Feb 052018
 

ನಮಸ್ಕಾರ, ಪದ್ಯಪಾನಿಗಳಿಗೆ ಹೆಚ್ಚಿನ ಪದ್ಯರಚನೆಗೆ ಅವಕಾಶವನ್ನು ಮಾಡಿಕೊಡುವ ದೃಷ್ಟಿಯಿಂದ ವರ್ಣನೆಯ ಈ ಕಂತಿನಿಂದ ಮೊದಲುಗೊಂಡು ಒಂದೇ ವಸ್ತುವಿನ ಬದಲು ಹಲವು ವಸ್ತುಗಳನ್ನು ನೀಡಲಾಗುತ್ತದೆ, ಈ ಬಾರಿ ನಾಲ್ಕು ವಸ್ತುಗಳನ್ನು ನೀಡಲಾಗಿದೆ, ನಿಮ್ಮ ಪದ್ಯಗಳು ಯಾವ ವಸ್ತುವನ್ನು ಕುರಿತಾಗಿದೆ ಎಂದು ಸೂಚಿಸಿ ಪದ್ಯರಚಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ವಸ್ತುಗಳು:
೧. ಅಡಿಕೆ ಮರ
೨. ದಾನದ ಮಹಾತ್ಮೆ
೩. ಮಚ್ಚೆ
೪. ದೇವರ ಬಟ್ಟೆ ಬರೆ (wardrobe of gods/any god)

  30 Responses to “ಪದ್ಯಸಪ್ತಾಹ ೨೯೩: ವರ್ಣನೆ”

  1. ದೇವರಿಗೆ ಕ್ಷುದ್ಬಾಧೆಗಳಿಲ್ಲ, ಮಲ-ಅಪಾನವಾಯು-ಮೂತ್ರ-ಬೆವರು-ಕೀವು-ವಾಂತಿ-ತೇಗು-ಶ್ಲೇಷ್ಮ-ಕಿಸುರು-ಗುಗ್ಗೆಗಳಿಲ್ಲ. ಬಟ್ಟೆಯು ಕೊಳೆಯೇ ಆಗುವುದಿಲ್ಲ. ಅವರು ಕಾಮರೂಪಿಗಳಾದ್ದರಿಂದ, ಅವರು ಹೊಂದುವ ರೂಪಕ್ಕನುಗುಣವಾಗಿ ವಸ್ತ್ರವು ಮಾರ್ಪಡುತ್ತದೆ. ಇನ್ನು ಅವರ ಶಾಶ್ವತಬಂಧಿತವಸ್ತ್ರಕೋಷ್ಠದಲ್ಲಿರುವುದೆಂದರೆ (permanently sealed wardrobe) ಅವರು ದೈವತ್ವವನ್ನು ಹೊಂದುವ ಮುನ್ನ ಉಟ್ಟಿದ್ದ ಮಾನುಷವಸ್ತ್ರ!
    ಕ್ಷುದ್ಬಾಧೆ-ಉತ್ಸರ್ಗಗಳು ದೇವರಿಂಗಿಲ್ಲ
    ಬುದ್ಬುದಾಂಜನವೇಕೊ(Soap) ವಸ್ತ್ರಪವಕೆ|
    ಉದ್ಬಂಧಸಂಪುಟದೊಳಿರುವ(wardrobe) ಹಳೆಬಟ್ಟೆಯಿಂ-
    ದುದ್ಬೋಧವೆಮಗವರ ದೈವಪೂರ್ವ್ಯಂ||

    • ಚೆನ್ನಾಗಿದೆ. ದೇವರಿಂಗೆ ಏಕವಚನವೇ ಆಯಿತಲ್ಲ – ದೇವರ್ಕಳಿಂಗೆ ಇರಬೇಕಿತ್ತು. ನಾಕಿಗಳಿಗಿಲ್ಲ ಎಂದಾಗಿಸಬಹುದು.

  2. ವೃಕ್ಷಗಳಲ್ಲಿ ಫಲವು ಅಂಕುರಿಸುವುದು ಪರ್ಣಗುಚ್ಛದಲ್ಲಿರುವ ಹೂವುಗಳಲ್ಲಿ. ಆದರೆ ಅಡಕೆಕಾಯಿ ಬೆಳೆಯುವುದು ಪರ್ಣಗುಚ್ಛದಲ್ಲಲ್ಲ, ಮರದ ಕಾಂಡಮಧ್ಯದಲ್ಲಿ. ಹಲಸುಮರವು ಅಡಕೆಮರಕ್ಕೆ ಹೇಳುತ್ತದೆ, “ಪರ್ಣಬಂಧನದಿಂದ ಬಿಡಿಸಿಕೊಂಡು ಹಣ್ಣುಗಳನ್ನು ತಳೆಯುವ ಆಸೆ ನನ್ನಂತೆ ನಿನಗೂ ಇದೆ. ನಾನು ಕಾಂಡದುದ್ದಕ್ಕೂ, ಹೊರಚಾಚಿರುವ ಬೇರಿನಲ್ಲೂ ಹಣ್ಣನ್ನು ತಾಳುತ್ತೇನೆ, ಪ್ರಾಣಿಗಳು ಸ್ವೇಚ್ಛೆಯಾಗಿ ತಿನ್ನಲೆಂದು. ನೀನಾದರೋ ಫಲವನ್ನು ಕಾಂಡದ ಮೇಲ್ಭಾಗದಲ್ಲೇ ನಿಲ್ಲಿಸಿ, ಸ್ವಾರ್ಥಿಯಾದ ಮಾನವನಿಗೇ ಮೀಸಲಾಗಿದ್ದೀಯೆ.”
    ನನ್ನವೊಲ್ ನಿನಗು ಮುಕ್ತಿಕಾಮವೈ
    ಉನ್ನತಾಸನದೊಳೇಕೆ ನಿಂದೆಯೋ|
    ತಿನ್ನಲೆಲ್ಲ ಮಿಗವೆನ್ನ ಪಣ್ಗಳ-
    ನೆನ್ನದೇಕೊ ಮನುಜಂಗೆ ಮೀಸಲೈ||

    • ಅಡಿಕೆಮರದಿಂದ ಹಣ್ಣು ಕೆಳಬಿದ್ದರೂ ಅದನ್ನು ತಿನ್ನುವ ಪ್ರಾಣಿ ಯಾವುದಾದರೂ ಇದೆಯೇ?

      • ಅಡಕೆಯ ಹಣ್ಣಿನ ರಸವನ್ನು ಮಂಗಗಳು ಹೀರುತ್ತವೆ. ಕೆಳಗೆ ಬಿದ್ದರೆ ತಿನ್ನುವ ಪ್ರಾಣಿ ಬಹುಶಃ ಕುಂಟುಮಂಗವೇ ಆಗಿರಬೇಕು 🙂

  3. ಮಚ್ಚೆ
    ದಿಟ್ಟಿಬೊಟ್ಟನಿಡವೇಳ್ಕುಮಾಂಗಳೇ
    ಅಟ್ಟಲೆಂದುಮಪವೀಕ್ಷಸರ್ವಮಂ|
    ಕೊಟ್ಟೊಡಾ ಕಿಣವ ದೇವನಾತನೇ
    ತಟ್ಟುತಿರ್ದಪುದುಮೇಗಳೀಕ್ಷಣಂ||
    (E. g. Angelina Jolie)

  4. ಇತ್ತಿರ್ಪ ನಾಲಕ್ಕು ವಿಷಯಂಗಳೊಳು ಮಚ್ಚೆ,
    ಮತ್ತಡಕೆ, ದೇವರ ವಸ್ತ್ರ-|
    ಕ್ಕಿತ್ತಿರ್ಪೆ ಪದ್ಯವ, ದಾನಕ್ಕಮೀಯದೆ
    ತತ್ತರಿಸಿದ್ದದರ ಮೈಮೆ||

  5. ದಾನಂಗಳೊಳಗುಂಟು ಉತ್ತಮಾಧಮಮಧ್ಯ
    ದಾನಿ-ದಾತೃವೊಳು ಪಾತ್ರಾಪಾತ್ರರುಂ|
    ಊನವುಂಟೇಂ (ಮಾ||) ಹಿರಣ್ಣಯ್ಯರಂಬೋಣದೊಳ್
    “ದಾನಗಳೊಳಗ್ರತಮ ಮೈದಾನಮೈ”||

    ಅಪಾರ್ಥಕ್ಕೆಡೆಯಿಲ್ಲ. ಅದನ್ನು cadaver donation ಎಂದು ಗ್ರಹಿಸಿದರಾಯಿತು, ಅರಿಸಮಾಸವನ್ನು ನಗಣಿಸಿ. ಅಥವಾ ಈಗೀಗ ಅಂಗಡಿಗಳಂತೆ ಹುಟ್ಟಿಕೊಳ್ಳುತ್ತಿರುವ ಪಾಠಶಾಲೆಗಳಿಗೆ ದಾನವಾಗಿ ಬಂದ ಮೈದಾನವೆನ್ನಿ.

  6. ೧. ಅಡಿಕೆ ಮರ-
    ತಿಂದುs ತೇಗುತಲಿರ್ಪs ಮಂದಿsಗೆs ವರಮೀವ
    ಚಂದsದs ಕಲ್ಪs-ತರುವಲ್ತುs ಅವರಿಂಗೆ
    ಕುಂದsದs ಹದನs ನಿನ್ನಿಂದೆs

    ೨. ದಾನದ ಮಹಾತ್ಮೆ-
    ನಮಮಮೆನುತೆ ಗೈವುದಕಿಂ
    ಮಮಕಾರದ ಭಾವಮಿರ್ಪ ದಾನಮೆ ಪೆರ್ಚಯ್
    ಕ್ರಮದೊಳ್ ಕನ್ಯಾದಾನಕು-
    ಪಮೆಯಂ ತೋರ್ದಪಗೆ ಕೇಳ್ದುದಂ ಕುಡುವೆನಲಾ

    ೩. ಮಚ್ಚೆ
    ಮೆಚ್ಚಿನ ಕೃತಿಯಿಂ ಜಗಕೆಂ-
    ದಚ್ಚರಿಯೀವಂ ದಲಾಕೆ ಬೆಳೆಯಲ್ ಬೊಮ್ಮಂ
    ನೆಚ್ಚಿನ ಗುರುತಿಂದರಿವಂ
    ಮಚ್ಚೆಯೆನಿಪುದಲ್ತೆ ಸುಂದರಿಯ ಮೊಗದೊಳಿದೇ
    -ಮುದ್ದಾದ ಶಿಶುವನ್ನು ಸೃಷ್ಟಿಸಿದ ಬ್ರಹ್ಮ ಆಕೆ ಬೆಳೆದಾಗ ಗುರುತಿಗೆ ಸಿಗಲೆಂದು ಮಾಡಿದ ಕುರುಹೇ ಮೊಗದ ಮಚ್ಚೆ

    ೪. ದೇವರ ಬಟ್ಟೆ ಬರೆ (wardrobe of gods/any god)
    ಶೈಲಜೆಯೆ ದೇಹದರ್ಧಂ, ಮುಡಿಗೆ ನೀಂ ನಿಶಾ-
    ಪಾಲನಂ ಗಂಗೆಯಂ ತೊಡುವೆಯಲ್ತೆ,
    ವ್ಯಾಲನಿಂ ಕೊರಳ್ ಕೈಗಳಿಂತಿರಲ್ಕಿಭದೃತಿಯೆ
    ಶೂಲಿಯೇ ಅಜಚರ್ಮಮೇ ಸಾಲದೇಂ?
    -ಶಿವನ ಬಳಕೆಗೆ ಗಜಚರ್ಮವೇನು ಬೇಕಿರಲಿಲ್ಲ, ಅಜಚರ್ಮವೇ ಸಾಕಾಗಿತ್ತು 🙂
    -ವ್ಯಾಲ snake
    ಇಭದೃತಿ – ಗಜಚರ್ಮ

    • ಕನ್ಯಾದಾನಕುಪಮೆಯೇಂ?
      “ಕನ್ಯೆಯಿಹಳ್ ನಿರುಪಮಳ್ ವಿವಾಹದೆ ನೀಡೈ|
      ಅನ್ಯೋನ್ಯದೊಳಿರುವೆ”ವೆನುತೆ
      ದೈನ್ಯದೊಳಳಿಯಂ ವಿಚಾರಿಸೆ ಮಗಳನೀವೈ||

  7. ಅಡಿಕೆ ಮರ :- ಸೋಗೆಯನೊಂದಿಯುಂ ಸರಸಮಾಡುವ ಪೆಣ್ಣವಿಲಲ್ತು ಯೋಚಿಸಲ್
    ಬಾಗುತುಮಿರ್ಪ ಕೆಂಜಡೆಯನೊಂದಿಯುಮಲ್ತಿದು ನಾರಿಯಂತೆಯೇ
    ಯೋಗಿಯುಮಲ್ತು ನೆಟ್ಟನೆನಿಲಲ್ ಸಲೆ ಸಿಂಗರಮಿರ್ಪುದಾದೊಡಂ
    ಭೋಗಿಪಸೇವ್ಯನಲ್ತೊಗಟಿದಾದುದು ಪೂಗದ ವೃಕ್ಷಮಿಂತು ಹಾ !!

    ಸೋಗೆಯನ್ನು (ಗಂಡುನವಿಲು /ಅಡಿಕೆ ಮರದ ಗರಿ) ಹೊಂದಿಯೂ ಕೂಡ ಸರಸವನ್ನಾಡುವ ಹೆಣ್ಣವಿಲಿದಲ್ಲ, ಜಡೆಯನ್ನು ಹೊಂದಿಯೂ ನಾರಿಯಲ್ಲ ,ನೆಟ್ಟಗೆ ಇದ್ದರೂ ಯೋಗಿಯಲ್ಲ, ಸಿಂಗಾರವಿದ್ದರೂ ವಿಷ್ಣುವಲ್ಲ, ಈ ಅಡಿಕೆಯಮರ ಒಗಟಾಗಿಯೇ ತೋರುತ್ತದೆ.

    • ಭೋಗಿಪಸೇವ್ಯ – Well coined

    • ಪೂಗಮನೞ್ತಿಯಿಂದುರೆ ಪೊಗಳ್ದುದು ವೀಳೆಯಕಿತ್ತ ತಂಬುಲಂ

      • ಅಡಕೆಯು ಅಳ್ತಿಯಿಂ ಮತ್ತು ಉರೆ. ವೀಳೆಯು ಮಾತ್ರ ಕಿತ್ತೋಗಿರೋದು! ಹಳ್ಳಿಯವರನ್ನು ಕೇಳಿ, ವಿಳೆದೆಲೆಯು ಹರಿದಿದ್ದರೂ ಒಣಗಿದ್ದರೂ ಬಳಸುತ್ತಾರೆ. ನಾನೂ ಹಳ್ಳಿಯೋನೇಯ!

        • ಸಾಗಿರೆ ಬಾಳ್ತೆಯೀ ಕ್ರಮುಕದಿಂದದನಾ೦ ಪೊಗಳಿರ್ಪೆನೀತೆರಂ (@ ಜಿವೆಂ )
          ಭೋಗಿಪಸೇವ್ಯನೊಳ್ಳಿದನೆನಲ್ಕಿದೊ ವಂದಿಪೆ ಹಾದಿರಂಪರೇ
          ನಾಗಲತಾಭವಂ ಸಲುತೆ ಘೋ೦ಟದೊಡಂ ಚಟಮಾಗಿರಲ್ಕದಂ
          ಚಾಗಿಯ ಪಾಂಗಿನಿಂ ಬಿಸುಡಲಾರ್ಪರದಾರ್ ಧರೆಯೊಳ್ ಪ್ರಸಾದರೇ !!

        • ಎಲ್ಲರೂ ಅಷ್ಟೇಯ. ಹಳ್ಳಿ ಮಾತ್ರ ದೊಡ್ಡದು ಸಣ್ಣದು ಇರ್ತೈತೆ. ಏನೇ ಹೇಳಿ, ಒಣಗಿದ ಎಲೆ ಮೆಲ್ಲೋದು ಕೊಂಚ ಕಷ್ಟವೇ.

          • ಹಾಗೇನಿಲ್ಲ. ಒಣಗಿದ್ದಕ್ಕೂ ಹಸಿಯದಕ್ಕೂ ಇರುವುದು ಒಂದೇ ವ್ಯತ್ಯಾಸ – ಜಲಾಂಶ. ನಾರಿನಂಶ ಹೆಚ್ಚು ಇರುವ ಎಲೆರಖಮುಗಳಿವೆ. ಇವು ಹಸಿಯದರಲ್ಲೂ ನುರಿಯವು. ಅಗಿಯುತ್ತಲೇ ಇರಬೇಕಾಗುತ್ತದೆ. ಆನುಷಂಗಿಕವಾಗಿ ಒಂದು ಮಾಹಿತಿ. ಹಸು-ಎಮ್ಮೆಗಳು ಎಷ್ಟೇ ಹಸಿಹುಲ್ಲು ಮೇಯ್ದರೂ, ಒಣಹುಲ್ಲನ್ನು ಮೇಯಿಸುತ್ತಾರೆ, ಏಕೆಂದರೆ, ಒಂದು ಕೆಜಿ ಹಸಿಹುಲ್ಲಿನಲ್ಲಿನ ಆಹಾರ 200ಗ್ರಾಂ, ನೀರು 800ಗ್ರಾಂ! ಅದನ್ನು ಉಪವಾಸ ಕೆಡವಿದಂತಾಗುತ್ತದೆ!

    • ಬಹಳ ಚೆನ್ನಾಗಿದೆ

  8. ಅಡಿಕೆ ಮರ
    ಕೊರಳಿಗೇರಿಸಿ ಕೆಂಪು ಹವಳದೀ ರಾಜಿಯನು
    ಕೆರಳುತಲೆ ಕೆದರಿ ಮುಡಿಯಂ ಸುಂದರೀ..
    ತರಣಿಯೆನ್ನುವ ಸಖನನರಸುತಲಿ ನಭದೆಡೆಗೆ
    ಸರಿದಿರ್ಪೆಯೇಂ ಬುವಿಯ ತವರಿನೆಡೆಯಿಂ?

  9. ದೇವರ ಬಟ್ಟೆ ಬರೆ :

    ಗಾತ್ರಂ ಬಗೆ ಪೀತಾಂಬರ
    ಪಾತ್ರಂ ಸತಿಯರ್ದು ಮೇಣ್ ತ್ರಿಮೂರ್ತಿಗಳುಡುವರ್
    ಧೋತ್ರಂ ಬರಿ, ಕೈಲಾಸದೆ
    ಮಾತ್ರಂ ಮಿಗೆ ಗಡ ಕುಮಾರರೀರ್ವರ ವಸ್ತ್ರಂ !!

    ತ್ರಿಲೋಕದಲ್ಲೂ “ಸೀರೆ&ಪಂಚೆ” – ಕೈಲಾಸದಲ್ಲಿ ಮಾತ್ರವೇ ಕಾಣಸಿಗುವುದು “ಮಕ್ಕಳ ಬಟ್ಟೆ ” !!

  10. ಸುತ್ತಲಿಂ ನೀರ್ ಪೀರಿ ಗೊಬ್ಬರದಿ ಹುಲುಸಾಗಿ
    ಎತ್ತರಕೆ ಬೆಳೆದಿಹುದು ಕಂಗು ನೋಡೈ
    ಹತ್ತಿರದ ವಲ್ಲಿಗಾಸರೆಯಿತ್ತು , ಕ್ರಷಿಋಷಿಗೆ
    ಬಿತ್ತಿಹುದು ಮನದಲ್ಲಿ ಉಲ್ಲಾಸವಂ

  11. ಬೊಮ್ಮ ಬರೆಯುತಿರೆ ಮೊಗದ ಚಿತ್ರವನು ಕುಂಚದಿಂದ ಜಾರಿ
    ಹೊಮ್ಮಿತೊಂದು ಕರಿಬಣ್ಣದಾ ಹನಿಯು ತುಟಿಯ ತುದಿಯ ಸೇರಿ
    ಹಮ್ಮಿನಿಂದ ಮೆರೆದಿದ್ದ ಚಂದಿರನ ಮೊಗದ ಮೊಲದ ತೆರದಿ
    ನಮ್ಮ ವದನದಲಿ ನೆಲೆಸಿ ನಗುತಿಹುದು ಚಿಮ್ಮಿ ನಗೆಯ ಭರದಿ

    ಚಿಮ್ಮಿ ನಗೆಯ ಭರದಿ-ಮಚ್ಚೆಯನ್ನು ಚಂದ್ರನ ಮೊಲಕ್ಕೆ ಹೋಲಿಸಿದ್ದರಿಂದ ಮೊಲ ಜಿಗಿಯುವಂತೆ,ತುಟಿಯಂಚಲ್ಲಿ ಮಚ್ಚೆಯಿರುವವರು(ನಾನಲ್ಲ:-)) ನಗುವಾಗ ಮಚ್ಚೆಯೂ ಜಿಗಿಯುತ್ತದೆ ಅನ್ನುವ ಪ್ರಯತ್ನ

  12. ತರುವುದೆಂಬರು ಭಾಗ್ಯ, ಕರಿಯ ಚಿಕ್ಕನೆ ಚುಕ್ಕಿ
    ನರಗೆ ಬಲ ನಾರಿಗೆಡಕಿರುವ ಮಚ್ಚೆ |
    ಚರವಲ್ಲವದ ಚಿಗುಟಿ ತೆಗೆಯಲಾಗದ ಚಿರವು
    ಗುರುತಿಗದು ಗುರುತದುವು ಮನುಜ ನೆಚ್ಚೆ ||

    personal mark of indentification – black mole !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)