Oct 262014
ಶಾಲಿನೀ, ಮಾಲಿನೀ, ಮಂದಾಕ್ರಾಂತಾ, ಸ್ರಗ್ಧರಾ, ಮಹಾಸ್ರಗ್ಧರಾ ಛಂದಸ್ಸುಗಳಿಗೆ ಹೊಂದುವ ‘ಸಾಕುಸಾಕಾಯ್ತೆ ಲೋಕಂ’ ಎಂಬ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ
ಶಾಲಿನೀ, ಮಾಲಿನೀ, ಮಂದಾಕ್ರಾಂತಾ, ಸ್ರಗ್ಧರಾ, ಮಹಾಸ್ರಗ್ಧರಾ ಛಂದಸ್ಸುಗಳಿಗೆ ಹೊಂದುವ ‘ಸಾಕುಸಾಕಾಯ್ತೆ ಲೋಕಂ’ ಎಂಬ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ
ವೃತ್ತದಲ್ಲಲ್ಲ, ಮಾತ್ರೆಯಲ್ಲಿ. ಹೇಗೆ ಮಾಡಬಾರದೆಂಬುದಕ್ಕೆ ಮೇಲ್ಪಂಕ್ತಿ:
ಬೊಂತೆಯಂತಃಕಲಹಗಳದಲ್ತೆ ಈ ವಿಶ್ವ-
ಮೆಂತೊ ಕಾವರುಮಣ್ಣ-ತಮ್ಮಂದಿರೈ|
ಕಾಂತ-ಕಾಂತೆಯರೇನಿನಿತು ಕಾದುವರೆ ನೋಡ-
ಲಿಂತುಂ ಕುಸಾ-ಕುಸಾ ಕಾಯ್ತೆ ಲೋಕಂ!!
🙂 ha ha
ಪ್ರೀತಿಯ ಪ್ರಸಾದು, ನಿಮ್ಮ ಪದ್ಯಗಳು ದಿನದಿನಕ್ಕೆ ನನ್ನಂಥ ಬಡಪಾಯಿ ಕಬ್ಬಿಗನ ಕಾವ್ಯಾರ್ಥಾವಗಮನಶಕ್ತಿಗೇ ಸವಾಲಾಗುತ್ತಿವೆ:-) …………ಅಲ್ತೆಲೀ” ಇತ್ಯಾದಿ ಪ್ರಯೋಗಗಳಿಗೆ ಯಾವುದೇ ವ್ಯಾಕರಣಸಮರ್ಥನೆ ಇಲ್ಲ.
’ಅಲ್ತೆಲ್ ಈ’ ಎಂದಾಗದೆ?
ಹೀಗೆ ಎಂದೂ ಆಗದು-
ಧನ್ಯವಾದಗಳು. ಸವರಿದ್ದೇನೆ.
ಅಂತು ಪ್ರಸಾದ್ ಸರ್ ಅವರಿಗೆ – “ಈ”ರೀತಿ “ನಡು”ಕ ಹುಟ್ಟಿಸಿಬಿಟ್ಟಿರಲ್ಲ, ಗಣೇಶ್ ಸರ್ !!
ಜರೆಯುಗುಳಿದ ತಾಪಂ ಪೀರಿರಲ್ ಜೀವನಾಂಶಂ
ಹರಿವ ವಪುವಿನೊಳ್ಮೇರ್(ಣ್) ಕ್ಷಾಮಮುಂ ಬರ್ಪುದಾಯ್ತೇಂ?
ಅರಸಿ ಸೆಲೆಯನೊಂದಂ ಚೇತನಂ ಬಾಳ್ತೆಗಾಣಲ್
ಪೊರಟು ನಡೆಯಿತೇಂ ! ಹಾ! ಸಾಕುಸಾಕಾಯ್ತೆ ಲೋಕಂ?
ಮೊದಲ ಸಾಲಿನಲ್ಲಿ ಒಂದು ಲಘು ಕಡಿಮೆಯಾಗಿದೆ… “ವಪುವಿನೊಳ್ಗೇಂ??”
ಸರಿಪಡಿಸಿದ್ದೇನೆ (ಇನ್ನೊಂದು ತಪ್ಪನ್ನೂ) 🙂 ಧನ್ಯವಾದಗಳು.
“ಕ್ಷಾಮಮುಂ ಬರ್ಪುದಾಯ್ತೇಂ” ಎಂದು ಸವರಿಸಿದರೆ ಒಳಿತು.
ವೃತ್ತಾವೃತ್ತಂ ಕಾಣ್ ಸಮಸ್ಯಾವಿಚಾರಂ
ಚಿತ್ತಾವಿಷ್ಟಂ ಸಾಕುಸಾಕಾದುದಂತುಂ । (ಸಾಕುಸಾಕಾಯ್ತೆ ಲೇಖಂ?!)
ತುತ್ತಾಗಿಂತುಂ ಜೀವಜೀವಾತ್ಮ ಬಂಧಂ
ಸುತ್ತಂಸುತ್ತಲ್ ಸಾಕುಸಾಕಯ್ತೆ ಲೋಕಂ ।।
ಭಜಗೋವಿಂದಂ …… ! ಆಧರಿತ
ಒಳ್ಳೆಯ ಅನವದ್ಯಪದ್ಯ; ಅಭಿನಂದನೆಗಳು.
ಚೆನ್ನಾಗಿದೆ ಪದ್ಯ
ಮುಸುಕಿರೆ ಪಸೆಯಿಂತುಂ ಸೋರಿ ಹಿಂಗಾರ ಮೋಡಂ
ಮಸುಕಿದು ಬಡಬಾಳುಂ, ಸೋತ ಕಂಗಾಲ ನೋಡಂ ।
ದೆಸೆಗೆಡಲವನಿಂತುಂ ಸಂದು ಸಂತಾಪ ಶೋಕಂ
ಬಸವಳಿದಿರೆ ಜೀವಂ ಸಾಕುಸಾಕಾಯ್ತೆ ಲೋಕಂ ।।
(ಬಡಜೀವರ ಮೇಲೆ ಇತ್ತೀಚಿನ ಮಳೆಯ ಪರಿಣಾಮ)
ಎಲ್ಲ ಚೆನ್ನಾಗಿದೆ. ಜೊತೆಗೆ ಜೋಡಿಸಾಲುಗಳಲ್ಲಿ ಅಂತ್ಯಪ್ರಾಸವನ್ನೂ ತಂದಿದ್ದೀರಿ! ಇದು ಸೊಗಸಾದ ಮಾಲಿನೀಪ್ರಯೋಗ: ಮೂರನೆಯ ಪಾದದಲ್ಲಿ ಒಂದಿಷ್ಟು ಸವರಣೆ:”…………………..ಸಂದಿರಲ್ ತೀವ್ರಶೋಕಂ”
ಸಂದಿರಲ್ ತೀವ್ರತೋಷಂ ಸಾಕಾಗಲೇಕ ಲೋಕಂ !!
ಧನ್ಯವಾದಗಳು ಗಣೇಶ್ ಸರ್.
ಕರಮೆಸೆವುತಿರಲ್ಕೀ ಪದ್ಯದಿಂ ತೋಷಮಾಯ್ತೌ!
ಶಾಲಿನಿಯಲ್ಲಿ ನನ್ನ ಮೊದಲ ಪದ್ಯ
ಗೋಳಾಡಲ್ ತಾಂ ಪ್ರೇಯಸೀ ಮೋಸಗೈಯ್ಯಲ್
ಬೀಳಲ್ ಪೋದಂ ಸಾವನಪ್ಪುತ್ತೆ ಮೂಢಂ
ತಾಳೆನ್ನುತ್ತುಂ ಕೂಗಿರಲ್ಕಂತರಾತ್ಮಂ
ಕೇಳುತ್ತಿರ್ಕುಂ ಸಾಕುಸಾಕಾಯ್ತೆ ಲೋಕಂ?
ಮೊದಲ ಶಾಲಿನೀವೃತ್ತನಿರ್ವಾಹಕ್ಕಾಗಿ ಅಭಿನಂದನೆಗಳು. ಎಲ್ಲ ಚೆನ್ನಾಗಿದೆ; ಕೇವಲ ವ್ಯಾಕರಣರೀತ್ಯಾ ಒಂದು ಸವರಣೆ: “…………………ಪ್ರೇಯಸೀವಂಚಿತಂ ತಾಂ”
ಧನ್ಯವಾದಗಳು ಸಾರ್, ಹಾಗಾದಲ್ಲಿ ಮೊದಲನೇ ಸಾಲನ್ನು ಈ ರೀತಿ ಸರಿಪಡಿಸುವೆ.. “ಗೋಳಾಡಿರ್ಪಂ ಪ್ರೇಯಸೀವಂಚಿತಂ ತಾಂ”
ವೃತ್ತಂ ಹೃದ್ಯಂ ಚೀದಿ ನಿಮ್ಮಿಂ ಕೃತಂ ಮೇಣ್ 🙂
ಮಂದಾಕ್ರಾಂತ:
ಕಷ್ಟಂ ಕಷ್ಟಂ ! ಬಳಲುತಿಹೆನಾ ವೇಗದೀ ಪಂಥದಿಂದಂ
ದುಷ್ಟಾಶ್ಲಿಷ್ಟಂ ! ಸೆಳೆತಬಹಳಂ ನಾನದಕ್ಕೇನು ಲೆಕ್ಕಂ
ನಷ್ಟಾರೋಪಂ ! ಹೊರಬರುವೆನೇಂ ದೌತ್ಯದಿಂ? ಸಂಧಿಯಿಂದಂ?
ಶಿಷ್ಟಾಚಾರಂ ! ವಿರಮಿಸುವೆನಾಂ ಸಾಕುಸಾಕಾಯ್ತು ಲೋಕಂ
Rat race ನಲ್ಲಿರುವನ ಅಳಲು ಇದಾಗಿರಬಹುದೇ?
ದುಷ್ಟಾಶ್ಲಿಷ್ಟಂ – ದುಷ್ಟರಿಂದ ಆಲಂಗಿಸಲ್ಪಟ್ಟವನು,ದುಷ್ಟತನವನ್ನು ತಾನಾಗಿಯೇ ಆಲಂಗಿಸಿದವನು ಎನ್ನುವ ಎರಡೂ ಅರ್ಥಗಳು ಇಲ್ಲಿ ಇದ್ದಲ್ಲಿ, ಎರಡು ಅರ್ಥಗಳೂ ಹೊಂದುತ್ತದೆಯೆಂದುಕೊಂಡಿದ್ದೇನೆ(ಇದು ನನ್ನದೇ ಪ್ರಯೋಗ – ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿರಿ)
ಹಾಗೆಯೇ ನಷ್ಟಾರೋಪಮ್ – ನಷ್ಟದ ಆರೋಪ, ಈ ಪ್ರಯೋಗ ಸರಿಯಿದೆಯೇ?
Very nice 🙂
ಪದ್ಯಭಾವ ಸೊಗಸಾಗಿದೆ; ಎಲ್ಲ ಪದಗಳೂ ವ್ಯಾಕರಣಶುದ್ಧವಾಗಿವೆ. ಮಂದಾಕ್ರಾಂತದಂಥ ಪ್ರೌಢವೃತ್ತನಿರ್ವಾಹವನ್ನು ಸಲೀಸಾಗಿ ಮಾಡಿದ್ದೀರಿ; ಅಭಿನಂದನೆಗಳು. ಆದರೆ ಹಳಗನ್ನಡದ ಹದದ ನಿಟ್ಟಿನಲ್ಲಿ ಸ್ವಲ್ಪ ಸವರಣೆಗಳನ್ನು ಹೀಗೆ ಮಾಡಬಹುದು:
……………….ಬಳಲಿದಪೆನಾಂ………………………
……………….ಸೆಳೆತಮತುಲಂ ನಾನದಕ್ಕಾವ ಲೆಕ್ಕಂ|
……………….ಪೊರಬರುವೆನೇಂ……………………
……………….ವಿರಮಿಸಿದಪೆಂ………………………||
ನಿಮ್ಮ ಮೆಚ್ಚುಗೆಗೆ, ತಿದ್ದುಪಡಿಗಳಿಗೆ ಧನ್ಯವಾದಗಳು.
@ಚೀದಿ:
ಮೆಚ್ಚುಗೆಗೆ ಧನ್ಯವಾದಗಳು.
ಕಷ್ಟಪ್ರಾಸಾನ್ವಿತಕವನದೊಳ್ ಸಂದುದೊಳ್ಪಿಂದೆ ಭಾವಂ
ಮಿಡಿಯೆ ಮನವು ನೊಂದುಂ ಕಣ್ಗೆಕಂಡಂದು ಕಷ್ಟಂ
ಹುಡುಕಿಹೊರಟು ನಿಂದಂ ಕಾರಣಂ ಕ್ಲೇಶಕೊಂದಂ
ಪಡೆದ ಸುಖವ ತೆತ್ತಂ ಬುಧ್ಹನಾಗಲ್ಕದಾಗಳ್
ಪಿಡಿದ ವಿನುತ ಮಾರ್ಗಂ,ಸಾಕುಸಾಕಾಯ್ತೆ ಲೋಕಂ?
ಸರಲಕವನಭಾವಂ ಶಾಂತಿಮಾಲಾನಿಬದ್ಧಂ
ಮುನಿಯದ ಮುನಿಯೆಂಬಂತಿರ್ದಪಂ ಪಾರ್ವನೊರ್ವಂ
ಜನರಹಿತವನಚ್ಛಾಯೆಯೊಳ್ ಸಾಗುವಾಗಳ್
ಧನಿಕನ ರಥಮೊಂದಂತೆಯ್ದು ಪಾಯ್ದತ್ತು ಕಾಲ್ಗಂ
ಮನದೆ ಮರುಗಿ ಪೇಳ್ದಂ ಸಾಕು ಸಾಕಾಯ್ತೆ ಲೋಕಂ|
( ಕಥಾಸರಿತ್ಸಾಗರದಲ್ಲಿಯೋ ಎಲ್ಲಿಯೋ, ಕಾಲನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಒಬ್ಬ ಬ್ರಾಹ್ಮಣನ ಕಥೆ ಓದಿದ ನೆನಪು. ಆ ಕಥೆಯ ಬ್ರಾಹ್ಮಣನ ಪರಿಸ್ಥಿತಿಯ ಬಗ್ಗೆ)
ಚೆನ್ನಾಗಿದೆ; ಒಂದು ಕಥೆಯನ್ನೇ ಮಾಲಿನೀವೃತ್ತದಲ್ಲಿ ಅಡಕಮಾಡುವ ಸಾಹಸ ಯಶಸ್ವಿಯಾಗಿದೆ.
ಧನ್ಯವಾದಗಳು ಸರ್ 🙂
ಪ್ರತ್ಯಾಹಾರಂ ನಡೆದಿರಲುಂ ವೃತ್ತಿ ನಿರ್ವಾಹಕಂತುಂ
ಸತ್ಯಾನಂದಂ ದೊರಕಲುವುಂ ಜೀವನಂ ಕಾಣ ನಾಕಂ ।
ಅತ್ಯಾಚಾರಂ ಜರುಗುದನುಂ ನಿತ್ಯ ಜೀವರ್ಗಳಿಂದುಂ
ಪ್ರತ್ಯಕ್ಷಂ ಕಂಡಿರೆ ಕಪಟಂ ಸಾಕುಸಾಕಾಯ್ತೆ ಲೋಕಂ ।।
(ನಿತ್ಯಾನಂದಂ ಬಿಡದಿಯೊಳುಂ ………. ಸಾಲಿನ ಮುಂದುವರಿದ ಭಾಗ !!)
ಇದೇಕೆ ಮಂದಾಕ್ರಾಂತದಲ್ಲಿ ಬರುವ ಐದು ಗುರುಗಳಿಗೆ ಬದಲಾಗಿ ನಾಲ್ಕೇ ಗುರುಗಳಿಗೆ ಮಿತಿಮಾಡಿಕೊಂಡಿದ್ದೀರಿ? ಈ ಮಾರ್ಪಾಡು ಸೋದ್ದಿಷ್ಟವೋ ಅಥವಾ ಆಕಸ್ಮಿಕವೋ? ಏನೇ ಆಗಲಿ, ಇದೂ ಒಂದು ನವೀನವೃತ್ತವೇ ಆದೀತು ದಿಟ. ಆದರೆ ಇಲ್ಲಿ ಗತಿಸುಭಗತ್ವವಿಲ್ಲದ ಕಾರಣ ಇಂಥ ಪ್ರಯೋಗವು ಸ್ವರಸವಾಗದು.
ಗಣೇಶ್ ಸರ್, ಗಾಯತ್ರಿಯವರ ಪದ್ಯ ನೋಡಿ ಬರೆದಿದ್ದು, ಮಂದಾಕ್ರಾಂತದಲ್ಲಿ – ನಾಲ್ಕು ಗುರುಗಳಲ್ಲವೇ?
ಮಂದಾಕ್ರಾಂತಂಮುಗುದೆಯರಿಗೇ ಮೀಸಲಾಗಿರ್ಪತಂತ್ರಂ
ಓ.. ಸರ್, ಈಗ ಅರ್ಥವಾಯಿತು, ಐದು ಲಗುಗಳು ಬರಬೇಕಿತ್ತು ಅಲ್ಲವೇ? ಅದಕ್ಕೆ ಧಾಟಿ ತಪ್ಪಿದೆ.
ಸರಿಪಡಿಸಿದ್ದೇನೆ.
ಪ್ರತ್ಯಾಹಾರಂ ನಡೆಯುತಿರಲುಂ ವೃತ್ತಿ ನಿರ್ವಾಹಕಂತುಂ
ಸತ್ಯಾನಂದಂ ದೊರಕಲದಕುಂ ಜೀವನಂ ಕಾಣ ನಾಕಂ ।
ಅತ್ಯಾಚಾರಂ ಜರುಗುತಿರಲುಂ ನಿತ್ಯ ಜೀವರ್ಗಳಿಂದುಂ
ಪ್ರತ್ಯಕ್ಷಂ ಕಂಡಿರೆ ಕಪಟವಂ ಸಾಕುಸಾಕಾಯ್ತೆ ಲೋಕಂ ।।
ನೂತ್ನಂ ವೃತ್ತಂ ಕವನಭುವನಕ್ಕಿಂತುಷಸ್ಸಾದುದಲ್ತೇ
ನೂತ್ನಂ ವೃತ್ತಂ ಕವನಭುವನಕ್ಕಿಂತುಷಸ್ಸಾದುದಲ್ತೇ
ಧನ್ಯವಾದಗಳು ಕೊಪ್ಪಲತೋಟ
ಪ್ರತ್ಯಾಹಾರ – ಪಥ್ಯಾಹಾರ ವಾಗಿಬಿಟ್ಟಿತ್ತು, ಒಂದು ಮಾತ್ರೆ ನುಂಗಿಬಿಟ್ಟಿದ್ದೆ !!
ಚಿತ್ತಾಕರ್ಷಂಗೊಂಡಿರಲ್ ಭೂಮಿಯಿಂದಂ
ಹತ್ತೇರ್ವಂದುಂ ಬೆಟ್ಟಗುಡ್ಡಂಗಳಿಂದಂ,
ತೆತ್ತುಂ ಬಾಳಂ, ಸಾಗರಂಸಾರ್ದನೇಕಂ?
(ಮ)ಗತ್ತಾರ್ದಾಗಳ್, ಸಾಕುಸಾಕಾಯ್ತೆ ಲೋಕಂ? 🙂
(ಗತ್ತು=ಅನುಸರಣೆ,ಸಲುಗೆ)
(ಸೂರ್ಯೋದಯ,ಸೂರ್ಯಾಸ್ತ)
ಕೆಲವೊಂದು ವಿಸಂಧಿದೋಷಗಳೂ ಛಂದೋಲೋಪವೂ ಇವೆ (ಕಡೆಯಪಾದದಲ್ಲಿ). ಮುಖತಃ ವಿವರಿಸಿ ತಿದ್ದುವೆ.
ತಪ್ಪುಗಳನ್ನು ಸರಿಪಡಿಸಿದ್ದೇನೆಂದೆನಿಸಿದೆ 🙂
ಮೊದಲ ವೃತ್ತ ಪ್ರಯೋಗ…
ಅಶೋಕ ವನದ ಸೀತೆಯ ದುಃಖ..
ಬನದನಡುವೆಯೊಳ್ಭೂಜಾತೆ ಕಣ್ತುಂಬಿ ಪೇಳ್ದಳ್
“ಜನನಿ… ತವರ ತೋರೈ, ಸಾಕು ಸಾಕಾಯ್ತೆ ಲೋಕಂ ” ।
ನೆನೆಯುತೊಡೆಯನಾಮಂ, ರತ್ನವಂಕೈಯೊಳಿತ್ತನ್
ಮನದದುಗುಡವಂ ತಾನೂಕಿ ಕೋದಂಡದೂತಂ ।।
ಮೊತ್ತಮೊದಲ ವೃತ್ತರಚನಾಪ್ರಯತ್ನ ಮೆಚ್ಚುವಂತಿದೆ. ಆದರೆ ಸಹಜವಾಗಿಯೇ ಕೆಲವೊಂದು ದೋಷಗಳು ನುಸುಳಿವೆ.
ಉದಾ: ನಡುವೆ ಎಂದರೆ ಸಾಕು, ನಡುವೆಯೊಳ್ ಎಂಬ ಸಪ್ತಮೀವಿಭಕ್ತಿ ಬೇಡ.
ಒಡೆಯನಾಮಂ ಎಂಬುದು ಅರಿಸಮಾಸ. ಇದನ್ನು ಒಡೆಯನೊಳ್ಪಂ (ಒಳ್ಪು = ಪ್ರೀತಿ)
ಇತ್ಯಾದಿ. ಅಲ್ಲದೆ ಕೋದಂಡದೂತಂ ಎಂದರೆ ರಾಮ ಎಂದಾಗದು. ಕೋದಂಡಧಾರಂ ಎಂದೋ ಕೋದಂಡರಾಮಂ ಎಂದೋ ಆಗಬೇಕು. ಅಲ್ಲದೆ ತಾವು ಹಳಗನ್ನಡದ ಹದವನ್ನು ಮತ್ತಷ್ಟು ತರುವಲ್ಲಿ ಯತ್ನಿಸಿರಿ.
ಸವರಣೆಗಳಿಗೆ ಧನ್ಯವಾದಗಳು ಮೇಷ್ತ್ರೆ…. ಮತ್ತಷ್ಟು ಅಭ್ಯಾಸದಿಂಬರೆಯಲೆತ್ನಿಸುವೆ..
ಇಳೆಯುಂ ಕಾಣಿಂತುತಾನುಂ ತುಳುಕಿರೆ ಜನರಿಂ ಚಂದ್ರಲೋಕಂಪೊದಳ್, ತಿಂ-
ಗಳುತಾಂ ತೂರಾಡುತಿಂತುಂ ತಳೆದಿರೆ ಕಳೆಯಂ, ಪುತ್ರನಂಗಾರನಂ ಸಂ-
ಗಳಿಸಲ್ ಹೂಡಿಂತುಯಾನಂ ಹೊರಟಿರೆ ಬುಧರುಂ, ಮಂಗಳಂಕಂಡಿರಲ್ ಬಾಂ-
ದಳದೊಳ್, ಬೇರೊಂದುತಾವೊಳ್ ದೊರಕಿರೆ ನೆಲೆಯುಂ, ಸಾಕುಸಾಕಾಯ್ತೆ ಲೋಕಂ ।।
(ಅಂತರಿಕ್ಷ ಯಾನದ ಪರಿಕಲ್ಪನೆ… !!)
ಕಲ್ಪನೆಯು ತುಂಬ ಸೊಗಸಾಗಿದೆ. ಈವರೆಗೆ ಎಲ್ಲರೂ ವಿಷಾದ-ಖೇದಗಳ ಹಿನ್ನೆಲೆಯಲ್ಲಿ ಪದ್ಯಪೂರಣವನ್ನಿದಕ್ಕೆ ಮಾಡಿದ್ದರು. ನೀವು ಇದೀಗ ತುಂಬ ಭರವಸೆ, ಹರ್ಷಗಳ ಧ್ವನಿ ಹೊಮ್ಮುವಂತೆ ಕವನಿಸಿದ್ದೀರಿ; ಅಭಿನಂದನೆಗಳು. ಆದರೆ ಪ್ರಶಂಸನೀಯವಾದ ಇಂಥ ಮಹಾಸ್ರಗ್ಧರೆಯನ್ನು ನಿರ್ವಹಿಸುವಲ್ಲಿ ಮತ್ತಷ್ಟು ಹಳಗನ್ನಡದ ಬಿಗಿ ಬೇಕಿದೆ. ಇದು ನಿಮ್ಮ ಸತತಪ್ರಗತಿಯ ಹಿನ್ನೆಲೆಯಲ್ಲಿ ಕಂಡಾಗ ಸದ್ಯೋಭವಿಷ್ಯದಲ್ಲಿಯೇ ಸಾಧ್ಯವಾಗುವ ನೆಲೆಯೆಂದು ತೋರುತ್ತದೆ.
ಧನ್ಯವಾದಗಳು ಗಣೇಶ್ ಸರ್, ವೃತ್ತಗಳಲ್ಲಿ ಪದ್ಯ ರಚನೆ ಸಂತೋಷ ತಂದಿದೆ. ಕಲ್ಪನೆಯನ್ನು ವೃತ್ತಗಳಲ್ಲಿ ತರುವಲ್ಲಿ ನನ್ನ ಭಾಷಾಮಿತಿಯ ಪರಿಣಾಮ ಅರಿವಾಗುತ್ತಿದೆ. ಹೆಚ್ಚು ಹೆಚ್ಚು ಅಧ್ಯಯನದ ಅವಶ್ಯಕತೆಯಿದೆ.
ಆಶಾ ಭಾವದ ಸೊಗಡು ಬಹಳ ಚೆನ್ನಾಗಿದೆ…. 🙂
ಧನ್ಯವಾದಗಳು ವೇದಪ್ರಕಾಶರೆ
ಮಂದಾಕ್ರಾಂತದಲ್ಲೊಂದು ಪ್ರಯತ್ನ:
ಹಾರಾಡುತ್ತಿಂದ್ರಜಿತನುಮಹಾ|ಮಾಯೆಯಿಂಧಾವಿಸಿರ್ಪಂ
ಹೋರಾಡಲ್ ಲಕ್ಷ್ಮಣನುಚಣದೊಳ್|ಬೀಳ್ದನಂಮೂರ್ಚೆಯಿಂದಂ
ಶ್ರೀರಾಮಂಶೋಕದೊಳನುಜನಂ|ಕಂಡುದಿಗ್ಭ್ರಾಂತಿಗೊಳ್ಳಲ್
ಕೀರೀತ್ಯೊಳ್ಕೇಳ್ದನುಮುದದಿತಾಂ|ಸಾಕುಸಾಕಾಯ್ತೆ ಲೋಕಂ
ಕಡೆಯ ಸಾಲಿನ ಅರ್ಥ ಸ್ಫುಟವಾಗಲಿಲ್ಲ; ಹಳಗನ್ನಡ ಮತ್ತೂ ಮಿಗಿಲಾಗಬೇಕು:-)
ಲಕ್ಷ್ಮಣನು ಎಚ್ಚರವಿಲ್ಲದೆ ಸಾವು ಬದುಕುಗಳ ನಡುವೆ ಇರುವುದನ್ನು ಕಂಡು ದುಃಖದಿಂದ, ಆ ಸಂಧರ್ಭದಲ್ಲಿ ಹೀಗೆ ಎಂದಿರಬಹುದು ಎಂಬ ಕಲ್ಪನೆ, ಕ್ಷಮಿಸಿ ಸಾರ್ 🙁 ಹಳಗನ್ನಡದ ಕಡೆ ಹೆಚ್ಚು ಗಮನ ಕೊಡುವೆ
|| ಮಂದಾಕ್ರಾಂತವೃತ್ತ ||
ವೃದ್ಧರ್ ನೋವುಣ್ಣುತಿರೆ ನಿರುತಂ ಸೋಲ್ತನಾರೋಗ್ಯದಿಂದಂ ,
ಶ್ರದ್ಧಾಭಕ್ತ್ಯಾದಿಗಳಿನನಿಶಂ ದೇವರಂ ಜಾನಿಸುತ್ತುಂ,|
ಶುದ್ಧಾತ್ಮಾನಂದದ ಬಯಕೆಯಿಂ ಮುಕ್ತಿಯಂ ಬೇಡಿರಲ್,ಸಂ-
ಬದ್ಧರ್ ಕೇಳ್ವರ್,”ನವೆದು ರುಜೆಯಿಂ ಸಾಕುಸಾಕಾಯ್ತೆ ಲೋಕಂ?”||
ಒಳ್ಳೆಯ ಶೈಲಿ, ಒಳ್ಳೆಯ ಕಲ್ಪನೆ ಮತ್ತು ದುಷ್ಕರಪ್ರಾಸವನ್ನೂ ಲೀಲೆಯಿಂದ ನಿರ್ವಹಿಸಿದ ಪರಿ ಎಲ್ಲ ಸೊಗಸಾಗಿವೆ.
ಸಹೋದರರೆ, ನಿಮ್ಮೀ ಪ್ರೋತ್ಸಾಹದ ನುಡಿಗಳಿಗೆ ಹೃತ್ಪೂರ್ವಕಧನ್ಯವಾದಗಳು. ಪದ್ಯಪಾನದ ಹಾಗೂ ನಿಮ್ಮ ಶ್ರೇಷ್ಠಮಾರ್ಗದರ್ಶನದ ಲೀಲೆಯಿಂದ ಈ ವೃತ್ತರಚನೆಯು ಸಾಧ್ಯವಾಗಿದೆಯೆಂಬುದು ವಾಸ್ತವಾಂಶ:-)
ಹೀಗೊಂದು “ಸಮಸ್ಯಾಪೂರಣ” !! – ಚೌಪದಿಯಲ್ಲಿ
ಇನಯನೀನಿರದಿರುಳ ನೀರವದೊಳೆನಿತು ಕಂ-
ಪನವಿಂತು? ಸಾಕುಸಾಕಾಯ್ತೆಲೋ….ಕಂ-
ದನಳುವಿಂದದೊ ಕರುಳಹಿಂಡುತಿರೆ ಕಂ-
ಬನಿ ಕಾಣ, ಸಾಕುಸಾಕಾಯ್ತು ಲೋಕಂ ।।
ಅಳುವ ಕಂದನೊಡೆ ಒಂಟಿಯಾಗಿ ಕಳೆದ ರಾತ್ರಿಯಂದು – ಲಲನೆಯ ಮನದಮಾತು. (ಮಳೆಯ ಇರುಳಿನಲಿಳೆಯ ಸ್ವಗತವೂ ಆದೀತೆ?)
ನಿಮ್ಮ ಈ ನೂತನ ಪರಿಹಾರವೂ ಬಹಳ ಚೆನ್ನಾಗಿದೆ ಉಷಾ. ಧನ್ಯವಾದಗಳು.
ಹೌದು ಕಾಂಚನ ಅವರೆ, ಉಷಾ ಅವರ ಕಲ್ಪನೆ ತುಂಬ ಚೆನ್ನಾಗಿದೆ.
ಉಷಾ ಅವರೆ,(ನಿಮ್ಮ ಮಾತುಗಳಲ್ಲಿ ಹೇಳುವುದಾದಲ್ಲಿ,)ಕರುಳಹಿಂಡುವ ಕಾರಣಕ್ಕೆ ಸೇವಿಸಿಯೋ ಏನೋ,ಮೂರು ಮಾತ್ರೆಗಳು ಮಾತ್ರ ಪದ್ಯದ ಮೂರನೇ ಪಾದದಲ್ಲಿ ಕಾಣದಾಗಿವೆಯಲ್ಲಾ !
ಪ್ರೀತಿಯ ಕಾಂಚನ & ಶಕುಂತಲಾ,
ಒಂದೇಮಾತಿನಲ್ಲಿ(ಏಕವಚನದಲ್ಲಿ!) ತೋಡಿಕೊಂಡ ಲಲನೆಯ ಅಳಲನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು.
“ಸಾಕುಸಾಕಾಯ್ತೆಲೋ….ಕಂ(come?!)-ದ” ಅಂತ ಕಂದನನ್ನ ವಿಭಜಿಸುವ ಭರದಲ್ಲಿ – “ಕಂ-ದನಾಕ್ರಂದನ”ವನ್ನ “ಕಂ-ದನಳು”ವಾಗಿ ಬದಲಿಸಲು ಆ ಮೂರೂ ಮಾತ್ರೆಗಳನ್ನ ಕಂದನಿಗೆ ನುಂಗಿಸಿದ್ದು !!
**… ಕಂ- ದನಳುವಿಂದದೊ ಕರುಳಹಿಂಡುತಿರೆ ಸುರಿದ ಕಂ- ಬನಿ ಕಾಣ ….
ಪ್ರಮದಾಕ್ರಾಂತಾ 🙂
ಗರಳಂ ಪಾಥೋನಿಧಿಯಿನುದಿಸಲ್ ತೊಟ್ಟನೈತಂದು ಭೂಮಾ-
ತುರದಿಂ ಪೀರ್ದಾ ಹದನಕೊರೆಯಯ್ ಹೇತುವಂ ಹೇ ಮಹೇಶಾ !
ಗಿರಿಜಾಗಂಗೋರಗಶಿಖಿಹುತಾಶಾದಿಗಳ್ ನಿಚ್ಚವುಂ ಮಂ-
ದಿರದೊಳ್ ಮಾಳ್ಪುತ್ಕಟಕಲಹದಿಂ ಸಾಕುಸಾಕಾಯ್ತೆ ಲೋಕಂ ?
ಹದನಕೊರೆಯಯ್ – ಹದನಕೆ ಒರೆಯಯ್
ಶಿಖಿ – ನವಿಲು
ಆಹಾ! ಮೊದಲ ಬಾರಿಗೆ ಹಾಸ್ಯರಸಪ್ರಚುರವಾಗಿ ಸದ್ಯದ ಪದ್ಯಪೂರಣ ಸಾಗಿದೆ; ಅಭಿನಂದನೆಗಳು. ಅಲ್ಲದೆ ಪ್ರಮದಾಕ್ರಾಂತಾವೃತ್ತದ ಪ್ರಯೋಗವೂ ಚೆನ್ನಾಗಿದೆ. ಮೊದಮೊದಲು ನಾನು (ಶತಾವಧಾನಕಾಲದಲ್ಲಿ ಕೊಪ್ಪಲತೋಟನಿದನ್ನು ಒಡ್ಡಿದಾಗ)
ಗತಿಹಿತವಿಲ್ಲವೆಂದು ಭಾವಿಸಿದ್ದೆ. ಈಚೆಗೆ ಈ ವೃತ್ತವನ್ನೇ ಹಲವು ಬಾರಿ ಮನದಲ್ಲಿಯೇ ಮಗುಚುತ್ತಾ ಈ ನಡೆಗೆ ಸ್ವಲ್ಪ ನುರುಗಿದ್ದೇನೆ. ಹೀಗಾಗಿ ನಿಮ್ಮ ಈ ಪದ್ಯದ ಗತಿಸ್ವಾದ ಕಿವಿಗೆಟುಕುತ್ತಿದೆ. ಮುಖ್ಯವಾಗಿ ಈ ಸಾಧ್ಯತೆಯನ್ನು ತೋರಿದ ಕೊಪ್ಪಲತೋಟನಿಗೆ ಧನ್ಯವಾದಗಳು ಸಲ್ಲಬೇಕು. ಅಲ್ಲದೆ ಈಚೆಗೆ ವಸಂತತಿಲಕದಲ್ಲಿ ಇದೇ ರೀತಿ ಮೊದಲ ಗುರುವಿಗೆ ಲಘುದ್ವಯವನ್ನಿರಿಸಿದ ಹಳೆಯ ಪ್ರಯೋಗವೊಂದನ್ನು ಕಂಡು ಅದರ ಗತಿಸಾಧ್ಯತೆಯನ್ನೂ ಮನನಿಸುತ್ತಿದ್ದೇನೆ. ಈ ಹೊಸ ವೃತ್ತಕ್ಕೆ ವಸಂತಕಲಿಕಾ ಎಂದು ನಾಮಕರಣವನ್ನೂ ಮಾಡಿದ್ದೇನೆ. ದಿಟವೇ, ಪ್ರಮದಾಕ್ರಾಂತಾ, ವಸಂತಕಲಿಕಾ ಮುಂತಾದ ಹೊಸ ಸಾಧ್ಯತೆಗಳೆಲ್ಲ ಈಗಾಗಲೇ ಛಂದೋಗ್ರಂಥಗಳಲ್ಲಿ ದಾಖಲೆಗೊಂಡಿರುತ್ತವೆ; ಅವಕ್ಕೆ ಅವುಗಳದ್ದೇ ಹೆಸರುಗಳೂ ಇವೆಯೆನಿಸುತ್ತದೆ.
ಆದರೆ ಇವುಗಳ ಪ್ರಸಿದ್ಧಮೂಲಗಳಾದ ಮಂದಾಕ್ರಾಂತಾ, ವಸಂತತಿಲಕ ಮುಂತಾದ ವೃತ್ತಗಳ ಸಂಜ್ಞಾಛಾಯೆಯಲ್ಲಿ ಹೊಸಹೆಸರುಗಳು ಹೊಮ್ಮಿದಾಗ ಅಭ್ಯಾಸಿಗಳಿಗೆ ಹೆಚ್ಚಿನ ಹಿತವೂ ಪರಿಚಯಸೌಲಭ್ಯವೂ ಆದೀತೆಂದು ನನ್ನ ಅನಿಸಿಕೆ.
ರಾಮಕೃಷ್ಣ ಪೆಜತ್ತಾಯರೇ… ತುಂಬ ಸೊಗಸಾದ ಪರಿಹಾರ 🙂
ಗಣೇಶ ಸರ್.. ಧನ್ಯವಾದಗಳು:-)
ವಸಂತತಿಲಕದ ಮೊದಲ ಗುರುವನ್ನು ಎರಡು ಲಘುಗಳನ್ನಾಗಿ ಬದಲಾಯಿಸಿದ ವೃತ್ತಕ್ಕೆ ಟಿ.ವಿ.ವಿ ಅವರ ‘ಕನ್ನಡ ಛಂದಃಸ್ವರೂಪ’ದಲ್ಲಿ ‘ಋಷಭ’ ಎಂಬ ಹೆಸರನ್ನು ಉಲ್ಲೇಖಿಸಿದ್ದಾರೆ..
ಉಭಯಗಣೇಶರಿಗೆ ಧನ್ಯವಾದಗಳು 🙂
ಸ್ರಗ್ಧರೆ :
ಅಮ್ಮನ್ ತಾಂ ಗುಮ್ಮನಂ ತೋರುತಲುಣಿಸಿರಲುಂ ಕಂದಗಂ ಸುಮ್ಮಗಿಂತುಂ
ದಮ್ಮಮ್ ಸಂದಿಂತುಟಂತುಂ ಮಣಿಸುದನೊಲವಿಂ ಕಂಡು ಮೂಕಾಯ್ತೆ ಲೋಕಂ ।
ಕಮ್ಮಮ್ ಸಾಗಂತುಟಿಂತುಂ ಸೃಜಿಸುತಲಿರಲುಂ ಜೀವರಂ ಸುಮ್ಮಗಂ ತಾಂ
ಬೊಮ್ಮನ್ ಕಾಣ್, ಗುಮ್ಮಗಿಂತುಂಮರಳಿರಲಿರವುಂ – ಸಾಕುಸಾಕಾಯ್ತೆ ಲೋಕಂ ।।
ದಮ್ಮ = ಧರ್ಮ , ಕಮ್ಮ= ಕರ್ಮ
(ಪರಬ್ರಹ್ಮತತ್ತ್ವದ ಇರವಿನ ಕಲ್ಪನೆ – ಅಮ್ಮನೊಲವಿನೊಂದಿಗೆ)
ಶಿರಕಂ ಧೋಯೆಂದು ಪೊಯ್ವಾ ಮುನಿಸಲೆ ಮೆರವಳ್ಗಂಜುತುಂ ‘ಏನು ಬನ್ನಿಂ’
ಕರೆಯಲ್ಕೋ ವಂದೆಯೆನ್ನಲ್ ಚಣದಡತಡೆಯುಂ ತಾಳದೋಪಳ್ ಸಮಕ್ಕಂ
ಕೋರಳೇ ಚೀರ್ವಂದವೊಲಾಳ್ವನ ಕಿರುಕುಳದಾ ಚೀರ್ಕೆಗಂಜುತ್ತುಮಿನ್ನೀ
ನರಕಂ ಸಾಕೆಂದು ಪೇಳಲ್ವೆದರುತಲುಲಿವಂ ಸಾಕುಸಾಕಾಯ್ತೆ ಲೋಕಂ
ಮನೆಯಲ್ಲಿ ಹೆಂಡತಿ ಕಾಟ ಮತ್ತು ಕಚೇರಿಯಲ್ಲಿ ಬಾಸ್ ಕಾಟದಿಂದ ಬೇಸತ್ತವನ ಬವಣೆ 😉
ನಶೆಯೇಂ ಪಾರ್ಥಾ! ಶಿರಕ್ಕೋರ್ ಶರವನೆಣಿಸಿ ಮುಂಜಾವಿನೊಳ್ ನೀನೆ ನಿತ್ಯಂ
ಮಸೆಯಲ್ ಕೂರಂಬುವಂ ಕಾದ ಕಿಡಿಗೆ ಕೆಡುಕೇ ಬೆಚ್ಚಿ ಹಿಮ್ಮೆಟ್ಟುವೋಲ್ ಬೇ-
ವಸದಿಂ ಗಾಂಡೀವಮಂ ಮೀಂಟಿರೆ ಮೊಳಗಿದ ಯುದ್ಧಾರ್ತದಾಹ್ವಾನಮೇ ತಾ-
ನುಸಿರ್ಗೊಂಡೀ ಕಾಲದೊಳ್ ಛೇ! ಕುರುವರ ನಿನಗೇಂ ಸಾಕು ಸಾಕಾಯ್ತೆ ಲೋಕಂ||