Jul 272015
 

ಭ್ರಷ್ಟಾಚಾರವನ್ನು ಕುರಿತು ಸಾಲಂಕೃತವರ್ಣನೆಯನ್ನು ಮಾಡಿರಿ

  146 Responses to “ಪದ್ಯಸಪ್ತಾಹ ೧೬೧: ವರ್ಣನೆ”

  1. ಮಲರಿರ್ಪ ಪಸುರ್ವೊಲದೊಳ್
    ಕಳೆ ಪರ್ಬುತೆ ನಾಶನಂಗೊಳಿಪವೊಲ್ ಫಸಲಂ
    ನಲವಂ ಭಂಜಿಸೆ ಜಗದೊಳ್
    ತುಳುಂಕುತಿರ್ಕುಮಕಟಾ ದುರಾಚಾರಂ ಬಲ್

    • ಚೆನ್ನಾಗಿದೆ ಕಾಂಚನಾ. ಹತ್ತಿರ ಹತ್ತಿರ ಅಚ್ಚಗನ್ನಡದ ಪದ್ಯ! ಪಸುರೊಲದೊಳ್ ಮಾಡಬಹುದೆನಿಸುತ್ತದೆ.

      • ಪದ್ಯ ಚೆನ್ನಾಗಿದೆ; ಒಳ್ಳೆಯ ಹಳಗನ್ನಡದ ಕಂಪು ಸಾಕಷ್ಟಿದೆ.
        ಹೊಳ್ಳ, ನೀನೆಂದಂತೆ ಸವರಣೆ ಚೆನ್ನ. ಆದರೆ ಅದು ಪಸುರ್ವೊಲ ಎಂದಾಗಬೇಕು. ಆಗ ಇಲ್ಲಿ ಶಿಥಿಲದ್ವಿತ್ವವಿರುತ್ತದೆ.

  2. ಕಪಿಯಂಥ ಚಂಚಲಮನಸ್ಕರಿಗೆ ಚಕ್ರವ್ಯೂಹದಂತೆ ಪ್ರಾಣಘಾತಿಯೂ, ಪತಿತರಸಮೂಹವೆಂಬ ಗಜೇಂದ್ರನ ಪಾದವನ್ನು ನುಂಗುವ ತೆರೆದ ಮೊಸಳೆಯ ಬಾಯಿಯಂತೆಯೂ, ವಕ್ರಮಾರ್ಗಿಗಳೂ, ಎರಡು ನಾಲಗೆಯುಳ್ಳವರಿಗೆ ಹುತ್ತದಂತೆಯೂ (ಆಶ್ರಯವಾಗಿಯೂ) ಭ್ರಷ್ಟಾಚಾರವಿದೆ. ವೇಂಕಟಾಚಲಪತಿಯ ದರ್ಶನವನ್ನು ಸುಲಭವಾಗಿ ಪಡೆಯಲೂ ಕೂಡ ಲಂಚವನ್ನು ಕೊಡುವ ಭ್ರಷ್ಟಕೃತ್ಯವನ್ನೆಸಗಬೇಕು…

    ಸ್ರಗ್ಧರಾ ||
    ಚಕ್ರವ್ಯೂಹೋಪಮಂ ತಾಂ ಕಪಿಸದೃಶಮನಃಪೂರ್ಣರ್ಗಂ ಕುತ್ತದಕ್ಕುಂ
    ನಕ್ರವ್ಯಾತ್ತಾಸ್ಯಮಾಯ್ತುಂ ಪತಿತನಿಕರಮೆಂಬಾ ಗಜೇಂದ್ರಾಂಘ್ರಿಗಂ ಮೇಣ್
    ವಕ್ರಪ್ರಸ್ಥಾಯಿಗಳ್ ತದ್ದ್ವಿರಸನವದನರ್ಕಳ್ಗೆ ಪುತ್ತಂತದಿರ್ಕುಂ
    ಚಕ್ರೀ ! ನೀಡೈ ಭವದ್ದರ್ಶನಮನುಮೆನಲುಂ ಭ್ರಷ್ಟತಾವೃತ್ತಿ ವೇಳ್ಕುಂ

    • ಚೆನ್ನಾದ ಕಲ್ಪನೆ ಮೌರ್ಯರೆ. ಮೊದಲನೆ ಸಾಲಿನಲ್ಲಿ ಛ೦ದಸ್ಸು ತಪ್ಪಿದೆ ಅಲ್ಲವೆ? ಪೂರ್ಣರ್ಗ೦ ಎ೦ಬಲ್ಲಿ…

      • ಛಂದಸ್ಸಿನಲ್ಲೇನೂ ತಪ್ಪಿಲ್ಲ, ಪೂರ್ಣಂಗಂ ಎಂದಿದ್ದಲ್ಲಿ ಮತ್ತೂ ಚೆನ್ನಿರುತ್ತಿತ್ತು. ಆದರೆ ಅಗ ಛಂದಸ್ಸು ಕೆಡುತ್ತಿತ್ತು:-)
        ಏನೇ ಆಗಲಿ, ಸ್ರಗ್ಧರಾವೃತ್ತದಲ್ಲಿ ಬಲುಮಟ್ಟಿಗೆ ಹಳಗನ್ನಡದ ಹದದಿಂದ ಹೊಮ್ಮಿದ ಪ್ರೌಢಸುಂದರಕಲ್ಪನೆಯ ಈ ಪದ್ಯವು ಚೆನ್ನಾಗಿದೆ; ಮೆಚ್ಚೋಣ.

        • ಉಮ್… ಸರ್ ಅದು ನನನನನನನಾ ನಾನನಾನಾನನಾನಾ ಅಲ್ಲವೇ? ಮೊದಲನೆ ಸಾಲಿನಲ್ಲಿ ಪೂರ್ಣರ್ಗ೦ … ನಾನಾನಾ ಆಗಿದೆಯಲ್ಲ…

      • ಧನ್ಯವಾದಗಳು _/\_ 🙂

        • ಗುರುಗಳೇ, ತಮ್ಮ ಅಭಿಪ್ರಾಯದ ಗಾಂಭೀರ್ಯದಲ್ಲಿ ಅದಾವುದೋ ಸಣ್ಣ ತಪ್ಪನ್ನು ತಾವು ಪದ್ಯದಲ್ಲಿ ಕಂಡಂತಿದೆ…ನಿರ್ದಾಕ್ಷಿಣ್ಯವಾಗಿಯೇ ಹೇಳಿಬಿಡಿ…ನನಗೂ ಕಲಿಯಲು ಅವಕಾಶವಾದಂತಾಗುತ್ತದೆ…ಮುಂದಿನ ಪದ್ಯದ ರಚನೆಗೆ ಅಗತ್ಯವಾದ ಜಾಗರೂಕತೆಯೂ ಮೂಡಿರುತ್ತದೆ…

          • ನಿನ್ನ ಪ್ರಶ್ನೆ ತುಂಬ ಸಂಗತ. ನಮ್ಮ ಪದ್ಯಪಾನಿಗಳನೇಕರು ಈ ತೆರನಾದ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಎಲ್ಲರ ಪ್ರಯೋಜನಕ್ಕೆಂದು ಮತ್ತೊಮ್ಮೆ ವಿವರಿಸುತ್ತೇನೆ.
            ಅಕಾರಾಂತವಾದ ಸಂಸ್ಕೃತಪದಗಳು ಕನ್ನಡದಲ್ಲಿ ಪ್ರಥಮ ಮತ್ತು ಚತುರ್ಥೀ ವಿಭಕ್ತಿಗಳಲ್ಲಿ ಬಳಕೆಯಾದಾಗ ಬಿಂದುವು ಬರಬೇಕೆಂಬ ನಿಯಮವಿದೆ. ಉದಾ: ರಾಮಂ, ರಾಮಂಗಂ/ರಾಮಂಗೆ, ಶೈಲಂ, ಶೈಲಂಗಳ್, ಶೈಲಂಗಳ್ಗಂ/ಶೈಲಂಗಳ್ಗೆ. ಇದನ್ನು ಪಾಲಿಸುವುದು ಹಳಗನ್ನಡದ ಮುಖ್ಯಲಕ್ಷಣಗಳಲ್ಲೊಂದು.

    • ಹುತ್ತದಂತೆ ಆಶ್ರಯ – ಸುಂದರವಾಗಿದೆ ಹೋಲಿಕೆ!

    • ಮೌರ್ಯಂ ಪೇಳಿರ್ಪ ಪದ್ಯಂ ಸೊಗಸೆನಿಕುಮಲಾ ಪ್ರೌಢಮಾರ್ಗೀಯಮಕ್ಕುಂ

      • ಇಬ್ಬರು ಅವಧಾನಿಗಳೂ ನನ್ನ ಪ್ರಯತ್ನವನ್ನು ಮೆಚ್ಚಿದ್ದೀರಿ….ಧನ್ಯೋಸ್ಮಿ… _/\_

  3. ಡಿವಿಜಿಗೆ ಕ್ಷಮೆಯಾಚಿಸುತ್ತ 🙂

    ನಾಚಿಕೆಯನಾಗಿಪುವು ದಾಕ್ಷಿಣ್ಯದಾತುರದ
    ಯೋಚನೆಗಳವನುಮರುಹಗಲು ಪರಕಿಸಲು
    ಚಾಚಿದ್ದ ರಸನೆ ತಾನೊಳಸೇದಿಕೊಂಡುದಕೆ
    ಪೇಚಾಡಿಕೊಂಡನಯ್ ಭ್ರಷ್ಟನೊರ್ವಂ

    • ಸೋಮ, ಒಳ್ಳೆಯ ತ್ರಿಪಾದಸಮಸ್ಯಾಪೂರಣದಂತೆ ಮುಕ್ಕಾಲು ಕಗ್ಗಕ್ಕೆ ನಿನ್ನ ಕಾಲು ಪದ್ಯವನ್ನು ಬೆಸೆದು ಜಾಣ್ಮೆಯನ್ನು ಮೆರೆದಿದ್ದೀಯೆ; ಅಭಿನಂದನೆಗಳು. ಆದರೆ ಪೂರ್ಣವಾಗಿ ನಿನ್ನದೇ ಆದ ಮತ್ತೊಂದು ಪದ್ಯವನ್ನು ಬರೆಯಲೇಬೇಕು:-)

  4. ಭ್ರಷ್ಟಾಚಾರ೦ ಗಗನಸದೃಶ೦ ಗೃಧ್ರಕೇಲೀವಿಲಾಸ-
    ಕ್ಕಷ್ಟೈಶ್ವರ್ಯ೦ ಮಿಳುಮಿಳೆನುತು೦ ತಾರಕಾಲೋಕದ೦ದ೦
    ಶಿಷ್ಟಾಚಾರ೦ ಸನಿಹಮಿರದೊಲ್ ತೋರ್ಪುದೆ೦ದು೦ ನೆಗಳ್ದ
    ಭ್ರಷ್ಟರ್ ಕಾ೦ಬರ್ ಗ್ರಹತತಿಯವೊಲ್ ಮರ್ತ್ಯರ೦ ಜಾಲಿಸುತ್ತು೦

    • ಒಳ್ಳೆಯ ಪದ್ಯ. ಚೆನ್ನಾದ ಶೈಲಿ. ಆದರೆ “ಇರದವೊಲ್” ಎಂದು ಆಗಬೇಕಿತ್ತು. ಆಗ ಛಂದಸ್ಸು ಜಾರುತ್ತದೆ. ಮೌರ್ಯನಿಗೆ ಆದ ತೊಡಕೇ ನಿಮಗೂ ಆಗಿದೆ:-) ಅಡ್ಡಿಯಿಲ್ಲ, ಪದ್ಯಭಾವವು ಸೊಗಯಿಸಿದೆ.

      • ಧನ್ಯವಾದಗಳು ಸರ್. ಜೊತೆಯಿರದವೊಲ್ ಎ೦ದು ತಿದ್ದುತ್ತಿದ್ದೇನೆ 🙂

    • ಗ್ರಹತತಿಯವೊಲ್ ಮರ್ತ್ಯರ೦ ಜಾಲಿಸುತ್ತು೦ – ಅಹಾ ’ನೀಲಾ’ಕಾಶರ ಸೊಗಸೇ ಸೊಗಸು.

      • 🙂 ‘ರವೀ’೦ದ್ರನುಪಸ್ಥಿತಿಯೊಳಲ್ತೆ ನೀಲಾಕಾಶ೦ ಸೊಗಯಿಸುವುದು?!!

        • ಚೆನ್ನಾಗಿರ್ಕುಂ ಸುಕವಿ! ಕವಿತಾವ್ಯೋಮದೊಳ್ ಕಾಂತಿಯಿಂದಂ
          ಮುನ್ನಂ ಪೇಳ್ದೀ ಕವನಮರಿಲೋ ಸೂರ್ಯನೋ ನೋಡಲಾರೆಂ 🙂

          • _/\_
            ಭಿನ್ನ೦ ತೋರ್ಕು೦ ಪಡಿನುಡಿಯೆ ನೀವ್ ನೋಡಲಾರೆ೦ ಗಡೆ೦ದೇ-
            ನೆನ್ನ೦ ಶ್ಲೇಷಾ೦ಕಿತವಚನದೊಳ್, ಘೋರಮೇನಲ್ತೆ ನೋಡಲ್ ?!!

  5. ಕೊಂಚವು ಸಂಕೋಚಪಡದೆ
    ಲಂಚಕೆ ಕೆಳಗಿಂದ ಕೈಯ್ಯ ಚಾಚುವ ಜನರ್ಗಳ್|
    ವಂಚಿಸುತಿರೆ ಮುಗ್ಧರ ತಾವ್
    ಗೊಂಚಲು ಪಣಮನ್ನೆ ತಿಂದು ಜೀವಿಪರೇನೈ|

    • ಚೀದೀ, ಪದ್ಯದ ಭಾವವೇನೋ ಪರವಾಗಿಲ್ಲ. ಆದರೆ ಅದನ್ನು ಹಳಗನ್ನಡದ ಹಾದಿಯಲ್ಲಿ ಹೀಗೆ ಮತ್ತೂ ಮುಂದೆ ಸಾಗಿಸಬಹುದೇನೋ:
      ಕಿಂಚಿತ್ತುಮಿರದೆ ನಾಚಿಕೆ
      ಲಂಚಕೆ ಕೀಳ್ಗೊಂಡು ಕಯ್ಯ ಸಾರ್ಚುವ ಲೋಗರ್|
      ವಂಚಿಸುತುಂ ಮುಗ್ಧರನೇಂ
      ಗೊಂಚಲ್ಗೊಂಡಾ ಧನಮನೆ ತಿಂಬರೆ ಬಾಳಲ್?

  6. ಭ್ರಷ್ಟಾಚಾರಮಹಾಮಂತ್ರದ್ರಷ್ಟಾರಂ ರಾಜಕಾರಣಂ|
    ಪುಷ್ಟೇಪ್ಸೆ ದೈವತಂ ಸಲ್ಲಲ್ ದುಷ್ಟಂ ಸ್ವಚ್ಛಂದಮೊಪ್ಪುಗುಂ||

    (ಯಾವುದೇ ಮಂತ್ರಕ್ಕೆ ಋಷಿ, ದೇವತೆ ಮತ್ತು ಛಂದಸ್ಸು ಬೇಕೆಂದು ಶಾಸ್ತ್ರ. ಈ ಕಲ್ಪನೆಯನ್ನು ಹಿಡಿದು ಆರ್ಷೇಯವಾದ ಅನುಷ್ಟುಪ್ಪಿನಲ್ಲಿ ಹೊಸೆದ ಹಾಡಿದು.ರಾಜಕಾರಣ ಎಂದರೆ ರಾಜಕಾರಣಿ ಎಂದೇ ಅರ್ಥ. ಇದಕ್ಕೆ ವ್ಯಾಕರಣವೂ ಸಂಮತಿಸಿದೆ. ಈಪ್ಸೆ = ಆಶೆ; ಸ್ವಚ್ಛಂದ ಎಂಬಲ್ಲಿ ತನ್ನದೇ ಆದ ಛಂದಸ್ಸೆಂದೂ ತನ್ನಿಷ್ಟದ ವಿಶೃಂಖಲತೆಯೆಂದೂ ಅರ್ಥಗಳಿವೆ.)

    • ಸೊಗಸಾಗಿದೆ ಸರ್.. ಭ್ರಷ್ಟಾಚಾರದ ಮಂತ್ರವೇ ಎನ್ನಬಹುದು 🙂

    • Out of the box Idea! ದ್ರಷ್ಟಾರ ಪ್ರಾಸಪದವೇನಾದರೂ ಈ Idea ಕೊಟ್ಟಿತೇ? 🙂

      • ಇಲ್ಲ ಹೊಳ್ಳ, ಭ್ರಷ್ಟಾಚಾರವೇ ದ್ರಷ್ಟಾರನಲ್ಲಿಗೆ ಮುನ್ನಡಸಿತು:-)
        ಸಾಮಾನ್ಯವಾಗಿ ನಾನು ಪ್ರಾಸಾದಿಗಳ ಬಗೆಗೆ ಚಿಂತಿಸದೆ ಹಾಗೆಯೇ ಧಾವಿಸುತ್ತೇನೆ. ಆಯಾ ಸಾಲಿಗೆ ಬರುವಾಗ ಮೂಲಕಲ್ಪನೆಗೆ ನೆರವಾಗುವಂಥ ಪ್ರಾಸಗಳು ಸಿಕ್ಕಿದರೆ ಸರಿ, ಇಲ್ಲವಾದರೆ ಕಲ್ಪನೆಯನ್ನೇ ಅಷ್ಟಿಷ್ಟು ಹೊಂದಿಸಿ ಸಾಗುವೆ. ಇಲ್ಲವೇ, ಪ್ರಾಸವನ್ನೇ ಬದಲಿಸುವೆ. ಆದರೆ ಈ ಎರಡೂ ಬಗೆಯ ಸಂದರ್ಭಗಳು ತುಂಬ ತುಂಬ ವಿರಳ. ಮೌಖಿಕವಾದ ಆಶುಕವಿತೆಯಲ್ಲಾದರೂ ಪ್ರಾಸಾದಿಗಳು
        ತುಸು ತಲೆತಿಂದಾವು; ಆದರೆ ಲೇಖನಾಶುಕವಿತೆಯಲ್ಲಂತೂ ಇಲ್ಲವೆಂಬಷ್ಟು ವಿರಳ. ನನಗೆ ಸಹನೆ ಕಡಮೆ; ಅದರಲ್ಲಿಯೂ ಪದ್ಯರಚನಾಕಾಲದಲ್ಲಿ ತಿದ್ದಿ ತೀಡಿ ನಯ-ನೇರ್ಪುಗೊಳಿಸುವ ತಾಳ್ಮೆ ಮತ್ತೂ ಕಡಮೆ. ಹೀಗಾಗಿ ಅವು ಹೇಗೆ ಬಂದರೆ ಹಾಗೆ…..ಅಷ್ಟೇ…..ಆಲೋಚನೆ, ಅನುಸಂಧಾನ, ಒಪ್ಪ-ಓರಣಗಳೆಲ್ಲ ನನ್ನ ಪಾಲಿನ ಭಾಗ್ಯವಲ್ಲ.

  7. ವಿರಹಮಿದಲ್ತೆ ಪ್ರಾಂಜಲತೆಗಂ ಖಲಶಾಸನಕರ್ತರರ್ಚಿಪ-
    ಚ್ಚರಿಯಸುರಾಂಗನಾಕೃತಿಯೊ ಮೇಣವರಾತ್ಮದ ಛಾಯೆಯೋ ಸ್ಪೃಹಾ-
    ತ್ಮರ ಮತಿಗಾವಗಂ ಸುಲಭಸಾಧ್ಯಮೆನಿಪ್ಪಪಸವ್ಯಮಾರ್ಗಮೋ
    ವರನೃಪಶೈವನೇತ್ರಪರಿದಗ್ಧನನಂಗನ ರೂಪೆ ಭ್ರಷ್ಟತೆ!
    (ಭ್ರಷ್ಟತೆ ಎಂಬುದು ಪ್ರಾಮಾಣಿಕತೆ ಎಂಬುದಕ್ಕೆ ವಿರಹವಲ್ಲವೇ, ಕೆಟ್ಟ ಶಾಸಕರು ಅರ್ಚನೆ ಮಾಡುವ ಅಚ್ಚರಿಯ ಅಸುರಾಂಗನೆಯ ಆಕೃತಿಯೋ ಅಥವಾ ಅವರ ಆತ್ಮದ ನೆರಳೋ, ಸ್ಪೃಹರಾದವರ ಮನಸ್ಸಿಗೆ ಯಾವಾಗಲೂ ಸುಲಭಸಾಧ್ಯವೆನಿಸುವ ವಾಮಮಾರ್ಗವೋ, ಒಳ್ಳೆಯ ನೃಪರೆಂಬ ಶಿವನ ನೇತ್ರಾಗ್ನಿಯಲ್ಲಿ ಸುಟ್ಟುಹೋದ ಕಾಮನ ಅನಂಗರೂಪವೇ ಆಗಿದೆ)

    • ಅಬ್ಬ, ವರನೃಪಶೈವನೇತ್ರಪರಿದಗ್ಧ….. ಎ೦ಥ ಅದ್ಭುತ ಕಲ್ಪನೆ!!! ಧನ್ಯವಾದಗಳು ಈ ಪದ್ಯಕ್ಕಾಗಿ.

    • ರೂಪ > ರೂಪವೆ
      ರೂಪು > ರೂಪೆ
      ಅಲ್ಲವೆ?

      • ರೂಪ > ರೂಪಮೆ
        ರೂಪು > ರೂಪೆ
        ಹೌದು!

    • Wonderful! ಸುಲಭಸಾಧ್ಯಮೆನಿಪ್ಪಪಸವ್ಯಮಾರ್ಗಮೋ ಮತ್ತು ಅನಂಗನ ನಂಟೇ sustaining powers. ಪ್ರತೀ ಸಾಲು ಅರ್ಥಗರ್ಭಿತವಾಗಿದೆ.

      • ಧನ್ಯವಾದಗಳು ಹೊಳ್ಳರೆ 🙂

  8. ವಿನೋದವಾಗಿ: (ಲಂಚದ ಬಗೆಗಿನ ಪಾರಿಭಾಷಿಕ ಶಬ್ದಗಳನ್ನು ಬಳಸಿಕೊಂಡು !!)

    ಹಂಚನುಂ ಕಾಯಿಸಿರೆ ಕೆಂಪಗಾಗುವ ತೆರದಿ
    ಲಂಚ ಕೊಳ್ವನ ಕರವು ಕೆಂಚಗಿಹುದೇಂ ?!
    ಹೊಂಚುತುಂಡಿರಲದನು ರಕ್ತಪಾಯಿಯು ಕರದಿ
    ನಂಚಿಕೊಳ್ವುದು ತರವೇ ಕೊಂಚಕೊಂಚಂ !!

    ಕೈ ಬಿಸಿಮಾಡು = ಲಂಚ ಕೊಡು
    ಕೈ ಕೆಂಚಗಾಗು = ರೆಡ್ ಹ್ಯಾಂಡ್
    ಹೊಂಚುತುಣ್ಣು = (ಕದ್ದು ಮುಚ್ಚಿ) ಲಂಚ ತಿನ್ನು/ನುಂಗು
    ರಕ್ತಪಾಯಿ = ತಿಗಣೆ
    (ಸಂಬಳದ ಜೊತೆ ಗಿಂಬಳವನ್ನು ನಂಚಿಕೊಂಡು ತಿನ್ನುವುದು ಸರಿಯೇ ?!!)

  9. ಭ್ರಷ್ಟಾಚಾರಮನೊಪ್ಪುವ
    ದುಷ್ಟರೆ ಪಾರ್ತೇನಿಯಂತೆರದೊಳೆಲ್ಲಿರೆ ಲೆಫ್-
    ಟಿಷ್ಟರ ಸಹಕಾರಮಿರಲ್
    ನಷ್ಟದ ಹೊಳೆಯಲ್ಲಿಮುಳುಗಿಸುವರಿನ್ನಿತರಂ|

    ಭ್ರಷ್ಟಾಚಾರಮನಳಿಸಲ್
    ಕಷ್ಟಮೆನುತೆ ರಾಜಕಾರಣಿಗಳೆಲ್ಲರ್ ಪಾ-
    ಪಿಷ್ಟರ್ ಪಟ್ಟಿಯ ಕಟ್ಟುತೆ
    ಯಷ್ಟಿಯನುಂ ನ್ಯಾಯದೇವಿಗಂ ಕೊಡದಾದರ್|

    • ತುಂಬ ಒಳ್ಳೆಯ ಪದ್ಯಗಳು ಚೀದಿ, ಶೈಲಿಯಲ್ಲಿ ಆಭಿಜಾತ್ಯವಿದೆ. ಕೇವಲ “ಪಾಪಿಷ್ಠ ” ಎಂಬ ಪದವು ತಪ್ಪಾಗಿದೆ.

  10. ಮನದೊಳುದ್ಭವಿಪ್ಪೊಟ್ಟಾ
    ಸೆಗೊಬ್ಬರಮನಾರ್ಜಿಸೆ,
    ಸ್ವಾರ್ಥವೃಕ್ಷಂಗಳೊಳ್ಸಲ್ಗುಂ
    ಭ್ರಷ್ಟಾಚಾರಫಲಂ ದಿಟಂ

    • ಅನುಷ್ಟುಪ್? ಆದಿಪ್ರಾಸಗಳು ಎಲ್ಲಿ? 🙂

      • “ಪ್ರಾಸ” ವಿಲ್ಲಾ 🙂

        • ಈಸು ಸ್ವಾತ೦ತ್ರ್ಯವೇನವ್ವ
          ಪ್ರಾಸದ ತ್ರಾಸವಿಲ್ಲದೇ
          ಭಾಸಿಪ್ಪ ಪದ್ಯಮ೦ ನೀಳ್ದು
          ಜೈಸಬೇಕೆ೦ಬ ಹ೦ಬಲ೦ 🙂

    • ಪ್ರಾಸರಾಹಿತ್ಯ ಮಾತ್ರವಲ್ಲದೆ ಪದ್ಯದ ಪೂರ್ವಾರ್ಧದ ಗತಿಯು ಕೂಡ ತೀರ ಕೆಟ್ಟಿದೆಯಲ್ಲಾ!

      • ತಪ್ಪಿಗೆ ತಕ್ಕ ಶಿಕ್ಷೆಯಾದುದೈ 🙂 ಸರಿಮಾಡಿಕೊಳ್ಳಲು ಯತ್ನಿಸುವೆ

        • ಸರಿಪಡಿಸಿರುವ(?) ಪದ್ಯ:

          ಅರ್ಥವಾಂಛೆಯ ಕೂಳಂ ತ
          ತ್ವಾರ್ಥರೂಹಿನೊಳಾರ್ಜಿಪೀ
          ಸ್ವಾರ್ಥವೃಕ್ಷಂಗಳೊಳ್ಸಲ್ಗುಂ
          ವ್ಯರ್ಥಭ್ರಷ್ಟಫಲಂ ದಿಟಂ!
          (ಧನದಾಹವೆಂಬ(ಸೃಷ್ಟಿಸಲ್ಪಡುವ) ಕೂಳಿಂದ ಪೋಷಣೆ ಪಡೆಯುವ ಸ್ವಾರ್ಥವೃಕ್ಷಗಳಲ್ಲಿ ಬೆಳೆಯುವ ಭ್ರಷ್ಟಫಲ)

          • ಈಗ ಚೆನ್ನಾಗಿದೆ. “ತತ್ತ್ವಾರ್ಥ” ಎಂದು ಟಂಕಿಸಿದರೆ ಇನ್ನೂ ಚೆನ್ನ

          • ಧನ್ಯವಾದ 🙂

  11. ಇಹಲೋಕಾರ್ಥದೆ ಧರ್ಮಮನ್ನುಳಿಸೆ ಲೋಕಾಯುಕ್ತರಂ ನೇಮಿಸಲ್,
    ತಹಬಂದಂ ಕಳೆದಾತ್ಮಸಾಕ್ಷಿಯ ಮರೆರ್ದುಂ ಪಾಪಕಾರ್ಯಂಗಳಿಂ
    ಮಹನಾಕಂಗಳನಿಂತು ತಾಂ ನರಕಮಂಗೈದಿರ್ಕರೇಂ, ಭ್ರಷ್ಟರುಂ,
    ಸಹವಾಸಂ ತರಮಲ್ಲಮೈ, ತವಕಮಂ ಕಾಣ್, ಕಾಯ್ವರಂ ಕಾಯ್ದಿರಲ್ !!

    “ಲೋಕಾಯುಕ್ತ”ದ ಯುಕ್ತಾಯುಕ್ತತೆಯ ಬಗೆಗಿನ ಪದ್ಯ.

    • ಎರಡನೇ ಸಾಲಿನ “ಮರೆರ್ದುಂ” ಎಂಬುದು ಅರ್ಥವಾಗಲಿಲ್ಲ.ಮೂರನೇ ಸಾಲಿನಲ್ಲಿ “ಗೈದಿರ್ಪರೇಂ” ಎಂದಲ್ಲವೇ?

      • ಆತ್ಮಸಾಕ್ಷಿಯನ್ನು ಮರೆತು – ಎಂದು ಹೇಳಬೇಕ್ಕಿತ್ತು, “ಮರೆರ್ದುಂ” ಎಂದರೆ ಸರಿಯಾಗದಲ್ಲವೇ?
        “ಗೈದಿರ್ಪರೇಂ” ಎಂದು ತಿದ್ದಿಕೊಳ್ಳುವೆ.
        “ಭ್ರಷ್ಟಾಚಾರ ಬೀಜ”ದ ಪದ್ಯವಂತು ತುಂಬಾ ಚೆನ್ನಾಗಿದೆ, ಕೊಪ್ಪಲ ತೋಟ.

    • ‘ಸಾಲಂ’ಕೃತವರ್ಣನೆಯನ್ನು ಮಾಡಿ ಎಂದು ಹೇಳಿರುವುದರಿಂದ, ವಸ್ತುವನ್ನು ಉಷಾರವರಿಂದ ’ಸಾಲ’ಪಡೆದು ಪದ್ಯರಚನೆಯನ್ನು ಮಾಡಿದ್ದೇನೆ:
      ನಿಜದಿಂ ಭ್ರಷ್ಟರು ತಾವುಮಾಗಿಹರೆ ಲೋಕಾಯುಕ್ತ ಸಿಬ್ಬಂದಿ ಪೇಳ್
      ಭುಜಿಸುತ್ತಿರ್ಪರು ಲಂಚಮನ್ನಿನಿತನುಂ ತಾಮೊಂದು ಉದ್ದೇಶದಿಂ|
      ರುಜಿನಂ ಮಾಯ್ವುದು ತಾನದೇ ರುಜಿನದಿಂ (vaccination/homoeopathy) ಎಂಬಂತೆಯೇ, ಸಾಧಿಸಲ್
      ಬಿಜಯಂ ಲಂಚದ ಮೇಲವರ್ಗಳದರಂ ನಿತ್ಯಾನುಸಂಧಾನಿಗಳ್||

      • “ಪ್ರಸಾಧನ”ಕ್ಕೆ ಅಭಿನಂದನೆಗಳು. (ಸಾಲ(ವ)ನ್ನು ಕೊಂಡ) “ಪ್ರಸಾದ”ನಕ್ಕೆ ಧನ್ಯವಾದಗಳು.

  12. ಕುರುರಾಯಂ ಸಮಭಾಗಮಂ ಕುಡದೆ ಕೌಂತೇಯರ್ಗೆ,ಜೂದಾಟದೊಳ್
    ಕೊರಲೀವಂದದ ಧೂರ್ತಚಾರಿಯಿನೆ, ಕಾಂತಾರಕ್ಕೆ ತಳ್ಳಿರ್ದನೇ!
    ವರಪಾಂಚಾಲಿಯ ಮಾನಮಂ ಕಳೆಯುತುಂ ಭೂಪಾಲಸಂಕಾಶದೊಳ್,
    ಪರಮಾಚಾರ್ಯನಪಟ್ಟಮಂ ತಳೆದನೇಂ ಭ್ರಷ್ಟಾತ್ಮವೈಢೂರ್ಯರೊಳ್!

    • ಆಚಾರವೇ ಇಲ್ಲದವನು ಭ್ರಷ್ಟಾಚಾರಾಚಾರ್ಯ ಆಗಲಿಕ್ಕೆ ಹೇಗೆ ಸಾಧ್ಯ 🙂 ಚೆನ್ನಾಗಿದೆ.

    • ಎರಡನೇ ಸಾಲಿನ “ಶಾರಿಯೆರ್ಚಿಸುತೆ” ಎಂಬುದು ಸ್ಪಷ್ಟವಾಗಲಿಲ್ಲ. ಉಳಿದಂತೆ ಪದ್ಯದ ಕಲ್ಪನೆ-ಬಂಧ-ಭಾಷೆಗಳು ಸೊಗಸಾಗಿವೆ 🙂

      • ಧನ್ಯವಾದ ಅವಧಾನಿಗಳೇ , ಧೂರ್ತಚಾರಿ =ಮೋಸದ ಚಲನೆ ,ಎಂದು ತಿದ್ದಿದ್ದೇನೆ.

  13. ತೆನೆತೆನೆಯಿಂ ಬಳ್ಳವು ತುಂಬುವವೊಲ್
    ತನಿ ಲಂಚದ ಮೊತ್ತವು ಬಹಳಂ|
    ಒನಪಿಲೆ ದಿಲ್ಲಿಯ ಸೇರಲು ರಂಧ್ರಮ-
    ನೆನಿತೋ ಗೈದಿತು ರಾಷ್ಟ್ರಮನುಂ||

  14. ಲಂಚಮಂ ಕೊಳ್ಳದಿಹ ಕಾರಕೂನನವನಿಂ
    ಹಂಚಿಕೊಳ್ಳದಧಿಕಾರಿಯವನಂ ಪೀರದ ಖ
    ಜಾಂಚಿಗಳವರುಗಳಿಂ ಲೆಕ್ಕಮಂ ಬೇಡದಾಯುಕ್ತರೆಲ್ಲಿರ್ಪರಿಲ್ಲಿ|
    ಸಂಚಿತದ ಲಂಚವದು ಸೇರಿ ನೇತಾರರನು
    ಕೊಂಚಕೊಂಚಮೆ ಹರಿದು ಭೃತಕಯೋದ್ಧರಿಗವರು (ರೌಡಿಗಳು)
    ಸಂಚರಿಸುತಿರ್ಪರೆಲ್ಲೆಡೆ ನಾಡಿನೊಳು ಸಜ್ಜನರ ಪೀಡಿಸುತುಮಾವಗಂ||

    • ಎರಡನೆಯ ಸಾಲಿನಲ್ಲಿ ಛಂದಸ್ಸನ್ನು ಸವರಿಸಿಕೊಳ್ಳಬೇಕು.

  15. ಬಗೆಯಿಂ ಭ್ರಷ್ಟಾಚಾರಂ
    ನಗೆಯಾಡುತಿರುದೆಲೆ ನಮ್ಮೊಡಂ-ಬದಿ(ಡಿ)ಗೊಳುತುಂ ।
    ಪಗಲದರೋಡೆಯಿದುಂ ಗಡ
    ತೆಗೆ, ತಡೆಗೈಯ್ಯಲ್ಕಸಾಧ್ಯಮೀ ಕರಕರೆಯಂ ।।

    ಕರಕರೆ = ಕಾಟ / ಕರದ ಕೂಗು !!

  16. ನಡೆನುಡಿಗಳೊಲ್ ಸಭ್ಯತೆಯದೋರಿ ನೀಚತೆಯಂದ
    ಪಡೆವರುಚ್ಭಸ್ಥಾನಮಂ ಮೋಸಂದಿಂ
    ದಡಿಗಡಿಗುಮಡತೆಯನೊಡ್ಡಿ ವ್ಯವಸ್ಥೆಯನೆ
    ಸಡಿಲಮಾಗಿಸುತದನೆ ದೂಷಿಪರಲಾ

  17. ಬಡವಂಗೆ ಭಾಗ್ಯಮಂ ಕರುಣಿಸಲ್, ಯೋಜನೆಯ
    ನಡಿಗಡಿಗೆ ಕೊಡಮಾಳ್ಪವೊಲ್ ನಟಿಸುತೆ
    ಕಡೆಗೆ ಕೊಂಡೊಯ್ವರೈ ಲೋಗರೈಶ್ವರ್ಯಮಂ
    ಪೊಡವಿಯೊಳ್ ಶ್ರೇಷ್ಠತಮ ಕಳ್ಳರಿಂದು

  18. ನಿಜದಿಂ ಸ್ವಾರ್ಥಾಯುಧನಂ
    ಪ್ರಜಾಪ್ರಭುತ್ವಗತಿಹಾರನಂ ಭ್ರಷ್ಟಾಚಾ-
    ರೌಜನಮೋರಂತರಸಲ-
    ರಾಜಕತೆಯದೋ ವಸಂತಮಪ್ಪುದು ಬಾಳೊಳ್||
    Anarchy can become a spring season – if we follow him 🙂 ಪ್ರಜಾಪ್ರಭುತ್ವಗತಿಹಾರ = The way democracy is working now is his garland or He is the slayer of how democracy has to work. ಓಜ = teacher.

    • ಆಹಾ ಅರಾಜಕತೆಯೇ ವಸಂತ! ಚೆನ್ನಾಗಿದೆ.

      • ಅರ್ಥವಾಗುತ್ತಿಲ್ಲ!

        • Ask your namesake (koppalatoTa) who has understood it very well 😉

        • ಹಮ್.. ವ್ಯಂಗ್ಯವನ್ನು ತರಲು ಪ್ರಯತ್ನಿಸಿದ್ದು. ಭ್ರಷ್ಟಚಾರದೇವನನ್ನು ಹಿಡಿದರೆ ಅರಾಜಕತೆಯಲ್ಲಿಯೇ ಚೆನ್ನಾಗಿ ಕಮಾಯಿಸಬಹುದು ಎನ್ನುವ ಯತ್ನ.

  19. ರಂಗನೆ ಬದಲಿಪ ಬಿಜ್ಜೆಯನರುಹುತೆ
    ಛಂಗನೆ ನೆಗೆವೋತಿಕ್ಯಾತಂ,
    ಸಂಗಮನಿತ್ತು ಭ್ರಷ್ಟರ್ಗೆ, ನಿಜದೆ
    ಸಂಗತಿಯಂ ತಾಂ ವರ್ಧಿಸಿತೇಂ!

    ಸಂಗತಿ=ಬಾಂಧವ್ಯ

  20. ಚಿತ್ತದೊಳ್ ಮೊಳೆಯಲ್ಕೆ ವಿಚಿತ್ರಭ್ರಷ್ಟತೆಯೆಂಬುದು ಬೀಜದಂ
    -ತುತ್ತರೋತ್ತರಮಾದುದು ಕಾಂಡಂ ವಾಂಛೆಯೆ ದುಷ್ಕೃತಿಗಳ್ ಸದಾ
    ಪೊತ್ತ ಪರ್ಣಚಯಂ ನೆರೆದಾದತ್ತಲ್ತೆ ಫಲಂ ಸಿತದೂರದಾ
    ವಿತ್ತಮಂತಿರೆ ಚಿತ್ತದೊಳಿರ್ದೀ ಶಾಂತಿಖಗಪ್ಲುತಮಾದುದೇ ||
    (ಚಿತ್ತದಲ್ಲಿ ವಿಚಿತ್ರವಾದ ಭ್ರಷ್ಟತೆ ಎಂಬ ಬೀಜವು ಮೊಳೆಯಲು, ಉತ್ತರೋತ್ತರವಾಗಿ ಆಸೆಯೇ ಕಾಂಡವಾಯಿತು, ದುಷ್ಕೃತಿಗಳೆಂಬುವು ಹೊತ್ತ ಎಲೆಗಳ ಗುಂಪಾಗಿ ನೆರೆದು ಫಲವು ಕಪ್ಪುಹಣ (ಸಿತದೂರದ ಆ ವಿತ್ತ ) ಆಯಿತು. ಅಂತಿರುವಾಗ (ಹಣ್ಣುಗಳಾಗಿದ್ದರೂ ಕೂಡ!) ಮನಸ್ಸಿನಲ್ಲಿದ್ದ ಈ ಶಾಂತಿ ಎಂಬ ಪಕ್ಷಿ ಹಾರಿಹೋಯಿತು)

    • ಆಹಾ! ಖಚರಪ್ಲುತದಲ್ಲಿ ಸಾವಯವ ರೂಪಕಾಲಂಕಾರ!!

  21. ನ್ಯಾಯದ ದೇವತೆಯಕ್ಷಿಯ-
    ನಾಯತಮೆನೆ ಕರ್ಪವಟ್ಟೆಯಿಂ ಮುಚ್ಚಿರ್ಪರ್
    ಹಾ!ಯೆನಿಕುಂ ಮನಮಾ ಅಡಿ-
    ಪಾಯದ ಸಂಜ್ಞೆಯೊಳೆ ಸಂದುದಯ್ ಕೖಚಳಕಂ

  22. ಭಳರೇ ಸಯ್ಪಿನ ಸಾಕ್ಷಿಯಂ ಜನಕೆನುತ್ತುಂ ನೀಡಲೊರ್ನಾಣ್ಯಮುಂ
    ಕೊಳೆಯಲ್ಕೊಡ್ಡದೆ ಕೋಶಮಂ ತೊಳೆದಿರಯ್ ಸಂದೇಹಮೊಂದಿರ್ಪುದಂ
    ಕಳೆಗುಂ ಗುದ್ದಲಿಪೂಜೆ ಗೆಯ್ದಪುದು ಶಂಕುಸ್ಥಾಪನಾನಂತರಂ
    ಬೆಳೆಗುಂ ಪೇಳ್ದಪ ವೀರಗಲ್ಗಳುಳಿಯಲ್ ಮತ್ತೆನನುಂ ಕಾಣೆನಯ್

    • ಭಳಿರೇ ಪದ್ಯಗಳಿಂದೆ ಕಲ್ಪನೆಗಳೊಳ್ ನೀಂ ನೂತ್ನಮಂ ತೋರ್ದಿರೈ

  23. ಪಣಮಂ ನೂರ್ಮಡಿ ಮಾಳ್ಗುಂ
    ಗುಣಿಪುದು ಸಾವಿರದ ಪಟ್ಟಿನಿಂ ಗಡಮೆಲ್ಲಂ
    ಪೆಣಮಪ್ಪುವನ್ನೆಗಂ ಕ-
    ರ್ಷಣಮಂ ಗೆಯ್ಗುಂ ಸಮೃದ್ಧಚಿತೆಯೊಳ್ ಮಡಿಗುಂ

  24. ತುಷ್ಟಿವಂಚಿತಂ
    ನಷ್ಟಕಾರಕಂ
    ದೃಷ್ಟಿಘಾತಿತಂ
    ಭ್ರಷ್ಟರಕ್ಕಸಂ||

    • ಯಾವ ರಾಗ?

    • ಕ್ಷಮಿಸಿ, ಯಾವ ಛ೦ದಸ್ಸು? 🙂

      • @ಕಾಂಚನಾ, ಪದ್ಯ ಚೆನ್ನಾಗಿದೆ. ಆದರೆ ನಿಮ್ಮ ಈ ಪದ್ಯದ ಸ್ಫೂರ್ತಿಯಿಂದ ಎಲ್ಲರೂ ಚಿಕ್ಕ ಚಿಕ್ಕ ಛಂದಸ್ಸುಗಳಲ್ಲಿ ಬರೆಯತೊಡಗಿದರೆ ಗತಿಯೇನು? 🙂
        @ನೀಲಕಂಠ, ಇದು ಧೃತಿ ಅಥವಾ ವಾಗುರಾ ಇಲ್ಲವೇ ವಿದಗ್ಧಕ ಎಂಬ ಹೆಸರಿನ “ರಲಗಂ” ವಿನ್ಯಾಸದ ವೃತ್ತ. ಡಿವಿಜಿ “ಅಂತಃಪುರಗೀತಗಳು” ಪುಸ್ತಕದಲ್ಲಿ ಇದನ್ನೊಮ್ಮೆ ಬಳಸಿದ್ದಾರೆ (ನೋಡಿ: ದೃಷ್ಟವೃಶ್ಚಿಕಾ…….)

        • ಹೃಷ್ಟಲೌಕಿಕಾ 😉

          • ಧನ್ಯವಾದಗಳು.
            ಇದಾದ ನಂತರ ಆಗಲೀ 2 ಪದ್ಯಗಳು ಚಿಕ್ಕದಲ್ಲದ ಛಂದಸ್ಸಿನಲ್ಲಿ ಬಂದಿರುವದರಿಂದ ತಾವು ಚಿಂತೆಯನ್ನು ಬಿಡಬಹುದು 🙂

    • ಧನ್ಯವಾದಗಳು ಸರ್. ಆದರೆ ಇಷ್ಟು ಚಿಕ್ಕ ಛ೦ದಸ್ಸಿನಲ್ಲೂ ಭ್ರಷ್ಟರಕ್ಕಸನೆ೦ಬ ಅರಿ ನುಸುಳಿ ಕೂತಿರುವುದು ಸೋಜಿಗ!

  25. ತಿಳಿನೀರ್ ನೆಲೆನಿಲ್ವೆಡೆಯೊಳ್
    ಸುಳಿವಂದದೆ ಶೈವಲಂ,ಜಗಮರಿವ ಮುನ್ನಂ,
    ಬಳಿಸಾರ್ಗುಂ ಭ್ರಷ್ಟತೆಯುಂ
    ಸಲೆ ಕೆಮ್ಮಗೆ, ವಿತ್ತಕೋಶಮಿರ್ಪೆಡೆಯೆಲ್ಲಂ

    • ಆಹಾ! ಒಳ್ಳೆಯ ಹಳಗನ್ನಡದ ಸೊಗಸುಳ್ಳ ಪದ್ಯ….!! ಅಭಿನಂದನೆಗಳು.

    • ಪೊಳೆಪೊಳೆದ೦ಬರದೊಳ್ ದು-
      ಷ್ಕಳೆಯ೦ ಕಳೆಕಳೆದು ಕಣ್ಗೆ ಕಮನಿಪ ತಾರಾ-
      ವಳಿಯ೦ದ೦ ಮಿಳುಗಿತ್ತೌ,
      ಮಳೆಗರೆಯಲ್ಕೆ ಕವನ೦ಗಳಾ ನೀಮೀಗಳ್

    • ಚೆನ್ನಾಗಿದೆ ಪದ್ಯ

    • ತಮ್ಮಪ್ರೋತ್ಸಾಹ ಮತ್ತು ಮಾರ್ಗದರ್ಶನಕ್ಕಾಗಿ ವಂದನೆಗಳು ಸರ್ 🙂

    • ಭ್ರಷ್ಟತೆಯಿಂದೆ ಪದ್ಯಮನೆ ನುಂಗಿದಿರೇಂ ಸಖ ಕಾಣೆನೇನುಮಂ!

  26. ಬಳೆದಿರುವಾ ಪೊಡೆ ದುಷ್ಟಕೃತ್ಯಫಲಂಗಳಂ
    ಸಲೆ ತಿನುವರ್ ಖಲರೆಂದು ತೋರ್ದುರೆ ಶಾಸಕ
    ರ್ಕಳೊಳಿರದಾವಗಮಂತರಂಗಮೆನುತ್ತೆ ಮೇ
    ಣುಲಿದಪುದಿಂತುಟು ಕೋಪದಗ್ಧಮುಖಂ ಗಡಾ||
    (ಹೊಸದಾದ ನವನಳಿನ ಎಂಬ ವೃತ್ತಪ್ರಯೋಗಕ್ಕೆ ಬರೆದದ್ದು-
    ದುಷ್ಟಕೃತ್ಯದ ಫಲಗಳನ್ನೇ ತಿನ್ನುತ್ತಾರೆ ಈ ಖಲರು ಎಂಬುದನ್ನು ಬೆಳೆದಿರುವ ಆ ಹೊಟ್ಟೆ ತೋರಿಸುತ್ತಿದೆ! ಶಾಸಕರಲ್ಲಿ ಯಾವತ್ತೂ ಅಂತರಂಗ ಇರುವುದಿಲ್ಲ ಎಂದು ಕೋಪದಿಂದ ದಗ್ಧವಾದ ಮುಖ ಹೇಳುತ್ತಿದೆ.)

    • ಭಟ್ಟರೆ ಭೇಷಯ್! ಅಕ್ಕರ
      ಗೊಟ್ಟಿಗೆ ಪರಪುಟ್ಟದಂತೆ ಸಂದಿರಿ ದಿಟದಿಂ|
      ಕಟ್ಟಿದ ಪದ್ಯದ ಮಾಲೆಗ-
      ಳೊಟ್ಟಜೆಯಿಂ ತೋರ್ಪುದಲ್ತೆ ನಿಮ್ಮ ವಿಶೇಷಂ|| 🙂
      ಎಲ್ಲಾ ಪದ್ಯಗಳೂ ಅನೂಹ್ಯವಾಗಿವೆ.

    • ನವನಳಿನಂ ಸೊಗಸಾಯ್ತು ಶೈಲಿ-ವಿಲಾಸದಿಂ

  27. दानप्रवाह-गलित-स्थिरताः प्रमत्ताः
    लोभान्वितैर्मधुकरैरुपसेव्यमानाः ।
    भ्रष्टा गजाः कलभयूथपुरोगवास्ते
    व्यापादयन्ति नगराणि च काननानि ॥

    ದಾನದ ಪ್ರವಾಹದಿಂದ ಸ್ಥಿರತೆಯನ್ನು ಕಳೆದುಕೊಂಡ (ನೈತಿಕ ಸ್ಥೈರ್ಯವನ್ನು ಕಳೆದುಕೊಂಡ), ಪ್ರಮತ್ತರಾದ, ಲೋಭಿಗಳಾದ ದುಂಬಿಗಳಿಂದ ಓಲೈಸಲ್ಪಟ್ಟ, ಮರಿಯಾನೆಗಳ ಹಿಂಡಿನಿಂದ ಕೂಡಿದ (ಅವುಗಳಿಗೆ ಮಾರ್ಗವನ್ನು ತೋರುವ) ಭ್ರಷ್ಟರಾದ ಆನೆಗಳು (ಭ್ರಷ್ಟರು) ನಗರಗಳನ್ನು ಕಾನನಗಳನ್ನೂ ನಾಶ ಮಾಡುತ್ತವೆ.

  28. ಬಲುಕೋಟಿ ಜೀವರ ಬಿಡದೆ
    ಸಲಹುವ ದೈವವಿಡೆ ಋಣದ ಲೆಕ್ಕಾಚಾರಂ ।
    ಹಲಹುಟ್ಟುಗಳೊಳುಂ ಕೊಡು-
    ಕೊಳುಗೊಳೆ “ಲಂಚಾವತಾರ”ಮನಿವಾರ್ಯಮೆ ಮೇಣ್ ?!

    (ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವ್ ಋಣಿಯೋ ……. ?! ಅನಿತನಿತು ಕೊಡುಕೊಳೊ “ಲಂಚ” !)

    ಜನ್ಮ ಜನ್ಮಾಂತರದ ಋಣದ ಲೆಕ್ಕಾಚಾರಕ್ಕೇನೀ – “ಲಂಚಾವತಾರ” (ಜನಸಂಖ್ಯೆ ಹೆಚ್ಚಿರುವ ಕಾರಣ – ಅನ್ಯ ಮಾರ್ಗವಿಲ್ಲದೆ)

    • ಆಹಾ! ತುಂಬ ಸೊಗಸಾದ ಭಾವದ ಕಂದ!!

      • ಧನ್ಯವಾದಗಳು ಗಣೇಶ್ ಸರ್,
        ಅಂತೂ “ಲಂಚ” – PAY”BACK” ಅಲ್ಲ “PAY-FORWARD” – “ದಂಡ” ಅಲ್ಲವೇ ?!!

      • ನಗೆಯು ಬರುತಿದೆ ನನಗೆ ನಗೆಯು ಬರುತಿದೆ,
        ಜಗದೊಳಿರುವ ಮನುಜರೆಲ್ಲ “ಹಗರಣ”ಮಾಡುವುದ ಕಂಡು …. !!

  29. ಲಂಚ, ಲಾಟರಿ, ಚೌರ್ಯ, ಹಗರಣ,
    ಕೊಂಚ ವ್ಯಾಪಂ, ಗಣಿಯ ಪಣ್ಯವು,
    ದೋಂಚುವುದು ಸ್ಟಾಕ್ ಕಟ್ಟೆಯೊಳು ಮೇಣ್ ಫೋರ್ಡು ದತ್ತಿಯೊಳು|
    ಸಂಚ ರೀತಿಯ ಸ್ಕ್ಯಾಮು, ಬೋಫೋರ್ಸ್,
    ವಂಚನೆಯ ಗ್ರೀನ್ಪೀಸು ಮೇಣಿಂ
    ಹೊಂಚುವರ್ ಘೋಟಾಳೆ, ರಿಯಲೆಸ್ಟೇಟುಗಳಿಗಾಗಿ||

    • ಒಳ್ಳೆಯ ಭಾಮಿನಿ ಪ್ರಸಾದು!….ಲಂಚಕ್ಕೆ ತಕ್ಕ ಮಂಚವನ್ನೇ ಅಣಿಮಾಡಿದ್ದೀರಿ:-)

    • ಮಾಡ್ದೋರ್ “ಪಾಪ” ಆಡ್ದೋರ್ ಬಾಯ್ಲಿ !! ಚೆನ್ನಾಗಿದೆ.
      (ಇಷ್ಟೊಂದು ಪಾಪಗಳನ್ನ ಹೊಟ್ಟೆಯಲ್ಲಿಟ್ಟು ಕೊಳ್ಳಲು “ಭಾಮಿನಿ”ಗೆ ಮಾತ್ರ ಸಾಧ್ಯವಾಗಿದೆ ನೋಡಿ !!)

  30. ಪು೦ಡರ್ ಭ೦ಡರ್ ಬಲುಹಿನೊಳಗ೦ ಭ್ರಷ್ಟಮೃಷ್ಟಾನ್ನಮ೦ ತಾ-
    ವು೦ಡರ್ ಚ೦ಡರ್ ಚಪಲಚರಿತರ್ ಚಾರುಚಾರ್ವಾಕತತ್ತ್ವ೦-
    ಗೊ೦ಡರ್ ಕ೦ಡರ್ ಕಲುಷವಿಧಿಯೊಳ್ ದರ್ಶನಾಕರ್ಷಮ೦ ಶ್ರೀ-
    ಭಾ೦ಡರ್ ದ೦ಡರ್ ದೊರೆತನಮಿರಲ್ ನೀತಿರಾಹಿತ್ಯದಾ ಕಾಣ್

    ಭ್ರಷ್ಟತೆಯ ಮೃಷ್ಟಾನ್ನವನ್ನುಣ್ಣುವವರು. ಚಪಲಚರಿತರಾಗಿ ಚಾರ್ವಾಕತತ್ತ್ವವನ್ನು ಸಾಕ್ಷಾತ್ಕರಿಸಿಕೊ೦ಡವರು. ಕೆಟ್ಟ ಆಚಾರದಲ್ಲಿ ಮಹದ್ದರ್ಶನದ ಆಕರ್ಷಣೆ ಉಳ್ಳವರು. ಸ೦ಪತ್ತಿನ ಕೊಳಗದ೦ತಿಹರು. ನೀತಿರಾಹಿತ್ಯದ ರಾಜ್ಯ ನಡೆದಿರಲು ಇವರು ಅದರ ರಾಜದ೦ಡದ೦ತಿಹರು.

    • ದಂಡಕದ ವೋಲು ಮಂದಾಕ್ರಾಂತಮನೊರೆದು-
      ದ್ದಂಡರಲ್ತೆಲೆ ನೀವು ನೀಲಕಂಠಾ|
      ಪಿಂಡಾಂಡ-ಬ್ರಹ್ಮಾಂಡದೊಳು ಸವರು ನಿಮ್ಮ ಈ
      ತಾಂಡವಕೆ ಆರಿರ್ಪರಯ್ಯ ಪೇಳು||

      • ಹಹ್ಹಹ್ಹಾ…. ಧನ್ಯವಾದಗಳು.. ಸಮರೂ ಸಮರೋತ್ಸಾಹಿಗಳೂ ಅಧಿಕರೂ ಅಧಿಕಪ್ರಚ೦ಡರೂ(ಪ್ರಸ೦ಗರೂ) ಉದ್ದ೦ಡಪ್ರತಾಪಪ್ರಸಾದರೂ ನೀವಿರಲ್ಕೆತ್ತಣಮೀ ನೀಲಕ೦ಠನ ತಾ೦ಡವ೦?!!

    • ಒಳ್ಳೆಯ ಶೈಲಿಯ ಪದ್ಯ. ಶಬ್ದಾಲಂಕಾರಗಳು ಚೆನ್ನಾಗಿವೆ.

  31. ತ್ರೀಜೀ ಹಗರಣ ಕಾಣ್ ಗಾಂ-
    ಧೀಜಿಯ ನಾಡೊಳದೊ ಮೂರನೆಯ ತಲೆಮಾರೊಳ್ ।
    ಫೋರ್ಜಿ(4G)ಸಲಿರದುದನಿರುವೋಲ್
    ಭಾಜಿಸೆ ಶೂನ್ಯದೊಳಗೊಂದನಾದುದನಂತಂ ।।

    ಗಾಂಧಿ ಹುಟ್ಟಿದ ನಾಡಿನಲ್ಲೇ, ಲೆಕ್ಕಕ್ಕೇ ಸಿಗದ (ಅನಂತ) 3G(Third Generation) ಹಗರಣದ ಬಗ್ಗೆ.

    Forgeಇಸು = ಸುಳ್ಳು ಸೃಷ್ಟಿಮಾಡು / ಇರದುದು- ಇರುದು ~ 0 – 1 (Digital)
    ನಡೆಯದ (ಭಾಜಿಸು =) Spectrum ಹಂಚಿಕೆ – “ಸೊನ್ನೆ”ಯಿಂದ ಭಾಗಿಸಲಾಗಿ ಆದ “ಅನಂತ” ಹಗರಣ !!

    • Hahhaa divide by zero anomaly chennagide. Moorane aadi praasa innulidavakke bhinnavaytu.

      • ಇಲ್ಲ ನೀಲಕಂಠ ನಾನು ನಿರ್ದೋಷಿ, ಫೋರ್ಜಿಸಿದ್ದು ನಾನಲ್ಲ. “ಫೋರ್(4) ಜಿ(G)” ಅಂತ ಸ್ಪೇಸ್ ಬಿ(ಇ)ಟ್ಟೇ ಬರೆದಿದ್ದೆ. ಯಾವ ಮಾಯದಲ್ಲಿ ಅದು “ಫೋರ್ಜ್” ಆಯಿತೋ ತಿಳಿಯುತ್ತಿಲ್ಲ !! ಅಂದಹಾಗೆ “ನಿರ್ದೋಷಿ” “ದ”ಕಾರ ಪ್ರಾಸವಲ್ಲವೇ ?

        • ಹೌದು ಮೇಡಮ್, ನಿರ್ದೋಷಿ ದಕಾರಪ್ರಾಸಕ್ಕೂ, ಫೋರ್ಜೀ (ಫೋರ್ ಜೀ) ಜಕಾರಪ್ರಸಾಕ್ಕೂ ಒದಗುತ್ತವೆ. ಆದರೆ ಪ್ರಾಸದ ವಿಧಗಳು ಬೇರೆ ಬೇರೆ ಇವೆಯಲ್ಲಾ… ಶರಭ ಸಿ೦ಹ ಗಜ ಎ೦ದೆಲ್ಲ. ಹೀಗಾಗಿ ತ್ರೀಜಿ, ಧೀಜಿ ಜೊತೆ ಫೋರ್ ಜೀ ಹೊ೦ದುವುದಿಲ್ಲ.

          • ಓ.. ಅದು “ಶರಭ” ಪ್ರಾಸವಾಗಿವುದೇ? ಹಾಗಾದರೆ

            ತ್ರೀಜೀ ಹಗರಣ ಕಾಣ್ ಗಾಂ-
            ಧೀಜಿಯ ನಾಡೊಳದೊ ಮೂರನೆಯ ತಲೆಮಾರೊಳ್ ।
            ಸೋಜಿಗಮಿದುವಿಲ್ಲದರೊಳ್
            ಭಾಜಿಸೆ ಶೂನ್ಯದೊಳಗಾದುದೇನದನಂತಂ ।।

  32. ಗಂಜಿsಯ ಕುಡಿಯಾಕ ನಂಜಾಗೆ(ಕಷ್ಟ) ಬದುಕಾಗ
    ಲೆಂಜsಲ ಕಾಸ ಕೊಳಲಾಕ । ಲಂಜುವನ
    ಮುಂಜಾಗೆ ಕಾವ ನಂಜುಂಡ ।।

    • ಮು೦ಜಾಗೆ ಎ೦ದರೆ?

      • ನಮ್ಮ “ನಂಜುಂಡ” ಇಂಗೆ ಕೇಳ್ಬೌದು ಅಂತ ಮುಂಜಾಗೆ(ಮುಂಚೆಯೇ) ಯೋಚುಸ್ಬೇಕಿತ್ತು !!

        • ನ೦ಜನ್ನೆ ನಾನು೦ಡೆ ರ೦ಜಿsಸೆ ಲೋಕsವ
          ಮ೦ಜಾಯ್ತು ನನ್ನ ಮತಿಯಿ೦ದು | ತಿಳಿವಿsಗೆ
          ಮು೦ಜಾವ ಉಷೆಯು ಬೇಕಾಯ್ತು

  33. ಇನಸೋಮರರ್ಪಿನಿಂ ಕಾಂತಿಯಂ ಬೆಳಗಿರೆ ಭು
    ವನಕೆಲ್ಲಿಯ ತಿಮಿರಾಸುರಘನಭಯಂ!
    ಜನಪನಾಗಿರೆ ಧಕ್ಷನಂತೆಯೇ ಲೋಗರೊಳ್
    ಜನಿಪುದೆಂತು ಭ್ರಷ್ಟಶಕ್ತಿಸ್ವಯಂ !

  34. || ಮತ್ತಮಯೂರವೃತ್ತ ||

    ಭ್ರಷ್ಟಾಚಾರಂ ತಾಂಡವವಾಡಲ್ ಭರದಿಂ, ಸಂ-
    ಕಷ್ಟಂಗೊಂಬರ್ ಶಿಷ್ಟರಿದಂ ಕಾಣುತೆ ನೋವಿಂ |
    ದುಷ್ಟರ್ ಬೀಗಲ್ ದರ್ಪದೆ,ಸತ್ಯಂ ಹತಮಾಗಲ್,
    ಸೃಷ್ಟೀಶಂಗೀ ರಾಕ್ಷಸಸಂಹಾರಮಸಾಧ್ಯಂ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)