ಹೊಸಹೊಸದಾದ ಹಾವಭಾವಗಳ ನೃತ್ಯರಮಣೀಯವಾದ ಚಿತ್ರಗಳ ವಿವರಗಳನ್ನು ಹೊಂದಿದ ತನುವನ್ನು ಹೊತ್ತು ಮನೋಹರವಾಗಿ ಕಾಣುವ ನವಿಲೇ! ಕಲಾಲೋಲತೆಯ ಎನ್ನ ಚಿತ್ತವೇ! ಈ ವಿವರದೊಳಗೆ (ರಂಧ್ರ) ಇಣುಕಿ ಯಾವ ಅನನ್ಯವಾದ ಲೋಕದತ್ತ ನೋಡುತ್ತಿರುವೆ?!
ಕಾಮನಬಿಲ್ಲಿನ ಛಾಪನು ಮೂಡಿಸಿ
ಕಾಮಿತ ಚಿತ್ರಕೆ ರಂಗನು ಪಸರಿಸಿ
ಸೋಮನ ಬಿಂಬದ ತಿಂಗಳ ಬೆಳಕಿನ ಹೋಲಿಕೆ ಸಾರುವನೇ ?
ತಾ ಮೆರೆಯಲಿ ರಾಷ್ಟ್ರದ ಲಾಂಛನವೆಂ-
-ದಾ ಮುಕುಟಕೆ ಕೇಸರಿಬಣ್ಣವನೆರ-
-ಚೀ ಮಣ್ಣಿನೊಲವ ಸಾರಲು ರಂಗೋಲಿಗೆ ಪುಟಕೊಡುತಿಹನೇ ?
ಸಹಜ ಬಣ್ಣಗಳಿಂದಲೇ ನವಿಲಿನ ದೇಹದ ಹೆಚ್ಚಿನ ಭಾಗವನ್ನು ಚಿತ್ರಿಸಿದ ಕಲಾವಿದ(ದೆ) ತಲೆಯಲ್ಲಿ , ಕೊಕ್ಕಿನಲ್ಲಿ ನವಿಲಿಗೆ ಅಸಹಜವಾದ ಕೇಸರಿ ಬಣ್ಣವನ್ನು ಯಾಕೆ ಹಾಕಿದ ?ರಾಷ್ಟ್ರೀಯ ಪಕ್ಷಿ ಲಾಂಛನಕ್ಕೆ ಮುಕುಟದಲ್ಲಿ ಕೇಸರಿ ಬಣ್ಣಬಳಿದು ದೇಶವೂ, ದೇಶಪ್ರೇಮವು ಹುಣ್ಣಿಮೆಯ ಚಂದ್ರನಂತೆ ಬೆಳಗುತ್ತಿರಲಿ ಎಂದು ಪುಟ ಕೊಡುತ್ತಿರುವನೇ (finishingtouch) ?
ಜಗತೀವಿಲಾಸದುರುವೀಕ್ಷಣಾರ್ಥದಿಂ
ಜಗದೇಕಚಕ್ಷು ರವಿಯಾಸೆವಟ್ಟನೇಂ
ಸೊಗದಿಂಗೊಳಲ್ಕೆನೆ ಸಹಸ್ರಚಕ್ಷುವಂ
ಬಗೆಯಲ್ ಕಲಾವಿದನ ಚಿತ್ರವಾಂತನೇಂ
ಜಗದೇಕಷಕ್ಷು ರವಿಯು ಸಹಸ್ರಾಕ್ಷತ್ವವನ್ನು (ನವಿಲು – ಸಹಸ್ರಾಕ್ಷ) ಪಡೆದು ಜಗತ್ತನ್ನು ಹೆಚ್ಚಾಗಿ ವೀಕ್ಷಿಸಲು, ಕಲಾವಿದನ ಚಿತ್ರದ ಮರೆಹೊಕ್ಕನೇ?!
ಮೊರೆವೋಗಲೆಲ್ಲಿ ಬರೆದಂ ಕಲಾವಿದಂ
ಪರಡಿರ್ಪ ನೇತ್ರಶತಮಿರ್ಪ ಬರ್ಹಮಂ?
😀 ತೆರೆದಿಲ್ಲವಿನ್ನು ಶತನೇತ್ರಮಂಡಲಂ
ತ್ವರೆಗೈಯದೇ ಸಖರೆ ಸ್ವಲ್ಪ ಕಾಯಿರಯ್
ಬರ್ಹ-brush. ಬರ್ಹಿ-peacock. Right?
ಬರ್ಹ ನವಿಲಿನ ‘ಬಾಲ’.
ನೀಲಕಂಠರ ಪದ್ಯದಿಂದ ಸ್ಫೂರ್ತಿ ಪಡೆದು ಬರೆದದ್ದು:
ಮರೆ ಸಾರ್ದು ಮೇಘಗಳ ರಾಶಿಯತ್ತಣಿಂ
ಪರಡಿರ್ಪ ಸೋಗೆಗಳನೆಯ್ದು ಮೋದದಿಂ
ತಿರೆಗೀವನಲ್ತೆ ಬೆಳಕಂ ದಿನೇಶ್ವರಂ
ಪರಿಬಕ್ಕಮೆಂದುಮೆರವಾಗರೈ ಬುಧರ್
ಬಿಳಿಯೊಂದರಿಂದೊಡೆದ ವರ್ಣರೋಹಿತಮೊ ಕಂ-
ಗಳ ಕಲಾಲಾಸ್ಯದಿಂ ತಳೆದ ನವಿಲೋ
ಭಳಿರೇ ಕಲಾವಿದನ ರಂಗವಲ್ಲಿಯನಾಂತ
ಕಳೆಯೇಂ ನೆಗಳ್ದುದೊ ವೆರಲ್ತುದಿಯೊಳಂ
ಕಲ್ಲಂ ಪುಡಿಗೈದು ವೆರ-
ಲ್ಜಲ್ಲಿಯಿನಾರಚಿಪ ರಂಗವಲ್ಲಿಯ ಬಲ್ಪೇಂ!
ಕಲ್ಲಿನ ಮನಮಂ ಕರಗಿಸಿ
ಭುಲ್ಲವಿಪುರುಶಕ್ತಿ ಸಲ್ವುದೀ ಕಲೆಗಲ್ತೇಂ!
ಕಲ್ಲನ್ನು ಪುಡಿಮಾಡಿ ಬೆರಳ ಜಾಳಿಗೆಯಲ್ಲಿ ಸುರಿದು ರಚಿಸುವ ರಂಗವಲ್ಲಿಯ ಬಲುಹೇನೋ! ಕಲ್ಲಿನಂಥ ಮನಸನ್ನು ಕರಗಿಸಿ ಅರಳಿಸುವ ಶಕ್ತಿ ಕಲೆಗೆ ಸಲ್ಲುತ್ತದೆಯಲ್ಲವೇ!
ಬೆನ್ನ ಮೇಗಡೆ ಮೊಟ್ಟೆಯಂಬೊತ್ತು ಪೋಪೆಯೇಂ
ತಿನ್ನಬರುವರ್ಕಳಿಂ ತಪ್ಪಿಸಲ್ಕೆ
ನಿನ್ನ ಭಯದಿಂ ಬಾರನೇಂ ರಾಹು ಉರಗವದು
ಬನ್ನಮಂ ನೀಡಲೆನೆ ಭಾನುವಿಂಗೆ?!
ಬೆನ್ನ ಮೇಲೆ ಮೊಟ್ಟೆ ಹೊತ್ತುಕೊಂಡು ಹೋಗತಿದೀಯಾ, ಅದನ್ನು ತಿನ್ನಬರುವರಿಂದ ತಪ್ಪಿಸಲು? ನಿನ್ನ ಭಯದಿಂದ ಸರ್ಪ (ನವಿಲಿಗೆ ಹೆದರಿ) ಆ ಭಾನುವಿಗೆ ತ್ರಾಸಕೊಡಲು ಬರುವುದಿಲ್ಲವೇನೋ!
ಸಪ್ತಚ್ಛವಿಮದ್ವರ್ಣಾ-
ಲಿಪ್ತಮಯೂರಂ ಮರಳ್ಚಿ ಸವಿಗುಂ ತನ್ನೀ
ದೃಪ್ತಕಲಾಮಯವಪುವಿಂ-
ಗಾಪ್ತದ ಮೂಲಮೆನೆ ಶುಭ್ರವರ್ಣದ ಸೊಬಗಂ
ಏಳು ಬಣ್ಣಗಳಿಂದ ಕೂಡಿದ ಮಯೂರ ತನ್ನ ಹಿಂದೆ ತಿರುಗಿ ತನ್ನ ಹೆಮ್ಮೆಯ ಶರೀರದ ವರ್ಣಮಯತೆಗೆ ಮೂಲವಾದ ಶುಭ್ರವರ್ಣದ ಸೊಬಗನ್ನು ಸವಿಯುತ್ತಿದೆ.
ತಿಳಿಯದಾಗಿದೆ ಚಿತ್ರವಿದುಮೇತರದುಮೆಂದು
ಬಳಿದ ಬಣ್ಣದ ಲೆಖ್ಖದೊಳಗೆ ನವಿಲೊ|
ಉಳಿದ ಜಾಗದೊಳಿರ್ಪ navelಓ ತಾನೆಂದು(-)
ಮುಳಿದಿರ್ಪೆನೇನೊಂದ ಕವನಿಸದೆ ನಾಂ||
ತಿಳಿಯಲೇನಿದೆ ನಿಮಗೆ ಪದ್ಯಬರೆವಲ್ಲಿ ಆ-
ಕಳಿಸೆ ಛಂಗನೆ ಬರುವುವಲ್ತೆ ಕವನಂಗಳ್
ಚಳಿಯ ಬಿಡಿಸುವ ಕಲ್ಪನಾಸರಣಿ ಸರಸರನೆ
ಹೊಳೆಸುವುವು ನಿಮ್ಮ ತಲೆಯಲ್ಲಿ ರಂಪ 🙂
ನಿಮ್ಮಾಣೆ ಸುಳ್ಳಲ್ಲ ಈ ಬಾರಿಯೇತಕೋ
ಚಿಮ್ಮದಿಹುದೆನ್ನೊಳಗೆ ಕಲ್ಪನೆಗಳು|
ನೆಮ್ಮದಿರ್ದೊಡೆ ನನ್ನ ಮಾತನ್ನು ನೋಡುಗೈ
ಒಮ್ಮೆ ಸೀಳುತೆ ತಲೆಯ ತಂದು ರಂಪ||
😀
😀
ನವನವಹಾವಭಾವಮೆಸೆಯಲ್ ವಿಲಸದ್ರಮಣೀಯ ಚಿತ್ರದಿಂ
ವಿವರವನೊಂದಿದೀ ತನುವನಾಂತು ನಿತಾಂತಮನೋಹರಾಸ್ಪದಂ
ನವಿಲೆ ಕಲಾವಿಲೋಲತೆಯವೊತ್ತ ವಿಚಿತ್ರಮೆ ಚಿತ್ತಮೇ ಇದೇಂ
ವಿವರದೊಳೆತ್ತಣಂ ನಿರುಕಿಸಿಪ್ಪೆಯನನ್ಯಮೆನಿಪ್ಪ ಲೋಕದೊಳ್
ಹೊಸಹೊಸದಾದ ಹಾವಭಾವಗಳ ನೃತ್ಯರಮಣೀಯವಾದ ಚಿತ್ರಗಳ ವಿವರಗಳನ್ನು ಹೊಂದಿದ ತನುವನ್ನು ಹೊತ್ತು ಮನೋಹರವಾಗಿ ಕಾಣುವ ನವಿಲೇ! ಕಲಾಲೋಲತೆಯ ಎನ್ನ ಚಿತ್ತವೇ! ಈ ವಿವರದೊಳಗೆ (ರಂಧ್ರ) ಇಣುಕಿ ಯಾವ ಅನನ್ಯವಾದ ಲೋಕದತ್ತ ನೋಡುತ್ತಿರುವೆ?!
ಎಲ್ಲಾ ಪದ್ಯಗಳು ಬಹಳ ಚೆನ್ನಾಗಿದೆ ನೀಲಕಂಠರಿಗೆ ನೀಲಕಂಠ ಎಂದರೆ ಅಚ್ಚುಮೆಚ್ಚಲ್ಲವೇ! 🙂
Thank you, somare! 🙂
ಈನಡುವೆ ಸೋಮ ಪದ್ಯರಚನೆಯಲ್ಲಿ ತುಸು ಹಿಂದಿದ್ದಾರೆ. ಹಾಗಂತ ನೀವು ಅವರನ್ನು ’ಸೋಮಾರಿ’ ಎನ್ನಬಹುದೆ?
ಬಾಣಲೆ ತಪ್ಪಲೆ ಮಸೀ ಅಂತಂತೆ 🙂
😀
’ಬಾಣಲೆ’ಗೂ ಪ್ರತ್ಯಯವಿಲ್ಲ, ’ತಪ್ಪಲೆ’ಗೂ ಪ್ರತ್ಯಯವಿಲ್ಲ. ನೀವು ಕವಿಯಲ್ಲ, ರಾಜಕಾರಣಿ.
ಪುಢಾರೀ ಅಸ್ಮಿ ವಾ ನಾಸ್ಮಿ ಕವಿರ್ನಾಹಂ ನ ಸಂಶಯಃ ಪ್ರತ್ಯಯಗಳಿಲ್ಲದ ಕಡೆಗಳಲ್ಲಿ ಆತ್ಮವೇ ಪ್ರತ್ಯಯ 😉
ಕ’ವಿ’ಯ ನಾಲ್ಕನೆಯ ಸ್ಥಾನದಿಂದ ಮೊದಲನೆಯ ಸ್ಥಾನಕ್ಕೆ ಬಂದು ಮೂರು ವರ್ಷಗಳಾಗುತ್ತ ಬಂದವು, ನಿಮಗೇ ಗೊತ್ತು.
ಇಂದ್ರಚಾಪದ ತೆರದಿ ಮೇಲ ನೀಲಾಗಸದಿ
ಸಾಂದ್ರಗೊಂಡುದೆ ಬಗೆಯ ನವಿಲ ಪಸರು !
ಕೇಂದ್ರಬಿಂದುವೆ ನಲಿದು ಗೋಲಗೊಳ್ಳುತಲೆಸೆದು
ಚಂದ್ರಕಳೆಗಟ್ಟಿದುದೆ ಭುವಿಯ ಪಸಿರು !!
ಚೆನ್ನಾಗಿದೆ ಮೇಡಮ್. ನೀಲಾಗಸ ಅರಿಸಮಾಸ. ಭುವಿ ಬುವಿಯಾಗಬೇಕು 🙂
ಧನ್ಯವಾದಗಳು ನೀಲಕಂಠ ,
ತಿದ್ದಿದ ಪದ್ಯ :
ಇಂದ್ರಚಾಪದ ತೆರದಿ ಮೇಲ ನೀಲಾಂಬರದೆ
ಸಾಂದ್ರಗೊಂಡುದೆ ಬಗೆಯ ನವಿಲ ಪಸರು !
ಕೇಂದ್ರಬಿಂದುವೆ ನಲಿದು ಗೋಲಗೊಳ್ಳುತಲೆಸೆದು
ಚಂದ್ರಕಳೆಗಟ್ಟಿದುದೆ ಬುವಿಯ ಪಸಿರು !!
ಚೆನ್ನಾಗಿದೆ
ಧನ್ಯವಾದಗಳು ಸೋಮ
ನೂರಾರು ವರ್ಣಗಳ್ ಸಂಕರವ ಹೊಂದಿರಲು
ಭಾರಿಕರಿಮುಗಿಲಿನಿಂ ಮಳೆತರಿಪುದು ಮಯೂರಿ
ಸಾರಿಪೇಳ್ದಂದದೋಲ್ ತೋರಿಹುದು ರಂಗೋಲಿ
ಜೋರುಮಳೆಯಿಂದದರ ಮೈವೊದ್ದೆಯಾಗುವುದು
ಚೆನ್ನಾಗಿದೆ 🙂
ವರ್ಣಂಗಳ್ – ಬಣ್ಣಗಳು
ಪೇಳ್ವಂದದವೊಲ್ – ಪೇಳ್ವಂದದಿಂ
ಚೆನ್ನಾಗಿದೆ
ಮುದದಿಂ ಬೀಗದೆ ಬರ್ಹಿಯು !
ಸೊದೆಯಂ ಬೀರ್ದು ಜಗಮಂ ಬೆಳಗಿಪಾ ವಿಧುವುಂ
ಮದಮಂ ತೋರದೆ, ಕಾದಿರೆ
ಬದಿಯೊಳ್, ಕಾತರದೆ ಚೆಲ್ಕುಣಿತಕೆ ಸೋಲ್ತುಂ !!
enartha? 4th line erred in gana’s.
ಚಂದ್ರನು ನವಿಲ ನರ್ತನಕ್ಕೆ ಸೋತು ಹಿಂದೆ ಸರಿದನೆಂದಲ್ಲವೆ ಅರ್ಥ?
ಚೆನ್ನಾಗಿದೆ
ಮಳೆಯ ಮೋಡಗಳೊಂದಿ ಬಾನಂಗಳದೊಳಾಡೆ
ಕೆಳೆಯ ಭರದಲ್ಲಿ ಕುಣಿದಿರಲು ಹಕ್ಕಿ
ಬಳುವಳಿಯನಿತ್ತಿಹನು ರಂಗವಲ್ಲಿಯ ಬಗೆಯ
ಲಿಳೆಗಿಂದ್ರಚಾಪವನೆ ಪರ್ಜನ್ಯನು
ಸೊಗಸಾಗಿದೆ
ಚೆನ್ನಾಗಿದೆ
ಕರದೆ ಮೂಡಿದೆ ನವಿಲು!ಬಣ್ಣಬಣ್ಣದ ಹೊನಲು!
ಬಿರಿದ ಚಂದ್ರನ ಬಿಳಿಯ ಕಾಂತಿಯೆದುರು!
ಪೊರೆದು ರಾಗವನೆಂದು , ಚಿತ್ರಕಾರನ ಮನವು
ನಿರುತ ಕುಣಿಯುವ ಪರಿಯನೆಮಗೆ ತೆರೆದು!!
ಚೆನ್ನಾಗಿದೆ!
ಚೆನ್ನಾಗಿದೆ
ಬಿಡಿಸಿದ ರಂಗೋಲೆಯಲ್ಲಿ ನವಿಲು ತಿರುಗಿಕೊಂಡಿರುವುದೇಕೆ ಎನ್ನುವುದಕ್ಕೆ ಕೆಲ ಪದ್ಯಗಳು
ಚಂದsದs ಮೊಗಮಿತ್ತೆs ಕುಂದsದೆ? ತೀಡಲ್ಕೆ
ಎಂದಿsತೆs ಸೋಗೆs ಮುನಿಸಿಂದೆ ಕಲೆಗಾರ
ವಂದಿsಪೆs ತಿದ್ದೆs ಬರಬೇಡs
ಎನ್ನ ನೀ ಬಿಡಿಸಿsದೆs ಮನ್ನಿsಸುs ಪಟದಿಂದೆ
ಚೆನ್ನsನೆs ತೂರಿs ಬನಕೆಂದೆ ರಂಧ್ರsದೆ
ಮುನ್ನsಮೆ ಪಾರಿs ನಾ ಪೋಪೆ
ತನ್ನsಯ ರೂಪsಕೆ ತನ್ನs ಮನಮೆs ಸೋಲ್ತು
ಚಿನ್ನsದ ಕೈಯs ಕಲೆಯೆಂದು ನೋಳ್ಪುsದು
ಇನ್ನೇನೊರೆವನೊ ಕಲೆಗಾರ?
ಚೊಕ್ಕವs ಮಾಳ್ಪುದೆ ಕೊಕ್ಕಿಂದೆ ಗರಿಯsನೆ
ಮಿಕ್ಕಿsದ ಪುಡಿಯ ರಂಗೋಲೆ ಚೆಲ್ಲಿsರೆ
ನಕ್ಕsನುs ಒರೆವsನದನೋಡಿ
ಉರಗsನ ಗ್ರಹಣsದೆ ಸೊರಗಿsದ ವಿಧುವೆಂದು
ಮರಗುsತೆ ನವಿಲs ಬಳಿಯಿತ್ತ ರಕ್ಷೆsಗೆ
ಭರದಿಂದೆ ಸೋಗೆs ಕಾವುsದೆ
ಚೆಂದದ ತಿವದಿಯ ಕುಂದಿಲ್ಲದಿತ್ತಿರಿ ಸಂದೇಹ ಸೋಮಣ್ಣ ಬೇಡೈ
ಸಂದಿದೆ ಮೆಚ್ಚುಗೆ ನಾಲ್ಕನೆ ಪದ್ಯಕ್ಕೆ ಒಂದಂಶ ಹೆಚ್ಚಾಗಿ ಕೊಳ್ಳೈ
ಪೊಗಳಲೆ ನಾಲ್ಕನೆ ಪದ್ಯವ ಸಾಂಗತ್ಯ?
ಸೊಗವಲ್ತೆ ಪದ್ಯಂಗಳೆಲ್ಲಂ|
ಪೊಗಳುತ್ತೆ ಮೂರನೆ ಪದ್ಯವ ಪಾಡಿದ್ದ-
ರಾಗಿತ್ತು ತಿವದಿಯೊಳಂಗೇ||
ಧನ್ಯವಾದ ಜೀವೆಂ, ಪ್ರಸಾದು :), ನಾಲ್ಕನೇ ಪದ್ಯದ ಅಂಶ ಛಂದಸ್ಸಿನ ಕೊರತೆಯನ್ನು ಸ್ವಲ್ಪ ಬಿಡಿಸಿ ಹೇಳಿ, ನಿಬಿಡ ಬಂಧ ಮಾಡಿದ್ದೇನೆ ಅಂಶದಲ್ಲಿ ಸುಕುಮಾರ ಬಂಧ ಸರಿಯಾದದ್ದು ಅನ್ನುವುದು ಒಂದು, ಇನ್ನೇನಾದರು ಗಮನಿಸಿದ್ದರೆ ತಿಳಿಸಿ
ಹೆಚ್ಚಾದ ಒಂದಂಶ ಮೆಚ್ಚುಗೆಯದ್ದು, ಛಂದಸ್ಸಿನದಲ್ಲ. ತಲ್ಲಣಿಸದಿರಿ 🙂
ಹೌದೇ ಧನ್ಯವಾದಗಳು_/\_, 🙂
ತಿರುಚಿದ ಕೊಕ್ಕಿನ ಪರಿಯಿಂತುಮಾದೊಡೆ
ಹರಡಿದ ಗರಿಯ ಬೆರಗೆಂತೋ| ಅರುಹಯ್ಯ
ಅರವತ್ತು ಪದ್ಯ ಅದ ಕುರಿತು||
ತಿರುಗಿsದ ಕೊರಳಿsನ ನವಿಲಿsನ ಮುಡಿಯ ಮುಂ-
ಗುರುಳ ತೀಡಿರುವ ಬಲಗೈಯ | ನಲವಿsನ
ಬೆರಳು ನಿನ್ನವೆಲೆ ಸೋಮಣ್ಣ !!
ಧನ್ಯವಾದ ಉಷಾ ಅವರೆ 🙂
ತಿರುಗಿsದ ನವಿಲಿsನ ಕೊರಳಿsನ ಮುಡಿಯ ಮುಂ- would be apt. AdiprAsa is also required in the third gaNa of the first line in tripadi.
ಧನ್ಯವಾದಗಳು ಪ್ರಸಾದ್ ಸರ್ , ಪ್ರಾಸ ಗಮನಿಸಲಿಲ್ಲ .
ತಿದ್ದಿದ ಪದ್ಯ :
ತಿರುಗಿsದ ನವಿಲಿsನ ಮೆರುಗಿsನ ಮುಡಿಯ ಮುಂ-
ಗುರುಳ ತೀಡಿರುವ ಬಲಗೈಯ | ನಲವಿsನ
ಬೆರಳು ನಿನ್ನವೆಲೆ ಸೋಮಣ್ಣ !!
ಕಾಮನಬಿಲ್ಲಿನ ಛಾಪನು ಮೂಡಿಸಿ
ಕಾಮಿತ ಚಿತ್ರಕೆ ರಂಗನು ಪಸರಿಸಿ
ಸೋಮನ ಬಿಂಬದ ತಿಂಗಳ ಬೆಳಕಿನ ಹೋಲಿಕೆ ಸಾರುವನೇ ?
ತಾ ಮೆರೆಯಲಿ ರಾಷ್ಟ್ರದ ಲಾಂಛನವೆಂ-
-ದಾ ಮುಕುಟಕೆ ಕೇಸರಿಬಣ್ಣವನೆರ-
-ಚೀ ಮಣ್ಣಿನೊಲವ ಸಾರಲು ರಂಗೋಲಿಗೆ ಪುಟಕೊಡುತಿಹನೇ ?
ಸಹಜ ಬಣ್ಣಗಳಿಂದಲೇ ನವಿಲಿನ ದೇಹದ ಹೆಚ್ಚಿನ ಭಾಗವನ್ನು ಚಿತ್ರಿಸಿದ ಕಲಾವಿದ(ದೆ) ತಲೆಯಲ್ಲಿ , ಕೊಕ್ಕಿನಲ್ಲಿ ನವಿಲಿಗೆ ಅಸಹಜವಾದ ಕೇಸರಿ ಬಣ್ಣವನ್ನು ಯಾಕೆ ಹಾಕಿದ ?ರಾಷ್ಟ್ರೀಯ ಪಕ್ಷಿ ಲಾಂಛನಕ್ಕೆ ಮುಕುಟದಲ್ಲಿ ಕೇಸರಿ ಬಣ್ಣಬಳಿದು ದೇಶವೂ, ದೇಶಪ್ರೇಮವು ಹುಣ್ಣಿಮೆಯ ಚಂದ್ರನಂತೆ ಬೆಳಗುತ್ತಿರಲಿ ಎಂದು ಪುಟ ಕೊಡುತ್ತಿರುವನೇ (finishingtouch) ?
ಮಗುವಿನಳುವನು ಅಡಗಿಸುವಶಶಿ
ನಗುವ ಬೀರುವ ಕಮಲದರಿಯೋ !
ಜಗವ ಬೆಳಗುವೆನೆಂದು ಬಂದಿಹ ಚೆಲುವ ಸೂಸುತಲಿ
ಮುಗಿಲ ಮೇಲೇರುತಲಿ ಪಕ್ಕಿಯು
ಸುಗುಣದಿಂದಲಿ ಪಂಚರಂಗದ
ಝಗಮಗದಗರಿ ಮುಚ್ಚಿ ಗ್ರಹಣವ ತಡೆವೆನೆಂದಿಹುದು
Ahaa, nice one!!
ಎಳೆಯೆಳೆಯ ಹಾಸುಹೊಕ್ಕೊಳ್
ದಳೆದ ಕಸೂತಿ ಬಗೆಯಿದಲ್ತೆ ದುಂಡನೆ ಕಟ್ಟೊಳ್ |
ಬಿಳಿಮೇಟಿ ಬಟ್ಟೆ ಮೇಲ್ ಸಂ-
ಗಳಿಸಿo ಮುಡಿವಕ್ಕಿ ಮುಡಿಯ ಸಿಂಗರಿಸಲ್ ಮೇಣ್ !!
“ಬಿಳಿಯ” ಮೇಟಿ (=cross stitch) ಬಟ್ಟೆಯ ಮೇಲೆ ನವಿಲಿನ ಕಸೂತಿ ಹಾಕುವಾಗ ಅದರ ಮುಡಿಯ ಭಾಗದಲ್ಲಿ ಸಿಂಗರಿಸಲು “ದುಂಡನೆ ಫ್ರೇಮ್” ಬಳಸಿರುವ ಕಲ್ಪನೆಯಲ್ಲಿ !!
ಎರಡನೆಯ ಸಾಲಿನಲ್ಲಿ ಜಗಣಗಳು ಜಾರಿವೆ. ಹೊಕ್ಕಿನೊಳ್ ಆದರೆ ಮತ್ತೂ ಚೆನ್ನ.
ಧನ್ಯವಾದಗಳು ಜೀವೆಂ , “ಹೊಕ್ಕಿನೊಳ್” ಆದರೆ ಚಂದಸ್ಸು ತಪ್ಪುದಲ್ಲವೇ ? ತಿದ್ದಿದ ಪದ್ಯ :
ಎಳೆಯೆಳೆಯ ಹಾಸುಹೊಕ್ಕೊಳ್
ದಳೆದ ಕಸೂತಿ ಬಗೆಯಲ್ತೆ ದುಂಡನೆ ಕಟ್ಟೊಳ್ |
ಬಿಳಿಮೇಟಿ ಬಟ್ಟೆ ಮೇಲ್ ಸಂ-
ಗಳಿಸಿo ಮುಡಿವಕ್ಕಿ ಮುಡಿಯ ಸಿಂಗರಿಸಲ್ ಮೇಣ್ !!
“