Oct 192015
 

ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ

ಬಲಿಭೋಜನಂ = ಕಾಗೆ

  41 Responses to “ಪದ್ಯಸಪ್ತಾಹ ೧೭೩: ಸಮಸ್ಯಾಪೂರಣ”

 1. ಚುಂಚಿನೊಳ್ ಪಿಡಿದಿರ್ದ ಮಾಂಸದ ತುಂಡಿಗಾಶಿಸುತಂತೆಯೇ
  ವಂಚಿಸುತ್ತಲೆ ಪೊಂದೆ,ವಾಯಸಗಾ ಶೃಗಾಲನು ಪೇಳ್ದನೈ-
  “ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ!,
  ಮುಂಚೆ ಬಂದಿಹೆ, ವಾರ್ತೆಯೊಪ್ಪಿರಲೋಡಿಯೇ! ಸಖ,ಪಾಡೆಯೇಂ!”

 2. ಕೆಂಚನಿರ್ಪ ಪರೀಕ್ಷೆಯೊಳ್, ಪಡೆಯಲ್ಕೆ ಪೆರ್ಚಿನ ವರ್ಗಮಂ,
  ಕಂಚಿನಂದದ ಕಂಠದಿಂದಲೆ ಕೂಗಿ ಪಾಡುತುಮಿರ್ದಿರಲ್,
  ಕೊಂಚ ನಿದ್ರೆಯ ಭಂಗಮಾದೊಡನೆಂದನೈ ಸಹವಾಸಿಗಂ
  “ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ”

  (ಕೆಂಚನ ಸಂಗೀತಾಭ್ಯಾಸದಿಂದ ಸಿಟ್ಟಿಗೆದ್ದು, ವಿದ್ಯಾರ್ಥಿನಿಲಯದ ಕೊಠಡಿಯ ಸಹವಾಸಿಯು “ಪಂ…”ಇದನ್ನು ನುಡಿಡನು!)

 3. ಪ೦ಚಭೂತವಿಲೀನಮಾಗಿರೆ ಭೀಮಸೇನಕಲೇವರ೦
  ಹೊ೦ಚಿ ತಿನ್ನುತೆ ಪಿ೦ಡಮ೦ ಪರಪುಷ್ಟಕ೦ಠದ ಭಾವದಿ೦-
  ದಿ೦ಚರ೦ದೆಗೆದಿರ್ದುದೈ ವರಗಾನಕೋವಿದನ೦ದದಿ೦
  ಪ೦ಚಮಸ್ವರದಿ೦ ಪ್ರಪ೦ಚಿಸುತಿರ್ದುದೈ ಬಲಿಭೋಜನ೦

  ಪ೦. ಭೀಮಸೇನ ಜೋಶಿ ಅವರ ಪಿ೦ಡಬಲಿಯನ್ನು ತಿ೦ದು ಕಾಗೆಯೂ ಕೋಗಿಲೆಯ ಭಾವವನ್ನು ಪಡೆಯಿತು 🙂

 4. ಕೊಂಚಮೋದಿದ ವೇದ ನಾಲ್ಕನೆ ಹಿಂಚುಮುಂಚಗೆ ಮಾಡುತುಂ
  ಹಂಚುತಿರ್ಪನು ಹೊಂಚಿ ಸಂಚದುವೆಂತೊ ವಂಚಿಸುದೆಮ್ಮನುಂ
  ಪಂಚಪಂಚಕ ಪಾಡುತುಂ ಸರಪಂಚ! ಕೇಳವನಿಂಚರಂ
  “ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ” ।।

  ವೇದ ಪುರಾಣವನ್ನು ತಪ್ಪಾಗಿ ಅರ್ಥೈಸಿ (ನಾಲ್ಕು ವೇದಗಳ ಬಗ್ಗೆ – ಐದನೇ ಧ್ವನಿಯಲ್ಲಿ !!) ಜನರನ್ನು ದಾರಿತಪ್ಪಿಸುವ “ಸರಪಂಚ”ರ ಬಗೆಗಿನ ಪದ್ಯ !!

 5. ಕೆಂಚ ನೀರ ಚರಂಡಿಯೊಳ್ ಪಿಕದಂತೆ ಕೂಗುವ ವಾಂಛೆಯಿಂ,
  ಹೆಂಚ ಮಾಡೊಳೆ ಪಾರ್ದು ತೋಷಿಪ ವೇಳೆಯೊಳ್,ಘನಗಾನದಿಂ |
  ಮಿಂಚೆ, ತಪ್ಪಿದ ತಾಣದೊಳ್ ಶ್ರುತಿಹೀನಕರ್ಕಶಕಂಠದಿಂ,
  ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ||

  • ಅರ್ಥ ಆಗಲಿಲ್ಲ ಮೇಡಮ್!

   • 🙂 🙂

    ಕೆಂಚಾದ ನೀರಿನ ಚರಂಡಿಯಲ್ಲಿ ಕೋಗಿಲೆಯಂತೆ ಕೂಗುವ ಬಯಕೆಯಿಂದ, ಹೆಂಚಿನ ಮಾಡಿನಲ್ಲಿಯೆ ಹಾರಿ ಸಂತಸಪಡುವ ವೇಳೆಯಲ್ಲಿ ಶ್ರೇಷ್ಥಗಾನದಿಂದ ಮಿಂಚಲೆಂದು , ತಪ್ಪಾದ( ಸ್ವರ) ಸ್ಥಾನದಲ್ಲಿ , ಶ್ರುತಿಹೀನವಾದ ಕರ್ಕಶಕಂಠದಿಂದ ಪಂಚಮಸ್ವರವನ್ನು ಕಾಗೆಯು ಪ್ರಪಂಚಿಸುತ್ತಿದೆ .
    [ಸಾಂಪ್ರದಾಯಿಕವಾಗಿ ಪಂಚಮಸ್ವರವನ್ನು(ಸಪ್ತಸ್ವರಗಳಲ್ಲಿ ಪ ಎಂಬ ಸ್ವರವನ್ನು) ಕೋಗಿಲೆಯ ಧ್ವನಿಗೆ ಹೋಲಿಸಲಾಗಿದೆ. ಕಾಗೆಯೂ ಕೋಗಿಲೆಯಂತೆ ಹಾಡಬೇಕೆಂದು ಪಂಚಮಸ್ವರವನ್ನೇ ಹಾಡಿದರೂ ತನ್ನ ಅಸಾಮರ್ಥ್ಯದಿಂದಾಗಿ ಅದು ಕೆಟ್ಟದಾಗಿ ಹೊರಹೊಮ್ಮಿದೆಯೆಂಬ ಭಾವ]

 6. Dais or not, audience or not, a koel sings away in pancama. Is a crow obliged to sing melodiously just to invite its brethren to partake of the small quantity of food that it has found, only to end up feeding its own belly partly?
  ಮಂಚಮುಂ (dais) ತವೆ ಶ್ರೋತೃವರ್ಗಮದಿಲ್ಲದಿರ್ದೊಡಮುಂ ಪಿಕಂ
  ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ. ಬಲಿಭೋಜನಂ,|
  ಕೊಂಚಮಾತ್ರವ ತನ್ನದಾಗಿಸಿಗಿಸಿ ಕೋಷ್ಠಹಾನಿಯ (ಅರೆಹೊಟ್ಟೆ) ಗೈಯಲುಂ
  ಹಂಚಿ ಭುಂಜಿಸಲೆಲ್ಲರಂ ಮಧುಕಂಠದಿಂ ನುಡಿಗೇಂ (call) ಗಡಾ??
  (“ಬಂದು ತಿನ್ರಲೇsss ನಿಮ್…”)

 7. ಹಂಚಿತಿನ್ನಲು ಕೂಳನುಂ ಕ.ಕ.ಕಾ.ಕಮೆನ್ನುತ ಕಾಕನುಂ
  ಕಂಚಕಂಠದಿ ಕೂಗುತೆನ್ನರ, ಗೈದುದೈ ಸಹಭೋಜನಂ ।
  ಹೊಂಚುಹಾಕಿಹ ಮಾನವಂ ಪ.ಪ.ಪಾ.ಪ ಪಾರಿರಿಯೆನ್ನುತುಂ
  ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ।।

  • ಚಂಚುಪದ್ಯವನೋದುತಾಂ ಅಮಮಾಮಮಾಮಮ ಎನ್ನುವೆಂ!

   • ಧನ್ಯವಾದಗಳು ಪ್ರಸಾದ್ ಸರ್,
    ಕ.ಕ.ಕಾವ್ ಕಾವೊರೆ … ಎಂದು ಗಂಟಲೊಣಗಿರಲು (ಕೊಂಚ ಕೊಂಕಿರೆ ಗೋಣದುಂ …. ) ಪ. ಪ. ಪಾನಿದೊವೆನ್ನುತುಂ – ಎಂದು “ಬಾಲಿವುಡ್” ಕಾಗೆಯ ಬಗ್ಗೆ ಹೇಳಬೇಕೆಂದಿದ್ದದ್ದು !!

 8. ಹಂಚ ಮೇಲಣ ಕೃಷ್ಣವರ್ಣದ ಪಕ್ಷಿಕೂಜನಕೋದು ಮೇಣ್
  ಕೊಂಚೆ ಕಾಗೆಗಳಂತೆಯೇ ಕೆಲ ಹಕ್ಕಿಗುಂಪನೆ ನೋಳ್ದವಂ
  ಕೊಂಚ ತಲ್ಲಣಗೊಂಡು ತಾಂ , ತಿಳಿವಿಲ್ಲದೇ ನುಡಿಯಾಡ್ದನೈ
  “ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ!”

  (ಈ ಮೊದಲು ಕೋಗಿಲೆಯನ್ನು ಕಣ್ಣಾರೆ ಕಾಣದ್ದರಿಂದ, ಯೋಚನೆಗಿಂತ ಮೊದಲಾಗಿ ಈ ಮಾತು ,ಹೊರಬಿತ್ತು!)

  • ಹಂಚ (ಸುಡುವ ತವ) ಮೇಗಡೆ ಹಕ್ಕಿಯನ್ನಿಡೆ, ಕೋಕಿಲಂ-ಶುಕ-ಕಾಕಮೇಂ!
   ಹೆಂಚುಹಾರುತೆ ಹೋಗುವಂದದೆ ಕ್ರಂದಮಂ ಸಲೆ ಗೈವುದೌ|

 9. ಹಂಚ(ಸುಡುವ) ಮೇಲಣ ಹಕ್ಕಿಯಿರ್ಪುದು
  ಹೊಂಚಿ ಬರೆವರ ಹಸಿದ ಹೊಟ್ಟೆಗೆ!
  ಕೆಂಚು ಮಾಡಿನ ಹಕ್ಕಿ ನೋಟವೆ ಸಾಕು ಕೆಲವರಿಗೆ!

 10. ಕೊಂಚವುಂ ಪರಪುಟ್ಟಕಂ “ಸರಿ”ಗಟ್ಟದೈ “ದನಿ”ಗೆಟ್ಟುದೈ
  ಹೊಂಚಹಾಕಿಯು ಕೆಂಡಸಂಪಿಗೆ ವೃಕ್ಷದೊಳ್ “ಗಮ”ಗುಟ್ಟದೈ ।
  ಇಂಚರಂಗುಡಲೇಳಿರಲ್ಸ್ವರದೊಳ್ಗದಾರದುವೇಳದೈ
  ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ।।

  * ಇಂಚರಂಗುಡಲು ಏಳು ಇರಲ್ ಸ್ವರದೊಳಗದು ಆರದು ಏಳದೈ =
  ಕೋಗಿಲೆಗೆ “ಸರಿ”ಗಟ್ಟದೆ / “ಗಮ”ಗುಟ್ಟದೆ / “ದನಿ”ಗೆಟ್ಟು – ಸಪ್ತ ಸ್ವರಗಳಲ್ಲಿ “ಸ ರಿ – ಗ ಮ- ದ ನಿ” (ಆರು ಸ್ವರಗಳು) ಏಳದೆ — “ಪಂಚಮ”ದಲ್ಲಿ ಕೂಗುತ್ತಿದೆಯೇ ?!

 11. ಆಶುಕವಿತೆಯಲ್ಲಿ ರಚಿಸಿದ್ದು ::
  ಹಂಚಿ ಪುಟ್ಟುತಲೆಲ್ಲರುಂ ಸಮರಲ್ತೆ ಶಾಸ್ತ್ರವಿಚಾರದೊಳ್
  ಕೊಂಚ ಯತ್ನದೆ ಮುಟ್ಟುಗುಂ ಸೆಲೆಕಾರ್ಯಗಳ್ ವರಸಿದ್ಧಿಯಂ
  ಹೊಂಚಿಹಾರುತೆ ತಿಂದು ಮಾಮರದಲ್ಲಿ ಸೂಸಿದ ಪೂಗಳಂ
  ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ

 12. ( ಇದು ಸಮಸ್ಯಾಪೂರಣವಲ್ಲ, ವಿನೋದಕ್ಕಾಗಿ… )

  ಸಂಚುಗೂಡುತೆ ಸೋಮರಿತ್ತರೆ ಸೋಲಿಸಲ್ ಕಠಿನೋಕ್ತಿಯಂ ,
  “ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ “? |
  ಮಿಂಚೆ ತಾಗಿದವೋಲೆ ನಾನಿರೆ ಪದ್ಯಪಾನಸಮಸ್ಯೆಯಿಂ,
  ಲಂಚಮಂ ಕುಡೆ ವಾಗಧೀಶ್ವರಿ ಪೂರಣಂಗಳನೀವಳೇಂ ? || 🙂

  • ಹೌದು.
   ಎಲ್ಲರೆದುರಿಗೆ ಮಾಳ್ಪ ಪೂಜೆ-ನೇಮಗಳನ್ನು
   ಸಲ್ಲಿಸಲುಬೇಕಿಲ್ಲ ವಾಗ್ದೇವಿಗೆ|
   ಗುಲ್ಲುಗೈಯದೆ ಗೈವ ಅಧ್ಯಯನ-ತಪಗಳೇ
   ಸಲ್ಲುವುವು ಲಂಚಮಾಗವಳಿಂಗೆ ಕೇಳ್||

   • ಪ್ರಸಾದ್ ಸರ್,
    ಎಂಥ ಸೀರಿಯಸ್ ಪದ್ಯ !! “ವಾಗ್ದೇವಿಗೆ ಲಂಚವಿತ್ತರೆ “ಗಿಣಿ”ಯಿಂದ ಪಂಚಮಸ್ವರ ತರಬಹುದು, “ಬಲಿಭೋಜನ”ನಿಂದ ತರಬೇಕಾದಲ್ಲಿ ಶನಿದೇವನಿಗೆ ಲಂಚ ಕೊಡಬೇಕು” ಎಂದು ವಿನೋದವಾಗಿ ಕವನಿಸುವಿರಿ – ಎಂದಂದುಕೊಂಡಿದ್ದೆ !!

    • ಉಷಾ ಅವರೆ,ಚೆನ್ನಾಗಿದೆ. ನೀವು ಬರೆದಿರುವುದನ್ನು – ಎಂಥ ಸಿಸೇರಿಯನ್ ಪದ್ಯ !! – ಎಂಬುದಾಗಿ ಅವಸರದಲ್ಲಿ ಓದಿ, ಪ್ರಸಾದರ ಸಹಜ ಹಾಗೂ ಸಿಸೇರಿಯನ್ ಪದ್ಯಪ್ರಸವಗಳ ಬಗ್ಗೆಯೇ ಯೋಚಿಸುವಂತಾಯಿತು. ಸೀರಿಯಸ್ ಪದ್ಯವೆಂದು ನೀವು ಬರೆದಿರುವುದನ್ನು ಬಳಿಕ ಗಮನಿಸಿದಾಗ ತುಂಬ ಹ್ಯೂಮರಸ್ ಆಯಿತು. 🙂

   • ಹೌದು ಪ್ರಸಾದರೆ. 🙂

   • Thanks Usha & Shakuntala. Usha, You could have put that thought in verse. Crow as Shani’s vehicle has not figured in any verse here yet. Give it a try.
    ಶುಲ್ಕ-ಪೂಜೆಗಳಂತಲ್ಲದೆ, ಲಂಚ-ಅಧ್ಯಯನಗಳು ಖಾಸಗಿಯಾದ ವಿಷಯಗಳು ಎಂಬ ಧ್ವನಿ ಇಲ್ಲಿತ್ತು 😉

    • ಪ್ರಸಾದ್ ಸರ್, ನಿಮ್ಮ ಆಣತಿಯಂತೆ ಹೀಗೊಂದು ಪೂರಣ:

     ಮೇಣ್ ಚರಾಚರ ಭಾವದೊಳ್ ಗ್ರಹಚಾರವಂ ಮರೆಯಲ್ ನರಂ
     ಕೆಂಚಿತಾದರುವಿಂತು ಸಂಚಿತಕರ್ಮವಂ ಕಳೆಯಲ್ಕೆಲಾ
     ಕೊಂಚ ಗೈಯಿರಿ ಧರ್ಮಮೆಂದುಪದೇಶಿಸಿಂ ಶನಿವಾರ ತಾಂ
     ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ।।

     (ಕೊನೆಯಲ್ಲಿ ಸ್ಮೈಲಿ ಇರದಿದ್ದಕಾರಣ ನಿಮ್ಮ ಪದ್ಯ ಸೀರಿಯಸ್ ಅನ್ನಿಸಿತ್ತು !!)

     • **ಕೊಂಚಗೈಯಿರಿ ಶಾಂತಿಯೆಂದುಪದೇಶಿಸಿಂ ಶನಿವಾರ ತಾಂ

    • ತಾವು ಸ್ಮೈಲಿಯ ವಿಷಯವನ್ನು ಪ್ರಸ್ತಾವಿಸಿದ್ದು ಒಳ್ಳೆಯದಾಯಿತು. ಅದನ್ನು ’ಇಲ್ಲಿತ್ತು’ ಎಂಬಲ್ಲಿನ ಭೂತಕಾಲದೊಂದಿದೆ ಹೋಲಿಸಿ ನೋಡಬೇಕು. ಧ್ವನಿಯನ್ನು ನಾನು ಬಯಲುಪಡಿಸಿದ್ದರಿಂದ ಅದೀಗ ವಾಚ್ಯವಾಯಿತು. ಬೇರಾರಾದರೂ ಪ್ರಸ್ತಾವಿಸಿದ್ದರೆ ಅದು ಧ್ವನಿಯಾಗಿಯೇ ಉಳಿಯುತ್ತಿತ್ತು.
     ನಿಮ್ಮ ಪದ್ಯವು ಚೆನ್ನಾಗಿದೆ. ಮೊದಲನೆಯ ಸಾಲಿನಲ್ಲಿನದು ಸಮೀಪಪ್ರಾಸವೆನಿಸದು. ಎರಡನೆಯ ಸಾಲಿನದು ’ಕಿಂಚಿತ್ತಾದರು’ ಎಂದೆ? ಆಗ ಅಕ್ಷರದೋಷವಾಗುತ್ತದೆ. ’ಕೊಂಚಮಾದರು’ ಎನ್ನಬಹುದು.

     • ಧನ್ಯವಾದಗಳು ಪ್ರಸಾದ್ ಸರ್,
      – ಹೌದು! ಮೊದಲನೇ ಸಾಲಿನ ಪ್ರಾಸ ತಪ್ಪಿದೆ. ಗಮನಿಸಿರಲಿಲ್ಲ.
      “ತಾಂ ಚರಾಚರ ಭಾವದೊಳ್ ಗ್ರಹಚಾರವಂ ಮರೆಯಲ್ ನರಂ”
      – ಕಿಂಚಿತ್ತು = ಕಿಂಚಿತ – ಸರಿಯಲ್ಲವೇ ?
      – “ಕೊಂಚಮಾದರು” ಚೆನ್ನಾಗಿದೆ – ಆದರೆ ಅದು ಮೂರನೇ ಸಾಲಿನಲ್ಲಿ ಬಂದಿದೆ.

     • ’ಕಿಂಚಿತ’ ಸಾಧು (ಪದ್ಯದಲ್ಲಿ ’ಕೆಂಚಿತ’ ಎಂದಾಗಿದೆ)

 13. ಹೆಂಚಮೇಗಡೆ ಹೊಂಚಹಾಕುತೆ ಚುಂಚ ಕೊಂಕಿಸಿ ನೋಡಿರಲ್
  ಕೊಂಚಕಂಡದೊ ಮಾಡಿನಂಚಲಿ ಪಾರಿವಂಗಳ ಮಿಂಚನುಂ
  ಕೆಂಚುಗಣ್ಣ ಕಪೋತಿಗೆನ್ನನುರಾಗವಂ ಮನಗಾಣಿಸಲ್
  ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ।।

  ಪಂಚಮ ವೇದ – ಪ್ರೇಮದ ನಾದ …., ಅಲ್ಲವೇ?!

  • ಪಾರಿವಾಳವು (ಗಂಡು)ಕಾಗೆಕೂಗನ್ನಲಕ್ಷಿಸಿತು
   ಬೇರೆಯಲ್ಲವೆ ಪರಸ್ಪರಜಾತಿಗಳ್|
   ಹಾರಿಬಂದೊರ್ವ ಬಲಿಭೋಜನಳ್ ಬಳಿಕುಳಿತು
   (ಸ್ವಜಾತೀಯನಾದ, ಪಂಚಮದಲ್ಲಿ ಹಾಡಬಲ್ಲ) ಪಾರಂಗತನನಲ್ಲೆ ಬೆಸಗೊಂಡಳೈ!!

   • ಪ್ರಸಾದ್ ಸರ್,
    ಪ್ರಾಸಕ್ಕಾಗಿ ತಂದ ಕಪೋತಿ (=DOVE) ಯಿಂದಾದ “ವರ್ಣಸಂಕರ” !!. ಸರಿಪಡಿಸಿದ್ದೇನೆ.

    ಹೆಂಚಮೇಗಡೆ ಹೊಂಚಹಾಕುತೆ ಚುಂಚ ಕೊಂಕಿಸಿ ನೋಡಿರಲ್
    ಕೊಂಚಕಂಡದೊ ಮಾಡಿನಂಚಲಿ ಪಾರಿಬಂದಿಹ ಮಿಂಚನುಂ
    ಕೆಂಚುಕಂಗಳಪಕ್ಕಿಗೆನ್ನನುರಾಗವಂ ಮನಗಾಣಿಸಲ್
    ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ ।।

 14. ಕಂಚಿನಂತಿಹುದೆನ್ನ ಕಂಠಮೆನುತ್ತೆ ಕರ್ಕಶದಿಂದೆ ತಾಂ
  ಕೊಂಚಮುಂ, ರಸಮಿಲ್ಲದಿರ್ದರು ಪಾಡಿರಲ್ ಪೊಸ ರಾಗಮಂ
  ಹೆಂಚಿನೊಳ್ ಕುಳಿತಿರ್ಪ ಬಂಧುಗಳಾಲಿಸುತ್ತಲಿ ಪೇಳ್ದುವೈ..
  ಪಂಚಮಸ್ವರದಿಂಪ್ರಪಂಚಿಸುತಿರ್ಪುದೈ ಬಲಿ ಭೋಜನಂ

  • ರಸಮಿಲ್ಲದಿರ್ದರು ಪಾಡಿರಲ್ ~ ರಸಮಿಲ್ಲದಿರ್ದೊಡಮಾಡಿರಲ್
   ಪೇಳ್ದುವೈ ~ ಪೇಳ್ವರೈ (ಬಂಧುಗಳ್ plural)
   In light vein: ಬಲಿ ಭೋಜನಂ ಎಂಬುದನ್ನು ಹೀಗೆ ಬಿಡಿಸಿಬರೆದರೆ, ಆ ಪಾದದ ಅರ್ಥವು ಇಂತಾಗುತ್ತದೆ: ಬಲಿ ಎಂಬುವನ ಭೋಜನರೀತಿಯು (ಲಚ-ಪಚ ಇತ್ಯಾದಿ) ಐದೈದು ಸ್ವರಗಳನ್ನು ಹೊರಡಿಸುವಂತಿರುತ್ತದೆ 🙂

 15. ಬೆಂಚೊಳಿರ್ಪ ಸಮಸ್ತಶಿಷ್ಯರ ಜಾಣ್ಮೆಯಂ ಪರಿಶೀಲಿಸಲ್,
  ಪಂಚೆಯಂ ಧರಿಸಿರ್ಪ , ಶಾಲನೆ ಪೊದ್ದ , ಶಾಲೆಯ ಶಿಕ್ಷಕರ್,|
  ಸಂಚಿಯಂ ಪಿಡಿದಿರ್ದು , ತಪ್ಪಿರೆ ತಿದ್ದೆ , ವಾಕ್ಯಮನಿತ್ತರೇಂ ?
  ” ಪಂಚಮಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ “||

 16. Gone are the days of ‘share and dine’ in the crow fraternity. A certain crow gorged into a food disposal basket (ಚಂಚ). Its belly full, it holds a last morsel in its beak and then caws to invite its brethren to partake of the remaining food. As its beak is holding the morsel, its ‘caw’ sound is more near to ’ಪ’ವರ್ಗ (ಪಂಚಮ) than to ’ಕ’ವರ್ಗ!
  ಹಂಚಿಯುಣ್ಣುವ ಕಾಲಮಾದುದು, ಸ್ವಾರ್ಥಮಿಂದಿನ ರೀತಿಯೈ
  ಚಂಚದಿಂ ಬಗೆಯನ್ನಮಂ ಭುಜಿಸಿನ್ನುಮಿನಿತನು ಕಚ್ಚುತುಂ|
  ಚುಂಚದೊಳ್, ತೆರೆಯಲ್ಕೆ ಬಾರದೆ ಬಾಯ ಕೂಗಲುಮೆಲ್ಲರಂ
  ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ||

 17. ಹೊಂಚಿತೇಂ!ತವೆ ಬೇಸರಂ ಕಳೆವಾಟಮಂ ಖಗಸಂಕುಲಂ,
  ಕೊಂಚೆಕೋಗಿಲೆಕಾಗೆಸಾರಸಸೋಗೆಯೊಂದೆಡೆ ಸೇರಿರ
  ಲ್ಕಿಂಚರಂ ಮರೆತಂತೆವೊಲ್ ಪರಪುಟ್ಟನೊಂದರೆ! ಕೂಗಿರಲ್,
  ಪಂಚಮ ಸ್ವರಮಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ!
  (ಮಿಮಿಕ್ರಿಯನ್ನು ಮಾಡುವರಂತೆಯೇ, ಕೋಗಿಲೆಯು ತನ್ನ ಇಂಪು ದನಿಯನ್ನು ಮರೆತು ಕೂಗುತ್ತಿರಲು ಕಾಗೆಯು ಕೋಗಿಲೆಯಂತೆ ಕೂಗುತ್ತಿದೆ!)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)