Aug 072017
 

  13 Responses to “ಪದ್ಯಸಪ್ತಾಹ ೨೬೭: ಚಿತ್ರಕ್ಕೆ ಪದ್ಯ”

  1. Every moment every celestial body seems eclipsed by another celestial body when viewed from a certain point in space.
    ಅವಸರವೇಕೈ ಸೋಮನೆ?
    ಕವರಲ್ ಸೋಮಂಗೆ ಗ್ರಹಣಮಿನ್ನುಮಿಹುದು ಕೇಳ್|
    ತವೆ ಕಾಲಂ ದಿನಮರ್ಧಂ! (Since posting, viz. 11.21 am)
    ಬುವಿಯೊಳಗಲ್ಲದೆ (Rocket)ಭುಶುಂಡಿಯೊಳಗೀಗಿಹೆಯೇಂ??

  2. ಪ್ರೇಮಿಗಳೆಲ್ಲರ್, ಚಿಣ್ಣರ್
    ಸೋಮನಿಗಂ ನೋಂತು ದೃಷ್ಟಿಯಾಗಲ್ ತಾಯೇ(ತಾಯಿಯೇ)/
    ಪ್ರೇಮದೆ ದಿಟ್ಟಿಯ ಬೊಟ್ಟೆ
    ನ್ದಾ ಮಸಿಯಂ ಮೊಗಕೆ ಪರ್ಚಿದಳೆ ನೇವರಿಸಲ್//

    ಪ್ರೇಮಿಗಳು,ಮಕ್ಕಳು ಎಲ್ಲರೂ ಆಸೆಯಿಂದ ಮಗನನ್ನು ನೋಡಿ ದೃಷ್ಟಿಯಾಯ್ತೆಂದು ಚಂದ್ರನ ತಾಯಿ(ಪ್ರಕೃತಿ) ಮಸಿಯನ್ನು ದೃಷ್ಟಿಬೊಟ್ಟಾಗಿಡುವಾಗ ಮುಖವನ್ನು ನೇವರಿಸಲು ಅದು ಮುಖಕ್ಕೆಲ್ಲಾ ಆಯಿತು.

  3. (ಇಂದಿನ ಚಂದ್ರಗ್ರಹಣದ ಹೊತ್ತಿನಲ್ಲಿಯೇ ಬರೆದ ಕೆಲವು ಪದ್ಯಗಳು)
    ನೀಲಿಮಮಾಗಿರಲ್ ನಭಮದೋ ಮಸಿಯೆಂಬವೊಲೀ ನಿಶೀಥದೊಳ್
    ತೇಲುತೆ ಗಾಳಿಯೊಳ್ ಭರದೆ ಸಾಗುತೆ ಪತ್ತಿಯೆನಿಪ್ಪ ಪಾಂಗಿನಿಂ
    ಬೀಳೆ ಸುಧಾಕರಂ ಮಸಿಯಡರ್ದವೊಲಾದುದು ರಾಜಬಿಂಬಮೀ
    ಕಾಲತೆವೆತ್ತುದೈ! ಗ್ರಹಣಕಾಲಮೆ ಸುಂದರಮಾದುದಲ್ಲಮೇ! ||೧||
    ಅಂದಾ ಮೋಹಿನಿರೂಪಿಂ
    ದಂ ದಾಮೋದರನದೆಂತೊ ತಡೆದಪನೆನುತುಂ
    ಚಂದದೆ ಸುಧೆಯಂ ಕುಡಿಯ-
    ಲ್ಕಿಂದೇಂ ಬಂದಪನೊ ಕೇತು ಸೊದೆಗಯ್ಯೆಡೆಗಂ||೨||
    ಅಲ್ತಲ್ತು ಕೇತುವೀತಂ
    ಸೋಲ್ತೀ ದ್ವಿಜರಾಜನಿಂತು ನಿನ್ನಯ ಮೊಗಕಂ
    ಕಾಲ್ತೆಗೆದು ಮೊಗಮನಿಂತುಟು
    ಮೇಲ್ ತವಕದೆ ಮರೆಯ ಮಾಡುತಿರ್ಪಂ ಚೆಲುವೇ||೩||
    ರಾಜದ್ರಾಜತಬಿಂಬಬಂಧನಲಸತ್ಕಾರ್ಯಕ್ಕೆ ಬಂದಿರ್ಪನೇಂ
    ತೇಜಸ್ಸೊಂದಿದನಲ್ತು ನೋಡೆ ತಮಮೇ ಮೆಯ್ವೆತ್ತ ಬಲ್ ರಕ್ಕಸಂ
    ಸಾಜಂ ಸಲ್ವುದು ದೌಷ್ಟ್ಯದುನ್ನತಿಯುಮಂತೇಗಳ್ ಚಿರಂ ಸಲ್ಲದೆಂ
    ದೋಜಸ್ಸಿಂ ಮರಳುತ್ತುಮಿರ್ಪನಿದೊ ತಾಂ ಸತ್ತ್ವಾತ್ಮಕಂ ಚಂದ್ರಮಂ ||೪||
    ಅಲೀಕಮದು ನೋಳ್ಪೊಡಂ ಶಶಿಯೊಳಿರ್ಪುದೈ ಕರ್ಪೆನಲ್
    ಕಲಂಕಮನೆ ಪೊಂದುತುಂ ನವೆಯುತಿರ್ಪುದುಂ ನಿತ್ಯಮುಂ
    ಸಲಲ್ ಗ್ರಹಣಕಾಲದೊಳ್ ದನುಜಕೇತುಸಂಸರ್ಗಮೇ
    ನಿಲಲ್ ಕರಿಕದಲ್ಲಮೇ ಖಲರ ಸಂಗದಿಂ ದುರ್ಯಶಂ ||೫||
    ಉಡುದಾರ! ಪಾವೆ ನಿನ್ನಂ
    ಬಿಡದೇಂ ನುಂಗುತ್ತಮಿರ್ಪುದೋ! ಗತಿ ನಿನಗೇಂ!
    ಉಡುದಾರಮೆ ಪಾವೆನಿಪನ
    ಬಿಡದೇ ಪರಿಹಾಸ್ಯಗೈದುದಕ್ಕಿದು ಫಲಮೇ? ||೬||
    ತಿಳಿಯುತ್ತುಂ ಬರುತಿರ್ಪನೀ ಅಹಿಯೆನಲ್ ಪೀಯೂಷಮಂ ಕಾಪಿಡಲ್
    ಬಳೆಸಿರ್ಪೈ ಬುವಿಯೊಳ್ ನೆಗಳ್ದು ಲತೆಯಂ ಕಾಯ್ವಣ್ಗಳಂ ಚಂದ್ರನೇ!
    ಪೊಳೆಯುತ್ತಿರ್ದೊಡಮೀ ಲಿಲೇಹು ದಿಟದಿಂ ನಿನ್ನಂ ಕರಂ ನೆಕ್ಕಿರಲ್
    ತಿಳಿದಂ ನಿಷ್ಫಲಮೆಂದು ನಿನ್ನದದಟೇ ವಂದ್ಯಂ! ಸುಧಾಂಶೂ ಸದಾ! ||೭||
    ಶಾತಕುಂಭವರಕಾಂತಿಯಾಂತವಂ
    ಜಾತರೂಪನೆನೆ ಸೂರ್ಯನಂತಿರ
    ಲ್ಕೋತು ಬಿಂಬಿಸುತುಮಾತನಂ ಶಶೀ
    ನೂತನಂ ರಜತವರ್ಷ್ಮನಾದೆಯೈ ||
    ಕೇತುವಿಂದು ಮಿಗೆ ನುಂಗಿಪಾಯ್ಕಿರಲ್
    ಭೀತನಾದೆಯೆನಿಪಂದದಿಂದಿದೇಂ
    ಶ್ವೇತವರ್ಣಮರುಣತ್ವಮಪ್ಪಿತೇಂ
    ವೀತರಾಗರಿಗಿದೆಂತು ಸಲ್ವುದೈ||೯||
    ಹರನಿರ್ದೊಡೆ ತಾಂ ಧ್ಯಾನದೊ
    ಳುರಗಂ ಪರಿಯುತ್ತೆ ಕಂಠದಿಂ ಮುಡಿಯೆಡೆಗಂ
    ಪೆರೆಯಂ ನೆಕ್ಕಲ್ಕಾದ-
    ತ್ತರುಣಿಮಮಾ ಬಿಂಬಮದುವೆ ಗ್ರಹಣಮೆನಿಕ್ಕುಂ ||೧೦||

  4. ಶಿವನ ಜಟೆಮುಡಿಯಿಂದುವದನವ
    ಕವಿಯುತಲಿ ಮರೆಮಾಚುತಿರಲೀ
    ಭುವನಜನರುಪವಾಸಗೈಯುತಲಿರುವರೇಕಿಂತು?
    ಪವನ ಸುಳಿದೊಡೆ ಮುಡಿಯು ಸರಿವುದು
    ಹವನ ಹೋಮಗಳೆಲ್ಲವೇತಕೆ?
    ನವನವೀನವೆ ಚಂದಿರನಿಗೀ ಕಣ್ಣುಮುಚ್ಚಾಲೆ?

    ಶಿವನ ತಲೆಯ ಮೇಲಿರುವ ಚಂದ್ರನಿಗೆ ತಲೆಗೂದಲು ಅಡ್ಡವಾದದ್ದೇ ಚಂದ್ರಗ್ರಹಣ,ಗಾಳಿ ಬೀಸಿದಾಗ ಅದು ತಾನಾಗಿಯೇ ಸರಿಯಾಗುತ್ತದೆ.ತಿಂಗಳಿಗೊಮ್ಮೆ ಕಣ್ಣಮುಚ್ಚಾಲೆಯಾಡುವ ಚಂದ್ರನಿಗೆ ಇದು ಸಹಜ- ಎನ್ನುವ ಕಲ್ಪನೆ. (ಪದ್ಯದ ಸಾಲುಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ)

    • ಪದ್ಯದ ಸಾಲುಗಳಿಂದಲ್ಲ, ಕಲ್ಪನೆಯಿಂದ ಬೇಜಾರಾಯಿತು. ಏಕೆಂದರೆ ಈ ಕಲ್ಪನೆ ಮೊದಲೇ ಹೊಳೆದಿತ್ತಾದರೂ ಆಲಸ್ಯದಿಂದಾಗಿ ಪದ್ಯ ಬರೆದಿರಲಿಲ್ಲ. ಚೆನ್ನಾಗಿದೆ 🙂

  5. ಇಂದೀಪೂರ್ಣಮೆಯ ದಿನಂ
    ಕಂದಿದುದಿಂದು ವದನಾರವಿಂದಂ, ಗ್ರಹಣಂ-
    ಚಂದಂ, ಛಂದೋಬದ್ಧದೆ
    “ಕಂದ”ದ ಚಲನಂಗಳೊಳ್ ಜರುಗುವೊಲ್ “ಜ”ಗಣಂ !!

    ಚಿತ್ರದಲ್ಲಿ – “ಗ್ರಹಣ”ದಿಂದ ಕಂದಿದರೂ ಚಂದ ಕಂಡ “ಇಂದು”ವದನಾರವಿಂದ – ಛಂದೋಬದ್ಧ ಚಲನೆಯಲ್ಲಿ “ಜ”ಗಣ (ಎರಡು ಲಗುಗಳ ನಡುವೆ ಗುರುಬರುವ ಸ್ಥಿತಿ) ಬಂದು “ಕಂದ”ದ ಅಂದ ಹೆಚ್ಚುವಂತೆ !!

    • ಜಗಣವು ಕಂದದ ಚೆಂದ ಹೆಚ್ಚಿಸುವಂತೆ ಗ್ರಹಣವೂ ಚಂದ್ರನಿಗೆ ಮೆರುಗನ್ನೇ ತರುತ್ತದೆನ್ನುವ ಕಲ್ಪನೆ ಇಷ್ಟವಾಯ್ತು 🙂

  6. ಅಂಜಬೇಡೆಲೊ ರಾಹುವಕ್ಷಸುಖಾಸನಾ ಸೊಬಗುಳ್ಳೊಡಾ
    ಕಂಜನೇತ್ರನ ಸೇವೆಯೆಂದುಪಭೋಗಿಸಪ್ಪುದು ಸಂಭ್ರಮಂ
    ರಂಜಿಸಾತವುತ್ತಮಾಂಗವನೇಳು ತಾಪಸನಂತೆ ನೀಂ
    ನಂಜನುಂಡಗೆ ನಿನ್ನನುದ್ಧರಿಪೊಂದು ಕಷ್ಟವೆ ಭಾವಿಸಲ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)