Feb 122018
ಈ ಬಾರಿ ಎರಡು ಸಮಸ್ಯೆಯ ಸಾಲನ್ನು ಕೊಡಲಾಗಿದೆ:
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ಸರಯೂತೀರದೆ ಕೃಷ್ಣನಾಡಿದಂ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಅನುಷ್ಟುಪ್ ಛಂದಸ್ಸಿನ ಸಮಸ್ಯೆ
ಕಬಂಧಂ ಪೆಣ್ಣ ಚುಂಬಿಕುಂ
ಒರೆವರ್ ಕವಿಗಳ್ ವಿಚಿತ್ರಮಂ
ಸ್ಥಿರಮಕ್ಕುಂ ಗಡ ರಾಸಲೀಲೆಗಳ್
ತರಮೇಂ ವಿಧಿಯಾಗೆ ಸಂಕರಂ?
“ಸರಯೂತೀರದೆ ಕೃಷ್ಣನಾಡಿದಂ”
ಕವಿಗಳ ವಿಚಿತ್ರ ಕಲ್ಪನೆಯಿಂದ ಕೃಷ್ಣನ ಕುರಿತು ರಾಸಲೀಲೆಯಂತಹ ಭಾಗಗಳು ಸ್ಥಿರವಾಗಿ (ಲೋಕದಲ್ಲಿ) ನಿಂತಿರುವ ಉಲ್ಲೇಖದಿಂದ ಪೂರಣ
Erred in 3rd line, with 2 gurus. Also viyogini gati is wrong for 1st line in the topic section. Shouldn’t it be “ನ ನ ನಾ ನ ನ ನಾ ನ ನಾ ನ ನಾ”?
Yes I mixed up, corrected both, thanks 🙂
ಅಬಲಾಸ್ತ್ರೀಯೆನುತ್ತುಂ ತಾ-
ನಬದ್ಧಂ ಪೇಳ್ವ ದೂರಿದೋ
ಅಬಾಧಿತೆ ಗೆಲಲ್ ಸಾಲ್ಗುಂ
“ಕಬಂಧಂ ಪೆಣ್ಣ ಚುಂಬಿಕುಂ”
victory of false molestation case
स्त्रीणां स्पर्शात् प्रियंगुर्विकसति बकुलः शीधु गण्डूषसेकात्|
पादाघातादशोकस्तिलककुरवकौ वीक्षणालिंगनाभ्याम्||
ದೋಹದಕ್ರಿಯೆ ಎಂಬ ಕವಿಸಮಯದ ಪ್ರಕಾರ ಕುರವಕ/ಕುರ್ವಕವು ಸ್ತ್ರೀಯ ಆಲಿಂಗನದಿಂದ ತತ್ಕ್ಷಣವೇ ಹೂದಳೆಯುತ್ತದೆ. ಆಲಿಂಗನದಿಂದ ಉತ್ತೇಜಿತವಾದ ಅದರ ಕಾಂಡವು(=ಕಬಂಧ) ಅವಳನ್ನು ಚುಂಬಿಸಿತು!
ದೋಹದಕ್ಕೆಂತೊ ಆಶ್ಲಿಷ್ಟಂ
ಕುರ್ವಕಂಗೊಳ್ಳೆ ಪೆಣ್ನಿನಿಂ|
ಉತ್ತೇಜಿತಂಗೊಳುತ್ತಾಗಳ್
(ಆ ವೃಕ್ಷದ ಕಾಂಡ)ಕಬಂಧಂ ಪೆಣ್ಣ ಚುಂಬಿಕುಂ||
On his visit to Ayodhya for a medical conference, our good friend Dr. Krishna strolled on the banks of the river Sarayu one evening.
ವರಮಂತ್ರಣದೊಳ್ ವಿವಾದಿಸಲ್
ತೆರಳಿರ್ದಂದುಮಯೋಧ್ಯೆಗಂ ವಲಂ|
ತಿರುಗುತ್ತಿನನಸ್ತಕಾಲದೊಳ್
ಸರಯೂತೀರದೆ ಕೃಷ್ಣನಾಡಿದಂ||
ಎರಡು ಪೂರಣಗಳೂ ಚೆನ್ನಾಗಿದೆ ಪ್ರಸಾದು
ತಲಾ ಒಂದೊಂದು ಧನ್ಯವಾದ ಸೋಮ
Here is an endorsement from Dr. Krishna: Haha…Nice! You’ve got me well. That’s very typical of what I do in the evenings. Reminds me of my regular evening walks on the beautiful banks of Yarra in Melbourne a few years ago. Very likely I’d do a similar thing if I were to visit Ayodhya.
ವರರಾಮನದೊರ್ವನೇಂ ವಲಂ?
೧) ಸರಯೂತೀರದೆ ಕೃಷ್ಣನಾಡಿದಂ|
೨) ವಿರಹಾಗ್ನಿವಿತಪ್ತರೈದಿಪರ್
೩) ಕುರಿಗಳ್ ಮೇದಿಹವೀಂಟಿ ನೀರನುಂ||
ಸಮಸ್ಯೆ ೧:- ಸರಯೂ ತೀರದೆ ಕೃಷ್ಣನಾಡಿದಂ
ವರದಿವ್ಯತೆ ಸಂದಿರಲ್ಕೆ ಕಂ
ಡಿರೆ ರಾಧಾ-ಹರಿಯರ್ಕಳಂ ಯತೀ
ನ್ದ್ರರು ಸೀತೆಯು ಪೋದೊಡೆಂದರೈ
ಸರಯೂತೀರದೆ ಕೃಷ್ಣನಾಡಿದಂ//
ದಿವ್ಯದೃಷ್ಟಿಯನ್ನು ಪಡೆದ ಋಷಿಗಳು,ಕೃಷ್ಣಾವತಾರವನ್ನು ಮೊದಲೇ ಬಲ್ಲವರಾಗಿದ್ದು -ರಾಧಾ-ಕೃಷ್ಣರ ವಿಯೋಗವನ್ನು ಅರಿತಿದ್ದರು. ಸೀತೆಯೊಂದಿಗೆ ರಾಮನ ವಿಯೋಗವಾದಾಗ ಇಂತೆಂದರು.
ಸಮಸ್ಯೆ ೨:
ಪರಲೋಕಮನೈದಾಗಳ್ ಪತಿ ಪೋರುತೆ ಯುದ್ಧದೊಳ್
ಚಿರವಲ್ಲಭನಂತಾ ಶೋ-ಕಬಂಧಂ ಪೆಣ್ಣ ಚುಂಬಿಕುಂ/
ಯುದ್ಧದಲ್ಲಿ ಪತಿಯು ಮಾಡಿದಾಗ ಹೆಣ್ಣನ್ನು ಯಾವಾಗಲೂ ಸಾಯದ ಪತಿಯಂತೆಯೇ ಶೋಕಬಂಧವು ಚುಂಬಿಸಿತು.
ಎರಡನೇ ಪರಿಹಾರ ತುಂಬಾ ಇಷ್ಟವಾಯ್ತು:-)
Thank you _/\_
ತುಟಿಗೂ ಬಾಸಿಂಗಕ್ಕೂ(ಮಸ್ತಕಬಂಧ) ಪೈಪೋಟಿ
ತಾಳಿಯಂ ತೊಡಿಪಾಗಳ್ ಧಿಕ್
ಸ್ಪರ್ಧೆಯಿತ್ತೋಷ್ಠಕಂ ಸ್ವಯಂ|
(Groom)ಪರಿಣೇತೃಧೃತಂ ಮಸ್ತ-
ಕಬಂಧಂ ಪೆಣ್ಣ ಚುಂಬಿಕುಂ||
(Please condone the laghutva of the last letter of third pAda. So too in the khaNDaprAsa-s in verses 9 and 10 below)
ಮರುಜನ್ಮವನ್ನೆತ್ತಿ ಭೂಮಿಯೊಳ್
ಸ್ಮರಿಸಿಂ ರಾಧೆಯಂ ಸೀತೆಯೋಲ್
ಅರೆಗಣ್ಣಲೆ ರಾಮಲೀಲೆಯಂ
ಸರಯೂ ತೀರದೆ ಕೃಷ್ಣನಾಡಿದಂ !!
ಕೃಷ್ಣ., ತನ್ನ ಪೂರ್ವಜನ್ಮವನ್ನು ನೆನೆದು ರಾಧೆಯನ್ನೇ ಸೀತೆಯೆಂದು ಭಾವಿಸಿ ರಾಮನಾಗಿ ಸರಯೂ ತೀರದಲ್ಲಿ ನಲಿದನು !!
Are the eight wives beyond reckoning?
ಏಕಪತ್ನೀವ್ರತಸ್ಥಂ ತಾಳೆ ಜನ್ಮಮಂ
ನೈಕವಲ್ಲಭನಾಗಿ ಅಪ್ಪುದಿನ್ನೇಂ!
ಏಕೆ ಈ ಕಣ್ಗೆ ಬೆಣ್ಣೆಯದಕ್ಕೆ (ಸುಣ್ಣ)ಸುಧೆಯೆಂದು-
ಮೇಕಾಂತಕಾದಳೇಂ ರಾಧೆಯುಂ ಪೇಳ್||
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ “ಆಕೆ” ಕೃಷ್ಣನ ತೋರುವ ಪ್ರೀತಿಯು ನೀಡಿದ “ಕಣ್ಣು” !!
ನಾನೂ ಅದನೇ ಹೇಳಿಹೆ: ರಾಧೆಯು ಮಾತ್ರಳೆ ಸಕ್ಷಮಳದಕೆ?
ಉಳಿದಷ್ಟರಿಗಾಗದೆ ಪೇಳ್ ತೋರಲು ಕಿಟ್ಟಿಯನೇಗಳ್ ನಮಗಂ!!
೨ನೇ ಸಾಲು ತಿದ್ದಿದ ಪದ್ಯ :
ಮರುಜನ್ಮವನ್ನೆತ್ತಿ ಭೂಮಿಯೊಳ್
ಸ್ಮರಿಸಿಂ ರಾಧೆಯ ಸೀತೆಯೋಲ್ ಗಡಾ
ಅರೆಗಣ್ಣಲೆ ರಾಮಲೀಲೆಯಂ
ಸರಯೂ ತೀರದೆ ಕೃಷ್ಣ ನಾಡಿದಂ !!
ಈಗ ಮೊದಲಸಾಲಿನಲ್ಲಿ ಲೆಖತಪ್ಪಿತು. ಮರುಜನ್ಮವನೆತ್ತಿ ಎಂದು ಸವರಿಸಿ. ಸ್ಮರಿಸಿಂ ಎಂದರೆ ಸ್ಮರಿಸಿರಿ ಎಂಬ ಆದೇಶಕವಾಗುತ್ತದೆ; ಸ್ಮರಿಸುತೆ ಎಂದಾಗದು.
ಧನ್ಯವಾದಗಳು ಪ್ರಸಾದ್ ಸರ್ ,
“ವಿಯೋಗಿನಿ”ಯ ತಪ್ಪನು ಸರಿಪಡಿಸಿದ್ದೇನೆ !!
ಮರುಜನ್ಮವನೆತ್ತೆ ಭೂಮಿಯೊಳ್
ಸ್ಮರಿಸಲ್ ಸೀತೆಯ ರಾಸಲೀಲೆಯೊಳ್
ಅರೆಗಣ್ಣಲೆ ರಾಮಲೀಲೆಯಂ
ಸರಯೂ ತೀರದೆ ಕೃಷ್ಣ ನಾಡಿದಂ !!
ರಲ್ಲಕ=blanket
ಜೋಡಿಯಂ ಮುಚ್ಚಿರಲ್ ರಲ್ಲ-
ಕಬಂಧಂ (ಆಗ) ಪೆಣ್ಣ ಚುಂಬಿಕುಂ,|
ಮರ್ದಿಕುಂ, ಭೋಗಿಕುಂ ಮೇಣಿಂ
ಮುದ್ದಿಕುಂ, ಪರಿವಂಚಿಕುಂ(Cajole again)||
ಜಾಲಕಬಂಧ=buds
ಹೂದೋಟದೊಳು ಕೊಯ್ವಾಗಳ್
ಪೂಜೆಗೆನ್ನುತೆ ಪುಷ್ಪಮಂ|
ನಾಳೆಯರಳ್ವ ಆ ಜಾಲ-
ಕಬಂಧಂ ಪೆಣ್ಣ ಚುಂಬಿಕುಂ||
ಸರೋವರದೊಳೀಜಿರ್ಪಳ್
ಮುಳುಂಗಿಸೆತ್ತುತೋಷ್ಠಮಂ|
ಸುಯೋಗಮೆನಗೆನ್ನುತ್ತುಂ
ಕಬಂಧಂ(water) ಪೆಣ್ಣ ಚುಂಬಿಕುಂ||
ವಿವಾಹ ನಂತರಂ ಗಡಾ
ಪತಿಗೃಹಕೆ ಕಳುಹಲ್
ಸಂಭ್ರಮಿಪ ಮಾತೆಯ ಮೂ-
ಕ ಬಂಧಂ ಪೆಣ್ಣ ಚುಂಬಿಕುಂ ||
ಮಗಳನ್ನು ಮೊದಲಬಾರಿಗೆ ಗಂಡನ ಮನೆಗೆ ಕಳುಹುವಾಗಿನ
ತಾಯಿಯ (ಸಡಗರದ/ತಳಮಳದ ಮೌನದ) ಅಪ್ಪುಗೆ ಮಗಳನ್ನು ಮುಟ್ಟಿತ್ತು .
ಮೇಡಂ,ಕಲ್ಪನೆ ಚೆನ್ನಾಗಿದೆ. ಮೂರೂ ಸಾಲುಗಳಲ್ಲಿ ಛಂದಸ್ಸು ಎಡವಿದೆ.
ಹೌದು ಮಂಜು , ಇದು ಮೊದಲ anUSHtup ಪದ್ಯ (ಎಂಟೆಂಟು ಅಕ್ಷರ – ಪ್ರಾಸದ ತ್ರಾಸವಿಲ್ಲವೆಂದು, ನಿಯಮವರಿಯದೆ ಬರೆದದ್ದು ) ಸರಿಪಡಿಸಲು ಪ್ರಯತ್ನಿಸಿದ್ದೇನೆ.
ವಿವಾಹ ನಂತರಂ ನಿಶ್ಚ-
ಯಿಸಿರೆ ಕಳುಹಲ್ ಪತಿ-
ಯೊಡಂ, ಪೆಣ್ತಬ್ಬೆಯಿತ್ತಾ ಮೂ-
ಕ ಬಂಧಂ ಪೆಣ್ಣ ಚುಂಬಿಕುಂ ||
ಕರಕಂ ಶರಮಾಗೆ ಭೂಷಣಂ
ಮುರರಂ ಸಂಹರಿಸಲ್ಕೆ ಪೂರ್ವದೊಳ್
ಧರೆಯೊಳ್ ರಘುರಾಮನಾಗುತುಂ
ಸರಯೂ ತೀರದೆ ಕೃಷ್ಣನಾಡಿದಂ
ರಾಕ್ಷಸಸಂಹಾರಕ್ಕೆಂದು ಪೂರ್ವಜನ್ಮದಲ್ಲಿ ರಾಮನಾಗಿ ಅವತರಿಸಿ, ಸರಯೂತೀರದಲ್ಲಿ ಕೃಷ್ಣನಾಡಿದ ಅನ್ನುವ ಪ್ರಯತ್ನ
ಪೂರ್ವಾನ್ವಯಾಲಂಕಾರ 🙂 ಚೆನ್ನಾಗಿದೆ
ಧನ್ಯವಾದಗಳು_/\_ ಹೀಗೂ ಒಂದು ಅಲಂಕಾರ ಇದೆ ಅಂತ ಈಗಲೇ ಗೊತ್ತಾದದ್ದು
೧.ತುರುಮಂದೆಗಳೆಲ್ಲ ಬಂದಿರಲ್
ಹರಿ ಚೆಂಡೊಂದನು ಕೈಲಿ ಹಿಡಿದಿರಲ್ |
ಹುರುಪಿಂ ಬಳಿಬಂದ ಮಿತ್ರರಾ-
ಸರೆಯೂತೀರದೆ ಕೃಷ್ಣನಾಡಿದಂ ||
ಕೊನೆಯ ಸಾಲಿನಲ್ಲಿ ರ ವನ್ನು ರೆ ಮಾಡಿದ್ದೇನೆ ಕ್ಷಮಿಸಿ
ನಾರಾಯಣರಿಗೆ ಪದ್ಯಪಾನಕ್ಕೆ ಸ್ವಾಗತ. ಪದ್ಯವು ಚೆನ್ನಿದೆಯಾದರೂ ಹೀಗೆ ಕೀಲಕವನ್ನೇ ಬದಲಿಸುವಂತಿಲ್ಲ. ಸರ’ವೂ’/’ಹ’ರಯೂ ಎಂದೆಲ್ಲ ಬದಲಿಸಿಕೊಂಡರೆ ಪರಿಹಾರಗಳು ಸಾಧ್ಯ ಎಂದೆಲ್ಲ ಬಯಸುವುದು ಅಸಾಧು! ಕೊಟ್ಟಿರುವ ಛಂದಸ್ಸಿನ ಬದಲಿಗೆ ಬೇರೆಯ ಛಂದಸ್ಸಿಗೆ ಬದಲಿಸಿಕೊಳ್ಳಬಹುದಾಗಿದೆ. ಉದಾ: ’ಸರಯೂತಟಾಂಗಣದೆ ಕೃಷ್ಣನಾಡಿದಂ’ ಎಂದು ಮಂಜುಭಾಷಿಣಿಗೆ ಬದಲಿಸಬಹುದು.
’ಹಿಡಿ’ ಬದಲಿಗೆ ಒಂದು ಗುರ್ವಕ್ಷರವಿರಬೇಕು. ಹೀಗೊಮ್ಮೆ ಆಗುವ ತಪ್ಪೇ ಕಲಿಕೆಗೆ ಆಸ್ಪದ. ಒಂದಷ್ಟು ಪದ್ಯಗಳನ್ನು ರಚಿಸಿದಮೇಲೆ ಕೈಕುದುರುತ್ತದೆ. ನಿಲ್ಲಿಸದೆ ಯತ್ನಿಸಿ. ಶುಭಾಶಯಗಳು.
ಧನ್ಯವಾದದಿನ ರಚನೆಯನ್ನು ಇನ್ನಷ್ಟು ಉತ್ತಮಗೊಳಿಸುವ ಯತ್ನ ಮಾಡುತ್ತೇನೆ .
ಹಿಡಿದಿರಲ್ ಬದಲಿಗೆ ತಂದಿರಲ್ ಎಂದು ಮಾಡಿದರೆ ಸರಿಯಾಗುವುದಲ್ಲವೇ?
೨ನೇ ಸಾಲಿನಲ್ಲಿ ಹಿಡಿದಿರಲ್ ಬದಲಿಗೆ ತಂದಿರಲ್ ಆಗಬೇಕಿತ್ತು.ಅಚಾತುರ್ಯಕ್ಕೆ ಕ್ಷಮಿಸಿ .
ಛಂದಸ್ಸು ಸರಿಯಾಯಿತು. ಪದ್ಯದ ಆಶಯವನ್ನು ನಿಸ್ಸಂದೇಹವಾಗಿ ತಿಳಿಸುವಷ್ಟು ಸ್ಪಷ್ಟವಾಗಿ ಬರೆಯಲು ಸಿದ್ಧಿಸುವ ತನಕ ಅರ್ಥವನ್ನು ಸರಳಗದ್ಯದಲ್ಲಿ ತಿಳಿಸುವುದೊಳ್ಳೆಯದು.
ದನಗಳೆಲ್ಲ ಬಂದಿವೆ.ಕೃಷ್ಣನು ಆಟವಾಡಬೇಕೆಂಬ ಆಸೆಯಿಂದ ಕೈಯಲ್ಲಿ ಚೆಂಡನ್ನು ಹಿಡಿದಿದ್ದಾನೆ. ಅವನ ಆಸೆಗೆ ಹುರುಪಿನಿಂದ ಓಡಿ ಬಂದ ಗೆಳೆಯರ ಆಸರೆಯೂ ಸಿಕ್ಕಿತು.ಹಾಗಾಗಿ ಅವನು ಗೆಳೆಯರೊಡನೆ ಆಟವಾಡಿದನು.