Aug 282017
 

  15 Responses to “ಪದ್ಯಸಪ್ತಾಹ ೨೭೦: ಚಿತ್ರಕ್ಕೆ ಪದ್ಯ”

  1. ಆವನ ವಕ್ತ್ರಮಂ ಧರಿಸುತುಂ ಜಗದೆ ಪ್ರಣವಾಸ್ಯನಾದೆಯೋ
    ಆವನ ಪೆರ್ಮೊಗಂಬಡೆದು ತಿನ್ನುತುಮಾದೆಯೊ ಭಾಂಡಕುಕ್ಷಿ ನೀ
    ನಾವನ ಹಸ್ತದಿಂ ಮುರಿಯುತಿರ್ದೆಯೊ ರಾಕ್ಷಸಶೃಂಖಲಾಳಿಯಂ
    ದೇವನೆ! ಮತ್ತಿದೇನವನ ದಂತಮನಾಂತೆಯೊ ನೀರನುಂ ಪುಗಲ್//

    ಯಾರ(elephant) ಮುಖದಿಂದಾಗಿ ಪ್ರಣವಾಕೃತಿಯ ಮುಖವನ್ನು ಹೊಂದಿದವನೆಂದು ಪ್ರಸಿದ್ಧಿ ಪಡೆದೆಯೋ, ಯಾರ ದೊಡ್ಡ ಬಾಯಿಯಿಂದಾಗಿ ಹಂಡೆಯಂತಿರುವ ಹೊಟ್ಟೆಯುಳ್ಳವನಾದೆಯೋ, ಯಾರ ಹಸ್ತದಿಂದ(ಸೊಂಡಿಲು) ರಾಕ್ಷಸರೆಂಬ ಸಂಕೋಲೆಗಳ ಸಾಲನ್ನೇ ಮುರಿದೆಯೋ ದೇವಾ! ನೀರನ್ನು ಹೊಕ್ಕುವಾಗಲೂ ಅವನ ದಂತದ ಸಹಾಯವೇ ಬೇಕಾಯಿತೇ?

  2. ಧರಿಸುತೆ ಪೀತಮಂ ಶಯನಿಸುತ್ತಲೆ ದುರ್ಗೆಯ ಪುತ್ರನಂತೆವೋಲ್
    ಮರೆಸುತೆ ರೂಪಮಂ ಹರಿಯೆ ಬಂದಿರೆ ಚೌತಿಯ ಭಕ್ಷ್ಯವುಣ್ಣಲೆಂ
    ಮರೆತಿರೆ ಪಿಂಛಮಂ ಕರೆದು ತಂದಿರೆ ಸರ್ಪ ಜನೇಂದ್ರನನ್ನೆ ಮೇಣ್
    ಪುರಜನರೆಲ್ಲರುಂ ನಗುತಲಾತನನಾತನ ಬೀಡಿಗಟ್ಟಿದರ್

    ಚಿತ್ರವನ್ನು ನೋಡಿದ ತಕ್ಷಣ ವಿಷ್ಣುವಿನ ದೇಹಕ್ಕೆ ಗಜಮುಖವನ್ನು ಅಳವಡಿಸಿದ್ದಾರೆ ಎನ್ನಿಸಿತು.ಪೀತವಸ್ತ್ರ, ತಲೆಯಮೇಲಿರುವ(ಕೃಷ್ಣನನ್ನು ನೆನಪಿಸುವ) ನವಿಲುಗರಿ ,
    ಗಣಪತಿ ಮಲಗಿರುವ ದಂತವೂ ಆದಿಶೇಷನಂತೆಯೇ ಕಂಡಿತು.ಮಲಗಿರುವ ಭಂಗಿಯೂ,ಹಿಂದಿರುವ ಕಡಲೂ ವಿಷ್ಣುವನ್ನೇ ನೆನಪಿಸಿತು..
    ಹರಿಯೇ ಗಣಪತಿಯ ರೂಪ ಧರಿಸಿ ಬರಲು, ಜನರು (ಪೂಜಿಸಿ) ಅವನನ್ನು ಮತ್ತೆ ಅವನದೇ ಮನೆಯಾದ ಕಡಲಿಗೆ ಕಳುಹಿಸಿದರು ಎನ್ನುವ ಪ್ರಯತ್ನ..
    (ಅನಂತ ಅನ್ನುವ ಹೆಸರಿಗೂ,ಭಗವನ್ನಿಂದೆಗೂ ಅವಿನಾಭಾವ ಸಂಬಂಧವಿದೆಯೆನ್ನಿಸುತ್ತದೆ 😉
    ಯಾರಿಗಾದರೂ ಅನೌಚಿತ್ಯವೆನಿಸಿದ್ದಲ್ಲಿ ಮನ್ನಿಸಿ)

    Thanks manja for corrections_/_

  3. ಅವರೆಲ್ಲ ವೀರಪ್ಪನ್ನನ ಚೌರಗಣ.
    ಗಣಪನುರುಳಿಪಂತೊಲ್ ನೀರಿಗಾಸ್ಥಾನದಿಂದಂ
    ತಿಣುಕುತಿರುವರೆಲ್ಲರ್ ನೋಡೆ ವೀರಪ್ಪಮಿತ್ರರ್|
    ಗಣಿಕೆಯವರದೆಂತೋ ಒಯ್ವುದುಂ ದಂತಮಂ ಕೇಳ್
    ಧಣಿಯನೊಲಿಸಿ ಪಾಲಂ ಕೊಂಡುಪೋಗಲ್ ಗಡಯ್ಯೋ!!

    • ಹಹ್ಹ. ಚೆನ್ನಾಗಿದೆ. ಅಲ್ಲಿರುವವರಲ್ಲಿ ಯಾರಾದರೂ ಒಬ್ಬರು ನಿಮ್ಮ ಪದ್ಯವನ್ನು ನೋಡಿ ಮಾನನಷ್ಟಮೊಕದ್ದಮೆಯನ್ನು ಹೂಡದಿದ್ದರೆ ಅಷ್ಟೇ ಸಾಕು.
      ದಂತಮನೊಯ್ಯೆ ಆಗಬೇಕು.

      • ಧನ್ಯವಾದ. ಸವರಿದ್ದೇನೆ. ಹೌದು, ಅವರು ಮಾನನಷ್ಟಮೊಕದ್ದಮೆಯನ್ನು ಹೂಡದಿದ್ದರೆ ಒಳಿತು. ಏಕೆಂದರೆ, ಪದ್ಯವನ್ನು ಮೆಚ್ಚಿದವರೂ ಡಿಫೆಂಡೆಂಟ್ ಆಗುತ್ತಾರೆ 😉

  4. ನರರ್ಕಳ ಪಗೆಯಂ ಕಾಣ
    ಲ್ಕರಿವಂ ಮೂಡಿಪೆನೆನುತ್ತೆ ಪರ್ವದೊಳಿಂತೀ /
    ಪರಿಯಿಂ ಚಂದ್ರನೊಡಂ ನೀಂ
    ಚರಿಸುತ್ತುಮ್ ಸ್ನೇಹವಾರ್ಧಿಯೈದೆಯೊ? ಗಣಪಾ!

    ಒಂದುಕಾಲದಲ್ಲಿ ಚಂದ್ರನೂ ಅವನ ಹಗೆಯಾಗಿದ್ದವನಲ್ಲವೇ?

  5. ಅಂದು ನಕ್ಕಿದ್ದ ಚಂದ್ರನು ಪ್ರಾಯಶ್ಚಿತ್ತರೂಪವಾಗಿ ಇಂದು ಗಣಪನಿಗೆ ತಲ್ಪ-ಛದಪ್ರಾಯನಾಗಿದ್ದಾನೆ.
    “ಮಂದಾನ್ನಾಶಯಮನುಮೇಕದಂತನೊಳ್ ಕಾಣ್” (ಮಂದ ಅನ್ನಾಶಯ = ಡೊಳ್ಳುಹೊಟ್ಟೆ)
    ಅಂದಿಂತಾ ಕುಹಕವ ಗೈದುಮಿಂದುರೂಪಂ|
    ಇಂದೀಗಳ್ ತಪಿಸುತುಮಿಂತು ನೇರ್ಪಿನಿಂದಂ
    ನಿಂದಂ ತಾಂ ಛದ-ಶಯನೀಯದೊಲ್ ಗಣಂಗಂ||

  6. ಬರಿದೆ ಬಾಗಿದ ಬಿಳಿಯ ಪೀಠವು
    ಮುರಿದ ದಂತದೆ ಮೇನೆಯೇನದು
    ಹೊರಟುದೇನಿದು ಗಣಪ “ಚಂದ”ದ ನಾವೆಯೇರುತೆ ತಾಂ !
    ಬಿರಿದುದುದರಕೆ ಬಿಗಿದ ಬೆಳ್ಳನೆ-
    ಯುರಗ ಸರಿದದೊ ಮೊರೆವ ಕಡಲಿಗೆ
    ಕುರುಹು ಕಂಡಿದುದದರ ಬಾಲದ ತುದಿಯವೋಲೆನಗೈ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)