Sep 182017
 

ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪರಿಹರಿಸಿರಿ “ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್”

  55 Responses to “ಪದ್ಯಸಪ್ತಾಹ ೨೭೩: ಸಮಸ್ಯಾಪೂರಣ”

  1. ಅರಿಸಮಾಸಗುರುಪ್ರಭಸೋಮರೇ
    ಅರಿಯನಿಂತು ಸಮಸ್ಯೆಯ ಸಾಲಿನೊಳ್
    ತರುವುದಂ ನೆರೆ ನೋಡಿ ಬೆರಂಗಿನಿಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್ 🙂

  2. ಹರಮನೋಹರಣಕ್ಕೆ ಮನಂಗುಡು-
    ತ್ತುರುತಪೋವ್ರತಸಂಹೃತಸೌಖ್ಯೆಯಂ
    ಗಿರಿಜೆಯಂ ನೆರೆ ನೋಡುತೆ ದುಃಖದಿಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್

    (ಆಕೆ ತಮ್ಮವಳೇ ಆದ್ದರಿಂದ)

  3. ಶರಣುಪೋಗುತುಮಗ್ನಿಯ ಕೋಪಕಂ
    ಜರೆಯೊಳೀತನುವಾಲುವ ರೀತಿಯಿಂ
    ಪರಿಯುತುಂ ದ್ರವರೂಪದೊಳೀಗಳೀ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್

    ಮುದುಕರು ಸುಕ್ಕುಗಟ್ಟಿದ,ಬೆಂದ ಚರ್ಮದೊಂದಿಗೆ ವಾಲುತ್ತ ನಡೆದಂತೆ ಅಗ್ನಿಪರ್ವತಗಳು ದ್ರವರೂಪದಲ್ಲಿ ಚಲಿಸುತ್ತಿವೆ ಎನ್ನುವ ಪ್ರಯತ್ನ..ಹಿಂದಿನಂತೆಯೇ ಆ,ಈ ಜಾಸ್ತಿಯಾಗಿದೆ..ಇನ್ನೊಂದು ಪ್ರಯತ್ನ ಮಾಡುತ್ತೇನೆ

    • Nice one!

    • ಕಲ್ಪನೆ ಚೆನ್ನಾಗಿದೆ

    • ನೀಂ ಸುರಕ್ಷಿತಮಾಗಿ ಸುಡುವಗ್ನಿಜಲದಿಂದೆ
      ಕೋಸುದೂರಕಮೋಸರಿಸಿ ನಿಲ್ಲುತುಂ|
      ಲೇಸಹುದು ನೋಡಲದ ಹತ್ತಿರದಿನೆನ್ನುತ್ತೆ
      ಘಾಸಿಗೀಡಾಗಿಪೆಯ ಎಮ್ಮನಯ್ಯ!!

      • ಹತ್ತಿರಕೆ ಪೋಗಿರೆಂದೆಲ್ಲಿ ಪೇಳಿರ್ಪೆನಾಂ?
        ಹೊತ್ತಿಯುರಿಯುತಲಿರ್ಪ ಬೆಂಕಿಯಂ ನೀವ್
        ಮುತ್ತದಿರಿ ಮಾರುತಿಯ ಕಥೆ ನಿಮಗೆ ತಿಳಿಯದೇಂ?
        ಹುತ್ತದೊಳು ಕೈಯಿಡುವ ಕೆಲಸ ಸರಿಯೇಂ?

  4. ಮೆರೆಯೆ ಶಕ್ತಿಯನಿಂತು ಸುಮೋವಿದರ್
    ಕುರುಕುತಿಂಡಿಗಳಿಲ್ಲದೆ ದೇಹಮಂ/
    ಪಿರಿಯಗಾತ್ರಕೆ ತಂದಿರೆ ಮಾಂಸದಾ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್//
    ಜಪಾನಿನ ಸುಮೋ ಕುಸ್ತಿಪಟುಗಳ ದೇಹ ಮಾಂಸದ ಪರ್ವತಳೇ ಚಲಿಸಿದಂತಿತ್ತು…

    • ಮತ್ತೆ ಹಬ್ಬದ ಸಾಲಲ್ಲವೇ :), ಚೆನ್ನಾಗಿದೆ

    • ‘ಸುಮೋ’ ಅನ್ನುವುದು ಕುಸ್ತಿಯಾಟದ ಹೆಸರಲ್ಲವೇ ? ಅದು ಆ ಆಟದ ಜಟ್ಟಿಗಳಿಗೆ ಹೇಗೆ ಅನ್ವಯಿಸುತ್ತದೆ ? ಕ್ರಿಕೆಟ್ ಆಟದ ಕ್ರೀಡಾಳುಗಳನ್ನು ‘ಕ್ರಿಕೆಟ್ ಗಳಾ’ ಅಂದರೆ ಹೇಗೆ ಸರಿಯಾಗುತ್ತದೆ ?

      • Thank you mam, corrected.

        • Japanese+ಕನ್ನಡ (ಸುಮೋ+ವಿದರ್) ಮಾಡಿದ್ರೆ ಅರಿಸಮಾಸವಾಗೋದಿಲ್ವೆ? 😉

          • ಅದಕ್ಕೆ ಸಂವಾದಿಯಾದ ಪದ ಕನ್ನಡದಲ್ಲಿ ಹಾಗೂ ಸಂಸ್ಕೃತದಲ್ಲಿ ಇಲ್ಲದ್ದರಿಂದ ಹಾಗೆ ಮಾಡಬೇಕಾಯ್ತು. ಅಂತಹ ಪದಗಳನ್ನು ಸಮಾಸಿಸಬಹುದೆಂದುಕೊಂಡೆ. ತಿಳಿದವರು ಒರೆಯಬೇಕು.

          • Hahhaa

  5. ಇರುವೆಯೊಂದು ಸುಮಿತ್ರನೊಡಂ ಪುಗಲ್
    ಭರದೆ ಸಾಗುತುಮಾನೆಯವಿಂಡಿನೊಳ್/
    ಬೆರಗಿನಿಂದಲೆ ಪೇಳಿರಲಕ್ಕುಮೇ ?
    “ಗಿರಿಗಳೇ ಚಲಿಸಿರ್ದಪುವೀಕ್ಷಿಸೈ!”//
    ಇರುವೆಯೊಂದು ಅದರ ಮಿತ್ರನೊಟ್ಟಿಗೆ ಆನೆಯ ಹಿಂಡಿನೊಳಗೆ ಹೋದಾಗ ಹೀಗೆ ಹೇಳಿರಲಿಕ್ಕೆ ಸಾಕು.

  6. ತಿರೆಯನಾವರಿಸಲ್ಕೆನೆ ದುರ್ದಿನ-
    ಕ್ಕರರೆ ಮಾರುತವಾರುಣಮೈತ್ರಿಯೇಂ?
    ಭರದೆ ಮೇಘಸಮುಚ್ಛಯಮಯ್ದಿರಲ್
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್

    ದುರ್ದಿನದಲ್ಲಿ ಮೇಘವೆಂಬ ನಗಗಳ ಆಟೋಪ

  7. ಹೊರುತೆ ಹಾರಿರಲಿಂತು ಬದುಂಕಿಸಲ್
    ಮರಣವಪ್ಪಿದ ಲಕ್ಷ್ಮಣಗಂದು ವಾ-
    ನರನು ಬೇರೊಡನೆತ್ತದೊ ಬೆಟ್ಟವಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್ ।।

    • ಐಡಿಯಾ ಚೆನ್ನಾಗಿದೆ. ಆದರೆ ಅದು ಗಿರಿ’ಗಳು’ ಹೇಗಾಗುತ್ತೆ?

    • ”ಬೇರೊಡನೆತ್ತದೊ” ಅಂದರೆ ಏನರ್ಥ ?

    • ಎಲ್ಲರಿಗೂ ಧನ್ಯವಾದಗಳು, ಸಂಜೀವನಿ ಬೇರಿನ ಜೊತೆ ಬೆಟ್ಟವನ್ನೂ ಎತ್ತಿ / ಹೊತ್ತು / ಹಾರಿದ ಹನುಮನ ಚಿತ್ರಣ

      “ಬೇರೊಡನೆತ್ತುತೆ ಬೆಟ್ಟಮಂ” ಎಂದರೆ ಸರಿಯಾದೀತೇ ?

  8. ಸ್ಥಿರಮದಾವುದುಮೀಭವದೊಳ್ ಗಡಾ
    ಮರಮೆ ಮಾನವನೈದಿಹ ಮಾಡೆ ಮೇಣ್
    ತಿರೆಯೆತಾಂ ತಿರುಗುತ್ತಿರೆ ಗತ್ತಿನೊಳ್
    ಗಿರಿಗಳೇ ಚಲಿಸಿರ್ದಪುವೀಕ್ಷಿಸಲ್ ।।

    ಸುತ್ತುತ್ತಿರುವ ಭೂಮಿಯಲ್ಲಿ ಯಾವುದು ತಾನೆ ಸ್ಥಾವರ ?!!

  9. ಹರನ ವಾಸದ ತಾಣಕೆ ಬಾಳ್ತೆಯೊಳ್
    ಮರಳಿ ಪೋಗುವ ಹಂಬಲಮಿದ್ದೊಡಂ
    ಮರುಗುತುಂ ಕೆಳೆಗೆಂದನು “ಕಣ್ಗಳೊಳ್
    ಗಿರಿಗಳೇ ಚಲಿಸಿರ್ದಪು ವೀಕ್ಷಿಸಯ್”

  10. M/s Namagiri, Varadavenkatagiri and Alagiri together go walking daily
    ಹೊರಟಿಹರ್ ಶತಸಂಕ್ರಮಕೆನ್ನುತುಂ (Walking)
    ’ಗಿರಿ’ಯಿನಿಂ ಕೊನೆಗೊಂಬ ಸುನಾಮಿಗಳ್|
    ‘ವರದವೆಂಕಟ(ಗಿರಿ)’-’ನಾಮ(ಗಿರಿ)’-ರಳಂ(ಅಳಗಿರಿ) ಗಡಾ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  11. ಒರಟಿನಾಟಗಳೇಂ(Football), ಮಿದುವಾಟಮೇಂ(Badminton)
    ಚುರುಕಿನಾಟವು(Tennis), ಕಲ್ಲ ಲಗೋರಿಗ-|
    ಳ್ಗುರುಳುಚೆಂಡವಿಭಾಜ್ಯಪುರಸ್ಕರಂ(equipment)
    (Ball)ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  12. ಮರಿಯುಮಪ್ಪಿಲಿ ಅಮ್ಮಿಲಿ ಪೆರ್ಮೆಯಿಂ
    ಹರಿಯುತಾಡುವುಮೆಮ್ಮಯ ಗೇಹದೊಳ್|
    ಭರಿಸಲಾಗದು ಕಾಡಿಪುವೇಗಳುಂ
    (Mouse)ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  13. ಪರಿಕಿಸೈ, ಚರದೊಳ್ ಬಗೆ ವಿಸ್ಮಯಂ!
    ಉರುಳಿ ವಂಡಿಯು ಮುಂಬರೆವಾಗಿನ-
    ಚ್ಚರಿಯ, ಪಕ್ಕದೆ ಹಿಂಬಡುತುಂ ಗಡಾ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್ ।।

    ವಾಹನ ಮುಂದೆ ಚಲಿಸಿದಂತೆ ಬದಿಯ ಮರ ಗುಡ್ಡಗಳು ಹಿಂದಕ್ಕೆ ಚಲಿಸಿದಂತೆ ಭಾಸವಾಗುವ ವಿಸ್ಮಯದ ಬಗ್ಗೆ !!

  14. ಮೆರುಗದೇನಹುದೈ ನಗಶೃಂಗದೊಳ್
    ಕರಗಿ ವೇಸಗೆಯೊಳ್ ಗಡಮಾ ಹಿಮಂ|
    ತೊರೆಯುಮಾಗುತೆ ಭೂಮಿಗಮೈದಿರಲ್
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  15. ಅರಳೆಯಂದದೆ ಸಾಗಿರೆ ಮೊಡಗಳ್
    ಸರಿಯುವಂತದೊ ಕಾಂಬುದು ಚಂದಿರಂ|
    ಪರಿಯಿನಂತೆಯೆ ಕಾಣದೊ ಭಾಸಿಕುಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  16. ಗಿರಿಃ=Gulp
    ಕರದೆ ಕೊಳ್ಳುತೆ ತುತ್ತನುಮೊಂದನುಂ
    ತ್ವರದೆ ಬಾಯೊಳು ಸೇರಿಸಿ ನುಂಗಿರಲ್|
    ಸರಿಯುಗನ್ನವು, ಅನ್ನದ ನಾಳಮಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  17. Landslides are common in Himalaya
    ಹಗುರಮಲ್ತೆ ಹಿಮಾಲಯಭೂಮಿ ತಾಂ
    ಧರೆಯು ತೆಂಕಣದೊಲ್ ದೃಢಮಲ್ಲಮೈ|
    ಸರಿದು (Mud)ಶಾದವು ಸೋರುವುದೇಗಳುಂ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  18. ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್
    ಪೊಗರದೇನದು! ನಂದಿಸು ನೀನೆನಲ್|
    ಸುರಪ ತನ್ನಯ ವಜ್ರದ ಶಸ್ತ್ರದಿಂ
    ತರಿದನಂದೆಯೆ ಪರ್ವತಪಕ್ಷಮಂ||

  19. ಬರದೆಲಿರ್ದನು ಹಮ್ಮದನುಂ ವಲಂ
    ಗಿರಿಸಮೀಪಕೆ ಕೊರ್ವನು ತೋರುತುಂ|
    ಮುರಿಯೆ ಗರ್ವಮನಾತಳೊಳಾಗಳಾ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||

  20. Late V. V. Giri
    ಅರಸನಾದ(ವ)ನು ಮೇಣ್ ಪರಿಚಾರಕಂ
    ಪರಕಮೆಂದಿಗೊ ಪೋಗಲೆವೇಳ್ಕುಮಯ್|
    ನರಕಕೋ ದಿವಕೋ ಗಡಮಾ ವಿ. ವೀ.
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್||
    (Manja had asked me to pen 10 verses. I have numerically achieved it. Pardon some naive compositions, like this last one)

    • ತೊರೆಯವೋಲಿರೆ ಕಲ್ಪನೆಗಳ್ ಗಡಾ
      ತರುಗಳಂತಿರೆ ಶಬ್ದಗಳೆಲ್ಲಮುಂ /
      ಮೆರೆಯುತಿಂತುಟು ರಂಪರ ಪದ್ಯದೀ
      ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್/

      ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿ, ಪದ್ಯಗಳನ್ನು ಬರೆದುದಕ್ಕೆ _/।\_

      • ಬದುಕಿದೆ, ನನ್ನ ಪದ್ಯಗಳನ್ನು ಗಿರಿಗೆ(ಬೆಟ್ಟ) ಹೋಲಿಸುವುದಾಗಿದೆ, ಪರ್ವತಕ್ಕಲ್ಲ! ಧನ್ಯವಾದಗಳು.

  21. ಶರಧಿಯೊಳ್ ತೊನೆದಾಡುತುಮಿರ್ಪುವೀ
    ತೆರೆಗಳೀಗ ತುರಂಗದ ವೇಗದಿಂ
    ದರರೆ! ಬೀಳುತುಮೆದ್ದಿರಲಾ ಮಹಾ
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್

  22. ಬರಿದೆ ಬಂಡೆಯದಲ್ಲದ ಬೆಟ್ಟದೊಳ್
    ಬಿರಿದು ಪುಟ್ಟಿರುವಾ ಗಿಡಗಂಟಿ ಚಾ-
    ಮರದವೋಲ್ ಗರಿ ಬೀಸುತೆ ತೂಗಿರಲ್
    ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್ !!

    ಬೆಟ್ಟದ ಮೇಲಿನ ಮರಗಿಡಗಳು ಗಾಳಿಗೆ ತೂಗಾಡಿದಾಗ, ಬೆಟ್ಟವೇ ಚಲಿಸಿದಂತೆ ಕಂಡ ಕಲ್ಪನೆಯ ಪದ್ಯ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)