May 212018
 

೧.  ಇಂದ್ರವಜ್ರ ಛಂದಸ್ಸಿನ ಸಮಸ್ಯೆ

ಮುಂಗಾರೊಳುಂ ರೈತನತೃಪ್ತನಲ್ತೇ

೨. ಕಂದಪದ್ಯದ ಸಮಸ್ಯೆ

ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್

  104 Responses to “ಪದ್ಯಸಪ್ತಾಹ ೩೦೮: ಸಮಸ್ಯಾಪೂರಣ”

 1. ಬೆಂಗಾಡೆನಲ್ಕುತ್ತರ ಭಾಗಮೇ ತಾಂ
  ಭಂಗಂಗೊಳಲ್ಕಾರ್ ಕರುನಾಡೊಳೇಗಳ್
  ಪಿಂಗುತ್ತೆ ನಿರ್ಧಾರಕೆ ಬಾರದಂತೇ
  ಮುಂಗಾರೊಳುಂ ರೈತನತೃಪ್ತನಲ್ತೇ
  ಉತ್ತರಕರ್ನಾಟಕದ ಭಾಗ(ಬಯಲುಸೀಮೆ)ದಲ್ಲಿ ಯಾವಗಲೂ ಮಳೆಯ ಅನಿಶ್ಚಿತತೆಕಾಡುವುದರಿಂದ ಮುಂಗಾರಿನಲ್ಲಿಯೂ(ಆ ಸಮಯದಲ್ಲೂ ) ರೈತ ಅತೃಪ್ತನಾದ.

  ಉಡುಗಿಸಿ ರಾಕ್ಷಸಬಲಮಂ
  ಪಡಲ್ವಡಿಸಲ್ಕಿಂದ್ರವಜ್ರಕಂ ಸೈಲೆನ್ಸರ್
  ತುಡಿಸುತ್ತೆ ಝಳಪಿಸಲ್ ಕಾಣ್
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್/
  ಇದು ವಿನೋದಾರ್ಥವಾಗಿ ಮಾಡಿದ ಪೂರಣ. ಈಗಿನ ರಿವಾಲ್ವರ್ಗಳಂತೇ ಒಂದುವೇಳೆ ಇಂದ್ರನ ವಜ್ರಾಯುಧಕ್ಕೆ ಸೈಲೆನ್ಸರ್ ವ್ಯವಸ್ಥೆ ಬಂದರೆ ಆತನ ವಜ್ರದ ಝಳಪಿಸುವಿಕೆಯಿಂದ ಉಂಟಾಗುವ ಮಿಂಚು-ಗುಡುಗುಗಳಲ್ಲಿ ಮಿಂಚೊಂದೇ ಕಾಣಿಸಿಕೊಳ್ಳುತ್ತದೆ , ಆದರೆ ಗುಡುಗು ಕೇಳಬರುವುದಿಲ್ಲ.

 2. ಜಡಿಮಳೆಯುಂ ಜಿನುಗುತಿರಲ್
  ನಡುಮನೆಯೊಳ್ ಚಲಿತ ದೂರದರ್ಶನದೊಳ್, ಸೊ-
  ಲ್ಲಡಗಿಸಿರಿಸಿರಲದಂ ಗಡ
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್ !!

  mute ಮಾಡಿದ TV ಯಲ್ಲಿ ಕಂಡ ಮಳೆಯ ದೃಶ್ಯ !!

  • Fine. (ದೂರದರ್ಶಕ)

   • ಚೆನ್ನಾಗಿದೆ ಮೇಡಂ

   • ಧನ್ಯವಾದಗಳು ಪ್ರಸಾದ್ ಸರ್ , ಮಂಜು

    ಜಡಿಮಳೆಯುಂ ಜಿನುಗುತಿರಲ್
    ನಡುಮನೆಯೊಳ್ ಚಲಿತ ದೂರದರ್ಶಕದೊಳ್, ಸೊ-
    ಲ್ಲಡಗಿಸಿರಿಸಿರಲದಂ ಗಡ
    ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್ !! ;

  • ಚೆನ್ನಾಗಿದೆ. ಡಿಡಿಯಲ್ಲಿ ಮಿಂಚಾದರೂ ಬಂದರೆ ನೋಡಬಹುದು 🙂 silent mode ಗೆ ಕನ್ನಡದಲ್ಲಿ ಇನ್ನೂ ಚಿಕ್ಕದಾದ ಪದ ಯಾವುದು ಸಾಧ್ಯ?

   • ಸೈಲೆಣ್ಟ್ಮೋಡ್! ’ಮೌನಿತ’ ಎನ್ನಬಹುದು

   • “ಮೌನಿತ ” ಚೆನ್ನಾಗಿದೆ . ಹಳಗನ್ನಡಕ್ಕೆ ಮೂಗವಡು / ಮೂಗವಟ್ಟ ಸರಿಯಾಗುದೆ ?

 3. ಅತಿವೃಷ್ಟಿ-ಅನಾವೃಷ್ಟಿ!
  ಕೌಂಗಂ ಮಗುಳ್ ಶಾಲಿಯ ಸೇಚಿಸಲ್ಕೇಂ (Areca & Paddy)
  ಪಾಂಗಿಂದೆ ಕಾದಿರ್ಪುದೆ ವಾರಿವಾಹಂ (Cloud)|
  ಭಂಗಂ ಫಲಂ ಪೆರ್ಚುತೊ ಸಾಲದೋ ನೀರ್
  ಮುಂಗಾರೊಳುಂ ರೈತನತೃಪ್ತನಲ್ತೇ||

  • ಚೆನ್ನಾಗಿದೆ

  • ಚೆನ್ನಾಗಿದೆ. ಪೆರ್ಚುತಲಾರುತಲ್ ನೀರ್ ಮಾಡಿದರೆ ಹೇಗಿರುತ್ತದೆ?

   • ಅನಾವೃಷ್ಟಿ ಎಂದರೆ, ಮೂಲದಲ್ಲೇ ಕೊರತೆ ಎಂಬರ್ಥ. ’ಆರುವ’ ಎಂದರೆ (ಮಳೆಯು)ಹೊಯ್ದಮೇಲೆ ಆಗುವಂಥದ್ದು. ಅತಿ-ಅನಾ ಎಂಬ ವೈಪರೀತ್ಯಕ್ಕೆ(contrast) ಹೊಂದದು.

 4. ಪಿಡಿದುಂ ವೇದಾಂತಗಳಂ
  ಪೊಡವಿಯ ಸರ್ವದೆಸೆಯೊಳ್ ತಿರುಗಿಯಾನಂದಂ (ಬ್ರಹ್ಮಾನಂದಂ)|
  ಪಡೆಯಲ್ ಶಂಕರ ಯತಿಗಳ್
  ಗುಡುಗಿಲ್ಲದೆ ಮೂಡಿತಲ್ತೆ (ಅದ್ವೈತಮೆಂಬಾ) ಮಿಂಚಿನ ಗೊಂಚಲ್ ||

  • ಶ್ರೀಹರಿಯವರೇ,ಚೆನ್ನಾಗಿದೆ. ಆದರೆ ಅಲ್ಲಿ ‘ಅದ್ವೈತಮೆಬಾ ಮಿಂಚು’ ಎಂದು ನೀವು ಬರೆಯದೆ ಬಗೆಹರಿಯುವುದಿಲ್ಲ. ಅದು ಗುಡುಗಿಲ್ಲದೇ ಮೂಡಿದ್ದು ಹೇಗೆಂಬದನ್ನು ಸ್ವಲ್ಪ ವಿವರಿಸುವಿರಾ?

   • ನಾನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೆ ಕ್ಷಮಿಸಿ ಸರ್.

    ಮಿಂಚು ನಮಗೆ ಬೆಳಕು ಕೊಡುವ ವಸ್ತು. ಆದರೆ ‘ಗುಡುಗು’ ಹೆದರಿಸುವ ವಸ್ತು. ಇತಿಹಾಸವನ್ನು ಪರೀಕ್ಷಿಸಿದಾಗ ಬಹುತೇಕ ತತ್ವಶಾಸ್ತ್ರಗಳು – ಅದರಲ್ಲಿಯೂ ಧಾರ್ಮಿಕವಾದುವು – ಗುಡುಗಿಕೊಂಡೇ ಮಿಂಚಿವೆ (ಕೆಲವೊಮ್ಮೆ ಮಿಂಚಿನ ನಂತರ ಗುಡುಗಿರಬಹುದು). ಆದರೆ ಶಂಕರರ ಸಿದ್ದಾಂತ ಯಾರನ್ನೂ ಹೆದರಿಸದೆಯೇ ಮಿಂಚಿದೆ ಎಂಬುದು ನನ್ನ ಅಭಿಪ್ರಾಯ.

    ನಾನು ತಮಗಿಂತಲೂ ತುಂಬಾ ಚಿಕ್ಕವನು (ಜ್ಞಾನದಲ್ಲಂತೂ ಖಂಡಿತವಾಗಿ). ದಯವಿಟ್ಟು ನನ್ನನ್ನು ಏಕವಚನದಲ್ಲಿ ಸಂಬೋಧಿಸಿ.

    • ಕ್ಷಮೆಯ ಮಾತೇಕೆ? ನಾನು ನಿಮ್ಮ ಪದ್ಯದ ತಾತ್ಪರ್ಯವನ್ನು ಕೇಳಿದ್ದು ಅಷ್ಟೇ. ಅಲ್ಲಿಯೂ ಶಂಕರರು ಅದ್ವೈತಮತಪ್ರತಿಪಾದನೆಗಾಗಿ ಅನೇಕಾನೇಕ ವಿದ್ವಾಂಸರನ್ನು ವಾದಗಳಲ್ಲಿ ಸೋಲಿಸಿದ್ದರಲ್ಲವೇ? ಅದೂ ಒಂದರ್ಥದಲ್ಲಿ ಗುಡುಗೇ ಎಂಬುದು ನನ್ನ ಅಭಿಪ್ರಾಯ. ಅದೇನೇ ಇರಲಿ, ಪದ್ಯದ ತಾತ್ಪರ್ಯ ಪೂರ್ತಿಯಾಗಿ ಪದ್ಯದಲ್ಲೇ ಬರಬೇಕು. ವಿವರಣೆ ಅದಕ್ಕೆ ಪೂರಕವಾಗಿರಬೇಕು. ತಾತ್ಪರ್ಯದಲ್ಲೇ ಪೂರಣ ಮಾಡುವಂತಿಲ್ಲ. 🙂

     • ಧನ್ಯವಾದಗಳು ಸರ್. ಮುಂದಿನ ಬಾರಿ ಸರಿಪಡಿಸುತ್ತೇನೆ.

  • ಚೆನ್ನಾಗಿದೆ. ನಿಮ್ಮ ಭಾವಾರ್ಥವನ್ನು ಕಂದಕುಕ್ಷಿಯಲ್ಲಿ ಜೋಡಿಸುವುದು ಸ್ವಲ್ಪ ಕಷ್ಟ ಅನಿಸುತ್ತದೆ.

  • 1. ಸರ್ವದೆಸೆ – ಅರಿಸಮಾಸ. ಸರ್ವದಿಶೆಯೊಳ್ ಎಂದು ಸವರಬಹುದು
   2. ಆನಂದಂ ಪಡೆಯಲ್ = ಆನಂದವು ಪಡೆಯಲ್. ಆನಂದಮಂ ಪಡೆಯಲ್ ಎಂದಾಗಬೇಕು. ಉಕರಾಂತಶಬ್ದಗಳಲ್ಲಿ ಸಾಧ್ಯವಾಗುವ ಸಂಕ್ಷಿಪ್ತತೆಯು (ಹಾವು > ಹಾವಂ) ಅಕಾರಾಂತಶಬ್ದಗಳಿಗೆ ನುಸುಳದಂತೆ (ಸರ್ಪ > ಸರ್ಪಮಂ; not ಸರ್ಪಂ) ಎಚ್ಚರವಹಿಸಬೇಕು.
   3. ಶಂಕರ ಯತಿಗಳ್ – ಶಂಕರಯತಿಗಳ್ ಎಂದು ಸೇರಿಸಿ ಬರೆಯುವುದೊಳ್ಳೆಯದು (ಪೂರ್ವಪದಕ್ಕೆ ಪ್ರತ್ಯಯವಿಲ್ಲದಿರುವುದರಿಂದ)
   4. ಸಮಸ್ಯಾಪಾದವನ್ನು ಎರಡನೆಯ ಪಾದವಾಗಿ ಇರಿಸಿಕೊಂಡರೂ, ’ಅದ್ವೈತಮೆಂಬ’ ಎಂಬುದನ್ನು ಪದ್ಯದಲ್ಲಿ ತರಲಾಗದು. ಅಜ್ಞಾನವೆಂಬ ಕಾರ್ಮೋಡವು ಪಸರಿಸಿರುವಾಗ, ನೀತಿಯುತವಾಗಿ ನಡೆದ ಶಾಸ್ತ್ರವಾದಗಳ ಮೂಲಕ ಶಂಕರರು ಅದ್ವೈತಸಿದ್ಧಾಂತವನ್ನು ನೆಲೆಯಾಗಿಸಿದಾಗ ಗುಡುಗಿಲ್ಲದೆ…. ಎಂದೇನಾದರೂ ಮಾಡಬೇಕು.

 5. ಗಂಗಾವತಾರಂ ಸುರಿದಿರ್ದ ಸೆಲೆಸಂದ ವರ್ಷಂ
  ಬಂಗಾರಮೀಯ್ಗುಂ ತಿರೆಯೀ ಫಸಲ್ಗಂ
  ಹಂಗಿಂದೆ ಜೂಜೊಳ್ ಕಳೆದಿರ್ದನೆಲ್ಲಂ
  ಮುಂಗಾರೊಳುಂ ರೈತನತೃಪ್ತನಲ್ತೇ

  [ಜೂಜಿನಲ್ಲಿ ಎಲ್ಲವನ್ನೂ (ಭೂಮಿಯನ್ನೂ) ಕಳೆದುಕೊಂಡ ರೈತ ಬಂಗಾರದ ಫಸಲೀವ ಮುಂಗಾರಿನಿಂದ ಅತೃಪ್ತನಾದ]

  • ತುಂಬ ತುಂಬ ಚೆನ್ನಾಗಿದೆ. ‘ಗಂಗಾವತಾರ’ ಅಂದರೇ ಭೂಮಿಗಿಳಿಯುವುದಲ್ಲವೇ? ಗಂಗಾವತಾರಂ ಸಲೆಸಂದ ವರ್ಷಂ ಅಂತೇನಾದರೂ ಮಾಡಬಹುದೇನೋ.

  • ಭಾರೀ ಪೂರಣ ರಾಮ್. ಉತ್ತರಕನ್ನಡದಲ್ಲಿ ತೋಟವನ್ನು ಮಾರಿಕೊಂಡು, ನಂತರ ಬೇಸರಪಟ್ಟವರ ಕತೆ ಕೇಳಿದ್ದೇನೆ. ಅಂತೆಯೇ ಇದೆ.

 6. ಸುಡುವ ಸಮಸ್ಯೆಯ ಮೋಡವ-
  ದಡರುತೆ ಪರಿಹಾರವರ್ಷಕಾಣದೆ ದಣಿಸಲ್
  ಗಡ, ಕವಿಮನದಂಬರದೊಳ್
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್||

  ಇಲ್ಲಿ ಮಿಂಚು ಎಂದರೆ ಹೊಳಹು ಮತ್ತು ಗುಡುಗದೆ ಅಂದರೆ ಯಾವ ಮುನ್ಸೂಚನೆಯೂ ಇಲ್ಲದೆ ಎನ್ನುವ ತರಹ ಬಳಸಿದ್ದೇನೆ.

  • ಸುಡುವ ಸಮಸ್ಯೆಯ ಮೋಡವ-
   ದಡರುತೆ ಪರಿಹಾರವರ್ಷವೀಯದೆ ದಣಿಸಲ್
   ಗಡ, ಕವಿಮನದಂಬರದೊಳ್
   ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್||

 7. ತಂಗಾಳಿಯೋ ಮೇಣ್ “ಪ್ರಭುಸಾಲಮನ್ನಾ”
  ಶೃಂಗಾರವೋ ಕೇಳ್ ಪ್ರಭುವಿತ್ತ “ಭಾಗ್ಯಂ”|
  ಹಂಗಾದ ಬಾಳೊಳ್ ನಗೆಯುಂಟೆ? ಎಂದುಂ
  ಮುಂಗಾರೊಳುಂ ರೈತನತೃಪ್ತನಲ್ತೇ||

  ಸರಕಾರೀ ಸವಲತ್ತನ್ನೇ ಹಾರೈಸುವ ರೈತನಿಗೆ, ಮುಂಗಾರಿನ ಮೇಲೂ ಲಕ್ಷ್ಯವಿರುವುದಿಲ್ಲವೆಂಬ ತಾತ್ಪರ್ಯ.

 8. ಸಂಗೀತಸಾರಂ ಪರಮಾನ್ನಭಕ್ಷ್ಯಂ
  ಮುಂಗೋಪಿಗೀಯಲ್ ಮಿಗೆ ತೃಪ್ತನಾಗನ್ |
  ತಂಗಾಳಿಯೀಗಳ್ ಕುಳಿರೆಂದು ಸುಯ್ವಂ
  ಮುಂಗಾರೊಳುಂ ರೈತನತೃಪ್ತನಲ್ತೇ ||

  [ಯಾವುದರಲ್ಲೂ ತೃಪ್ತಿಯಿಲ್ಲದ ಮುಂಗೋಪಿಯಾದ ರೈತ ಮುಂಗಾರಿನಲ್ಲಿ ಚಳಿ ಎಂದು ಕೊರಗುವನು]
  [ಹೊಳ್ಳರ ಪೂರಣಕ್ಕೆ ಸಮೀಪವಾದದ್ದು]

  • ಅಷ್ಟು ಸಮೀಪದಲ್ಲಿ ಒತ್ತಲಿಸಿಕೊಂಡರೆ ಛಳಿಯಾಗದು 🙂

 9. ಸಿಂಗಾಪುರಕ್ಕಂ ಮೆರೆಯುತ್ತೆ ಪೋದಳ್
  ಹಂಗಿಲ್ಲದಂತೋಲ್ ಕೆಳೆಯರ್ಕಳೊಟ್ಟೊಳ್
  ಸಂಗಾತಿಯಿಲ್ಲೆನ್ನುತೆ ನೂರು ಪಾಂಗಿಂ
  ಮುಂಗಾರೊಳುಂ ರೈತನತೃಪ್ತನಲ್ತೇ ||

  [ಗೆಳೆಯರ / ಗೆಳತಿಯರ ಜೊತೆಗೂಡಿ ಯಾವ ಹಂಗಿಲ್ಲದಂತೆ ಸಿಂಗಾಪುರಕ್ಕೆ ಹೋದ ಪತ್ನಿಯ ವಿರಹದಿಂದ ಮುಂಗಾರಿನಲ್ಲಿಯೂ ನೂರು ರೀತಿಯಲ್ಲಿ ರೈತ ಅತೃಪ್ತನಾದ]

  • ಮುಂಗಾರೊಳೇಂ ಮಾತ್ರಮೆ ಪೇಳ್ ವಿಯೋಗಂ?
   ಹಿಂಗಾರೊಳುಂ ಮೇಣ್ ಛಳಿಗಾಲದೊಳ್, ಮೇಣ್|
   ಹೆಂಗೂಸು ಪೋದಾಗಿರೆ ಗ್ರೀಷ್ಮಕಾಲಂ
   ಹಂಗಾರೆ-ಹಿಂಗಾರೆ ಕೊರಂಗುವಂ ತಾಂ||
   (ಇದು ಋತುಗಳನ್ನಾಶ್ರಯಿಸಿದ ಪ್ರತಿಕ್ರಿಯಾಪದ್ಯ. ಇಂತೆಯೇ ದೇಶವನ್ನಾಶ್ರಯಿಸಿ ಹೇಳಬಹುದು – ಅವಳು ಸಿಂಗಾಪುರಕ್ಕಲ್ಲದೆ ಅಮೆರಿಕಾದಿಗಳಿಗೆ ಹೋಗಿದ್ದರೂ ಅವನು ವಿರಹಿಯೇ!)

   • ಅಮೇರಿಕಕ್ಕೆ ಪ್ರಾಸ ಹೊಂದಿಸಿ ಕೊಡಿ. ಅಲ್ಲಿಗೇ ಕಳಿಸೋಣ. 🙂

    • ಆಶುಕವಿಗಳಿಗೆ ಗಣಕಯಂತ್ರಪದ್ಯಕಾರನು ಹೇಳಿಕೊಡಬೇಕೆ?

 10. ಅಂಗಾರಮಾಗಲ್ ತಿರೆಗಾಯುತಿರ್ದಾ
  ಕಂಗೆಟ್ಟ ರೈತಂ ಸಿನೆಮಾಕ್ಕೆ ಪೋದನ್ |
  ಶೃಂಗಾರದೊಳ್ ನಾಯಿಕೆ ತೋಯ್ದರೇನೈ
  ಮುಂಗಾರೊಳುಂ ರೈತನತೃಪ್ತನಲ್ತೇ ||

  [ಬರಗಾಲವಿರುವಾಗ “ಮುಂಗಾರು ಮಳೆ” ಚಿತ್ರಕ್ಕೆ ಹೋದ ರೈತನ ಪಾಡು]
  [ಭಾಷೆ ಸ್ವಲ್ಪ ಶಿಥಿಲವಾಗಿದೆ. ರಸಿಕರು ಮನ್ನಿಸುವುದು :-)]

 11. ಬೆಂಗಾವಲಾತಂ ಪರಿವಾರಕಂ ತಾಂ
  ಮುಂಗೇಣಿಯಿತ್ತುo ವ್ಯವಸಾಯಗೈಯ್ವನ್
  ಕಂಗೆಟ್ಟನಾಗಳ್ ಕೆಡುವಾಗೆ ಸ್ವಾಸ್ಥ್ಯo
  ಮುಂಗಾರೊಳುಂ, ರೈತನತೃಪ್ತನಲ್ತೇ||

  ತನ್ನ ಕುಟುಂಬಕ್ಕೆ ಬೆಂಗಾವಲಾದವ , ಗೇಣಿಗೆ ಹೊಲವನ್ನು ಕೊಂಡು ಉಳುವವ – ರೈತ ಮುಂಗಾರ ಸಮಯದಲ್ಲಿ ಅಸ್ವಸ್ಥನಾಗಲು , ಕಂಗೆಟ್ಟು ಅತೃಪ್ತನಾಗುವನಲ್ಲವೇ ?

  • ತುಂಬಾ ಚೆನ್ನಾಗಿದೆ. ನೀವು ಕೃಷಿಕರೇ ಇರಬೇಕು . 🙂 “ಮುಂಗೇಣಿಯಿತ್ತುo” – ತುಂಬಾ ಸುಂದರ ಪ್ರಯೋಗ.

   • ಧನ್ಯವಾದಗಳು ರವೀಂದ್ರ . ಹೌದು , ಅಜ್ಜಿಮನೆ- ತೋಟದಮನೆ, ಬೆಳೆದದ್ದು ಹಳ್ಳಿ ವಾತಾವರಣ , ಸೇರಿದ್ದು ರೈತ ಕುಟುಂಬ , ಈಗ ತೋಟದ ಒಡತಿ !!

   • “ಮುಂಗಾರು” ~ ಮುಂದಿನ + “ಗಾರು (=ಸಂಕಟ )” ಎಂದಾಗುವುದಾದರೆ ಪೂರಣ ಹೆಚ್ಚು ಸೂಕ್ತವಾಗುವುದಲ್ಲವೇ ?

  • ಸ್ವಲ್ಪ ಬದಲಾವಣೆಯೊಂದಿಗೆ :

   ಬೆಂಗಾವಲಾತಂ ಪರಿವಾರಕಂ ತಾಂ
   ಮುಂಗೇಣಿಯಿತ್ತುo ವ್ಯವಸಾಯಗೈಯ್ವನ್
   ಕಂಗಾಲುಗೊಂಡಂ ಬೆಳೆನಾಶವಾಗಲ್
   ಮುಂಗಾರೊಳುಂ, ರೈತನತೃಪ್ತನಲ್ತೇ||

   • * ಬೆಳೆನಾಶಮಾಗಲ್

    • ಬೆಳೆನಾಶ -ಅರಿಯಾಯ್ತು 🙂

    • * ಬೆಳೆ ಪಾಳ್ಗೆಡಲ್ ಗಡ !!

     ಬೆಂಗಾವಲಾತಂ ಪರಿವಾರಕಂ ತಾಂ
     ಮುಂಗೇಣಿಯಿತ್ತುo ವ್ಯವಸಾಯಗೈಯ್ವನ್
     ಕಂಗಾಲುಗೊಂಡಂ ಬೆಳೆ ಪಾಳ್ಗೆಡಲ್ ಕಾಣ್
     ಮುಂಗಾರೊಳುಂ, ರೈತನತೃಪ್ತನಲ್ತೇ ||

 12. ಬಿಡದಂತೆಯೆ ಮಳೆಗರೆಯಲ್
  ಚಡಪಡಿಸುತ್ತಿರ್ದರೆಲ್ಲರಾತಂಕದೊಳಿಂ |
  ಕಡುಕಿವುಡಾಗಿರ್ದವಗಂ
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್ ||

  • ಸಂಖ್ಯೆ 2ರ muteಪದ್ಯದಿಂದ ಪಡೆದುಕೊಂಡ dumbಐಡಿಯ ಇದು 🙂

   • ನಿಮ್ಮ deaf &dumb linking ಬಹಳ like ಆಯ್ತು ಪ್ರಸಾದ್ ಸರ್ , ಆದರೆ dumb ನ dumb ಅಂದರೆ “ಬಿ ಸೈಲೆಂಟ್ “ಆಗಬೇಕಲ್ಲವೇ ?!!

 13. ತಡಮಾಡಿರ್ದೊಡಮಿನಿಯಂ
  ಸುಡುತಿರ್ದಪಳಾಕೆ ಕೆಂಡದಂತಾಗುತ್ತುಂ |
  ಬಡಬಡಿಸುವಪಂಗಂ ಮೊದಲೊಳ್
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್ ||

  [ಇನಿಯ ತಡಮಾಡಿದ್ದರಿಂದ ಆಕೆ ಸುಡುತ್ತ ಕೆಂಡದಂತಾಗಿದ್ದಳು. ಬಡಬಡಿಸುವ ಅವನಿಗೆ, ಮೊದಲಿನಲ್ಲಿ ಗುಡುಗಿಲ್ಲದ ಮಿಂಚಿನಂತೆ ಅವಳು ಕಂಡಳು. ಮಿಂಚು ಮೊದಲು ಕಾಣುತ್ತದೆ. ನಂತರ ಗುಡುಗು ಕೇಳುತ್ತದೆ]

  • ’ಮಾಡಿರ್ದೊಡಂ’ ಎಂದರೆ ’ಮಾಡಿದ್ದರೂ’ ಎಂದೇ ಸಾಮಾನ್ಯವಾಗಿ ಗ್ರಹಿಕೆಯಾಗುವುದರಿಂದ ಮಾಡಿರ್ದಿರಲ್ (ತಡಗೈದಿರ್ದಿರಲಿನಿಯಂ) ಎಂದರೆ ನಿಸ್ಸಂದಿಗ್ಧ. ಎಲ್ಲ ಪದ್ಯಗಳ ಕಲ್ಪನೆ ಚೆನ್ನಾಗಿದೆ.

   • ಮಾಡಿರ್ದಿರಲ್ ಪ್ರಯೋಗ ಸಮಂಜಸವಲ್ಲವೆಂದು ತೋರುತ್ತದೆ. ಮಾಡಿರ್ಪಿನಂ ಎಂಬುದು ಸೂಕ್ತ.

   • ’ಮಾಡಿರ್ದೊಡಂ’ ಎಂದರೆ “ತಡ ಮಾಡಿರಲಾಗಿ” ಎಂದು ಸ್ಫುರಿಸುವುದಿಲ್ಲವೇ?

  • ಬಡಬಡಿಸುವಗಂ – ಬಳಕೆ ಸರಿ ಇದೆಯೇ?

   • ಬಡಬಡಿಸುವುದು ಎಂದರೆ ಏನೇನೋ ಹಲುಬುವುದು ಎಂಬರ್ಥವಿದೆ. ಅದ್ದರಿಂದ ‘ಬಡಬಡಿಸುವಗಂ’ ಎಂದರೆ ಬಡಬಡಿಸುವವನಿಗೆ ಎಂಬರ್ಥದಲ್ಲಿ ಬಳಸಿದ್ದೇನೆ

    • ಬಡಬಡಿಸುವವನಿಗಂ ಹೆಚ್ಚೆಂದರೆ, ಬಡಬಡಿಸುವವಗಂ ಆಗಬೇಕೆನಿಸುತ್ತದೆ.

     • ಬಡಬಡಿಪಂಗಂ ಎಂದರೆ ಕ್ಲಿಷ್ಟತೆ ನೀಗೀತು

 14. ಕೆಂಗೇರಿ ಪಕ್ಕಕ್ಕೆ ಗೆಲಲ್ ಕುಮಾರಂ
  ಸಂಗಾತಿಯಾದ೦ದು ಬಲಾಢ್ಯ ಪಕ್ಷ೦
  ”ಹಂಗಾಯ್ತು ಸಮ್ಮಿಶ್ರ ವಿರೋಧಮೆ೦ದು೦”
  ಮುಂಗಾರೊಳುಂ ರೈತನತೃಪ್ತನಲ್ತೇ ?
  ಕೆಂಗೇರಿ ಪಕ್ಕ= ರಾಮನಗರ

  ಚುನಾವಣಾ ಫಲಿತಾಂಶ , ತದನಂತರದ ಸಮ್ಮಿಶ್ರ ಸರಕಾರದ ಯೋಚನೆ , ಮುಂಗಾರು ಮಳೆಯಂತೆ ಪ್ರಾದೇಶಿಕ ಪಕ್ಷಕ್ಕೆ ಆಢಳಿತ ದೊರೆತರೂ ಅದರ ಪರಿಣಾಮದ ಬಗ್ಗೆ ನಮ್ಮ ರೈತಾಪಿ ವರ್ಗದ ಪ್ರತಿನಿಧಿಯಾದ ಮಾಜಿ ಪ್ರಧಾನ ಮಂತ್ರಿಗಳ ತಲೆಯಲ್ಲಿ ಇಂಥ ಒಂದು ಯೋಚನೆ ಸುಳಿದಿರಬಹುದೇ? ಎಂಬ ಶಂಕೆ …

 15. ತಂಗಾಳಿ ಮುಂದಾಗಿಯೆ ಬೀಸಲೀಗಳ್
  ಬೆಂಗಾವಲೋಲ್ ಮೋಡದ ಪಂಕ್ತಿಯುಕ್ಕಲ್
  ಕಂಗೆಟ್ಟನಯ್ ಸೂರಿನವಸ್ಥೆಯಿಂ ಮೇಣ್
  ಮುಂಗಾರೊಳುಂ ರೈತನತೃಪ್ತನಲ್ತೇ ?

  ಗಟ್ಟಿಯಿಲ್ಲದ ಸೂರನ್ನು ನೆನೆದು ಚಿಂತಿತನು.

  • ಬೆಂಗಾವಲೋಲ್ – ಬೆಂಗಾವಲವೋಲ್ ಆದರೆ ಹಳೆಗನ್ನಡಕ್ಕೆ ಹತ್ತಿರ. ಓಲ್ ಎಂಬುದು ನಡುಗನ್ನಡದ ಪ್ರತ್ಯಯ.

   • ಮಾಹಿತಿಗೆ ಧನ್ಯವಾದಗಳು. ಬೆಂಗಾವಲೊಳ್ ಎಂದು ಮಾಡಬಹುದೇನೋ?

 16. ಪೊಂಗುತ್ತೆ ತೋರಲ್ ಬೆಳೆ ಕೆಯ್ಯೊಳಾಗಳ್
  ದಂಗಾಗಿಸುತ್ತಿರ್ಕುಳಿಗೊಳ್ಳುತಿತ್ತಂ
  ತುಂಗೇಭಸೈನ್ಯಂ ಬರೆ ಕೆಟ್ಟೆನೆಂದಾ
  ಮುಂಗಾರೊಳುಂ ರೈತನತೃಪ್ತನಲ್ತೇ?
  ಒಂದುವೇಳೆ ಬೆಳೆ ಚೆನ್ನಾಗಿ ಬಂದು ಅದು ಆನೆಗಳಿಗೆ ಆಹ್ವಾನವಿತ್ತರೆ ಕೆಟ್ಟೆನೆಂದು ಮುಂಗಾರಿನಲ್ಲಿಯೂ ರೈತನತೃಪ್ತನಾದನು.

 17. ಗಡುಸಿಲ್ಲಂ ಸ್ಫೂರ್ಜದೊಳದು
  ಸಿಡಿದಿರಲಾಕಾಶದಸ್ರವಾವುದರೊಳಗೋ| (ಅಸ್ರ=ಮೂಲೆ)
  ಉಡುಗಿತ್ತಲ್ಲಿಯೆ ಗಗನದೆ
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್||

  • ಭಾಷೆ ಸೊಗಸಾಗಿದೆ. ಗಡುಸಿಲ್ಲಂ ಸ್ಫೂರ್ಜದೊಳದು – ಎಂದರೆ ಏನು?

  • ಸ್ಫೂರ್ಜ = ಗುಡುಗು. ಸಶಕ್ತವಲ್ಲದ ಗುಡುಗು, ಅದರ ಸ್ವನವು ಭೂಮಿಯವರೆಗೆ ತಲುಪದೆ ಆಗಸದಲ್ಲೇ ನಂದಿಹೋಯಿತು. ಮಿಂಚಿನ ಬೆಳಕು ಮಾತ್ರ ಭೂಮಿಯವರೆಗೆ ಹರಿಯಿತು.

 18. ಬಡಿದಾಡುವ ಮತ್ತೇಭದ
  ಬೆಡಗಿಂ ಕಾರ್ಮೋಡವೆರಡು ಕಾದಿರೆ ನಭದೊಳ್|
  ಗುಡುಗಿದ ಬೆನ್ನಿಗೆ ಬಾನೊಳ-
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್||

  ಉಡುಗು ರಂಪರಿಂದ ಸಿಕ್ಕಿದ ಉಡುಗೊರೆ 🙂
  ಉಡುಗು = ಕುಗ್ಗು ಉಡುಗಿಲ್ಲದೆ = ಕುಗ್ಗಿಲ್ಲದೆ.

  • ಅರೆ, ಕೀಲಕಸಾಧ್ಯತೆಗಳೇನಾದರೂ ಇವೆಯೇ ಎಂದು ಯೋಚಿಸಿದೆನಾದರೂ, ಉಡುಗು ಎಂಬ ಪ್ರಾಸಪದವನ್ನು ಬಳಸಿದೆನಾದರೂ, ’…ಗೆ+ಉಡುಗು’ ಹೊಳೆಯಲೇ ಇಲ್ಲ. (’ಉಡುಗಿಲ್ಲದೆ’ ಎಂಬುದನ್ನು ’ಉಡುಗದೆಲೆ’ ಎಂಬರ್ಥದಲ್ಲಿ ಬಳಸಬಹುದೆ?)

   • ಕೀಲಕವನ್ನು ಅಳವಡಿಸಿಕೊಂಡಿರುವುದು ಚೆನ್ನಾಗಿದೆ.

 19. ನಡೆದುತ್ಸವದಂದಿರುಳೊಳ್
  ಸಿಡಿಸಲ್ಕಾಗಸದೆ ಬಾಣಬಿರುಸುಗಳಂ ಕಾಣ್
  ಅಡರಿರ್ಪೊಡೆ ಪೊಗೆಯುo ಗಡ
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್!!

  ಉತ್ಸವದ ರಾತ್ರಿ ಸಿಡಿಸಿದ ಬಾಣ ಬಿರುಸಿನ ಹೂ ಮಳೆ ಮಿಂಚಿನ ಗೊಂಚಲಂತೆ ಕಂಡ ಕಲ್ಪನೆಯಲ್ಲಿ !!

 20. ಚೆನ್ನಾಗಿದೆ. ಆದರೆ ಸಾಮಾನ್ಯ ಪಟಾಕಿಗಳನ್ನೂ ಹೊಡೆಸುತ್ತಾರಷ್ಟೇ.

  • ನಿಜ ರವೀಂದ್ರ , ಆದರೆ ಅದು ನೆಲ ಪಟಾಕಿ !! ಆಗಸದಿಂದ ಬಾಣಬಿರುಸಿನ ಗುಡುಗು ಕೇಳಿಸದು ಅಲ್ಲವೇ ?!

 21. ಬಿಡಿಸಿದ ಕೊಡೆಯನು ಹಿಡಿಯುತ
  ಜಡಿಮಳೆಯಲೆಳೆಯರಾಟವ ನೋಡಲ್|
  ಗುಡುಗುವ ಸಮಯದಿ ಮೊಗದಲಿ
  ಗುಡುಗಿಲ್ಲದೆ ಮೂಡಿದಲ್ತೆ ಮಿಂಚಿನ ಗೊಂಚಲ್||

  ಮಳೆಯಲ್ಲಿ ಮಕ್ಕಳು ಆಡುವುದನ್ನು ನೋಡುವಾಗ ಕೊಡೆ ಹಿಡಿದುಕೊಂಡು ನಿಂತಿದ್ದವರ ಮುಖದಲ್ಲಿ ಸದ್ದಿಲ್ಲದೆ (ಗುಡುಗಿಲ್ಲದೆ) ಬಂದ ಮುಗುಳುನಗೆಯನ್ನು ಮಿಂಚಿನ ಗೊಂಚಲಿಗೆ ಹೋಲಿಸಲಾಗಿದೆ.

  • ಕಲ್ಪನೆ ಚೆನ್ನಾಗಿದೆ. ಆದರೆ ಇದು ಕಂದದ ನಿಯಮದಂತಿಲ್ಲ 🙁 ೨ನೇ ಸಾಲನ್ನು ಪರೀಕ್ಷಿಸಿ.

 22. ಬಿಡಿಸಿದ ಕೊಡೆಯನು ಹಿಡಿಯುತ
  ಜಡಿಮಳೆಯಲೆಳೆಯರಾಡುವುದನು ಜನ ನೋಡಲ್|
  ಗುಡುಗುವ ಸಮಯದಿ ಮೊಗದಲಿ
  ಗುಡುಗಿಲ್ಲದೆ ಮೂಡಿದಲ್ತೆ ಮಿಂಚಿನ ಗೊಂಚಲ್||

  ಮಳೆಯಲ್ಲಿ ಮಕ್ಕಳು ಆಡುವುದನ್ನು ನೋಡುವಾಗ ಕೊಡೆ ಹಿಡಿದುಕೊಂಡು ನಿಂತಿದ್ದವರ ಮುಖದಲ್ಲಿ ಸದ್ದಿಲ್ಲದೆ (ಗುಡುಗಿಲ್ಲದೆ) ಬಂದ ಮುಗುಳುನಗೆಯನ್ನು ಮಿಂಚಿನ ಗೊಂಚಲಿಗೆ ಹೋಲಿಸಲಾಗಿದೆ.
  ಮೊದಲನೆಯದಲ್ಲಿ ತಪ್ಪಾಗಿದೆ.

  • ಕಲ್ಪನೆ ಚೆನ್ನಾಗಿದೆ. ಕಂದಪದ್ಯಕ್ಕೆ ಕಡ್ಡಾಯವಾಗಿ ಹಳಗನ್ನಡವನ್ನೇ ಬಳಸಬೇಕಾದ್ದರಿಂದ ನಿಮ್ಮ ಪದ್ಯವನ್ನು ಸ್ವಲ್ಪ ಹಳಗನ್ನಡೀಕರಿಸಿದ್ದೇನೆ(ಹಾಗೇ ನಿಮ್ಮ ಪದ್ಯದಲ್ಲಿ ಎರಡನೇ ಸಾಲು ತಪ್ಪಿದೆ. ದಯವಿಟ್ಟು ಕಂದಪದ್ಯದ ನಿಯಮಗಳನ್ನು ಗಮನಿಸಿ)

   ಬಿಡಿಸಿದ ಕೊಡೆಯಂಬಿಡಿಯುತೆ
   ಜಡಿಮಳೆಯೊಳ್ ತರಳರಾಟಮಂ ಕಾಣಲ್ಕಾ
   ಗುಡುಗುವ ಸಮಯದೆ ಮೊಗದೊಳ್
   ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್

 23. ಬಂಗಾರದಂತಿರ್ದಿಳೆಯೆಂಬ ಪೆಣ್ಣಂ
  ನುಂಗಲ್ಕೆಬಾಯಂದೆರೆಯಲ್ ಪ್ರವಾಹಂ
  ಭಂಗಂಗೊಳಲ್ ಬಾಳೆಯತೋಟಮಾಗಳ್
  ಮುಂಗಾರೊಳುಂ ರೈತನತೃಪ್ತನಲ್ತೇ

  • ಇದಕ್ಕೆ ಮಾತೃಕೆಯೆನಿಸಿದ ’ಅತಿವೃಷ್ಟಿ’ಪದ್ಯವನ್ನು ನಾನಾಗಲೇ ಬರೆದಾಯ್ತು. ಈಗ ಬಾಳೆ, ತೆಂಗು ಎಂಬ ಪಿಳ್ಳೆನೆವಗಳನ್ನು ಬಳಸಿ ಅದನ್ನೇ ಕವನಿಸಲಾಗದು 😉

   • ವಾರದ ಕೊನೆಗೆ ಬರೆದ್ರೆ ಹೀಗೇ ಆಗೋದು_/_ ಎಲ್ಲ ಸಾಧ್ಯತೆಗಳೂ ಖಾಲಿಯಾಗಿ copycat ಅನ್ನಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು 😉 ಅದೂ ನಿಮ್ಮ ಕಲ್ಪನೆಯೇ repeat ಆದ್ರೆ ಮುಗೀತು ಕತೆ. ಇನ್ನುಮುಂದೆ ಆದಷ್ಟು ಬೇಗ ಬರೀತೀನಿ..

  • ತುಂಬಾ ಚೆನ್ನಾಗಿದೆ.

 24. ತಡಮಾದೊಡೆ ಚಂದ್ರವದನೆ
  ಯೆಡೆಯಿಲ್ಲದೆ ಕಾಯ್ದು ಬೇಯೆ ಪ್ರಿಯನಧರಕ್ಕಂ
  ನುಡಿಯದೆ ಚುಂಬನಮೀಯಲ್
  ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್

  ಅನ್ವಯ:ತಡಮಾದೊಡೆ, ಚಂದ್ರವದನೆ ಎಡೆಯಿಲ್ಲದೆ ಕಾಯ್ದು ಬೇಯೆ , ಪ್ರಿಯನ್ ಅಧರಕ್ಕಂ ನುಡಿಯದೆ ಮುತ್ತಿಕ್ಕಲ್ ಗುಡುಗಿಲ್ಲದೆ ಮೂಡಿತಲ್ತೆ (ನಗೆಯೆಂಬಾ) ಮಿಂಚಿನ ಗೊಂಚಲ್. ನಗೆಯೆಂಬ ಎನ್ನುವ ಅಧ್ಯಾಹಾರವೂ,ಈ ಅನ್ವಯವೂ ಇಲ್ಲದಿದ್ದರೆ ಅರ್ಥಮಾಡಿಕೊಳ್ಳುವುದು ಕಷ್ಟ 🙂

  ಈಗಷ್ಟೇ ಆತ್ರೇಯ ನಾರಾಯಣರ ಪದ್ಯವನ್ನು ನೋಡಿದೆ..ಈ ಪದ್ಯವೂ ನಗೆಯನ್ನು ಮಿಂಚಿಗೆ ಹೋಲಿಸಿರುವುದರ ಅವರ ಪದ್ಯದ ಜಾಡಲ್ಲೇ ಇದೆ

  • ಅವರ ಪದ್ಯದ ಜಾಡಲ್ಲೇ ಇದೆಯೋ? ಅವರ ಪದ್ಯವನ್ನು ಝಾಡಿಸಿ ಬರೆದದ್ದೋ 😉 https://www.youtube.com/watch?v=bTKXOlr7ntk

   • ಅಂತೂ ಇಂತೂ ನಿಮ್ಮಿಂದ ನಾನು ಝಾಡಿಸಿಕೊಂಡೆ 😉

    • ಸುಂದರಮೀ ಪದ್ಯಂ.ಮುತ್ತನ್ನಿಕ್ಕಲೆಂಬುದು ಮುತ್ತನಿಕ್ಕಲ್ ಎಂದಕ್ಕೆ. ಚುಂಬನಮೀಯಲ್ ಎಂದು ತಿದ್ದಿದೊಡಂ ಸರಿಯಕ್ಕುಂ.

     • ತಿದ್ದಿದ್ದೇನೆ..ಧನ್ಯವಾದಗಳು..ಚುಂಬನಮೀಯಲ್ ಎಂದರೂ ವಿಭಕ್ತಿಪಲ್ಲಟವಾಗುತ್ತದೆಯಲ್ಲವೆ? ಮುತ್ತಂ ನೀಡಲ್ ಅನ್ನಬೇಕೇನೋ..

  • ಆಗ “ನಗೆಯ ಮಿಂಚು” ಹೇಗೆ ಸಾಧ್ಯ ?!!
   ಅದು ಅವಳ “ಕಂಗಳ ಮಿಂಚು “!!

   • ನಗುವಾಗ ಕಾಣುವ ಬಿಳಿಯ ದಂತಪಂಕ್ತಿಗಳನ್ನು ಮಿಂಚಿಗೆ ಹೋಲಿಸಲಾಗಿದೆ

   • ಪ್ರಿಯಕರನನ್ನು ನೋಡಿ ಮುಖದಲ್ಲಿ ಮೂಡಿದ ಮಂದಹಾಸವೇ ಮಿಂಚೆಂದೂ, ಅರಳಿದ ಕಂಗಳ ನೋಟವೇ ಮಿಂಚೆಂದೂ ಎರಡು ರೀತಿಯಲ್ಲಿಯೂ ಮಾಡಬಹುದಲ್ಲವೆ? ನಾನು ಪ್ರಯತ್ನಿಸಿದ್ದು(ಪದ್ಯದಲ್ಲಿಮಾತ್ರ) ಮೊದಲನೆಯ ಸಾಧ್ಯತೆಯನ್ನು

  • Beautiful, romantic. 🙂 ಇಲ್ಲಿ, ಕಾದವನು ಪ್ರಿಯಕರ. ಕಾಯಿಸಿದವಳು ಪ್ರಿಯೆ. ಮಾತಿಗೆ ಅವಕಾಶವಿಡದೆ ಚುಂಬಿಸಿದಳೆಂದರೆ ಇನ್ನೂ ಸ್ವಾರಸ್ಯ ಎಂದು ನನಗನಿಸುತ್ತದೆ.

   ತಡಮಾದೊಡೆ ಚಂದ್ರವದನೆ
   ಯೆಡೆಯಿಲ್ಲದೆ ಕಾದು ಬೆಂದ ಪ್ರಿಯನಧರಕ್ಕಂ
   ನುಡಿಯಲ್ ನೀಡದೆ ಚುಂಬಿಸೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)