Jan 192015
 

kite

  151 Responses to “ಪದ್ಯಸಪ್ತಾಹ ೧೩೪: ಚಿತ್ರಕ್ಕೆ ಪದ್ಯ”

  1. ಚತುರಶ್ರಗಂಭೀರಮಿದ್ದೊಡೇಂ ಪಟಮೆಂತೊ
    ಚ್ಯುತಗೊಳ್ವುದೇಕಾಕಿ ಯಾನಗೈಯಲ್|
    ಪತಿತವಾಗದೊಲದಂ ಪಿಡಿವುದಲುಗದೊಲು ಸೂ
    ಕ್ಷ್ಮತರಮಾದೊಡಮೆನಿತೊ ಬಾಲಗೋಚಿ||
    The tail that lends stability to the otherwise erratic kite is proportionately meager vis-a-vis the size of the kite. Emancipated saints liken the tail to the small quantum of restraint required to rein-in the wavering mind. But…
    ಮತಿಯುಮಂತೆಯೆ ಪಾರಪೋಪುದಾವೇಗದೊಳ್
    ಧೃತಿಗೆಡುವುದನಿತರೊಳಗಂತೆಯೇ ಮೇಣ್|
    ಯತಿ ಪೇಳಲಿನಿತೆ (as small as the tail) ನಿಗ್ರಹಮಾತ್ರ(quantity)ಮೆನಲುಮಾ
    ಹಿತವಚನಮಂ ಕೇಳ್ದರಾರಿನ್ನೆಗಂ||

  2. ಇಂದ್ರವಂಶವೃತ್ತದಲ್ಲೊಂದು ಪದ್ಯ.
    ಇಲ್ಲಿ ಆಕಾಶಸಮುದ್ರದಲ್ಲಿ ತೇಲುವ ಮೀನುಗಳೆಂಬಂತೆ ಗಾಳಿಪಟಗಳು ತೋರಿವೆ. ಅವುಗಳ ಸೂತ್ರವೇ ಗಾಳವಾಗಿದೆ.

    ಆಕಾಶವಾರಾಶಿಯೊಳೀ ಪಟಂಗಳೇ
    ಸಾಕೂತಮೀನಂಗಳವೊಲ್ ವಿಭಾಸಿಕುಂ|
    ಸಾಕಲ್ಯಸೂತ್ರಂ ಗಡ ಗಾಳದಂತೆವೊಲ್
    ಸ್ವೀಕಾರ್ಯಮಕ್ಕುಂ ಗತಿಯಂತ್ರಕಂ ಸದಾ||

    • ಸೂತ್ರವೆಂಬ ಒಂದೇ ಗಾಳದಲ್ಲಿ ಆಗಸದಲ್ಲಿರುವ ಅಧಿಕವಾದ ಸಂಖ್ಯೆಯ ಪಟಗಳೆಂಬ ಮೀನುಗಳನ್ನು ಹಿಡಿದ ಪದ್ಯ ಚೆನ್ನಾಗಿದೆ 🙂

    • ಸೊಗಸಾದ ಪದ್ಯ.. ಇಂದ್ರವಂಶಪರಿಚಯವಾದಂತಾಯ್ತು 🙂

    • (ಮೀನು)ಅಣ್ಡಾಲುವಂಶಾವಳಿಯನ್ನು ಕಾಣಿಸಲ್
      (ಸಾರ)ಬಣ್ಡುಳ್ಳ ಛಂದಂ ಸೊಗಮಿಂದ್ರವಂಶಮೈ|

  3. ಪ್ರಹರ್ಷಿಣೀವೃತ್ತದಲ್ಲಿ ಮತ್ತೊಂದು ಕಲ್ಪನೆ.
    ಬಾನ ರಂಗಸ್ಥಳದಲ್ಲಿ ಅನುದಿನವೂ ರವಿ-ಶಶಿ-ತಾರೆಗಳ ನಾಟ್ಯವು ಸಾಗುವಾಗ ಜಾರಿದ ಗೆಜ್ಜೆಗಳೆಂಬಂತೆ ಈ ಗಾಳಿಪಟಗಳು ತೋರಿವೆ ಎಂಬ ಕಲ್ಪನೆ:

    ಸಂಜಾತಪ್ರತಿದಿನತಾಂಡವಂ ಗಡಂ ಬಾನ್
    ರಂಜಿಕ್ಕುಂ ರವಿ-ಶಶಿ-ತಾರಕಾದ್ಯರಿಂದಂ|
    ಮಂಜೀರಂ ಜಗುಳ್ದವೊಲಾದುದೀ ಪಟಂಗಳ್ (ಶಿಥಿಲದ್ವಿತ್ವವಿಲ್ಲಿದೆ)
    ಕಂಜಾತಪ್ರಭೆಗಳೊಗಲ್ಕೆ ಮಿಳ್ಮಿಳೆಂದುಂ||

    • ಆಹಾ!! ಸರ್, ತು೦ಬ ಹಿಡಿಸಿತು..

      ಇದು ಮ೦ಜೀರಝಣತ್ಕಾ-
      ರದ ರವದೈವೀಯಮಲ್ತೆ! ಕೇಳ್ವ ಪರಿಯದೆ೦-
      ತಿದನು೦ ಮರ್ತ್ಯರ್ ಗಡ ನಾವ್-
      ಇದು ದಲ್ ಕವಿ ಕೇಳ್ವ, ಕೇಳಿಸುವ ವೈಚಿತ್ರ್ಯ೦

    • ಬಹಳ ಚೆನ್ನಾಗಿದೆ ಸರ್ ಕಲ್ಪನೆ

    • ಸೊಗಸಾಗಿದೆ ಸರ್..

    • Tumba chennagide sir.. Amogha vada kalpane..

  4. ಪದ್ಯಪಾನಕ್ಕೆ ಹೊಸಹೊಸ ಗೆಳೆಯರು ಬರುತ್ತಿರುವುದು ಸ್ವಾಗತಾರ್ಹ; ಮಿಗಿಲಾಗಿ ಮುದಾವಹ. ಆದರೆ ಅವರಲ್ಲಿ ಹಲವರೂ ಮತ್ತೆ ಕೆಲವರು ಹಳಬರೂ ಈಚೆಗೆ ಹೆಚ್ಚಾಗಿ ವೃತ್ತ-ಕಂದಗಳಲ್ಲಿ ತಮ್ಮ ಪ್ರಯತ್ನಗಳನ್ನು ಸಾಗಿಸುತ್ತಿಲ್ಲವೆಂಬುದು ಸ್ವಲ್ಪ ಚಿಂತೆಯ ಸಂಗತಿಯಾಗಿದೆ. ದಯಮಾಡಿ ಹೆಚ್ಚಿನ ಪ್ರಯತ್ನ ಮತ್ತು ಪರಿಶ್ರಮಗಳನ್ನು ಅಪೇಕ್ಷಿಸುವ ಆ ಪ್ರಕಾರಗಳಲ್ಲಿ (ಬಗೆಬಗೆಯ ವೈವಿಧ್ಯಮಯವೃತ್ತಗಳನ್ನು ಬಳಸುವ ಮೂಲಕ) ತಮ್ಮ ತಮ್ಮ ಕಲ್ಪನೆಗಳನ್ನು ವ್ಯಾಕರಣ-ಅಲಂಕಾರಗಳ ಹದ ಮೀರದಂತೆ ಹೊಮ್ಮಿಸಬೇಕೆಂದು ವಿನಂತಿ.

  5. ನೀಲಿ ಬಾನ ಸೆರಗಿನಲ್ಲಿ
    ಮೇಲೆ ಗುಂಪುಗೂಡಿಯೇರಿ
    ತೇಲುತಿರ್ಪ ಪಟದ ಬಗೆಯನರಿಯೆ ವಿಸ್ಮಯ
    ಕಾಲ,ಮೇಲ ಭಯವನಳಿದು
    ಜಾಲ ಹೂಡಿ ಹಣ್ಣಿನೆಡೆಗೆ
    ಬಾಲ ಹನುಮರಂತೆ ಜಿಗಿವ ಪರಿಯೆ ಹೃದ್ಯಮ

  6. ಕಳೆಗೆಟ್ಟುದುದೆನ್ನಬಣ್ಣ-
    ಮುಳಿಸುವೆನದನೆಂದುಬಗೆದು ಕಳಚಿತೆ ಬಾನಿಂ |
    ಇಳೆಯಪ್ಪಿದ ಪೊಸಹಸಿರಂ
    ಕೊಳೆಮೇಲಿಂದಿಳಿದುದೇಮನಂಗನ ಚಾಪಂ ||

    ತನ್ನ ಬಣ್ಣ ಮಾಸಿರುವುದನ್ನು ಕಂಡ ಕಾಮನ ಬಿಲ್ಲು, ಬಾನಿಂದ ಜಾರಿತೇ?

    • -ದಿಳೆಯಪ್ಪಿದ*

    • ಬಹಳ ಚೆನ್ನಾಗಿದೆ ಕಲ್ಪನೆ

    • ಕಲ್ಪನೆ ಚೆನ್ನಾಗಿದೆ. ಮೊದಲ ಸಾಲಿನ ಕೊನೆ ಗಣ ನನಾನ ಆಗಿದೆ..

    • ಪ್ರಿಯ ಹೃದಯರಾಮರೇ! ನಿಮ್ಮೀ ಪದ್ಯದಲ್ಲಿ ವಿಸಂಧಿದೋಷ, ಗಣಭಂಗದೋಷ ಹಾಗೂ ವ್ಯಾಕರಣದೋಷಗಳು ತಲೆದೋರಿವೆ. ದೂರವಾಣಿಯಲ್ಲಿ ಎಲ್ಲವನ್ನೂ ವಿವರಿಸಿಯೇನು.

      • ಧನ್ಯವಾದ ಗುರುಗಳೆ..
        ದೂರವಾಣಿಯ ಮೂಲಕ ನಿಮ್ಮನ್ನು ತಲುಪಲಾಗಲಿಲ್ಲ. ಆದರೂ ಪದ್ಯದಲ್ಲಿನ ತಪ್ಪುಗಳು ತಿಳಿದವು.. ಮುಂದೆ ಎಚ್ಚರವಹಿಸುತ್ತೇನೆ..

        • ಗುರುಗಳಾರುಮಿಲ್ಲಂ ಎಲ್ಲರುಂ ಗುರುಗಳೇ
          ಮರೆಯಬಾರದಲ್ತೆ ಹೃದಯರಾಮ!

  7. ನೀಲಾಕಾಶದೊಳಿರ್ಪಾ
    ಗಾಳಿಪಟದಸಾಲ್ಗಳಚ್ಚರಿಯಮೂಡಿಸಿರಲ್|
    ತೇಲುತೆ ಪರಿಧಿಯಿರದ, ಉ-
    ಯ್ಯಾಲೆಯವೊಲ್ಭಾಸಮಾದುದೀಪಟದಿಂದಂ|

    • ಚೆನ್ನಾಗಿದೆ, ‘ಇರದುಯ್ಯಾಲೆ’ ಆಗಬೇಕು, ಸರಿಪಡಿಸು

    • ಸೋಮಣ್ಣನೆಂದಂತೆ ಇರದುಯ್ಯಾಲೆ ಆಗಬೇಕು. ಛಂದಸ್ಸು ಹೋಗುತ್ತದೆ. ‘ತೇಲುತ್ತೆ ಪರಿಧಿಯಿರದುಯ್ಯಾಲೆ ‘ ಎಂದು ಮಾಡಬಹುದು.

    • Thanks soma and K.thOTa for corrections..

  8. ತರಿದುಂ ತಮವಂ , ಬಿಜಯದ
    ಸಿರಿಯಿಂ ಭಾಸಿಸಿರೆ ನೇಸರಂ ,ಮುದಗೊಂಡಾ
    ತಿರೆಯುಂ , ಬಣ್ಣದ ಹಾರಮ
    ನುರವಣಿಸುತೆ ಹಾಯ್ಕಿ ಸಾದರವ ತೋರ್ದಪಳೇಂ!

  9. ಗುರುವಾಕ್ಯಮನುಲ್ಲಘ್ಯಂ
    ನರರ್ಗಾವಗಮೆಂದು ನಾಂ
    ಬರೆದಿರ್ಪೆನಿದೋ ವೃತ್ತಂ
    ವಿರಳಪ್ರಚುರಂ ಸ್ತುತಂ||

    ಖಚರಪ್ಲುತ||
    ರಕ್ತಪುಷ್ಪಕೃತಂ ವರಮಾಲ್ಯಂ ಭಾಸ್ಕರಪೂಜೆಗೆ ಕೋದುದೇಂ
    ಶಾಕ್ತಚಿತ್ರಿತಮಂಡಲಮೇ ಸೋಪಾನಮೆ ಬಾನ್ಗಡರಲ್ಕಿದೇಂ
    ತ್ಯಕ್ತಬಾಣಮುಖಂಗಳೆ ಸಂಗ್ರಾಮಾಂಕಣದೊಳ್ ಸಲುತಿರ್ಪುವೇ
    ಭುಕ್ತಶೇಷಮೆ ಪಕ್ಷಿಪನಾ ಮೇಣ್ ಕೇಳಿಯ ಬಾಲರ ಟೆಕ್ಕೆಯಂ||

    • ಚೆನ್ನಾಗಿದ್ದಂತೆ ತೋರುತ್ತದೆ 🙂 ಪೂರ್ಣವಾಗಿ ತಿಳಿಯಲಿಲ್ಲ ಸ್ವಲ್ಪ ಅರ್ಥವನ್ನು ಹೇಳೋಪ್ಪಾ

    • ತಾತ್ಪರ್ಯ- ಭಾಸ್ಕರನ ಪೂಜೆಗೆ ಕೆಂಪು ಹೂವುಗಳಿಂದ ಕೋದ ಮಾಲೆಯೇ? ಶಾಕ್ತರ ಪೂಜೆಯ ಚಿತ್ರದ ಮಂಡಲವೇ? ಬಾನಿಗೆ(ಆಕಾಶಕ್ಕೆ) ಏರಲು ಹಾಕಿದ ಸೋಪಾನವೇ? ಸಂಗ್ರಾಮದಲ್ಲಿ ಬಿಟ್ಟ ಬಾಣಗಳ ಮುಖಗಳೇ? ಪಕ್ಷಿಪನಾದ ಗರುಡನ ಭುಕ್ತಶೇಷಮೇ?(ತಿಂದು ಬಿಟ್ಟ ಹಾವಿನ ಅಸ್ಥಿಗಳೇ) ಈ ಬಾಲಕರ ಆಟದ ಪತಾಕೆಗಳು (ಧ್ವಜಗಳು)!!

    • ನವಸುಂದರೋಜ್ಜ್ವಲಮಿದೀ ಕವನಂ ರಸಾರ್ದ್ರಂ
      ಛವಿಮತ್ಪತಂಗವಿಲಸದ್ಗಗನಾಂಗಣಶ್ರೀ-
      ಭವನಂ ಘನಂ ನವವಸಂತದ ಪಲ್ಲವಂಗ-
      ಳ್ಗವಲೀಲೆಯಾಶ್ರಯಮನಿತ್ತವೊಲಲ್ತೆ ಕಾಣ್ಗುಂ||

      • ನವದಿಂ ವಸಂತಕಲಿಕಾತ್ಮಕವೃತ್ತದಿಂದಂ
        ತವೆ ಪೇಳ್ದಿರಲ್ತೆ, ನಮಿಪೆಂ ನಿಮಗೀಗಳಿಂತಾಂ|

    • ಖ|| ಏನ ನೀನುಳಿಸಿರ್ಪೆಯೊ ಪೇಳೈ? ಕಬ್ಬವ ಗೀಚಲು ನಾವುಗಳ್ 🙁

      ’ನರರ್ಗಾವಗ’ಮೆನ್ನುತ್ತುಂ
      ಒಳಗೊಂಡಿಹೆಯೆನ್ನನುಂ|
      ತರತಮಜ್ಞಾನಮಂದತ್ವ-
      ಕ್ಕಾದೆಯೇಂ ಪಕ್ಕಮಿಂದು ನೀಂ|| 🙁

      • ಧನ್ಯವಾದಂಗಳಿಂ ವಂದಿಸಿರ್ಪೆನಿಂತು
        ಶೂನ್ಯಮೆಂತಪ್ಪುದೈ ಕಲ್ಪನಾಜಗತ್ತು??
        ಮಾನ್ಯ-ಮಾನವರ್ ನೀಮೆಂದು ಬಗೆದೆನದಕಿಂ-
        ತನ್ಯರಾಗಿರ್ದೊಡಂ ಪೇಳ್ವುದುಚಿತಮಕ್ಕುಂ

  10. ಬಾನೆತ್ತರಂ ಹಣಿಸುತುಂ ಪಟಪಂಕ್ತಿಯಿಂದಂ
    ತಾನೆತ್ತರಂ ದಿಟದಿಮೇರಿರೆ ಸೂತ್ರದಾರಂ,
    “ನೂನಂ !ಮನೋಜ್ನ ವಿಧಿಯುಂ “ಸುತನಿಂದಲೆಂದುಂ
    ಭಾನು ಸ್ವಸೌಧದೊಳೆ ತಾಂ ನಗುತಿರ್ಪನೇನೋ!

    (ಪಟದ ಸಾಲಿನಿಂದ ಏತ್ತರದ ಆಗಸವನ್ನು ತಲುಪಿದ ಸೂತ್ರದಾರನಲ್ಲಿ ಧನಾತ್ಮಕ ಭಾವದ ಜಾಗರಣೆಯನ್ನು ಕಂಡು,”ಖಂಡಿತವಾಗಿಯೂ ಇದು ಚೆಲುವಾದ ನಡೆ”ಯೆಂದು ತಂದೆಯಂತಿರುವ ಸೂರ್ಯನು ಮೋಡದಮನೆಯಿಂದ ನಗುತ್ತಿರುವನೇನು?) ಪಟಪಂಕ್ತಿಯು ಅರಿಸಮಾಸವಲ್ಲವೆಂದುಕೊಂಡಿರುವೆ.

    • ಭಾನ೦ಬರಾ… – ಈ ಲೋಪಸ೦ಧಿಯು ಸರಿಯೆ? ಭಾನುವ೦ಬರಾವರಣದೊಳ್ ಎ೦ದು ಆಗಮ ಮಾಡಿದರೆ ಅದು ಚೆನ್ನ. ಎಲ್ಲಿ ಲೋಪ ಮಾಡಬೇಕು, ಆಗಮ ಮಾಡಬೇಕು ಎ೦ದು ನಿಯಮ ಇದೆಯೆ?

      • @madam, ದೇಸೀಯ ಪದಗಳ ನಡುವೆ ಸಂಧಿಮಾಡಬೇಕಾದರೆ ಈ ರೀತಿ ಮಾಡಬಹುದು.. ಒಂದುವೇಳೆ ಭಾನು ಮತ್ತು ಅಂಬರ ದೇಸಿಯ ನಾಮಪದಗಳಾಗಿದ್ದರೆ ಈ ರೀತಿ ಮಾಡಬಹುದಿತ್ತು… ತಪ್ಪಿದ್ದರೆ ತಿಳಿಸಿ

        • ನನಗೂ ,ಇಲ್ಲಿ ತಪ್ಪಾಗಿದೆಯೆಂದು ಗೊತ್ತಾಗುತ್ತಿದೆ . ತಿದ್ದಿದ್ದೇನೆ. ನಿಮ್ಮಿಬ್ಬರಿಗೂ ಧನ್ಯವಾದಗಳು.

          • ಭಾನುಂ ಎಂಬುದು ಅಸಾಧು. ಅದು ಬರಿಯ ಭಾನು ಎಂದೇ ಪ್ರಥಮವಿಭಕ್ತಿಯಲ್ಲಿದೆ. ಹೀಗಾಗಿ ಪದ್ಯವನ್ನು ತಿದ್ದಬೇಕಿದೆ.

          • ಆಗಲಿ, ಕೊಪ್ಪಲ ತೋಟ ಕೊಟ್ಟ ಪಂಕ್ತಿಯನ್ನು ಅಳವಡಿಸಿಕೊಂಡಿದ್ದೇನೆ, ಧನ್ಯವಾದಗಳು,ಸರ್.

    • ಸೂರ್ಯನ ಆಯಾಮವನ್ನು ತಂದಿರುವುದು ಚೆನ್ನಾಗಿದೆ ‘ಸಾಸೋ’ 😉

      • ಧನ್ಯವಾದಗಳು “ಸೋಸೋ” 🙂

        • ಕೊಪ್ಪಲತೋಟರ ಸವರಣೆಗಳು ಚೆನ್ನಾಗಿವೆ. ನನ್ನ ಕೆಲಸವನ್ನು ಹಗುರಮಾಡುತ್ತಿರುವುದಕ್ಕಾಗಿ ತುಂಬ ಧನ್ಯವಾದ:-)

    • ಕಲ್ಪನೆ ಸೊಗಸಾಗಿದೆ. ಪಟಪಂಕ್ತಿ ಸಾಧು ಶಬ್ದವೇ ಆಗುತ್ತದೆ. ನೂನಂ ಎಂಬ ಸಂಸ್ಕೃತದ ಅವ್ಯಯವಾದ ಕಾರಣ ಹಾಗೆಯೇ ಬಳಸಿಕೊಳ್ಳಬಾರದೆನಿಸುತ್ತದೆ. ಕೊನೆ ಪಾದದಲ್ಲಿ ಭಾನುಂ ಆಗುವುದುಲ್ಲ. ಬದಲಿಗೆ ‘ಭಾನು ಸ್ವಸೌಧದೊಳೆ ತಾಂ ನಗುತಿರ್ಪನೇನೋ’ ಎಂದು ಮಾಡಬಹುದು.

  11. ..

  12. ಆಬಾಲವೃದ್ಧರಂ ಸೆಳೆ-
    ಯಲ್ ಬಾಲಂಗೋಚಿ ಸಾಲ್ಗಳೋ ಮೇಣ್ ಪಾರಲ್
    ತಾವ್ ಬಾನಾಡಿಯ ಸಾಮ್ಯಮೊ
    ಮೇಲ್ ಬಾನೊಳ್ ಬಾಗೆ ಸೋಗಿದುವೆ ಸೋಜಿಗಮೈ !!

    • ಎಲ್ಲಾ ಓಕೆ, ಆದರೆ ಉಷಾ ಅವರು ಆದಿ ಪ್ರಾಸ ಮೀರೋದು ಯಾಕೆ?? 🙂

      • ಕಂದನಿಂದ ಗಾಳಿಪಟವನ್ನು ಎತ್ತರಕ್ಕೆ ಹಾರಿಸಲು ಪಟ್ಟ ಪ್ರಯಾಸದಲ್ಲಿ ಪ್ರಾಸ ತಪ್ಪಿದ್ದೇ ಗೊತ್ತಾಗಲಿಲ್ಲ ಸೋಮ !?
        ಸರಿಪಡಿಸಲು ಪ್ರಯತ್ನಿಸಿದ್ದೇನೆ.

        ಆಬಾಲವೃದ್ಧರಂ ಸೆಳೆ-
        ದೀ ಬಾಲಂಗೋಚಿ ಸಾಲ್ಗಳುಂ ಮೇಲ್ ಪಾರಲ್
        ತಾ ಬಾನಾಡಿಯ ಸಾಮ್ಯದೊ
        ಳಾ ಬಾನೊಳ್ ಸಾಗೆ ಸೋಗಿದುವೆ ಸೋಜಿಗಮೈ !!

  13. ||ಪ್ರಮಿತಾಕ್ಷರ||

    ಮುಗಿಲೊಳ್ ಕರಂಗಿಮರೆಯಾಗುವನಂ,
    ಖಗನಂ, ಮರಳ್ಚಿ ಖಗದೊಳ್ ತಗಹಲ್,
    ಬಿಗಿದರ್ಪಟಂಗಳಮಿಳಾ ಬಲದೊಳ್
    ಪುಗಲೀಯದಂತಳವಿಯೊಳ್ ತರಳರ್.

    ಆಟದ ವೇಳೆಯಲ್ಲಿ ಹುಡುಗರು, ಸೂರ್ಯ ಮೋಡದಂಚಲ್ಲಿ ಮರೆಯಾಗುವುದನ್ನು ತಡೆಯಲು ಪಟಗಳಿಂದ ಕುಣಿಕೆಯೋಪಾದಿಯಲ್ಲಿ ಸೂರ್ಯನನ್ನು ಬಿಗಿಯಲು ಪ್ರಯತ್ನ ಪಟ್ಟಿರಬಹುದು.

    • ಬಹಳ ಸುಂದರ ಕಲ್ಪನೆ

    • ಚೆನ್ನಾಗಿದೆ. ಎರಡನೇ ಬಾರಿ ಖಗ ಶಬ್ದ ಯಾವ ಅರ್ಥದಲ್ಲಿ ಬಳಸಲ್ಪಟ್ಟಿದೆ ಎಂದು ಸ್ಪಷ್ಟವಾಗಲಿಲ್ಲ. 🙁

      • ಧನ್ಯವಾದ ಮಿತ್ರರೆ..
        ಖಗ ಎಂದರೆ ಆಕಾಶ ಎಂಬ ಅರ್ಥವೂ ಇದೆಯಲ್ಲವೇ.. ಎರಡನೆಯ ‘ಖಗ’, ಆಕಾಶ ಎಂದು ಅರ್ಥೈಸಿ ಬರೆದಿದ್ದೇನೆ.

        • ಖ ಎ೦ದರೆ ಆಕಾಶ. ಖಗ ಎ೦ದರೂ ಆಕಾಶವೆ?

          • ಏನೋ!! ಪ್ರೊ.ಜಿ. ವೆಂಕಟಸುಬ್ಬಯ್ಯನವರ ನಿಘಂಟಿನಲ್ಲಿ ಆ ರೀತಿ ಹೇಳಿದ್ದಾರೆ…

            ಖಗ ಹೆಸರುಪದ(ನಾಮಪದ)
            (ಸಂ) ೧ ಆಕಾಶದಲ್ಲಿ ಸಂಚರಿಸುವಂಥದು ೨ ಹಕ್ಕಿ, ಪಕ್ಷಿ ೩ ಬಾಣ ೪ ದೇವತೆ ೫ ಸೂರ್ಯ ೬ ಆಕಾಶ

          • ಜಗನ್ನಾಥ ವಿಜಯದ ಒಂದು ಪದ್ಯದ ತುಣುಕು :
            ಖಗಪತಿ(ಗರುಡ) ಖಗದಿಂ(ಆಕಾಶದಿಂದ) ಖಗೇಂದ್ರವಾಹನನೆಡೆಯೊಳ್…………….

            But still I have a doubt.. As air could also be ‘khaga’..ಆದರೆ ಮೇಲಿನ ಪದ್ಯಕ್ಕೆ ಗಾಳಿಯಿಂದ ಬಂದ ಅನ್ನುವುದಕ್ಕಿಂತ ಆಗಸದಿಂದ ಬಂದ ಎಂಬುದೆ ಹೆಚ್ಚು ಒಪ್ಪುತ್ತದೆ.

            please some one clarify…

          • Sorry for the misunderstanding from my side…. In this context khagapati khagadim means garuDaastradinda…. khaga can also be an arrow… I went through the poem once again…

          • ಖಗ ಎಂದರೆ ಆಕಾಶಾರ್ಥ ಹೇಗೆ ನೋಡಿದರೂ ಬರುವುದಿಲ್ಲ. ಅದೇನಿದ್ದರೂ ಆಕಾಶಚಾರಿಗಳನ್ನು (ಸೂರ್ಯ-ಚಂದ್ರಾದಿ ಕಾಂತಿಕಾಯಗಳು, ಹಕ್ಕಿಗಳು, ಬಾಣಾದಿಗಳು, ದೇವತೆಗಳು, ಮೇಘಾದಿಗಳು ಮುಂತಾದುವಕ್ಕೆ ಮಾತ್ರ ಯುಕ್ತ. ಪ್ರೊ. ಜಿ. ವಿ ಯವರು ಕೆಲವೊಮ್ಮೆ ಅನವಧಾನದಿಂದ
            ತಪ್ಪೆಸಗಿದ ಸಂದರ್ಭಗಳುಂಟು. ಇವು ಎಂಥ ಮಹಾಪಂಡಿತರಿಗೂ ಆಗೀಗ ತಪ್ಪಿದ್ದಲ್ಲ:-)

  14. ಆನಾಣ್ಮಂ ದಲಲಂಕೃತಂಗೊಳಿಪೆ ನಿನ್ನಂ ತೋರು ಕೈಯೆನ್ನುತುಂ
    ಬಾನಿಂದಂ ಭುವಿಗೆಂದೆ ಭವ್ಯವಲಯಂಗಳ್ ಸಂದವೋಲೊರ್ಮೆ, ದು-
    ಮ್ಮಾನಂ ನೀಗುತೆ ಮಾಲೆಯಂ ತಿರೆಯುಮೊರ್ಮೆ ವ್ಯೋಮಮುಂ ಲಾಸ್ಯದಿಂ-
    ದಾನುತ್ತೋರ್ವರಿನೊರ್ವರೊಲ್ಮೆಸೆಳೆಯುತ್ತುಂ ನೀಳ್ಪವೊಲ್ ಭಾಸಿಕುಂ

    ಭವ್ಯವಲಯಂಗಳ್ – ಭವ್ಯವಾದ ಬಳೆಗಳು

    ಒಮ್ಮೆ ಪ್ರಿಯಕರನಾದ ಆಗಸನು ತನ್ನ ಪ್ರಿಯತಮೆಯಾದ ಭೂಮಿಗೆ ಭವ್ಯವಾದ ಕೈಬಳೆ ತೊಡಿಸುವೆ ಕೈತೋರು ಎಂಬಂತೆ, ಮತ್ತೊಮ್ಮೆ ದುಮ್ಮಾನಬಿಟ್ಟು ಬಾನು-ಭುವಿ ಈರ್ವರೂ ಪರಸ್ಪರ ಮಾಲೆಯನ್ನು ಬದಲಿಸುತ್ತಿದ್ದಾರೆಯೇ ಎನ್ನುವಂತೆ ತೋರುತ್ತದೆ.

    • ಸೋಮಣ್ಣಂ ನಲವಿಂದೆ ಪೇಳ್ದುದಿದು ದಲ್ ಶೃಂಗಾರದಿಂ ತುಂಬಿತೈ 🙂

      • ಸೋಮ, ಕಾಂಚನ, ಚೀದಿ, ಹೃದಯರಾಮ, ಕೊಪ್ಪಲತೋಟರ ಪದ್ಯಗಳೆಲ್ಲ ಚೆನ್ನಾಗಿವೆ. ಧನ್ಯವಾದಗಳು….

  15. ಜಗದೊಳುಮಿಂತುಮೀಪರಿಯಲೊಟ್ಟಿಗೆ ಕಟ್ಟಿದ ವರ್ಣಶೃಂಖಲಂ
    ಬಗೆದಿದುದೇನ ತಾಪಿಡಿದು ಸೂತ್ರದ ದಾರವ ಸುತ್ರಧಾರನುಂ ।
    ಮುಗಿಯದೆ ಬಾಗುತೀಬಗೆಯೆ ಸುಮ್ಮಗೆ ಸುತ್ತಿಹ ವರ್ಣತಂತುವೋಲ್
    ಮುಗಿಲೊಳು ಕಂಡುದೀ ಪದ ಪತಂಗದ ಪಾತ್ರದೆ ಸೂತ್ರಧಾರಣಂ ।।

    • ವೃತ್ತಕ್ಕಾಗಿ ಅಭಿನಂದನೆ. ಈ ಬಾರಿ ಎಲ್ಲರೂ ಉತ್ಸಾಹದಿಂದ ಬಗೆಬಗೆಯ ಬಂಧಗಳಲ್ಲಿ ರಚಿಸುತ್ತಿರುವುದು ಮುದಾವಹ. ನನ್ನ ಅಭ್ಯರ್ಥನೆಗೆ ಓಗೊಟ್ಟ ಎಲ್ಲರಿಗೂ ನಮನಗಳು.

    • ಸೊಗಸಿದು ಸಂದುದಲ್ತೆ ಕವನಂ ಭವಿಸಿರ್ಪುಷೆಯಿಂದೆ ವೃತ್ತದೊಳ್

    • ಧನ್ಯವಾದಗಳು ಗಣೇಶ್ ಸರ್, ಕೊಪ್ಪಲತೋಟ
      ಹೌದು, ಈ ಬಾರಿಯ ಎಲ್ಲರ ಸಾಲುಸಾಲು ಪದ್ಯಗಳು, ಹಾರುವ “ಸಾಲುಗಾಳಿಪಟ”ವನ್ನು ಕಂಡಷ್ಟೇ ಆನಂದ ಕೊಡುತ್ತಿವೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

  16. ಏನಿದೇನಿದಹ! ಕೂರ್ಮೆಯ ಭಾವಂ?
    ಬಾನೊಳಿರ್ದ ಪಟಜೋಡಿಯೊಳಿಂದುಂ!
    ಸಾನುರಾಗವನೆ ಸೂಸುತೆ ನಿತ್ಯಂ
    ಜೇನದೆಂಬುದನೆ ತೋರ್ದನೆ ಪೂಷಂ!

    • ಬರಿಯ ಒಂದು ಚುಕ್ಕೆಯನ್ನು post ಮಾಡಿರುವಿರಿ. ಬಹಳ ಧ್ವನಿಪೂರ್ಣವಾದ ರಚನೆ. ಧನ್ಯವಾದಗಳು. ಧ್ವನಿಯ ಸ್ವರೂಪವು ಹೀಗಿರಬಹುದು ಎಂದು ನನ್ನ ಕಲ್ಪನೆ:
      ಎಲವೋ ಛಾಯಾಗ್ರಾಹಕ ಕೇಳೈ
      ಚಲಿಸಿನಿತಿನ್ನಷ್ಟಾ zoomಅನ್|
      ಬಲುದೂರಕೆ ತಳ್ಳಿರೆ ಪಟಗಳನವು
      ಖಿಲಗೊಂಡಾಗುವುವೈ ಚುಕ್ಕೆ||

    • ಹ್ಙಾ! ಮೋಸಽಽಽ

    • ಒಳ್ಳೆಯ ಸ್ವಾಗತವೃತ್ತ! ಧನ್ಯವಾದ.

  17. ಕನ್ನಡದಲ್ಲಿ ಮತ್ತೊಂದು ಪ್ರಯತ್ನ…

    ಧರಣಿತರಣಿಗಳೊಲವಿನೋಲೆಯೊ
    ನರನಮೇಯವನಳೆವ ಯತ್ನವೊ
    ಹರಿಪದಕೆ ನೂಪುರವ ತೊಡಿಸುವ ಭಕುತರಾಸೆಯಿದೋ|
    ಸುರಮನುಜರನುಬಂಧಮಾಲೆಯೊ
    ಗುರಿಯ ತಲುಪದನಂತಸಾರ್ಥವೊ
    ಬರಿದೆ ಗಾಳಿಯ ಪಟಗಳೆಂದರೆ? ಕವನವಾಗುವುದೇಂ?

    ತರಣಿ – ಸೂರ್ಯ; ಹರಿಪದ – ಆಕಾಶ/ಹರಿಯ ಪಾದ

    • ಐದನೆಯ ಪಾದದಲ್ಲಿನ ಕಲ್ಪನೆ ಸೊಗಸಾಗಿದೆ.

    • ಆಹಾ! ಪ್ರತಿಪಾದವೂ ತುಂಬ ಸ್ವೋಪಜ್ಞವಾದ ಉಲ್ಲೇಖಾಲಂಕಾರದಿಂದ ತುಂಬಿ ಈ ಸಂಚಿಕೆಯ ಈ ವರೆಗಿನ ಎಲ್ಲ ಪದ್ಯಗಳಿಗೂ ಮುಡಿಮಾಣಿಕದಂತಿದೆ. ಅಭಿನಂದನೆಗಳು. ಆದರೆ ಭಕುತಿಯನ್ನು ಭಕ್ತಿ ಎಂದು ಮಾಡಿದರೆ ಮತ್ತೂ ಸೊಗಸಾದೀತು.

    • ಭಾಮಿನಿ ಸೊಗಸಾಗಿದೆ.. 😉

  18. ರಥೋದ್ಧತ|| ಪೋಗು ನೀನೆನಿತೊ ಎತ್ತರಕ್ಕೆ ಮೇಣ್
    ಬಾಗಿ ಸಾಗಿನಿತು ಮೇರೆಮೀರದೊಲ್|
    ಬೀಗೆ ನೀಂ ನೆಲಕೆ ಬೀಳ್ವೆಯಾಗಲೇ
    ತೂಗೆ ನೀನುಳಿವೆ ಬಾನೊಳೆಂದಿಗುಂ||

    • ಚೆನ್ನಾದ ವೃತ್ತ; ಅಭಿನಂದನೆಗಳು.

      • ’ರಥೋದ್ಧತ|| ನಾನನಾನನನ ನಾನನಾನನಾ’ ಎಂದಷ್ಟೇ ಬರೆದಿದ್ದರೂ ತಮ್ಮಿಂದ ಇದೇ ಅಭಿನಂದನೆ ಸಲ್ಲುತ್ತಿತ್ತು. ಧನ್ಯವಾದಗಳು 😉

        • ಏಕೆ೦ದರೆ ಸರ್ ಅವರು “ನಾನನಾ ನನನ…” ಎ೦ಬುದಕ್ಕೂ ಏನಾದರೂ (ಅದೂ ಪಾದಕ್ಕೊ೦ದು ಬೇರೆ ಬೇರೆ) ಅರ್ಥ ಹುಟ್ಟಿಸಬಲ್ಲರು 🙂

          • ಗಬ್ಬಾಗಿರ್ಪೆನ್ನೆನಿತೋ
            ಕಬ್ಬಗಳಂ ೠಷ್ವಕೊಯ್ವ(sublimation) ಮಹನೀಯರಿರಲ್|
            ಹಬ್ಬವ ಗೈವೆನುಮೆನುತ್ತೆ
            “ಕಬ್ಬಿಗನಾಂ; ಬರಿಯ ಪದ್ಯಕಾರನುಮಲ್ಲಂ”|| 🙂

          • ಗಬ್ಬಾಗಿರ್ಪೆ ಎ೦ದರೇನು ರ೦ಪರೆ? ನಮಗೆ (ಧಾರವಾಡದವರು) ಅದು ಬೇರೆಯೆ ಅರ್ಥ ಕೊಡುತ್ತದೆ!!
            (.. ಇರ್ಪೆನೆನಿತೋ.. ಆಗಬೇಕಿತ್ತು.)

          • ಗಬ್ಬು (ಶಿಷ್ಟಭಾಷೆಯಲ್ಲ) ಆಗಿರ್ಪ ಎನ್ನ ಎನಿತೋ ಕಬ್ಬಗಳನ್ನು …

    • ಪದ್ಯ ಚೆನ್ನಾಗಿದೆ ಪ್ರಸಾದು ಅವರೇ..

  19. ಸ೦ಕ್ರಾ೦ತಿಯ೦ದು ದೇವತೆಗಳು ಸೂರ್ಯನ ಪಥವನ್ನು ವೇದವೃಕ್ಷದ ಎಲೆಗಳ ತೋರಣದಿ೦ದ ಸಿ೦ಗರಿಸಿದ್ದಾರೆ ಎ೦ಬ ಭಾವ…

    ಸ೦ದುದಿದೊ ಸ೦ಧಿ, ರವಿ ತಾ೦
    ಪೊ೦ದುವುದುತ್ತರದಿಶಾಕ್ರಮಣಮ೦, ಸುಮುಹೂ-
    ರ್ತ೦ ದಲೊದಗಲ್ ದಿವಿಪಥ೦
    ಛ೦ದಸ್ತರುಪರ್ಣಮಾಲೆಯಿ೦ ರ೦ಜಿರ್ಕು೦

    • ಚೆನ್ನಾದ ಕಂದ; ಒಳ್ಳೆಯ ಭಾಷೆ ಮತ್ತು ಬಂಧ. ಅಭಿನಂದನೆಗಳು.

    • ಸೊಗಸಾದ ಪದ್ಯ ನೀಲಕಂಠರೇ.

    • ಇದೋ, ಸಾರಾಸಗಟಾಗಿ ಹೇಳುವೆ: ನೀಲಕಂಠರ ಕಲ್ಪನೆ-ಭಾಷೆಗಳು ತುಂಬ ಚೆನ್ನಾಗಿರುತ್ತವೆ. ಧನ್ಯವಾದಗಳು. ಪ್ರತಿಬಾರಿಯೂ ಇದನ್ನೇ ಹೇಳಲೇಕೆ.

      • ಧನ್ಯವಾದಗಳು ರ೦ಪರೆ! ಇದೇನು ಸಾರಾಸಗಟಾಗಿ ಹೀಗೆ ಹೇಳಿ ಮುಗಿಸಿಬಿಟ್ಟಿರಿ?! ಮು೦ದೆಯೂ ಸ್ವಲ್ಪ ಉಳಿಸಿಕೊ೦ಡಿದ್ದರೆ ಚೆನ್ನಿತ್ತು..

  20. || ತರಂಗವೃತ್ತ, ಉಪಮಾಲಂಕಾರ ||

    ಬಾನಿನೊಳ್ ಕವಿದ ಮೇಘದಿಂ ಕಳೆಯ ಕುಂದಿರಲ್ ರವಿಯ ಮಂಡಲಂ,
    ಯಾನದೊಳ್ ನಿರತಮಾದ ಬಣ್ಣದ ಪಟಂಗಳದ್ಭುತಸುಶೋಭೆಯಿಂ,|
    ಮೌನದಿಂದೊಲಸೆವೋಗುತಿರ್ಪ ಖಗಸಂಕುಲಂ ಮೆರೆವವೋಲಿರಲ್,
    ಧ್ಯಾನದೊಳ್ ಬಗೆದ ಚಿತ್ರಮಂ ಸೃಜಿಸಿ ಗೆಲ್ದನೈ ವರಕಲಾವಿದಂ ||

    • ಆಹಾ! ಸಂತುಲಿತಮಧ್ಯಾವರ್ತಗತಿಯ ಮಾತ್ರಾಬಂಧಕ್ಕೆ ತೀರ ನಿಕಟವಾದ ಈ ತರಂಗವೃತ್ತವು ವೇದಾಂತದೇಶಿಕ, ನಾರಾಯಣ ಭಟ್ಟಾತಿರಿ ಮುಂತಾದವರ ಕಾವ್ಯಗಳಲ್ಲಿ ಉಚಿತವಾಗಿ ಬಳಕೆಗೊಂಡಿದೆ. ಇದನ್ನು ಪದ್ಯಪಾನಕ್ಕೆ ಪರಿಚಯಿಸಿದ್ದಲ್ಲದೆ ಒಳ್ಳೆಯ ಕಲ್ಪನೆಗಳನ್ನೂ ಕೂಡಿಸಿ ಪದ್ಯರಚನೆ ಮಾಡಿದುದಕ್ಕಾಗಿ ಧನ್ಯವಾದ.

      • ಸಹೋದರರೆ, ತರಂಗವೃತ್ತದ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದ್ದಲ್ಲದೆ ಪದ್ಯವನ್ನು ಮೆಚ್ಚಿ ಪ್ರೋತ್ಸಾಹಿಸಿರುವುದಕ್ಕಾಗಿ ತುಂಬ ಧನ್ಯವಾದಗಳು.

    • ನೂತ್ನ ವೃತ್ತದೊಳೆ ಪದ್ಯದಿಂದೆ ಕಳೆವೆತ್ತಿರಲ್ಕಿದೊ ನಮಿಪ್ಪೆನಾಂ.

      • ಕೊಪ್ಲತೋಟರೆ,ನಮಿಪ್ಪೆನಾಂ ಪದವ ಮೆಚ್ಚೆ ನೀಂ ನುತಿಸಿ ವೃತ್ತಮಂ.

        • It’s great to read something that’s both enjoyable and provides pragmatisdc solutions.

        • Tipping cows…not really much fun unless you are drunk! Also, not very humane…the cow can actually be injured when tipped. Not something I am particularly proud of. The train tressel/creek incident…not all that scary. Probably due to frame of mind. Surviving meant going home at some point and home was the 10th level of h*ll…not surviving an “accident” was a lot less scary than going home.New post for all those who have/had trouble with Mother’s Day on our blog.

    • ನಮನ೦, ತರ೦ಗಗತಿಬ೦-
      ಧಮಿದೆಮ್ಮಯ ಚಿತ್-ತರ೦ಗಸ೦ಘದರ೦ಗ-
      ತ್ವಮನಳಿಸಿ, ಚಿತ್ತ-ರ೦ಗದೊ-
      ಳೆ ಮೇಣ್ ಸುರ೦ಗಮಯರ೦ಗವಲ್ಲಿಯನೆಳೆಯಲ್

      “….. ಎಳೆಯಲ್ (ತಾಯೆ ನಿಮಗೆ) ನಮನ೦” ಎ೦ದು ಸುತ್ತಿ ಬಳಸಿ ಅರ್ಥ ಮಾಡಿಕೊಳ್ಳಿ 🙂

      • ವಂದನೆಗಳಂ ಸಲಿಪೆನಾಂ
        ಮಂದಸುಹಾಸಮನೆ ಮೊಗದೆ ಮೂಡಿಸೆ ಕಂದಂ,|
        ಕುಂದಸುಮಂಗಳವೋಲೇ
        ಸುಂದರಮಿರೆ ನಿಮ್ಮ ಪದ್ಯಬಂಧದ ಭಾವಂ ||

        ನೀಲಕಂಠರೆ,ಧನ್ಯವಾದಗಳು. ನಿಮ್ಮ ಪದ್ಯ ಚೆನ್ನಾಗಿದೆ.’ಚಿತ್ತರಂಗದೊಳು ಮೇಣ್ ‘ ಎಂಬಲ್ಲಿ ಚಿತ್ತರಂಗದೊಳ್ ಎಂದಾಗಬೇಕು. ಹಾಗಾದಾಗ ಛಂದಸ್ಸು ಕೆಡುವುದು. ಅಂತೆಯೇ, ‘ಎಳೆಯಲ್ ‘ ಗೆ ಬದಲಾಗಿ ‘ಇರಿಸಿರಲ್’ ಎಂಬುದು ನನಗೆ ಹೆಚ್ಚು ಸೂಕ್ತವೆಂದೆನಿಸುತ್ತದೆ. ‘ಚಿತ್ತರಂಗವ ಶಮಿಸುತೆ ರಂಗಮಯರಂಗವಲ್ಲಿಯಿರಿಸಿರಲ್ ‘ ಎಂದು ಸವರೋಣವೆ ? ‘ಚಿತ್-ತರಂಗಸಂಘದರಂಗತ್ವ’ ಎಂಬಲ್ಲಿ
        ಸಂಘದ ರಂಗತ್ವ ಎಂಬುದಾಗಿ ಪದಗಳನ್ನು ಬಿಡಿಸಿ ಬರೆಯುವ ಅಗತ್ಯವಿರುವಂತಿದೆ. ಅರ್ಥವಾಗಲಿಲ್ಲ. ನನ್ನ ಅನಿಸಿಕೆಗಳು ತಪ್ಪಾಗಿದ್ದಲ್ಲಿ ಮನ್ನಿಸಿರಿ.

        • ಧನ್ಯವಾದಗಳು..
          ಚಿತ್ತ-ರ೦ಗದೊಳು ಏಕೆ ತಪ್ಪು? ಹೊಸಗನ್ನಡ ಎ೦ದೆ?
          ಮತ್ತು..
          “ಚಿತ್-ತರ೦ಗಸ೦ಘದ ಅರ೦ಗತ್ವಮ೦ ಅಳಿಸಿ” ಎ೦ದು ಓದಿಕೊಳ್ಳಿ. ಮನಸ್ಸಿನ ಸಪ್ಪೆತನವನ್ನು ಹೋಗಲಾಡಿಸಿ.. ಎ೦ಬ ಅರ್ಥದಲ್ಲಿ.
          ಮತ್ತು..
          ..ರ೦ಗವಲ್ಲಿಯನಿರಿಸಲ್ ಎ೦ದು ತಿದ್ದಬಹುದಲ್ಲವೆ?

          • ……..ಚಿತ್ತ-ರಂಗದೊ-
            ಳೆ ಮೇಣ್………..
            ಎಂದರೆ ಎಲ್ಲ ಸರಿಯಾದೀತು. ನನಗೇನೋ ರಂಗವಲ್ಲಿಯನ್ನು ಎಳೆಯಲೇ ಇಷ್ಟ; ಅದನ್ನು ಇರಿಸಿದರೂ ತಪ್ಪಿಲ್ಲ. 🙂

          • ಧನ್ಯವಾದಗಳು ಸರ್! ನನಗೂ ಇಷ್ಟವಾದ ಎಳೆಯುವಿಕೆಯನ್ನು ಉಳಿಸಿಕೊಟ್ಟಿದ್ದಕ್ಕೆ. 🙂
            ಉಳಿದ೦ತೆ ತಮ್ಮ ಸಲಹೆಯ೦ತೆ ತಿದ್ದಿದ್ದೇನೆ.

          • ಈಗೆಲ್ಲ ’ಇರಿಸುವ’ ರಂಗೋಲಿಗಳಿವೆಯಲ್ಲ – colour paper symmetric designs. ಕೇರಳೀಯರ ಪೂಕಲಂ ಕೂಡ ಇದೇ ಜಾತಿಯದು.

        • ನನ್ನ ಸಂದೇಹಗಳನ್ನು ನಿವಾರಿಸಿದ ಸಹೋದರರಾದ ಗಣೇಶರಿಗೆ ಹಾಗೂ ನೀಲಕಂಠರಿಗೆ ಧನ್ಯವಾದಗಳು.

    • ನೀಲಕಂಠರೆ,
      ತಮ್ಮ ಇತ್ತೀಚಿನ ಅಷ್ಟಾವಧಾನದಲ್ಲಿ (ಭಾರತೀಯವಿದ್ಯಾಭವನ, ಬೆಂಗಳೂರು, ೧೮.೦೧.೨೦೧೫) ಡಾ|| ಶಂಕರ್‍ರವರು ರಂಗೋಲಿಯ ಬಗೆಗೆ ರಚಿಸಿದ ಆಶುಪದ್ಯವು ತುಂಬ ಚೆನ್ನಾಗಿದೆ. ಪದ್ಯವನ್ನು ನಾನು ಮನನಮಾಡಿಲ್ಲ. ಅದರ ರೂಕ್ಷಾರ್ಥವು ಹೀಗಿದೆ:
      ಚಂಚಲೆಲಕುಮಿಯ ತಮ್ಮಯ ಮನೆಗೇ
      ಹೊಂಚನುಹಾಕುತೆ ಸೆಳೆದುಕೊಳಲ್|
      ಅಂಚಿನೊಳೆಲ್ಲರು ಬೀಸಿಹ ಬಲೆಯೇ
      ಸಂಚೋದನದೀ ರಂಗೋಲಿ||
      (ಪೂರ್ವಾರ್ಧದ ಊನಗಣದಲ್ಲಿನ ವಿಸಂಧಿಯು ಕ್ಷಮ್ಯವೆಂದುಕೊಳ್ಳಬಹುದೆ?)

      • ಹೌದು. ಅವರು ಇದನ್ನೇ ತಮ್ಮ ನಿಷೇಧಾಕ್ಷರಿ ಪಾರ್ಚ್ಛಕ್ಯದಲ್ಲಿ ಸ೦ಸ್ಕೃತದಲ್ಲಿ ಹೇಳಿದ್ದರು.
        (“ತಮ್ಮ ಅಷ್ಟಾವಧಾನದಲ್ಲಿ.. ” ಎ೦ಬುದು ಏಕೊ ಸರಿ ಕಾಣುತ್ತಿಲ್ಲ ಎ೦ದು ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊ೦ಡಾಗ ಅನ್ನಿಸಿತು 😉 )

        • ಸ್ವಲ್ಪ ಕನ್ನಡಿ ಸರಿಸಿ, ಬರಿಗಾಜಿನಲ್ಲಿ ನೋಡಿ ನೀಲಕಂಠ , ಆಗ ನಮ್ಮ ಹೃದಯದಲ್ಲಿ ಮೊಳೆಯುತ್ತಿರುವ ಆ ಆಶಯ ಕಾಣಲಿದೆ ! ಅಲ್ಲವೇ ಪ್ರಸಾದ್ ಸರ್?

          ಅಂದಹಾಗೆ… ನೀವವರ “ತಮ್ಮ”ನೇ ಅಲ್ಲವೇ !?

          • ಅಯ್ಯೋ ದೇವರೆ! ನನ್ನನ್ನು ಯಾವ ರೀತಿಯಿ೦ದಲೂ ಅವರೊ೦ದಿಗೆ ಸ೦ಬ೦ಧಿಸಿಕೊಳ್ಳಲಾರೆ. ಅವರನ್ನೂ ಅವರ ಪದ್ಯಗಳನ್ನು, ಚಿತ್ರ ವಿಚಿತ್ರ ಚಿತ್ರಬ೦ಧಗಳನ್ನೂ ನೆನೆಸಿಕೊ೦ಡರೇನೆ ಎದೆ ಥರಥರಿಸುತ್ತದೆ!!

  21. ಬಾಲಾಟಮೊ ಗಾಳಿಪಟದ
    ಮೇಲಾಟಮೊ ಮೇಣತಂತ್ರಮಲ್ಲದ ಸೂತ್ರಂ ।
    ನೀಲಾಂಬರದಂಗಳದೊಳು
    ತಾಲೀಮುಕಣಾ ಸ್ವರೂಪದೆಡೆಗೀ ತಂತ್ರಂ ।।

    • “……………ದಂಗಣದೊಳ್ ” ಎಂಬ ಒಂದೇ ಸವರಣೆ ಬೇಕಿದೆ. ಉಳಿದಂತೆ ನಿಮ್ಮ ಪದ್ಯವು ನಿಜಕ್ಕೂ ಸೊಗಸಾದ ಭಾವ-ಬಂಧಗಳ ಅನುಬಂಧ!

      • ಧನ್ಯವಾದಗಳು ಗಣೇಶ್ ಸರ್, “ತಾಲೀಮು” ಪದ ಹಿಂದಿಯದೆಂಬ ಅನುಮಾನದಲ್ಲೇ ಬರೆದದ್ದು.
        ತಿದ್ದಿದ ಪದ್ಯ:
        ಬಾಲಾಟಮೊ ಗಾಳಿಪಟದ
        ಮೇಲಾಟಮೊ ಮೇಣತಂತ್ರಮಲ್ಲದ ಸೂತ್ರಂ ।
        ನೀಲಾಂಬರದಂಗಣದೊಳ್
        ತಾಲೀಮುಕಣಾ ಸ್ವರೂಪದೆಡೆಗೀ ತಂತ್ರಂ ।।

  22. ಮನದ ನಭದ ಮಲಿನತೆಯಂ,
    ಕನಲಿಕೊರೆವರಿಗಳ ಬಂಧಿಸಿದೊಡಂ ವಿಶ್ವಂ,
    ತನುಕಾಂತಿಯುರ್ಕುತಲ್ಬೆಳ
    ಗಿನರಶ್ಮಿಯವೊಲೆಮಗಿಂದು ತೋರ್ದುದೆ?ತಿಳಿಯೆಂ!

    (ವಿಶ್ವ ,ಮನಸ್ಸಿನ ಕಲ್ಮಶಗಳನ್ನೂ, ಅರಿಗಳನ್ನೂ ಬಂಧಿಸಿರಲು, ತನುಕಾಂತಿಯುಕ್ಕಿ ..ಬೆಳಗಿ.. ಸೂರ್ಯನ ರಶ್ಮಿಯಂತೇ ತೋರುತ್ತಿದೆಯೇನು?)

    • ಪದ್ಯವೂ ಅದರ ಭಾವವೂ ಚೆನ್ನಾಗಿವೆ. ಆದರೆ ಮನಗಗನ ಎಂಬುದು ಅಸಾಧುರೂಪ. ಏಕೆಂದರೆ ಮನಸ್ ಎಂಬುದು ಸಂಸ್ಕೃತದಲ್ಲಿ ಸಕಾರಾಂತ ನಪುಂಸಕಲಿಂಗಶಬ್ದ. ಇದು ಸಮಾಸವಿಲ್ಲದೆ ಬಂದಾಗ ಕನ್ನಡದಲ್ಲಿ ಮನಂ ಎಂದೋ ಮನಸ್ಸು ಎಂದೋ ಆಗಬಹುದು. ಆದರೆ ಸಮಾಸದ ಮೊದಲು, ನಡುವೆ ಬಂದಾಗ ಸಂಸ್ಕೃತದ ಸಂಧಿ-ಸಮಾಸಗಳ ನಿಯಮದಂತೆಯೇ ನಡೆಯಬೇಕು. ಆಗ ಮನೋಗಗನ ಎಂದಾಗಬೇಕು. ಇಲ್ಲಿ ಈ ರೂಪದಿಂದ ಛಂದಸ್ಸು ಕೆಡುತ್ತದೆ. ಹೀಗಾಗಿ “ಮನದ ನಭದ ಮಲಿನತೆಯಂ” ಎಂದು ಸವರಿಸಬೇಕು. (ನಭವೂ ಮನದಂತೆಯೇ ಸಕಾರಾಂತ. ಕೆಲವೊಮ್ಮೆ ಅಕಾರಾಂತವಾಗಿಯೂ ಸಲ್ಲುವುದು)

      • ಧನ್ಯವಾದಗಳು ಸರ್. ಸರಿಪಡಿಸಿಕೊಂಡಿರುವೆ,ತಪ್ಪನ್ನು.
        ಮತ್ತೆ ಹೆಚ್ಚಿಗೆ ಕೆಲಸವನ್ನು ಕೊಟ್ಟಿದ್ದಕ್ಕೆ ಕ್ಷಮೆಯನ್ನು ಕೋರುವೆ.

  23. ಮಹರ್ಷಿ ವಿಶ್ವಾಮಿತ್ರರಿಗೆ ಗಾಯತ್ರಿ ಸಾಕ್ಷಾತ್ಕರಿಸಿದ ಸ೦ದರ್ಭ. ಮ೦ತ್ರದವತರಣ, ಋಷಿಯ ಅರಿವಿನ ಉತ್ತರಣ, ಇವೆರಡೂ ದತ್ತಚಿತ್ರದ ಮೇಲಣ ಕಲ್ಪನೆಗಳು.

    ಆ ವರಮುನಿಗೆ ಕರುಣಿಸಿದನಾ
    ದೇವ ನಾರಾಯಣಗಭೇದನು
    ಕಾವನೊಲಿಯುತ ಪಾಡಿದವರನು ದೋಷವೆಣಿಸದಲೆ೦-
    ಬೀ ವಿಶೇಷದ ಹೆಸರಿನಲಿ ತಾ-
    ನೀವೆನೀ ವರ್ಣಗಳ ಮೂರೆ೦-
    ಟೀ ವಿಭಾಗಸಮುಚ್ಚಯವ, ಸಾಧಕರಿಗಾಗೆನುತ

    ಇ೦ತು ಮಿತ್ರನ ಮುಖದೊಳುದಿಸಿದ-
    ನ೦ತಗುಣಸಾ೦ದ್ರತೆಯ ಮ೦ತ್ರವ-
    ದ೦ತರಿಕ್ಷದೊಳಕ್ಕರಕ್ಕರಗಳನೆ ಬಿಡಿಬಿಡಿಸಿ
    ಕಾ೦ತಿಯೊಳೆ ತೋರಿರಲು ಕೌಶಿಕ-
    ನ೦ತರ೦ಗದಲರಿವಿನಾ ಪಟ
    ಹ೦ತಹ೦ತದೊಳೇರಿದುದು ವರಯೋಗಸೂತ್ರದಲಿ

    (ಕಾವನೊಲಿಯುತ ಪಾಡಿದವರನು …. ಹೆಸರಿನಲಿ – ಗಾಯ೦ತ೦ ತ್ರಾಯತೇ ಇತಿ ಗಾಯತ್ರೀ)

    • Fine imagination and versification.
      ಕಾವನೊಲಿಯುte ಪಾಡುvara (..ದರ/ವರ instead of ..ದವರ/..ವವರ) ದೋಷವನೆಣಿಸದೆಲೆ ತಾಂ| ಈ ….. peಸರಿnoLu… ಸಾಧಕರಿಗಾಗೆನುtuM
      ಅಂತರಂಗdoLaರಿವಿನಾ … ವರಯೋಗಸೂತ್ರdoLu

      • ಧನ್ಯವಾದಗಳು. ನೀವು ಹಳಗನ್ನಡದಲ್ಲಿ ತಿದ್ದುತ್ತಿದ್ದೀರಿ ಎನ್ನಿಸುತ್ತಿದೆ. ನಾನು ನಡುಗನ್ನಡ ಎ೦ದು ಬರೆದಿದ್ದೇನೆ. ಇಷ್ಟಕ್ಕೂ ತಪ್ಪಿದೆಯೆ?

        • 🙁

          • ಬೇಸರವದೇಕೆ ರ೦ಪರೆ
            ತ್ರಾಸೇಕಿಷ್ಟೊ೦ದು ಮಾಡಿಕೊಳ್ಳುವಿರಿದಕೇ
            ಕಾಸೆಪಡದೇನು ನಿಮ್ಮನ, (ನಿಮ್ ಮನ)
            ಘಾಸಿಪಡದಲೆ ನಡುಗನ್ನಡದಿ ಬರೆದಡೆ ನಾ

  24. ಎಂಟು ಕಂತುಗಳಾಯ್ತು ನೂರನು
    ದಾಂಟಿರುವ ಸಂಖ್ಯೆಗಳ ಪದ್ಯಗ-
    ಳೆಂಟರಂದು ಡಿಸೆಂಬರಕ್ಕಾ
    ತುಂಟ ಸೋಗೆಯು ಕುಣಿದಮೇಲ್|
    (ವಾಸ್ತವವಾಗಿ ನೂರು ಪದ್ಯಗಳಿರುವುದಿಲ್ಲ. ಪದ್ಯಗಳೂ ಸೇರಿದಂತೆ ನೂರು ಪ್ರತಿಕ್ರಿಯೆಗಳು)

  25. The light towards which the kites are headed is the Sun.
    ರುಚಿರಾ|| ಅತೀತಕೈದದೆ ತಪ(sun)ತಾಪದಿಂದೆ ನೀಂ
    ಪತಂಗದಿಂ ಕಲಿತೆಹೆ ಎಂತೊ ಜಾಣ್ಮೆಯಂ|
    ಸಿತಾರಮಂ (sun) ತಡಕದೆ ಭಸ್ಮಮಾಗದೊಲ್
    ಲತಾಂಗಿವೊಲ್ ಬಳುಕುತೆ ಗೇಹಕೈದಿದೌ||

    • ಪ್ರಸಾದರೆ, ಲತಾಂಗಿವೊಲ್,ಭಸ್ಮಮಾಗದೊಲ್ ಎಂಬ ಪ್ರಯೋಗಗಳು ಸರಿಯೆ? ಲತಾಂಗಿಯೊಲ್-ತಪ್ಪು,ಲತಾಂಗಿಯವೊಲ್-ಸರಿ,ಲತಾಂಗಿವೊಲ್ ಸರಿಯೆ ? ಭಸ್ಮಮಾಗದವೊಲ್ ಎಂದಾಗಬೇಕೆ ಅಥವಾ ಭಸ್ಮಮಾಗದೊಲ್ ಸರಿಯೆ?

  26. ಭೂಮಿಯುಳಿದು ಮೇಣೆಲ್ಲ ದಿಕ್ಕಿಗಂ ತಿರುಗಿಪಾರ್ವುದಿಂತೀ
    ವ್ಯೋಮಪಟಮೆಲ್ಲಮೇಕದಿಶೆಗೈವ ವಾಯುವಶದೊಳಿದ್ದುಂ|
    ಕಾಮ-ಕಾಮಿನಿಯ-ನಾಮ-ಭೂಮಿಗಳನರಸುತಿರ್ಪ ನರನೊಲ್
    ನೇಮನಡೆಸುವನೆ ಲಕ್ಷ್ಯಮೊಂದೆನುತೆ ಸಾರೆ ವೇದವಾಕ್ಯಂ||

    ಏಕದಿಶೆಗೈವ> ಐವ=ಐದುವ ಎಂದಾಗುತ್ತದೆಯೆ?

    • ಪ್ರಸಾದರೆ,ಪದ್ಯದ ಭಾವ ಚೆನ್ನಾಗಿದೆ. ದಯಮಾಡಿ ಛಂದಸ್ಸನ್ನು ಹೆಸರಿಸಿರಿ. ನರನೊಲ್ ಎಂಬ ಪ್ರಯೋಗ ಸಾಧುವಾಗುವುದೆ?

      • ೩-೫ರ ಸಂತುಲಿತಮಧ್ಯಾವರ್ತಗತಿ. ಒಲ್, ಒಲು, ಓಲ್, ಓಲು, ವೊಲ್, ವೊಲು, ವೋಲ್ (ಕಿಟ್ಟೆಲ್‍ನಲ್ಲಿ ’ವೋಲು’ ಇಲ್ಲ!) – ಈ ಎಲ್ಲ ಪ್ರಯೋಗಗಳೂ ಇವೆ. ಹಾಗಾಗಿ ನರನ+ಒಲ್=ನರನೊಲ್ ಎಂದು ಬಳಸಿದ್ದೇನೆ. ತಿಳಿದವರು ಸರಿಹೇಳಬೇಕೆಂದು ಕೋರಿಕೆ.

        • ತಿಳಿದವರು ನನಗೆ ತಿಳಿಸಿದಂತೆ,’ನರನವೊಲ್’ ಎಂಬುದು ಶುದ್ಧಪ್ರಯೋಗವೆಂದು ನಿಮಗೆ ತಿಳಿಸಲು ಬಯಸುತ್ತೇನೆ. ಇನ್ನೂ ಕೆಲವು ಸವರಣೆಗಳು ನಿಮ್ಮ ಪದ್ಯದಲ್ಲಿ ಆಗಬೇಕಿವೆ 🙂

        • ನರನೊಲು – ಇದನ್ನು ಸವರಿಸುತ್ತೇನೆ. ದಯವಿಟ್ಟು ಇತರ ದೋಷಗಳನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. ತಿದ್ದುಕೊಳ್ಳಲು ಸುಲಭಾಮಾರ್ಗ ಅದೇ.

  27. ಆಚರಣದೊಳು ಬಾನಿನಾಚೆಗೆ
    ಗೋಚರಿಸುದುದು ಬಗೆಯ ಬಾಲಂ-
    ಗೋಚಿಯೊಡೆ ಗಾಳಿಪಟದಾರೋಹಣಕದಾವರಣಂ ।
    ರೋಚಕಮಿದುವು ಬಾಗಿದಂಚದು,
    ದೋಚಿದುದು ಚಾಚಿಂತುಮೆಲ್ಲರ,
    ಯೋಚಿಸಿರೆ ತೋಚುದುದು ರೇಚಕವಿಂತುವಾಗಮನಂ !!

    “ಚ”ಕಾರದಲ್ಲಿ ಗಾಳಿಪಟದ ಚಲನ-ವಲನ !!

  28. ವಿಶ್ವಾಮಿತ್ರನದಾಯಿತು, ಈಗ ನ್ಯೂಟನ್ನನ ಸರದಿ! (ಪ್ರಾಸಗಳು ಏಕೊ ಸ೦ಶಯಾಸ್ಪದವೆನಿಸುತ್ತಿವೆ; ತಪ್ಪಿದ್ದರೆ ದಯವಿಟ್ಟು ತಿದ್ದಿ..)

    ಆ ನ್ಯೂಟನ್ ವರ್ಯನಿಗ೦
    ಮಾನ್ಯ೦ ದಲಿದೆ೦ದು ತೋರ್ದುದಾ ಬಾ೦ಧವ್ಯಾ-
    ನ್ಯೋನ್ಯತೆಯು೦ ವರ್ಣ೦ಗಳ,
    ಜನ್ಯತೆಯಿ೦ ಕಣ್ಗೆ ತೋರ್ಪಿದೊ೦ದು ಬೆಳಕಿನಿ೦

    • ಶರಭಪ್ರಾಸಯುಕ್ತವಾದ ’ಯ’ಕಾರಪ್ರಾಸ. ಏನೂ ದೋಷವಿಲ್ಲ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)