಗಿ ಬಂದ ನಾಲ್ಕು ಲಘುಗಳು ಪದ್ಯದ ಗತಿಯನ್ನೇ ಭಂಗಿಸಿವೆ. ಹೀಗಾಗಿ ಇಲ್ಲಿ ಸವರಣೆ ಬೇಕು. ಮೊದಲಿನ ಶ್ಲೋಕ ಮತ್ತು ಕಂದಗಳು ಎಲ್ಲ ರೀತಿಯಿಂದಲೂ ಚೆನ್ನಾಗಿವೆ.
ಜೀವೆಂ ಬಾನು ಭುವಿಯ ಪೋಟಿಯ ಪದ್ಯ ಮತ್ತು ಮೋಡಗಳು ಚೆದರಿಹೋದದ್ದನ್ನು ತುಂಬಿಸಲು ಭುವಿಯ ಜನ ಪಟಾಕಿ ಸಿಡಿಸಿದರೆ ಎಂಬ ಪದ್ಯ ಬಹಳ ಚೆನ್ನಾಗಿದೆ
ಸೊಗಸಾದ ಕಲ್ಪನೆಗಳು..
ಧನ್ಯೋಸ್ಮಿ
tumba tumba sogasaagive I ella deepavaliya hooranagalu. dhanyanaade nai naanu .
dhanyanaade nai – ಈ ಪದವನ್ನು ಹೀಗೆ ವಿಭಜಿಸಿದ್ದರಿಂದ ಆದ ಅನಾಹುತವನ್ನು ನೋಡಿ 😉
ಹಬ್ಬವು ಬಂದಾಗ ಹಬ್ಬಿದ ಸಂತೋಷ
ಮಬ್ಬಿನ ತಮವ ಸವರುತ್ತ ಕಿರಣವು
ತಬ್ಬಿದ ತರವೆ ನೋಡಣ್ಣ
ತೋರುತೆ ಕೂರ್ಮೆಯ ,ಕಾಣ್ಕೆಯ ತಂದಿರೆ
ದೂರದ ಹಳ್ಳಿಯಿಂದವನು
ಯಾರಿದನೆಂದರು ಬೆಸೆಯದೆ ಬಂಧವು
ತೂರುತ ಭೇದವ ಮರೆಗೆ?
(ಈ ಮೊದಲು ಜಮೀನುಳ್ಳವರಿಗೆ, ಅದನ್ನು ನೋಡಿಕೊಂಡು ಹೋಗುವವರು, ತಾವು ಬೆಳದ ಫಲವನ್ನು(ಕುರುಹಿಗಾಗಿ)ತಂದು ನೀಡಿ ಪ್ರೀತ್ಯ್ಯಾದರವನ್ನು ಪ್ರತಿಯಾಗಿ ಪಡೆಯುತ್ತಿದ್ದರು. “ಹಬ್ಬಗಾಣಿಕೆ ಕಾಣುವದು” ಎಂಬ ಆಚರಣೆ ಈ ಹಬ್ಬದ ವಿಶೇಷ,ನಮ್ಮೂರಲ್ಲಿ 🙂 )
ಕಣ್ಣಿನ ಕಾಡಿಗೆ ಮೀಸೆಯ ತೀಡಿರೆ
ಬಣ್ಣದ ಸೌತೆಯ ಮೇಲೆ
ಚಿಣ್ಣರಿಗಾಗದೆ ತೋಷವು ಬಲಿರಾಯ
ತಣ್ಣನೆ ಬಂದಿರೆ ಮನೆಗೆ?
(ಮೊಗೆ ಸೌತೆಯಲ್ಲಿ ಬಲೀಂದ್ರನನ್ನು ಕಾಣುವದು 🙂 )
ಬಿಚ್ಚಿದ ಚಿತ್ತದೊಳಾಟವನಾಡಲು
ನಿಚ್ಚದ ಬದುಕಿಗೆ ಬೆರಗು
ಹೆಚ್ಚಿದ ಜಾಡ್ಯವ ತೊಡೆಯುವ ಮದ್ದಿದು
ನೆಚ್ಚಿನದಲ್ಲವೆ ಕೊನೆಗು?
(ವಯಸ್ಸಿನ ಭೇದವನ್ನು ಮರೆತು, ಎಲ್ಲರೂ ವಿವಿಧ ಬಗೆಯ ಹೊರಾಂಗಣ ಆಟವನ್ನಾಡುವದೂ ಈ ಹಬ್ಬದ ವಿಶೇಷ)
ಒಳ್ಳೆಯ ಸಾಂಗತ್ಯಗಳು; ಜಾನಪದಜೀವನದ ಸೊಗಡನ್ನು ಸೊಗಯಿಸುವ ಪರಿ ಹೃದ್ಯ.
ಧನ್ಯವಾದಗಳು 🙂
ಕಾಂಚನ ಅವರೆ, ಶತಾವಧಾನಿಗಳೆಂದಂತೆ ನಾಲ್ಕೂ ಪದ್ಯಗಳು ಜಾನಪದ ಸೊಗಡಿಂದ ಮೆರೆದಿದೆ 🙂 ಅದರಲ್ಲೂ ಬಲೀಂದ್ರನ ಪದ್ಯ ಬಹಳ ಹಿಡಿಸಿತು
ಸೊಗಸಾದ ಪದ್ಯಗಳು
ದೀಪಾವಳಿಗೆ ಊರಿಗೆ ಹೋಗದಿದ್ದರೂ ಈ ಪದ್ಯಗಳಿಂದ ನೆನಪಾಯಿತು 😉
ನರಕಚತುರ್ದಶಿ ದಿನದಂ
ನರಕಾಸುರನಿಂದಬಿಡಿಸಿಪೆಣ್ಗಳ ತಂದಾ|
ಸರೆಯಂ ನೀಳ್ದಮುಕುಂದ-
ಸ್ಮರಣೆಯಮಾಳ್ಪರು ವಿಶೇಷದೀಪಾರತಿಯಿಂ|
ಬಣ್ಣದ ಪುಡಿವೆರೆಸುತೆ ಕೆ-
ಮ್ಮಣ್ಣ ನೆಲದೆ ರಂಗವಲ್ಲಿಯಂ ಬಿಡಿಸಲ್ ವೆಣ್|
ಎಣ್ಣೆ ಹಣತೆಯನ್ನಿಡುತಾ
ಕಣ್ಣಿಗೆ ಬಿಂಬದೊಳುಕಂಡ ದೀಪವೆ ಚಂದಂ|
ಬರಿಸದ ದುಃಖವ ಮರೆಯಲ್
ಪರಪೊಳ್ವೆರೆತುಸಿಹಿಸೊಲ್ಗಳಾಡುತಲಿರಲೀ|
ಮೆರುಗಿನ ದೀಪಾವಳಿಯೊಳ್
ಕರಗಲಿ ಕಳ್ತಳೆಯುಮೆಲ್ಲರೊಳ್ವೆಳಕಿಂದಂ|
ಛಟ್ಟೆನೆ ಚಿನುಕುರುಳಿಯು ಪಿಸು
ಗುಟ್ಟಿರ,ಲಾನೆಯ ಪಟಾಕಿ ಢಮ್ಮೆನೆ ಸಿಡಿಯಲ್|
ದಟ್ಟ ಪೊಗೆಯನೆಬ್ಬಿಸುತುಂ
ಥಟ್ಟನೆ ಪಟಪಟನೆ ಸದ್ದಿನಿಂ ಮೆರೆದಿರ್ಕುಂ|
ಎತ್ತೆತ್ತಲುನಭದೊಳ್ಕ-
ಗ್ಗತ್ತಲ ಕಳೆಯಲ್ಪ್ರಕಾಶಿಸುತ್ತಿರೆಮೇಲ್ಕ-|
ತ್ತೆತ್ತುತೆ ನೋಡಲ್ಕರರೇ
ಮುತ್ತಿನಹಾರಮನು ಛಿದ್ರಿಸಿದವೊಲುಮಿರ್ಕುಂ|
ಒಳ್ಳೆಯ ಕಲ್ಪನೆಗಳ ಕಂದಗಳನ್ನು ಹಡೆದ ಚೀದಿಯ ಪ್ರತಿಭಾಂಗನೆಗೆ ಅಭಿನಂದನೆ:-)
ಹಳಗನ್ನಡದ ಹದ ಮತ್ತೂ ಹವಣುಗೊಂಡಲ್ಲಿ ಒಳಿತು.
ಸೊಗಸಾದ ಪದ್ಯಗಳು. 🙂 ೩ ಪದ್ಯಗಳಲ್ಲಿ ಪ್ರಾಸ ಬೇರೆ ಬೇರೆಯಾಗಿರುವುದು ವಿಶೇಷ 😉 😛
ಇದ್ಯಂಥ ದೊಡ್ವಿಷ್ಯ ಕೇಳಯ್ಯ ಗಣದೀಶ
ಚೋದ್ಯವು ದೊಡ್ಡದು ನನದೈ|
ಪದ್ಯದ ದರುವೊಂದು ಪಾದದೊಳ್ ಮಾಡೇನು
ಸಾದ್ಯಂತ ಬ್ಯಾರ್ಬ್ಯಾರೆ ಪ್ರಾಸ||
ha ha 🙂
ಆದರೆ ಪ್ರಸಾದು, ಚೀದಿ ‘ರ’ಕಾರಪ್ರಾಸಪ್ರಿಯನೆಂಬುದನ್ನು ಗಮನಿಸಿ 3 ಪದ್ಯಗಳಲ್ಲಿ ಬೇರೆಯ ಪ್ರಾಸವನ್ನು ಬಳಸಿರುವುದು ವಿಶೇಷ ಎಂದಿದ್ದಾನೆ ಕೊಪ್ಪಲತೋಟ 🙂
ಕ್ಷಮಿಸಿ. ಚೀದಿಯು ’ರೇಫ’ಸ್ಪೆಶಲಿಸ್ಟ್ ಎಂದು ನನಗೆ ತಿಳಿದಿರಲಿಲ್ಲ 😉
While the rest have called this festival by enchanting names, the Gujaratis, who have given a prosperous PM to this nation, call it divALi 🙂
ಮೀಮಾಂಸಕಾರನಾ ರಾಜಶಿಖರಂ ಸಾಭಿ-
ರಾಮದಿಂ ’ದೀಪಮಾಲಿಕ’ಮೆಂದುದಂ|
ನಾಮಿ ಹರ್ಷಗೆ ’ದೀಪಪ್ರತಿಪದುತ್ಸವ’ಮಾಯ್ತು
ಸಾಮಾನ್ಯರಿಂಗೆ ’ದೀಪಾವಳಿ’ಯಿದುಂ||
ಗೇಮೆ ಮೇಣ್ ಸ್ವಚ್ಛತೆಯೆ ಈಶಸೇವೆಯೆನುತ್ತೆ
ನೇಮದಿಂ ದುಡಿವಂಥ ನಾಯಕನದಾ|
ಸೀಮೆಗುರ್ಜರದರ್ಗಮೇಕಾಯ್ತೊ ಕಾಣೆನಿದು
ಸಾಮಿಂದೆ ಪರ್ವವು ’ದಿವಾಳಿ’ಯೆಂದುಂ!!
ದೀಪಾವಳಿಯಮಾರ್ಗದೀ ದೀಪದಿಂದಿದೇಂ
ಭೂಪತಿಗೆ ಸ್ವಾಗತಮನಿತ್ತಿರ್ಪಿರೈ||
|| ದೀಪಾವಳಿಯ ಸೊಬಗು ||
|| ಕಂದಪದ್ಯ,ಪಂಚಮಾತ್ರಾಚೌಪದಿ,ಭಾಮಿನಿಷಟ್ಪದಿ,ತರಲವೃತ್ತ,ತ್ರಿಪದಿ ||
ದೀಪಂಗಳ ಬೆಳಗಿ ಮನದ
ತಾಪಮನಳಿಸಲ್ಕೆ,ಕವಿದ ಕಳ್ತಲ ಕಳೆಯಲ್,|
ರೂಪಂದಾಳ್ದಿರ್ಪುದಲಾ,
ಶ್ರೀಪದ್ಮಿನಿಯಿಂದೆ ಶೋಭೆಗೊಳ್ಳುವ ಪರ್ಬಂ || 1 ||
ಮುಂಜಾವಿನಭ್ಯಂಗದ ಸ್ನಾನಮಂ ಗೈದು,
ರಂಜಿಪ್ಪ ಪೋಷಾಕ ತೊಟ್ಟೆಲ್ಲರುಂ,|
ಮಂಜುಲಪದಂಗಳಿಂ ಪೂಜೆಗೈಯುತೆ ದೈವ-
ಕಂಜುತ್ತೆ ಭಕ್ತಿಯಿಂ ಪೊಡವಡುವರೈ || 2 ||
ನೆಲದೆ ಮೂಡಿರೆ ರಂಗವಲ್ಲಿಗ-
ಳಲರ್ಗಳಂತೆಸೆಯುತ್ತೆ ಸಿರಿವರ-
ಲಲಿತೆಯಂ ಸ್ವಾಗತಿಸೆ,ಮನಮಂ ಸೂರೆಗೊಳ್ಳುತಿರಲ್,|
ಲಲನೆಯರ ನಳಪಾಕದಿಂದಂ
ಪಲವಗೆಯ ಭಕ್ಷ್ಯಂಗಳಿರ್ಕುಂ
ಮಲಿನಮಲ್ಲದ ಸಿಂಗರಂಗೊಂಡಿರ್ಪ ಸದ್ಗೃಹದೊಳ್ || 3 ||
ಶುಭದ ಸುಂದರರಾತ್ರಿಯೊಳ್ ಸಿಡಿಮರ್ದುಗುಂಡುಗಳಾಟಮಂ,
ನಭದ ಚಿಕ್ಕೆಗಳೆಂತು ಭೂಮಿಗೆ ಬಂದವೈ ಪರಿವೀಕ್ಷಿಸಲ್ ? |
ಲಭಿಸಿ ಪಂಕ್ತಿಯ ಮಣ್ಣ ದೀವಿಗೆಯೊಳ್ ಪ್ರಕಾಶಿಪ ಕಾಯಕಂ,
ವಿಭವಮಂ ಬಯಸುತ್ತೆ ಪರ್ವಮನಾಚರಿಪ್ಪ ಮನುಷ್ಯರಿಂ || 4 ||
ಬಂತೈ ದೀಪಾವಳಿ,ತಂತೈ ಸಂತೋಷವ,
ಸಂತೈಸೆ ನೀಡಿ ದೀಪ್ತಿಯ | ನಲವಿಂದೆ,
ಚಿಂತೆಯ ದೂರ ಮಾಡಲ್ಕೆ || 5 ||
(ಪದ್ಯಪಾನದ ಬಂಧುಗಳೆಲ್ಲರಿಗೂ ದೀಪಾವಳಿಯ ಹಾರ್ದಿಕಶುಭಾಶಯಗಳು.ನಿಮ್ಮೆಲ್ಲರ ಪದ್ಯದ ಸಿಹಿಯನ್ನು ಸವಿದಿರುವೆ.
ಎಲ್ಲವೂ ತುಂಬ ಚೆನ್ನಾಗಿವೆ.ಉಣಬಡಿಸಿದ ಸಹೋದರ,ಸಹೋದರಿಯರಿಗೆ
ಹೃತ್ಪೂರ್ವಕಧನ್ಯವಾದಗಳು. 🙂 )
ತುಂಬ ಒಳ್ಳೆಯ ಶೈಲಿಯ ಪದ್ಯಗಳು. ಗತಿಸುಭಗತೆ ಮತ್ತು ಸ್ವಭಾವೋಕ್ತಿ-ವಕ್ರೋಕ್ತಿಗಳ ಹದವೂ ಸಾಕಷ್ಟಿದೆ. ಅಭಿನಂದನೆಗಳು.
ಸಹೋದರರಿಗೆ ಧನ್ಯವಾದಗಳು.
ಸೊಗಸಾದಪದ್ಯಗಳು “ಲಲನೆಯರ ನಳಪಾಕ” ಚೆನ್ನಾಗಿದೆ 😉
ಕೊಪ್ಪಲತೋಟದವರೆ,ಧನ್ಯವಾದಗಳು. ಲಲನೆಯರ ನವಪಾಕವೆಂದರೆ(ಹೊಸರುಚಿ) ಹಲವರು ಗಾಬರಿಯಾಗುತ್ತಾರೆಂದು ನಳಪಾಕವೆಂದು ಬರೆದೆ.”ಲಲನೆಯರ ದಮಯಂತಿಪಾಕದ” ಎಂದು ಬರೆಯಬಹುದಾಗಿದ್ದಲ್ಲಿ ಮಹಿಳೆಯರಿಗೆ ಸಮಾಧಾನವಾಗಬಹುದೆಂದು ಅನಿಸದಿರಲಿಲ್ಲ . 😉
ಶಕುಂತಲಾ ಅವರೇ ಪದ್ಯಗಳು ಚೆನ್ನಾಗಿವೆ
ಸೋಮರಿಗೆ ಧನ್ಯವಾದಗಳು.
ಅಸುರನಿವ ನರಕಕೆನುತಿರೆ
ಕಸುವಿಂ ಮದದಿಂ ಸುರೇಂದ್ರನಂ ನೋಯಿಸಿರಲ್
ಜಸಕಂ ಸುರರಕ್ಷಣೆಗಂ
ವಿಸಟಂಬರಿಯಂ ಮುರಾರಿ ನಾಶಗೊಳಿಸಿದಂ
(ವಿಸಟಂಬರ – ಸ್ವೇಚ್ಛಾಚಾರಿ)
ನರಕಾಸುರನಂತ್ಯವ ಲೋ
ಗರತಿ ಸಡಗರದಿ ಪಟಾಕಿಗಳ ಸದ್ದುಗಳಿಂ
ಭರಭರನುರಿಯುವ ಬಾಂಬಿಂ
ಸುರುಸುರುಬತ್ತಿಯ ಮತಾಪಿನೊಡನಾಚರಿಸಲ್
ಇತ್ತ ನೋಡಿಲ್ಲೆಣ್ಣೆ ಸೀಗೆಪುಡಿ ಬಿಸಿನೀರು
ನೆತ್ತಿಗಭ್ಯಂಜನದ ಮಳೆಗಾಲವು
ಅತ್ತಲಡುಗೆ ಮನೆಯಲಿ ಜಾಮೂನು ಒಬ್ಬಟ್ಟು
ಸುತ್ತು ಚಕ್ಕುಲಿ ನಡುವೆ ಬಿರುಬೇಸಗೆ
ಜಲಧಿಜೆಯ ಪೂಜೆಗತಿ ಸಂಭ್ರಮದ ಗಂಧಹೂ
ಎಲೆಕಾಯಿ ನಡುವೆ ರಾಜಿಸೆ ವಸಂತ
ನೆಲದಲ್ಲಿ ಸೊಗಯಿಸಿದ ರಂಗೋಲಿಗೇತಕೋ
ನಲಿವ ತಾರೆಗಳಂದ ಮೀರುವಾಸೆ
ಒಳ್ಳೆಯ ಕಲ್ಪನೆಯ ಪದ್ಯಗಳು ಮೂಡಿವೆ. ವಿಸಟಂಬರಿ ಎಂಬ ಪದಪ್ರಯೋಗ ತುಂಬ ಸೊಗಸಾಗಿದೆ. ಚೌಪದಿಗಳೆರಡರ ಕಾವ್ಯಸ್ವಾರಸ್ಯ ನಿಜಕ್ಕೂ ಉತ್ತಮ. ಆದರೆ ಪದ್ಯಗತಿಯು ಮತ್ತೂ seamless ಆದರೆ ಒಳಿತು. ಇದು ಮತ್ತೆ ಮತ್ತೆ ಬರೆಯುತ್ತ ಬಂದಂತೆ ಸುಲಭಸಾಧ್ಯ.
ಧನ್ಯವಾದಗಳು.
ಗಣೇಶರಂದಂತೆ ಸೊಗಸಾದ ಕಲ್ಪನೆಯ ಪದ್ಯಗಳು.
ಗಾಯತ್ರಿಯವರೆ, ಪದ್ಯಗಳು ಚೆನ್ನಾಗಿವೆ, ರಂಗೋಲಿಗೆ ತಾರೆಗಳನ್ನು ಮೀರುವಂತೆ ಮೆರೆದ ಕಲ್ಪನೆ ಚೆನ್ನಗಿದೆ
To the last line:
ರಂಗೋಲಿಚುಕ್ಕೆಯೆಂತುಟೊ ಋಜುವವಕ್ಕಮುಡು-
ಜಂಗಲಂ ಲಕ್ಷ್ಯಮಾಗಿಸಿದೆಯೇಕೌ|
ಪಾಂಗಿಂದೆ ವಂಕಮೇ ಮೇಲೆಂದು ಪೊಗಳುತಲಿ
ತಂಗಳೆಂಬೆಯ ನೇರರೀತಿಯಂ ನೀಂ||
(ಋಜು – straight. ಉಡುಜಂಗಲು – irregular arrangement of stars. ವಂಕ – crooked)
ಹಗಲಿನ್ನಾಗಸ ಬಿಟ್ಟು ಪೋಗೆ ನಿಶೆ ಸಂಧ್ಯಾರಾಗದಿಂ ಪಚ್ಚಿದಳ್
ಮುಗಿಲೊಳ್ ಚೆಲ್ಲಿದನಂತ ಮಂಡಳಗಳೊಳ್ ರಾರಾಜಿಸಲ್ ಚುಕ್ಕಿಗಳ್
ಸಿಗದಿರ್ಕಾಗಸಬುಟ್ಟಿಗಪ್ಪ ಪೆರೆ ತಾಂ ಜ್ಯೋತಿರ್ಮಯೀ ಭೂಮಿಯಂ
ಸೊಗದಿಂ ಕಟ್ಟುತೆ ಮೆಚ್ಚಿ ನೋಳ್ಪಳಮಮಾ ನಕ್ಷತ್ರ ದೀಪಾವಳಿs
[ಪೆರೆ = ಚಂದ್ರ; ಸಂಧ್ಯಾರಾಗದಿಂದ ಚುಕ್ಕಿ ದೀಪಗಳನ್ನು ಹಚ್ಚಿದ ನಿಶೆಯು, ಆಕಾಶಬುಟ್ಟಿಗೆ ಚಂದ್ರ ಸಿಗದಿದ್ದಾಗ, ಜ್ಯೋತಿರ್ಮಯಿಯಾದ ಭೂಮಿಯನ್ನೇ ಕಟ್ಟಿದಳು]
ಬೆಡಗಿಂ ಚೆಂದದ ಮೋರೆಗಿತ್ತು ಮೆರಗಂ ಪಾದಂಗಳೊಳ್ ರಾಗಮಂ
ತೊಡಪಂ ತೊಟ್ಟರು ಕರ್ಣ ಕೇಶ ಕಟಿಯೊಳ್, ಕಾಲೊಳ್, ಕೊರಳ್-ಕೈಗಳೊಳ್
ಉಡುಪಾಲಿಂಗನ ಮೋಹದಿಂದಲದುರಲ್ ವರ್ಣಂಗಳೋಲಾಡಿರಲ್
ಸಿಡಿವುನ್ಮಾದದ ಮೋಹನಾಂಗನೆಯರೊಳ್ ಸೌಂದರ್ಯ ದೀಪಾವಳಿs
[ತೊಡಪು – ಆಭರಣ]
ಕಾವ್ಯಕ್ಕಿತ್ತವನರ್ಘ್ಯ ರತ್ನಗಳವೋಲ್ ಕಾವ್ಯಾನುರಕ್ತರ್ ಬುಧರ್
ಹವ್ಯಾಸಕ್ಕೆನುತಾಶುವಾಗೆ ರಚಿಪರ್ ಪದ್ಯಂಗಳಂ ಚೋದ್ಯದಿಂ
ಹವ್ಯಂಬೆತ್ತವರಲ್ತೆ ಶಾರದೆಗೆ ಮೇಣ್ ಕವ್ಯಂಗಳನ್ನೀಂಟಲೆಂ
ನವ್ಯಕ್ಕಲ್ತು ನವೋದಯಕ್ಕುಮಿರದೀ ರಾಸಿಕ್ಯ ದೀಪಾವಳಿs
[ಇದು ಪದ್ಯಪಾನಿಗಳು ಸುರಿದ ಪದ್ಯಗಳ ಮಳೆಯ ಶ್ಲಾಘನೆಗಾಗಿ :-)]
… ಇನ್ನೂ ಕೆಲವು ಪದ್ಯಗಳು ಸಮಯ ಮೀರಿದ ನಂತರ ಬರಲಿವೆ. ಈಗಲೇ ಬರೆಯಬೇಕೆಂದರೆ ಕಲ್ಪನೆಗೆ ತಕ್ಕ quality ಎಟುಕುತ್ತಿಲ್ಲ.
ಅದೊ! ಮತ್ತೇಭಸಮೂಹಸೈನ್ಯಮನೆ ಕೊಂಡೀ ರಾಮಚಂದ್ರಂ ರಸ-
ಪ್ರದಪದ್ಯಚ್ಛವಿಯೆಂಬ ಸೀತೆಯಳಲಂ ನೀಗಿಪ್ಪವೊಲ್, ಶುಷ್ಕತಾ-
ಸ್ಪದಲಂಕಾಪತಿದರ್ಪಮಂ ಕಳೆವವೊಲ್ ಧೀಂಕಿಟ್ಟು ಬಂದಿರ್ಪನೆಂ-
ಬುದು ಸತ್ಯಂ ನವಕಲ್ಪನಾವಲಿಗಳೆಂಬೀ ಘಂಟೆಗಳ್ ಘಲ್ಲೆನಲ್ !!
_/\_
ಈಗ ಇನ್ನೆರಡು ಮೂರಾದರೂ ಪದ್ಯಗಳನ್ನು ಇದೇ ಶೈಲಿಯಲ್ಲಿ ಬರೆಯದೇ ಗತಿಯಿಲ್ಲ. 🙂
ಬಹಳ ಚೆನ್ನಾಗಿವೆ!
ಸೊಗಸಾಗಿರ್ದುದು ಪದ್ಯವೃಂದಮರರೇ! ಶ್ರೀರಾಮಚಂದ್ರಾಖ್ಯರೇ!
ಬಗೆಯಲ್ ಪದ್ಯದಮೆನಿಪ್ಪ ಸಚ್ಛಿಬಿಕೆಯೊಳ್ ಸಂಸ್ಥಾಪಿತಳ್ ವಾಣಿ ತಾಂ
ಪುಗಲೀ ವೃತ್ತಮನಾದುದೊಳ್ಪಿನೊಳೆ ಮತ್ತೇಭಂಗಳಾರೋಹಣಂ
ಜಗಕಂ ಸಂದುದು ಮತ್ತೆ ಮತ್ತೆ ನವರಾತ್ರಂ ದೀಪದೀ ಪರ್ವದೊಳ್||
(ಪದ್ಯವೆಂಬ ಶಿಬಿಕೆಯನ್ನೇರಿ ವಾಣಿ ಮತ್ತೇಭಾರೋಹಣ ಮಾಡಿ ಜಂಬೂಸವಾರಿ ಮಾಡಿದಂತಿರುವ ಕಾರಣ ನಿಮ್ಮ ಪದ್ಯದಿಂದ ದೀಪಾವಳಿಯಲ್ಲಿ ಮತ್ತೆ ಮತ್ತೆ ನವರಾತ್ರಿಯಾಗುತ್ತಿದೆ!!)
ಮುಗಿದಿರ್ದೇಂ ನವರಾತ್ರಪರ್ವವು ಗಡಾ, ಆಲಸ್ಯದಿಂದೀ ಜನರ್
ತೆಗೆಯರ್ದೆಲ್ ಬಗೆಬೊಂಬೆಯೆಲ್ಲಮನಿಹರ್ ದೀಪಾವಳೀ ಬಂದೊಡಂ|
ರಾಮಚಂದ್ರರೆ, ’ಉಡುಪಾಲಿಂಗನ ಮೋಹ’ ಸ್ಪಷ್ಟವಾಗಲಿಲ್ಲ.
ರಾಮ್ ಒಂದಕ್ಕಿಂತ ಒಂದು ಬಹಳ ಸುಂದರವಾದ ಪದ್ಯಗಳು, ಬಹಳ ಚೆನ್ನಾಗಿದೆ
ಕೊಪ್ಪಲತೋಟ, ಹಂಸಾನಂದಿ, ಸೋಮ – ಧನ್ಯವಾದಗಳು
ಜೀವೆಂ – “ಉಡುಪಾಲಿಂಗನ ಮೋಹ” :: ಉಡುಪಗಳು (ಮೊಹನಾಂಗನೆಯರನ್ನು) ಬಳಸಿರಲಾಗಿ, ಆ ಆಲಿಂಗನದ ಮೋಹದಿಂದ ಅದುರುತ್ತಿದ್ದವು ಎಂಬ ಭಾವ.
ರಾಮ್ ನಾನೇನು ತಪ್ಪು ಮಾಡಿದೆ 😉
See above 😉
ha ha that is Ram 🙂
ಎಲ್ಲರೂ ನಾಗಾಲೋಟದಲ್ಲಿ ಮುಂದಿನ ವಿಷಯಕ್ಕೆ ಕೈಹಾಕಿ ಮಿಂಚುತ್ತಿದ್ದರೂ, ಹೇಳಿಕೊಂಡ ಮಾತಿನಿಂದಾಗಿ ಹಾಗೂ ಮನಸ್ಸಿನಲ್ಲಿ ಕೊರಯುತ್ತಿದ್ದ ಕಲ್ಪನೆಗಳಿಂದಾಗಿ ನಾನು ಇನ್ನೂ ದೀಪಾವಳಿಯಲ್ಲಿಯೇ ಇದ್ದೇನೆ. ಹಿಂದಿನ ಕಂತಿಗೆ ಈ ಕೆಳಗಿನ ಪದ್ಯಗಳನ್ನು ಕೂಡಿಸುತ್ತಿದ್ದೇನೆ ::
ಗೆಲುವಿಂದೆದ್ದು ಪಟಾಕಿಯಾಟವೆನುತುಂ ಪುಂಡಾಡುವರ್ ಹಾಸದಿಂ
ನಲಿವರ್ ಶಬ್ದಗಳಟ್ಟಹಾಸ ಬೆರೆಯಲ್ ವರ್ಣಂಗಳಾಟೋಪ ಕಂ –
ಡಿಳೆಗಂ ಸ್ವರ್ಗದ ಹವ್ಯಪೊತ್ತು ತಹನೊಲ್ ನಾಟ್ಯಾನುರೂಪಾಗ್ನಿಯಿ –
ಲ್ಲೆಳೆ ಬಾಲರ್ಕಳ ಮೋರೆದುಂಬಿ ಬೆಳಗಲ್ ಸಂತೋಷ ದೀಪಾವಳಿs
[ದೀಪಾವಳಿಯಲ್ಲಿ ಮಕ್ಕಳ ಆಟದ ಸಂತೋಷ – ನಾಟ್ಯ ರೂಪನಾದ ಅಗ್ನಿ ಸ್ವರ್ಗದಿಂದ ಹವ್ಯವನ್ನು ಭೂಮಿಗೆ ತಂದು ಆಡುವ ಮಕ್ಕಳ ಮೋರೆಗಳಲ್ಲಿ ಬೆಳಗುವನು ಎಂಬ ಭಾವ ]
ಸಿಡಿಲೇಮಂತಕನಟ್ಟಹಾಸ ಪರಿಯೇಂ? ಕರ್ಣಂಗಳೊಳ್ ಶೂಲಮೇಂ?
ತಡೆಯೇಂ? ಕರ್ಕಶಕೋಟಿಗೆಂತು ಕೊನೆಯೇಂ? ಭೀಬತ್ಸಕೇನಂತ್ಯಮೇಂ?
ಬಡಿಯಲ್ ಗುಂಡಿಗೆ ಗುಂಡ ಸಾಮ್ಯಕೆನೆ ದೈನ್ಯಾವಸ್ಥೆ ಕೂಗಾಗಿರ –
ಲ್ಕಡಗಲ್ ಮಂಚದ ಮೂಲೆ ಸೇರ್ದ ಕುಲಕಂ ಸಂತ್ರಸ್ತ ದೀಪಾವಳಿs
[ದೀಪಾವಳಿಯ ಅಬ್ಬರದಲ್ಲಿ ಸಂತ್ರಸ್ತಗೊಳ್ಳುವ ಶ್ವಾನಕುಲದ ಬವಣೆ]
ತೊಳೆದುಂ ಹಂಡೆಗೆ ಶಿಂಡ್ಲೆಕಾಯ ಸರಮಂ ಸಿಂಗಾರಕೆಂ ಕಟ್ಟುವರ್
ಬಳಿದಿನ್ನೆಣ್ಣೆಯನೆಲ್ಲ ಮೈಯ ತೊಳೆವರ್ ಭಕ್ಷ್ಯಂಗಳಂ ಮೆಲ್ಲುವರ್
ತುಳಸೀ ಕಟ್ಟೆಗೆ ಪೂಜೆಯಿತ್ತು ಬಲಿಯನ್ನಾಹ್ವಾನಿಪರ್ ಸೌತೆಯೊಳ್
ಕಳೆವರ್ ತಾಮಸಮೆಲ್ಲ ದಿಕ್ಕಿನೆಡೆಯೊಳ್ ಪಚ್ಚುತ್ತೆ ದೀಪಾವಳಿs
[ಉತ್ತರ ಕನ್ನಡದ ಹವ್ಯಕರ ಪದ್ಧತಿಯ ಒಂದು ಸರಳ ಸ್ವಭಾವೋಕ್ತಿ ಪದ್ಯದ ಪ್ರಯತ್ನ]
ದೀಪಾವಳಿಯ ಹಳೆಯ ಸಂಚಿಕೆಗೆ ಒಂದೆರಡು ಪದ್ಯಗಳ ಜೋಡಣೆ
ಮೇಲಾಕಾಶದೊಳರ್ಕ,ಚಂದ್ರರಿರದಾ ಗಾಢಾಂಧಕಾರಂಗೂಳಲ್
ಸಾಲೊಳ್ ನಿಂತವನೇಕ ದೀಪದುರಿ ಸೈನ್ಯಂಗಳ್ ಗಡಾಕಾಯುಗುಂ
ತೈಲಾಧಾರಗುಣೋಜ್ವಲರ್ ಬೆಳಗುತಾಕರ್ಷಿರ್ಪರೋಲ್ ವಾಯುವ-
ನ್ನೋಲಾಡುತ್ತೆಲೆ ಹೋರುತಿರ್ಪ ಪರಿಯೀ ಜ್ವಾಜಲ್ಯ ದೀಪಾವಳಿs
[ವಾಯುವನ್ನು ಆಕರ್ಷಿಸುತ್ತಾ, (ಅವನೊಡನೆಯೂ ಅಂಧಕಾರದೊಡನೆಯೂ) ಹೋರಾಡುವ ದೀಪಗಳ ಸೈನ್ಯದ ಚಿತ್ರಣ]
ಘನಘೋರಾಂಧತೆ ಕಾಡದಿರ್ಕೆ ಸುಡುವರ್ ಸ್ನೇಹಾತ್ಮರೀ ರಾತ್ರೆಯೊಳ್
ಮನೆಗಂ ಬರ್ಪಳು ಚಿತ್ತಚಂಚಲೆಯು ತಾಮೆನ್ನುತ್ತಲೌದಾರ್ಯದಿಂ
ತನುವನ್ನಂಜಲಿಗೈದು ನೀಳ್ದು ಸೊಡರಂ ಬಾತಾಯೆಬಾಯೆನ್ನುತುಂ
ಧನಕೆಂದಲ್ಲವು ಭಾಗ್ಯಕೆಂದೆ ಕರೆವೀ ಸಾಫಲ್ಯ ದೀಪಾವಳಿs
[ದೀಪಗಳು ತನ್ವಂಜಲಿಗಳಾಗಿ ಲಕ್ಷ್ಮಿಯನ್ನು ಧನಕ್ಕಾಗಿಯಲ್ಲ, ಭಾಗ್ಯಕ್ಕಾಗಿ ಮನೆಗೆ ಕರೆಯುತ್ತಿರುವ ಚಿತ್ರಣ]
2017ರ ದೀಪಾವಳಿಯ ಪ್ರಯುಕ್ತ ಕೆಲವು ಪದ್ಯಗಳು ::
ತಳೆವರ್ ತಾಯ್ಗಳ ಗರ್ಭದಲ್ಲಿ ತಪದಿಂ ನೈರ್ಮಲ್ಯದಾ೦ತರ್ಯಮಂ
ಕಲಿವರ್ ನೋಡುತಲೆಲ್ಲಮಂ ಪದಪಿನಿಂ ವಿದ್ಯಾರ್ಜನಂ ಸಂತತಂ
ಬಲುಹಿಂದಚ್ಚರಿಗೊಂಡು ನಕ್ಕು ನಲಿವರ್ ಲೋಕಾನುರಕ್ತರ್ ಗಡಾ
ಪೊಳೆಯಲ್ಕೆಮ್ಮಯ ಮುದ್ದು ಚೆಲ್ವ ಚದುರರ್ ಶೈಶವ್ಯ ದೀಪಾವಳಿs
ಬಳೆಯಲ್ ಗಾಢಭವಿಷ್ಯಮೆಂಬ ನಿಶೆ ತಾಂ ನೈರಾಶ್ಯದಂಧತ್ವದಿಂ
ಕುಳಿರಾಗಲ್ ಪರಿವರ್ತನಂ ನಡುಕಕಂ ವೇಗಾನಿಲಂ ಸುಯ್ವವೋಲ್
ತಳೆದಾಕಾಂಕ್ಷೆಯ ಸ್ನೇಹಮುಂ ಛಲಗುಣಂ, ಹೃದ್ದೀಪದೊಳ್ ಸಂದಿರಲ್
ಬೆಳಗಲ್ ತಾಂ ಪ್ರತಿಭಾಗ್ನಿಯಿಂದಲೆಳೆಯರ್ ಕೌಮಾರ್ಯ ದೀಪಾವಳಿs
ಬಲಿಯಲ್ ದೇಹ ವಿಲಾಸ ಲಾಲಸೆಗಳಿಂದುದ್ದೀಪನಂಗೊಳ್ಳುತುಂ
ನಲವಂ ತಾಳ್ದವರಲ್ತೆ ಬಾಳಪಥದೊಳ್ ಸಾಂಗತ್ಯಸಂಶೋಧಕರ್
ಪಳತಂ ಮೀರುತೆ ನವ್ಯ ಸಾಮ್ಯ ಜಗದಾದರ್ಶಾನುಕಾಂಕ್ಷರ್ ವಲಂ
ತೊಳಗಲ್ ಯೌವನಶಕ್ತಿಯಿಂದೆ ಕಲಿಗಳ್ ತಾರುಣ್ಯ ದೀಪಾವಳಿs
ನಲಿವರ್ ತಮ್ಮೆಳೆಯರ್ಕಳಾಂತ ಜಯದಿಂ ನಿಸ್ವಾರ್ಥತಾರಾಧಿತರ್
ಕಳೆವರ್ ಬಾಳ್ತೆಯ ಕಾಳರಾತ್ರೆಗಳನುಂ ಚಾಂಚಲ್ಯರಾಹಿತ್ಯರೋಲ್
ಬಳೆಸಲ್ ವಂಶದೆ ಯೋಗ್ಯಶಾಖೆಗಳನುಂ ಕಾಷ್ಠಂಗಳೋಲ್ ನಿಂದವರ್
ಬೆಳಗಲ್ ತಾಳ್ಮೆಯ ದೀರ್ಘ ದೀಪ್ತ ರುಚಿಯಿಂ ಪ್ರೌಢತ್ವ ದೀಪಾವಳಿs
ಪಳತಾಗಲ್ ಸೊಡರಾರದಿರ್ಪ ಭರದೊಳ್ ತಾನೋಲುತುಂ ಗಾಳಿಯೋಲ್
ತಳದೊಳ್ ಪೂರ್ವದ ತೇಜಮಿಂಗುತುಳಿಯಲ್ ಜಿಡ್ಡಾದ ಸಾಫಲ್ಯಮುಂ
ಛಲದಿಂ ಬಾಳುತಲೀಯುತಿರ್ದು ಪೊಳಪಂ ವಾತ್ಸಲ್ಯದಿಂ ದಾನದೋಲ್
ವಳಯಕ್ಕೆತ್ತಿದ ದೀಪಮೆಲ್ಲ ಬೆಳಗಲ್ ವಾರ್ಧಕ್ಯ ದೀಪಾವಳಿs
* ಬೇರೊಂದು ಮುಕ್ತಕ *
ಭವ್ಯಾಕಾಶದಪಾರ ವಿಸ್ತರಗಳಿನ್ನೇರಲ್ಕೆ ಕಾಲ್ಸೋಲುಗುಂ
ದಿವ್ಯವ್ಯೋಮದೊಳಿರ್ಪನಂತ ರುಚಿಯಂ ಕಾಣಲ್ಕೆ ಕಣ್ಸಾಲದೈ
ಶ್ರವ್ಯಾಶ್ರವ್ಯಗಳಿರ್ಕೆ ಬಾನಿನೊಡಲೊಳ್ ಕೇಳಲ್ಕಶಕ್ತರ್ ಗಡಾ
ಕಾವ್ಯಂ ತಾಮೆಟುಕಲ್ಕೆ ಮಾಳ್ಪ ಪರಿಯೀ ಆನಂದ ದೀಪಾವಳಿs
ಜೀವನಪಥಮಂ ದೀಪಗ
ಳಾವಳಿಗಂ ಪೋಲಿಸಿರ್ಪ ಪದ್ಯಾವಳಿಯಿಂ
ಭಾವೋದ್ದೀಪನಗೊಳಿಸಿದ
ರಾವಣನರಿನಾಮಕರ್ಗೆ ವಂದಿಪೆನೀಗಳ್
_/\_
ಈ ಬಾರಿಯ ದೀಪಾವಳಿ ಆಚರಣೆ (ವಿನೋದವಾಗಿ) !!
ಅಳಿಯಂ ಬಾರದೆ ದೀಪಾ
ವಳಿಯುಂ ಕಳೆದಿಹುದು ಕಾಣಿರೆಮ್ಮಯ ಮನೆಯೊಳ್ ।
ಬೆಳಗಿಂ’ಕಾಯುತೆ ನೀಡಲ್
ಬಳುವಳಿಯಂ ಬಳಲಿರಲ್, ಬೆಳಗುದನೆ ಮರೆದುಂ ।।
ಎಣ್ಣೆಯನೊತ್ತಿಂ ನೆತ್ತಿಗೆ
ಸುಣ್ಣವ ಸವರಿಂತು ಬಾನಿ ನೀರೊಳ್ ಮಿಂದುಂ ।
ತಣ್ಣಗೆ ನಾವ್ ನರಕನೊಡಂ
ಕಣ್ಣನನುಂ ನೆನೆದೆವೈ ಚತುರ್ದಶಿಯಂದುಂ ।।
ಸೊಗಸಿನ ರಂಗುರಂಗವಲಿ ಚುಕ್ಕೆಯೊಳಿಟ್ಟದೊ ದೀಪಸಾಲನುಂ
ಬಗೆಬಗೆ ದೀಪಕಂಬಗಳ ಹೆಚ್ಚಿಸಿಹಚ್ಚೆ ಬಲೀಂದ್ರಪೂಜೆಗಂ ।
ಮೊಗೆದದೊ ಪದ್ಯಪಾನದೊಳುವೀಬಗೆ ಭಾವವು ತುಂಬಿ ಬಂದಿರಲ್
ಹಗಲಲೆ ಹಚ್ಚುದೀಹಣತೆ ಚಂಪಕ ಮಾಲೆಯ ರೂಪತಾಳಿದುಂ ।।
ನೆನೆದಿರೆ ಭೂಮಿತಾನಿನಿತು ಮಿಂದಿರಲಿಂದದೊ ವರ್ಷಧಾರೆಯೊಳ್
ಕನಲಿವೆ ಮದ್ದುಗುಂಡುಗಳು ನಂದಿರೆ ನೋವಲಿ ತಂಪುರಾತ್ರಿಯೊಳ್ ।
ಜನರಿಹರಿಂತು ಕಾಣ್ ರಜೆಯಮೇಲ್ ರಜೆ ಬಂದಿರೆ ಹರ್ಷಗೊಂಡು ತಾವ್
ಮನವಿರೆ ಮೊಗ್ಗುಮಂದ್ರದಲಿ ಬಂದುದು ಬಂಧವದಿಂತು ಕಾಣಿದಂ ।।
ನೀರವ ಮೆಟ್ಟುತೆ ಸೋರಿದ ಮನದೊಳ್ -(ಹೊಸ)
ಸೀರೆಯನುಟ್ಟದೊ ಸೋನೆಯ ಮಳೆಯೊಳ್ -(ನೆರೆ)
ನೀರೆಯರೊಟ್ಟಿಗೆ ಸಂಧಿಸಿಯೊಲವಿಂ -(ದಿದೊ)
ಕೋರಿಹೆ ಗಟ್ಟಿಯೆ ಸರ್ವರಿಗೊಳಿತಂ ।।
(ಬಲೀಂದ್ರನಾರತಿಯ ವೇಳೆಯ ಚಿತ್ರಣ)
ಪದ್ಯಸಮೃದ್ಧಿ ಮೆಚ್ಚುವಂತಿದೆ; ಹೃದ್ಯಭಾವದ ಲಹರಿಯೂ ಸ್ತವನೀಯ. ಆದರೆ ಅರಿಸಮಾಸ-ವ್ಯಾಕರಣವಿರುದ್ಧಪ್ರಯೋಗಗಳು ಸ್ವಲ್ಪ ಸವರಣೆಗೊಳ್ಳಬೇಕು. ಮುಖತಃ ಸಿಕ್ಕಾಗ ವಿಸ್ತರಿಸಿ ವಿವರಿಸುವೆ.
ಚೆನ್ನಾಗಿವೆ
ಹೆಚ್ಚೆ ಹೊನ್ನೆಂದೆಸೆದ “ಹುಚ್ಚಳ್ಳ ಹೂವೆಸಳ” ಮೆಚ್ಚಿದ, ಪದ್ಯಪಾನದ (ಹೊನ್ನ)ಸರದಾರರಿಗೆ ಧನ್ಯವಾದಗಳು.
(ಕೆಲವು ಸವರಣೆಗಳು : *ದೀಪಕಂಬಗಳ ~ ದೀಪಧೂಪವನು, ತಂಪುರಾತ್ರಿಯೊಳ್ ~ ಶೀತರಾತ್ರಿಯೊಳ್)
ಪದ್ಯಸಮೃದ್ಧಿ ಚೆನ್ನಾಗಿವೆ
Soma, See above !! (once again)
ದೀಪಾವಳಿಯ ಪದ್ಯದಡುಗೆಯನ್ನು ಓದುತ್ತಿರುವಾಗಲೇ ಹೊಳೆದ ಇನ್ನೆರಡು ಪದ್ಯಗಳು. ಎರಡೂ ಒಂದೇ ರೀತಿ ಇದ್ದರೂ ಹಾಕಿಬಿಡುತ್ತಿದ್ದೇನೆ. ಹೊರಗಿನ ಕತ್ತಲೆ ಕಳೆಯುವ ದೀಪಗಳನ್ನು ಹೊತ್ತಿಸುತ್ತಿರುವಂತೆಯೇ, ಮನವ ಬೆಳಗಿಸುವಂತಹ ಅರಿವಿನ ಜ್ಯೋತಿಯನ್ನೂ ಬೆಳಗೋಣವೆಂಬುದೇ ಈ ಪದ್ಯಗಳ ಆಶಯ.
ಬಿರಿಯೆ ಹೂಬಾಣಗಳು ಮೇಗಡೆ-
ಯುರಿಯೆ ಭೂಚಕ್ರಗಳು ನೆಲದಲಿ
ಮೆರೆವ ಸಾಲ್ದೀಪಗಳ ಮನೆಮನೆಸುತ್ತ ಹಚ್ಚೋಣ
ಪರಿಪರಿಯ ವಿಸ್ಮಯವು ತುಂಬಿದ
ಧರೆಯ ಬಗೆಬಗೆ ಜನರ ಮನದ-
ಲ್ಲರಿವು ದೀವಿಗೆಗಳನು ಬೆಳಗಿಸಿ ನಲಿವು ಪಡೆಯೋಣ
ಬಿರಿಯುತಿರೆ ಹೂಬಾಣಗಳು ಜೊತೆ
ಗುರಿಯುತಿರೆ ಸಾಲ್ದೀಪಗಳು ಸಾ-
ವಿರದ ಲೆಕ್ಕದಲಿರುಳ ಕತ್ತಲೆ ದೂರವೋಡಿಸುತ
ಧರೆಯ ಜನಗಳ ಮನದಲಿಹ ಕಾ
ರಿರುಳನೋಡಿಸುವಂಥ ಮುಡಿವ-
ಲ್ಲರಿವು ದೀವಿಗೆ ಹಚ್ಚುವಂತಹ ಕೆಲಸ ಮಾಡೋಣ
‘ಸಾಲ್ದೀಪ’ ಪದಪ್ರಯೋಗ ಸಾಧುವಲ್ಲವೆನಿಸುತ್ತದೆ.
ದಿಟವೇ, ಆದರೆ ಇದು ತೀರ ನಡುಗನ್ನಡದ ಬಳಕೆಯಲ್ಲಿ ಹೊಕ್ಕುಬಿಟ್ಟಿದೆ; ಸಾಲ್ದೀವಿ, ಸೊಡರ ಸಾಲ್, ಸಾಲ್ಸೊಡರು, ಸಾಲ್ದೀವಿಗೆ ಎಂದು ಪ್ರತ್ಯಾಮ್ನಾಯಗಳೇನೋ ಉಂಟು…
On the eve (caturdasi) and morrow (pADya), Narayana slays demons, but gets no credit. In between, puja for Lakshmi on amAvAsya! What for?
ವಸಂತತಿಲಕ|| ಸಾಲಾಗಿ ರಕ್ಕಸರನುಂ ಸವರುತ್ತುಮೆಂತೋ
ಲೀಲಾವಿನೋದಮೆರೆದುಂ ಹರಿತಾನಿರಲ್ಕಾ|
ಲೋಲಾಂಗನೆ (ಚಂಚಲೆ) ಪ್ರಕೃತಿಯಳ್ಗದುಮೇಕೊ ಕಾಣೆಂ
ಡೌಲಿಂದೆ ಪೂಜೆಯಿನಿತುಂ ನಡುಮಧ್ಯದೊಳ್ಗಂ||
’ನಡು’ವಿನ ಕಡೆ ನಿಮಗೇಕಯ್
ಬಿಡುವಿಲ್ಲದೆ ಗಮನವೀವ ತವಕಂ ಗಮಕಂ?
ನುಡಿದಿದೆ ಸಿನಿಮಾಗಾನಂ:
ಪಿಡಿಯದಿರಯ್ ಶಿಷ್ಯ! ಜೋಕೆ, ಸೊಂಟದ ವಿಷ್ಯಾ!!
🙂 🙂 🙂
🙂
ದೀಪಾವಳಿಯಂದು ಸೂರ್ಯಾಸ್ತ – ರೂಪಕಾಲಂಕಾರ
ನಾಕ(sky)ದೀವಳಿಯೊಳದೊ ರಾರಾಜಿಸಿಹನಲ್ತೆ
ಲೋಕದೊಳು ಚಂದ್ರನಾರಾಯಣಂ ತಾಂ|
ನೈಕರಾಕ್ಷಸರ ನರಕರೊಲರಂ ಸಂಹರಿಸಿ
ನೂಕಿ ಬಲಿಯಂ ಭೂತಲಕೆ ನಕ್ಕನೇಂ||
ಹಾಕಾರಉಲ್ಕಾಖಧೂಪವದೊ ಬಾನಿನೊಳ್ (ಖಧೂಪ=ಪಟಾಕಿ)
ಸಾಕೆನಿಪವೋಲು ನಕ್ಷತ್ರದೀಪಂ|
ನಾಕು ಐದೆಯರ ಕರೆಯಲ್ ಪರ್ಬಕಂ ಮೆಲ್ಲ-
ನಾಕೆ ಸೂರ್ಯಾಲಕ್ಷ್ಮಿ ಪೊರಟಳದೆಗೋ||
विलसितनलिनाल्या निर्मलाकाशभासा
शुचिजलसरसीभिः शुभ्रया ज्योत्स्नया च ।
शरदमधिकरम्यां वीक्ष्य तस्याम् प्रसन्नो
वितरति वरमेतत् पर्वरत्नं विरञ्चिः ॥१॥
बालानामिदमस्ति नूत्नवसनैर्विस्फोटकैश्च प्रियं
स्त्रीणां पाकपटुत्वदर्शनपदं यूनां विहारास्पदम् ।
वृद्धानान्तु परम्परास्मृतिकथासंकीर्तनैर्मोदका-
र्येवं पर्व नृलोकमोदकमिदं दीपावलीनामकम् ॥२॥
अविरतकृततापं मेघनिर्घोषजातं
तदुदिततडितोऽपि प्रत्यवक्षेप्तुकामाः ।
कृतपरिकरबन्धा मानवाः पर्वकाले
द्विगुणरवरुचीन् विस्फोटकान् स्फोटयन्ति ॥३॥
लघूनां योगोऽपि क्षम इह महाकार्यकरणे
तदेतद् व्यक्तं नो विततविभवे पर्वसमये ।
समूहो दीपानां दिशि दिशि समाराधनजुषा-
ममाध्वान्ताक्रान्तं भुवनमखिलं दीपयति वै ॥४॥
तिर्यञ्चोऽपीह गावः प्रणयितहृदयामाभजन्ते सपर्यां
धान्यं वा सस्यकं वा निखिलमपि जनैः पूज्यते जीवनाङ्गम् ।
संयातैर्बन्धुमित्रैर्विदधति विविधं पर्वकृत्यं समे तत्
पर्वेदं सर्वदिक्षु प्रथयति महितं भारतीयं चरित्रम् ॥५॥
ಸಂಕ್ಷಿಪ್ತ ಭಾವಾರ್ಥ –
೧. ಅರಳಿದ ತಾವರೆಗಳ ಸಾಲು, ಬೆಳ್ಮುಗಿಲು, ತಿಳಿಗೊಳಗಳು, ಶುಭ್ರ ಬೆಳದಿಂಗಳು – ಈ ಎಲ್ಲಾ ಗುಣಗಳಿಂದ ಪ್ರಸನ್ನನಾದ ಬ್ರಹ್ಮನು ಶರದೃತುವಿಗೆ ಈ ಹಬ್ಬವನ್ನು ವರವನ್ನಾಗಿತ್ತಿದ್ದಾನೆ.
೨. ಈ ಹಬ್ಬವು ಬಾಲರಿಗೆ ಹೊಸಬಟ್ಟೆ, ಪಟಾಕಿಗಳಿಂದ ಪ್ರಿಯವಾದದ್ದು. ಸ್ತ್ರೀಯರಿಗೆ ತಮ್ಮ ಪಾಕಕಲಾಕೌಶಲವನ್ನು ತೋರಲು ವೇದಿಕೆ. ಯುವಕರಿಗೆ ವಿಹಾರಕ್ಕೆ ಆಸ್ಪದ. ಹಿರಿಯರಿಗೆ ತಮ್ಮ ಕಾಲದ ಪರಂಪರೆಗಳನ್ನು ಸ್ಮರಿಸುತ್ತಾ ವಿವರಿಸುತ್ತಾ ಸಂತೋಷಿಸಲು ಸದವಕಾಶ. ಹೀಗೆ ಈ ದೀಪಾವಳಿಯೆಂಬಹಬ್ಬವು ಎಲ್ಲರಿಗೂ ಆನಂದದಾಯಕವಾದದ್ದು.
೩. ಹಿಂದೆ ಬಹುವಾಗಿ ಪೀಡಿಸಿದ ಸಿಡಿಲುಗಳನ್ನೂ ಮಿಂಚುಗಳನ್ನೂ ತಿರಸ್ಕರಿಸ ಬಯಸಿದ ಜನರು ಜತೆಗೂಡಿ ಅವುಗಳಿಗಿಂತ ದ್ವಿಗುಣಿತ ಶಬ್ದ-ಪ್ರಕಾಶಗಳುಳ್ಳ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ.
೪. ಅಲ್ಪವಸ್ತುಗಳೂ ಕೂಡಾ ಜೊತೆಗೂಡಿದರೆ ಮಹಾಕಾರ್ಯಸಾಧನೆ ಸಾಧ್ಯವೆಂಬುದು ಈ ಪರ್ವಕಾಲದಲ್ಲಿ ವ್ಯಕ್ತವಾಗುತ್ತಿದೆ. ಸಣ್ಣ ಸಣ್ಣ ಹಣತೆಗಳ ಸಮೂಹ ಅಮಾವಾಸ್ಯೆಯ ಕಗ್ಗತ್ತಲಿನಿಂದ ಕೂಡಿದ ಸಮಸ್ತಜಗತ್ತನ್ನು ಬೆಳಗಿಸುತ್ತಿದೆ.
೫.ತಿರ್ಯಗ್ ಜಂತುಗಳಾದ ಗೋವುಗಳೂ ಈ ಹಬ್ಬದಲ್ಲಿ ಪೂಜೆಯನ್ನು ಪಡೆಯುತ್ತವೆ. ಧಾನ್ಯವಾಗಲಿ, ಸಣ್ಣ ಸಸ್ಯ (ತುಳಸಿ) ವಾಗಲಿ- ಹೀಗೆ ಜೀವನಾಂಗಗಳಾದ ಎಲ್ಲಾ ವಸ್ತುಗಳೂ ಇಲ್ಲಿ ಪೂಜಿಸಲ್ಪಡುತ್ತವೆ. ಬಂಧುಮಿತ್ರರೊಡಗೂಡಿ ಇದರ ಆಚರಣೆ. ಹೀಗೆ ಈ ಹಬ್ಬವು ಮಹಿತವಾದ ಭಾರತೀಯತೆಯನ್ನು ಎಲ್ಲೆಡೆ ಸಾರುತ್ತಿದೆ.
ಪೆಜತ್ತಾಯರೆ, ಪದ್ಯಗಳು ಸೊಗಸಾಗಿವೆ. ಅದರಲ್ಲೂ ೪ನೆಯದು ಬಹಳವಾಗಿ ಹಿಡಿಸಿತು. ಆದರೆ अविरतकृततापं ಎಂದವರು द्विगुणरवरुचीन् ಎಂದಾದದ್ದು ಸೋಜಿಗ 🙂
ಪ್ರೀತಿಯ ರಾಮಕೃಷ್ಣ ಪೆಜತ್ತಾಯರಿಗೆ ನಮನ.
ಈ ಸಂಚಿಕೆಯಲ್ಲಿ ಸಂಸ್ಕೃತವನ್ನು ಬಳಸಿ ಯಾವೊಂದು ಪದ್ಯವೂ ಬಾರದೆ ಹೋಯಿತಲ್ಲಾ ಎಂದು ವ್ಯಾಕುಲತೆಯಿಂದ
ಹಂಬಲಿಸಿದ್ದ ನನ್ನ ಪಾಲಿಗೆ ನಿಮ್ಮ ಈ ಪದ್ಯಪಂಚಕವು ಶ್ರವಣಾಸೇಚನಕವಾಯಿತು. ಎಲ್ಲ ಚೆನ್ನಾಗಿವೆ; ಧನ್ಯವಾದಗಳು.
DhanyavAdagaLu sir: -)
Jeevem – Sharmarige dhanyavAdagaLu: -)
ಸೊಗಸಾದ ಪದ್ಯಗಳು…. 🙂
ಪೆಜತ್ತಾಯರೆ ಅದ್ಭುತವಾಗಿದೆ ಪದ್ಯಗಳು
ಪ್ರತಿ ಪದ್ಯ ಪಾದದೊಳ್ ಜೀ-
ವಿತಗೊಂಡೀ ಸೊಡರು ತಾಳ್ದಿವುನ್ನತಿಯಂ ನಿ-
ಶ್ಚಿತದಿಂದುದ್ಗರಿಸಿವೆ ಸಂ-
ಗತಿಯೊಳ್ ಕಾಣ ಕರವೆತ್ತಿ ಸರ್ವರಿಗೊಳಿತಂ ।।
(ಪದ್ಯ ಪಾದಗಳಲ್ಲಿ ಮೂಡಿರುವ ದೀಪಾವಳಿಯ ಜ್ಯೋತಿಯು – ಕರವೆತ್ತಿ ಸರ್ವರಿಗೂ ಒಳಿತನ್ನು ಕೋರುತ್ತಿರುವಂತೆ ಕಂಡ ಕಲ್ಪನೆಯಲ್ಲಿ)