Nov 012015
 

 

belur-image

  34 Responses to “ಪದ್ಯಸಪ್ತಾಹ ೧೭೫: ಚಿತ್ರಕ್ಕೆ ಪದ್ಯ. ಸರ್ವರಿಗೂ ಕನ್ನಡರಾಜ್ಯೋತ್ಸವದ ಶುಭಾಶಯಗಳು”

  1. ಎತ್ತಪೋಗುತುಮಿರ್ಪುದೈ ಹಸ್ತಿ ಠೀವಿಯಿಂ
    ಪೊತ್ತುಕೊಂಡೀ ಮನುಜಮೇಳಮಂ ತಾಂ!
    ಪೆತ್ತಬ್ಬೆಯಂದದಿಂ ಕೋಮಲಾಂಗಿಯನೆತ್ತಿ
    ಗತ್ತಿನಿಂ ಮೆರೆವನಂ ಬೆನ್ನಿಗೇರಿ!

  2. ಕಲ್ಲsನೆ ಕೊರೆದಾನೆ । ಪಲ್ಲಕ್ಕಿ ಹೊರಿಸಾನೆ ।
    ಮಲ್ಲsರನೆಲ್ಲ ಮಣಿಸಾನೆ । ಮೆಲ್ಲsನೆ
    ಗೊಲ್ಲsನೆ ಸೊಲ್ಲ ನುಡಿಸಾನೆ ।।

    3 ಅಡಿಗೆ – 7 ಗಜ !!

    • Is the sculpture measuring 3 feet x 7 yards!
      ಅಡ್ಡವನಡಿಯೊಳು (ruler)ಕಡ್ಡಿಯಿಂದಳೆಯುತೆ
      ದೊಡ್ಡಾದ ಉದ್ದವ ಗಜದೊಳು| ಅಳೆವುದು
      ಅಡ್ಡಾದಿಡ್ಡಿಯ ಮಾಪನಮಲ್ತೆ||

      • ಪ್ರಸಾದ್ ಸರ್,
        ಲೆಕ್ಕವೆಲ್ಲವು ಲೆಕ್ಕ (3 ಅಡಿ = 1 ಗಜ)
        ತಾಳೆ ನೋಡುವ ತವಕ !
        ಲೆಕ್ಕವಲ್ಲದ ಲೆಕ್ಕ (ತ್ರಿಪದಿ ಯಲ್ಲಿನ ಏಳಾನೆ!)
        ತಾಳಿ ನೋಡುವ ತನಕ !!

  3. We know that (pre-artillery) combat techniques were eventually adapted as nATyabhangi-s. In this sculpture, is the flautist adapting war noises to standard music scales real-time!?
    ಪ್ರಹರ್ಷಿಣಿ|| (war)ವೈರಾರಂಭವಿಧಗಳಲ್ತೆ ರೂಢಗೊಂಡುಂ
    ಸಾರಂಗೊಳ್ಳುತೆ ವರನಾಟ್ಯಶಾಸ್ತ್ರಮಾಯ್ತಯ್|
    ಭೋರೆಂಬಾ ರಣರವಮನ್ನೆ ಗಾಯನಕ್ಕಂ
    ಪೋರಂ ತಾ ಕೊಳಲಿನೊಳಲ್ಲೆ ರೂಢಿಸಿರ್ಪಂ||

    • ಪ್ರಸಾದು, ಒಳ್ಳೆಯ ಕಲ್ಪನೆ…. ದುಷ್ಕರವಾದ ಪ್ರಹರ್ಷಿಣಿಯಲ್ಲಿ ಚೆನ್ನಾಗಿ ಯತ್ನಿಸಿದ್ದೀರಿ; ಅಭಿನಂದನೆಗಳು. …..ಸ್ವಲ್ಪ ಹಳಗನ್ನಡದ ಹದವು ಮೈಗೂಡಿದರೆ ಮತ್ತೂ ಒಳಿತು.

  4. ಸಾರಸ್ವತಸಹೋದರಿಯರಾದ ಶ್ರೀಮತಿ ಕಾಂಚನಾ ಮತ್ತು ಶ್ರೀಮತಿ ಉಷಾ ಅವರ ಚೌಪದಿ ಹಾಗೂ ತ್ರಿಪದಿಗಳು ಸೊಗಸಾಗಿವೆ.
    ತುಂಬ ಚೆನ್ನಾಗಿರುವ ಬೇಲೂರಿನ ಮಹಾಭಾರತಕಥಾಸಂದರ್ಭದ ಶಿಲ್ಪವೊಂದನ್ನು ಈ ವಾರದ ಕವಿತೆಗಳಿಗಾಗಿ ಆಯ್ದು ಪ್ರಸ್ತುತಪಡಿಸಿದ ಗೆಳೆಯ ಸೋಮನಿಗೂ ಧನ್ಯವಾದಗಳು.
    ನವೆಂಬರ್ ಒಂದರ “ವಿಜಯವಾಣಿ” ದಿನಪತ್ರಿಕೆಯ ಅಂಕಣ “ಗರಮಾಗರಂ”ನಲ್ಲಿ ನಮ್ಮೀ ಪದ್ಯಪಾನದ ಬಗೆಗೆ ತುಂಬ ಒಳ್ಳೆಯ ಮಾತುಗಳು ಬಂದಿವೆ:
    “………………..ಪದ್ಯಪಾನದಂತಹ ಅತ್ಯುತ್ತಮ ವೆಬ್ ಸೈಟ್ ಗಳ ಮೂಲಕ ಪದ್ಯಪಾನವು ಕವನ ರಚಿಸುವವರಿಗೆ ಬೃಹತ್ ಗುರು, ಮಾರ್ಗದರ್ಶಿ, ಗೆಳೆಯನಂತಿದೆ…”
    ಹೀಗೆ ಪದ್ಯಪಾನವು ನಮ್ಮ ನಾಡು-ನುಡಿಗಳಿಗೆ ಸಲ್ಲಿಸುತ್ತಿರುವ ವಿನಮ್ರಸೇವೆಯನ್ನು ಗುರುತಿಸಿ ಮೆಚ್ಚುಗೆಯ ಮಾತುಗಳನ್ನಾಡಿ ನಮ್ಮಲ್ಲಿ ಧನ್ಯತೆಯನ್ನು ಮೂಡಿಸಿದ ವಿಜಯವಾಣಿ ಪತ್ರಿಕೆಯವರಿಗೂ ಪ್ರಕೃತದ ಅಂಕಣಕಾರ “ನಾರಿ” ಅವರಿಗೂ ನಮ್ಮೆಲ್ಲರ ಹಾರ್ದಿಕವಂದನೆಗಳು. ಅಂತೆಯೇ ಈ ಯಶಸ್ಸಿಗೆ ಕಾರಣರಾದ ಎಲ್ಲ ಸಹಪದ್ಯಪಾನಿಗಳಿಗೂ ನನ್ನ ವೈಯಕ್ತಿಕನಮನಗಳು. ಎಲ್ಲ ಕನ್ನಡಬಾಂಧವರಿಗೂ ಕನ್ನಡರಾಜ್ಯೋತ್ಸವದ ಪ್ರೀತಿಯ ಶುಭಾಶಯಗಳು. ನಾವೆಲ್ಲ ಪದ್ಯಪಾನದ ಚಟುವಟಿಕೆಗಳನ್ನು ಮತ್ತಷ್ಟು ಮಿಗಿಲಾಗಿ, ಅರ್ಥಪೂರ್ಣವಾಗಿ, ವ್ಯಾಪಕವಾಗಿ, ನಿರಂತರವಾಗಿ ನಡಸೋಣ. ಎಲ್ಲರ ಸಹಕಾರ-ವಿಶ್ವಾಸಗಳಿರಲಿ.

    • ಧನ್ಯವಾದಗಳು
      ವಿಜಯವಾಣಿಯಲ್ಲಿ ಪದ್ಯಪಾನದ ಚಟುವಟಿಕೆಯನ್ನು ಕೊಂಡಾಡಿರುವುದು ಸಂತಸವನ್ನಿತ್ತಿತು.
      ಪದ್ಯವಿದ್ಯೆಯ ಮಾರ್ಗದರ್ಶಿ “ಪದ್ಯಪಾನ”ಕ್ಕೆ ಕೃತಜ್ಞತೆಗಳು.

    • ಧನ್ಯವಾದಗಳು ಗಣೇಶ್ ಸರ್,
      “ಪದ್ಯಪಾನ”ದ ಬಗೆಗಿನ ನಲ್ನುಡಿ ಹೆಮ್ಮೆ ತಂದಿದೆ.
      ಇದೇ ಉತ್ಸಾಹದಲ್ಲಿ ಮತ್ತೊಂದು “ಚಿತ್ರಕ್ಕೆಪದ್ಯ” :

      ವಿಜಯಂಗೊಳ್ಳುದಕಂತು ಕಾಣ್ ಜರುಗಿರಲ್ಕುತ್ಸಾಹದಿಂ ಸೈನ್ಯವುಂ
      ನಿಜದಂಬಾರಿಯ ಹೊತ್ತುದಾ ಕರಿಯೊಡಂ ಸಾಗಿರ್ದ ಚೆನ್ನಂ ಗಡಾ
      ಸೃಜಿಸಲ್ ಶಿಲ್ಪದೆ, ಕೆತ್ತುದಾ ಶಿಲೆಗಳೊಳ್ ಬೇಲೂರ ಮಾರ್ಗಂ ಸದಾ
      ಗಜಗಾಂಭೀರ್ಯದ ತುಂಬು ಚೆಲ್ವಮೆರೆಯಲ್ಮತ್ತೇಭವಿಕ್ರೀಡಿತಂ ।।

    • ಬಹಳ ಸಂತೋಷ ವಿಜಯವಾಣಿಯಲ್ಲಿನ ಅಂಕಣಕಾರರಿಗೆ ನಮ್ಮ ನಮನಗಳು, ನಮ್ಮೆಲ್ಲರಲ್ಲಿ ಕಲಾಸ್ವಾದತೆಯನ್ನು ಪದ್ಯರಚನಾಸಾಮರ್ಥ್ಯವನ್ನು ಪೋಷಿಸಿ ಬೆಳೆಸುವಲ್ಲಿ ನಿಮ್ಮ ಭಗೀರಥ ಪ್ರಯತ್ನಕ್ಕೆ ಅನಂತಾನಂತ ನಮನಗಳು ಗಣೇಶ್ ಸರ್

  5. ಹಸ್ತಿಧ್ವಸ್ತವರಾಯುಧರ್ ಧುರಧರಾವೀರರ್ ನೆಗಳ್ದರ್ ಭಯ-
    ಗ್ರಸ್ತತ್ರಸ್ತಸರೋರುಹಾಕರಮನರ್ ತತ್ಸಾಮ್ಯಮಲ್ತೇ೦ ಸ್ವಭಾ-
    ವಾಸ್ತವ್ಯಸ್ತಜನರ್ಗಮೀ ಪೊಡವಿಯೊಳ್ ನೈರ೦ಕುಶತ್ವ೦ ದಿಟ೦
    ನ್ಯಸ್ತ೦ಗೊ೦ಡೊಡೆ ಚಿತ್ತಮೀ ಕರಿಸಮ೦ ಮತ್ತೇರಿ ತಾ೦ ವರ್ತಿಸಲ್

    ನಿರ೦ಕುಶವಾದ ಮನಸ್ಸು ಹೀಗೆಯೇ ಮದ್ದಾನೆಯ ತೆರ ವರ್ತಿಸುತ್ತಿರುವಾಗ ಅಸ್ತವ್ಯಸ್ತ ಸ್ವಭಾವದ ಜನರು ಮದ್ದಾನೆಗೆ ಸಿಲುಕಿದ ಕಮಲಗಳ ಹೋಲುವ ಮನಸ್ಸಿನ ಯೋಧರ೦ತೆ, ಎ೦ದು ತಾತ್ಪರ್ಯ.

  6. ಈ ಶಿಲ್ಪವು ಬೇಲೂರಿನ ದೇವಾಲಯದ ಹೊರಗಣ ಮಹಾಭಾರತಕಥಾಶ್ರಿತವಾದ ನಿರ್ಮಿತಿಗಳಲ್ಲೊಂದು ಸುಂದರಸೃಷ್ಟಿ. ಇಲ್ಲಿರುವುದು ಭಗದತ್ತನೆಂಬ ಕೌರವಪಕ್ಷದ ವೀರನು ಮಹಾಗಜಸೇನೆಯೊಡನೆ ಬಂದು ಪಾಂಡವರನ್ನೆದುರಿಸುವ ಚಿತ್ರದ ಅಂಶ. ನರಕಾಸುರನ ಮಗನಾದ ಭಗದತ್ತನು ಸುಪ್ರತೀಕವೆಂಬ ರುದ್ರಭೀಕರಮಹಾಮದೇಭವನ್ನೇರಿ ಬಂದಾಗ ಆತನನ್ನೂ ಅವನ ಅಜಿಂಕ್ಯಮಾತಂಗಸೇನೆಯನ್ನೂ ಎದುರಿಸಲು ಸಾಕ್ಷಾತ್ ಭೀಮನೇ ಮುಂದಾಗುತ್ತಾನೆ. ಪ್ರಕೃತಶಿಲ್ಪವು ಇದನ್ನೇ ನೇರವಾಗಿ ಕುರಿತಿದೆ. ಆಸಕ್ತರು ಈ ಯುದ್ಧದ ಸ್ವಾರಸ್ಯಗಳನ್ನು ವಿವರವಾಗಿ ವ್ಯಾಸಭಾರತ ಹಾಗೂ ಕುಮಾರವ್ಯಾಸಭಾರತಗಳ ದ್ರೋಣಪರ್ವವನ್ನು ಕಾಣಬಹುದು. ಕುಮಾರವ್ಯಾಸನ ಪ್ರತಿಭೆಯಂತೂ ಈ ಭಾಗದಲ್ಲಿ ಮುಗಿಲುಮುಟ್ಟಿದೆ. ಪಂಪನೂ ತನ್ನ ವಿಕ್ರಮಾರ್ಜುನವಿಜಯದಲ್ಲಿ ಒಂದೆರೆಡು ಸೊಗಸಾದ ಪದ್ಯಗಳನ್ನು ಈ ಬಗೆಗೆ ಬರೆದಿದ್ದಾನೆ. ಡಾ. ಸಿ.ಪಿ.ಕೆ ಅವರು ಇವನ್ನೆಲ್ಲ ಕುರಿತು ಸೊಗಸಾದ ತೌಲನಿಕಾಧ್ಯಯನಲೇಖವನ್ನೇ ಬರೆದಿದ್ದಾರೆ.
    ಇಷ್ಟೆಲ್ಲ ಭರ್ಜರಿಯಾದ ’ಬಿಲ್ಡಪ್” ಇರುವ ಈ ಸಂದರ್ಭವನ್ನು ಕುರಿತು ಹೊಸತೂ ಅತಿಶಯವೂ ಆದ ಸ್ವಾರಸ್ಯಗಳನ್ನುಳ್ಳ ಪದ್ಯಗಳನ್ನು ನಾನೇನು ತಾನೆ ಹೇಳಬಲ್ಲೆ? ಆದರೂ ಹೇಗೋ ಯತ್ನಿಸಿದ್ದೇನೆ. ನನ್ನ ಕವಿತೆ ಕೇವಲ ಸದ್ಯದ ಚಿತ್ರದ ವಿವರಗಳನ್ನೇ ಹೆಚ್ಚಾಗಿ ಗಮನಿಸಿದೆ. ಹೀಗಾಗಿ ಇನ್ನೂ ವಿಸ್ತೃತವಾದ ಮಹಾಭಾರತದ ಭೂಮಿಕೆಯಲ್ಲಿ ಸೋದ್ದಿಷ್ಟವಾಗಿಯೇ ನೋಡಿಲ್ಲ. ಏಕೆಂದರೆ ಇದು ಚಿತ್ರಕ್ಕೆ ಪದ್ಯ; ಕಾವ್ಯಕ್ಕೆ ಪದ್ಯವಲ್ಲ 🙂 ಸಹೃದಯರು ನನ್ನೀ ಪ್ರಯತ್ನವನ್ನು ಸಹಾನುಭೂತಿಯಿಂದ ಮನ್ನಿಸುವುದು:

    ಅರಿಚಕ್ರಪ್ರಚಯಪ್ರಗಲ್ಭತೆಗಿದೋ ಸಾಕ್ಷ್ಯಂಗಡೆಂಬಂತೆ ವಿ-
    ಸ್ತರಿಸಿರ್ಪೋತ್ಕಟಗಂಧಸಿಂಧುರಘಟಾಪ್ರಸ್ತಾರಮಂ ತಾರಮಂ
    ತೆರೆಯಂ ತಾಂಡವಡಂಬರೋದ್ಭಟನಟಂ ತಾಂ ತೂರುತುಂ ಬರ್ಪವೊಲ್
    ಭರದಿಂದೀ ರಣರಂಗಮಂ ಪುಗುತಲಿರ್ಕುಂ ಸುಪ್ರತೀಕಂ ಮಹಾ-
    ಕರಮಂ ಸಾರ್ಚುತೆ ದಿಗ್ದಿಗಂತದೆಡೆಗಂ ದಿಗ್ದಂತಿಚೌದಂತಮಂ
    ಕರಿಹಸ್ತಪ್ರಕಟಾಭಿರಾಮಕರಣವ್ಯಾಪಾರದಿಂ ಕೀಳ್ವವೊಲ್
    ಸ್ಫುರದಂಭೋಧರಜಾಲಮಂ ಪರಿಯುತುಂ ದಂಭೋಲಿ ಬೀಳ್ವಂತೆವೊಲ್
    ಗಿರಿಸಂದೋದದ ಮೇಲಗುರ್ವಿಸುತುಮಾಗಳ್ ಪ್ರಾಣಪುತ್ರಂ ಮಹೋ-
    ದ್ಧುರನಾಪ್ತಾಯುತಹಸ್ತಿಶಕ್ತಿಯದಟಿಂ ದೈತ್ಯೇಂದ್ರನಂ ಸೀಳಲೆಂ-
    ದರರೇ! ಕೈತವಕೇಸರೀಶನೆರಗುತ್ತಿರ್ಪಂ ಗದಾಗರ್ಧನಂ
    ಮೆರೆಯುತ್ತುಂ ಯಮದಂಡಚಂಡಚಟುತಾಪಾಂಡಿತ್ಯಪಾರಮ್ಯಮಂ;
    ಕರಿವರ್ಯಾಕೃತಿಯಾಂತ ಕಾಲನೆನಲಾ ಶುಂಡಾಲಮುಂ ಕೊಂಡಿರ-
    ಲ್ಕರದಿಂ ಪಾಂಡವಚಾತುರಂಗಬಲದಿಂ ಕುಂಭೀಂದ್ರರಂ ಕೊಂಬವೊಲ್
    ಸರಸೋದಾರವಿನೋದಕೆಂದು ಚತುರಂ ಮಾಹೇಂದ್ರಜಾಲೋರ್ಜಿತಂ
    ತರುಣಂ ಕಂದುಕರಾಜಿಯಂ ಭರದೆ ಮೇಣವ್ಯಾಹತಪ್ರಕ್ರಮಾ-
    ಕ್ಷರವಿನ್ಯಾಸವಿಲಾಸಿ, ಮತ್ತಮದೊ ಕಾಣ್ ಮಾತಂಗಸಾದಿ ಪ್ರಸಾ-
    ದ್ಯರಿ ಘೋರಂ ಭಗದತ್ತನತ್ತಲೆರಗಲ್ ಶ್ರೀವಿಷ್ಣುದತ್ತಾಯುಧಂ
    ಧುರನಿಶ್ಶಂಕನಿರಂಕುಶಂ ನೆಗಳ್ದಿರಲ್ ಮೇಣಂಕುಶಾಸ್ತ್ರಂ ಕರಂ
    ಮುರಲೀಮೋಹನಮೇಧೆಯೊಂದೆ ಸೆಣಸಂ ನಿರ್ದೇಶಿಸಲ್ ನೋತಿರಲ್
    ನರ-ನಾರಾಯಣರಾಗತಿ ಪ್ರಕಟಿಕುಂ ಮಾತಂಗಜೀಮೂತಕಂ
    ಶರದಾಗತ್ಯನುಭೂತಿಯಂ; ನರಕಸಂತಾನಾಕ್ರಮಂ ವಿಕ್ರಮಂ
    ಪರಿಯಲ್ ಕರ್ಪಟಪಟ್ಟಿಕಾಕಪಟಿಕಾವಿಚ್ಛೇದನಂಬೋಲ್, ಖಲಾ-
    ಸುರದಿವ್ಯಾಸ್ತ್ರಮೆ ಮಾಲೆಯಾಗಿ ಮೆರೆಯಲ್ ಚಿಲ್ಲೀಲೆಯಿಂ ಚಾತುರೀ-
    ಚರಿತಾಚಾರನ ಕಂಠದೊಳ್ ಮೆರೆವವೊಲ್ ಕಾಕೋದರಂ ಶರ್ವಕಂ-
    ಧರದೊಳ್ ಭೂಷಣಮೆಂಬವೊಲ್ ಮುಗಿದುದಯ್ ಮತ್ತೇಭವಿಕ್ರೀಡಿತಂ

    ಇಲ್ಲಿಗೆ ಈ ಮತ್ತೇಭಮಾಲಿಕೆಯನ್ನು ನಿಲ್ಲಿಸುತ್ತಿದ್ದೇನೆ. ಇದರ ವಿವರಣೆಗಳನ್ನು ಮತ್ತೆಂದಾದರೂ ನೋಡೋಣ 🙂

    • ನುಡಿವೆಣ್ಗಂ ತಲೆವಾಗುತುಂ ಶಿರಮನಾ ಲೀಲಾಂಘ್ರಿಯೊಳ್ ಪೂವೆನಲ್
      ತೊಡಿಸುತ್ತುಂ ಮೊರೆಗೆಯ್ಯುತಶ್ರುವಭಿಷೇಕಂ ನಿತ್ಯವುಂ ಗೆಯ್ದರುಂ
      ಮುಡಿಗೆಂದೊಪ್ಪುವ ಕಾವ್ಯಮಾಲೆಯಿದರೊಳ್ ಕೃತ್ಸ್ನಾರ್ಥಮಂ ತೋರದೇ
      ತಡೆವಳ್ ವಾಣಿ ಸಹಾನುಭೂತಿರಹಿತಳ್, ಕಾಯ್ಗುಂ ಗಡಂ ರಾಗರೇ!

      ಗಣೇಶ್ ಸರ್, ಗಂಗಾನದಿ ಎಷ್ಟು ಆಳ ಇದ್ರೆ ಏನಂತೆ ಹುಲುಮಾನವ ತೆಗಿದುಕೊಳಕ್ಕಾಗೋದು ಒಂದು ಚಂಬಿನಷ್ಟನ್ನೇ ಅನ್ನೋಹಾಗಿದೆ ನನ್ನ ಸ್ಥಿತಿ. ನೀವೇ ಸಂಪೂರ್ಣಾರ್ಥವನ್ನು ತೋರಬೇಕು 🙂

      ಹಾಗೆಯೆ, ಹಿಂದಿನ ವಾರದ ಭೀಿಮದುರ್ಯೋಧನ ಯುದ್ಧದ ಮಹಾಛಂದಸ್ಸಿನ ನಿಮ್ಮ ಆಶುಧಾರೆಯ ಅದ್ಭುತ ಸ್ವಾರಸ್ಯಗಳನ್ನು ಹಂಚಿಕೊಳ್ಳಬೇಕು ಸರ್.. ಮುಂದಿನ ವಾರ ಗೋಷ್ಠಿಯಲ್ಲಿ ಇದಕ್ಕೆ ಅಂತ ಸಮಯ ಮೀಸಲಿಡೋಣ ಸರ್

  7. ಕ್ಷಮಿಸಬೇಕು; ಕೆಲವೊಂದು ಸವರಣೆಗಳು ಉಳಿದಿವೆ:
    ಎರಡನೆಯ ಸಾಲಿನಲ್ಲಿ “….ವಿಸ್ತರಿಸಿರ್ಪುತ್ಕಟ…….” ಎಂದೂ ಹತ್ತನೆಯ ಸಾಲಿನಲ್ಲಿ “…..ಕೈತವಕೇಸರೀಶನೆನೆ ಸಾಗಿರ್ಪಂ…..” ಎಂದೂ ತಿದ್ದಿಕೊಳ್ಳುವುದು.

    ಅರಿಚಕ್ರ = ಶತ್ರುಗಳ ಸೇನೆ, ಕೈತವಕೇಸರಿ = ನರಸಿಂಹ, ಪ್ರಾಣಪುತ್ರಂ = ವಾಯುವಿನ ಮಗ ಭೀಮ, ಗರ್ಧನ = ಅಬ್ಬರ, ದಂಭೋಲಿ = ಸಿಡಿಲು, ಜೀಮೂತ = ಮೋಡ ಕಾಕೋದರ = ಹಾವು, ಕಂಧರ = ಕೊರಳು, ಶರ್ವ = ಶಿವ, ಕರ್ಪಟ-ಪಟ್ಟಿಕಾ = ಹತ್ತಿಯ ಬಟ್ಟೆಯ ಪಟ್ಟಿ (ಇದು ಭಗದತ್ತನು ಕಣ್ಣುಹುಬ್ಬು ಜೋತುಬಿದ್ದು ನೋಟಕ್ಕೆ ತೊಂದರೆಯಾಗಬಾರದೆಂದು ಕಟ್ಟಿಕೊಂಡದ್ದು) ಇದನ್ನು ಮೊದಲು ಕತ್ತರಿಸಿ ಆತನ ಕಣ್ಣು ಕಾಣದಂತೆ ಮಾಡಿದ್ದು ಕೃಷ್ಣಾರ್ಜುನರ ಜಾಣ್ಮೆ. ಶುಂಡಾಲ, ಕುಂಭಿ, ಮಾತಂಗ = ಆನೆ

    • Had you waited for someone to point out those errors, there would then be no need for straining your fingers (typing the corrigendum).
      ಆರೊರ್ವರಾರೆ “ವಿಶದೀಕರಿಸೆಂತಿದೆಂ”ದುಂ
      ದೂರಿಪ್ಪ ಕಾಲದವರಂ ಜಡದಿಂದಿರಲ್ ನೀಂ|
      ಈರೇಳು* ಶುದ್ಧಿಗಳ ಗೈವುದಕಾಸ್ಪದಂ ಕೇಳ್
      ಬಾರರ್ದೆಲಿರ್ದು, ವೆರಲಿಂಗೆನಿತೋನು ಸೌಖ್ಯಂ||
      *Though you have made only two corrections, I have used this word for prAsa.

  8. ಬಲಮಂ ನೀಡುತುಮಾಣ್ಮಗಂ ಕದನದೊಳ್, ಪ್ರಾಬಲ್ಯಮಂ ತೋರ್ದುತಾಂ
    ತುಳಿಯುತ್ತೆಲ್ಲರನಂಘ್ರಿಯುಗ್ಮಕಗಳೊಳ್, ಉತ್ಕ್ರೋಶಿಸಲ್ಕೀ ಗಜಂ,
    ನೆಲನಂ ಬಿಟ್ಟುರೆ ಚೆಂಡಿನಂತೊಗೆದರೇಂ ಬಾನೆತ್ತರಂ ಘಾಸಿತರ್!
    ಕೊಳಲನ್ನೂದುವರಂತೆ ಕೋಲ್ಪಿಡಿದರೇಂ ಹಿಮ್ಮೆಟ್ಟುತಿನ್ನಿರ್ಪರುಂ!

    (ತನ್ನ ಪ್ರಾಬಲ್ಯವನ್ನು ಮೆರೆಯುತ, ಹೆಚ್ಚು ಬಲವನ್ನೊಡಯಂಗೀಯುತ ಗಜವು ಬಂದಿರಲು,ಘಾಸಿಗೊಂಡವರು ಚೆಂಡಿನಂತೆ ನೆಗೆದರೇ! ಯುಧ್ಧದಿಂದ ಹಿಮ್ಮೆಟ್ಟಿದ ಇನ್ನುಳಿದವರು ಕೋಲನ್ನು ಹಿಡಿದು ಕೊಳಲೂದುವರಂತೆ ನಟಿಸಿದರೇ!)(ಚಿತ್ರಕ್ಕೇ ಪದ್ಯವಾಗಿರುವದರಿಂದ ನಾವುಳಿದಿರುವುದು :-))

  9. ಅರಿಸೈನ್ಯಂಗಳ ಪುಲ್ಲಿನೊಲ್ ಕೆಡವುತುಂ ಚೆಂಡಾಡಿದಾ ದೃಷ್ಯದೊಳ್
    ಮೆರೆವಂ ತಾಂ ಭಗದತ್ತನುಂ, ರಣದೆ ಹೌಹಾರುತ್ತಿಹಂ ಭೀಮನುಂ….
    ಧುರುಳರ್ ಮ್ಲೇಛ್ಛರ ಧಾಳಿಗೇಕೆ ತಲೆನ್ನೊಡ್ಡಿರ್ಪರೆನ್ನುತ್ತಲಾ
    ಹರಿಯುಂ ಸ್ಥಂಬದವೊಲ್ ಬೆರಂಗಿನೊಳುಮೀ ವೀರರ್ಕಳಂ ವೀಕ್ಷಿಪಂ

  10. ಕರದೊಳ್ ಕಾಯದ ರಾಗಮಾಲಿಕೆಯನೇ ಪೊಂದಿರ್ಪ ಮಾತಂಗನು
    ಧ್ಧುರನಾಗೇ ಹತಯೋಧಪುಷ್ಪಚಯಮಂ ಮೆಟ್ಟುತ್ತೆ ,ವೈಭೋಗದಿಂ
    ಸಿರಕಾಲಂಕೃತ ಭೂಷಣಂಗಳನೆ ಮೇಲ್ ಹಾರಂಗಳಂ ಪೊಂದಿ,ಚೆ
    ಲ್ವರನಂತೊಪ್ಪಿದನೇನಹಾ!ವರಿಸುತುಂ ಗೆಲ್ವೆಂಬ ಪೆಣ್ಣಾನೆಯಂ!

    • ಆಹಾ, ಸು೦ದರವಾದ ಕಲ್ಪನೆ ಮೇಡಮ್!

    • “ಗೆಲ್ವೆಂಬ ಪೆಣ್ಣಾನೆ” !! ಪದ್ಯ ತುಂಬಾ ಇಷ್ಟ ಆಯುತು ಕಾಂಚನ. “ರ” ಕಾರ ಖಂಡಪ್ರಾಸದೊಂದಿಗೆ ಗಣೇಶ್ ಸರ್ ರವರ ಮತ್ತೇಭಮಾಲಿಕೆಯ ಮುಂದುವರಿದ ಸಾಲುಗಳಂತಿದೆ.

      • ಧನ್ಯವಾದಗಳು ,ತಮ್ಮಿಬ್ಬರಿಗೂ!ಆದರೆ ಉಷಾ,ಸಮಪ್ರಾಸವೊಂದಿರಲು, …ಹೀಗೆಂದಿರಲಾ! ಸುಲಭವಾಯಿತು ಬಿಡಿ! ಸಿಹಿಯೆಂದು ನಿಮಗೆ ಚಿಟಿಕೆ ಸಕ್ಕರೆಯನ್ನ ಕೊಟ್ಟೂ ಜಾರಿಕೊಳ್ಳಬಹುದು! 🙂

  11. ಎತ್ತರದಿನಬ್ಬರಿಸಿ ಜಲಧಾರೆ ಧುಮುಕುತಿರೆ
    ಮೆತ್ತನಡಿಯಿಡುವ ಹೊಳೆ,ಮಸುಕಾಗದೇ!
    ಗತ್ತನೇ ಘೀಳಿಡುತೆ ,ಗಾಳಿಯೊಲ್ ಘೂರ್ಣಿಸಿರೆ
    ಮತ್ತೇಭಕಂಜಿ ಜಗ,ಮೆದುವಾಗದೇ!

  12. The spiced up movies of the present-day South Indian film industry portray similar situations in their fight sequences where the main protagonist levitates while combating a bunch of thugs and goons.(This “masala” too is turning out to be a cliché these days (except if it is a Rajinikanth movie :P). This image seems inspirational enough for our directors…)

    ತೆಂಕಿನೊಳೆಂತುಟೆಂತುಟು ಧುರಂಧರರಾಡಿರ್ಪರಲ್ತೆ ವಸ್ತ್ರದೊಂ
    ದಂಕಣದಗ್ರದೊಳ್ ದುರುಳರಂ ಬಡಿದಾಗಸದೊಳ್ ನೆಲಕ್ಕೆ ತ
    ಮ್ಮಂಕೆಯಿನಪ್ಪ ಬಂದಿಳಿದುದೆಂತುಟು ಮಾಟವೊ ಶಿಲ್ಪರೂಪದ
    ಲ್ಲಂಕುರಿಸಿರ್ಕುಮೀ ಚಲನಚಿತ್ರವಿಚಿತ್ರಮಲಾ ಭಳೀ ಭಳೀ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)