Dec 182017
 

  91 Responses to “ಪದ್ಯಸಪ್ತಾಹ ೨೮೬: ಚಿತ್ರಕ್ಕೆ ಪದ್ಯ”

  1. ಅಲ್ಲೊಂದು ತಿಳಿಗೊಳವದರೊಳಂಗೆ ನಿಶ್ಚಲದೆ
    ತಲ್ಲಣವಗೊಳಿಸದೆಲೆ ನೀರ ನಿಲ್ಲೆ|
    ಉಲ್ಲಾಸದೊಳು ಹಂಸ, ಬೆಳಕಿನಿಂದಾಗಲ್ಲಿ
    ಸಲ್ಲುವುದು ನೀರೊಳಗಮದರ ಬಿಂಬಂ||
    ಉಫ್…..

    • ಪದಲಾಲಿತ್ಯ ಚೆನ್ನಾಗಿದೆ.

    • ಕೊನೆಗೇಕೆ ಉಫ್ ಎಂದು ಊದಿದ್ದು?!!

      • ಏನೂ ಕಲ್ಪನೆಯಿಲ್ಲ, ಸ್ವಭಾವೋಕ್ತಿ ಎನ್ನೋಕೂ ಲಾಯಕ್ಕಲ್ಲದ ಪದ್ಯ. ಓದುಗರು ಬಿಡುವ ನಿಟ್ಟುಸಿರನ್ನು ನಾನೇ ಇನಾಗುರೇಟ್ ಮಾಡಿದೆ ಉಫ್!!!

        • ಆದರೆ ನಿಮ್ಮುಳಿದೆಲ್ಲ ಪದ್ಯಗಳಿಗಿಂತ ಇದೇ ಚೆನ್ನಾಗಿದೆ 🙂

        • ಹಾಗೋ! ನಿಶ್ಚಲವಾದ ನೀರನ್ನು ತಲ್ಲಣಗೊಳಿಸೋದಕ್ಕೆ ಊದಿದಿರಿ ಅಂತಿದ್ದೆ!

      • “ಉಫೀ..ಟ್ ” ತೆಗೆದುಕೊಳ್ಳುವ ಹುನ್ನಾರು ಇರಬಹುದೆಂದು ತಿಳಿದಿದ್ದೆ !!

  2. ತಪ್ಪಾಯ್ತು ನೋಡಲ್ಲಿ ವರ್ಣಸಂಮಿಶ್ರವದು
    ಒಪ್ಪವಿವೆ ಕೇಸರಿಯು-ಬಿಳಿಬಣ್ಣವು|
    ಅಪ್ಪ! ಮೂರನೆಯದಿರಬೇಕಲ್ಲ ಪಚ್ಚೆಯದು
    ಕಪ್ಪಿಟ್ಟು ನೀಲಿಯಾಯ್ತೇಕೊ ಕಾಣೆಂ||

    • ಹಿಂದು ದೇಶದ ಹಂಸ
      ವೆಂದೇಕೆ ತಿಳಿದಿರೈ?
      ಬಂದುದೈ ಈ ಪಕ್ಷಿ ರಷ್ಯದಿಂದ
      ಒಂದಿರ್ಪುದೈ ಬ್ಯಾಲೆ
      ಸಂದು ಪ್ರಸಿದ್ಢಿಗಂ
      ಚೆಂದದಾ ’ಹಂಸಸರ’ವೆಂಬ ಪೆಸರೊಳ್

      Swan Lake, ಕೇಳಿರಬೇಕು. ರಷ್ಯಾದ ಬಾವುಟದಲ್ಲಿ ಕೆಂಪು, ನೀಲಿ, ಬಿಳುಪುಗಳಿವೆ ಈ ಚಿತ್ರದಲ್ಲಿರುವಂತೆಯೆ.

      • ನೀವು ಕಿವಿಯೊಳಕ್ಕೆ ಪದ್ಯ-ಗದ್ಯಗಳಲ್ಲಿ ಸುರಿಯುತ್ತಿದ್ದರೆ, ಕೇಳದಿರಲಾಗುತ್ತದೆಯೆ? ಕೇಳಿದೆ, ಕೇಳಿದ್ದೇನೆ. ತುಂಬ ಪುರುಸೊತ್ತಾಗಿದ್ದೀರಿ ಎಂದು ಕಾಣುತ್ತದೆ. ನಾನಾಗಿದ್ದರೆ ನಾಲ್ಕು ಪ್ರಾಸಗಳಲ್ಲಿ ಮುಗಿಸಿಕೊಳ್ಳುತ್ತಿದ್ದೆ. ಭಾಮಿನಿಯ ಬದಲು ಪಲ್ಲವವನ್ನು ರಚಿಸುವುದು ಇದೇ ಕಾರಣಕ್ಕಾಗಿ.

  3. ಪಕ್ಷಿಯಂದದೊಳೆನ್ನ ಕಲ್ಪನೆಯು ಗರಿಮುದುರಿ
    ನಿಕ್ಷೇಪದಿಂದಿಹುದೆ ಮನದಾಳದೊಳ್|
    ಚಕ್ಷುವಂ ನೆಟ್ಟೆಷ್ಟು ನೋಡಿದೊಡಮೊಂದಾದ-
    ರೂ ಕ್ಷೇಪಿಸುಪುದೊ ಕಾಣೆನು ಪದ್ಯವೈ||

    • 🙂 this is a good complementary for the beauty of this bird. ಪಕ್ಷಿಯಿಂದಕ್ಷಿಯಂ ಸರಿಸಲಾದೋಡೆ ಶಕ್ಯಮ್

      • ಸಾಧ್ಯಮೇಂ? ಆವುದೇ ಪಕ್ಷಿಯಿಂದಕ್ಷಿಯಂ ಸರಿಪುದುಂ, ಮೇಣೋಡುವುದುಂ?

  4. When it dips its beak into the water to catch fish, the fore half of the duck’s body (neck upwards) disappears into the water. Presently, its later half of the body, together with its reflection, appears like a fish! (See pic)
    ಮೀನೊಂದು ಸಿಕ್ಕಾಗ ಕತ್ತ ನೀಂ ಮುಳುಗಿಸಿರೆ
    ಮೀನೊಲಿರ್ಪುದುಮುಳಿದ ದೇಹ-ಬಿಂಬಂ|
    ಪೀನಮೀನವು ಬಂದು ತಿಂದಾತು ನಿನ್ನನ್ನು
    ಹೇನ ಹೆಕ್ಕುವುದೊಳಿತು ಭೂಭಾಗದೊಳ್||

  5. ಕೊಂಚೆಯ ದುಃಖಮನೆ ನೆನೆದು
    ಮಂಚೆಯೆ ನಲ್ಲನನಡಂಗಿಪುದು ಭಂಗಿಯಿದೇಂ?
    ಪೊಂಚುವರಿರ್ಪರ್ ಗ್ರಾಹರ್
    ಚಂಚುವಿಗಂಜದರನೆಂತು ನೀಗುವೆಯೋ! ಮೇಣ್?

    • ಚೆನ್ನಾಗಿದೆ. ಆದರೆ ಹಂಸವಾಗಲಿ ಕೊಳವಾಗಲಿ explicit ಆಗಿ ಬಂದಿಲ್ಲ.

      • ಅಂಚೆಯೆ ಅಂತ ಸಂಬೋಧನೆ ಇದ್ದಾಗ ಅದಕ್ಕಿಂತಲೂ explicit ಆಗಲಿಕ್ಕೆ ಸಾಧ್ಯವೆ? 😉

        • hmmm missed it. I think adding a dash at the end of first line will help us guess that there is a sandhi in the next line.

          • ಹೌದು ಜೀವೆಂ, ಹಾಗೆ ಮಾಡಿ. ಇಲ್ಲದಿದರೆ ರವೀಂದ್ರರ ಗಮನವೆಲ್ಲ ’ಮಂಚ’ದೆಡೆಗೇ ಇರುತ್ತದೆ!

          • ಇರಲಿ ಬಿಡಿ, ವಯೋಧರ್ಮ. ನಾವ್ಯಾಕೆ ಕರುಬೋಣ.

  6. ನಳನುಂ ವೈದರ್ಭಿಯಳುಂ
    ಕೆಳೆವಂದರ್ ನಿಮ್ಮ ದೂಸಱಿಂದಚೆಯೆ ಕಾಣ್
    ನಳನುಂ ವೈದರ್ಭಿಯಳಂ
    ಕಳೆದೊರ್ವನಲೆವನರಣ್ಯದೊಳ್ ನಿನ್ನಯವೋಲ್

    • aha! Chennagide. ವೈದರ್ಭಿಯಳುಂ -> sariyaaguttadeyE?

      • ಥ್ಯಾಂಕ್ಸ್! ಸರಿಯಾಗುತ್ತೆ; ನಾಮಪದ ವೈದರ್ಭಿಯಳ್ ಆದ್ದರಿಂದ.

    • ವೈದರ್ಭಿಯಳ್ ಎಂಬುದೆಂತು ಸಾಧುವಾಗುತ್ತದೆ? ದ್ರೌಪದಿಯಳ್, ಸೀತೆಯಳ್ ಇತ್ಯಾದಿ ಬಳಸುತ್ತೇವೆಯೇ? ಇಕಾರ ಎಕಾರ ಹಾಗೇ ಉಳಿಯುತ್ತವಲ್ಲ.

      • ಕನ್ನಡದವಲ್ಲದ ಪದಗಳಲ್ಲಿ ಹಾಗೆಯೇ ಮಾಡಬೇಕು. ಇದಕ್ಕೆ ವಿರುದ್ಧವಾದ ಪ್ರಯೋಗವಿದ್ದರೆ ದಯವಿಟ್ಟು ತೋರಿಸಿ.

        • ಇಲ್ಲವಲ್ಲ. ಆ ಥರ ಯಾವ ಪುಸ್ತಕದಲ್ಲೂ ವ್ಯಾಕರಣದಲ್ಲೂ ನೋಡಿಲ್ಲ. ಸೀತೆಯಳು ಬಂದಳು, ಕಾವೇರಿಯಳು ಹೋದಳು ಎಂದೆಲ್ಲ ಹೇಳುತ್ತೇವೆಯೇ?

          • ಯಾರೋ ನನ್ನಂಥ ಹಳಬರು ಹೇಳ್ತಾರಷ್ಟೆ 🙂 The mirror does not lie. ದರ್ಪಣವನ್ನೊಮ್ಮೆ ನೋಡಿ.

  7. ಅಂಚೆಯಿದೋ! ಕೊಳದೊಳ್ ತ-
    ನ್ನಂಚಿತಕಾಯವ ತದೇಕಚಿತ್ತದೆ ನೋಳ್ಪ-
    ನ್ನಂ ಚಕಿತಂಗೊಂಡುದೊ ಮೇಣ್
    ಸಂಚಿದೊ ಸೆಳೆಯಲ್ ವಿಮೂಢಮೀನ್ಗಳ ಕಾಣೆಂ||

    ಅಂಚಿತ = ಸುಂದರವಾದ

    • ಚೆನ್ನಾಗಿದೆ. ವಿಮೂಢಮೀನ್ಗಳ್ ಅರಿಸಮಾಸವಾಗುವುದಲ್ಲವೇ. ಮೀನ ಸಂಸ್ಕೃತವಾದರೂ ಮೀನ್ ಎಂಬುದು ಕನ್ನಡರೂಪವಾಗುವುದು.

      • ಚೆನ್ನಾಗಿದೆ ಹೊಳ್ಳರೆ
        ಕಾಯವ,ಮೀನ್ಗಳ, —–ಕಾಯವಂ,ಮೀನ್ಗಳಂ ಎಂದಾಗಬೇಕಲ್ಲವೇ?

        • ನನಗೆ ಗೊತ್ತಿದ್ದಂತೆ ವಿಭಕ್ತಿಪಲ್ಲಟಕ್ಕವಕಾಶವಿದೆ. From FAQ:

          “ಕನ್ನಡಕ್ಕೆ ವಿಭಕಿಪಲ್ಲಟವೆಂಬ ಅನುಕೂಲತೆಯಿದೆ. ಕೆಲಮಟ್ಟಿಗಿದು ಸಂಸ್ಕೃತಕ್ಕೂ ಇದೆ. ಆದರೆ ಎಲ್ಲ ಹದದೊಳಗಿರಬೇಕು, ರಿಯಾಯಿತಿಯು ಅತಿಯಾಗಬಾರದು. ಹಾಲಿಗೆ ಎಷ್ಟು ನೀರು ಹಾಕಬಹುದು? (ಗಮನಿಸಿರಿ; ಇಲ್ಲಿಯೇ ವಿಭಕ್ತಿಪಲ್ಲಟವಿದೆ!)”

      • ಹಮ್… ಅದೇ ಸಂಶಯವಿತ್ತು. ಆದರೆ ನೀವು ಬರುವ ವಿಶ್ವಾಸವಿತ್ತು 🙂

        ಅಂಚೆಯಿದೋ! ಕೊಳದೊಳ್ ತ-
        ನ್ನಂಚಿತಕಾಯವ ತದೇಕಚಿತ್ತದೆ ನೋಳ್ಪ-
        ನ್ನಂ ಚಕಿತಂಗೊಂಡುದೊ ಮೇಣ್
        ಸಂಚಿದೊ ಸೆಳೆಯಲ್ ವಿಮೂಢಮತ್ಸ್ಯವಿಹಾರಂ||

  8. ತಿಳಿನೀರ ನೆಲೆಯೊಳುಂ ಖಗನಾಗಿ ಸಾಕ್ಷಿಯುಂ
    ತಿಳಿಯಲೆನ್ನಿರುವ ತಾಂ ಪರಿತಪಿಸಿರಲ್ ಕಾಣ್
    ಮಿಳಿತಗೊಳ್ಳುತಲಾತ್ಮ ಪರಮಾತ್ಮ ರೂಪದೊಳ್
    ತಳೆದಿರ್ಪುದೀ ವಿಶಿಷ್ಟ ದ್ವೈತ ಭಾವಂ | |

    ಧ್ಯಾನ ನಿರತ ಜೀವಾತ್ಮದ ಕಲ್ಪನೆ !!

    • ವಿಶಿಷ್ಟಾದ್ವೈತ ಗೊತ್ತು. ವಿಶಿಷ್ಟ ದ್ವೈತ ನಿಮ್ಮದೇ?

      • ಹೌದು ನೀಲಕಂಠ, ಇನ್ನೂ “ಅದ್ವೈತ”ದ ಅನುಭವವಾಗಿಲ್ಲ !
        ಹಾಗಾಗಿ ಚಿತ್ತದಲ್ಲಿನ ಅಸ್ಪಷ್ಟತೆ ಚಿತ್ರದಲ್ಲೂ ಕಂಡು ಪದ್ಯದಲ್ಲಿ ತುಂಬಿದ ಈ “ವಿಶಿಷ್ಟ ದ್ವೈತ” ಭಾವ !!

  9. ಕವಿಯಾದೊಡನುಂ ನಿಜಕುಂ
    ಕವನಿಸಲಾರದ ಕಲಂಕಮನುಪೇಕ್ಷಿಸುತುಂ
    ಕವಿತೆಯನಪೇಕ್ಷಿಸುತೆ ತಾಂ
    ಕವಿತಾವನದೊಳರೆ ನಿಂದ ಪರಿಯೇಂ!ಪೊಗರೇಂ!!

    • ಗೋಷ್ಠಿಗೆ ಬಂದು ಪದ್ಯ ಹೇಳದೇ ಸುಮ್ಮನೆ ಚಹಾ ಕುಡಿದು ಹರಟೆ ಹೊಡೆದು ಬರುವ ಯಾರದೋ ಮೇಲೆ ಬರೆದಂತಿದೆ 🙂

    • ಕವಿಯಾದೊಡನುಂ -> ಕವಿಯಾದೊಡೆಯುಂ is better I think. ಹಂಸವಾಗಲಿ ಕೊಳವಾಗಲಿ ಬಂದಿಲ್ಲ.

  10. ಬಿಂಬಪ್ರತಿಬಿಂಬಂಗಳಿ-
    ನಂಬಿನ ಕುಮುದಮನೆ ಪೂಡಿ ಪೂವಿಲ್ಲನಿದೇ-
    ನಿಂಬಂಗುಡುವನದಾರ್ಗೆ ಮ-
    ನಂಬುಗೆ ಪ್ರೇಮಿಗಳೊಳಂಚೆಯಾಶಯದಿಂದಂ!

    ಹಂಸದ ಬಿಂಬ ಪ್ರತಿಬಿಂಬ ಸೇರಿ ಮೂಡಿದ ಬಿಲ್ಲಿನಾಕೃತಿಯಲ್ಲಿ ಬೆಳ್ದಾವರೆಯ ಬಾಣವನ್ನು ಹೂಡಿ ಮನ್ಮಥನು ಯಾವ ಪ್ರೇಮಿಗಳಲ್ಲಿ ಮನದುಂಬಲು ಯತ್ನಿಸುತ್ತಿದ್ದಾನೋ?!

    • ಆಹಾ! ಬಹಳ ಚೆನ್ನಾಗಿದೆ.

    • ಮೀನಂ ಕಂಡಂ ರಂಪಂ
      ಮೀನಧ್ವಜಚಾಪಮನ್ನೆ ಕಂಡೆಯ್! ಮಿತ್ರಾ,
      meaning ಇದು ಸುಸ್ಪಷ್ಟಂ
      ಏನೇನು ಬಯಕೆಯದನ್ನೆ ಕಾಂಬೆವು ಜಗದೊಳ್

      • 😀 ಸಹವಾಸದೋಷವೂ ಅಷ್ಟಿಷ್ಟು ಇರುತ್ತೆ

        • ಸಹವಾಸದೋಷವೆಂದರೆ, ’ಏನನ್ನು ಕಲಿಯಬಾರದೆಂ’ಬುದನ್ನು ತಿಳಿಯಲೆ?

    • Beautiful. ಚಿತ್ರವನ್ನು ಮತ್ತೆ ಮತ್ತೆ ನೋಡಿದಾಗ ನಿಮ್ಮ ಕಲ್ಪನೆಯ ಕೈಚಳಕ ತಿಳಿಯಿತು!

      • Thank you! ನಿಮ್ಮಂಥ ಘಟಾನುಘಟಿಗಳೆಲ್ಲ ಬರೆದಾದ ಮೇಲೂ ಬರೀಬೇಕಂದ್ರೆ ಏನಾರೆ ಹರಸಾಹಸ ಮಾಡಬೇಕಲ್ಲ 😀

    • Like

  11. ಶ್ರಮಮಿರದಂತೆ ಶಾರದೆಗೆ ವಾಹನಮಾಗಿ ವಿಧಾತೃವಾಣಿಯಂ
    ಕಮಲದ ಬಂಡನುಂಡತೆರದೀಂಟುತೆ ವೇಸರಿಸುತ್ತುಮೀಗ ತಾಂ
    ಪ್ರಮದಿಸಲೆನ್ನೆ ವಾಙ್ನಟಿಯ ನಾಟ್ಯಕೆ ನೋನೆ ವಿರಾಮಮಾಗೆ ವಿ
    ಭ್ರಮಿಸುತುಮಿರ್ಪನೈ ಕವಿಯ ಮಾನಸದೊಳ್ ಕವೀಶನೇ//

    • ಚೆನ್ನಾಗಿದೆ. ಆದರೆ ಸ್ವಲ್ಪ ಕ್ಲಿಷ್ಟವಾಗಿದೆ, ಅಸ್ಪಷ್ಟವಾಗಿದೆ. ವಿಧಾತೃವಾಣಿ. ಅನ್ವಯ ಸರಿವೋಗಲು, ಕಮಲದ ಬಂಡನುಂಡ ತೆರದೆ… ಮಾಡಬಹುದು. ಪ್ರಮದಂಗೊಳ್ ಆಗಬೇಕು. ಪ್ರಮದಿಸಲೆನ್ನೆ ಹೀಗೇನಾದರೂ ಮಾಡಬೇಕು. ವಾಙ್ನಟಿ.

      • ತಿದ್ದಿದ್ದೇನೆ, ಧನ್ಯವಾದಗಳು. ನನ್ನ ಸಾಫ್ಟ್ವೇರ್ನಲ್ಲಿ ವಾಙ್ನಟಿಯನ್ನು ಟೈಪಿಸಲು ಬರುತ್ತಿರಲಿಲ್ಲವಾಗಿ ನಿಮ್ಮ ವಾಙ್ನಟಿಯನ್ನೇ ಕಾಪಿ ಮಾಡಿದ್ದೇನೆ.

        • ವಾಙ್ನಟಿಯನ್ನೇ ಕಾಪಿ ಹೊಡೆದಿರೆ? ಹೀಗೆ ಮಾಡದಂತೆ ಗಣೇಶರನ್ನು ಒಮ್ಮೆ ತಡೆದಿದ್ದೆ. ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯಲ್ಲಿ ನಡೆದ ಅವಧಾನವೊಂದರಲ್ಲಿ ನಾನು ದತ್ತಪದಿಪೃಚ್ಛಕನಾಗಿದ್ದೆ. Jaw, rib, knee, shin ಎಂಬ ಅಸ್ಥಿವಾಚಕಶಬ್ದಗಳನ್ನಿತ್ತು ರಂಭಾವರ್ಣನೆಯನ್ನು ಮಾಡಬೇಕೆಂದು ಕೋರಿದ್ದೆ. ಅಂದು ನಾನು ಮಾಡಿದ ವಿಶೇಷನಿವೇದನೆ ಇಂತಿತ್ತು:
          “ನನ್ನ ಪದ್ಯವಸ್ತುವಿಗೆ ಆಕರ (source) ಶ್ರೀ ದೇವುಡುರವರ ಕಾದಂಬರಿ ಮಹಾಬ್ರಾಹ್ಮಣ. ಪೃಚ್ಛಕನು ಹೀಗೆ ತನ್ನ ಪದ್ಯವಸ್ತುವು ಯಾವ ಮೂಲದ್ದು ಎಂದು ಹೇಳಬೇಕಾದ ನಿಯಮವಂತೂ ಅವಧಾನಕ್ರೀಡೆಯಲ್ಲಿ ಇಲ್ಲ. ಈ ಹಿಂದೆ ಪೃಚ್ಛಕರು ಈ ರೀತಿ ಹೇಳಿರುವ ಸಂದರ್ಭಗಳು ತಿಳಿದುಬಂದಿಲ್ಲವಾಗಿ ಅಂಥ ಯಾವ ಪರಿಪಾಟಿಯೂ ಇಲ್ಲ. ಹೇಳದಿದ್ದರೇನೆ ಒಳ್ಳೆಯದು. ಏಕೆಂದರೆ, ಒಂದೊಮ್ಮೆ ಅವಧನಿಗಳೂ ಕಾಕತಾಳೀಯವಾಗಿ ಅದೇ ಮೂಲದಿಂದ ತಮ್ಮ ಪದ್ಯವನ್ನು ಹೊಸೆದರೆ, ಅದು ಪೃಚ್ಛಕನಿಗೆ ಪುರಸ್ಕಾರಪ್ರಾಯವಾದದ್ದು: ಅವರ ಪದ್ಯವು ಪದಪ್ರೌಢಿಯಿಂದಿರುತ್ತದೆ, ಅಲಂಕಾರಭೂಯಿಷ್ಠವಾಗಿರುತ್ತದೆ, ದರ್ಶನಗರ್ಭಿತವಾಗಿರುತ್ತದೆ, ಕಲ್ಪನೆಯಂತೂ ಮನೋಜ್ಞವೂ (ತದ್ವಿಷಯಕವಾಗಿ ತಾವೇ ತಮ್ಮ ಶತೋಪಾದಿ ಅವಧಾನಗಳಲ್ಲೂ ಇತರ ಸಂದರ್ಭಗಳಲ್ಲೂ ಒರೆದ/ಬರೆದ ಮುಕ್ತಗಳಿಗಿಂತ ಭಿನ್ನವಾಗಿ) ಅಪೂರ್ವವೂ ಆಗಿರುತ್ತವೆ. ಎರಡೂ ಏಕಮೂಲದ್ದೆಂಬುದೇ ಪೃಚ್ಛಕನಿಗೆ ಅಸೀಮ ಸಂತೋಷದಾಯಿಯಾದದ್ದು. ಆದಾಗ್ಯೂ ನಾನು ಹೀಗೆ ಗುಟ್ಟನ್ನು ಬಿಟ್ಟುಕೊಟ್ಟದ್ದು, ಅವಧಾನಿಗಳೂ ನನ್ನ ರಂಭೆಗೇ ಕೈಹಾಕದಿರಲಿ ಎಂಬ ಕಾರಣಕ್ಕಾಗಿ.”

    • ಎಲ್ಲ ಸರಿ, ಆದರೆ ಸರಸ್ವತಿ ಸವಾರಿ ಮಾಡದೆ ಹಂಸಕ್ಕೆ ವಿರಾಮ ಕೊಟ್ಟಾಗ ಕವಿಯ ವಾಗ್ವೈಖರಿಯಾದರೂ ಹೇಗಿರುತ್ತೆ? ಅನುಭವಿಸುತ್ತೆ ಹಂಸ, ಪಾಪ 😉

      • ಆಕೆ ಸ್ಥಿರವಾಗಿ ನಿಲ್ಲಬೇಕೆಂಬುದೇ ಆಶಯ 🙂

        • ಎಲ್ಲಿ ನಿಂತಳು ಅಂಬೋದೆ ಪ್ರಶ್ನೆ. ಬ್ರಹ್ಮನ ಪಕ್ಕದಲ್ಲೋ ಅಧವಾ – ಕವಿಯ ಅದೃಷ್ಟಕ್ಕೆ – ಇನ್ನೊಬ್ಬ ಕವಿಯ ನಾಲಗೆಯ ಮೇಲೋ ಸ್ಥಿರವಾಗಿ ನಿಂತುಬಿಟ್ಟರೆ?? ಓಡಾಡಿಕೊಂಡಿದ್ದರೆ ನಮ್ಮತ್ತ ಬರುವ ಸಾಧ್ಯತೆ ಕೊಂಚವಾದರೂ ಇರುತ್ತಲ್ಲ, ಅದೇ ವಾಸಿ ಅನ್ನಿಸುತ್ತೆ.

          • agree

          • ಏಕೆ, ನೀವೇ ಅವಳತ್ತ ಹೋಗಲಾಗದೆ? ’ಅವಳೇ ನನ್ನತ್ತ ಬರಲಿ’ ಎಂಬ ರಾವಣಪ್ರಜ್ಞೆಯೋ!

          • ಹೋಗಬಹುದೇನೋ, ಹಂಸದ ಮೇಲೆ ಕೂತುಕೊಂಡು. ಹೇಗಿದ್ದರೂ ಬಿಡುವಾಗಿದೆಯಲ್ಲ? 🙂

            ಆದರೆ ’ಅವಳೆ ನನ್ನತ್ತ್ತ ಬರಲಿ’ ಎನ್ನುವುದು ನಿಜವಾಗಿ ರಾವಣನ ಪ್ರಜ್ಞೆಯಾಗಿದ್ದಿದ್ದರೆ ಯಾವ ರಾಮಾಯಣವೂ ಇರುತ್ತಿರಲ್ಲಿಲ್ಲ.

          • ಸರಸ್ವತಿ ನಿಲ್ಲುವುದೂ ಲಕ್ಷ್ಮಿ ನಿಲ್ಲುವುದೂ ಒಂದೇ ಅಲ್ಲ. ಲಕ್ಷ್ಮಿ ನಿಂತರೊಳ್ಳಿತು, ಸರಸ್ವತಿ ನಡೆದರೊಳ್ಳಿತು. ಲಕ್ಷ್ಮಿ ನಡೆದರೆ ದಾರಿದ್ರ್ಯ, ಸರಸ್ವತಿ ನಿಂತರೆ ಮೂಕತ್ವ 🙂

          • ಅದನ್ನೇ ಮಂಜಯ್ಯನವರಿಗೆ ಸುತ್ತಿ ಬಳಸಿ ಹೇಳ್ತಿದ್ದೀನಿ ಆವಾಗಿನಿಂದ 🙂 ವಕ್ರೋಕ್ತಿ ಅಂತಾರಲ್ಲ, ಹಾಗೆ.

          • ನಮ್ಮದೇನಿದ್ದರೂ ನೇರ ದಿಟ್ಟ ನಿರಂತರ!

          • ಓಹ್!! ಹೌದಲ್ಲವೇ!! ಪದ್ಯವನ್ನೇ ತೆಗೆಯುವುದೊಳ್ಳಿತು. 🙂

          • ಬೇಡ ಬೇಡ, ತಮಾಷೆಗಂದದ್ದು 🙂

          • ನೀಲಕಂಠರೆ, ಲಕ್ಷ್ಮಿಯು ನಿಂತರೊಳ್ಳಿತು ಎಂದಿರಲ್ಲ, ಅವಳು ಪಕ್ಕದ ಮನೆಯಲ್ಲೇ ನಿಂತುಬಿಟ್ಟರೆ! ನಡೆದು ನಿಮ್ಮ ಮನೆಯನಕ ಬರುವುದು ಬೇಡವೆ? ಸರಸ್ವತಿಯು ನಡೆದರೆ ಒಳ್ಳಿತು ಎಂದಿರಲ್ಲ, ಆಕೆಯು ನಿಮ್ಮಲ್ಲಿ ನೆಲೆಯಾಗುವುದು ಬೇಡವೆ?

          • ಈ ಬಗ್ಗೆ ಕಿತ್ತಾಡಿಕೊಳ್ಳುವುದರಲ್ಲಿ ಮುಳುಗಿದ್ದೇವೆ, ಅಲ್ಲಿ ಮಂಜಯ್ಯನವರು ಪದ್ಯವನ್ನೇ ಕಾಣೆಯಾಗಿಸಿದ್ದಾರೆ, ಗಮನಿಸಿದಿರೇನು?

    • ಸಖತ್ ಕಲ್ಪನೆ/ ರಚನೆ. ವರ್ಗೀಯ ಅನುನಾಸಿಕಗಳಿಗೆ ತತ್ತದ್ವರ್ಗದ ವ್ಯಂಜನಗಳೇ ಸೇರುವುದು ನಿಯಮ. ಉದಾ: ಶಙ್ಕರ, ಇಞ್ಚರ, ಡಿಣ್ಡಿಮ, ಮನ್ಥನ, ಬಿಮ್ಬ ಇತ್ಯಾದಿ. ಅಪವಾದವಾಗಿ ’ವಾಙ್ನಟಿ’ಯಲ್ಲಿ ಬೇರೆ ವರ್ಗದ ಅಕ್ಷರ (ಅದೂ ಅನುನಾಸಿಕ) ಸೇರಿದೆ. ಇಂತೆಯೇ ವಾಙ್ಮಯ.

      • ಧನ್ಯವಾದಗಳು. ಆ ಪದದ ಮೂಲರೂಪ ಗೊತ್ತಿದ್ದೂ ಬಳಸದಿರಲು ಕಾರಣ ಸಾಫ್ಟ್ವೇರ್ ಸಮಸ್ಯೆಯೇ. ಙ ಅರ್ಧಾಕ್ಷರ ಮಾಡಿ ನ ಒತ್ತು ಕೊಡಲು ಬರುತ್ತದೆಯೋ ಇಲ್ಲವೋ ಎಂದೆಲ್ಲ ಎಷ್ಟೋ ಶೀರ್ಷಾಸನ ಹಾಕಿದರೂ ಸಾಧ್ಯವಾಗಲಿಲ್ಲ.ಪುಣ್ಯಕ್ಕೆ ನೀಲಕಂಠರ ಕಾಮೆಂಟಿನಲ್ಲಿ ready ಆಗಿಯೇ ಸಿಕ್ಕಳು.

      • ಇದಾವ ನಿಯಮ? ಬದಲಾಗಿ ವರ್ಗೀಯ ವ್ಯಂಜನಗಳು ಬಿಂದುಪೂರ್ವಕವಾಗಿ ಬಂದರೆ ಆಯಾ ವರ್ಗದ ಅನುನಾಸಿಕವು ಬರುವುದು ನಿಯಮ. ವಾಙ್ನಟಿ, ವಾಙ್ಮಯ, ಮೃಣ್ಮಯ ಇವೆಲ್ಲ ಅಪವಾದಗಳಲ್ಲ. ಸಂಧಿನಿಯಮದಂತೆ ಆಗುತ್ತವೆ.

  12. ತಿಳಿನೀಲ ಕೊಳದೊಳುಂ ತೇಲುತೊಡನೊಡನೆ ಕಂ-
    ಗೊಳಿಪುದೀ ಪರಿ ಹಂಸಬಿಂಬಂ ಭಲಾ
    ಬೆಳಕ ಪ್ರತಿಫಲನದ ನಿಯಮದೊಳ್ ಬೆಸೆದು ಮೈ-
    ದಳೆದುದೀ ಬಗೆ ಪುಷ್ಪಕಂಸಂ ಗಡಾ !!

    laws of reflection ಪ್ರಕಾರ ಹಂಸದ ಬಿಂಬ -ಪ್ರತಿಬಿಂಬದಲ್ಲಿ ಮೂಡಿರುವ flower bracket (~ಹೂವಿನ ಹೂಜಿ !) ಕಲ್ಪನೆ !!

    • ಬೆಳಕ ಪ್ರತಿಫಲನದ ಎಂಬಲ್ಲಿ ಗಣ ಸರಿಯಾಗಿ ಒಡೆಯುವುದಿಲ್ಲ. ಬೆಳಕಪ್ರ ತಿಫಲನದ ಎಂದಾಗುತ್ತದೆ, ಕಟುವಾಗಿ. ಬೆಳಕಿನ ಪ್ರತಿಫಲನನಿಯಮದೊಳ್ ಎಂದು ಸಲೀಸಾಗಿ ಮಾಡಬಹುದು.

      • ಧನ್ಯವಾದಗಳು ನೀಲಕಂಠ.
        ತಿದ್ದಿದ ಪದ್ಯ :

        ತಿಳಿನೀಲ ಕೊಳದೊಳುಂ ತೇಲುತೊಡನೊಡನೆ ಕಂ-
        ಗೊಳಿಪುದೀ ಪರಿ ಹಂಸಬಿಂಬಂ ಭಲಾ
        ಬೆಳಕಿನ ಪ್ರತಿಫಲನ ನಿಯಮದೊಳ್ ಬೆಸೆದು ಮೈ-
        ದಳೆದುದೀ ಬಗೆ ಪುಷ್ಪಕಂಸಂ ಗಡಾ !!

  13. ಪಾಂಡವ, ಭೂಮಿಮಂಡಲವಿಮಂಡಿತಪಾಂಡರಕೀರ್ತಿಮಂಡಲಾ!
    ಕಂಡೊಡೆ ಶ್ವೇತವಾಹನ ಕಿರೀಟಿಯೆ ನೀನೆನುವೆಂ ವಿಹಂಗಮಾ!
    ಭಂಡಕುಲಾಂತಕಾಲ-ವರನೀಲಕಲೇವರ-ಕೃಷ್ಣಭಿತ್ತಿಯೊಳ್
    ಮಂಡಿಪುದಲ್ತೆ ನಿನ್ನೆಸಕದಿರ್ಪಿನ ನೇರ್ಪು ಮನಂಗೊಳುತ್ತುಮೇ!

    ಎಲೆ ಪಾಂಡವ (ಬೆಳ್ಳಕ್ಕಿ), ಭೂಮಂಡಲದಲ್ಲಿ ಶೋಭಿಸುವ ಶುಭ್ರಕೀರ್ತಿಮಂಡಲನೇ! ನೀನು ಆ ಶ್ವೇತವಾಹನ ಕಿರೀಟಿ ಅರ್ಜುನನೇ ಎಂದುಕೊಳ್ಳುತ್ತೇನೆ. ಏಕೆಂದರೆ ನಿನ್ನ ಈ ಶೋಭಿಸುವ ರೂಪದ ಚಿತ್ರ ಆ ದುಷ್ಟಕುಲಾಂತಕ-ನೀಲಕಲೇವರ-ಕೃಷ್ಣಭಿತ್ತಿಯ ಮೇಲೆಯೇ ತೋರಿಬರುತ್ತಿದೆ.

    • ’ಶ್ವೇತವಾಹನ’ವನ್ನ ’ಬೆಳ್ಳಿದೇರನೆ’ ಅಂತ ಮಾಡಿಕೊಂಡರೆ ಶಿಥಿಲದ್ವಿತ್ವದ ಅನಿವಾರ್ಯತೆ ತಪ್ಪುತ್ತೆ, ’ಶ್ವೇತವೂ ವಾಹನವೂ ಆದ ನೀನು’ ಅಂತ ಸಂಬೋಧನೆ ನಿಮ್ಮ ಆಶಯವಾಗಿಲ್ಲದ ಪಕ್ಷದಲ್ಲಿ. 🙂

  14. ನೀಲಿಯಾ ವರ್ಣದಿಂ ಕಂಗೊಳಿಪ ವಾರಿಯೊಳ್
    ತೇಲುತಿದೆ ಹಂಸ ದೋಣಿಯಾ ತೆರದಿ
    ಪಾಲಿನಾ ವರ್ಣವಂ ನೀಡಿಹನೆ ಬೊಮ್ಮತಾಂ
    ಕಾಲಡಿಗೆ ಮತ್ತಧಿಕ ಚೆಲ್ವಬಿಂಬ !

    • Good. aakaaragaLu kadimeyaagabeku. 2nd line erred in gaNa formation. varNa has come in punarukti. adhika-chelva ari-samaasa. kaalaDige matteseva chelva bimba…

  15. ಚಂಚುವಿದಂಚೆಯಿದೋ? ಬಾಂ
    ಗಂಚಕೆ ಸಾರ್ದ ರವಿ ತನ್ನ ಕರಮಂ ನೀಳ್ದೊಂ
    ದಂಚಿಗೆ ಪೊನ್ ತಳೆದ ಮುಗಿಲೊ?
    ಕಿಂಚಿತ್ ಕೇಸರಿಯು ಬೆರೆತ ತನಿವಾಲೋ ಮೇಣ್?

    ಕಂಚ – ಗುರಿ, ಕೊನೆಯ ಹಂತ

    • ಚಂಗಕಾಲದ ಕವಿಗಳ ಉಪಮಾನಮಾದರಿ. ಚೆನ್ನಾಗಂತೂ ಇದೆ 😉

      • ಥ್ಯಾಂಕ್ಸು, ಸಾ. ಚಂಗಪಂಗಯೆಲ್ಲ ಗೊತ್ತಿಲ್ಲ ಆದ್ರೆ ಯಾವಾಗ್ಲು ಕಣ್ಣು ಬಿಟ್ಕೊಂಡೇ, ಸಾ, ಆಲು ಕುಡಿಯೋದು ನಾನು. ಬಣ್ಣಗಿಣ್ಣ ಎಲ್ಲ ನೋಡಿಟ್ಕೊಂಡಿರ್ತೀನಿ. ಯಾವಗ್ಲಾದ್ರು ಬೇಕಾಯ್ತದೆ ಅಂತ.

      • ಉಪಮಾನಮಾದರಿ ari.

  16. ಮಿರುಗುವ ನೀಲ ನೀರಲದೊ ಹಂಸದನಾವರಣಂ ಮನೋಹರಂ
    ಪರಿಸರದೊಳ್ ಪ್ರಭಾವಳಿಯ ಮೋಹಕ ಮಾಯೆಯದಿಂತು ಸಾಧು ವೀ –
    ತೆರದಿನ ಕಾರಣಂ ನೆರೆಯೆ ಸಂಭವಿಸಲ್ ಪ್ರತಿಬಿಂಬದೊಳ್ ಗಡಾ
    ಸರಿಸಮತೋಲನಂ ಜಲಧಿಯಂಚಿನೊಳಂಚೆಯ ಪಾಲ ನಿಚ್ಚಯಂ ||

    ಪ್ರಕೃತಿಯಲ್ಲಿ ಹಂಸಕ್ಷೀರ ನ್ಯಾಯದ ಅನಾವರಣ !!

    • ಸೊಗಸಾದ ಕಲ್ಪನೆ! ಈ ತೆರದೊಳೆ. ಆಶ್ಚರ್ಯ, ದುಃಖ ಇತ್ಯಾದಿ ಇಲ್ಲದಿರುವಲ್ಲಿ ಒಂದು ಲಗಂ ಬೇಕಾದರೆ ವಲಂ ಬಳಸಬಹುದು, ಗಡಾ ಇದರ ಬದಲು 🙂

      • ಧನ್ಯವಾದಗಳು ನೀಲಕಂಠ,
        (ಚಿತ್ರದಲ್ಲಿನ ಹಂಸ “ಬಿಳಿಯ ವಸ್ತ್ರ ಧರಿಸಿ ತಕ್ಕಡಿ ಹಿಡಿದು ನಿಂತ ನ್ಯಾಯದೇವತೆ ” ಯಂತೆ ಕಂಡು – “ಹಂಸ ಕ್ಷೀರ ನ್ಯಾಯಂ” ಅಂತ ಕಂದಪದ್ಯ ಶುರುವಾದದ್ದು, ಪ್ರಾಸ ಪದಗಳು ಒದಗದೆ ವೃತ್ತಕ್ಕೆ ತಿರುಗಿದ್ದು !! ) ತಿದ್ದಿದ ಪದ್ಯ :

        ಮಿರುಗುವ ನೀಲ ನೀರಲದೊ ಹಂಸದನಾವರಣಂ ಮನೋಹರಂ
        ಪರಿಸರದೊಳ್ ಪ್ರಭಾವಳಿಯ ಮೋಹಕ ಮಾಯೆಯದಿಂತು ಸಾಧು ವೀ –
        ತೆರದೊಳೆ ಕಾರಣಂ ನೆರೆಯೆ ಸಂಭವಿಸಲ್ ಪ್ರತಿಬಿಂಬದೊಳ್ ವಲಂ
        ಸರಿಸಮ ತೋಲನಂ ಜಲಧಿ ಯಂಚಿನೊಳಂಚೆಯ ಪಾಲ ನಿಚ್ಚಯಂ ||

  17. ಅರಿಯಲಾಗದು ನೇರ ನಿನ್ನನೀನೆಲೆ ಜೀವ
    ಪರಿಚಯವದೆಮಗೆಮ್ಮ ಬಿಂಬದಿಂದೈ |
    ಇರವ ತೋರಿರುವ ನೀರೊಳಗಿನೀ ಪ್ರತಿಬಿಂಬ
    ಪರಿಪಾಟ ಸಹಕಾರಿ ಜಲಚರಕದೋ ||

    ನಮಗೆ ನಮ್ಮ ಪರಿಚಯ ನಮ್ಮ ಪ್ರತಿಬಿಂಬ ನೋಡಿಯೇ ಅಲ್ಲವೇ ?!

  18. ಮೆರೆದೆಂ ಕೂಟದೊಳಾಡಿ ಚಂದಿರನವೊಲ್ ಸೊಕ್ಕಿಂದೆ ನಾನಾದಿನಂ
    ಮರೆತೆಂ ಕಾಲನ ಜಾಲಮಂ, ಸಿಲುಕುತುಂ ನಾನೀಗಳಾಜಾಲದೊಳ್
    ಸರದೊಳ್ ಸೇರುತುಮೀಗಳೀ ನರಕದೊಳ್ ಸಂದಿರ್ಪೆನೇಕಾಂತದೊಳ್
    ಹರಿಯೇ(ಹರನೇ)! ಭಾನುವೊಲಾದೆನೈ ಜಲದೊಳುಂ ಬೆಂದಿರ್ಪೆನೈ..ರಕ್ಷಿಸೈ

    ಕೂಟದೊಡಗೂಡಿ ತಾರೆಗಳೊಡನೆ ಚಂದ್ರನಂತಿದ್ದ ಹಂಸವು ಕಾಲಕ್ರಮೇಣ ತನ್ನವರನ್ನೆಲ್ಲ ಕಳೆದುಕೊಂಡು ಏಕಾಂಗಿಯಾಗಿ ಸೂರ್ಯನಂತಾಯ್ತು ಅನ್ನುವ ಪ್ರಯತ್

    • ಹರನೊಳ್ ಎಂದು ನಿಶ್ಚಯದಿಂದ ಬರೆದಿದ್ದರೆ ಪದ್ಯ ತುಂಬ ತುಂಬ ಚೆನ್ನಾಗಿದೆ ಎನ್ನುತ್ತಿದ್ದೆ! ಇರಲಿ… ಜಾಲ ಪುನರುಕ್ತಿಯಾಗಿದೆ. ಕಾಲನ ಹೂಟಮಂ ಎಂದೇನಾದರೂ ಬಳಸಬಹುದು. ಭಾನುವೇ ಆದರೆ ಹೆಮ್ಮೆ ಪಡುವ ಸಂಗತಿಯಲ್ಲವೇ! ಹರಿಹರರಲ್ಲಿ ಗೋಳಿಡಬೇಕೇಕೆ?

      • ಧನ್ಯವಾದಗಳು _/\_. ಹೂಟಕ್ಕಾಗಿ ಅನುಪ್ರಾಸವನ್ನು ಬಲಿಕೊಡಬೇಕಾಯ್ತು(ಕಾಲ-ಜಾಲ) :-(..
        ಸೂರ್ಯನು ಒಂಟಿಯೂ(ಚಂದ್ರನಂತಲ್ಲ),ಸದಾ ಒಂಟಿತನದ ದುಃಖದಿಂದ ಬೇಯುತ್ತಿರುವವನೂ ಅಂತ ಹಂಸ ಅನ್ಕೊಂಡಿದ್ದು..ನಾನಲ್ಲ:-)
        ತಿದ್ದಿದ ಪದ್ಯ

        ಮೆರೆದೆಂ ಕೂಟದೊಳಾಡಿ ಚಂದಿರನವೊಲ್ ಸೊಕ್ಕಿಂದೆ ನಾನಾದಿನಂ
        ಮರೆತೆಂ ಕಾಲನ ಹೂಟಮಂ, ಸಿಲುಕುತುಂ ನಾನೀಗಳಾಜಾಲದೊಳ್
        ಸರದೊಳ್ ಸೇರುತುಮೀಗಳೀ ನರಕದೊಳ್ ಸಂದಿರ್ಪೆನೇಕಾಂತದೊಳ್
        ಹರನೇ! ಭಾನುವೊಲಾದೆನೈ ಜಲದೊಳುಂ ಬೆಂದಿರ್ಪೆನೈ..ರಕ್ಷಿಸೈ

  19. ಸಾರುತೆ ಕತ್ತನೆತ್ತರಿಸಿ ತಾನ್ ಮರೆಮಾಚುತೆ ಹಂಸೆ ಚಿಂತೆಯಂ
    ಪಾರುತೆ ಸೋಲ್ತು ತನ್ನಿನಿಯನಂ ನಡುಗತ್ತಲೊಳೊಂಟಿ ತೋರ್ಪ ಗಂ-
    ಭೀರತೆಯಿಂದಿರಲ್ ಪೊರಗೆ, ದೈವವ ಬೇಡುತಲಂತರಾಳದೊಳ್
    ಪೀರಿತಲಾ ಕೊಳಂ ದುಗುಡಮೆನ್ನುವವೋಲದೊ ನೀಲಮಾದುದಯ್||

    Water turned blue after sucking the pain of this swan.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)