Nov 072016
 

ನವಿಲನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ವರ್ಣಿಸಿ

  75 Responses to “ಪದ್ಯಸಪ್ತಾಹ ೨೨೭: ವರ್ಣನೆ”

 1. ಜಗವಂ ಸೃಷ್ಟಿಸುವಾಗಳ್
  ಜಗಕರ್ತಮ್ ಕಂಡ ಬಣ್ಣಗಳ ಪರಿಕಿಸಲೀ/
  ಖಗಕಿತ್ತಿರ್ಕುಮ್ ವರ್ಣಾ
  ಳಿಗಳಂ ಪುಟಮೆಂದು ಬಗೆದು ನವಿಲಿಗೆ ಬೊಮ್ಮಮ್/
  ಬ್ರಹ್ಮನು ಜಗತ್ತನ್ನು ಸೃಷ್ಟಿಸುವಾಗ ಕಂಡ ಬಣ್ಣಗಳನ್ನು ಪರೀಕ್ಷಿಸಲು(colour combination ) ಬಹುಶಃ ಈ ನವಿಲೆಂಬ ಪಕ್ಷಿಯನ್ನೇ ಪುಟವೆಂದು ತಿಳಿದು ಬಣ್ಣ ಕೊಟ್ಟನೇ?
  ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು

  • ತಪ್ಪುಗಳನ್ನೇ ಕಾದುಕೊಂಡು ಕುಳಿತಿರುವ ನಮಗೆ ಕೇಳಿಕೊಳ್ಳಲೇಬೇಕಿಲ್ಲ 🙂 ಜಗಕರ್ತ ತಪ್ಪು. ಜಗತ್ಕರ್ತ ಅಥವಾ ಜಗದ ಕರ್ತ ಆಗಬೇಕು. ಜಗ ಎಂಬುದು ಸಂಸ್ಕೃತಶುದ್ಧವಲ್ಲ. ಜಗಮಂ ಆಗಬೇಕು. ಬಣ್ಣಂಗಳಂ. ಚತುರ್ಮುಖಬ್ರಹ್ಮ ಪುಲ್ಲಿಂಗದಲ್ಲಿ ಬಳಸಬೇಕಾದ್ದರಿಂದ ಇತ್ತಿರ್ಪಂ ಆಗಬೇಕು.

   • ನೀವು ತಪ್ಪುಗಳನ್ನು ತಿಳಿಹೇಳಿದರೆ ಮಾತ್ರ ನಾವು ತಿದ್ದಿಕೊಳ್ಳಲು ಸಾಧ್ಯವಲ್ಲವೇ?
    ಪದ್ಯದ 2ನೇ ಸಾಲಿನಲ್ಲಿ “ಜಗದೀಶ” ಎಂದರೆ ಸರಿಹೋಗಬಹುದೇ?
    ಅಂದಹಾಗೆ ಬಣ್ಣ ಎಂಬಲ್ಲಿ ಬಿಂದು ವಿಕಲ್ಪವಲ್ಲವೇ? “ನಪ್ಪಿನೊಳ್ ವಿಕಲ್ಪಮ್” ವರ್ಣ ಅಂತಿದ್ದರೆ ಮಾತ್ರ ನಿತ್ಯ.

    • ಬಿಂದುವಿನ ಬಗ್ಗೆ ಗೊತ್ತಿಲ್ಲ. ನೋಡಬೇಕು.
     ಜಗಮಂ ಸೃಷ್ಟಿಸುತುಂ ನಾ / ಲ್ಮೊಗನಾಗಳ್ ಕಂಡ …. ಮಾಡಬಹುದು.

     • ಸರಿ ನೀಲಕಂಠರೇ , ಹಾಗೆಯೇ ತಿದ್ದುತ್ತೇನೆ. ಸಲಹೆಗಳಿಗಾಗಿ ಧನ್ಯವಾದಗಳು:-)

  • (ಬೊಮ್ಮಂ) ಖಗಕಿತ್ತಿರ್ಪಂ. ಕಲ್ಪನೆ ಚೆನ್ನಾಗಿದೆ.

 2. ಮುಗಿಲ ಮಂಚದೆ ಗುಡುಗ ಮದ್ದಳೆ
  ಗಾನ ಪಾಡಿವೆ ಪಕ್ಷಿ ಸಂಕುಲ
  ಸೋನೆ ಮಳೆಯದು ಸೂಸಿ ಹರುಷವ ಸುರಿಯಲಾಕ್ಷಣದಿ
  ಕಾಣ ಕಾಣುತೆ ಗರಿಯು ಬಿಚ್ಚಿತೆ
  ಮೇಣ್ ಸೊಬಗು ವೈಯಾರದಿಂದಲಿ
  ಕಣ್ಸಹಸ್ರವು ಬಿರಿದು ಧೀಂಧೀಂ ನರ್ತನಾಶಯದೆ

  • ಪದ್ಯಪಾನಕ್ಕೆ ಸ್ವಾಗತ. ಒಳ್ಳೇ ಕಲ್ಪನೆ ಹಾಗು ಪದ್ಯ. ಕೆಲವು ತಿದ್ದುಗೆಗಳು…ಬಾನ ಮಂಚದೆ .. ಆಗಬೇಕು ಪ್ರಾಸಕ್ಕೆ. ಗಾನವಾಡಿವೆ. ಮೇಣ್ ಸೊಬಗು, ಕಣ್ಸಹಸ್ರ ಇವು ಮೊದಲಿನ ಪ್ರಾಸಕ್ಕೆ ಬರುವುದಿಲ್ಲ. ಅದಲ್ಲದೇ ಕಣ್ಸಹಸ್ರ ಅರಿಸಮಾಸವಾಗುತ್ತದೆ, ಬಳಸಲಾಗದು.

   • ಕಣ್+ಸಹಸ್ರ: ಸಂಧಿ. ಸಮಾಸವಲ್ಲ.

    • ಇಲ್ಲವಲ್ಲ.. ಸಂಧಿಯೇನೂ ಆಗಿಲ್ಲ ಅಲ್ಲಿ. ನೇತ್ರಸಹಸ್ರ ಎಂಬಂತೆ ಸಮಾಸವೇ ಆಗಿದೆ.

  • ಪದ್ಯಪಾನಕ್ಕೆ ಸ್ವಾಗತ. ಪದ್ಯಭಾವವು ಚೆನ್ನಾಗಿದೆ. ಪ್ರಾಸವನ್ನು ಪಾಲಿಸಲಾಗಿಲ್ಲ ಅಷ್ಟೆ. ಪ್ರಾಸವು ಇಬ್ಬಗೆಯಾದುದು.
   1. ಆದ್ಯಕ್ಷರದಲ್ಲಿ ಆರು ವಿಧ: ಸಿಂಹ (ಹ್ರಸ್ವ, ಉದಾ: ಕ), ಗಜ (ದೀರ್ಘ, ಉದಾ: ಜಾ), ವೃಷಭ (ಸ್ವರಾನುನಾಸಿಕ, ಉದಾ: ಡಂ), ಅಜ (ವಿಸರ್ಗ, ಉದಾ: ತಃ), ಹಯ (ಸಜಾತೀಯ ಸಂಯುಕ್ತವ್ಯಂಜನ, ಉದಾ: ಮ್ಮ) ಹಾಗೂ ಶರಭ (ವಿಜಾತೀಯ ಸಂಯುಕ್ತವ್ಯಂಜನ, ಉದಾ: ರ್ಯ). ನಿಮ್ಮ ಪದ್ಯದ ಪಾದಗಳಲ್ಲಿ ಅನುಕ್ರಮವಾಗಿರುವುವು ಸಿಂಹ, ಗಜ, ಗಜ, ಗಜ, ಶರಭ, ಶರಭಗಳಿವೆ.
   2. ಆದಿಪ್ರಾಸ: ಪ್ರತಿಪಾದದ ಎರಡನೆಯ ಅಕ್ಷರವು ಅದೇ ವ್ಯಂಜನವಾಗಿರಬೇಕು. ಇದು ಹ್ರಸ್ವವೋ ದೀರ್ಘವೋ ಸ್ವರಾನುನಾಸಿಕವೋ ವಿಸರ್ಗವೋ ಇರಬಹುದಾಗಿದೆ (ಛಂದಸ್ಸಿಗನುಗುಣವಾಗಿ). ಸಂಯುಕ್ತಾಕ್ಷರವಿರುವಂತಿಲ್ಲ. ನಿಮ್ಮ ಪದ್ಯದ ಪಾದಗಳಲ್ಲಿ ಅನುಕ್ರಮವಾಗಿರುವುವು ಗ, ನ, ನ, ಣ, ಸೊ, ಸ.

   ಹೀಗೊಂದು ಸವರಣೆ:
   ಮುಗಿಲ ಮಂಚದೆ ಗುಡುಗ ಮದ್ದಳೆ
   ಒಗಟ ಪಾಡಿವೆ ಪಕ್ಷಿಸಂಕುಲ
   ಸೊಗದ ಮಳೆಯದು ಸೂಸಿ ಹರುಷವ ಸುರಿಯಲಾಕ್ಷಣದಿ|
   ಹಗುರದಿಂ ತಾಂ ಗರಿಯು ಬಿಚ್ಚಿತೆ
   ಮಿಗಿಲುವೈಯಾರದಿಹ ಭಾವದೆ
   ಮಿಗೆ ಕುಣಿದುದೇಂ ತಕಿಟ ಧೀಂಧೀಮೆಂದು ನವಿಲೊಂದು||

   ಇಲ್ಲಿ ಆದ್ಯಕ್ಷರವು ಸಿಂಹಪ್ರಾಸ. ಪ್ರಾಸವು (ಎರಡನೆಯದು) ’ಗ’. ನೀವು ಬೇರೆ ಪ್ರಾಸಗಳನ್ನಿರಿಸಿಕೊಂಡು ಇದೇ ಪದ್ಯವನ್ನು ಬೇರೊಂದು ರೀತಿಯಾಗೆ ಪುನಾರಚಿಸಿ. ಬಿಡದೆ ಪ್ರತಿವಾರವೂ ಪದ್ಯರಚನೆ ಮಾಡಿ. ಶುಭಾಶಯಗಳು.

   • ಸಲಹೆಗಳಿಗೆ ಸಾವಧಾನವಾಗಿ ತಿಳಿಹೇಳಿದ್ದಕ್ಕೆ ಧನ್ಯವಾದಗಳು.
    ತಮ್ಮ ಸಲಹೆಯಂತೆಯೇ ಮತ್ತೊಮ್ಮೆ ಪ್ರಯತ್ನಿಸಿದ್ದೇನೆ. ದಯವಿಟ್ಟು ತಪ್ಪಿದ್ದರೆ ತಿದ್ದಿ ಹೇಳಿ

    ಗಗನ ನಡುಗಿದೆ ಸಿಡಿಲ ಘಾತಕೆ
    ಮುಗಿಲ ಮೇಲ್ಮಿಂಚು ಸಂಚಾಡುತೊ-
    ಮ್ಮೆಗೆ ಮುತ್ತ ಹನಿಯದು ಹನಿಯಲಾಕ್ಷಣ ಭರದಿ ಜರ್ರೆನುತೆ
    ಆಗಲಾದುದೆ ನವಿಲ ನರ್ತನ
    ಬೀಗಿ ಮೈಯನೆ ಚದುರೆ ಪುಕ್ಕವು
    ಸೊಗದ ದೃಶ್ಯವು ಕಣ್ಮನಂಗಳ ಸೂರೆಗೊಂಡಿಹವೆ

    • 1. ಎರಡನೆಯ ಪಾದದಲ್ಲಿ: /ಚು ಸಂ/ ಎಂಬುದು ಲಗಂ ಆಗಿದೆ. /ಚಾಡುತೊಮ್/ ಎಂಬಲ್ಲಿ ಐದು ಮಾತ್ರೆಗಳಿವೆ, ನಾಲ್ಕು ಇರಬೇಕು
     2. ಮೂರನೆಯ ಪಾದದಲ್ಲಿ: /ಮೆಗೆ ಮುತ್ತ/ ಎಂಬಲ್ಲಿ ಐದು ಮಾತ್ರೆಗಳಿವೆ, ಮೂರು ಇರಬೇಕು

 3. ಮೊದಲ ಸಾಲು :
  ಬಾನ ಮಂಚದೆ ಗುಡುಗ ಮದ್ದಳೆ – ಎಂದು
  ಪ್ರಯತ್ನವಷ್ಟೆ, ತಪ್ಪಿದ್ದರೆ ದಯವಿಟ್ಟು ತಿಳಿಯಹೇಳಬೇಕಾಗಿ ಕೋರಿಕೆ

 4. ಬಿಂದುಗಳು ತಣ್ಪೆರೆಯೆ ನರ್ತಿಸುತಲಿರ್ಕುಂ
  ಚೆಂದದಲಿ ತನ್ನಗರಿಯಂ ಗೆದರಿಸೀಗಳ್
  ಮಂದಗತಿಯಿಂದೊಲವ ಸೂಸಿರೆ ಮಯೂರಂ
  ಸುಂದರತೆ ವಿಸ್ಮಯತೆಯೆಂಬುದನೆ ತೋರ್ಕುಂ

 5. ವೃತ್ತ,ವಿಷಯ //ಮತ್ತಮಯೂರ

  ಶ್ರೀಲಕ್ಷ್ಮೀಕಾಂತನ ಮುಡಿಗಂ ನೀಂ ಗರಿಯಿತ್ತುಮ್
  ನೀಲಗ್ರೀವೇಶನ ಸುತಗಂ ನೀ ನೆರವಿತ್ತುಮ್ /
  ಮೇಲೇರಿರ್ಪಯ್ ಮದಮತಿಯಿಂದಂ ನವಿಲೇಕೌ
  ಶೀಲಃಶೈಲಾದ್ರಿಯ ಪಡೆಯಲ್ಕಮ್ ವಲ ಕಷ್ಟಮ್/

  ಕೃಷ್ಣನ ಮುಡಿಗೆ ಗರಿಯನ್ನು ಕೊಟ್ಟರೂ, ಶಿವನ ಮಗನಿಗೆ (ಸುಬ್ರಹ್ಮಣ್ಯ) ನೆರವಾದರೂ(ಅಂತಹ ಮಹಾತ್ಮರ ಸಂಗವಿದ್ದರೂ) ಜಂಭವೆನ್ನುವುದು ನಿನ್ನನ್ನು (ನವಿಲನ್ನು) ಬಿಟ್ಟು ಹೋಗಲಿಲ್ಲ. ಹಾಗಾಗಿ ಶೀಲದಲ್ಲಿ ಔನ್ನತ್ಯವನ್ನು ಸಾಧಿಸುವುದು ನಿಜವಾಗಿಯೂ ಕಷ್ಟಕರ.

  ಶೀಲಃಶೈಲ ಪ್ರಯೋಗ ಸರಿಯೋ ತಪ್ಪೋ ತಿಳಿದಿಲ್ಲ. ಹಾಗೆಯೇ ಇನ್ನೂ ತಪ್ಪುಗಳಿದ್ದರೆ ತಿದ್ದಬೇಕಾಗಿ ವಿನಂತಿ.

  • ಮಂಜ ಅವರೆ ಪದ್ಯ ಚೆನ್ನಾಗಿದೆ. ಇದಾವ ಛಂದಸ್ಸು?

  • ಚೆನ್ನಾಗಿದೆ. ಶೀಲಶೈಲ ಆಗಬೇಕು. ಶೈಲ ಅದ್ರಿ ಎರಡೂ ಒಂದೇ. ಸುತಂಗಂ ಆಗಬೇಕು. ಪಡೆಯಲ್ಕೆ. ವಲಂ… ಪಡೆಯಲ್ಕೇಂ ಗಡ ಕಷ್ಟಂ!

  • ಮೇಲೇರಿರ್ಪೆಯಯ್ ಆಗಬೇಕು.

   • ಧನ್ಯವಾದಗಳು. ಪದ್ಯದ ಉತ್ತರಾರ್ಧವನ್ನು,
    ಮೇಲಕ್ಕೇರಿರ್ಪೆಯೊ, ಮದದಿಂದಂ ನವಿಲೇಕೌ?
    ಶೀಲಾಗ್ರಕ್ಕೇರುವುದತಿ ಕಷ್ಟಮ್ ದಿಟಮಲೇ್ತ//ಎಂದು ತಿದ್ದುತ್ತೇನೆ.
    ಸುತ ಎಂಬುದನ್ನು ಮಗ ಎಂದಾಗಿಸಿ can I avoid ಬಿಂದು?

    • ಅಕಾರಾಂತ ಪದಗಳ ಮುಂದೆ ಬಿಂದು ಬರುತ್ತೆ. ಮಗಗಂ ಎಂದು ನಾನೆಲ್ಲೂ ನೋಡಿಲ್ಲ. ಮಗನಿಗಂ ಆಗಬಹುದು. ಕುವರಂಗಂ ನೆರವಿತ್ತುಂ ಎಂದು ಮಾಡಿ. ನೀ ಇದರ ಪುನರುಕ್ತಿಯೂ ತಪ್ಪುತ್ತೆ.

  • ನನಗೆ ತಿಳಿದಿರುವ ಮತ್ತಮಯೂರ: ನಾನಾನಾನಾ/ನಾ/ನನನಾನಾನನನಾನಾ. /ನಾ/ವನ್ನು ನೀವು ಒಡೆದು ಎರಡು ಲಘುವಾಗಿಸಿಕೊಂಡಿದ್ದೀರಿ. ಅಥವಾ ನನ್ನ ಗ್ರಹಿಕೆಯೇ ತಪ್ಪೋ! ಪದ್ಯವು ಚೆನ್ನಾಗಿದೆ. ’ಶೀಲಃಶೈಲಾ’ವನ್ನು ವಿಶ್ಲೇಷಿಸಲು ನನಗೆ ತಿಳಿಯುತ್ತಿಲ್ಲ.

   • ಆ ಅನುಮಾನ ನನಗೂ ಬಂದಿತ್ತು!ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಪುಸ್ತಕದಲ್ಲಿ ನೀವು ಹೇಳಿದ ವಿನ್ಯಾಸವೇ ಇದೆ. ಆದರೆ ಗೋಖಲೆಯಲ್ಲಿ ನಡೆದ ಅಷ್ಟಾವಧಾನವೊಂದರಲ್ಲಿ ಶ್ರೀ ಆರ್ ಗಣೇಶರು ಮೇಲಿನ ವಿನ್ಯಾಸದಲ್ಲಿಯೇ ರಚಿಸಿದ್ದಾರೆ(ಶ್ರೀರಂಭೋಜೇ ನಲಸದುಪಾಸ್ತಿರ್ದಿನನಾಶೇ -ನಿಷೇಧಾಕ್ಷರಿ) . ಅವರನ್ನು ಅನುಕರಿಸಿದ್ದೇನೆ ಅಷ್ಟೇ.
    ಶೀಲಃಶೈಲ. ಅಂದರೆ ಶೀಲದ ಪರ್ವತ(ಶೀಲವು ವಿನಯಾದಿ ಸದ್ಗುಣಗಳ combination ಆದ್ದರಿಂದ) ಎಂಬರ್ಥದಲ್ಲಿ ಬಳಸಿದ್ದಾಗಿತ್ತು. ತಪ್ಪೆಂದು ತಿಳಿದ ಮೇಲೆ ಬದಲಾಯಿಸಿಕೊಳ್ಳಬೇಕಾಯಿತು:-)

 6. ಸಂತುಲಿತ ಮಧ್ಯಾವರ್ತ ಗತಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ.ಭಾಷೆ ಸ್ವಲ್ಪ ಬಾಲಿಶವಾಗಿದೆ..ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಿ.

  ನಿನ್ನ ಚಂದವನು ನೋಡಲೆಂದೆ ಬಂದಿಹುದೆ ವರ್ಷಧಾರೆ?
  ಕಣ್ಣ ತುಂಬಿಕೊಂಡಿರುವೆ ಮೈಯೊಳಗೆ ನೀನೆ ಚೆಲುವ ತಾರೆ
  ಪೆಣ್ಣುಗಳಿಗೆ ನಿನ್ನಂದ ನೋಡಿ ಬಂದಿರುವ ಗತಿಯ ನೋಡು
  ಬಣ್ಣವೆರಚುತಲಿ ಗರಿಯ ಕುಂಚದಲಿ ಚೆಲುವ ನಾಟ್ಯವಾಡು

  ಅಂದವೆಂದರೇನೆಂದು ಕೇಳುವವರೆಲ್ಲ ನಿನ್ನ ನೋಡಿ
  ಕುಂದುಕೊರತೆಗಳ ಕಾಣದಾಗಿ ಹೋಗಿಹರು ಮೆಲ್ಲನೋಡಿ
  ಸುಂದರಾಂಗನೇ ನಿನ್ನ ಬರೆದಿಹನು ಬೊಮ್ಮ ಕುಂಚ ತೀಡಿ
  ಚಂದಮಾಮನೂ ಮರುಗಿ ಕುಳಿತಿಹನು ನಿನ್ನ ಚೆಂದ ನೋಡಿ

  ಯಾರು ಬರೆದವರು ನಿನ್ನ ಬೆನ್ನ ಮೇಲಿರುವ ರಂಗವಲ್ಲಿ
  ನೂರು ಕಣ್ಣುಗಳ ಹೊತ್ತು ನಲಿಯುತಿಹೆ ಸುತ್ತ ಚೆಲುವ ಚೆಲ್ಲಿ
  ತಾರೆ ನೂರು ತುಂಬಿರುವ ಬಾನವೊಲು ಹೊಳೆವೆ ನಾಟ್ಯದಲ್ಲಿ
  ಹೀರಿ ಜಗದ ಚೆಲುವೆಲ್ಲ ಮೆರೆಯುತಿಹೆಯೇನು ಜಂಭದಲ್ಲಿ?

  • ಕುಂಚ ತೀಡಿ, ತಾರೆ ನೂರು ಇವು ಅರಿ ಸಮಾಸಗಳಾಗುತ್ತವೆಯೆ?

   • ಕುಂಚ ಎಂಬುದು ಸಂಸ್ಕ್ರತವಲ್ಲವೇನೊ! ಕುಂಚಿಕ ಎಂದಿದೆ ಜಿ.ವಿ. ನಿಘಂಟಿನಲ್ಲಿ. ಕುಂಚ ಎಂಬುದು ಕನ್ನಡ ಅಂತಿದೆ. ಹಾಗೆಯೇ ತಾರಾ ಎಂಬುದು ಸಂಸ್ಕೃತ. ತಾರೆ ಎಂಬುದು ಕನ್ನಡ ರೂಪ. ಆದ್ದರಿಂದ ಅರಿ ಸಮಾಸವಲ್ಲವೆಂದು ತೋರುತ್ತದೆ.

    ಪದ್ಯ ತುಂಬಾ ಚೆನ್ನಾಗಿದೆ. ಹಳಗನ್ನಡ ತಿಳಿಯದವರೊಡನೆಯೂ ಹಂಚಿಕೊಳ್ಳಬಹುದು !

  • ಆಹಾ, ತುಂಬ ಚೆನ್ನಾಗಿದೆ 🙂 ನಿನ್ನ ಚೆಂದ ನೋಡಿ ಆಗಬೇಕು…

  • Very lilting. No impediment occurred to me while I recited it metrically. So, no error 😉

 7. ಅಮಮಾ ! ಬಣ್ಣಿಪುದೇ೦ ನಿ –
  ನ್ನಾ ಮೆಯ್ಸಿರಿ ! ನಾರಿ ಕುಲಮೆ ನಾಣ್ಗು೦ದಿರ್ಕು೦ I
  ಎಮಗಾವಗ ಸಲ್ವುದದೀ
  ರಮಣೀಯರ ಸೆಳೆವ ರೂಪಮೆಂದಿರ್ಪಾಣ್ಗಳ್ II

  ಗರಿಗೆದರಿದ ನವಿಲಿನ ಕಲ್ಪನೆಯಲ್ಲಿ ಪದ್ಯ — ಅದರ ನಾಟ್ಯಕ್ಕೆ ಹೆಂಗಸರ ಕುಲವೇ ನಾಚಿಕುಗ್ಗಿದರೆ,ಗಂಡಸರು ನಮ್ಮ ಜಾತಿಗೆ ಇಂಥ ಸೊಬಗು ಯಾವಾಗ ದೊರೆಯಬಹುದೆಂದು ಮತ್ಸರದಿಂದಿರುತ್ತಾರೆ

  • ತುಂಬ ಚೆನ್ನಾಗಿದೆ. ಎರಡನೇ ಸಾಲಿನ ಮತ್ತು ಮೂರನೇ ಸಾಲಿನ ಮಧ್ಯೆ ವಿಸಂಧಿ ದೋಷವಾಗುತ್ತದೆ, …ದಿರ್ಕುಮೆಮಗಾವ…
   ರಮಣಿಯರ ಆಗಬೇಕು. ಸಂಸ್ಕೃತದ ಮೂಲ ರಮಣೀ ಎಂಬುದನ್ನು ಹಾಗಹಾಗೇ ಬಳಸಲಾಗದು.

   • 1)ಕಂದ ಪದ್ಯದಲ್ಲಿ ಸಮಪಾದದ ಕೊನೆ ಗುರುವಿನಿಂದಲೇ ಕೊನೆಗೊಳ್ಳಬೇಕಲ್ಲವೇ ?

    2) ಮೂರನೆಯನೆಯ ಗೆರೆಯಲ್ಲಿ ಸ್ವರಾಕ್ಷರದ ಬಳಕೆ ತಪ್ಪೇ? ಷಡ್ಪದಿಯ ಉತ್ತರಾರ್ಧದಲ್ಲಿ ಬಳಸುವಂತೆ ಸಾಧ್ಯವಿಲ್ಲವೇ ?

    • ಗೊತ್ತಿಲ್ಲ. ಬಲ್ಲವರು ತಿಳಿಸಬೇಕು…

     • ನೀಲಕಂಠರೇ ಅದು ತಪ್ಪಿರಲಾರದು ಅನಿಸುತ್ತದೆ . ಪದ್ಯಪಾನದ ಪೂರ್ವಸೂರಿಳು ಉಪಯೋಗಿಸಿದ ಉದಾಹರಣೆಯೊಂದು ಇಲ್ಲಿದೆ …..
      http://padyapaana.com/?p=480#comment-1959 — Sl.No 16

      ಇನ್ನೊಂದು ಪದ್ಯ, ಡಿ .ವಿ.ಜಿ ಯವರ ”ಶ್ರೀರಾಮ ಪರೀಕ್ಷಣಂ”ನ ಹನುಮಂತನ ಪ್ರಶ್ನೆಯಲ್ಲಿ ಇಂತಿದೆ ….

      ಮಾಯೆಯ ಪೊರೆ ಕಣ್ಗಮರಿರೆ
      ಹೇಯೋಪಾದೆಯ ರೂಪಬಂಧ ದ್ವೈಧ೦ I
      ಆಯಾಸಂಗೊಳಿಪುದು ಡೋ –
      ಲಾಯಿತನಂ ಗೈದು ನರನ ಸಂಸ್ಕೃತಿಯಲೆಯೊಳ್ II

      ಆದ್ದರಿಂದ ‘ಹಾಗೆಹಾಗೆ’ ಬಳಸಿದನ್ನು ಮಾತ್ರ ತಿದ್ದಿಕೊಂಡರೆ ಸಾಕು ಅಂತನ್ನಿಸಿದೆ

      ಅಮಮಾ ! ಬಣ್ಣಿಪುದೇ೦ ನಿ –
      ನ್ನಾ ಮೆಯ್ಸಿರಿ ! ನಾರಿ ಕುಲಮೆ ನಾಣ್ಗು೦ದಿರ್ಕು೦ I
      ಎಮಗಾವಗ ಸಲ್ವುದದೀ
      ರಮಣಿಯರ ಸೆಳೆವ ಸುರೂಪಮೆಂದಿರ್ಪಾಣ್ಗಳ್ II

    • ಧನ್ಯವಾದಗಳು ಸ್ಪಷ್ಟೀಕರಣಕ್ಕೆ 🙂

 8. ಬಣ್ಣದ ಗರಿಯಲಿ ಲೋಕವ ಸೆಳೆಯುತ
  ಕಣ್ಣಿಗೆ ತಂಪೆರೆಯುವ ನವಿಲೇ|
  ನಿನ್ನಯ ಸೋಗೆಯ ಶಿರದೆ ಮುಡಿದು ಮು-
  ಕ್ಕಣ್ಣನೆನಿಸಿದನು ಮಾಧವನು||

  • ಗುರುದತ್ಮ ಒಳ್ನೆಯ ಪದ್ಯ.. ೩ನೇ ಸಾಲನ್ನು “ನಿನ್ನಯ ಸೋಗೆಯ ಶಿರದೆ ಧರಿಸಿ ಮು- ……” ಎಂದು ಮಾಡಿದರೆ ಸರಿಯಾದೀತು

   • ನಿಮ್ಮ ಸಲಹೆಗೆ..ಧನ್ಯವಾದಗಳು ಚೀದಿ!!

    ಹಾದಿರಂಪರ ಸಲಹೆಯಂತೆ 3ನೇ ಸಾಲನ್ನು ಹೀಗೆ ತಿದ್ದಿದ್ದೇನೆ..
    “ನಿನ್ನಯ ಸೋಗೆಯ ಶಿರದೆ ಮುಡಿದು ಮು-”

    4ನೇ ಸಾಲನ್ನು ಕೂಡ ‘ಕ್ಕಣ್ಣನೆನಿಸಿದನು’ ಎಂದು ಸವರಿದ್ದೇನೆ..

  • ಚೆನ್ನಾಗಿದೆ. ಸೋಗೆ ಅಂದರೇನೇ ನವಿಲು ಅಂತ ಅರ್ಥ. ನಿನ್ನಯ ಗರಿಯನೆ, ನಿನ್ನಯ ಪುಚ್ಛವ ಅಂತೇನಾದರೂ ಮಾಡಬೇಕು.

   • ‘ಸೋಗೆ’ ಅಂದರೆ ಪಕ್ಷಿಯ/ನವಿಲಿನ ‘ಗರಿ’ ಅಂದುಕೊಂಡಿದ್ದೆ. ಇದಕ್ಕೆನೇ ‘ನವಿಲು’ ಅಂತಾರೆ ಅಂತ ಗೊತ್ತಿರಲಿಲ್ಲ.

    • ಹ್ಮ.. ನಿಘಂಟಿನಲ್ಲಿ ೧. ನವಿಲು ೨. ಅಡಕೆ ಮರದ ಗರಿ ಅಂತ ಕೊಟ್ಟಿದ್ದಾರೆ. ನವಿಲಿನ ಗರಿ ಅಂತ ಬಳಸಬಹುದಾ ಗೊತ್ತಿಲ್ಲ… hahhaa

  • Fine imagination

 9. ಪಶ್ಯನ್ನಪಿ ಮಯೂರಂ ಹಾ!
  ನೃತ್ಯಾಭ್ಯಾಸಾಪಸರ್ಪಿಣಂ
  ದೃಷ್ಟ್ವಾ ಲೋಕಮಿದಾನಿಂತು
  ದಿಗ್ಭ್ರಾಂತಾಸ್ಮಿ ಹರೇ ಹರೇ!
  (ಮಯೂರವನ್ನು ನೋಡಿಯೂ(ನರ್ತನವನ್ನು),ನೃತ್ಯಾಭ್ಯಾಸದಿಂದ ದೂರಕ್ಕೆ ಸರಿಯುವವರನ್ನು ನೋಡಿ ದಿಕ್ಭ್ರಾಂತನಾಗಿದ್ದೇನೆ)

  • ಸಂಸ್ಕೃತದಲ್ಲಿ ಅಲ್ಪ ಜ್ಞಾನಿ:
   ಲೋಕೆ ಎಂದಾಗಬೇಕಿತ್ತೇ ?
   ದಿಗ್ (ಜಶ್ತ್ವ)?

   • ಕಡೆಯ ಸಾಲನ್ನು ಸವರಿದ್ದೇನೆ
    ನಾಮಪದ ಅಥವಾ ಕ್ರಿಯಾಪದದ ಕೊನೆಯ ए ऎ ओ ऒ ಕಾರಗಳ ಮುಂದೆ ಸ್ವರ ಬಂದಾಗ, ,ಸಂಧಿಯಾಗದೇ ಇರುವದು.
    ಹಾಗೆಯೇ ನಾನೂ ಕೂಡ ಸಂಸ್ಕೃತವನ್ನು ಬಲ್ಲವಳಲ್ಲ,:-)

    • ಲೋಕೆ
     ನಾನು ಸಪ್ತಮೀ ಹೇಳಿದೆ. ಸಂಧಿಯೂ ಹಾಗೆಯೇ ಆಗುವುದು ಗಮನಿಸಲಿಲ್ಲ.
     ಲೋಕದಲ್ಲಿ ಅಂತ ಹೇಳ್ತಾ ಇದ್ದೀರೇನೋ ಅಂದುಕೊಂಡೆ.

     • ಚೆನ್ನಾಗಿದೆ. ಲೋಕಮಿದಾನೀಂ ತು ಅಂತ ಮಾಡಬಹುದು. ಅಪಸರ್ಪಿಣಮ್ ಮಾಡಿದರೆ ಅಪಸರ್ಪಿಣಂ ಲೋಕಮ್ ಇದಾನೀಂ ದೃಷ್ಟ್ವಾ ಅಂತ ಅನ್ವಯಿಸಬಹುದು.

  • ಅದಲ್ಲದೇ, ಸಾಂದರ್ಭಿಕವಾಗಿ, ಪದ್ಯವನ್ನು ಬರೆದವರು ನೀವಾದ್ದರಿಂದ, ದಿಗ್ಭ್ರಾಂತಾ ಅಸ್ಮಿ ಅಂತ ಮಾಡಬೇಕು 🙂

  • ನವಿಲಂ ನಾಂ ನೋಡದೆಲಿರಲೇನೌ?
   ಎವೆಯಿಂ ದಿಗ್ಭ್ರಾಂತಿಯನುಂ ನೀಂ|
   ತವೆ ತೋರಿಸೆ ಸಾಕೌ ನಾಮಾಗಾ-
   ಗುವೆವೌ ನರ್ತನಶಾಲೀನರ್||

 10. ಗರಿಯಂ ಬಿಚ್ಚುತೆ ಕುಣಿವೀ
  ಪರಿಗಂ ಮರುಳಾಗದಿರ್ಪರಾರೈ ನೆಲನೊಳ್
  ಪರಿಪರಿ ಪುಷ್ಪಂ!ತರುವುಂ!
  ತೊರೆಯುಂ! ಕಾಣವೆ ನಗುತ್ತೆ ನಿಂದುದು ಕೆಲದೊಳ್!!

  • ’ಎನ್ ಒಣ್’ (ನನ್ನದೊಂದು) ಎಂದು ಬರಿಯ ಹೇಳಿದರೆ ಆಗದು. ಪದ್ಯವನ್ನು ರಚಿಸಬೇಕು 🙂

 11. ಕಲ್ಪನೆ ಕಳೆದ ಸೋಮವಾರವೇ ಬಂದಿತ್ತು. ಏಕೋ ಪದ್ಯ ಕೈಗೂಡಿರಲಿಲ್ಲ. ಇವತ್ತಾಯಿತು 🙂

  ನವಿಲೇ ನಿನ್ನ ಪೆಸರ್ಗೊಳಲ್ ಮಹಿಮರೇನೇನ್ ಗೈದಪರ್ ಕಂಡೆಯಾ!
  ಅವಮಾರ್ಗಂದುಳಿದಾ ಶಚೀಪತಿ ಸಹಸ್ರಾಕ್ಷತ್ವಮಂ ಪೊಂದಿದಂ
  ಶಿವನೆಂತೋ ಸಹಿಸುತ್ತೆ ಘೋರವಿಷಮಂ ತಾಂ ನೀಲಕಂಠತ್ವಮಂ
  ಧವಿಸಿರ್ಪಂ ಹರಿ ನಿನ್ನ ನಲ್ಗರಿಗಳಿಂ ಸಂದಂ ಶಿಖಂಡಿತ್ವಮಂ

  ನವಿಲೇ, ನಿನ್ನ ಹೆಸರನ್ನು ಹೊಂದಲು ದೊಡ್ಡದೊಡ್ಡವರು ಏನೇನು ಮಾಡಿದರು ಕಂಡೆಯಾ?! ಇಂದ್ರ ಅವಮಾರ್ಗವನ್ನು ತುಳಿದು ಸಹಸ್ರಾಕ್ಷನೆನಿಸಿದ. ಶಿವ ಘೋರವಿಷವನ್ನೂ ಸೈರಿಸಿ ನೀಲಕಂಠನೆನಿಸಿದ. ಹರಿ ನಿನ್ನ ಗರಿಗಳನ್ನು ಧರಿಸಿ ಶಿಖಂಡಿ ಎನಿಸಿದ.

 12. Lord Subrahmanya is both the Military chief of Heaven and the God of thieves. His vehicle, the Peacock, is a robust bird. Does it empower him to face the enemy in a war, or does it serve to escape from people after a heist?
  ಮಂಜುಭಾಷಿಣಿ|| ಅಧಿದೈವನಲ್ತೆ ಧನಹಾರಿಗಳ್ಗೆ ತಾಂ
  (War hero)ಮೃಧವೀರನಪ್ಪ ವರಕಾರ್ತಿಕೇಯನುಂ|
  ವಧೆಗೈಯಲೇಂ ರಿಪುವ? ಚೌರ್ಯಗೈಯುತುಂ
  ವಿಧವೇಗದಿಂ ನಭಕೆ ಪಾರೆ ಬರ್ಹಿಣಂ(Peacock)??

  • Hahhaa.. ಅದು peahen ಆಗಿದ್ದರೆ ನಾವು ಚಿತ್ರದಲ್ಲಿ ಬಣ್ಣಬಣ್ಣದ ಗರಿಯ ನವಿಲನ್ನು ಕಾಣುತ್ತೇವಲ್ಲ, ಷಣ್ಮುಖನು ಜೊತೆ. ಅದು ತಪ್ಪಾ?

 13. ಭವೇದಪಿ ಕಿಮಾಶ್ಚರ್ಯಂ
  ತವ ವರ್ಣಸ್ಯ ಪೂಜಕ:!
  ಮೇಘಶ್ಯಾಮೋಪ್ಯದಿ ಭ್ರಾಜ-
  ನೀಲಬರ್ಹಸಮಾಶ್ರಿತ:!

  (ನವಿಲೇ,ನಿನ್ನ ಬಣ್ಣದ ಪೂಜಕರಿರುವದರಲ್ಲಾದರೂ ಆಶ್ಚರ್ಯವೇನು!ಶ್ರೀಕೃಷ್ಣನೇ ನಹೊಳೆವನೀಲ ಗರಿಯನ್ನು ಹೊಂದಿರುವಾಗ!!)

  • ತುಂಬ ಚೆನ್ನಾಗಿದೆ ಮೇಡಮ್! ಶ್ಯಾಮೋಪ್ಯದಿಭ್ರಾಜ ಎಂಬಲ್ಲಿ ಸಂಧಿ ತಪ್ಪಾಗಿದೆ. ಶ್ಯಾಮೋಪಿ ಯದಿ ಎಂದಲ್ಲವೇ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)