Mar 052018
 

೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ವಿಧುವಾದಂ ವಧು ಬೇಗದಿಂದಲೇ

ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

೨. ಕಂದ ಪದ್ಯದ ಸಮಸ್ಯೆ
ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್

  19 Responses to “ಪದ್ಯಸಪ್ತಾಹ ೨೯೭: ಸಮಸ್ಯಾಪೂರಣ”

 1. ಗಲಿತಂಗೊಂಡಿರೆ ಹೊಸ್ತಿಲು(=ಶಿಲಾ)
  ಜಲದಿಂ ತೊಯ್ದು ಮಳೆಗಾಲದೆ ಪ್ರತಿವರ್ಷಂ|
  ನಲಿಯುತಲಾಗಳ್ ಗೆದ್ದಲು
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||

 2. ಕೋಶಿಲಾ – a kind of bean
  ಜಲಕೇ ಸಲ್ಲಲಭಾವಂ (During famine)
  ಫಲಮಿನ್ನೆಲ್ಲಕ್ಕಿ-ಗೋಧಿ-ಮಾಷವು ಶಾಕಂ|
  ಸಲೆ ಸಿಕ್ಕಿತೆ! ಎನ್ನುತೆ ಕೋ-
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||

 3. The mortarstone (ಒರಳು) is fixed in the ground and endures over many generations (of dwellers in the house). It and the grindstone (ಪೇಷಣಶಿಲಾ/ರುಬ್ಬುಗುಂಡು) both erode, wherefore a new grindstone has to be installed every few generations to perfectly fit the deepened and widened mortarstone.
  ಹಲವಾರ್ ತೆಲೆಮಾರುಗಳಂ
  ಸಲೆ ಸೇವಿಸುತಾಳಗೊಂಡು ಪಾಕಗೃಹಗಳೊಳ್|
  ನೆಲದೊಳ ಒರಳದು ಪೇಷಣ-
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||

 4. ಕಲಬೆರಕೆಯ ಕಾಲಂ ದಲ್
  ಫಲದೊಳ್ ಕಾಳಂತೆ ಚೂರ್ಣದೊಳ್, ಕೊಳ್ಳಲ್ಕಾ
  ಬೆಲೆವೆಟ್ಟಂಗಳೆ ಕಾಣ್ಗುಂ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್

  ಕೊಲೆಗಾರನೆ ತಾಂ ಭಟರ್ಗಳ
  ಬಲೆಯಿಂ ಕಾರಾಗೃಹಕ್ಕೆ ಬೀಳಲ್ ಪೇಳ್ದಂ
  ಗಲದೊಳಿಳಿಯದಯ್ ಭಕ್ಷ್ಯಂ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್

  ಕಾರಾಗೃಹದ ಕೆಟ್ಟ ಊಟ

  ಮಧುಚಂದ್ರದ ಪೂರ್ವಭಾವದಿಂ
  ಸುಧೆಯಂ ವೀಕ್ಷಿಸೆ ಪಾಂಥನಬ್ಜನೊಳ್
  ಅಧರಾಮೃತಪಾನಮಿಚ್ಛಿಸಲ್
  ವಿಧುವಾದಂ ವಧು ಬೇಗದಿಂದಲೇ

 5. ವೃಥಾ ಯುದ್ಧ(ಪ್ರಧನ)ದಿಂದೇನು? ಭಸ್ಮಾಸುರವಧೆನ್ನು ಜಾಣ್ಮೆಯಿಂದ ಸಾಧಿಸಿದಮೇಲೆ ವಧುವು(ಮೋಹಿನಿ) ಮತ್ತೆ ವಿಧು(ವಿಷ್ಣು)ರೂಪ ಹೊಂದಿದಳು.
  ಪ್ರಧನಕ್ರಮವಿಲ್ಲ, ಜಾಣಿನಿಂ
  ವಧೆಯಂ ಭಸ್ಮಪಿಶಾಚಗಂ ವಲಂ
  ವಿಧಿಸುತ್ತಿಳೆಯಂ ಪ್ರರಕ್ಷಿಸಾ
  ವಿಧುವಾದಂ ವಧು ಬೇಗದಿಂದಲೇ||

 6. ಶಿಲಾ=ಆನೆಕಲ್ಲುಮಳೆ, ಚಾತಕಪಕ್ಷಿಗೆ(ಶಾರ್ಙ್ಗಃ) ಆಹಾರ
  ನಿಲುಕಿದ್ದೆಲ್ಲವನುಂಡೇಂ?
  ಕೆಲವಂ ಮಾತ್ರಮನುಣುತ್ತೆ ಸೌಖ್ಯದಿನಿರ್ಪೆಂ|
  ಫಲಗಳನಗಣಿಸಿ ಶಾರ್ಙ್ಗಂ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||

 7. ಛಲದಿಂದೆನ್ನನು ಕೆತ್ತಿ ಲ –
  ವಲವಿಕೆಯಿಂ ತೀಡಿ ಮೇಣ್ ನಿಲಯದೊಳ್ ನೆಲೆಯಂ
  ಸಲಿಸಿರ್ಪ ಶಿಲ್ಪಿ ಕಠಿಣ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್

  ಶಿಲ್ಪಿಯು ಶಿಲೆಯ ಧೂಳುತಿಂದು ತನ್ನನ್ನು ಕೆತ್ತಿದ ಸಂಧರ್ಭವನ್ನು ನೆನೆವ ದೇವಮೂರ್ತಿ .

  • ’ಸಲಿಸಿರ್ಪ ಶಿಲ್ಪಿಯುಳಿ ತಾಂ’ ಎಂದರೆ ಒಳಿತೇನೋ (3ನೆಯ ಪಾದ). ’ತಿಂದು’ ಎಂಬುದು ಆಡುಮಾತಿನಲ್ಲಿ ’ಘ್ರಾಣಿಸಿ’ ಎಂಬರ್ಥವನ್ನು ಕೊಂಡೀತು; ಪದ್ಯದಲ್ಲಿ ಸೊಗಯಿಸದು. ಅಲ್ಲದೆ, ’ಧೂಳುತಿನ್ನು’ ಎಂದರೆ ’ಧೂಳು ತುಂಬಿಕೊಳ್ಳುವುದು’ ಎಂದಲ್ಲವೆ?

 8. ಕಿಲಕಿಲ ನಗುತಲಿ ಖುಷಿಯಲಿ
  ನಲಿದಾಡುತಿರುವ ಹಸುಳೆಗೆ ಅಜ್ಜಿಯ ಬಳಿಬರಲ್|
  ಒಲವಲಿ ಸಿಕ್ಕುವ ಸಿಹಿ ಬಿಳಿ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||
  ಆಡುತ್ತಾ ಅಜ್ಜಿಯ ಬಳಿ ಹೋಗುವಾಗ ಅಜ್ಜಿಯ ಕೈಯಿಂದ ಪ್ರೀತಿಯಿಂದ ಸಿಗುವ ಕಲ್ಲುಸಕ್ಕರೆಯನ್ನು ಸವಿಯುವುದು ಮಗುವಿಗೆ ಬಹು ಸೊಗಸು.

  • ಚೆನ್ನಾದ ಕಲ್ಪನೆ. ಬಿಳಿಶಿಲೆ ಎಂಬ ಪದವನ್ನು ಬಿಡಿಸಿಬರೆದರೂ ಅದು ಸಾಮಸಿಕಪದವೇ, ಏಕೆಂದರೆ ಪೂರ್ವಪದವಾದ ಬಿಳಿ ಎಂಬುದಕ್ಕೆ (ಬಿಳಿಯಲ್ಲಿ, ಬಿಳಿಯಿಂದ, ಬಿಳಿಗಾಗಿ, ಬಿಳಿಯಾದ, ಬಿಳಿಯನ್ನು ಇತ್ಯಾದಿ) ಪ್ರತ್ಯಯವಿಲ್ಲ. ’ಬಿಳಿ’ ಕನ್ನಡಪದ, ’ಶಿಲೆ’ ಸಂಸ್ಕೃತಪದ. ವಿಭಿನ್ನಭಾಷೆಗಳ ಪದಗಳನ್ನು ಅವುಗಳಲ್ಲೊಂದರ ವ್ಯಾಕರಣನಿಯಮಗಳನ್ನು ಬಳಸಿ ಸಮಾಸಗೈಯುವಂತಿಲ್ಲ; ಏಕೆಂದರೆ ಆ ನಿಯಮಗಳು ಆ ಇನ್ನೊಂದು ಭಾಷೆಗೆ ಅನ್ವಯವಾಗವು. ಸಿತಶಿಲೆ ಎಂದು ಸವರಬಹುದಾದರೂ, ಆಗ ತತ್ಪೂರ್ವದ ’ಸಿಹಿ’ ಎಂಬುದು ಇದಕ್ಕೆ ಹೊಂದದು. ಆಗ ಮಧುಸಿತಶಿಲೆ ಎಂದು ಸವರಬೇಕಾಗುತ್ತದೆ. ನಲಿದಾಡುತಿರುವ, ಸಿಕ್ಕುವ ಇತ್ಯಾದಿ ಹೊಸಗನ್ನಡಪದಗಳ ಬದಲಿಗೆ ಹಳಗನ್ನಡಪದಗಳನ್ನು ಬಳಸಿ (ನಲಿದಾಡುತಿಹ, ದಕ್ಕಿಹ). ಪದ್ಯಪದ್ಯಕ್ಕೂ ಸುಧಾರಿಸುತ್ತಿರುವಿರಿ. ಅಭಿನಂದನೆಗಳು.

 9. ಕಿಲಕಿಲ ನಗುತಲಿ ಖುಷಿಯಲಿ
  ನಲಿವೆಳೆ ಹಸುಳೆಗೆ ಅಜ್ಜಿಯ ಬಳಿ ಕುಣಿಯುತಿರಲ್|
  ಒಲವಲಿ ದಕ್ಕುವ ಮಧುಸಿತ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||
  ಆಡುವ ಮಗುವಿಗೆ ಅಜ್ಜಿಯ ಬಳಿ ಕುಣಿಯುತ್ತಿರುವಾಗ ಪ್ರೀತಿಯಿಂದ ಸಿಗುವ ಕಲ್ಲುಸಕ್ಕರೆಯನ್ನು ಸವಿಯುವುದು ಬಹು ಸೊಗಸು.
  ಮೊದಲಿನದು ತಪ್ಪಾಗಿತ್ತು. ಕ್ಷಮಿಸಿ.

  • ’ಹಸುಳೆಗೆ ಅಜ್ಜಿ’ ಎಂಬುದನ್ನು ’ಹಸುಳೆಗಜ್ಜಿ’ ಎಂದು ಸಂಧಿಯಾಗಿಸದಿದ್ದರೆ ವಿಸಂಧಿದೋಷವೆನಿಸುತ್ತದೆ. ಹೀಗೊಂದು ಸವರಣೆ. ನೀವೂ ಯತ್ನಿಸಿ.
   ಕಿಲಕಿಲ ನಗುತಲಿ ಮುದದಿಂ
   ನಲಿಯುತೆ ಪಸುಳೆಯು ಪಿತಾಮಹಿಯ ಸಾರ್ದಾಗಳ್|
   ಸಲೆ ಪೊಂದಿಹ ಮಧುಸಿತ-
   ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ||

  • ನಲಿವೆಳೆ ಹಸುಳೆಗೆ ಪಿತಾಮಹಿಯ ಬಳಿಯಲಿರಲ್|

 10. As willed by Providence, Vasudeva swapped the new born Krishna(ವಿಧು) with Yashoda’s just born daughter(ವಧು). It is as if Krishna turned into a femme in no time!
  (ಕಂಸ=)ಅಧಮಾಧಮಸರ್ವನಾಶಕಾ
  ವಿಧಿಗೈಯಲ್ ಪರಿವೇಶಮನ್ನದೋ|
  ಬುಧನಾ ವಸುದೇವಕೃತ್ಯದಿಂ (By the efforts of the wise Vasudeva)
  ವಿಧುವಾದಂ ವಧು ಬೇಗದಿಂದಲೇ||

 11. ಒಲವಿಂದೂಟಮಾಡುತ
  ಬಲುಮೆಯ ತೋರಲ್ಕೆ ಶಿಲೆಯ ಸವಿವುದೆ ಉಷ್ಟ್ರಂ
  ಸಲುಹಲ್ ಪೊಟ್ಟೆಯನಾಸ್ಟ್ರಿಚ್
  ಶಿಲೆಗಳನೇ ತಿಂದು ಬದುಕುವುದು ಬಲ್ಸೊಗಸೈಯ

 12. ಜಲದೊಳ್ ಮುಳುಂಗೆ ಕಲ್ಗಳ್
  ಮೆಲುಮೆಲ್ಲಂ ಸಮೆದು ನುಣ್ಣನಾಗುವ ಪರಿಯೇo !
  ಕಲಕಲನಲೆದು ನಲಿವ ನದಿ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ !!

  (ನದಿ ದಂಡೆಯಲ್ಲಿ ಕಾಣಸಿಗುವ ನುಣುಪು ಕಲ್ಲುಗಳ ಕಲ್ಪನೆ)

 13. ಮಧುಸೂದನನಾ ಮಹಾನಟಂ
  ದಧಿಯಂ ಮೆಲ್ಲುತಲಿರ್ದ ವೇಳೆಯೊಳ್
  ರುಧಿರಾಕ್ಷಿಯ ಮಾತೆ ಕಂಡಿರಲ್
  ವಿಧುವಾದಂ ವಧು ಬೇಗದಿಂದಲೇ

  ಕೃಷ್ಣ ಮೊಸರನ್ನು ಕದ್ದು ತಿನ್ನುತ್ತಿದ್ದಾಗ, ಕೆಂಗಣ್ಣಿನಿಂದ ನೋಡಿದ ತಾಯಿಯನ್ನು ಕಂಡು(ತಪ್ಪಿಸಿಕೊಳ್ಳಲು) ಗೋಪಿಕಾಸ್ತ್ರೀಯ ವೇಷ ತಳೆದ ಅನ್ನುವ ಪ್ರಯತ್ನ

  ಕಲೆಯಿಂ ತೋರುತೆ ಗುಡಮಂ
  ಗಿಲಿಗಿಲಿರೆನ್ನುತಲೆ ತಿಂದು ಜಾದೂಗಾರಂ
  ತಲೆಯಂದೂಗುತೆ ಪೇಳ್ದಂ
  ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸೈ

  ಜಾದೂಗಾರನೊಬ್ಬ ಕಲ್ಲೆಂದು ನಂಬಿಸಿ ಬೆಲ್ಲವನ್ನೇ ನುಂಗಿ ಹೀಗೆಂದ ಅನ್ನುವ ಯತ್ನ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)