Feb 022015
 

ಚತುರ್ಮಾತ್ರಾ ಚೌಪದಿಯ ಕೆಳಗಿನ ಸಮಸ್ಯೆಯನ್ನು ಪರಿಹರಿಸಿ

‘ಕಮಲಮನಿಚ್ಛಿಸದಲಿಪೋತಂ’

ಅಲಿಪೋತಂ – ಎಳೆದುಂಬಿ

  111 Responses to “ಪದ್ಯಸಪ್ತಾಹ ೧೩೬: ಸಮಸ್ಯಾಪೂರಣ”

  1. ಭ್ರಮೆಯಿಂ ಪುಸಿಪೂಗಳಬಳಿ ಬರುತೆ
    ಶ್ರಮದಿಂ ಮಧುವಂ ಪುಡುಕಿರಲು|
    ಘಮಘಮಿಸುವ ವಾಸನೆಯಿಲ್ಲದಿರಲ್
    ಕಮಲವನಿಚ್ಚಿಸದಲಿಪೋತಂ|

    this is about a plastic Flower

    • ಚೇದಿಯವರೆ,
      …… ಬರುತೆ
      ಶ್ರಮದಿ೦ ….
      ಎ೦ಬಲ್ಲಿ ತೆ ಗುರು ಆಗುವುದಿಲ್ಲ ಎನ್ನಿಸುತ್ತದೆ. ಉದಾ: ಪರಿಶ್ರಮ ಎ೦ಬಲ್ಲಿ ರಿ ಗುರು ಆಗುವುದು.

      ಹಾಗೂ ಬಹುಶಃ ಇಲ್ಲಿ ಕ್ರಿಯಾಪದವೆ ಕಾಣಿಸುತ್ತಿಲ್ಲ.

      • ನೀಲಕಂಠರೇ, ಕನ್ನಡದಲ್ಲಿ ಪ್ರತಿ ಪದದ ನಂತರ ಯತಿ ಬರುವುದಾದರೂ, ಶಾಸ್ತ್ರೋಕ್ತವಾಗಿ ಓದುವುದಾದರೆ ಅಕ್ಷರದ ಮುಂದಿನ ಅಕ್ಷರ ಸಂಯುಕ್ತಾಕ್ಷರವಾಗಿದ್ದಲ್ಲಿ , ಪ್ರಾಸನಿಯಮದ ಪ್ರಕಾರ ಹಿಂದಿನ ಅಕ್ಷರಕ್ಕೆ ಗುರು ಬಂದೇ ತೀರುತ್ತದೆ…”ಬರುತೆ” ಎಂಬಲ್ಲಿ ನೀವು ನಿಲುಗಡೆ ತರುತ್ತಿರುವುದರಿಂದ ನಿಮಗೆ ‘ತೆ’ ಲಘುವಾದಂತೆ ಅನ್ನಿಸುತ್ತಿರಬಹುದಷ್ಟೇ.. 🙂

        ಆದರೂ ಚೀದಿಯವರೆ, ವಾಸನೆಯಿಲ್ಲದಿರಲ್ ಹಾಗೂ ಪುಡುಕಿರಲು.. ಇವೆರಡು ಪ್ರಯೋಗಗಳಲ್ಲಿ, ಎರಡನೆಯದರಲ್ಲಿ ಬಿಗಿತನ ಕೊಂಚ ಹೋಗಿರುವುದಲ್ಲವೇ…

        • ‘ಪ್ರಾಸನಿಯಮ’ವಲ್ಲ – ‘ಗಣಪ್ರಸ್ತಾರ’ ನಿಯಮ

        • ಹೌದು… ನನಗೂ ಅನ್ನಿಸಿತು.. ಭಾಷೆ ಸಡಿಲವಾಯಿತು… ಮತ್ತೊಂದ ಬರೆಯುವೆ…Thanks for corrections..

          • ಚೀದಿ, ಹುಸಿಹೂಗಳಲ್ಲಿ ಮಧುವನ್ನು ಹುಡುಕಿ ಆಯಾಸಗೊಂಡು ನಿರಾಸೆಯಿಂದ ತೆರಳಿದ ಅಲಿಯ ಪದ್ಯ ಚೆನ್ನಾಗಿದೆ, ಆದರೆ ಹೃದಯರಾಮರು ಹೇಳಿದ್ದನ್ನು ಸವರಿಸಿದರೆ ಇನ್ನೂ ಚೆನ್ನ 🙂

        • Ok, 🙂 ನಿಯಮವೇನೊ ಇರಬಹುದು. ಆದರೂ ಸಮಾಧಾನ ಆಗುತ್ತಿಲ್ಲ..

          • ನೀಲಕಂಠರಿಗೆ ಅಸಮಾಧಾನವಾದರೂ ಹೃದಯರಾಮರ ಅಭಿಪ್ರಾಯವನ್ನೇ ಶಾಸ್ತ್ರವು ಸಮರ್ಥಿಸುತ್ತಿದೆಯೆಂದು ಸವಿಷಾದವಾಗಿ ಹೇಳಬೇಕಿದೆ:-) ಶಿಥಿಲದ್ವಿತ್ವವೆಂಬ ಎರಡನೆಯ ಸ್ತರದ ನಿಯಮವನ್ನು ಗಣಿಸಿದಾಗ ಮಾತ್ರ ನೀಲಕಂಠರ ನಿಲವು ಸರಿಯಾಗುವುದು. ಆದರೆ ಶಿಥಿಲದ್ವಿತ್ವವು ಕವಿಗಳ ಅನುಕೂಲತೆಗೆ ತಕ್ಕಂತೆ ತನ್ನ ಅಸ್ತಿತ್ವ-ನಾಸ್ತಿತ್ವಗಳನ್ನು ಹೊಂದುವುದು.
            ಹೃದಯರಾಮರೆಂದಂತೆ ಚೀದಿಯ ಪದ್ಯದಲ್ಲಿ ಹಳಗನ್ನಡದ ಹೊಗರು ಸ್ವಲ್ಪ ಜಾರಿದೆ.

    • ಚೀದಿಯವರೆ,

      ನಿಮ್ಮ ಪದ್ಯದ ಕಲ್ಪನೆ ಸೊಗಸಾಗಿದೆ. ನನ್ನ ಕೆಲವು ಸಂದೇಹಗಳು: ಪುಸಿಯಾದ ಪೂ ಎಂಬುದು ಸಮಾಸವಾಗಿ ಪುಸಿವೂ ಆಗುತ್ತದೆಯಲ್ಲವೆ? ಪುಸಿವೂ ಎಂಬುದಕ್ಕಿಂತಲೂ ಕೃತಕಸುಮವು ಹೆಚ್ಚು ಸೂಕ್ತವೇನೋ. ಪುಡುಕಿರಲು ಎಂಬುದು ಶೋಧಿಸಿರಲ್ ಆದಾಗ ಛಂದಸ್ಸಿನ ಸಮಸ್ಯೆ ನಿವಾರಣೆಯಾಗುವುದು.ವಾಸನೆಯೆಂಬುದು ಸರಿಯಾದರೂ ಪರಿಮಳವು ಹೆಚ್ಚು ಸೂಕ್ತವೇನೋ(ಲಘುಗಳು ಜಾಸ್ತಿಯಾಗುವುದಾದಲ್ಲಿ,ವಾಸನೆಯೇ ಲೇಸು) .ಈ ಕೆಳಗಿನಂತೆ ಪದ್ಯವನ್ನು ಸವರಬಹುದೇ?

      ಭ್ರಮೆಯಿಂ ಕೃತಕಸುಮಂಗಳನೈದಿರೆ,
      ಶ್ರಮದಿಂ ಮಧುವಂ ಶೋಧಿಸಿರಲ್,|
      ಗಮಗಮಿಸುವ ಪರಿಮಳಮಿಲ್ಲದಿರಲ್,(ಗಮಗಮಿಸುವ ವಾಸನೆಯಿಲ್ಲದಿರಲ್,)
      ಕಮಲಮನಿಚ್ಛಿಸದಲಿಪೋತಂ ||

    • …………………ಪೂಗಳಸಾರುತ್ತುಂ
      …………………. ಪುಡುಕುತ್ತುಂ|
      ..ಘಮಿಪಸುವಾಸನೆ………..

      ಪರಿಮಳದ ಆಕರವು ಹೂವಿನ ಪರಾಗ; ರುಚಿಯ ಆಕರವು ಅದರ ಮಕರಂದ. ಪರಾಗದ ಪರಿಮಳದಿಂದಲೋ ಸುಮವಿನ್ಯಾಸದಿಂದಲೋ ಆಕರ್ಷಿತವಾಗಿ ಕೀಟವು ಬಂದು ಮಕರಂದವನ್ನು ಹೀರಿಕೊಳ್ಳುತ್ತದೆ.
      ನಿಮ್ಮಯ ತುಂಬಿಯು ಸುಮವಿನ್ಯಾಸವ
      ನೆಮ್ಮಿಹುದಲ್ಲವು ಪರಿಮಳಮಂ|
      ಸುಮ್ಮನೆ ನೋಡಲು ಸಾರುತೆ ಪೂವನು
      ಹಿಮ್ಮೆಟ್ಟಿಹುದೈ ಬಂದವೊಲೇ|| 🙂

  2. ಕಮಲವನಿಚ್ಚಿಸದಲಿಪೋತಮಿಹುದೆ
    ಸುಮರಾಜ್ಯದೊಳಗೆ ಸುಖದಿಂದಂ?
    ಕಮಲಿನಿಯಂ ಬೇಳದ ತಾವರೆಯಿ-
    ರ್ಕೆ? ಮಹಿಯ ಗರ್ಭದೆ ನಲವಿಂದಂ!

    • ಬಹಳ ಚೆನ್ನಾಗಿದೆ ಪದ್ಯ, ಸಮಸ್ಯೆಯನ್ನೇ ಹೀಗಿರಲು ಸಾಧ್ಯವಿಲ್ಲವೆಂಬ ಎರಡು ದೃಷ್ಟಾಂತದಲ್ಲಿ ಒಂದಾಗಿ ಬಳಸಿರುವ ಜಾಣ್ಮೆ ಚೆನ್ನ 🙂

  3. ಪ್ರಮದೆಯ ಮುಖ, ಕವಿಗಳಿಗಷ್ಟೇ ಕಮಲ!!. ಎಳೆದುಂಬಿಯೂ ಅದು ಕಮಲವೆಂದು ಭ್ರಮಿಸಿ ಹೋದದ್ದೇನೋ ನಿಜ ಆದರೆ ಹೂವಿನ ಸುವಾಸನೆಯೇನೂ ಅಲ್ಲಿರಲಿಲ್ಲ, ಹಾಗಾಗಿ ಆ ಮುಖ ಕಮಲವನ್ನು ಬಿಟ್ಟು , ಕೊಳದೊಳಗಿನ ಕಮಲವನ್ನೇ ಅರಸುತ್ತ ಹೋಯಿತು..

    ಪ್ರಮದಾಮುಖಾಂಬುರುಹದಿಂ
    ದಮರದ ಪೂಗಂಪು ಸತ್ಯಮಂ ಬಿಡದರಿಪಲ್ |
    ಕಮಲಮನಿಚ್ಚಿಸದಲಿಪೋ-
    ತಮರಸಿ ಸಾರ್ದುದು ನಿಜಾಂಬುರುಹಮಂ ಕೊಳದೊಳ್. ||

    ಅಮರು – ಒದಗಿಬರು, ಗಾಢವಾಗಿ ಕಂಡುಬರು

    • ಉತ್ತಮವಾದ ಶೈಲಿಯಲ್ಲಿ ಸಮಸ್ಯೆಯ ಸಾಲನ್ನು ಕಂದಕ್ಕೆ ಹೊಂದಿಸಿರುವುದು ಚೆನ್ನಾಗಿದೆ ಹೃದಯರಾಮರೆ.

      ಬಿಡದರಿಪಲ್ ಎಂದು ಹೇಗಾಗುತ್ತದೆ?

      • ಸೊಗಸಾದ ಪೂರಣ. ಸೋಮನೆಂದಂತೆ ಕಂದಕ್ಕೆ ಹೊಂದಿಸಿದ ಪರಿ ನಿಜಕ್ಕೂ ಅಂದ. ಪ್ರಿಯ ಸೋಮ! ಬಿಡದೆ+ಅರಿಪಲ್ (ತಿಳಿಸಲ್) ಎಂದು ಸಂಧಿ. ಇದು ವ್ಯಾಕರಣಶುದ್ಧರೂಪ. ಸಂದೇಹ ಬೇಡ:-)

    • ’ನಿಜ’ ಎಂದರೆ ’ಸ್ವಂತ’. ….. ಯಥಾರ್ಥಕಜಮಂ ಕೊಳದೊಳ್ ಎಂದು ಸವರಬಹುದೇನೋ.

  4. ಕಮಲಾನನೆಯುಂ ವಿಪಿನಕೆ ಪೋದೊಡೆ
    ಕಮರಿತೆ ತೋಷಮದೆಲ್ಲೆಡೆಯುಂ!
    ಕಮಲವನಿಚ್ಚಿಸದಲಿಪೋತಂಗಳ್
    ಸಮದು:ಖಮನೇ ತೋರಿದವೇ!

    • ಆಹಾ ಕಮಲವನ್ನೇ ಮೀರಿಸಿದ ಕಮಲಾನನೆಯ ಅಗಲಿಕೆಯಲ್ಲಿ ಕಮಲಗಳನ್ನು ಇಚ್ಛಿಸದ ತುಂಬಿಯ ಪದ್ಯ ಬಹಳ ಚೆನ್ನಾಗಿದೆ

  5. Scientistನ ಪೂರಣ

    ಕ್ರಮದಿಂ ಗೆಯ್ಯುತೆ ಸುಮಕಪರಪರಾ-
    ಗಮನಿಡೆ ಧಾನ್ಯಂ ಫಲಮಲ್ತೇ
    ಸುಮಶರನುಪಟಳಮೇಂ ಗಡ? ನೇಹದೆ
    ಕಮಲಮನಿಚ್ಛಿಸದಲಿಪೋತಂ
    ಸುಮಕಪರಪರಾಗಮನಿಡೆ = ಸುಮಕೆ ಅಪರ ಪರಾಗಮನಿಡೆ

    ಧೃವ ಪ್ರದೇಶದ ಕವಿಯ ಪೂರಣ, ಹೂ ಬಿಡದ (Gymnosperm) ಮರಗಳನ್ನು ಕಂಡಾಗ

    ದ್ರುಮದುತ್ತರಧೃವದಕ್ಷಿಣಧೃವದೊಳ್
    ಸುಮಮಿರದೆನೆ ಫಲಮೊಡೆದಪುದಯ್
    ಕಮನಿಸೆ ಕವಿಸಮಯಮನುಳಿವೆಂ ಗಡ
    ಕಮಲಮನಿಚ್ಛಿಸದಲಿಪೋತಂ

    ಲಕ್ಷ್ಮಿ, ಬ್ರಹ್ಮರ ಚಿತ್ರಪಟವನ್ನು ಕಂಡಾಗ:

    ರಮೆಯಂ ಮೇಣ್ ಬ್ರಹ್ಮನನೊರೆದಪ ಚಿ-
    ತ್ರಮನೊರ್ವಂ ಗಡ ಬಣ್ಣಿಪನಯ್
    ಸುಮಮಿರ್ದೊಡಮೇಂ ಪೆರ್ಮೆಗೆ ನೋಂತಾ
    ಕಮಲಮನಿಚ್ಛಿಸದಲಿಪೋತಂ

    ಗ್ರಹಣದ ಪೂರಣ:

    ಸುಮನಿನನಂ ಗ್ರಹಣದೆವಿಡಿಯಲ್ ಕೃ-
    ತ್ರಿಮಛಾಯೆಯ ದುಂಬಿಯದರರೇ
    ಕ್ರಮಿಸಲ್ ಬೇರೆಯ ಪಥಮನುಲಿಪೆನಾಂ
    ಕಮಲಮನಿಚ್ಛಿಸದಲಿಪೋತಂ

    • ಪೂರಣಗಳ ನಾವೀನ್ಯ ಮೆಚ್ಚುವಂತಿದೆ. ಒಂದೆರಡು ನುಡಿಜಾಡಿನ ತಿದ್ದುಗೆಗಳು ಮಾತ್ರ ಬೇಕಿವೆ.
      ಧ್ರುವ ಎಂದೇ ಸಾಧುರೂಪ. ಧೃವವಲ್ಲ. ಹೀಗಾಗಿ ಸಮಾಸದ ನಡುವೆ ಶಿಥಿಲದ್ವಿತ್ವವಿಲ್ಲದ ಕಾರಣ ಮೊದಲ ಪದ್ಯದಲ್ಲಿ ಸವರಣೆ ಬೇಕು. ಕಮನಿಸೆ ಎಂದರೆ ಏನು? ಉಲಿವೆನಾಂ ಎಂಬುದು ಸಾಧುರೂಪ.

  6. ಧಮನಿಗೆ ಕಾವನುಮೀಯದೆ ತಂಬುಲ
    ವಮನವ ತರುವೊಲ್ ಮೊದಮೊದಲು|
    ಭ್ರಮರವರಿಷ್ಠನೆನಿಸಿ ಪಳಗದೆಲಾ
    ಕಮಲಮನಿಚ್ಛಿಸದಲಿಪೋತಂ||
    ———
    ದಾಸವಾಳಗಳ (ಸ್ಥಲಕಮಲ Hibiscus Mutabilis ) ಹಲವಾರು ವರ್ಣವೈವಿಧ್ಯಗಳ ಪೈಕಿ ಕಮಲ/ನೈದಿಲೆಗಳ ಮೂರು (ಬಿಳಿ-ನೀಲಿ-ಕೆಂಪು) ಬಣ್ಣಗಳೂ ಇವೆ. ಎಂದ ಮಾತ್ರಕ್ಕೆ ದುಂಬಿಗಳು ದಾಸವಾಳವನ್ನು ಮುತ್ತುವುವೆ?
    ಕುಮುದವ ಮೇಣ್ ನೈದಿಲೆಗಳ ಸವಿವುದು
    ಸುಮವಿರೆ ಬಿಳಿ-ನೀಲಿಯು-ಕೆಂಪುಂ|
    ಗಮಗಮಿಸಿಯುಮದೆ ಛವಿಯಿದ್ದುಂ ಸ್ಥಲ-
    ಕಮಲಮನಿಚ್ಛಿಸದಲಿಪೋತಂ||

    • ಎರಡನೆಯ ಪೂರಣದ ಪರಿಯು ತಿಳಿಯುತ್ತಿರುವ ಕಾರಣ ಅದರ ಸೊಗಸು ಆಸ್ವಾದ್ಯವಾಗಿದೆ. ಆದರೆ ಮೊದಲ ಪದ್ಯದ ಅರ್ಥವು ತಿಳಿಯಲಿಲ್ಲ.

      • ನಾವು ಮೊದಮೊದಲು ಎಲೆಯಡಿಕೆ ಸೇವಿಸಿದಾಗ, ವೆಗಟಾಗಿ ವಮನವಾಗುತ್ತದೆ. ಬರಬರುತ್ತ ಅಭ್ಯಾಸವಾಗುತ್ತದೆ ಮಾತ್ರವಲ್ಲ ಅಸ್ವಾದ್ಯವಾಗುತ್ತದೆ. ದುಂಬಿಯು ಇನ್ನೂ ಎಳೆಯದಾದುದರಿಂದ ಕಮಲದ ದಂಟು ಇಷ್ಟವಾಗುಲ್ಲ. ಸ್ವಲ್ಪ ಪಳಗಿದ ಮೇಲೆ ಇಷ್ಟವಾಗುತ್ತದೆ.

        • ಕಮಲದ ದಂಟನದಾವ ತುಂಬಿ ಕೇಳ್
          ರಮಿಸಿ ಬಯಸಿದಪುದಯ್ ಗೆಳೆಯ!
          ವಿಮಲಮರಂದನಿಪಾನಲುಬ್ಧಮೆಂ-
          ದಮರಿದ ಕವಿಸತ್ತೆಗೆ ಬಾಗಯ್||

  7. ಕಮರಿರ್ದೊಡಮಾ ಕಮಲವ ಸವಿವುದು
    ಭ್ರಮರಕಪಥ್ಯವದಿನ್ನೆಲ್ಲಂ|
    ಶಮನವದೆಂತೆಲೆ ಹಸಿವಿನ? ಪ್ರಚ್ಯುತ-
    ಕಮಲಮನಿಚ್ಛಿಸದಲಿಪೋತಂ||
    (ಪ್ರಚ್ಯುತಕಮಲ – A lake that has lost all its flowers)

  8. This samasyaa can be turned to Sanskrit as well:

    ” भृङ्गो नेच्छति नीरजम् ”

    सीताविरहविभ्रान्तं दर्शं दर्शं रघूद्वहम्।
    सहानुभूतिसंपन्नो भृङ्गो नेच्छति नीरजम्॥

    ವಿಮಲದಯಿತೆ ಸೀತೆಯ ವಿರಹವ್ಯಥೆ-
    ಯಮಮ ಬೇಯಿಸಲ್ ರಘುವರನಂ|
    ಸುಮಹತ್ಸಹಾನುಭೂತಿಯ ಬಗೆಯಿಂ
    ಕಮಲಮನಿಚ್ಛಿಸದಲಿಪೋತಂ||

    (ಈ ಕನ್ನಡಾನುವಾದದಲ್ಲಿ ಸೋದ್ದಿಷ್ಟವಾಗಿಯೇ ಗಣಪರಿವರ್ತನೆಯ ಮೂಲಕ ಸಂತುಲಿತಮಧ್ಯಾವರ್ತಗತಿಯನ್ನು ತಂದಿದ್ದೇನೆ. ಇದನ್ನು ಮಂದಾನಿಲರಗಳೆಯ ನಡುವೆ ರಾಘವಾಂಕಾದಿಗಳು ಪ್ರಯೋಗಿಸಿ ಮಾರ್ಗದರ್ಶಕರಾಗಿದ್ದಾರೆ. ದಯಮಾಡಿ ಪ್ರಶ್ನಾರ್ಥಕವಾಗಿ ಹುಬ್ಬೇರಿಸುವವರು ಸಾವಕಾಶವಾಗಿ ಅದನ್ನು ಇಳಿಸಿ ತನ್ಮೂಲಕ ನಾಟ್ಯವಿಲಾಸವಿಭ್ರಮವನ್ನು ಬಿಂಬಿಸಬೇಕಾಗಿ ಬೇಡಿಕೆ:-)

    • ಸೀತಾಪರಿತ್ಯಾಗದ ನಂತರದ ರಾಮನ ಪರಿಸ್ಥಿತಿಗೆ ದುಂಬಿಯನ್ನು ಹೋಲಿಸಿದ ಪದ್ಯ ಬಹಳ ಚೆನ್ನಾಗಿದೆ ಗಣೇಶ್ ಸರ್, ನಾನೂ ಇದೇನಪ್ಪ ಎಂದು ಪ್ರಶ್ನಾರ್ಥಕವಾಗಿ ಹುಬ್ಬೇರಿಸಿದ್ದೆ :), ನಿಮ್ಮ ಟಿಪ್ಪಣಿಯನ್ನು ನೋಡಿದಮೇಲೆ ನಿಮ್ಮೊಡಣೆ ಈ ಗಣಪರಿವರ್ತನೆಯ ಬಗ್ಗೆ ತಿಳಿಯಬೇಕೆನ್ನಿಸಿತು.

    • ಸವಿವರವ ಸವನಿಸಿದ ಕವನವಿದು, ಸವಿಯಾಯಿತವಿಯಲಿನವೊಲ್ 🙂

    • ಸರ್, ಅದೇನು ತಮ್ಮ ಕಲ್ಪನೆಯ ಗಾಢತೆಯೋ! ಕವನಿಸುವಿಕೆಯ ತೀವ್ರತೆಯೋ!! ತಾವು ಪೋಷ್ಟ್ ಮಾಡಿದ ಅದೇ ನಿನ್ನೆ ರಾತ್ರಿ ೧೨ ಕ್ಕೆ ನನಗೆ ಇದೇ ರಾಮ ಸೀತೆ ಭೃ೦ಗದ ಕಲ್ಪನೆ ಬ೦ತು. ಆದರೆ ಆ ಕಲ್ಪನೆಯ ಗಿಳಿಯನ್ನು ತತ್‌ಕ್ಷಣ ಹಿಡಿದಿಡುವ ಪ್ರತಿಭಾಪ೦ಜರ ಬೇಕಲ್ಲ!!! 🙂

      • ಕಾಂಚನ ಅವರಿಗೂ ನೀಲಕಂಠರಿಗೂ ಧನ್ಯವಾದಗಳು.

        ಪ್ರತಿಭಾಪಂಜರಮಿರ್ದೊಡ-
        ಮತಿನಿಶ್ಚಲನಿತ್ಯಕವನರಚನಫಲಂಗಳ್|
        ಜತೆಯಾಗದೆ ನವರಸನಿ-
        ರ್ಮಿತಿಕೀರಂ ದಕ್ಕದಲ್ತೆ ಸತ್ಕವಿಮಿತ್ರಾ!

        • ಹೌದು ಸರ್, ನಿಜ! ನಮ್ಮ ನಿತ್ಯದ ಸಾಧನಾ ಫಲ ಇಲ್ಲದಿದ್ದರೆ ಏನೂ ದಕ್ಕುವುದಿಲ್ಲ… ಅದೇ ತಪಸ್ಸಿನ ಮಹಿಮೆ ಅಲ್ಲವೆ!!

  9. ಕಮಲದ ಮಕರಂದಕೆ ಸೋಲುತ ತಾ
    ನಮಲೇರುತ ಮನ ಸೆಳೆಯುತಿರೆ
    ಕಮಲಸಖನು ಮುಳುಗಿರೆ ಬೆದರುತಲಿದೆ
    ಕಮಲಮನಿಚ್ಛಿಸದಲಿಪೋತಂ

    ಮದ್ಯಪಾನದ ಚಟವ ಬಿಡಿಸೆ ವರುಷವು ಸಾಕು
    ಪದ್ಯಪಾನದ ಚಟಕದೆಷ್ಟು ಕಾಲಂ?
    ಮದ್ಯ ಮರೆತವ ಮರೆವನಾ ಗಡಂಗಿನ ದಾರಿ
    ಪದ್ಯದವ ತಲೆಯೊಲೆಯುತಿಲ್ಲೆ ಬರ್ಪಂ!

    ಪಲಕಾಲಂ ನೆರೆ ಸಂದುದೈ ಬರದೆಲೀ ಪದ್ಯಾಂಗನಾವಾಟಿಗಂ
    ಬಲದಿಂ ಜಗ್ಗುತ ಕಾರ್ಯಭಾರ ಬಗೆಯಂ ಕಟ್ಟಿಟ್ಟು ತಾಂ ಕಾಡಿರಲ್
    ಜಲದಿಂ ಚಿಮ್ಮಿದ ಮೀನು ಮತ್ತೆ ನೆಗೆದಂತಾಯ್ತೈ ಜಲಕ್ಕೀ ಕ್ಷಣಂ
    ಕೆಲಕಾಲಂ ನೆರೆ ಕಂಡು ಪೋಪುದೆನೆ ಬಂದೆನ್ ಕ್ಷೇಮಮೇಂ ಮಿತ್ರರೇ?

    • ಬಹುದಿನಗಳ ಬಳಿಕ ಪದ್ಯಪಾನಕ್ಕೆ ಬಂದು ಒಳ್ಳೆಯ ಪೇಯವನ್ನು ನೀಡಿದ ಮಂಜುನಾಥರಿಗೆ ವಂದನೆ. ಕುಶಲವಷ್ಟೆ? ನಿಮ್ಮ ಪದಸಂಸ್ಮರಣವು ಕೈಸೇರಿ ಸಂತಸವಾಯಿತು. ಧನ್ಯವಾದಗಳು.

      • ಧನ್ಯವಾದ ಗಣೇಶರೇ, ಪದಸಂಸ್ಮರಣದೊಂದಿಗೆ ನಾನೇ ತಮ್ಮನ್ನು ಭೆಟ್ಟಿಯಾಗಬೇಕೆಂದು ತೆಗೆದಿಟ್ಟುಕೊಂಡೆ, ಆದರೆ ದುರದೃಷ್ಟವಶಾತ್ ಆರೋಗ್ಯ ಕೈ ಕೊಟ್ಟಿತು 🙁

        ಸಧ್ಯಕ್ಕೆ ಮನೆಯಲ್ಲಿದ್ದೇನೆ. ಮೊನ್ನೆ ಮೈಸೂರಿನಲ್ಲಿ ತಮ್ಮ ಅವಧಾನ ಕಾರ್ಯಕ್ರಮವಿದ್ದುದು ತಿಳಿಯಿತು. ಬರಲಾಗಲಿಲ್ಲವೆಂದು ಬೇಸರವಾಯಿತು. ಸ್ವಲ್ಪ ಸುಧಾರಿಸಿದಮೇಲೆ ಬೆಂಗಳೂರಿಗೆ ಬರುತ್ತೇನೆ.

  10. ನಮಸ್ಕಾರ ಮಂಜುನಾಥರೆ :), ಏನು ಇಷ್ಟೊಂದು ಅಪರೂಪವಾಗಿಬಿಟ್ಟರೆ, ದುಂಬಿಗೆ ಮಕರಂದದ ಆಸೆಯಿದ್ದರೂ ನಿಶೆಗೆ ಹೆದರಿ ಹಿಮ್ಮೆಟ್ಟಿದ ಪೂರಣ ಚೆನ್ನಾಗಿದೆ

    • ಹೋ ನಮಸ್ಕಾರ ಸೋಮ, ಹೇಗಿದ್ದೀರಿ. ಕೆಲವು ದುಂಬಿಗಳು ಮಕರಂದದ ಆಸೆಯಿದ್ದರೂ ಹಿಮ್ಮೆಟ್ಟುತ್ತವೆ, ಮತ್ತೆ ಕೆಲವು ಗಾಳಿಯ ಹೊಡೆತಕ್ಕೆ ಎತ್ತೆತ್ತಲೋ ತೂರಿಹೋದರೂ ಮಕರಂದದ ಆಸೆಗೆ ಆಗೀಗ ತಿರುಗಿ ಬರುತ್ತವೆ. ನಾನು ಬಂದದ್ದು ಹಾಗೆ 🙂

  11. तावत् प्रीतिः पदार्थेषु यावत् तत्रास्ति रस्यता ।
    निर्मरन्दत्वमापन्नं भृङ्गो नेच्छति नीरजम् ॥

    ಎಲ್ಲಿಯವರೆಗೆ ವಸ್ತುವಿನಲ್ಲಿ ರಸವಿರುವುದೋ ಅಲ್ಲಿಯವರೆಗೆ ಮಾತ್ರ ಅವುಗಳಲ್ಲಿ ನಮಗೆ ಪ್ರೀತಿ. ಮಕರಂದ ಬರಿದಾದ ನಂತರ ಕಮಲವನ್ನು ದುಂಬಿ ಬಯಸುವುದಿಲ್ಲ.

  12. ಮಮ ಮನಮೀ ಚೆಲುವೆಯ ಪೆರೆಮೋರೆಯ
    ಕಮನೀಯತೆಗಂ ಮರುಳಾಯ್ತಯ್ |
    ಸಮಮಿದು, ಲೋಕದೊಳೆಲ್ಲಿರ್ಪುದು ನುಡಿ
    ಕಮಲಮನಿಚ್ಛಿಸದಲಿಪೋತಂ ?
    ಇಚ್ಛಿಸದ – ಅಲಿಪೋತಂ.

    • ಆಹಾ! ಎಂಥ ಸೊಗಸಾದ ಅನೂಹ್ಯಪರಿಹಾರ!!….ಅಭಿನಂದನೆಗಳು.

    • ಇರ್ದಿಹುದಿಲ್ಲಿಯೆ ಪದ್ಯಗಡಂಗೊಳು
      ಹಾರ್ದವಚನವದು ಹಲವೆಡೆಯೊಳ್|
      ಕರ್ದಿ(ದ್ದಿ)ಹಮೇಲೆಲ್ಲಿಹುದೆನ್ನುವಿರೇಂ
      (relish) ಸ್ವರ್ದವ ಗೈದಾನಂತರದೊಳ್?|

  13. ವಿಮಳಿನ ಕೂರ್ಮೆಯ ಪೂಜಕನಂದದೆ
    ಸುಮವೊಂದನೆ ಪೊಗಳಾಡುತಲಿ
    ಕ್ರಮಿಸುತೆ ತಟ್ಟಿತು ಪೂವೊಡಲಂ ಕೊಳ-
    ಕ,ಮಲವ,ನಿಚ್ಚಿಸದಲಿಪೋತಂ||

  14. ಕಮಲಾನನೆಯ ನಿಬಿಡಮಹ ಕು೦ತಲ-
    ದ ಮುಡಿಗಡಣದೊಳ್ ಬೇಡೆ೦ದು
    ಕಮಲಾನ್ಯಮನರಸಿರ್ದುದವಳ ಮುಖ-
    ಕಮಲಮನಿಚ್ಛಿಸದಲಿಪೋತ೦

    (ಒತ್ತಾದ ಕೂದಲ) ಭೃ೦ಗಗಳದೀ ಗದ್ದಲ ಬೇಡೆ೦ದು ಆ (ಅವಳ ಮುಖ)ಕಮಲವನ್ನು ಬಿಟ್ಟು ಬೇರೆ ಕಮಲವನ್ನರಸಿತ್ತು.

    • ತುಂಬಾ ಚೆನ್ನಾಗಿದೆ ನೀಲಕಂಠರೆ..

      ಒಂದು ಸಂದೇಹವಿತ್ತು ಹಲವು ಪ್ರಾಚೀನ ಕವಿಗಳು ಸಾಮಾನ್ಯವಾಗಿ ಮುಂಗುರುಳನ್ನು ದುಂಬಿಗೆ ಹೋಲಿಸಿ ಬರೆದಿದ್ದಾರೆ… ಯಾವ ಕೋನದಿಂದಲೂ ಮುಂಗುರುಳು ದುಂಬಿಯ ಹಾಗೆ ಕಾಣುವುದಿಲ್ಲ.. ನಾನೋ ಹಲವಾರು ವೆಬ್ಸೈಟ್ಗಳನ್ನೆಲ್ಲಾ ಹುಡುಕಿದ್ದೇನೆ, ಯಾವುದಾದರೂ ದುಂಬಿಯ ಜಾತಿ ಹಾಗೆ ಇರಬಹುದೆಂದು. ಆದರೆ ಎಲ್ಲೂ ಸಿಗಲಿಲ್ಲ. ಕೆಲವು ಕೇಶವಿನ್ಯಾಸಗಳು ಜೇನುಗೂಡುಕಟ್ಟಿದಂತೆ ಕಾಣುವುದನ್ನು ಹೊರತುಪಡಿಸಿ ಎಲ್ಲೂ ಆ ಹೋಲಿಕೆ ಕಂಡು ಬರದು.. ಈ ಬಗ್ಗೆ ಯಾರಾದರು ಸರಿಯಾದ ಮಾಹಿತಿ ಕೊಡುವಿರೆ?

      • ಧನ್ಯವಾದಗಳು ಹೃದಯರಾಮರೆ! ನನಗೆ ಬರುವ ಕಲ್ಪನೆ ಏನೆ೦ದರೆ, ಕಪ್ಪಾದ ಸುತ್ತಿಕೊ೦ಡ ಮು೦ಗುರುಳು ಗಾಳಿಗೆ ಹಾರುತ್ತಿದ್ದರೂ ಆಕೆಯ ಮುಖಕಮಲದ ಮೇಲೆಯೇ ಇರುತ್ತವೆ. (ದೂರ ಹಾರಿ ಹೋಗುವುದಿಲ್ಲ). ದು೦ಬಿಯೂ ಹಾರುತ್ತಿರುವ೦ತೆ ಕ೦ಡರೂ ಇದ್ದಲ್ಲಿಯೇ ಇರುತ್ತದೆ… 🙂

      • ಹೃದಯರಾಮರೇ! ಗುಂಗುರುಗುಂಗುರಾದ ಮುಂಗುರುಳಿನ ಸುರುಳಿಗಳಿಗೆ ಮಾತ್ರ ತುಂಬಿಗಳ ಹೋಲಿಕೆ ನೀಡುತ್ತಾರೆ. “ಅಲಕಾಶ್ಚೂರ್ಣಕುಂತಲಾಃ” ಎಂದು ಅಮರಕೋಶದ ಒಕ್ಕಣೆ. ಮುಂದಲೆಗೂ ಅಲ್ಲಿಯ ಪುಡಿಗೂದಲಿಗೂ ಇದು ಸಲ್ಲುತ್ತದೆ. ನೀವು ಬೇಲೂರು, ಕುರವತ್ತಿ, ಅಜಂತೆಗಳಂಥ ಕಲಾಕ್ಷೇತ್ರಗಳ ಶಿಲ್ಪ-ಚಿತ್ರಗಳಲ್ಲಿಯೂ ನಮ್ಮ ಕರಾವಳಿಯ ಯಕ್ಷಗಾನದ ಸ್ತ್ರೀವೇಷಗಳಲ್ಲಿಯೂ ಈ ಬಗೆಯಲ್ಲಿ (ತುಂಬಿಗಳನ್ನು ಹೋಲುವ) ಮುಂಗುರುಳನ್ನು ಕಾಣಬಹುದು. ಈ ಹೋಲಿಕೆಯು ಕವಿಲೋಕಪ್ರಸಿದ್ಧ. ಹೀಗಾಗಿ ನೀಲಕಂಠರ ಪದ್ಯರಚನೆಯು ನಿರ್ದುಷ್ಟ.

        • ಎಲ್ಲಕ್ಕಿಂತ ಮಿಗಿಲಾಗಿ ಉಪಮಾನೋಪಮೇಯಭಾವಕ್ಕೆ ಪ್ರತಿಶತ ನೂರಕ್ಕೆ ನೂರರಷ್ಟು ಸಾಮ್ಯವಿರಬೇಕೆಂದಾಗಲಿ, ಉಪಮಾನೋಪಮೇಯಗಳಿಗೆ ಎಲ್ಲ ನಿಟ್ಟಿನಿಂದ ಸಮತ್ವ-ಸಂವಾದಗಳಿರಬೇಕೆಂದಾಗಲಿ ಚಂಡಿಸಲಾಗದು. ಈ ಬಗೆಗೆ ಆಲಂಕಾರಿಕರು ತುಂಬ ಚೆನ್ನಾಗಿ ವಿವೇಚಿಸಿದ್ದಾರೆ. ಆ ಪ್ರಕಾರ ಹೃದಯಂಗಮವಾದ ಏಕದೇಶೀಯ (ಯಾವುದೋ ಒಂದು ಆಕರ್ಷಕಾಂಶದಲ್ಲಿ) ಸಾಮ್ಯವಿದ್ದರೂ ಉಪಮಾನೋಪಮೇಯಗಳ ಹೊಂದಿಕೆಯಾಗುತ್ತದೆ. ಹೀಗಾಗಿಯೇ ಕಮಲಕ್ಕೂ ಮುಖ-ಕಣ್ಣು-ಅಂಗೈ-ಅಂಗಾಲು ಮುಂತಾದುವುಗಳಿಗೂ ತುಟಿಗೂ ತೊಂಡೆಹಣ್ಣಿಗೂ ಹುಬ್ಬಿಗೂ ಬೇವಿನೆಸಳಿಗೂ ಸಾಮ್ಯವೊದಗಿತು. ಪ್ರಕೃತ ಮುಂಗುರುಳಿನ ಅಲೆತ-ಒಲೆತಗಳು, ಕಪ್ಪುಬಣ್ಣ ಹಾಗೂ
          ಗೊಂಚಲಾಗಿ ತೋರುವ ರೀತಿಗಳೆಲ್ಲ ತುಂಬಿಗಳಿಗೆ ಹೋಲುವೆಯಾಗಿವೆಯೆನ್ನಬಹುದು.

  15. ಉದ್ಧಂಡ ಷಟ್ಪದಿಯಲ್ಲಿ ಒಂದು ಪ್ರಯೋಗ

    ಹುರಿಗಟ್ಟಿದನರ ಸೆಟೆಗೊಂಡಿಹಬೆನ್ನರೆ ಮು-
    ಚ್ಚಿರಿಸಿದ ಭಾಸಿತ ಚಕ್ಷುದ್ವಯಂಗಳಿಂ ಜಟೆ
    ನರೆತನವಿರಿನಿಂ ಪದ್ಮಾಸನಪೀಠಸ್ಥಂ ಸವಣಂ ಮನದೊಳೆ ಸೊಲ್ಗುಂ |
    ತಿರಿವರ್ ಜೀವರ್ ಸುಖಭೋಗಂಗಳ ನೆಲೆಯೊಳ-
    ಗರಿಯದೆ ನಿತ್ಯ ಬ್ರಹ್ಮನ ತಮ್ಮೊಳಗಂ ಸಾ-
    ಸಿರದಳ ಕಮಲಮನಿಚ್ಚಿಸದಲಿಪೋತಂಗಳ್ ಕಾಂಚನಕಾಮಾಸಕ್ತರ್ ||

    ಯೋಗಿಯು ಭಾವಿಸುವುದುಂಟು,ಕಾಮಿನಿಕಾಂಚನಾಸಕ್ತ ಜೀವರು, ಸಹಸ್ರದಳಕಮಲ (ಸಹಸ್ರಾರ)ವನ್ನು ಇಚ್ಚಿಸದ ಎಳೆದುಂಬಿಗಳ ಹಾಗೆ. (ಅವರಿಗೆ ಸ್ವಭಾವತಃ ಪರಮಾತ್ಮನಲ್ಲಿ ಆಕರ್ಷಣೆಯಿದ್ದರೂ, ಮಾಯೆಯಭ್ರಮೆಯಿಂದ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ)

    • ಆಭಿನವರಾಘವಾಂಕ ಹೃದಯರಾಮರ ಉದ್ದಂಡಷಟ್ಪದಿಗೆ ಜಯ! ಜಯ!!….
      ಇಷ್ಟು ಬೃಹತ್ತಾದ ಛಂದಃಕುಕ್ಷಿಗೆ ವೇದಾಂತ-ರಾಜಯೋಗಗಳಂಥ ಭೂರಿಭೋಜನವಲ್ಲದೆ ಬಡಪಾಯಿಗಳಾದ ಶೃಂಗಾರ-ವಾತ್ಸಲ್ಯಾದಿಗಳೆಂಬ ದರ್ಶಿನಿಗಳ ಉಪಾಹಾರವು ಸಾಕಾದೀತೇ?

      • nimma maargadarshanakke naanu sadaa RuNi…aachaaryarE..

      • ನಿಜ ನಿಜ, ವೀರಭದ್ರನ ಕೋಪಾಟೋಪಭರಿತ ಉದ್ದಂಡ ನಡೆಯೇ ಇದಕ್ಕೆ ಸಮುಚಿತಾಹಾರ

        • ಆದರೂ, ವಾರ್ಧಕ ಷಟ್ಪದಿಗಿಂತಲೂ ತ್ವರಿತಗತಿಯಲ್ಲಿ ಸಾಗಿದರೂ, ಯುದ್ಧ ಸನ್ನಿವೇಶಗಳ ತೀವ್ರತೆಯನ್ನು ತಿಳಿಸಲು ನಂತರದ ಬಹುತೇಕ ಕವಿಗಳು ಇದನ್ನು ಬಳಸದೇ ಇದ್ದುದು ವಿಷಾದಕರ.

          • ಉದ್ದಂಡಷಟ್ಪದಯನ್ನು ಬಳಸಹೊರಟ ಕವಿಗೆ ರಾಘವಾಂಕನ ಅಸಾಧ್ಯ ಪ್ರತಿಭಾಸೃಷ್ಟಿ ಮನಸ್ಸಿಗೆ ಬಂದು ಅದರ ಹೊಡೆತಕ್ಕೆ ಕಾವ್ಯದ ಬುಗ್ಗೆ ಬತ್ತಿಹೋಗುತ್ತದೇನೋ…

      • ಹೃದಯರಾಮರೇ! ಉದ್ದಂಡಷಟ್ಪದಿಯ ವಿರಳಪ್ರಾಚುರ್ಯಕ್ಕೆ ಅದರ ಛಂದೋರಾಚನಿಕವೈಫಲ್ಯವೇ ಕಾರಣ. ಏಕೆಂದರೆ ಯಾವುದೇ ಛಂದಸ್ಸಿಗೆ ಚತುರಶ್ರಸಮತೆ ಮುಖ್ಯ. ಆದರೆ ಉದ್ದಂಡಷಟ್ಪದಿಯಲ್ಲಿ ಪಾದಕ್ಕೆ ಸಮಸಂಖ್ಯೆಯ ಚತುರ್ಮಾತ್ರಾಗಣಗಳು ಬರದೆ ವಿಷಮಸಂಖ್ಯೆಯ (೫) ಗಣಗಳು ೧,೨, ೪, ೫ ಪಾದಗಳಲ್ಲಿ) ಬಂದಿವೆ. ಅಲ್ಲದೆ ಊನಗಣವಿಲ್ಲದೆ (ಕೇವಲ ನಾಲ್ಕು ಮಾತ್ರೆಗಳ ಎಂಟು ಗಣಗಳ ವ್ಯಾಪ್ತಿ) ಮೂರನೆಯ ಮತ್ತು ಆರನೆಯ ಪಾದಗಳು ಪದ್ಯದ ಪೂರ್ವಾರ್ಧ ಮತ್ತು ಉತ್ತರಾರ್ಧಗಳ ಮುಗಿತಾಯವು ತೋರುತ್ತಲೇ ಇಲ್ಲ. ಈ ಕಾರಣಗಳಿಂದ ಇದಕ್ಕೆ ಎಲ್ಲಿಲ್ಲದ ಶ್ರುತಿಕಟುತ್ವವು ಬಂದಿದೆ. ಹೀಗಾಗಿಯೇ ಧಾರಣಕ್ಕೂ ವಾಚನಕ್ಕೂ ಒಗ್ಗದ ಇದನ್ನು ರಾಘವಾಂಕನು ಏಕದಂಡಿ-ದ್ವಿದಂಡಿ-ತ್ರಿದಂಡಿಗಳಂಥ ಕವಿಧೂರ್ತರನ್ನು ಗಲಿಬಿಲಿಗೊಳಿಸಿ ಗೆಲ್ಲಲು ಆವಿಷ್ಕರಿಸಿ ಬಳಸಿ ಆ ಬಳಿಕ ಯುಕ್ತವಾಗಿಯೇ ಮರೆತನೆಂದರೆ ಸರಿಯಾದೀತು.

        • ಧನ್ಯವಾದ ಪೂಜ್ಯರೆ, ನಿಮ್ಮಿಂದ ಸಾಕಷ್ಟು ಮಾಹಿತಿ ಕಲೆಹಾಕಿದಂತಾಯಿತು.. ಊನಗಣಗಳಿಲ್ಲದ ಕಾರಣ, ವಾಚನಗಳಲ್ಲಿ ಪ್ರತಿ ಪದ್ಯದ ಮುಕ್ತಾಯವನ್ನು ಭಾವಿಸಲು ನಿಜಕ್ಕೂ ಕಷ್ಟವೇ ಸರಿ. ರಾಘವಾಂಕನಂತಹವರು ಮತ್ತೊಬ್ಬರಿಲ್ಲ.

  16. || ಚತುರ್ಮಾತ್ರಾಚೌಪದಿ ||

    ಸುಮಧುವನರಸುತೆ ಪೀರಲ್ಕೆಂದೇ,
    ಸಮೆಯುತೆ ಕಾಲವ ಪೂಗೊಳದೊಳ್,|
    ಸುಮದಿಂ ಸುಮಕಂ ಪಾರ್ಗುಮದೊಂದೇ
    ಕಮಲಮನಿಚ್ಛಿಸದಲಿಪೋತಂ ||

  17. 1.
    ಕ್ರಮದೊಳೆ ಬರ್ಪುದು ಭೋಗಗಳಾಶಯ
    ಸುಮಶೈಶವದೊಳ್ ತೋರುವುದೇ?
    ಸಮವಯಸಿಗರೊಡನಾಟವ ಬಯಸುತೆ
    ಕಮಲವನಿಚ್ಛಿಸದಲಿಪೋತಂ

    2.
    ನಿಮಿರಿರಲಾಸೆಯು ಪ್ರಿಯನಾಗಮನಕೆ
    ಬೆಮರಿನ ಲೇಪನದಾದರವು
    ಭ್ರಮಿಪುದು ಮೋಹಿತ ಲೋಲುಪ ಲಾಲಸ
    ಕಮಲವನಿಚ್ಛಿಸದಲಿಪೋತಂ

    3.
    ಭ್ರಮಿಪರು ಯೌವನ ಮದವನ್ನರಸುತ
    ಗಮನಿಸರೈ ಮುದವಾರಿದೊಡಂ
    ಕಮರುತೆ ಬಾಡಿದ ಮಧುವಿನ್ನಿಲ್ಲದ
    ಕಮಲವನಿಚ್ಛಿಸದಲಿಪೋತಂ

    4.
    ಕ್ರಮದಲಿ ನಡದಿಹ ಚುನಾವಣೆಗಳಲಿ
    ಸಮತೆಯ ಭಾವವು ಕಾಣಿಸದೈ
    ಮುಮತಾಜಗೆ ಮತ ಬೊಮ್ಮನ ನೀಡನು
    ಕಮಲವನಿಚ್ಛಿಸದಲಿಪೋತಂ
    [ಮುಮತಾಜ = ಮುಸಲ್ಮಾನ ಅಭ್ಯರ್ಥಿ; ಕಮಲ = ಭಾಜಪ; ಬೊಮ್ಮನ = ಬ್ರಾಹ್ಮಣ; ಅಲಿಪೋತಂ = Ali’s progeny]

    • ಒಂದೊಂದು ಪೂರಣವೂ ವಿಭಿನ್ನವಾಗಿ ವಿಶಿಷ್ಟವಾಗಿ ಹರಳುಗಟ್ಟಿದೆ. ಧನ್ಯವಾದಗಳು.

    • ಬಾಲ್ಯ- ಹರೆಯ- ವೃದ್ದಾಪ್ಯ- ಚುನಾವಣೆ
      ಶಲ್ಯವ ಹೊದ್ದಿಸೆ ಮರಿಭೃಂಗ
      ಕಲ್ಯದ ಮತ್ತಿನೊಳ್ ಅಲರೀಂಟದ ಕೌ
      ಶಲ್ಯದ ಚಿತ್ರವಭಿಷ್ವಂಗ !

    • _/\_
      ಅಮಲೀರಿದ ಮರಿಭೃಂಗದ ತೆರದಲಿ
      ಮಮ ಮತಿಯಾದುದು ಚಂಚಲವು
      ಕಮನೀಯತೆಯಭಿಮಾನದಿಮಾದೆನು
      ಕಮಲವನಿಚ್ಛಿಸದಲಿಪೋತಂ
      🙂

    • 1 is best. About 3:
      ಬಾಡುವುದು ಕಮಲಮಾತ್ರಮೆ? ಪೇಳು ಕವಿವರ್ಯ
      ಈಡಾಗದಿಹುದಾವುದಯ್ ಕಾಲಕೆ|
      ಬಾಡುವೆನಿತೋ ಕಮಲಗಳ ಪೈಕಿಯೊಂದೊಮ್ಮೆ (ಒಂದಾನೊಂದು ಕಮಲವು)
      ನೋಡದೇನಾದುಂಬಿಬಾಡುವುದನುಂ||

  18. ಕಮಲವನರಸುತ ಬಿರು ಬೇಸಗೆಯೊಳು
    ಕಮಲಾಕ್ಷನ ಮಂದಿರದಂಗಣದಿ
    ಗಮನವ ಸೆಳೆಯಿತು ಪುಷ್ಕರಣಿಯೊಳೇ
    ಕಮಲಮನಿಚ್ಚಿಸದಲಿಪೋತಂ
    ಕಮಲ = ನೀರು ೧ ನೇ ಪಾದದಲ್ಲಿ , ೪ ನೇ ಪಾದದಲ್ಲಿ ತಾವರೆ .
    ಬಿರು ಬೇಸಗೆಯಲ್ಲಿ ನೀರನ್ನು ಅರಸುತ್ತಾ ಬಂದ ದುಂಬಿ ತಾವರೆಯನ್ನು ಇಷ್ಟ ಪಡಲಿಲ್ಲ ಅನ್ನುವ ಅರ್ಥ.

  19. ಕಮಲವನಿಚ್ಚಿಸದಲಿಪೋತಂಗಳೆ!
    ಅಮಮಾ ಕಲ್ಪಿಸೆ ನಾನೆಂದುಂ!
    ತಮಸಿಂದರಳದೆ ಮುದುಡಿಯೆ ಇರ್ಕೇಂ
    ಸುಮಗಳು ಸೌಸವ ಸೂಸದೆಯೇ!

  20. ಅಲ್ಪಾವಧಿಯಲ್ಲಿಯೇ ಈ ಪ್ರಮಾಣದ ಗುಣ-ಗಾತ್ರಗಳ ಪೂರಣವನ್ನು ಕಂಡು ಹರ್ಷಿತವಾದ ನನ್ನ ಮನಕ್ಕೆ ಹೊಳೆದ ಒಂದು ಪರಿಹಾರಕ್ರಮ:

    ಪ್ರಮುದಿತಮಪ್ಪೀ ಪದ್ಯಪಾನಿಗಳ
    ಸುಮನೋಮಯಪೂರಣಮಧುವೊಳ್|
    ಅಮಮಾ! ರಸಮಂ ಸವಿಸವಿಯುತ್ತುಂ
    ಕಮಲಮನಿಚ್ಛಿಸದಲಿಪೋತಂ!!

    • ಸರ್, ಪೂರಣದಿಂದಲೇ ಮಧುರಸ ಸವಿಯುವ ದುಂಬಿಗಳು ಕಲ್ಪನೆ ತುಂಬಾ ಚೆನ್ನಾಗಿದೆ

    • ಪರೋಕ್ಷವಾಗಿಯಾದರೂ ನನ್ನ ಪದ್ಯಗಳಿಗೆ ಮೆಚ್ಚುಗೆ ಸಂದಿತಲ್ಲ – ಅಷ್ಟೇ ಸಮಾಧಾನ.

  21. ಸಮರಸದೊಡೆ ಸಹಬಾಳ್ವೊಳು ಮಧುಗಂ
    ಸುಮನಮನರಸಿರಲಲಿವಿಂಡುಂ ।
    ಅಮಲೇರಿರೆ ಮುಗಿಮಲ್ಲಿಗೆ ಗಮಲಿಂ
    ಕಮಲಮನಿಚ್ಚಿಸದಲಿಪೋತಂ ।।

  22. || ಚತುರ್ಮಾತ್ರಾಚೌಪದಿ ||

    ಅಮಲೇರಿರೆ ಮಧುವಂ ಪೀರುತೆ,ಸಂ-
    ಕ್ರಮಿಸುತೆ ಪೂವಿಂ ಪೂವಿಂಗಂ |
    ಸುಮರಾಜ್ಞಿಯವೋಲೆಸೆಯುತ್ತಿರೆಯುಂ,
    ಕಮಲಮನಿಚ್ಛಿಸದಲಿಪೋತಂ ||

    (ಕಮಲಮನಿಚ್ಛಸದು + ಅಲಿಪೋತಂ )

  23. ||ಮಂದಾನೀಲ||

    ಕಮಲಮನಿಚ್ಚಿಸದಲಿಪೋತಂಗಳ್
    ರಮಣನಮರಸದ ವಿರಹಿಣಿ ಕಂಗಳ್
    ಪಗೆವರನಿಕ್ಕದ ಸುಭಟರ ತೋಳ್ಗಳ್
    ಕೂರಸಿಗುರುಳದ ರಿಪುಗಳ ಶಿರಗಳ್
    ಶೃಂಗಾರಮ್ಮೇಣ್ ವೀರ ರಸಂಗಳ
    ಕಾವ್ಯಂಗಳ ಮೆಯ್ಸಿರಿ ಹರಣಂಗಳ್

    • ಹೃದಯರಾಮರೆ, ನೀವು ತುಂಬ ಚೆನ್ನಾಗಿ ಬರೆಯುತ್ತೀರಿ. ಅಭಿನಂದನೆಗಳು. ವಿವಿಧಛಂದಸ್ಸುಗಳಿಗೆ ಸಮಸ್ಯೆಯ ಸಾಲನ್ನು ಹೊಂದಿಸುವ ನಿಮ್ಮ ಜಾಣ್ಮೆ,ಶ್ಲಾಘ್ಯ. ಈ ಪದ್ಯದಲ್ಲಿ ನನಗುಂಟಾದ ಕೆಲವು ಸಂದೇಹಗಳು ಹೀಗಿವೆ : ವಿರಹಿಣಿ ಕಂಗಳ್ ಎಂಬುದು ಸಾಧುವೆ?ವಿರಹಿಣಿಕಂಗಳ್ ಎಂಬುದು ಅರಿಸಮಾಸವಾಗುವುದಿಲ್ಲವೆ? ಅಥವಾ ವಿರಹಿಣಿಯ ಕಂಗಳ್ ಆದಾಗ ಛಂದಸ್ಸು ಕೆಡುವುದು.ಅಂತೆಯೇ “ಮೆಯ್ಸಿರಿ ಹರಣಂಗಳ್” ಎಂಬುದು ಯುಕ್ತವೆ? ಶೃಂಗಾರಮ್ಮೇಣ್ ಎಂಬುದು ಶೃಂಗಾರದ ಮೇಣ್ ಎಂದು ಸಾಂದರ್ಭಿಕವಾಗಿ ಆಗಬೇಕೆ??ಶಿರಗಳ್ ಎಂಬುದು ಮಂದಾನಿಲದಲ್ಲಿ ಸರಿಯಿರಬಹುದು(?). ಇದು ದೋಷಾನ್ವೇಷಣೆಯಲ್ಲ,ನನ್ನ ತಿಳುವಳಿಕೆಗಾಗಿ ಮಾತ್ರ:-)

      • ಧನ್ಯವಾದಗಳು ಮೇಡಂ, ನಿಮ್ಮೆಲ್ಲರ ಮಾರ್ಗದರ್ಶನಕ್ಕೆ ನಾನು ಅಭಾರಿ. ಹೇಗೆ ತೋಚುತ್ತದೆಯೋ ಹಾಗೆ ಬರೆದು ತಿಳಿದವರು ಸರಿಪಡಿಸಿದಾಗ ತಿದ್ದುಕೊಂಡು ಕಲಿಯುವುದನ್ನು ಪದ್ಯಪಾನದಲ್ಲಿ ಅನುಸರಿಸುತ್ತಿದ್ದೇನೆ. ನೀವು ಹೇಳಿದ ಹಾಗೆ ವಿರಹಿಣಿಕಂಗಳ್ – ತಪ್ಪುಪ್ರಯೋಗ ಆಗಿರಬಹುದು. ವಿರಹಿಣಿಯ ಕಂಗಳು(ಲಯ ಎಡವಿತು) ಎಂಬ ಭಾವವನ್ನು ತರಲು ಪ್ರಯತ್ನಿಸಿದ್ದೆ.

        ಶೃಂಗಾರಂ ಮೇಣ್ ವೀರರಸಂ ಅನ್ನುವಾಗ ‘ಶೃಂಗಾರಂ’ -‘ಶೃಂಗಾರ ರಸಂ’ ಎಂಬುದನ್ನೇ ಸೂಚಿಸುವುದರಿಂದ ತಪ್ಪಾಗಲಾರದೆಂದು ನನ್ನ ಅನಿಸಿಕೆ.

        ‘ಈ ರಸಗಳ ಕಾವ್ಯದ ಸೊಬಗನ್ನು ಕಿತ್ತುಕೊಳ್ಳುವಂತಹುಗಳು’ ಎಂಬ ಅರ್ಥದಲ್ಲಿ ‘ರ|ಸಂಗಳ ಕಾವ್ಯಂಗಳ ಮೆಯ್ಸಿರಿ ಹರಣಂಗಳ್’ ಪ್ರಯೋಗಿಸಿದೆ.. ಇದು ಸರಿಯೋ ತಪ್ಪೋ ಗೊತ್ತಿಲ್ಲ… ಯಾರಾದರೂ ತಿದ್ದಬಹುದೆಂದು ಕಾದೆ.. ಯಾರೂ ತಿದ್ದದ ಕಾರಣ ಸರಿಯಿರಬಹುದೆಂದುಕೊಂಡೆ 🙂

  24. ವಿಶ್ವಗೋಲದ ಬಣ್ಣ ಕಪ್ಪು ಎ೦ಬ ಊಹೆಯಿ೦ದ… (largest portion of universe is filled with dark matter) ಹುಟ್ಟಿದ ಮೇಲೆ ಅದು ಹಿಗ್ಗುತ್ತ ದೂರ ದೂರ ಸಾಗುವ ಚಿತ್ರ…

    ಕಮಲೋದ್ಭವಚತುರಕರಸುಚತು-
    ಷ್ಕಮಲೋದ್ಭೂತಾರ್ಭಕವಿಶ್ವ೦
    ತಮದು೦ಡೆಯವೊಲ್ ಚಲಿಸಲ್ಕೆ೦ತೆನೆ
    ಕಮಲಮನಿಚ್ಛಿಸದಲಿಪೋತ೦

  25. ಸಮತೆಯದಿಲ್ಲವು ಬಲಸಾಮರ್ಥ್ಯಕೆ!
    ರಮಿಸುತೆ ಬಳಿಬರಲೆಂದೆನುತ
    ಲ್ಕಹಮಿಕೆಯಂ ಝೇಂಕರಿಸುತೆ ಮೆರೆದಿದೆ
    ಕಮಲವನಿಚ್ಚಿಸದಲಿಪೋತಂ!

  26. ಅಮಲನು ಹುಡುಕುತ ಪಾಲ ಸಮುದ್ರದೆ
    ಕಮಲದ ನಾಭನ ಸನಿಹ ಬರಲ್
    ಬೆಮರಿತು ನಾಲ್ದಲೆ ಮುದುಕಂಗಂಜುತೆ
    ಕಮಲವನಿಚ್ಛಿಸದಲಿಪೋತಂ
    [ನಾಲ್ದಲೆ = ನಾಲ್ಕು ತಲೆ – ಸರಿಯಲ್ಲದ್ದಿದರೆ, “ಗಡ್ಡದ ಮುದುಕಂ” ಎಂದು ಓದಿಕೊಳ್ಳಬಹುದು]

    • haha

    • ಕಡ್ಡಿಯ (ನಾಳ) ಏರೊಳು ಕುಳಿತಿರುವವನಂ
      ’ಗುಡ್ಡದ ಮುದುಕನು’ಮೆನಬಹುದೈ|
      ಗಡ್ದವದಿದ್ದರು ಕಿರುಮೂರ್ತಿಯಿರಲ್
      ’ಗಿಡ್ಡದ ಮುದುಕನು’ಮೆನಬಹುದೈ||

  27. ಕಮಲೋಪಮೆಯಿಂ ಬಣ್ಣಿಪರೆಲ್ಲ
    ಭ್ರಮರಂಗಳು ರಾಣಿಯನೇಗಳ್
    ತುಮುಲಂಗೊಳ್ವುದು ಸಿಡುಕುತ ಜರೆಯುವ
    ಕಮಲವನಿಚ್ಛಿಸದಲಿಪೋತಂ

  28. ಅಮೃತಸಮಾನದ ಜೇನನು ಕೂಡುವ
    ಭ್ರಮರವಿಲಾಸ ಸ್ಫರ್ದೆಯೊಳು
    ಘಮಿಸುವ ಮಲ್ಲೆಯ ನೆಚ್ಚುತೆ ಸೋಲ್ತುದು
    ಕಮಲವನಿಚ್ಛಿಸದಲಿಪೋತಂ

  29. ಕ್ರಮ ನಿಚ್ಚಿತಮೈ ನಡೆಗಂ ಹಿರಿ ಕರ –
    ಕಮಲಮ ನಚ್ಚಿದುದೆಲೆ ಪೋತಂ ।
    ಭ್ರಮಮಚ್ಚರಿಯೈಪಿಡಿಯಲ್ ಪರಪದ-
    ಕಮಲಮನಿಚ್ಚಿಸದಲಿಪೋತಂ ।।

    ಹಿರಿ ಕರಕಮಲ / ಪರಪದ ಕಮಲಮನಿಚ್ಚಿಸದಲಿ…. (ಮತ್ತೆ)ಗೋತಂ!!

  30. ಕಮಲೇಕ್ಷಣಗೇ ಕಮಲವನೀಯುವ
    ಕಮಲಾಮಾತೆಯ ಕೈಯೊಳು! ”ಛೀ ”
    ಕಮಲದ ಹೂವದು ಮೂರುತಿಯೆ೦ದಾ
    ಕಮಲಮನಿಚ್ಚಿಸದಲಿಪೋತಂ II
    ಲಕ್ಷ್ಮೀ ದೇವಿಯು ಶ್ರೀಮನ್ನಾರಾಯಣನಿಗೆ ಕಮಲದ ಹೂವನ್ನು ಕೊಡುವ ಒಂದು ಸುಂದರ ದೃಶ್ಯವನ್ನು ಕಂಡು ದುಂಬಿ ಆ ಹೂವಿನ ಮೇಲೆ ಕುಳಿತಿತು . ಅದು ಮೂರ್ತಿ ಎಂದು ತಿಳಿದಾಗ ಅಲ್ಲಿಂದ ‘ಛೀ ‘ ಎಂದು ಉಧ್ಗರಿಸಿ ಹಾರಿ ಹೋಯಿತು .

    • ಕೈ – ಕರವಾಗಿ ಸಣ್ಣ ಬದಲಾವಣೆ ….

      ಕಮಲೇಕ್ಷಣಗೇ ಕಮಲವನೀಯುವ
      ಕಮಲಾಮಾತೆಯ ಕರದೊಳು ! ”ಛೀ ”!
      ಕಮಲದ ಹೂವದು ಮೂರುತಿಯೆ೦ದೇ
      ಕಮಲಮನಿಚ್ಚಿಸದಲಿ ಪೋತಂ II

  31. A young bee that didn’t like lotuses went around the lake to find one of its ilk (lotus-haters). Finding none, dejected, it returned to a lotus!
    ಕಮಲಮನಿಚ್ಛಿಸದಲಿಪೋತಂ ನೀಂ
    ಕ್ರಮಿಸೇಂ ಸರಸಮನೆಲ್ಲಮನುಂ|
    ಸಮನಸ್ಕರರೊರ್ವರನುಂ ಕಾಣದೆ
    ವಿಮನಸ್ಕದಿನಬ್ಜಕೆ ಮರಳಲ್||

  32. ಮು೦ಜಾನೆ ಬಿರಿಯುವ ಹಗಲನ್ನು ಕಮಲಕ್ಕೆ, ಹಾಗು ರಾತ್ರಿಯನ್ನು ದು೦ಬಿಗೆ ಹೋಲಿಸಿ….

    ದ್ಯುಮಣಿಯುದಯದೊಳರಳ್ದುದು ಪಗಲು೦
    ವಿಮಲಾ೦ಬರದ ಸರಸಿಯೊಳ್ ಕಾಣ್
    ತಿಮಿರದ ರಾಶಿ ಸರಿದುದಾ ತೇಜಃ-
    ಕಮಲಮನಿಚ್ಛಿಸದಲಿಪೋತ೦

  33. ಗಮನಿಸಿ ಲೋಕದೆ ನೀತಿಯ,ನಿಯಮವ
    ಗಮಿಸಿತೆ ಬೇರೆಯ ಪುಷ್ಪದೆಡೆ?
    ರಮಣೀಯ ಶ್ರೀಕೃಷ್ಣನಿಗರ್ಪಿತ
    ಕಮಲವನಿಚ್ಚಿಸ್ದಲಿಪೋತಂ!

  34. Under sl. 14 above, sri RG has stated that lotus is variously compared to ಮುಖ-ಕಣ್ಣು-ಅಂಗೈ-ಅಂಗಾಲು. The bee of my verse likes a real lotus, not those lotus-likes.
    ಗಮಗಮಿಸಿಹ ಸಿರಿಕುಮುದಮನಲ್ಲಮೆ
    ಭ್ರಮರಮದಿಚ್ಛಿಪುದನವರತಂ|
    ಸಮುಖಾಕ್ಷಿಗಳಂ ಮೇಣ್ ಪಾದವ ಕರ-
    ಕಮಲಮನಿಚ್ಛಿಸದಲಿಪೋತಂ||

  35. ತಿಮಿರದೆ ಮುದುಡಿಹ ಕಮಲದೆ ಹುದುಗುತೆ (alternate anuprAsa)
    ಸುಮಮಧುವಂ ಪೀರಿರೆ ಸುಖದಿಂ|
    (Sun)ತಮಹರಗಂ ವಶಗೊಳ್ಳುವ ವಿಕಸಿತ-
    ಕಮಲಮನಿಚ್ಛಿಸದಲಿಪೋತಂ||

  36. As we come of age, we take to liking mild colours and cuisine that do not incite our palate. Youth is the antithesis of this.
    ಯಮನಾಹ್ವಾನದೆಡೆಗೆ ಸಾಗಿರಲಾವ್
    ಕಮರುವುವುತ್ಕಟದಾದ್ಯತೆಗಳ್|
    ದಮಿತಮೆ ಯೌವನತೀಕ್ಷ್ಣತೆಯು ಕಮಲ(pale)-
    ಕಮಲಮನಿಚ್ಛಿಸದಲಿಪೋತಂ||

  37. ಕುಮುದಸಹಸ್ರದೆ ಪೀರ್ವುದು ಮಧುವಂ
    ಧಮನಿಗಳೆಲ್ಲವು ತುಂಬುವರಂ|
    ವಮನಮದಾಗುವವರೆವಿಗು ವೆಗಟಿಂ
    (water)ಕಮಲಮನಿಚ್ಛಿಸದಲಿಪೋತಂ||

  38. ಅಮಲನ್ನೀಯುವ ಮಧುವನು ಪೊಂದಿಹ
    ಕಮಲಮನಿಚ್ಛಿಪುದಲಿಪೋತಂ||
    ಕೃಮಿಗಳ ಹೆಕ್ಕುಲುಮಲ್ಲಿಯೆ (ಸರೋವರದಲ್ಲಿ) ಹವಣಿಪ
    (crane/ ಸಾರಸಪಕ್ಷಿ) ಕಮಲಮನಿಚ್ಛಿಸದಲಿಪೋತಂ||

  39. I have no desire to set a batting record.
    ಗಮನಿಸೆ ತಾಮ್ರಮುಂ-ಓಷಧಿ-ರೇಚಕ-(right lung)
    ಸಮದರ್ಥಗಳಿರೆ ಕಮಲಕ್ಕಾಂ|
    ಅಮಿತಾಂಕಸ್ಪೃಹೆಯಿಲ್ಲೆನಗದರಿಂ
    ಕಮಲಮನಿಚ್ಛಿಸದೆಲೆಪೋದೆಂ||

  40. ೦. ಕ್ರಮದೊಳ್ ಮಿತ್ರರ್ ಪೂರಯ್ಸಲ್ ವಿ-
    ಕ್ರಮದೊಳ್, ಮಧುವೆನೆ ಪದ್ಯರಸಂ
    ಸ್ವಮನಂ ಭೀತಿಯೊಳಿರ್ದುದದೆಂತೆನೆ-
    ಕಮಲಮನಿಚ್ಛಿಸದಲಿಪೋತಂ!
    (ಪದ್ಯಪಾನದ ಮಿತ್ರರೆಲ್ಲ ಪರಿಹಾರಕ್ಕೆ ಇಷ್ಟು ಉತ್ಸಾಹದಿಂದ ಅಮಿತ ಸಾಧ್ಯತೆಗಳನ್ನು ಬಗೆ ಬಗೆಯ ಛಂದಸ್ಸುಗಳಲ್ಲಿಯೂ ತೋರಿಸುತ್ತಿದ್ದ ಕಾರಣ ಸ್ವಲ್ಪ ಭಯವಾಯಿತಾದರೂ ನನ್ನ ಕೆಲವು ಪದ್ಯಗಳನ್ನು ಹಾಕುತ್ತಿದ್ದೇನೆ)

    ೧.ಸುಮಸಮಯಂ ಬರೆ ಪ್ರಕೃತಿಯೊಳೆಲ್ಲೆಡೆ
    ಕಮನೀಯತೆ ಮೆಯ್ವೆತ್ತಿರಲು
    ಭ್ರಮಿಸುತೆ ವಲ್ಲಿಗಳಂ ಕಂಡೊಡನಾ
    ಕಮಲಮನಿಚ್ಛಿಸದಲಿಪೋತಂ||

    ೨.ಸುಮದ ರಸೇಚ್ಛುವು ಪೋದೊಡೆ ಸಂಜೆಯೊ-
    ಳಮಮಾ! ಮುದುಡಿರಲಾ ಪದ್ಮಂ
    ಯಮಸದನಮಿದೆಂದುನುತನ್ಯದಿನಂ
    ಕಮಲಮನಿಚ್ಛಿಸದಲಿಪೋತಂ||

    ೩. ಸುಮಗಳನರಿಯದೆ ಪೋಗುತ್ತದು ವಿ-
    ದ್ರುಮಮಂ ಪೂವೆನುತೆಯ್ದತ್ತು!
    ಭ್ರಮಿಸುತೆ ಪವಳಮದೆನುತೊರ್ಮೆಗೆ ಮೇಣ್
    ಕಮಲಮನಿಚ್ಚಿಸದಲಿಪೋತಂ||

    ೪. ಗಮಿಸಲ್ ತೀರ್ಥಕ್ಷೇತ್ರಕೆ ಪುಣ್ಯಂ
    ಸಮಮುಪವಾಸಮದಕ್ಕೆಂದು
    ಯಮದೊಳಗೇಕಾದಶಿಯೊಳಗೊರ್ಮೆಗೆ
    ಕಮಲಮನಿಚ್ಛಿಸದಲಿಪೋತಂ! 😉

    ೫. ಸುಮನಯನೆಯ ನಲ್-ದಿಟ್ಟಿಯೆ ಪೇಳಲ್
    ಭ್ರಮರಮೆನಿಪ್ಪೊಡೆ ವಿರಹದೊಳಾ
    ಕ್ರಮಮಂ ತಪ್ಪಿರೆ ಮುನಿದಳ್ ಸಖಮುಖ-
    ಕಮಲಮನಿಚ್ಛಿಸದಲಿಪೋತಂ||

    ೬. ಅಮರರುಮಸುರರುಮಾ ಪಾಲ್ಗಡಲಿಂ-
    ದಮರ್ದಂ ತೆಗೆಯುವರೆನುತಿರಲು
    ಅಮೃತದ ರುಚಿಯನೆ ನೊಳ್ಪಾಸೆಯೊಳಾ
    ಕಮಲಮನಿಚ್ಛಿಸದಲಿಪೋತಂ!

    ೭. ಸುಮದಿಂ ಸುಮಕಂ ಪಾರುತೆ ಪೋಗುತೆ
    ಭ್ರಮರಂ ಪೀರ್ದುದು ರಸಮಂ ತಾಂ
    ಕಮಲಿನಿಯೆಡೆಗೆಯ್ದೊಡೆ ಪೊಡೆದುಂಬಿರೆ
    ಕಮಲಮನಿಚ್ಛಿಸದಲಿಪೋತಂ||

    ೮.ಭ್ರಮಿಸುತೆ ಸೋಮದ ಪರಿಮಲದಿಂದದು
    ಕಮಲಮೆನುತೆ ಯಜ್ಞಾಗ್ನಿಯನೇ
    ಬೆಮರ್ದುದು ತಾಪದೆ ಮತ್ತೇಗಳ್ ತಾಂ
    ಕಮಲಮನಿಚ್ಛಿಸದಲಿಪೋತಂ||

    • ಪೂರೈಸಿಹೆವೆಲ್ಲೈ ಮಧುವಂ ನಾಂ
      ಪೀರಿಹೆವಿನಿತನು ಸಿಕ್ಕಿದುದಂ|
      ಧೀರನೆ ನಿನಗಮಿತದೆ ದೊರೆತಿಹುದದು
      ಬೀರಿನವೋಲ್ ಪೀರಿಹೆ ಮಧುವಂ||

      About 4th verse:
      ಭೂಖಂಡಗಳಿಂ ಭೂಖಂಡಗಳಿಗೆ
      ಸುಖದಿಂ ಚರಿಪೀ ವಿಹಗಕ್ಕಂ|
      (venerable)ಮಖಪರಮಾತ್ಮನಿರುವೆಡೆಗೆ(pilgrim centre) ಪೋಪುದ-
      ಸುಖಮೆಂಬೆಯ ಪದ್ಯದನೆವದಿಂ||

    • ಕೊಪ್ಪಲತೋಟರ ೪ ನೇ ಪದ್ಯಕ್ಕೆ ಒಂದು ಪ್ರತಿಕ್ರಿಯೆ

      ಕಮಲವನರಸಿ ದ್ವಾದಶಿಯೂಟಕೆ
      ಕಮಲಾಕ್ಷನ ಮಂದಿರದಂಗಣದಿ
      ಕಮಲಾಕರದೆ ಬ್ರಾಹ್ಮಣನಾಗದೆ
      ಕಮಲಮನಿಚ್ಛಿಸದಲಿಪೋತಂ

      ಕಮಲ =ತಾವರೆ ೧ನೆ ಪಾದದಲ್ಲಿ , ನೀರು ಎಂಬರ್ಥ ೪ ನೇ ಪಾದದಲ್ಲಿ

      ನಿನ್ನೆ ಏಕಾದಶಿಯಾಗಿರೋದರಿಂದ ನೀರು ಮಾತ್ರ ಕುಡಿದೆ (ಪದ್ಯ ೧೮). ಇವತ್ತು ದ್ವಾದಶಿಯ ಊಟಕ್ಕೆ ಹಸ್ತೋದಕ ತೆಗೆಯಲು( ನೀರು ಕುಡಿಯಲು ) ನಾನೆನೂ ಬ್ರಾಹ್ಮಣನಲ್ಲ . ಆದರಿಂದ ಇವತ್ತು ಮಕರಂದದೂಟಕ್ಕೆ ತಾವರೆ ಮಾತ್ರ ಸಾಕೆಂದು ನೀರನ್ನು ಇಷ್ಟ ಪಡದ ದುಂಬಿ .

  41. ಸಮಯದ ಪಾಲಕ ಮಿತ್ರನು ಬಂದಿರೆ
    ತಮವೇ ದೂರಕೆ ಸಾರಿದವೊಲ್
    ಕಮರುತ ಕಂದುತಲಳುತಲೆ ಸಾಗಿತೆ?
    ಕಮಲವನಿಚ್ಚಿಸದಲಿಪೋತಂ!

  42. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ ನೆನಪಾಯಿತು

  43. ಅಮಮಾ! ಪೂರಣಮದಕೆ೦ತಿಹುದೊ!! ವಿ-
    ಷಮದರ್ಥದ ಪದ್ಯಸಮಸ್ಯೆ!!!
    ಕ್ರಮದಿ ಮನ೦ ಕಾದಿಹುದನ್ಯವಿಷಯ-
    ಕಮಲಮನಿಚ್ಛಿಸದಲಿಪೋತ೦

    ಎನ್ನ ಮನೋಭೃ೦ಗ ಬೇರೆಲ್ಲ ವಿಷಯಕಮಲವನ್ನುಳಿದು ಮು೦ದಿನ ಸಮಸ್ಯೆಗೆ ಕಾಯುತ್ತಿದೆ!!!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)