May 082018
 

ಈ ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಮತದಾನದ ಗುರುತು

೨. ಬೆವರು

೩. ಗೋಧೂಳಿ

೪. ಪ್ರವಾಸ

  41 Responses to “ಪದ್ಯಸಪ್ತಾಹ ೩೦೬: ವರ್ಣನೆ”

  1. ಪರಮಮಂಗಳಕಾರಿ ಪರಶಿವ
    ಗರಳವನು ಗಟಗಟನೆ ನುಂಗುತ-
    -ಲಿರಿಸಿ ಕೊರಳಲೆ ಮನ್ನಿಸಿದ ದುರುಳರನು ಹಿಂದೊಮ್ಮೆ
    ಮರೆತು ಹಿಂದಿನ ಪಾಪವೆಲ್ಲವ
    ಮರಳಿ ಮತವನು ನೀಡಿ ಹರಸುತೆ
    ಬೆರಳ ತುದಿಯಲಿ ಕಾಲಗರಳವ ಜನರು ಧರಿಸಿಹರೆ?

    • Nice one sir. kaalagaraLa – arisamaasa aayte?

      • Thank you Sir_/\_..Please don’t call me “Sir” ;-).You can call me ಅನಂತ..ಗರಲ ಅನ್ನುವುದು ಸಂಸ್ಕೃತ ಶಬ್ದವೇ ಆಗಿರುವುದರಿಂದ ಅರಿಸಮಾಸವಾಗಲಾರದು ಅಂದುಕೊಂಡಿದ್ದೇನೆ(ಗರಳ ಅನ್ನುವುದು ಗರಲದ ತದ್ಭವವೋ ಅಲ್ಲವೋ ನಾನರಿಯೆ. ಅರಿಸಮಾಸ expert ನೀಲಕಂಠರು ಇತ್ತೀಚೆಗೆ ಪದ್ಯಪಾನದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾದ್ದರಿಂದ ನೀವೇ ಅಥವಾ ಇನ್ಯಾರಾದರೂ ಅರಿಸಮಾಸವೋ ಅಲ್ಲವೋ ಅಂತ ನಿರ್ಧರಿಸಬೇಕು)

        • ಕಾಲಗರಲವೆಂಬುದು ಸಾಧುರೂಪವೇ. ಗರಲ/ಗರಳ ಎರಡೂ ಸಂಸ್ಕೃತವೇ ಅನಂತ ಸರ್ 🙂 ಪದ್ಯ ಸೊಗಸಾಗಿದೆ.

        • ಅನಂತರೇ, ಅರಿಸಮಾಸವಲ್ಲವೆಂದು ಸ್ಪಷ್ಟವಾಯ್ತು. ಮುಂದೆ ಅಮೃತಸಿಗುವ ಆಶೆಯೂ ಒಂದು ಕಾರಣ ಎನ್ನುವ ಧ್ವನಿಯೂ ಇದೆ ನಿಮ್ಮ ಪದ್ಯದಲ್ಲಿ. 🙂

  2. ಮತದಾನದ ಗುರುತು: ಅದನ್ನು ’ದಾನ’ವೆಂದು ಕರೆದುದರಲ್ಲೇ ರಾಜಕೀಯಪಟುಗಳ ನಯವಂಚನೆಯಿದೆ.
    ದಾನವನ್ನೆನಿತೀವುದೆಂಬುದ-
    ಮಾನು ತಿಳಿದಿಹೆ, ಕೊಟ್ಟುತೀರುವೆ
    ಏನ ಪೇಳ್ದೇನನಿಬರೆಲ್ಲರು ಸ್ವಂತವಿಷಯವಿದು|
    ದಾನಗೈಯೊಲೊ ಮತವನೆನ್ನುತೆ
    ದೀನದಿಂ ಬೇಡುತುಮನಂತರ
    ಹೀನದೊಂದೇ ಮತವೆ ಸಾಕೆಂದೆಳೆದಿಹರು ಮಿತಿಯ||

  3. ಬೆವರ ಸುರಿಸದರಾರೊ ಕಾಣೆಂ!
    ಬವರದೊಳ್ ಕ್ಷತ್ರಿಯನು, ಶೂದ್ರಂ
    ತುವರಮಂ ಬೆಳೆವಾಗ, ವೈಶ್ಯಂ ಕರವ(Tax) ಭರಿಪಾಗಳ್|
    ಛವಿಯಿವನದೇಂ ನಿಮ್ನಮೆನದಿರಿ
    ಇವನುಮೀ ಬ್ರಾಹ್ಮಣನು ಹರಿಸುವ
    ಬೆವರ ಧಾರಾಕಾರದೊಳು ಭೋಜನವ ಗೈವಾಗಳ್||

    • ಆಹಾ.. ಚೆನ್ನಾಗಿದೆ. ಭಾಮಿನಿ ನಿಮ್ಮ ಕೈಯಲ್ಲಿ ಚೆನ್ನಾಗಿ ಪಳಗಿದ್ದಾಳೆ. ಇದು ಬೆವರು ಸುರಿಸಿ ಬರೆದದ್ದೋ ಹಾಗೆಯೇ ಬರೆದದ್ದೋ? 🙂

      • ಬೆವರು ಸುರಿಸುತ್ತ ಬರೆದದ್ದು ಎಂದಾದರೆ ಹಾದಿರಂಪರು ಊಟಮಾಡುತ್ತಲೇ ಬರೆದಿರಬೇಕು 😉

    • ಬರಿಯ ಊಟ ಮಾಡುತ್ತಿದ್ದರೆ ಬೆವರುತ್ತಿರಲಿಲ್ಲ. ಉಣ್ಣುವಾಗ ಪದ್ಯವನ್ನು ಆಲೋಚಿಸುತ್ತಿದ್ದುದರಿಂದ ಬೆವರಿದೆ. ಎಷ್ಟು ಬೆವರಿದರೂ ಪದ್ಯದಲ್ಲೊಂದು ದೋಷವನ್ನು ತಪ್ಪಿಸಲಾಗಲಿಲ್ಲ – ’ಬೆವರು’ಶಬ್ದವು ಎರಡುಬಾರಿ ಪ್ರಯುಕ್ತವಾಗಿದೆ. ನನ್ನ ದೋಷಗಳನ್ನು ತಿದ್ದಿ ಬೆಳೆಸುವ ಪರಿಣಾಮಕಾರಿವಿಮರ್ಶನಸಾಮರ್ಥ್ಯವು ಇಂದಿನ ಪದ್ಯಪಾನಪಂಡಿತರಲ್ಲಿ ಇಲ್ಲ 🙁 ಎಲ್ಲರೂ ನನ್ನಂತೆ (ಅಪ)ಹಾಸ್ಯಚಕ್ರವರ್ತಿಗಳೇ 🙂

      • ಸಹವಾಸದೋಷ 🙂
        ಪುನರುಕ್ತಿದೋಷವನ್ನು ಹೀಗೆ ಹೋಗಲಾಡಿಸಬಹುದು;
        ಇವನುಮೀಬ್ರಾಹ್ಮಣನು ಸೇದೆಯ
        ನವಿರತಂ ತಾಂ ಸುರಿಪನೈ ಭೋಜನದ ಕಾಲದೊಳು

        • ಛೆ, ರವೀಂದ್ರರನ್ನು ಹೀಗೆಲ್ಲ ಅನ್ನಬಾರದು ನೀನು. ಎಷ್ಟೇ ಆಗಲಿ ಅವರು ನಿನಗಿಂತ ಹಿರಿಯರು ಹಾಗೂ ಪದ್ಯಪಾನದಿಂದ ನಿವೃತ್ತಿಹೊಂದುವಷ್ಟು ಮುತ್ಸದ್ದಿಗಳು. ಸವರಣೆಗಾಗಿ ಧನ್ಯವಾದಗಳು.

          • 😮 ಕಾಲೆಳೆಯುವುದನ್ನು ಯಾರಾದರೂ ನಿಮ್ಮಿಂದ ಕಲಿಯಬೇಕು ಸ್ವಾಮಿ.ನಾನು ನಿಮ್ಮ ಸಹವಾಸದೋಷ ಅಂದದ್ದು.

          • @ಮಂಜ agree 🙂

          • ರಂಗನಾಥ್, ನಿವೃತ್ತಿಮಾರ್ಗದಿಂದ ಮತ್ತೆ ಪ್ರವೃತ್ತಿಮಾರ್ಗಕ್ಕೆ ಬಂದಿದ್ದೇನೆ.

      • ನನ್ನನಿಸಿಕೆ – ಪುನರುಕ್ತಿದೋಷದ ಬಗ್ಗೆ ಅತಿಚಿಂತೆ ಬೇಕಿಲ್ಲ. ಕೆಲವೊಮ್ಮೆ. ಪುನರುಕ್ತಿ ಪದ್ಯದ ಕೇಂದ್ರನಿರ್ದೇಶನಕ್ಕೆ ಸಹಾಯಕವಾಗುತ್ತದೆ. (ಉದಾ- ಗೀತೆಯಲ್ಲಿ – ಅಧ್ಯಾಯ ೨ – ಆಶ್ಚರ್ಯವತ್..) ಆದರೆ, ನಾನು ಇದರಲ್ಲಿ ಪರಿಣತನಲ್ಲ

        • ಈಚೆಗೆ ತಮಗೆ ಎರಡನೆಯ ಸಂತಾನಪ್ರಾಪ್ತಿಯಾಯಿತೆಂದು ಕೇಳಿದೆ. ’ಪುನರುಕ್ತಿವಿಷಯದಲ್ಲಿ ನಾನು ಪರಿಣತನಲ್ಲ’ ಎನ್ನುವಿರೇಕೋ! ಅದರ ಬಗೆಗೆ ’ಅತಿಚಿಂತೆ ಬೇಕಿಲ್ಲ’ವೆಂದೆ?

  4. ದಿವಸಂಗ್ರಾಮದೊಳಿಂತು ಸೋಲ್ತು ನಭದೊಳ್ ಸೂರ್ಯಂ ಲಸದ್ರಕ್ತದೀ
    ಛವಿಯಂ ಬೀರಿರಲಾತನೇರನಮರಲ್ ಭೂಲೋಕದಿಂದಾವುಗಳ್
    ಸ್ತವನೀಯಾಸ್ಪದಮಪ್ಪವೋಲೆ ಕಳಿಸುತ್ತೇಮಿರ್ಪವೇ ಧೂಳನೆಂ
    ಬುವವೋಲ್ ತೋರ್ದುದು ದಟ್ಟಮಿರ್ದು ಸೊಗದಿಂ ಗೋಪಾದಘಟ್ಟೋದ್ರಜಂ//
    ಸೂರ್ಯನು ದಿವಸದ ಸಂಗ್ರಾಮದಲ್ಲಿ ಸೋತು, ಗಾಯಗೊಂಡು ಆಕಾಶದಲ್ಲಿ ಬಿದ್ದಿರಲು, ಆತನ ಗಾಯವನ್ನು ಮುಚ್ಚಲು, ಭೂಲೋಕದಿಂದ ಹಸುಗಳು ಕಳಿಸುತ್ತಿರುವ ಧೂಳಿನಂತೆ ಗೋಧೂಳಿಯು ತೋರುತ್ತಿದೆ. ( ಗಾಯಕ್ಕೆ ಮಣ್ಣನ್ನು ಸವರಿಕೊಳ್ಳುವ ವಾಡಿಕೆ ಇದೆ)

    • ಭಾಷೆ ಕಲ್ಪನೆ ಎರಡೂ ಸಕತ್ತಾಗಿದೆ. ಇದೊಂದು ವಿಷಯಕ್ಕೆ ನನಗೆ ಕಲ್ಪನೆಗಳೇ ಗರಿಗೆದರಿರಲಿಲ್ಲ. ನಿಮ್ಮ ಪದ್ಯ ಓದಿದ ಮೇಲೆ ಸ್ವಲ್ಪ ಜೀವ ಬಂದಿದೆ 🙂

      • ಧನ್ಯವಾದಗಳು ಹೊಳ್ಳರೆ. ಸದ್ಯದಲ್ಲೇ 4 ಪದ್ಯಗಳು ಬರಲಿವೆ ಎನ್ನಿ 🙂

        • ಹಮ್… ಕಲ್ಪನೆ ಸಿದ್ಧವಾಗಿದೆ. ಅಡುಗೆ ಆಗಬೇಕು.. ವಾರದೊಳಗೆ ಬಡಿಸುತ್ತೇನೆ.

      • ಭೂಲೋಕದಿಂದ ದೇವಲೋಕಕ್ಕೆ ಸಹಾಯಹೋಗುವ ಕಲ್ಪನೆ ಚೆನ್ನಾಗಿದೆ.

  5. ಪಗಲಿರುಳೇ ವಧೂವರರಲಂಕೃತಿಯಿಂ ಬೆಸೆಯಲ್ ದಿನೇಶನೇ
    ಝಗಮಗಿಪಗ್ನಿಸಾಕ್ಷಿಯಿರಲೈದೆಯ ಪಾಡದೊ ಪಕ್ಷಿನಿಸ್ವನಂ|
    ನೆಗಳ್ತೆಯ ಗೋಪುರೋಹಿತರೆ ಸೇಸೆಯನಿಕ್ಕುವವೋಲ್ ಮನೋಹರಂ
    ಲಗುಬಗೆಯಿಂದೆವರ್ಪ ಮಿಗೆ ಗೋಗಳ ಪಾದದ ಧೂಳಿ ಬೈಗಿನೊಳ್||

    ಪಗಲಿರುಳುಗಳ ಲಗ್ನಕ್ಕೆ ಗೋವೇ ಪುರೋಹಿತನಾಗಿ ಚೆಲ್ಲಿದ ಅಕ್ಷತೆಯಂತೆ ಗೋಧೂಳಿ ಸೊಗಸಾಗಿದೆ.

    • ಚಂಪಕಮಾಲೆಯಂ ಮದುವೆಗಿತ್ತಿರೆ ವೃತ್ತದವೋಲ್ ರವೀಂದ್ರರೇ
      ಸೊಂಪಿನ ಪದ್ಯಮೈ ಚೆಲುವನಾಂತುದು ಕಲ್ಪನೆಯಿಂವಿಭಾವಿಸಲ್ /

    • ತುಂಬಾ ಸುಂದರವಾಗಿದೆ sir.

    • ಧನ್ಯವಾದಗಳು ಹರಿರಂಗಮಂಜರಿಗೆ.

  6. ಮತದಾನವಿಧಾನದೊಳಾರ್
    ಹಿತದಿಂ ಸೆಲೆ ಸಾರ್ದು ಪಾರ್ದು ಪಡೆಯೆ ಕಳಂಕಂ|
    ನುತಿಗರ್ಹರ್ ನಿಜದಕಳಂ-
    ಕಿತರೇ ನೆನೆಯಲ್ ಪ್ರಜಾಪ್ರಭುತ್ವವ ಕಾಯ್ವರ್||

  7. ಪ್ರವಾಸ:

    ತಂದೆಯ ಕಾಡಿಸಿ ಬಂದೆಂ
    ಮಿಂದೆಂ ನೀರೊಳ್, ಸಮುದ್ರದೆಸಕಂ ಕಂಡೆಂ |
    ಚಂದಮದು ಸ್ಮೃತಿ ಮಹದಾ-
    ನಂದಂ ಸ್ನೇಹಿತರ ಜೊತೆಯ ಶಾಲಾ ಯಾನಂ ||

    • ಪದ್ಯ ಚೆನ್ನಾಗಿದೆ, ಶ್ರೀಹರಿಯವರೇ. ಎರಡು ಮತ್ತು ನಾಲ್ಕನೆಯಸಾಲುಗಳಲ್ಲಿಛಂದಸ್ಸು ಎಡವಿದೆ. 2/4 ನೆಯ ಸಾಲಿನ 3ನೆಯ ಗಣಸರ್ವಲಘುವಾದಾಗ, ಮೊದಲನೆಯ ಅಕ್ಷರಕ್ಕೆಯತಿಸ್ಥಾನ ಬರಬೇಕು. ಉದಾಹರಣೆಗೆ ನಿಮ್ಮ ಪದ್ಯವನ್ನೇ ತೆಗೆದುಕೊಳ್ಳುವುದಾದರೆ;
      ಮಿಂದೆಂ ನೀರಿನೊಳು, ತೆರೆಗಳಂ….ಹೀಗೇನಾದರೂ ಮಾಡಬೇಕು. ಕೊನೆಯಪಾದದಲ್ಲಿಯೂ ಹೀಗೆಯೇ ಮಾಡಬೇಕಾಗುತ್ತದೆ . ಆನಂದಂ-ಅಂತಿಮ ಎಂಬಲ್ಲಿ ವಿಸಂಧಿದೋಷವಾಗಿದೆ, ಆನಂದಮಂತಿಮ ಎಂದಾಗಬೇಕು.

      • ತುಂಬಾ ಧನ್ಯವಾದಗಳು ಮಂಜ ಸರ್ (ಕ್ಷಮಿಸಿ ನಿಮ್ಮ ಪೂರ್ಣ ಹೆಸರು ನನಗೆ ತಿಳಿಯದು). ಪದ್ಯವನ್ನು ತಿದ್ದಿದ್ದೇನೆ. ಮತ್ತೂ ತಪ್ಪಿದ್ದಲ್ಲಿ ದಯವಿಟ್ಟು ತಿಳಿಸಬೇಕು.

        • :mrgreen: ನನ್ನನ್ನು ಮಂಜ ಎಂದೇ ಸಂಬೋಧಿಸಿ. ಪದ್ಯ ಇದೀಗ ಸರಿಹೋಯಿತು, ಅಭಿನಂದನೆಗಳು.

    • ಹರಿ, ಮಿಂದೆಂ ನೀರೊಳ್, ಸಮುದ್ರದೆಸಕಂ ಕಂಡೆಂ | ಎಂದು ಮಾಡಬಹುದು. ನೀರೊಳು – ಹಳಗನ್ನಡಕ್ಕೆ ಒಗ್ಗಿ ಬರುವುದಿಲ್ಲ.

      • ತಿದ್ದಿದ್ದೇನೆ ಸರ್. ಧನ್ಯವಾದಗಳು.

      • ಹಮ್.. ಎಸಕಂ ಪ್ರಥಮಾ ವಿಭಕ್ತಿ. ಸರಿಯಾಗಬೇಕಾದರೆ ಎಸಕಮಂ ಎಂದಾಗಬೇಕು. ಸಧ್ಯಕ್ಕೆ. ಸಮುದ್ರದೆಸಕವ ಕಂಡೆಂ ಎಂದು ಮಾಡಬಹುದು.

  8. ಆಶ್ಚರ್ಯ! ’ಗೋಧೂಲಿ’ಶಬ್ದವು ಮೋನಿಯರ್-ಆಪ್ಟೆಗಳಲ್ಲಿ ಇಲ್ಲ.

  9. ನಾನು ಈ ಹಿಂದೆ ಮಾಡಿದ್ದ ಸಮಸ್ಯಾಪೂರಣವೊಂದರಲ್ಲಿ (ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ ಇರ್ವರೇ? – http://padyapaana.com/?p=1422) ಆನುಷಂಗಿಕವಾಗಿ ಗೋಧೂಲಿಯ ಪ್ರಸ್ತಾವವಿದೆ. ಇಲ್ಲಿ ಅದನ್ನೇ ಹಾಕುತ್ತೇನೆ.

    When Rama left for the forest, greatly pained that Dasharatha was, he stayed back in his palace. The trees of the forests envied:
    1) the citizens of Ayodhya who walked a distance alongside Rama to see him off,
    2) the mud they raised in their wake that also seemed to follow the Lord (per Bhojaraja),
    3) Guha who served as the Lord’s navigator across the river etc.
    4) The lamenting Bharata who subsequently met him, expressed his love and brought back Rama’s pAdukA,

    They tell Rama that as they are unable to escort him, they have communicated among their fraternity (ಜಾತ್ಯರೊಳ್) through the medium of wind, that they shall take turns (ಪರ್ಯಾಯ) to keep Rama-Seeta-Lakshmana cool.
    ಸುತನೈದಲ್ ವನಕಂ, ಪಿತಂ ದಶರಥಂ| ಪ್ರಾಸಾದದೊಳ್ನಿಂತೊಡೇಂ
    ಶತದೋಪಾದಿ ಜನರ್ ಸುದೂರದನಕಂ| ಹಿಂಬಾಲಿಸುತ್ತಿರ್ದಿರಲ್
    ಸಿತವರ್ಣಂ ತಿರುಗುತ್ತೆ ಭೂಕಣಗಳುಂ| ಭೂಭರ್ತನಂ ಸಾರಿರಲ್
    “ಗತಿಯಾರ್”ಎಂದೆನುತಾ ಸುಮಿತ್ರೆಯ ಸುತಂ| ಭ್ರಾತೃತ್ವಮಂ ತೋರಿರಲ್
    ಹಿತ ತೋರ್ದನ್ ಗುಹನೆಂತೊ ಪುಣ್ಯಪುರುಷನ್| ಪಾರಂಗೆ ತಾ ನಾವಿಕಂ
    “ಹತಭಾಗ್ಯರ್ ಗಡ ಚಾಲ್ತಿಯಿಲ್ಲೆಮಗಿದೋ| ಸಂದೇಶಮಂ ಜಾತ್ಯರೊಳ್
    ಹಿತನೀಡಲ್ ಕಳಿಸಿರ್ಪೆವಾವ್ ಪವನನೊಳ್| ಪರ್ಯಾಯದೆಂ”ದಾ (ಪರ್ಯಾಯದೆ ಎಂದ ಆ) ವನ-
    ಸ್ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇ ಇರ್ವರೇ?

    • ಚೆನ್ನಾಗಿದೆ. ಆದರೆ ಸಮಸ್ಯೆಗೆ ಪರಿಹಾರ ೨ ಪದ್ಯದಿಂದಲೇ?

  10. Any point on earth is in the centre of the earth!
    ವಾಯುಯಾನದೆ ಮೇಣಿತರದೆಲ್ಲ ವಾಹನದೆ
    ನಾಯವೋಲಲೆದಿರ್ಪೆ ನೀನೆನ್ನದಿರ್|
    ರಾಯ ನೀಂ ಭೂಮಧ್ಯದಿಂದೆ ಭೂಮಧ್ಯಕ್ಕೆ
    ಹಾಯೆ ಪ್ರವಾಸವದು ಎಂತಾಯ್ತೊ ಪೇಳ್??

  11. ನಮಿಸುವೆಂ ಕೃತುಶಕ್ತಿಗಂ ಸಮೆಸುತಲ್ ಧರೆಯ-
    ನಮರಿಸಿದ ಬೆಮರೇ ಸಮುದ್ರಸಮನಾದುದೋ|
    ರಮಿಸುತ್ತಲಾನ್ನಿನ್ನ ಮನೆಯೊಳಗೆ ಸುರಿಸಿದೀ
    ಬೆಮರಪನಿ ಆ ಶಕ್ತಿಗಾನಿತ್ತ ತರ್ಪಣಂ||

    ಕರ್ತೃವಿನ ನಿರ್ಮಾಣಕಾರ್ಯದಲ್ಲಿ ಸುರಿಸಿದ ಬೆವರೇ ಸಮುದ್ರವಾಯ್ತೇನೋ? ಅಂಥವನಿಗೆ ನನ್ನ ಬೆವರ ಹನಿಯೇ ತರ್ಪಣವಿತ್ತಂತೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)