Feb 192018
 

  30 Responses to “ಪದ್ಯಸಪ್ತಾಹ ೨೯೫: ಚಿತ್ರಕ್ಕೆ ಪದ್ಯ”

  1. ಮಲ್ಲಿಗೆ ನಾತವದಿಲ್ಲಿಗೆ ಹೊಡೆಯುತ್ತೆ ಸಲ್ಲದು ದೂರ ಸರಿ ತಾಯಿ
    ಸಲ್ಲದು ದೂರ ಸರಿ ತಾಯಿ ಯಜಮಾನ ಎಲ್ಲಿಗ್ಹೋಗಲಿ ನಾ ನಿನಬಿಟ್ಟು

    • ಸರಿಯಾಗಿ ಹೇಳಿದಿರಿ. ನಾತವು ದಿಲ್ಲಿಯವರೆಗೆ ಹೊಡೆಯುತ್ತೆಂದರೆ, ಅಷ್ಟು ಹತ್ತಿರನಿಂದವನ ಪಾಡಿನ್ನು…..

  2. ಎಷ್ಟ ಗೈದೊಡಮೊಂಟಿಕಾಲ ಮೇಲ್ನಿಂತು ತಪ
    ಕಷ್ಟಮೇ ಕಾಮಮಂ ಮನದೆ ತಡೆಯಲ್|
    ದೃಷ್ಟಿ-ನಾಸಿಕಗಳಂ ಮುಚ್ಚುತಲಿ ಮೇಣಿಂದೆ
    ಮುಷ್ಟಿಯಿಂ ವಸ್ತ್ರವಂ ತಡೆವುದಾಯ್ತೇಂ!!

  3. ಜಂಟಿಬಾಳಿನ ಯಾತ್ರೆ ಸಾಕೆಂದು ಪತಿರಾಯ
    ಒಂಟಿಕಾಲಲಿ ತಪಕೆ ಹಿತ್ತಲಲಿ ನಿಂತ|
    ತುಂಟಿಯಾತನ ಸತಿಯು ಮಲ್ಲೆಯಲಿ ಘಮ್ಮೆನಿಸೆ
    ಕುಂಟಿದನು ನಾರೀಶ ಕಾಮಾರ್ತನಂತೆ||

  4. ಪು.ತಿ.ನ.ರವರ ಕವಿತೆಯನ್ನು ಆಧರಿಸಿ:
    ಮಾತ್ರಾಸೀಸ|| ಮರವೆ ಮಾದರಿ ನಿನಗೆ? ಬಿಡು ಬಿಡೈ ಢಾಂಬಿಕವ, ಎಷ್ಟರವ ನೀನಪೆಯೊ ಮರದ ಮುಂದೆ
    ತಲದೆ ಪೀರುತೆ ಕೊಚ್ಚೆ ಮೇಲಗಡೆ ತನಿವಣ್ಣನದು ನೀಡೆ, ನಿನ್ನದೋ ತದ್ವಿರುದ್ಧಂ|
    ಕೊಳೆತು ನಾರುವೆ ನೀನು ಹೆಣವಾಗಿ ಒಂದೊಮ್ಮೆ, ಸತ್ತೊಡಂ ಗಂಧಿಯಾ ತರುವು ಕೇಳೈ
    ತನಗೆಂದು ಬಾಳದದು, ಅದರಿನಾರ್ಗಿಲ್ಲ ಹೊಲೆ, ಮರಕೆ ಬೇಕಿಲ್ಲವಾರುಪಕಾರವೂ||
    ತೇಟಗೀತಿ|| ಕೈಯೊಳ್(ಕೊಂಬೆ) ಪಿಡಿದಿದೆ ಛದವನು(ಎಲೆ) ಮರವೆಂದೆನುತುಂ
    ನೀನುಮಂತೆಯೆ ಉದ್ಯುಕ್ತನಾಗಲೇಕೈ|
    ಬೇಡೈ, ವಸ್ತ್ರವ ಕಳಚುತ್ತೆ ಹಿಡಿದೊಡೀಗಳ್
    ಕರದೆ, ಗಹಗಹ ನಗುವರು ಸುಳಿವ ಜನರು||

    • ಆತನಿಗೇನೋ ವೈರಾಗ್ಯದ ಪ್ರಯತ್ನ ಅಂದರೆ ನೀವ್ಯಾಕೆ ಆಕೆಯನ್ನು ಮರೆತಿರಿ?

      • ಪ್ರಯತ್ನದ ಹಂತದಲ್ಲಿದ್ದಾನೆನ್ನುವ ನಿಮ್ಮ ಮಾತೇ ಮುದಾವಹ. ಅವನಿಂದ ವೈರಾಗ್ಯವು ಸಾಧಿತವಾಗುತ್ತಲೆ ದಯವಿಟ್ಟು ತಿಳಿಸಿ, ಆಗ ಆಕೆಯನ್ನು ನೆನೆಸಿಕೊಳ್ಳುತ್ತೇನೆ 😉

  5. ಅನಸೂಯಳವಳ ತನುವಿಂ
    ಮನದಾಳದ ಗೌರವರ್ಣಮದು ಪಸರುದ ಕಾಣ್
    ಜಿನನವನತ್ರಿಯ ಮುಗಿದ ನ-
    ಯನದೊಳ್ ಮೇಣ್ ಬ್ರಹ್ಮರಂದ್ರವಂ ಭೇದಿಪುದುಂ ||

    ಸತಿ ಅನಸೂಯಳ ನಿರ್ಮಲವಾದ ಕಾಂತಿ ಅತ್ರಿ ಮುನಿಯ ಜಪದಲ್ಲಿ ಮುಚ್ಚಿದ ಕಣ್ಣನ್ನು ತುಂಬಿ ,ಬ್ರಹ್ಮ ರಂಧ್ರವನ್ನು ಭೇದಿಸಿ ಹೊರಹೊಮ್ಮುತ್ತಿದೆ – ಎನ್ನುವ ಕಲ್ಪನೆ

    • ವ್ಯಾಕರಣ ಎಡವಿದೆ. ಪಸರ್ಪುದು ಇರಬೇಕು.

      • ಧನ್ಯವಾದಗಳು ಜೀವೆಂ , ಸರಿಪಡಿಸಲು ಪ್ರಯತಿಸಿದ್ದೇನೆ

        ಅನಸೂಯಳವಳ ತನುವಿಂ
        ಮನದಾಳದ ಗೌರವರ್ಣಮೊಸರಿರ್ಪುದು ಕಾಣ್
        ಜಿನನವನತ್ರಿಯ ಮುಗಿದ ನ-
        ಯನದೊಳ್ ಮೇಣ್ ಬ್ರಹ್ಮರಂದ್ರವಂ ಭೇದಿಪುದಂ ||

  6. ಅವಳ ಕಂಚುಕ, ತೋಳು, ಕೈ, ಬೆರಳುಗಳೆಲ್ಲ ಒಂದೇ ಬಣ್ಣ – Leggings Vs. Armings
    ಪಾದ್ಯವೆಂದಿಹುದೀಗ ಲೆಗ್ಗಿಂಗ್ಸು ಸ್ತ್ರೀಯರಿಗೆ
    ಇದ್ಯಾವುದಿದು ಭವಿಷ್ಯದ ತೊಡುಗೆಯು?
    ಚೋದ್ಯವಾಕೆಯು ತೊಟ್ಟ ಹಸ್ತ್ಯವೆಂಬಾರ್ಮಿಂಗ್ಸು
    (ಸ್ವೇದ>sweating)ಸ್ವಿದ್ಯವಾಯ್ತೀಗವಳ ಮೇಲ್ಭಾಗವೂ!!

  7. ಚರ್ಮಽದಽ ಸೆಳೆತಽವಽ ನಿರ್ಮೂಲಽಗೈದಂಗೆಽ
    ಕೂರ್ಮೆಽಯಿಽದೇನೋ ಸನ್ಯಾಸಿಽ| ಪೇಳುಽ ನೀ-
    ನೊರ್ಮೆಽ ವೈಯಾಘ್ರಽ*ದೊಳಗುಟ್ಟಽ||
    *ವೈಯಾಘ್ರ=ವ್ಯಾಘ್ರಚರ್ಮ. ವಿಪರ್ಯಾಸವಾಗಿ Viagra ಎಂದೂ ಓದಿಕೊಳ್ಳಬಹುದು

  8. ಕೈಯ ಹಿಡಿದವಳ ಮರೆತು ತಾನು
    ಗೈಯುವೆನು ತಪವನೆನುತಲಿ ಪತಿ
    ರಾಯ ಕಟಿಗೊಂಟಿಬಟ್ಟೆ ಕಟ್ಟಿ ಬೆಟ್ಟವನೇರಿದನ್|
    ಮೈಯಲೊಡವೆಯ ಧರಿಸಿ ಮಡದಿಯು
    ಕೈಯ ಮುಗಿಯಲು ಒಂಟಿ ಕಾಲಿನ
    ಲಯವ ಮರೆಯುತ ನಿಟ್ಟುಸಿರ ಬಿಡುತ ಕುಂಟತೊಡಗಿದನ್ || (ಭಾ)

    • ಪ್ರಾಸದಲ್ಲಿ ಎರಡುವಿಧ: ಆದಿಪ್ರಾಸ ಹಾಗೂ ಆದ್ಯಕ್ಷರಪ್ರಾಸ. ಆದಿಪ್ರಾಸ ನಿಮಗೆ ತಿಳಿದಿರುವಂತೆ ಪ್ರತಿಪಾದದ ಎರಡನೆಯ ಅಕ್ಷರಕ್ಕೆ ಅನ್ವಯವಾಗುವಂಥದು. ಮಾತ್ರಾ ಹಾಗೂ ಅಂಶ ಛಂದಸ್ಸುಗಳಲ್ಲಿ ಇದು ಲಘುವೋ ಗುರುವೋ ಆಗಬಹುದಾಗಿದೆ. ವೃತ್ತಗಳಲ್ಲಿ ನಿರ್ದಿಷ್ಟವಾಗಿರುತ್ತದೆ. ಆದ್ಯಕ್ಷರಪ್ರಾಸವು ಪ್ರತಿಪಾದದ ಮೊದಲ ಅಕ್ಷರಕ್ಕೆ ಅನ್ವಯಿಸುವಂಥದು. ಅದು ಆರುವಿಧವಾಗಿದೆ:
      1. ಅ, ಕ, ವ್ಯ ಇತ್ಯಾದಿ ಲಘ್ವಕ್ಷರದ ಸಿಂಹಪ್ರಾಸ
      2. ಯಾ, ರಾ, ದ್ವಾ ಇತ್ಯಾದಿ ಗುರ್ವಕ್ಷರದ ಗಜಪ್ರಾಸ
      3. ಕಂ, ಸ್ತಂ ಇತ್ಯಾದಿ ಅನುನಾಸಿಕದ ವೃಷಭಪ್ರಾಸ
      4. ಕಃ, ರ್ಮಃ ಇತ್ಯಾದಿ ವಿಸರ್ಗದ ಅಜಪ್ರಾಸ
      5. ಮಳ್+ಳೆ, ಅಯ್+ಯ, ಸಗ್+ಗ ಇತ್ಯಾದಿ ಸಜಾತೀಯವ್ಯಂಜನಗಳ ಹಯಪ್ರಾಸ
      6. ದಿವ್+ಯ, ಒರ್+ಮೆ (ಸಂಖ್ಯೆ 7ರಲ್ಲಿನ ನನ್ನ ಪದ್ಯವನ್ನು ನೋಡಿ) ಇತ್ಯಾದಿ ವಿಜಾತೀಯವ್ಯಂಜನಗಳ ವೃಷಭಪ್ರಾಸ
      ಪದ್ಯವೊಂದರ ಎಲ್ಲ ಪಾದಗಳು ಈ ಆರರಲ್ಲಿ ಒಂದನ್ನು ಉದ್ದಕ್ಕೂ ಪಾಲಿಸಬೇಕು. ನಿಮ್ಮ ಪದ್ಯದಲ್ಲಿ ಮೊದಲ ಐದು ಪಾದಗಳು ಗಜಪ್ರಾಸದವು, ಆದರೆ ಆರನೆಯದು ಸಿಂಹಪ್ರಾಸ. ಸವರಿಸಿ.

    • ಕೈಯ/ ಹಿಡಿದವ/ಳ ಮರೆ/ತು ತಾನು
      ಗೈಯು/ವೆನು ತಪ/ವನೆನು/ತಲಿ ಪತಿ
      ರಾಯ/ ಕಟಿಗೊಂ/ಟಿಬ/ಟ್ಟೆ ಕಟ್ಟಿ/ ಬೆಟ್ಟ/ವನೇರಿ/ದನ್|
      ಮೈಯ/ಲೊಡವೆಯ/ ಧರಿಸಿ/ ಮಡದಿಯು
      ಕೈಯ/ ಮುಗಿಯಲು/ ಒಂಟಿ/ ಕಾಲಿನ
      ಲಯವ/ ಮರೆಯುತ/ ನಿಟ್ಟು/ಸಿರ ಬಿಡು/ತ ಕುಂಟ/ತೊಡಗಿ/ದನ್ ||
      ಒಳ್ಳೆಯ ಪ್ರಯತ್ನ. ಹಲವು ದೋಷಗಳಿವೆ:
      1. /ಳ ಮರೆ/ – ಹೀಗೆ ಗನವಿಭಜನೆಗೆ ಒಂದು ಅಕ್ಷರವು ಉಳಿದುಕೊಂಡರೆ, ಶ್ರುತಿಕಟುವಾಗುತ್ತದೆ. ಎರಡನೆಯ ಪಾದದಲ್ಲಿ /ವೆನು ತಪ/ ಹಾಗೂ /ತಲಿ ಪತಿ/ ಎಂಬಲ್ಲಿ ಈ ಸಮಸ್ಯೆಯಿಲ್ಲ ಎಂಬುದನ್ನು ಗಮನಿಸಿ
      2. /ತು ತಾನು/ – ಕಂದಪದ್ಯವನ್ನುಳಿದು, ಮಾತ್ರಾಛಂದಸ್ಸುಗಳಲ್ಲೆಲ್ಲಿಯೂ ಜಗಣ (ನನಾನ) ಅಥವಾ ಲಗಂ (ನನಾ) ಬರಬಾರದು.
      3. /ಟಿಬ/ಟ್ಟೆಕಟ್ಟಿ ಎಂಬುದು ವಸ್ತುತಃ /ಟಿಬಟ್/ಟೆಕಟ್ಟಿ. ಇಲ್ಲಿ /ಟಿಬಟ್/ ಎಂಬುದು ಲಗಂ ಆಯಿತು, ಹಾಗೂ ಟೆಕಟ್ಟಿ ಎಂಬುದು ಜಗಣವಾಯಿತು. ಎರಡೂ ಅಸಾಧು
      4. /ವನೇರಿ/ ಜಗಣ
      5. /ತ ಕುಂಟ/ತೊಡಗಿ/ದನ್ – /ತ ಕುಂಟ/ ಎಂಬುದು ಜಗಣ ಸರಿ. ಆದರೆ ಈ ಗಣದಲ್ಲಿ ಮೂರು ಮಾತ್ರೆಗಳಿರಬೇಕು, ನಾಲ್ಕಲ್ಲ. /ತೊಡಗಿ/ ಎಂಬಲ್ಲಿ ನಾಲ್ಕು ಮಾತ್ರೆಗಳಿರಬೇಕು, ಮೂರಲ್ಲ
      ಇವಿಷ್ಟನ್ನುಳಿದು ಮಿಕ್ಕೆಲ್ಲ ಸರಿಯಿದೆ. ಇವನ್ನು ತಿದ್ದುವುದೇ ಕಲಿಕೆಯ ಮಾರ್ಗ. ಬಿಡದೆ ಪ್ರಯತ್ನಿಸಿ. ಇದನ್ನು ತಿದ್ದಿದರೆ ನಿಮ್ಮ ಮುಂದಿನಪದ್ಯವು ಬಹಳವೇ ಸುಧಾರಿಸಿರುವುದನ್ನು ಕಂಡು ಸಂತಸಪಡುವಿರಿ.

    • ಕೈಯ ಹಿಡಿದಾಕೆಯನು ಮರೆಯುವೆ
      ಗೈಯುವೆನು ತಪವನೆನುತಲಿ ಪತಿ
      ರಾಯ ಗಿರಿಯೇರಿದನರಿವೆಯೊಂದರಲಿ ಮೆರೆಯುತಲಿ|
      ಮೈಯಲೊಡವೆಯ ಧರಿಸಿ ಮಡದಿಯು
      ಕೈಯ ಮುಗಿಯಲು ಲಯವ ಮರೆಯುತ
      ಮಾಯೆಯ ಸುಳಿಗೆ ಸಿಲುಕಿ ಕುಂಟಿದ ನಿಟ್ಟುಸಿರ ಬಿಡುತ ||(ಭಾ)
      ಆದಷ್ಟು ಸರಿಪಡಿಸಿರುವೆ.

      • /ಯ ಸುಳಿಗೆ/ ಎಂಬಲ್ಲಿ ಶ್ರುತಿಕಟುತ್ವವಿದೆ. ’ಮಾಯೆಯಾವರ್ತಕ್ಕೆ ಸಿಲುಕುತೆ ಕುಂಟಿ ನಿಡುಸುಯ್ದಂ’ ಎಂದು ಸವರಬಹುದು. ನೀವು ಬೇರೆಯದೇ ಸವರಣೆ ಮಾಡಿ.

      • ಮಾಯೆಯೊಳಗಡೆ ಸಿಲುಕಿ ಕುಂಟಿದ ನಿಟ್ಟುಸಿರ ಬಿಡುತ||

  9. ಕರಮುಗಿದು ನಿಲ್ಲಲೇತಕೆ ಹಿಂಬದಿಯೊಳಂತು
    ಭರತನೃತ್ಯವ ಮಾಡು ಅವನೆದುರಿನೊಳ್|
    ವರಕೌಶಿಕನೆ ವಾರಿಸದೆ ಪೋದ ಪೆಣ್ಕಣ್ಣ
    ಕರಗಲೇಬೇಕಿವನುಮಿವನಪ್ಪನುಂ||

  10. ಮರುಳೇ! ಬೇಡುವುದೇಕೆ ನೀಂ ಮುನಿಯನಿನ್ನೇಗೈದೊಡಂ ವ್ಯರ್ಥಮಾ
    ಮರನ೦ತಿರ್ಪನು ತನ್ಮನ೦ ಬಗೆದೊಡಂ ನಿತ್ಯಂ ಸಮಾಧಿಸ್ಥಿತಂ
    ಖರಚಿತ್ಪ್ರೋದ್ಧತತಪ್ತವಹ್ನಿಯದು ಪಾರ್! ಕಾಮಾಂಧಳೇ ಕಳ್ಗಿ ಪೋ
    ಪೆ! ರವಂ ಸಲ್ಲದು ಪೋ! ಮಹಂತನವನ್ಯುದ್ಧಾರಕ್ಕೆ ನಿಂತಿರ್ಪನೌ!!

    • ಖರಚಿತ್ಪ್ರೋದ್ಧತ? ಪಾರ್? ನ್ಯುದ್ಧಾರಕ್ಕೆ?

      • ಖರ-ಕತ್ತೆ ಅಲ್ಲ, ತೀಕ್ಷ್ಣವೆಂಬರ್ಥ. ಅವನಿ+ಉದ್ಧಾರ=ಅವನ್ಯುದ್ಧಾರ, ಪಾರ್=ನೋಡು/ಹಾರು(ರ ಅರ್ಧಾಕ್ಷರ-(ಇಲ್ಲಿ -ನೋಡು))

    • ಗವಿಯಂ ಸೇರಿರೆ ವಂಶಮಂ ಬಿಡುತೆ ಪೊಂದುತ್ತಿಂತು ಸನ್ಯಾಸಮಂ
      ತವೆಯಾಗಳ್ ಸಮನುಜ್ಞೆಯಂ ದಯಿತಳಿಂದಾವಶ್ಯದಿಂ ಪೊಂದಿಪಂ|
      ನೆವಮೇನಿರ್ಪುದೊ ಈಗಳಾತನೊಳವಳ್ ಸಾರಲ್ ರಮಾಕಾಂಕ್ಷೆಯಿಂ
      ಧವನಂ ಕಾಡುವುದಂದುಮಿಂದುಮಕಟಾ ಪೇಳ್ ಸಾಧ್ವಿ ದಲ್ ಸಾಧುವೇಂ||

  11. ಚಿತ್ರದಲ್ಲಿ ಬಾಗಿಲು ಇದೆಯೇ ಹೊರತು ಮನೆಯಿಲ್ಲ..ಹಾಗಾಗಿ ಅಲ್ಲಿರುವ ಹೆಣ್ಣೂ ತಪಸ್ಸು ಮಾಡುತ್ತಿರುವವನ ಕಲ್ಪನೆಯೆಂದು ಭಾವಿಸಿ ಈ ಪದ್ಯ

    ನವರಂಧ್ರಂಗಳನೆಲ್ಲಮಂ ತಡೆಯುತುಂ ಕಾಡೊಳ್ ತಪಂಗೈಯುತುಂ
    ಭವಮಂ ಮೀರಿದೆನೆಂದೊಡೇಂ?ಬಯಕೆಯಂ ಮೀರಲ್ಕಶಕ್ತಂ ಪರಾ-
    -ಭವಮಂ ಪೊಂದುತೆ ಬಾಳ್ಕೆಯೊಳ್ ಬಿಳುವನಾ ಗರ್ವಿಷ್ಠ ಧರ್ಮಾಂಧ ಕೌ-
    -ರವ ರಾಜೇಂದ್ರನೆ ಬಿಳ್ದವೊಲ್ ಜಗುಳುತುಂ ನೀರೊಳ್ ಸಭಾಮಧ್ಯದೊಳ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)