May 282018
 

ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯ ರಚಿಸಿರಿ:

೧. ಅತ್ತರ್ (ಸುಗಂಧದ್ರವ್ಯ)

೨. ತಿಲೋತ್ತಮೆ

೩. ವಿಶ್ವಾಸ

  50 Responses to “ಪದ್ಯಸಪ್ತಾಹ ೩೦೯: ವರ್ಣನೆ”

 1. ವಿಶ್ವಾಸ

  ಅಡಕೆಯಿಂ ಪೋದೊಡಿದು ಆನೆಯಿತ್ತೊಡೆ ಬರದು,
  ಮಡಕೆಯಂತಿಪ್ಪುದಿದು ತಿಳಿಯೊ ಮನುಜ
  ನಡೆದೊಡಂ ನಲ್ಮೆಯಲಿ ತುಂಬಿ ತುಳುಕಾಡುವುದು
  ದುಡುಕಿದೊಡಮೊಡೆವುದೈ ಚಣಮೊಂದರೊಳ್

 2. ಕಳೆದ ಸಲ ಕೊನೆಯಲ್ಲಿದ್ದವರು, ಈ ಸಲ ಮೊದಲಿಗರು :). ವಿಶ್ವಾಸ ಎಂದುದು ಪದ್ಯದಲ್ಲೆಲ್ಲೂ ಬಂದಿಲ್ಲ. ೧ನೇ ಸಾಲು ಕೊನೆಯ ೩ ಸಾಲಿಗೆ ಅಷ್ಟಾಗಿ ಅಂಟಿಕೊಂಡಿಲ್ಲ.

 3. ಎಸಕದ ಕಣ್ಣಿನಂದದ ಕದಂಪಿನಲಂಪಿನ ಕಾಮನೇ ಕರಂ
  ಮಸೆದಿಹ ಮೈಯ ಪೂರ್ಣತೆಯ ಚೆಂದುಟಿಯಂಟಿದ ಮಾಟಗೈಯ ಮುಂ
  ಬೆಸೆಸಿದನಯ್ ತಿಲೋತ್ತಮೆಯನಾ ಋತಶಕ್ತಿ ಬಳಲ್ದಿರೆಮ್ಮ ಪು
  ಟ್ಟಿಸೆ ಕಳೆದೇನನೋಂ ಗಡ ನೋಳ್ಪೆನೆ ನೋಳ್ಪೆವಿದೇನು ಸೃಷ್ಠಿಯೋ||

  ತಿಲೋತ್ತಮೆಯನ್ನು ಸುಂದರವಾಗಿ ಕಡೆದು ಬಳಲಿ ಆಮೇಲೆ ನಮ್ಮನ್ನು ಹುಟ್ಟಿಸಿದ್ದರಿಂದಲೋ ಏನೋ – ನಾವು, ಈಕೆಯನ್ನು ಏನನ್ನೋ ಕಳೆದುಕೊಂಡವರು ಕಳೆದುಕೊಂಡದನ್ನು ನೋಡುವಂತೆ ನೋಡುತ್ತಿದ್ದೇವೆ.

  • ಎಸಕದ ಕಣ್ಣಿನಂದದ ಕದಂಪಿನಲಂಪಿನ ಕಾಮನೇ ಕರಂ
   ಮಸೆದಿಹ ಮೈಯ ಪೂರ್ಣತೆಯ ಚೆಂದುಟಿಯಂಟಿದ ಮಾಟಗೈಯ ಮುಂ
   ಬೆಸೆಸಿದನಯ್ ತಿಲೋತ್ತಮೆಯ ಬೊಮ್ಮನೆ ಮೇಣ್ ದಣಿವಿಂದಲೆಮ್ಮ ಪು-
   ಟ್ಟಿಸೆ ಕಳೆದೇನನೋಂ ಗಡ ನೋಳ್ಪೆನೆ ನೋಳ್ಪೆವಿದೇನು ಸೃಷ್ಠಿಯೋ||

   • ಕೋದಿರೆ ಪದ್ಯಹಾರದೆ ಪದಾವಳಿಯಂ ಸುಮನಂಬೊಲುತ್ತೆ ನೀ
    ವೀದೊರೆ ಕಲ್ಪನಾಗುಣಮನಾಂತುರುಚಂಪಕಮಾಲೆಯೊಪ್ಪುಗುಂ

   • ಧನ್ಯವಾದಗಳು ಮಂಜುನಾಥ್. ಅಭ್ಯಾಸಕ್ಕಾಗಿ, ಅಲ್ಲಲ್ಲಿ ಅಲಂಕಾರಗಳನ್ನು ಗುರುತಿಸಲು ಪ್ರಯತ್ನಿಸುತ್ತೇನೆ. ಸರಿಗಾಣದಿದ್ದರೆ, ಬುಧಜನರು ಸರಿಪಡಿಸಬೇಕು. ಇಲ್ಲಿ, ತಿಲೋತ್ತಮೆಯನ್ನು ಎವೆಯಿಕ್ಕದೆ ನೋಡುವುದಕ್ಕೆ ಕವಿಯೊಂದು ಕಲ್ಪಿತ ಕಾರಣವನ್ನಿಟ್ಟಿದ್ದಾನೆ. ಆದ್ದರಿಂದ, ಇದು ಹೇತೂತ್ಪ್ರೇಕ್ಷೆಯಾಗುತ್ತದೆಯೇ? ಮೊದಲಿಗೆ ಇದು ಉತ್ಪ್ರೇಕ್ಷೆಯೋ? ಉಪಮೇಯ – ತಿಲೋತ್ತಮೆಯ ಸೌಂದರ್ಯ. ಉಪಮಾನ – ಎವೆಯಿಕ್ಕದೆ ನೋಡುವವನ ಕ್ರಿಯೆ. ಉತ್ಕಟವಾಗಿ ಉಪಮಾನವನ್ನು ನೋಡಲಿಕ್ಕಾಗಿ ಇರುವುದು ಕಲ್ಪಿತ ಕಾರಣ. ಈ ವಿವರಣೆ ಸರಿಯಿದೆಯೇ?

 4. ತಿಲೋತ್ತಮೆಯ ಕುರಿತು ನನ್ನದೊಂದು ಪದ್ಯ-
  ತಿಲಮಾತ್ರದುತ್ತಮೆಯೆ ನೀನೆ
  ಬಲಿಖಲವಿನಾಶಕಾರಣಂ
  ಪುಟ್ಟಿದೆ, ಮೋಹಿಸುತೆಲ್ಲರನುಂ
  ಕೊಲುತಿರ್ಪೆ ನೋಟದೊಳಗಿಂತು ಮಾನಿನೀ||
  (ನೀನು ತಿಲದಷ್ಟು ಮಾತ್ರ ಉತ್ತಮೆಯಾದವಳು. ಬಲಿಷ್ಠರಾದ ಖಲರನ್ನು ನಾಶಪಡಿಸುವುದಕ್ಕೆ ಹುಟ್ಟಿದೆ. ಈಗ ಎಲ್ಲರನ್ನೂ ಮೋಹಿಸುತ್ತ ನೋಟದಲ್ಲಿಯೇ ಕೊಲ್ಲುತ್ತಿರುವೆ)

  • ಭಾಷೆ ಸೊಗಸಾಗಿದೆ. ಆದರೆ ಛಂದಸ್ಸು ಪಂಚಮಾತ್ರಾ ಚೌಪದಿ ಅನಿಸಿದರೂ ಕೊನೆಯ ಗಣ ಸರಿಯಾಗಿಲ್ಲ. ಯಾವ ಛಂದಸ್ಸಿದು? ಪ್ರಾಸ ೩ನೇ ಸಾಲಲ್ಲಿ ತಪ್ಪಿದೆ. ನೆಲೆಗೊಂಡೆಯೌ ಎಂದು ಮಾಡಬಹುದು.

  • ಉತ್ತಮವಾದದ್ದೆಲ್ಲದರಿಂದಲೂ ತಿಲದಷ್ಟನ್ನು ಸಂಪಾದಿಸಿಕೊಂಡವಳು ’ತಿಲೋತ್ತಮೆ’.

   • ಅಥವಾ ತಿಲತಿಲದಲ್ಲೂ ಉತ್ತಮಳು. ಅಂತಿರಬಹುದೇ?

  • ಸಲಹೆಗಳಿಗೆ ಧನ್ಯವಾದಗಳು.
   ಅವಳು ತಿಲಮಾತ್ರದಷ್ಟು ಉತ್ತಮೆ ಏಕೆಂದರೆ ದುಷ್ಟರನ್ನು ನಾಶ ಮಾಡಲು ಹುಟ್ಟಿದವಳು. ಅವಳು ಎಲ್ಲರನ್ನೂ ಕೊಲ್ಲುತ್ತಿದ್ದಾಳೆ. ಹಾಗಾಗಿ ಒಳ್ಳೆಯವಳಲ್ಲ ಅಂತ ಭಾವ. ಬೇರೆಯ ಸರಿಯಾದ ಪದ್ಯ ಬರೆಯಲು ಪ್ರಯತ್ನ ಮಾಡುವೆ.

 5. ವಿಶ್ವಾಸ:

  ಮೊದಲ ಶ್ರಮದಿಂದೆದೆಗುಂ-
  ದದೆ ನಂಬುಗೆಯಿಂದಲೆತ್ನಿಸುವ ಪಕ್ಕಿಯವೊಲ್ |
  ಪದವಿನ್ಯಾಸದಿ ವಿಶ್ವಾ-
  ಸದಿಮನವರತ ಪ್ರಯತ್ನಮಂ ಮಾಳ್ಪೆಂ ನಾಂ ||

  • ಮೊದಲ ಶ್ರಮ ಆಗಬೇಕು. ಪದಬಂಧದೆ ಅಥವಾ ಪದವಿನ್ಯಾಸದೆ ಅಂತೇನಾದರೂ ಮಾಡಬಹುದು. ಇಲ್ಲವಾದರೆ ಅರಿಸಮಾಸವಾಗುತ್ತದೆ.

 6. ಸೆಳೆನೋಟದೆ ಕೀರವಾಣಿಯಿಂ
  ದೆಳೆನುಣ್ಪಿಂದಲೆ ಜೇನಿನೋಷ್ಠದಿಂ-
  ದಳೆ ಮೂಗುಳಿದಿಂದ್ರಿಯಂಗಳಂ
  ಸೆಳೆದಳ್ ಮೇಣುಳಿದೊಂದನತ್ತರಿಂ||

  ಹೆಣ್ಣು ೪ ಇಂದ್ರಿಯಗಳನ್ನು ಈಗಾಗಲೇ ಸೆಳೆದಿದ್ದಾಳೆ. ಉಳಿದೊಂದೂ ಅತ್ತರಿಂದಾಗಿ, ಅವಳಿಗೆ ಶರಣಾಗಿದೆ.
  (ವಿಯೋಗಿನಿಯಲ್ಲಿ ಒದ್ದಾಡಿಯೂ ಇದೆಲ್ಲವನ್ನು ತರಲಾಗಿಲ್ಲ)

 7. ಮುಸಲರ ಸಿಸ್ನಾಸೆಯನೇ
  ವಸನಮನೇರುತ್ತೆ ಕಳೆದು, ಬೆವರ್ವೆರಸುಂ ನೀಂ/
  ಪೆಸರ್ವಡೆದಿರ್ಪೆಯೊ ಅತ್ತರ್
  ಕೊಸರಾಡುತ್ತಳಲವರ್ಕಳನೆ ಸಂಧಿಸಿದರ್/
  ಮುಸಲರ ಸ್ನಾನ ಮಾಡುವ ಇಚ್ಚೆಯನ್ನು ಕಳೆದು, ಅವರ ವಸ್ತ್ರವನ್ನೇರಿ, ಬೆವರೊಡನೆ ಬೆರೆತು, ಅವರನ್ನು ಸಂಧಿಸಿದವರು ಕೊಸರಾಡುತ್ತ(ವಾಸನೆಗೆ) ಅಳಲು ನೀನು ‘ಅತ್ತರ್’ ಎಂದು ಹೆಸರಾಗಿದ್ದೀಯ.

  ಪುರುಹೂತಾಯುಧಮೆನ್ನೆ ನೋಟಮಿದು ರಂಭಾಕಾಂಡಮೇ ಕಾಯಮೈ
  ಚಿರಮಾಗಿರ್ಪುರೆ ಜವ್ವನಂ ಬಗೆವೊಡಂ ಸ್ವರ್ಗೀಯಪುಷ್ಪೋಪಮಂ /
  ಮಿರುಗಲ್ ಸತ್ಸಿತವರ್ಣಮಾವಗಮುಮಾ ಐರಾವತಂ ನಾಚುಗುಂ
  ಮೆರೆವೀ ನಾರಿ ತಿಲೋತ್ತಮಾಖ್ಯೆಯನಿಶಂ ನಾಕಕ್ಕೆ ದಲ್ ಭೂಷಣಂ//
  ತಿಲೋತ್ತಮೆ ಸ್ವರ್ಗದವಳಾದ್ದರಿಂದ ಆಕೆಗೆ ಅಲ್ಲಿನ ಹೋಲಿಕೆಗಳನ್ನೇ ನೀಡಿದ್ದೇನೆ. ಆಕೆಯ ನೋಟ ಸಾಕ್ಷಾತ್ ಇಂದ್ರನ ವಜ್ರಾಘಾತ(ರಸಿಕರಿಗೆ), ಆಕೆಯ ಕಾಯವೋ ಬಾಳೆಮರದ ಕಾಂಡದಂತಿದೆ. ಆಕೆಯ ಚಿರಯವ್ವನ ನಂದನವನದ ಪುಷ್ಪಗಳಂತೆ, ಇನ್ನು ಆಕೆಯ ಬಿಳುಪನ್ನು ನೋಡಿದರೆ ಐರಾವತವೇ ನಾಚುತ್ತದೆ. ಹೀಗೆ ಮೆರೆವ ಈ ತಿಲೋತ್ತಮೆಯೇ ಸ್ವರ್ಗಕ್ಕೆ ಭೂಷಣ.

  • ಚೆನ್ನಾಗಿದೆ. ಮೊದಲಿನಲ್ಲಿ ಸುಂದರವಾಗಿ ಶ್ಲೇಷ ಬಂದಿದೆ. ಪೆಸರ್ವಡೆದಿರ್ಪೈ ಸರಿಯಾಗಿದೆಯೇ? ಪೆಸರ್ವಡೆದಿರ್ಪೆಯೌ ಎಂದಾಗ ಬೇಡವೇ?
   ಎರಡನೆಯ ಪದ್ಯ ತುಂಬಾ ಚೆನ್ನಾಗಿದೆ. ಈಕೆಗೆ ಸ್ವರ್ಗಜನಿತೋಪಮೆಗಳೇ ಸಾಧ್ಯ ಎಂಬ ಧ್ವನಿಯಿದೆ. ಅಲಂಕಾರ ಯಾವುದು? ಸಾದೃಶ್ಯಮೂಲದ್ದೇ ಸರಿ. ಉಪಮೆಯೋ ಅಥವಾ ಇನ್ನೇನಾದರೂ?

   • ಧನ್ಯವಾದಗಳು. ಹೌದು ಅದು ಪೆಸರ್ವಡೆದಿರ್ಪೆಯೈ/ಯೌ ಆಗಬೇಕು. ಪೆಸರ್ವಡೆದಿರ್ಪೆಯೊ ಎಂದು ತಿದ್ದಿದ್ದೇನೆ. ಇನ್ನು ಅಲಂಕಾರಶಾಸ್ತ್ರದಲ್ಲಿ ನನ್ನ ಜ್ಞಾನ ಬಹಳ ಕಡಿಮೆ. ಆದರೂ ಪ್ರಯತ್ನಿಸುತ್ತೇನೆ. ಮೊದಲ ಸಾಲಿನಲ್ಲಿ ರೂಪಕವೇ ಇದೆ. ಎರಡನೇ ಸಾಲು ಉಪಮಾ. ಮೂರನೆಯ ಸಾಲು ಬಹುಶಃ ಉತ್ಪ್ರೇಕ್ಷೆ ಇರಬೇಕು.

    • ಮಂಜುನಾಥ್, ಆರಂಭಿಸಿ. ಇದ್ ಎಲ್ಲಾ ಪದ್ಯಪಾನಿಗಳಲ್ಲಿ ನನ್ನೆ ವಿನಂತಿ. ಕೇವಲ ಗಣೇಶರ ವೀಡಿಯೋ ನೋಡಿ, ಇವನ್ನರಗಿಸಿಕೊಳ್ಳುವುದು ಕಷ್ಟ. ಎಮ್ ಎ ಹೆಗಡೆಯವರ ಅಲಂಕಾರತತ್ತ್ವ ಪುಸ್ತಕ ಚೆನ್ನಾಗಿದೆ. ಓದಿ. ನಾವು ಒಂದು ಪದ್ಯ ಯಾಕೆ ಚೆನ್ನಾಗಿದೆ ಎಂದು ಚರ್ಚಿಸಬಹುದು.

     • ಆರಂಭಿಸಿದ್ದೇನೆ. ಪ್ರಸ್ತುತ ದಂಡಿಯನ್ನು(ಕನ್ನಡ ಕಾವ್ಯಾದರ್ಶ) ಓದಿಕೊಳ್ಳುತ್ತಿರುವೆ. ಸ್ವಲ್ಪ ಸಮಯ ಹಿಡಿಯುತ್ತದೆ.

     • Super ಮಂಜುನಾಥ್.

 8. ತಿಲೋತ್ತಮೆಯ ಬಗ್ಗೆ ಇನ್ನೊಂದು ಪದ್ಯ-
  ಚಂದದಿ ಬ್ರಹ್ಮಮಾನಸದಿ
  ಹುಟ್ಟಿದಪ್ಸರೆಯಲ! ಗುಣದಿ
  ಕುಂದಿಲ್ಲದಂತೆ ಹೆಚ್ಚಾದೆ
  ತಿಲದಷ್ಟು ನೀನೆಲ್ಲ ಜಗದಿ
  ಸುಂದೋಪಸುಂದರ ಕೊಂದು
  ನೀನಾದೆ ಲೋಕದ ಬಂಧು
  ಬಂದಿತೇ ನಿನಗಿಂತು ಗತಿಯು
  ಸುರಪತಿವೇಶ್ಯೆಯ ಸ್ಥಿತಿಯು||

  • ಚೆನ್ನಾಗಿದೆ ಶೈಲಿ. ಮತ್ತೆ ಛಂದಸ್ಸು ತಿಳಿಯುತ್ತಿಲ್ಲ. ಸ್ವಲ್ಪ ಸೀಸ ಪದ್ಯದ ತರಹ ಇದೆ. ಅದೇ ಆದರೆ, ವಿವರಕ್ಕಾಗಿ http://padyapaana.com/?page_id=1024 ನೋಡಿ. ಪಂಚಮಾತ್ರಾಚೌಪದಿಯಾದರೆ, ಗಣಗಳು ಜಾಸ್ತಿಯಾಗಿದೆ. ಒಂದೆರಡು ಕಗ್ಗದ ಪದ್ಯಗಳನ್ನು ನೋಡಿಕೊಳ್ಳಿ.

   ನಿದರ್ಶನಕ್ಕಾಗಿ ನಿಮ್ಮ ಪದ್ಯವನ್ನು ಸವರಿದ್ದೇನೆ.

   ಚಂದದಿಂ| ಬ್ರಹ್ಮಮಾ|ನಸದಚ್ಚ|ರಸಿ ಗುಣದಿ
   ಕುಂದಿಲ್ಲ|ವೆನೆ ಬೆಳೆದೆ|ತಿಲದಷ್ಟು |ನೀಂ ಜಗದಿ
   ಸುಂದೋಪ|ಸುಂದರಂ| ಕೊಂದ ಬಂ|ಧುವೆ ನೀನು|
   ನಿಂದೆಯೇ|ಕೌ ಸುರಪ|ತಿಯ ವೇ|ಶ್ಯೆಯ ತೆರದಿ||

   ಇಷ್ಟಕ್ಕೂ ಹಾಲಿವುಡ್ ನಟಿಗಿಂತ, ಸುರಪತಿವೇಶ್ಯಾಸ್ಥಾನ ದೊಡ್ದದಲ್ಲವೇ. ನಿಮಗ್ಯಾಕೆ ಬೇಜಾರು? 🙂

   • ಧನ್ಯವಾದಗಳು ರವೀಂದ್ರ ಅವರೇ,
    ನಾನು ದೊರೆಯಕ್ಕರ ಅನ್ನುವ ಛಂದಸ್ಸಿನಲ್ಲಿ ಪ್ರಯತ್ನಿಸಿದ್ದೆ.
    ಹಾಲಿವುಡ್ ನಟಿಯಾದರೂ ಪರವಾಗಿಲ್ಲ.
    ಸುರಪತಿಯ ವೇಶ್ಯೆಯಾದ ಕಾರಣ ನಮಗೆಲ್ಲ ಕಾಣಿಸುತ್ತಿಲ್ಲ ಅಂತ ಬೇಜಾರು 😉

 9. ವಿಶ್ವಾಸವನ್ನಿಡೆಲೊ ನೀಂ ನಿನ್ನೊಳಮಿತದಿಂ
  ನಶ್ವರದ ಲೌಕಿಕರುಸಾಬರಿಯ ಮಾಣ್|
  (ಕುಮಾರಸ್ವಾಮಿ) ಈಶ್ವರನ ಪುತ್ರನೊಳ್ ನೀನಿರಿಸೆ ನಂಬುಗೆಯ
  ರಿಶ್ವತ್ತನೀವನವ ಕಾಂಗ್ರೆಸ್ಸಿಗಂ||

  • ಅನ್ವಯಕ್ಲೇಶವಿದೆ. ಬದಲಿಗೆ ಈಶ್ವರಸುಪುತ್ರನಾಮಾಂಕಿತನ ನಂಬಿದೊಡೆ ಎಂದು ಮಾಡಬಹುದು. ಒಂದು ವಿಷಯ. ವಿಶ್ವಾಸ – ವಿಷಯಕ್ಕೆ ಎಲ್ಲರೂ ಉಪದೇಶದ ಪದ್ಯಗಳನ್ನೇ ಬರೆದಿದ್ದಾರೆ ಏಕೆ?
   ಅನಂತಕೃಷ್ಣರು “ತಿಳಿಯೊ ಮನುಜ” ಎಂದರು. ನೀವು “ವಿಶ್ವಾಸವನ್ನಿಡೆಲೊ” ಎಂದಿರಿ. ಪದ್ಯಕ್ಕೆ, ಗೆಳೆಯ-ಗೆಳತಿಯರ ಹದದ ಸಂವಾದವೇ ಉತ್ತಮ ಅಲ್ಲವೇ?

  • ’ನೀವು ಅವನಲ್ಲಿ ವಿಶ್ವಾಸವನ್ನಿರಿಸಿದರೆ, ಅವನು ಕಾಂಗ್ರೆಸ್ಸಿನಲ್ಲಿ ವಿಶ್ವಾಸವಿರಿಸುತ್ತಾನೆ’ ಎಂದು ತಾತ್ಪರ್ಯ. ಅನ್ವಯಕ್ಲೇಶವೆಲ್ಲಿ? ’ಈಶ್ವರಸುಪುತ್ರನಾಮಾಂಕಿತನ ನಂಬಿದೊಡೆ’ ಎಂಬುದು ’ಈಶ್ವರನ ಪುತ್ರನೊಳ್ ನೀನಿರಿಸೆ ನಂಬುಗೆಯ’ ಎಂಬುದರ rephrasing ಅಷ್ಟೆ, ಅಲ್ಲವೆ?

   • ಪದ್ಯ ಅರ್ಥವಾಗಿತ್ತು. ಮತ್ತೆ, ಪ್ರಾಸಸ್ಥಾನದಲ್ಲಿ “ರಿಶ್ವತ್ತು” ಬಂದು ಒಂದು “ಟ್ವಿಸ್ಟ್” ಬಂದಿತ್ತು. ಆದರೆ ಈಶ್ವರಪುತ್ರ = ಕುಮಾರ ಅಥವಾ ಗಣಪ. ಇಲ್ಲಿ ಅವರಿಬ್ಬರೂ ಅಲ್ಲ. ಇಲ್ಲಿ ದೇವೇಗೌಡಪುತ್ರ. ಆದ್ದರಿಂದ, ಅದೇ ಹೆಸರಿರುವ ಎಂದರೆ ಸರಿಯಾದೀತು ಎಂದು ನನ್ನ ಭಾವನೆ.

    ೩ದಿನ ಪದ್ಯಪಾನಕ್ಕೆ ರಜಾ ಹಾಕಿದ್ದೇನೆ. ಮಂಗಳವಾರ ಸಿಗುತ್ತೇನೆ.

    • ಓಹ್. ’…ನಾಮಾಂಕಿತನ’ ಎಂದರೆ ಕಂಸಗಳಲ್ಲಿ ವಿವರಣೆಯನ್ನು ಕೊಡುವುದು ಬೇಕಿಲ್ಲ. ಧನ್ಯವಾದ.

 10. ಕುಲೀನೆ ಸತಿ ಕಾಮಳೇ ನೆರಳಿನಳ್ತಿಯಿಂ ಧರ್ಮನೊಳ್
  ವಿಲೀನವಿರೆ ಲೋಕದೊಳ್ ಪತಿಗೆ ಸಂಕಟಂ ತಂದನಾ|
  ವಿಲಾಸನೆದೆ ಸೀಳ್ದಪಳ್ ಬೆಡಗಿನಾಯುಧಂ ತೂರುತಲ್
  ತಿಲೋತ್ತಮೆಯೆನಿಪ್ಪಳಾ ಚೆಲುವದೀಗೆ ಕಟ್ಟೆಚ್ಚರಂ||

  (ಪೃಥ್ವೀ ಛಂದಸ್ಸು). ಸಾಮಾನ್ಯವಾಗಿ ಧರ್ಮನೆಂಬ ಪತಿಯನ್ನು ಹಿಂಬಾಲಿಸುವ ಕಾಮ ಎಂಬ ಪತ್ನಿ, ಪತಿಯೇ ಸಂಕಟಕ್ಕೆ ಸಿಲಿಕಿದಾಗ, ತನ್ನ ಸೌಂದರ್ಯವನ್ನೇ ಆಯುಧವನ್ನಾಗಿ ಮಾಡಿ ಸೀಳಿದಾಗ, ತಿಲೋತ್ತಮೆ ಎನಿಸುವಳು. ಆ ಚೆಲುವು (ನಮಗೆ) ಕಟ್ಟೆಚ್ಚರವನ್ನು ಕೊಡಲಿ).

  • ಕಟ್ಟರೆಯಾಗುವಷ್ಟು ಸೌಂದರ್ಯರಾಶಿಯುಳ್ಳವಳಿಂದಲೇ ಕಟ್ಟೆಚ್ಚರವೆ? Too much expectation man!

   • ಚೆನ್ನಾಗಿದೆ.ಚೆಲುಮೆಯೀಗೆ ಪ್ರಯೋಗ ಹೇಗೆಂದು ತಿಳಿಯಲಿಲ್ಲ.

   • ಧನ್ಯವಾದಗಳು ಮಂಜುನಾಥ್. ಚೆಲುಮೆಯು + ಈಗೆ(ಕೊಡಲಿ) ಎಂದು ಅಂದುಕೊಂಡೆ. ಚೆಲುಮೆಯು – ಅಷ್ಟಾಗಿ ಸರಿಬರುಹುದಿಲ್ಲ. ಚೆಲುವು ಎಂದರೆ ಚೆಲುವೀಗೆ ಆಗುತ್ತದೆ. ಚೆಲುವು + ಅದು + ಈಗೆ ಎಂದು ಚೆಲುವದೀಗೆ ಎಂದು ಮಾಡಬಹುದನಿಸುತ್ತದೆ.

   • ರಂಪರೇ, ಕಣ್ಣುಬಿಟ್ಟು ನೋಡುವಾಗ ಸ್ವಲ್ಪ ಎಚ್ಚರ ಇರಲಿ ಅಂತ… 🙂

    • ’ಕಣ್ಣುಮುಚ್ಚಿದರೂ ಅವಳೇ ಕಾಣುತ್ತಾಳೆ’ ಎಂದು ಹೇಳಿದವರು ತಮ್ಮಂಥ ಕವಿಗಳೆ. ಒಳಗಣ್ಣನ್ನು ಹೇಗೆ ಮುಚ್ಚುವಿರಿ?

 11. ಮಿರುಗುತ್ತಂಟಿರೆ ರಕ್ತಸಿಕ್ತತಿಲಕಂ ಧೂರ್ತರ್ ಶಿರಂ ಘಟ್ಟಿಸಲ್
  ನೆರೆಜಗ್ಗಾಟದ ತೋಳಬಂದಿಗುರುತಿಂ ಸುಂದೋಪಸುಂದರ್ಕಳಾ
  ಸುರಸೌಂದರ್ಯದ ಕಾವಿದೇನುಗಿವುದೋ ತಾಂಕಿರ್ದೊಡುಬ್ಬೇಳ್ವಿನಂ
  ಮೆರೆವಳ್ ಪೊನ್ನಗೆಯಿಂ ತಿಲೋತ್ತಮೆಯಿದೋ ತ್ರೈಲೋಕ್ಯನಿಶ್ವಾಸದೊಳ್||

  ಇದು ಸುಂದೋಪಸುಂದರು ನಶಿಸಿದಾಗಿನ ತಿಲೋತ್ತಮೆಯ ವರ್ಣನೆ:
  ಇವಳಿಗೆ ಧೂರ್ತರ ಶಿರಾಘಾತದಿಂದ ಚಿಮ್ಮಿದ ರಕ್ತವೇ ತಿಲಕ. ಎಳೆದಾಡಿದ ಗುರುತೇ ತೋಳಬಂದಿ. ಈ ಸೌಂದರ್ಯದ ಕಾವು ಮುಟ್ಟಿದರೆ ಬೊಕ್ಕೆ ಬರುವಂತಿದೆ. ಹೀಗೆ ಮೂರು ಲೋಕ ನಿಟ್ಟುಸಿರು ಬಿಡುವಂತೆ, ನಗುತ್ತಾ ತಿಲೋತ್ತಮೆ ಮೆರೆವಳ್.

 12. ಮೂರನೆ ಪುರುಷಾರ್ಥಳೆ ನೀಂ
  ಮೂರಿಲ್ಲವೆನುತ್ತೆ ಮೆರೆದ ಖೂಳದ್ವಯರಂ|
  ಮೂರನೆಯುಪಾಯದಳವಿಂ
  ಮೂರಿಯವೋಲ್ ತಿವಿದೆಯೌ ತಿಲೋತ್ತಮೆಗೊಳರೇ||

  ಮೂರಿ = ಯಮನ ವಾಹನ, ಕೋಣ. ಮೂರನೆಯುಪಾಯ = ಭೇದ. ಮೂರನೆ ಪುರುಷಾರ್ಥ = ಕಾಮ.
  ಮೂರಿಲ್ಲ = ನಮ್ಮಿಬ್ಬರನ್ನು ಬಿಟ್ಟರೆ ಮೂರನೆಯವನಿಲ್ಲವೆಂದು.

 13. ವಿನೋದವಾಗಿ ,

  ಸ್ಪುರಿಸಿರೆ ಬೊಮ್ಮನಪ್ಸರೆ ತಿಲೋತ್ತಮೆಯಂ ಪೊಸ ಮಂಡೆಯೈದರೊಳ್
  ಪರಶಿವನಾಕೆಯಂ ಬಿಡದೆ ಮೂರನೆ ಕಣ್ದೆರೆದೀಕ್ಷಿಪಂ ಗಡಾ
  ವಿರಮಿಸುತಿರ್ಪನಾ ಮಲರಗಣ್ಗಳವಂ ಹರಿಯಂತು ತಕ್ಕವಂ
  ಸ್ಮರಿಸುತಿಹಂ ನರಂ ಬೆರಲ ತೀಡುತಲಂತರಜಾಲದೊಳ್ ಸದಾ !!

  (“ಬ್ರಹ್ಮ” ತನ್ನ ೫ನೇ (ಹೊಸ!) ತಲೆಯಲ್ಲಿ ಅವಳನ್ನು ಸ್ಪುರಿಸಿದ ,
  “ಶಿವ” ತನ್ನ ೩ನೇ ಕಣ್ಣು ಬಿಟ್ಟು ನೋಡಿದ , ಮಲರಗಣ್ಣ “ಹರಿ”ಯಂತು ಸರಿಯೇ ಸರಿ , ಇನ್ನು “ನರ”ನು ತನ್ನ ಬೆರಳ ತುದಿಯಲ್ಲೇ ಸದಾ ಸ್ಮರಿಸುತ್ತಿದ್ದಾನೆ !!)

  • 🙂 . ಯಾಕೋ ವಿಷ್ಣು ಬಗ್ಗೆಕೊಂಕೆತ್ತಿದ್ದೀರಿ. ಏನು ಹಾಯಾಗಿ ಮಲಗಿದವರು ಎಂದರೆ ನಿಮಗೆ ಸರಿಬರುವುದಿಲ್ಲವೋ?

 14. ವಿಶ್ವಾಸದ ಬಗೆಗೆ ನನ್ನದೊಂದು ಪದ್ಯ-
  ಬೆಳಗಾಗೆ ಸೂರ್ಯನು ಬರುವನೆಂದು
  ನಳಿನದ ಮನಸಿನೊಳಿರುವುದೊಂದು
  ಕಳೆವುದು ನಮ್ಮೆಲ್ಲ ಕಷ್ಟವೆಂದು
  ತಿಳಿವುದು ವಿಶ್ವಾಸವಾಗಿಹುದು||

 15. ದೋಧಕ|| ಗೀಜದು ಇದ್ದರು ಕಣ್ಣಿನ ಸುತ್ತಂ
  ತೇಜಿಯ ಗಂಧವ ಪೂಸುತೆ ಮೈಗಂ|
  ಮೋಜಿನೊಳೆಲ್ಲರ ಕರ್ಷಿಪರೆಂತೋ
  ಯೋಜನಗಂಧಿಗಳಿಂದಿಗೆ ಇಲ್ಲಂ||

 16. What better time than māghamāsa to reminisce tilōttamā! The padmapurāṇa narrates that tilōttamā was an ugly widow named Kubja in her previous birth. Kubja underwent auspicious ceremonies for eight years and finally on performing the ritual māghapūjā she was reborn as tilōttamā in heaven.

  ಕಳೆಯಲ್ ತನ್ನಯ ಗಡುವಂ(ಗೂನು) ಮಾಘದೆ
  ಒಳಿತಿನ ವ್ರತಗೈದಳ್ ಕುಬ್ಜಳ್|
  ತಿಳಿಯೆಂ ಕಲಿಯೊಳ್ ಮಾಘಸ್ನಾನವ
  ನಳಿನಾಂಗಿಯರೇತಕೊ ಗೈವರ್||
  (ವಿವರಣಸಾಪೇಕ್ಷತೆಯನ್ನು ಕ್ಷಮಿಸಬೇಕು)

 17. ಭರವಸೆಯೆಂಬಿಟ್ಟಿಗೆಯೊಳ್
  ತಿರುಗುತಲಿರ್ಪ ತಿರೆಯೊಳ್ ನರಂ ಕಟ್ಟಿರ್ಪo
  ಬಿರುಗಟ್ಟುತೊಲ್ಮೆ ಗಾರೆಯ
  ನೊರೆದುಂ ಗಡ ಬದುಕಗೂಡನುಂ ಬಗೆವಗೆಯಿಂ ||

  ನಶ್ವರ ಪ್ರಪಂಚದಲ್ಲಿ ವಿಶ್ವಾಸದ ಇಟ್ಟಿಗೆ ಇಟ್ಟು , ಪ್ರೀತಿಯ ಗಾರೆಯೊಟ್ಟಿಗೆ ಭದ್ರಗೊಳಿಸಿ ಕಟ್ಟುವ ನಾನಾತರದ ಗೂಡು – ಈ ಬದುಕು ಅಲ್ಲವೇ ?!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)