Nov 112014
 

ಸಾಕಾಗಿರ್ಪುದು ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ

  69 Responses to “ಪದ್ಯಸಪ್ತಾಹ ೧೩೪: ಸಮಸ್ಯಾಪೂರಣ”

 1. ಲೋಕಾವರ್ತನಕೆಂದು ಸಾಗಿದರಹಾ! ದಾಂಪತ್ಯಸಂಗಾತಿಗಳ್
  ನೌಕಾಯಾನಮುಗಾಂಡದೊಳ್ ಗತಿಸಿರಲ್ ಸಂದಿಗ್ಧ ಮೊತ್ತಾದುದೈ
  ಏಕಾಂಗಕ್ಕಗಮಾಗುತುಂ ಯುವತಿಯುಂ ದೂರಾದೊಡಂ ಕಾಂತನಿಂ
  “ಸಾಕಾಗಿರ್ಪುದುಗಂಡ ಸಂಗ”ಮೆನುತುಂ ಬಿಕ್ಕುತ್ತಳಿರ್ದಳ್ ಗಡಾ
  (ಬಿಕ್ಕುತ್ತಲಿದ್ದಾಗ ಉಗಾಂಡವು,ಉಗಂಡವಾಯಿತು 🙂 )

  • ಕಾಂಚನಾ ಅವರೆ, 2ನೇ ಸಾಲಿನಲ್ಲಿ ಛಂದಸ್ಸು ತಪ್ಪಿದೆ ಅಲ್ಲವೇ! 🙂

   • ಹೌದು ಒಂದು ಲಘ್ವಕ್ಕರ ಹೆಚ್ಚಾಗಿತ್ತು. ಅದೀಗ ಸವರಣೆಯಾಗಿದೆ. ಧನ್ಯವಾದಗಳು 🙂

  • ಪರಿಹಾರ ಚೆನ್ನಾಗಿದೆ. ಕೆಲವು ಕಡೆಗಳಲ್ಲಿ ಬಿಂದು ಬಂದರೆ ಹೆಚ್ಚು ಒಳ್ಳೆಯದು. ಉದಾ: ಸಂದಿಗ್ಧ

   • ಧನ್ಯವಾದಗಳು ,ಸಲಹೆಗಾಗಿ . ಬಿಂದುವನ್ನು ತರಲು ಯತ್ನಿಸಿದ್ದೇನೆ 🙂

 2. || ಶಾರ್ದೂಲವಿಕ್ರೀಡಿತವೃತ್ತ ||

  ಶ್ರೀಕಾಂತಂ ಪತಿಯಾಗೆ ಲಕ್ಷ್ಮಿಗೆ ಮಹಾದಾರಿದ್ರ್ಯದಾಂಪತ್ಯಮೈ
  ಬೇಕಾದ್ದಂ ಪಡೆಯಲ್ಕೆ ಸೋಲುತಿರೆ,ಸಂಕಷ್ಟಂಗೊಳಲ್ ಸಾಲದಿಂ,|
  ಪಾಕಂಗೈದುಣೆ ಗಂಜಿಯಂ ಬೆತೆಯ ಕಣ್ಣೀರಿಂ ಸದಾ ಬೇಯುತುಂ,
  “ಸಾಕಾಗಿರ್ಪುದು ಗಂಡಸಂಗ”ಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ||

  • ನೀವು ಈ ವೃತ್ತವನ್ನು ಯುಕ್ತಿಯಿಂದ ನಿರ್ವಹಿಸಿರುವುದೇ ಇದಕ್ಕೊಂದು ಅಂದ . ”ಹೆಸರು ಕ್ಷೀರ ಸಾಗರ ; ಹಾಲು ಮಜ್ಜಿಗೆಗೆ ಯಾವಾಗಲೂ ತತ್ವಾರ” ಅನ್ನುವ ಗಾದೆ ಮಾತನ್ನು ನೆನಪಿಸುತ್ತದೆ 🙂

   • ಭಾಗ್ಯಲಕ್ಷ್ಮಿಯವರಿಗೆ ಧನ್ಯವಾದಗಳು:-)

  • ಸೊಗಸಾದ ಪರಿಹಾರ.. ‘ಬೆತೆ’ ಶಬ್ದಪ್ರಯೋಗ ತುಂಬಾ ಇಷ್ಟವಾಯಿತು 🙂

   • ಕೊಪ್ಪಲತೋಟದ ಗಣೇಶರಿಗೆ ಧನ್ಯವಾದಗಳು:-)

 3. ರಾಕೇಶಾಸ್ಯನನಾಣ್ಮನಂ ಯುವತಿಯಾದ್ಯಾಸಂಗಕಂ ಕಾದಿರಲ್
  ಸೌಕಾಲ್ಯಂ ಸಿಗದಾಯ್ತು ಕಾಲವಿದರ್ಗಂ ಮೌಹೂರ್ತದೋಷಂಗಳಿಂ |
  ಆ ಕಾಲಂಗಳ ಗಂಡಮೆಂಬ ಪೆಸರಿಂ ಪೇಳುತ್ತಿರಲ್ ಬಲ್ಲಿಗರ್
  “ಸಾಕಾಗಿರ್ಪುದು ಗಂಡಸಂಗ”ಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ||

  ತಿಥಿನಕ್ಷತ್ರಾದಿಗಳಿಗೆ ಸಂಬಂಧಿಸಿದ ಗಂಡಾಂತವೆಂಬ ದೋಷಕ್ಕೆ ಗಂಡವೆಂಬ ಹೆಸರೂ ವ್ಯವಹಾರದಲ್ಲಿದೆ.
  ವಿವಾಹಾನಂತರದ ವಧೂವರರ ಪ್ರಥಮಸಮಾಗಮಕ್ಕೆ ಯೋಗ್ಯಮುಹೂರ್ತವನ್ನು ಮೌಹೂರ್ತಿಕರೂ ಹಿರಿಯರೂ ಸೇರಿ ನೋಡುತ್ತಿದ್ದಾಗ, ಪ್ರತಿದಿನವೂ ಒಂದಲ್ಲ ಒಂದು ರೀತಿಯ ದೋಷವಿದ್ದು, ಆ ದುಷ್ಟಕಾಲವನ್ನು ಗಂಡ ಎಂಬ ಹೆಸರಿನಿಂದ ಹೇಳುತ್ತಿದ್ದಾಗ, ಕೇಳಿ ಆ ಯುವತಿ ದುಃಖದಿಂದ ಗಂಡಸಂಗ ಸಾಕಾಯಿತೆಂದು ಹೇಳುತ್ತಿದ್ದಾಳೆ.
  ಆದ್ಯಾಸಂಗ – ಪ್ರಥಮಸಮಾಗಮ.

  • ಸೊಗಸಾದ ಪರಿಹಾರ.. 🙂

   • ಧನ್ಯವಾದ ಕೊಪ್ಪಲತೋಟರೇ.. ಅವಧಾನದಲ್ಲಿ ಅಂಬಾಪ್ರಕರಣವನ್ನಿಟ್ಟುಕೊಂಡು ನೀವಿತ್ತ ಪರಿಹಾರ ಸೊಗಸಾಗಿತ್ತು 🙂

  • ತುಂಬ ಒಳ್ಳೆಯ ಪರಿಹಾರ; ದೈವಜ್ಞರಿಗೆ ಸುಲಭದ ಹಾದಿಯಲ್ಲವೇ:-)

   • ಹೌದು ಸರ್ 🙂 ನಮಗೆ ಗಂಡ ಶಬ್ದ ಕೇಳಿದಾಗ ಪ್ರಥಮೋಪಸ್ಥಿತವಾಗುವ ಅರ್ಥ ಅದುವೇ 🙂
    ಮೆಚ್ಚುಗೆಗೆ ಧನ್ಯವಾದಗಳು 🙂

  • ಪೆಜತ್ತಾಯ ಸರ್,
   ಈ “ಗಂಡಾಂತರ”ದ ಪೂರಣ ಬಹಳ ಚೆನ್ನಾಗಿದೆ !

  • ಮಹೋದಯ, ಎರಡನೆಯ ಪಾದ ಹನ್ನೆರಡನೆಯ ಅಕ್ಷರ (ಛಂದಸ್ಸು) ರಾಗಕ್ಕೆ ಸರಿಯಾಗಿ ಸಿಗುತ್ತಿಲ್ಲ. ಸ್ವಲ್ಪ ಸಹಕರಿಸಿ.

 4. ಶೋಕಕ್ಕೊಡ್ಡಿದರನ್ನನೀಪುರುಷರಾ ಬಾಳ್ಗೆನ್ನ ಧಿಕ್ಕಾರಮೆಂ
  ದೀಕಷ್ಟಂಗಳ ತಾಳಲೆಂದೆ ಧರೆಯೊಳ್ ಪುಟ್ಟಿರ್ಪೆನಾಂ ಅಣ್ಣನೀಂ
  ನಾಕಕ್ಕಾದರು ನೂಂಕುಮೆನ್ನುತಿಹಳೈತಾಂ ಕೃಷ್ಣೆಯುಂಕೃಷ್ಣನೊಳ್
  ಸಾಕಾಗಿರ್ಪುದು ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ

  • ದ್ರೌಪದಿ ಕೃಷ್ಣನಿಗೆ ಹೇಳಿದಂತೆ ಪರಿಹಾರ ಮಾಡಿದುದು ಚೆನ್ನಾಗಿದೆ. ‘ನಾಕಕ್ಕಾದರು’ ಎಂಬಲ್ಲಿ ನನಗೆ ಸ್ಪಷ್ಟವಾಗಿಲ್ಲ 🙁

  • ನಿರೀಕ್ಷಿತವೇ ಆದರೂ ಪರಿಹಾರ ಚೆನ್ನಾಗಿದೆ; ಸ್ವಲ್ಪ ಹಳಗನ್ನಡದ ಜಿಗಿ-ಬಿಗಿ ಹೆಚ್ಚಾಗಲಿ.

 5. ಏಕಾಏಕಿಯದೆಂತುವೈ ಗುಡಿಯೂಳಿಂತೇಕಾಂತದೊಳ್ ವ್ಯಾಕುಲಂ?
  ಮೂಕಾಗಿರ್ದಿಹ ದೇವಿತಾಂ ಪುರುಷನುಂ,ಪೂಜಾರಿಯಿಂ ಸಲ್ಲಲುಂ
  ಸಾಕಾರಾಕೃತಿಗಿಂತುವುಂ ಪ್ರತಿದಿನಂ ಸರ್ವಾಂಗ ಪೂಜಾವಿಧಿಂ
  “ಸಾಕಾಗಿರ್ಪುದು ಗಂಡ ಸಂಗ”ಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ।।

  • “ಏಕಾಯೇಕಿ” ಎಂದರೆ ಮತ್ತೂ ಸರಿ; ಪೂಜಾವಿಧಿಂ ಎಂಬುದನ್ನು ಪೂಜಾಕ್ರಮಂ ಎಂದಲ್ಲಿ ಸರಿಯಾದೀತು.

   • ಧನ್ಯವಾದಗಳು ಗಣೇಶ್ ಸರ್. ಕೊಪ್ಪಲತೋಟನ ಅವಧಾನದಲ್ಲಿ – ರಾಮಚಂದ್ರರ ಸಮಸ್ಯೆಯ ಸಾಲು : “ಸಾಕಾಗಿರ್ದುದು ಗಂಡ ಸಂಗಮೆನುತುಂ ಸಾಗಿರ್ದಳಾ ದೇವಿತಾಂ” – ಅದಕ್ಕೆ ಅಂದು ಹೊಳೆದಿದ್ದ ಪರಿಹಾರ !! ಈಗ ಈ ಸಾಲಿಗೂ ಹೊಂದಿದೆ ಅಲ್ಲವೇ!

  • Good imagination

 6. ಅಯ್ಯಾ! ಕೊಪ್ಪಲತೋಟ! ಚೀದಿ! ಸಖರೇ! ಈ ಮೊನ್ನೆ ನಾಂ ಗೆಯ್ದ ಆ
  ಸುಯ್ಯಂ ಬೇಳ್ವ ವಧಾನಪದ್ಯಚಯಮಂ ನೀಮ್ ಲೇಖಿಸಿಟ್ಟಿರ್ದೊಡಾಂ|
  ಸಯ್ಯೆಂದೊಮ್ಮೆಲೆ ವಾಂಛಿಪೆಂ; ದಯೆಯಿನಾ ಸಾರಸ್ವತಂ ಸಾಹ್ಯಮಂ
  ಕಯ್ಯಿಂ ನೀಳ್ವುದು ಸಾವಕಾಶಂ; ಇದಕಿನ್ನೆನ್ನಾಗ್ರಹಂ ಸಲ್ಲದಯ್||

  • ವ್ಯಾಘ್ರಂ ಪ್ರಾಣಿಗಳಂ ಸದಾ ಪಿಡಿವವೊಲ್ ಪದ್ಯಂಗಳಂ ಬಂಧಿಪೆಂ 😉
   ಶೀಘ್ರಂ ಟೈಪಿಸಿ ನಿಮ್ಮ ಮೇಲಿಗೆನುತುಂ(mail) ನಾನೀವೆನಂತಾದೊಡಂ,
   ವ್ಯಾಘ್ರಂಬೊಲ್ ಮಿಗೆ ಕೋಪಮೊಂದದಿರಿ ನೀಂ
   ಚಿತ್ರಕ್ಕೆ ನಾಂ ನೋಂತಿರಲ್
   ವ್ಯಾಘ್ರಾಟಂಬೊಲೆ ಪದ್ಯಮೊಂದು ಸಿಗದಿರ್ಕುಂ ಪೇಳ್ದುದಂತ್ಯಾಶುವುಂ 😉

   • ಈ “ಘ್ರ”ಪ್ರಾಸದ ಪದ್ಯಮ-
    ನಾಘ್ರಾತವನಪ್ರಸೂನಸುಷಮೆಯನೀಯಲ್|
    ವ್ಯಾಘ್ರಾಜಿನನ(ಶಿವ)ಕಟಾಕ್ಷಕೆ
    ಶೀಘ್ರಮೆ ಯತ್ನಿಪುದು ಲೇಸಲಾ ಅವಧಾನೀ!!

  • ಕೊಟ್ಟೇನೆನ್ನಯ ಪದ್ಯಮಂ ತ್ವರೆಯಿನಿಂ, ಕಾದಿರ್ಪೆ ನಿಮ್ಮಾಜ್ಞೆಗಂ 🙂

 7. ನೂಕಲ್ ರಾಮನ ಬರ್ಬರಾಜ್ಞೆ ಸತಿಯಂ ಕಾಡಾದುದಾ ಬಾಳ್ತೆಗಂ
  ಲೋಕಕ್ಕೆನ್ನುತೆ ಮತ್ತೆಯಗ್ನಿತರಣಂ ಮಾಡೆಂದಿರಲ್ ರಾಘವಂ
  ಶೋಕಂ ಬೇಯಿಸೆ ಯಜ್ಞಕುಂಡದುರಮಂ ಕಣ್ಣೀರ್ಗಳೇ ತುಪ್ಪಮೈ
  ಸಾಕಾರ್ಗಿರ್ದುದು ಗಂಡಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ

  • ಪದ್ಯಭಾವವೂ ಬಂಧವೂ ಸೊಗಸಾಗಿವೆ. ಕೇವಲ ಬರ್ಬರ ಎಂಬ ಪದ ಮಾತ್ರ ತಪ್ಪಾಗಿ ಅಚ್ಚಾಗಿದೆ.

  • ಸೊಗಸಾದ ಪರಿಹಾರ.. ‘ ಕಾಡಾದುದಾ ಬಾಳ್ತೆಗಂ’ ಮತ್ತೆ ‘ ಕಣ್ಣೀರ್ಗಳೇ ತುಪ್ಪಮೈ’ ಎಂಬ ಪ್ರಯೋಗಗಳೆಲ್ಲ ಸೊಗಸಾಗಿದೆ 🙂

 8. ಲೋಕೋದ್ಧಾರಕೆ,ದೇಶಸೇವೆಗೆನುತುಂ ಸಜ್ಜಾರ್ದ ಪೆಣ್ಣೊರ್ವಳುಂ
  ಸೋಕಿಂ ಮೇಣ್ ಬಲದಿಂದೊಡಂ ಪಡೆದಳಯ್ ಮೇಲ್ಪಂಕ್ತಿಯಂ ಪಕ್ಷದೊಳ್
  ಮೂಕೀಭಾವದೊಳೊಂಟಿಯುಂ ಸನಿಹದಿಂ ಸಂಘರ್ಷಮಂ ಕಂಡೊಡಂ
  ಸಾಕಾಗಿರ್ದುದು ಗಂಡಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ
  ಸೋಕು=ಒಡನಾಟ

  • ಹೊಸ ಕಲ್ಪನೆ ಚೆನ್ನಾಗಿದೆ; ಆದರೆ “ಠೇಂಕಾರಂ” ಎಂಬಲ್ಲಿ ಪ್ರಾಸವು ತಪ್ಪಿದೆ. ಅದು ವಸ್ತುತಃ ಗಜಪ್ರಾಸವಾಗಬೇಕು. ನೀವು ವೃಷಭಪ್ರಾಸವನ್ನು ಮಾಡಿದ್ದೀರಿ.ಅಂತೆಯೇ “ಪಡೆದಳುಂ” ಎಂಬುದೂ ವ್ಯಾಕರಣಶುದ್ಧವಾದ ಪ್ರಯೋಗವಾಗದು.ಅದು ಕೇವಲ ಪಡೆದಳ್. ಛಂದಸ್ಸಿನ ರಕ್ಷಣೆಗಾಗಿ ಪಡೆದಳಯ್ ಎಂದಾಗಿಸಬಹುದು. ಅಂತೆಯೇ ಪಕ್ಷದೊಳ್ ಎಂದರೆ ಸರಿಯಾದೀತು.

  • ಸೇವಿಪ್ಪಳ್ ಸ್ವಕರಾಷ್ಟ್ರಮಂ ಖತಿಯೊಳಿಂತೆಂಬುತ್ತರಂ ಸಲ್ವುದೌ

   • ಖತಿಯುಂ ಕೇವಲ ಮೊದಲ್ .. ಆನಂತರಂ ಮೀಸಲಾತಿಗೆನೆ ಹೋರಾಟಂ ..ಮತ್ತಂ ಸೇವೆ .. 🙂

 9. ಏಕಿಂತುಂ ಗಲಗಂಡ ರೋಗಮೆನನುಂ ಕಾಡಿರ್ದುದೆಂಚಿಂತಿಸಿಂ
  ಶೋಕೋದ್ರೇಕದೆ ಪತ್ನಿತಾಂ ತಪಿಸುತಲ್ ನೋವಿಂದೆ ನೊಂದಿರ್ದವಳ್
  ಹಾಕಷ್ಟಂ ಪತಿಯಂತು ಚುಂಬಿಸಿರೆ ಕಾಣ್ ಪ್ರೇಮಾಂಧತಾಂಗಲ್ಲಕಂ
  ಸಾಕಾಗಿರ್ಪುದು (ಗಲ)ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ।।

  *ಗಲ(ಳ)ಗಂಡ = ಕೊರಳಿನಲ್ಲಿ ಏಳುವ ದುರ್ಮಾಂಸದ ಗಂಟು

  • ಪರಿಹಾರದ ಕ್ರಮವು ಸ್ವೋಪಜ್ಞವಾಗಿದೆ. ಕೆಲವೊಂದು ಸವರಣೆಗಳಾಗಬಹುದು:
   ಏಕಿಂತೀ ಗಳಗಂಡರೋಗಮೆನಗಂ ಬಂದತ್ತೆನುತ್ತಾರ್ತಿಯಿಂ
   …………………………ತಪಿಸುತುಂ…………………………|
   …………………………………..ಸುಪ್ರೇಮಾಂಧಕಂ ಕೆನ್ನೆಯಂ

   • ಧನ್ಯವಾದಗಳು ಗಣೇಶ್ ಸರ್,
    ಸವರಣೆಗಳನ್ನ ಗಮನಿಸಿಕೊಳ್ಳುತಿದ್ದೇನೆ. ಮುಂದಿನ ಪದ್ಯಗಳಲ್ಲಿ ಅಳವಡಿಸಿಕೊಳ್ಳಲು ಬಹಳ ಸಹಕಾರಿಯಾಗಿದೆ.

    ಏಕಿಂತೀ ಗಳಗಂಡರೋಗಮೆನಗಂ ಬಂದತ್ತೆನುತ್ತಾರ್ತಿಯಿಂ
    ಶೋಕೋದ್ರೇಕದೆ ಪತ್ನಿತಾಂ ತಪಿಸುತುಂ ನೋವಿಂದೆ ನೊಂದಿರ್ದವಳ್
    ಹಾಕಷ್ಟಂ ಪತಿಯಂತು ಚುಂಬಿಸಿರೆ ಸುಪ್ರೇಮಾಂಧಕಂ ಕೆನ್ನೆಯಂ
    ಸಾಕಾಗಿರ್ಪುದು (ಗಲ)ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ।।

  • ಗಂಡಂಗಂ ಗಳಗಂಡದಿಂದಮೆನಿತೀ ಗಂಡಾಂತರಂ ಸಂದುದೇ?! 😉

   • ಕೊಪ್ಪಲತೋಟ,
    ಪಾಪ ಅವಳಿಗೆ “ಗಳಗಂಡ”ದ ಚಿಂತೆ ಯಾದರೆ, ನಿನಗೆ “ಗಂಡಗಳ” ಚಿಂತೆಯೇ ?!

 10. ಬೇಕೆಂಬರ್ ಮಮ ಸಂಗ ರಾಗರತಿಗಂ ನಾಂಬೇಳ್ಪುದಂ ನೀಡುತುಂ
  ತಾಕೀತಿಟ್ಟೊಡೆ ಮಾಳ್ಪರೆನ್ನಣತಿಯಂ ತಾಕೀತಾದೊಡನೆನ್ನಯಾಣತಿಯೆನಲ್ ಮಂಗಂಗಳೊಲ್ ಲಾಗಮಂ
  ಹಾಕಲ್ ಪಿಂಜರಿಯರ್ ಕಟಿಸ್ಥಮತಿಗಳ್ ಸಲ್ಲುತ್ತಲುಂಗುಷ್ಠದೊಳ್
  ಸಾಕಾಗಿರ್ದುದು ಗಂಡಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ

  [ಅತಿಸೌಂದರ್ಯವತಿಯೊಬ್ಬಳು, ಗಂಡಸರು ತನ್ನೊಡನಿರುವಾಗ ಮತಿಯನ್ನು ಕಳೆದುಕೊಳ್ಳುವ ಪರಿಯನ್ನು ಹೇಳುತ್ತಾ (ತನ್ನೋರ್ವ ಸಖಿಗೆ) ನಕ್ಕು ನಕ್ಕು (LOL) ಬಿಕ್ಕಳಿಸಿದಳು]

  • ಪರಿಹಾರದ ನವ್ಯತೆ ಸ್ತವನೀಯವಾಗಿದೆ. ಈ ಬಗೆಗಳು ಅಪ್ಪಟವಾಗಿ “ರಾಮಚಂದ್ರೀಯ”ವಿಧಾನದವು:-)
   “ರಾಗರತಿಗಂ” ಎಂದೂ “ತಾಕೀತಾದೊಡನೆನ್ನಯಾಣತಿಯೆನಲ್” ಎಂದೂ ಸವರಿಸಿದರೆ ಯುಕ್ತ.

  • ಸಂದಿರ್ಕುಂ ಭವದೀಯಪದ್ಯಮಿದರಿಂದೇ ಹಾಸ್ಯಮೋ ಲಾಸ್ಯಮೋ!!
   (ಮಂಗಂಗಳೊಲ್ ಲಾಗಮಂ, ಕಟಿಸ್ಥಮತಿಗಳ್ etc ಸೂಪರ್)

 11. ಆಕಾಶಕ್ಕತಿಯಾಪ್ತಬಾಂಧವನವಂ ಭೂಕಾಂತನಾ ಖೇಚರಂ
  ನೂಕುತ್ತಿರ್ದಿರೆ ತಾಳ್ಮೆಯಿಂ ದಿನಗಳಂ ಸಂಗಾತಿ ಸಂಪ್ರೀತಿಯೊಳ್,
  ತಾ ಕಂಡುಂ ನಿಜಸೌಖ್ಯಮಂ ಕುಪಿತದೊಳ್, ಗ್ರೀಷ್ಮಾಂಗ ತಾನಾದೊಡಂ,
  ಸಾಕಾಗಿರ್ದುದು ಗಂಡಸಂಗಮೆನುತುಂ ಬಿಕ್ಕುತ್ತಳಿರ್ದಳ್ ಗಡಾ(ಭುವಿ)
  (ಸೂರ್ಯನು ಗ್ರೀಷ್ಮನ ಗೆಳೆತನದಲ್ಲಿ,ಸಿಟ್ಟಿನಲ್ಲಿ ಹಿತವನ್ನು ಕಂಡಾಗ, ಅಂದರೆ ಬೇಸಿಗೆಯಲ್ಲಿ ಭೂಮಿಯು ಸಂಕಟಕ್ಕೊಳಗಾದಳು)

  • ಅಯ್ಯಯ್ಯೋ! ಛಂದಸ್ಸು ಹೇಗೆ ಹೇಗೆಯೋ ಆಗಿದೆಯಲ್ಲಾ!!! 🙂
   “ಸಾಕಾಗಿರ್ಪುದು ವೃತ್ತಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ” ಎಂದು ಕೊಳ್ಳೋಣವೇ? 🙂 🙂

 12. ಅಯ್ಯೋ! ಸರಿಪಡಿಸುತ್ತಿದ್ದಾಗಳೇ ಬಂದಿರಲ್ಲಾ!
  ಬಿಕ್ಕಿದ್ದು ನಿಜವಾದರೂ ವೃತ್ತಸಂಗವನ್ನು ತೊರೆದಿಲ್ಲವಲ್ಲಾ!

 13. ಜೀಕುತ್ತುಂ ಕಿರುದೊಟ್ಟಿಲಂ,ಮಲಗಿಸಲ್,ರಂಪಾಟಮಂ ಗೈವನಂ,
  ನಾಕೆಂಟಾಗಿರೆ ಮಕ್ಕಳಂ ಪಡೆದು,ಮತ್ತಿನ್ನೊಂದಿರಲ್ ಗರ್ಭದೊಳ್,|
  ಬೇಕೆಂದಿಲ್ಲದೆ ಸಂತತಂ ಜನಿಸಿರಲ್,ಸಂಬಾಳಿಸಲ್ ಸೋಲುತುಂ,
  “ಸಾಕಾಗಿರ್ಪುದು ಗಂಡಸಂಗ”ಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ||

  • ನೈಜ ದೃಷ್ಟಿಕೋನದ, ಬಹಳ ಸುಂದರವಾದ ಪರಿಹಾರ.

   • ರಾಮರೆ,ನಿಮ್ಮ ಮೆಚ್ಚಿಗೆಗೆ ನನ್ನ ಸವಿನಯಧನ್ಯವಾದಗಳು:-)

  • ಸೊಗಸಾದ ಪರಿಹಾರ…

   • ಕೊಪ್ಪಲರಿಗೆ ಧನ್ಯವಾದಗಳು:-)

  • ನಾಕೆಂಟು + ಒಂದು = ನಾಕೊಂಬತ್ತಾದ ಪೂರಣ !! ಬಹಳ ಇಷ್ಟವಾಯಿತು ಶಕುಂತಲಾ.

   • ಉಷಾ ಅವರೆ,ಬಿಕ್ಕುತ್ತಲಿದ್ದವಳಿಗೆ ಕಷ್ಟವಾದದ್ದು ನಿಮಗೆ ಬಹಳ ಇಷ್ಟವಾಯಿತೇ ?! 🙂

    • ಶಕುಂತಲಾ, ಇಷ್ಟ ಆಗಿದ್ದು ನಿಮ್ಮ ಗಂಡ+ಮಕ್ಕಳ “ಸಂಘ”ದ ಕಲ್ಪನೆ !!

 14. ಏಕಾಕೀ, ಪುರ ಬಾಂಬೆಯೊಳ್ ತೆರಳಿದಳ್ ಸಂಚಾರಿ ರೈಲೊಂದರೊಳ್
  ನೂಕಾಟಂ ಪೆಡಸಾದುದುಂ ವನಿತೆಗಂ ತುಂಬಿರ್ದ ಗಾಂಪಂದಿರಿಂ
  ಯಾಕೋ ಕಾಣದೆ ಹಾದಿಯಂ,ನೊಣಗಳಿಂ-ಮುತ್ತಿರ್ದ ಪೂವಾಕ್ಷಣಂ-
  ಸಾಕಾಗಿರ್ಪುದು ಗಂಡಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ

 15. ಸಾಕಮ್ಮಂ ವಧುವಿಂತುತಾಂ ವರಿಸಿರಲ್ ವೈವಾಹದಾಬಂಧವಂ
  ಕೈಕೊಂಡುಂ ವರ ಸಂಗಮೇಶ್ವರನೊಡಂ ಬೀಗುತ್ತಲಿರ್ದಳ್ ಕಣಾ ।
  ಲೋಕಾರೂಢಿಯೆ ಜೀವನಂ ಜರುಗಿರಲ್ ಸಂಕಷ್ಟಕಾಲಂಗಳೊಳ್
  “ಸಾಕಾಗಿರ್ಪುದು ಗಂಡ.., ಸಂಗ.. “ಮೆನುತುಂ ಬಿಕ್ಕುತ್ತಲಿರ್ದಳ್ ಗಡಾ ।।

  (ಪತಿರಾಯನನ್ನು – ಗಂಡ.., ಸಂಗ.. ಎಂದು ಏಕವಚನದಲ್ಲಿ ಹೆಸರಿಟ್ಟು ಹಗುರವಾಗಿ ಕರೆದ ಸಾಕಮ್ಮನ ಪರವಾಗಿ ಕ್ಷಮೆಕೋರಿ… !!)

 16. ಒಕ್ಕರಿಸಿದನದೇಕೊ ಈ ಅಡಾವುಡಿ ಗಂಡ
  ಮುಕ್ಕನೀತನ ನಿತ್ಯದುಷ್ಪೀಡೆಗಂ|
  ಸಿಕ್ಕು ಸಾಕಾಗಿಹುದು ಗಂಡಸಂಗಮೆನುತುಂ
  ಬಿಕ್ಕುತ್ತಲಿರ್ದಳ್ಗ(ಳ್ಗೆ+ಅ)ಡಾಡಿಯಿಂದಂ(quickly)||
  ರೊಕ್ಕತೆತ್ತಾಗಲೇ ತೊಡವೆಯಂ ತಂದಿತ್ತು-
  ಮಕ್ಕಸಾಲಿಯ ಕಾಲ-ಕೈಯ ವಿಡಿದು|
  ಧಿಕ್ಕಾರಮಂ ತೋರುತಿದ್ದವಳನೊಲಿಸಿಕೊಂ-
  ಡುಕ್ಕಿಸಿಹ ಮರ್ತೆ ದಾಂಪತ್ಯಮಂ ತಾಂ||

 17. ಸಾಕೇತಾಧಿಪ ರಾಮ ರಾಜ್ಯವಿದರೊಳ್ ವಾಲ್ಮೀಕಿ ಶಿಷ್ಯೋತ್ತಮರ್
  ಆ ಕಲ್ಯಾಣಕ ಧರ್ಮಕಾರ್ಯ ಸಭೆಯೊಳ್ ಪಾಡುತ್ತ ವಿಜ್ರ೦ಭಿಸಲ್
  ಹಾ ! ಕಾಂತಾರ ನಿವಾಸಿ ಭೌಮಿ ಮೊಗದೊಳ್ ಕಣ್ಣೀರೆ ರಾರಾಜಿಸಲ್
  ”ಸಾಕಾಗಿರ್ಪುದು ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ”
  ರಾಜ್ಯವಿದರೊಳ್ = ಭಾರತ ದೇಶದಲ್ಲಿ
  ಗಂಡ =ಗುರುತು ,ಕೆನ್ನೆ
  ಇದು ತ್ರೇತಾಯುಗದ ರಾಮಾಯಣದ ಕಲ್ಪನೆ . ಅಶ್ವಮೇಧ ಯಾಗದ ಸಂದರ್ಭದಲ್ಲಿ ಲವ ಕುಶರು ತನ್ನ ಮಕ್ಕಳೆಂದು ತಿಳಿದ ಮೇಲೂ ಶ್ರೀರಾಮ , ಸೀತಾದೇವಿ ಗರ್ಭವತಿಯಾಗಿದ್ದಾಗ ತಾನವಳಿಗೆ ಕಿವಿಯಲ್ಲುಸುರಿದ ವಿಜ್ರಂಭಿಕಾಸ್ತ್ರದ ವಿದ್ಯೆಯ ಪ್ರಯೋಗವನ್ನು ಮಕ್ಕಳು ಪ್ರದರ್ಶಿಸಲು ಹೇಳಿದ ಸಂದರ್ಭದ ಕಲ್ಪನೆ… .
  ಆ ಸಂದರ್ಭದಲ್ಲಿ ಸೀತಾದೇವಿಯ ಕೆನ್ನೆಯಲ್ಲಿ ಸಾರ್ಥಕತೆಯ ಕಣ್ಣೀರ (ಆನಂದ ಭಾಷ್ಪ ) ಗುರುತನ್ನು ಗುರುತಿಸಿ ತನ್ನ ಪಕ್ಕದಲ್ಲಿ ಕುಳಿತವರೊಂದಿಗೆ ವಾಲ್ಮೀಕಿ ಮಹರ್ಷಿಗಳು ಆ ಸಾಲನ್ನು ಉಸುರಿದರು ಎಂಬ ಕಲ್ಪನೆ . ದಯವಿಟ್ಟು ತಪ್ಪಿದ್ದರೆ ತಿದ್ದಿ ಸಹಕರಿಸಿ

  • ಕ್ಷಮಿಸಿರಿ. ೨ನೇ ಸಾಲಿನಲ್ಲಿ ಒತ್ತಕ್ಷರ ತಪ್ಪಾಗಿದೆ . ಆದ್ದರಿಂದ ಸಣ್ಣ ತಿದ್ದುಪಡಿ

   ಸಾಕೇತಾಧಿಪ ರಾಮ ರಾಜ್ಯವಿದರೊಳ್ ವಾಲ್ಮೀಕಿ ಶಿಷ್ಯೋತ್ತಮರ್
   ಆ ಕಲ್ಯಾಣಕ ಧರ್ಮಕಾರ್ಯ ಸಭೆಯೊಳ್ ಪಾಡುತ್ತ ವಿಭ್ರಾಜಿಸಲ್
   ಹಾ ! ಕಾಂತಾರ ನಿವಾಸಿ ಭೌಮಿ ಮೊಗದೊಳ್ ಕಣ್ಣೀರೆ ರಾರಾಜಿಸಲ್
   ”ಸಾಕಾಗಿರ್ಪುದು ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ”

  • ತಪ್ಪೇ! ವಾಲ್ಮೀಕಿಗಳಿಗೆ ಎಲ್ಲವೂ ಗೊತ್ತು. ಅವರು ’ಸಾಕಾಗಿರ್ಪುದು…’ ಎಂದಿರಲಾರರು; ’ಬೇಕಾಗಿರ್ಪುದು…’ ಎಂದಿದ್ದಾರು 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)