Oct 262015
 

“ವಿಶ್ರಾಂತಿಯೇ ಆಶ್ರಯಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು

  23 Responses to “ಪದ್ಯಸಪ್ತಾಹ ೧೭೪: ಪದ್ಯಪೂರಣ”

 1. ತಿರೆಯಾಣ್ಮರ್ ಪಡೆಯಲ್ಕೆ ಭೂವನಿತೆಯಂ, ಯುಧ್ಧಂಗಳಂ ಗೈದಿರಲ್,
  ಸಿರಿಸಂಪತ್ತಿನ ವಾಂಛೆಯಿಂ ಸುಜನರುಂ, ದುರ್ಮಾರ್ಗಮಂ ಮೆಟ್ಟಿರ
  ಲ್ಕರಿದರ್ ಪೇಳರೆ”ನಿತ್ಯ ಶಾಂತಿಸುಖಕಂ, ಬಾಂಧವ್ಯಕಂ,ಪೆರ್ಚಿ ತಾಂ
  ಪೊರೆಯೊಲ್ ಸುತ್ತುತುಮಿರ್ಪ ಕಾಮನೆಗಳಿಂ ವಿಶ್ರಾಂತಿಯೇ,ಆಶ್ರಯಂ!”

  (ಅತಿಯಾಸೆಗೆ ತುತ್ತಾಗಿ, ಯುಧ್ಧ..ಮುಂತಾದವುಗಳು ನಡೆದಿರಲಾಗಿ ಹಿರಿಯರು “ಪೊರೆಯಂತೆ ಸುತ್ತುವರಿವ ಕಾಮನೆಗಳಿಂದ ನಿವೃತ್ತಿಯೇ ಶಾಂತಿಯುತ ಜೀವನಕೆ ರಕ್ಷೆ”ಎನ್ನರೆ?)

 2. ತೃಣಮಾದೊಡೇಂ,ಕುಶಲ ಕುಲಮಾದೊಡೇನೊಲವಿ
  ನುಣಿಸಿತ್ತು ಸಲಹಿರ್ದ ತಾಯಾದೊಡೇಂ!
  ಕುಣಿಕುಣಿದು ಜಗಮೆಂಬ ನಾಟ್ಯರಂಗದೊಳಂತು
  ದಣಿದಿರಲ್,ವಿಶ್ರಾಂತಿಯೇ ಆಶ್ರಯಂ!
  (ಎಲ್ಲದಕ್ಕೂ ಇರುವುದು,ಬಿಡುವು(ಕೊನೆ))

 3. ಘನವಾದಂಗಳ ಮಂಡಿಸುತ್ತೆ ಮೆರೆವಂ ಗೋಸ್ವಾಮಿ ಟೈಮ್ಸ್ ನೌವಿನೊಳ್
  ದಿನಮುಂ ಸೃಷ್ಟಿಸುತಿರ್ಪನಲ್ತೆ ವಿಷಯಂಗಳ್ ನೂತನಂ ರೀತಿಯೊಳ್
  ತನಗುಂ ಗೊಂದಲಮಾದವೊಲ್ ತಿರುಚುವಂ ವಾಕ್ಯಂಗಳಂ ಚೀರುತುಂ
  ಕೊನೆಗೀ ದೇಹಕುಮಿಂಬು ಗೈವುದಕದೋ ವಿಶ್ರಾಂತಿಯೇ ಆಶ್ರಯಂ

  • ’ಘನವಾದಂಗಳ್’ ಮತ್ತು ’ತನಗುಂ ಗೊಂದಲಂ’ – ಪರಸ್ಪರ ವಿರುದ್ಧವಲ್ಲವೆ?
   ವಿಷಯಂಗಳ್ – ವಿಷಯಂಗಳಂ ಎಂದಾಗಬೇಕು.

 4. ಮಗದೊಂದು ವಿಪ್ಲವವ (post 1947) ಹಾದು ರಾಷ್ಟ್ರವಿದೀಗ
  ಮಗುಚೆ ಪುಟಮಂ ಸಜ್ಜುಗೊಂಡಿರ್ದಿರಲ್|
  ಯುಗಪುರುಷಮೋದಿಗಂ ರಾಷ್ಟ್ರನಿರ್ಮಾಣದೊಳೊ-
  ದಗದಿರ್ದು, ವಿಶ್ರಾಂತಿಯೇ ಆಶ್ರಯಂ? (ನಮಗೆ ಆಲಸ್ಯವು ತರವೆ?)

 5. ನಿಚ್ಚ೦ ಚಕ್ರಮುರುಳ್ವವೊಲ್ ಘರಘರೆ೦ದೆನ್ನುತ್ತೆ ಜೀವರ್ಕಳ೦
  ನುಚ್ಚ೦ಗೈಯುತೆ ಕಾಲಮಾಳ್ವ ಪರಿಯೊಳ್, ತಾ೦ ಗೈದ ಕರ್ಮ೦ಗಳೊಳ್
  ಕುಚ್ಚುತ್ತಿರ್ಪ ಮನ೦ಗಳ೦ ಸತತಮು೦ ಸ೦ತೈಪ ತಾಪ೦ಗಳೊಳ್
  ಬಿಚ್ಚ೦ಗೊಳ್ಳದೆಯಿರ್ಪೊಡೆ೦ತುಮಮಮಾ ವಿಶ್ರಾ೦ತಿಯೆಮ್ಮಾಶ್ರಯ೦?!!

  ಮೈಯೇರಿ ನುಗ್ಗಾಗಿಸುವ ಕಾಲನುರುಳ್ವಿಕೆ, ನಮ್ಮವೇ ಕರ್ಮಗಳ ಜಾಡಿನಲ್ಲಿ ಸಿಲುಕಿರುವ ಮನಸ್ಸನ್ನು ಸ೦ಭಾಳಿಸುವ ಕಷ್ಟ, ಇವೆರಡರ ಮಧ್ಯೆ ಸಿಲುಕಿ ಬಿಡುಗಡೆಯಿರದ೦ತಿರೆ, ನಮಗೆ ವಿಶ್ರಾ೦ತಿ ದಕ್ಕುವುದು ಎಲ್ಲಿಯ ಮಾತು?!!

 6. I am down from viral arthritis
  ರಸಸೃಷ್ಟಿಯಂತಿರಲಿ ಆಸ್ವಾದಕುಂ ಕುತ್ತು
  ಕಸುವಿಲ್ಲ ಪದ್ಯಪಾನಕೆ(verb) ದೇಹದೊಳ್|
  ಬಸವಳಿದು ತಾನೆ ಹಿಮ್ಮೆಟ್ಟದಿರುವರೆಗೆ ವೈ-
  ರಸದೆನಗೆ ವಿಶ್ರಾಂತಿಯೇ ಆಶ್ರಯಂ!! (ವೈರಸದೆನಗೆ = virus ಅದು, ಎನಗೆ)

 7. ಕೆಲಬರ್ ದೇಶಕೆ ಗೆಯ್ವರಯ್ ಕೆಲಬರಿಂ ಶಾಸ್ತ್ರಂಗಳೇ ಪೆರ್ಚುಗುಂ
  ಕೆಲಬರ್ ಶೈಕ್ಷಣದೀಕ್ಷೆಯಿಂದೆ ಕೆಲಬರ್ ದಾನಂಗಳಂ ಗೆಯ್ಯುತುಂ
  ಕೆಲರಿಂ ಸತ್ಕಲೆ ಪೆರ್ಚುಗುಂ ಕೆಲಬರಿಂ ಸನ್ಯಸ್ತಮಲ್ತೇ ಜಗಂ
  ಹಲವರ್ ಪೋರಲಿ ಬಲ್ಮೆಗೆಂದಲಸನೊಳ್ ವಿಶ್ರಾಂತಿಯೇ ಆಶ್ರಯಂ

 8. ವಿಧುವಿಂಗೊಪ್ಪುವ ಮಾರ್ದವಂ ಸ್ಪುರಿಸನೇಂ ತಾನೆದ್ದೊಡಂ ಸೂರ್ಯನುಂ!
  ಸುಧೆಯೊಳ್ ತೋದಿಳೆ ತಂಪನೀಯದಿರಳೇಂ ವಿಶ್ರಾಂತಿಯಾನಂತರಂ!
  ವಿಧಿಯೊಲ್ ಕಂಡೊಡಮೇನಿದಾಲಸಮನೇ ತಾಂ ಪೋಷಿಸುತ್ತಿರ್ಪೊಡೇಂ,
  ನಿಧಿಯಂತೊಪ್ಪುಗು ಲೋಕದೊಳ್ ಸಹಜದಿಂ! ವಿಶ್ರಾಂತಿಯೇ ಆಶ್ರಯಂ!

  (ವಿಶ್ರಾಂತಿಯೆಂಬುದೆಮಗೆ ನಿಯಮದಂತಾದರೇನು,ಆಲಸ್ಯವನ್ನು ಪೋಷಿಸಿದರೇನು, ಸಹಜವಾಗಿ ಇದು ಲೋಕಕ್ಕೇ ನಿಧಿಯಂತಿದೆ.
  ಸೂರ್ಯನೂ ಎದ್ದಾಗ ಚಂದ್ರನ ಕೋಮಲತೆಯನ್ನು ಪಡೆದಿರುವನಲ್ಲ!ವಿಶ್ರಾಂತಿಯ ನಂತರ ಸುಧೆಯಲ್ಲೇ ತೋಯಲ್ಪಟ್ಟ ಇಳೆಯೂ ತಂಪನ್ನು ಕೊಡುವಳಲ್ಲ!)

  • ತುಂಬ ಸುಂದರವಾದ ಭಾವ

  • ಈ ಪದ್ಯವಂತೂ ತುಂಬ ಚೆನ್ನಾಗಿದೆ, ಕಲ್ಪನೆ-ಶಾಬ್ದಿಕಗಳೆರಡೂ. ನಿಮ್ಮ ಈಚೀಚಿನ ಪದ್ಯಗಳಲ್ಲಿ ಭಾಷಾಪ್ರೌಢಿಮೆ ಗಾಢವಾಗುತ್ತಲಿದೆ. ಗುಟ್ಟನ್ನು ನಮ್ಮೊಂದಿಗೂ ಹಂಚಿಕೊಳ್ಳಿ.

   • ಪ್ರಸಾದರೇ ,ಧನ್ಯವಾದಗಳು!

    ಬರಿದೆ ಸುಮ್ಮನೆ ಪೇಳಲಾರೆನಾ!ತಿದ್ದುವೆನು
    ಸರಿಯೆನಿಪವರೆಗೆ, ತರಿಯುತ್ತವಧಿಯಂ!
    ಇರಲು ಲೇಖನಿ ಹಾಳೆಗಳ್,ಗುಟ್ಟೆ?ರಂಪಣ್ಣ!
    ದೊರೆತಿರ್ಪ ವಿಶ್ರಾಂತಿಯೇ, ಆಶ್ರಯಂ!

 9. ಧನ್ಯವಾದಗಳು,ಕೇಯೂರರೇ!

 10. ಸರಿಸಂಸಾರವದೂಗಲುಂ ಹೆಗಲನಿತ್ತುದ್ಯೋಗವಂ ಕೈಕೊಳಲ್
  ಎರಡುಂ ಕಾರ್ಯಮನಿಂತು ಸಾವರಿಸುತುಂ ಸಾಕಾಗಿತಾಂ ಸೋತಿರಲ್ ।
  ಸರಿಯಲ್ಕರ್ಧಮದಾಯು ಮೇಣ್ ಬದುಕ ಸಾರ್ಥಕ್ಯಂ ಮಿಗಿಲ್ಗಂಡವಳ್
  ಖರೆ, ತಂತಾನೆನಿವೃತ್ತಿ ನಿಚ್ಚಯಿಸಿಹಳ್, ವಿಶ್ರಾಂತಿಯೇ ಆಶ್ರಯಂ ।।

  ತಂತಾನೆನಿವೃತ್ತಿ = Voluntary Retirement !!

 11. ಅ೦ಬೆಯಾರಾಧನೆಗೆ ವಾರ್ಷಿಕದ ತೆರೆಯೆಳೆಯ –
  ಲಂಬಾರಿ ಹೊತ್ತೊಯ್ದು ಬಳಲಿ ಬೆಂಡಾದೆ I
  ಅಂಬಾವಿಲಾಸದಂಗಣವ ತ್ಯಜಿಸಿ ಮರದ
  ಕೊಂಬೆಯಡಿ ವಿಶ್ರಾಂತಿಯೇ ಆಶ್ರಯಂ II

  ನಾಡ ಹಬ್ಬಕ್ಕೆ ಅಂಬಾರಿ ಹೊತ್ತು , ತನ್ನ ವಾಸಸ್ಥಳಕ್ಕೆ ಮರಳುವ ಸಮಯದಲ್ಲಿ ವನದ ಮರವೊ೦ದನ್ನು ಕಲ್ಪಿಸಿ ಆನೆಯ ಸ್ವಗತ …

 12. ಬಿಸಿಲೊಳ್ ಗುಡ್ಡದೆ ಸಾಗಿರಲ್ ನಡೆಯುತುಂ,ಬಾಯಾರೆ ಕಂಗೆಟ್ಟಿರಲ್,
  ಪಸಿವಿಂ ಸಾಯ್ವವೊಲಾಗೆ, ಮುಂದುವರಿಯಲ್ ನಿತ್ರಾಣದಿಂ ಸೋಲ್ತಿರಲ್, |
  ಮೊಸರಂ ಸೇರಿಸುತುಣ್ಣಲನ್ನಮನೆ ತಂಪಾಗಿರ್ಪ ಜಾಗಂಗಳೊಳ್,
  ಪಸಿರಿಂದಿರ್ಪ ಮರಂಗಳೀವ ನೆಳಲೊಳ್ ,ವಿಶ್ರಾಂತಿಯೇ ಆಶ್ರಯಂ ||

 13. ರಮಿಸುದೈ ಕವನ ಶಬ್ದಂಗಳಾ ನಡುವೊಳು ವಿ-
  ರಮಿಸುದೈ ತಟದೆತಾಂ ತೊರೆಯು ದಣಿದುಂ ।
  ಕ್ರಮಿಸುತಿರೆ ತಿರೆಯು ಕಾಣ್ ಜೀವ ಸಾವಿನೊಳು ವಿ-
  ಶ್ರಮಿಸುದೈ, ವಿಶ್ರಾಂತಿಯೇ ಆಶ್ರಯಂ ||

  ನಿರಂತರ ಸುತ್ತುತ್ತಿರುವ ಭೂಮಿಯಲ್ಲೂ “ವಿಶ್ರಾಂತಿ” !!
  ಶಬ್ದ-ಶಬ್ದಗಳ ನಡುವಿನ ಮೌನದೊಡೆ ರಮಿಸುವ ಕವನ / ಎರಡು ದಡಗಳ ನಡುವೆ ದಣಿದು ವಿರಮಿಸುವ ನದಿ / ಪ್ರತಿ ಹುಟ್ಟಿನ ನಡುವಿನ ಸಾವಿನಲ್ಲಿ ವಿಶ್ರಮಿಸುವ ಜೀವ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)