Jun 182018
 

ಈ ಕೆಳಗಿನ ಪದಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಮುರಿದ ಕನ್ನಡಕ

೨. ಬೆವರು

೩. ಬಾಲ

  14 Responses to “ಪದ್ಯಸಪ್ತಾಹ ೩೧೨: ವರ್ಣನೆ”

 1. ಮನಸ್ಸಿನಲ್ಲಿ ನಡೆವುದೆಲ್ಲ ವಿವಿಧ ಆಧ್ಯಾನಗಳ(Thought) ಸಮಾಹಾರಚಿತ್ರ(Collage). ಅವೆಲ್ಲ ಸಂಸಕ್ತವಾಗಿರುತ್ತವೆ(Coherent). ಇನ್ನು, ಕನ್ನಡಕದ ಸೀಳಿದ ಗಾಜಿನಲ್ಲಿ ಕಾಣುವ ಕೇವಲ ಎರಡೇ ಬಿಂಬಗಳನ್ನು ಸಂಸಕ್ತಗೊಳಿಸುವುದು ಕಷ್ಟವಾಗಬೇಕಿಲ್ಲ. ಉಪಾಕ್ಷಿ=Spectacles. ಪ್ರಭಂಗ=Crack.
  ಮಾಲಿನಿ|| ಮನದೆ ನಡೆಯುವಾಧ್ಯಾನಂ ಸಮಾಹಾರಚಿತ್ರಂ
  ಗಮಕವಿರುತೆ ತಾನುಂ ತ್ರಾಸಮಂ ನೀಡದೊಂದುಂ|
  ವಿಮನಗೊಳಿಪುದೇನೈ ತಾನುಪಾಕ್ಷಿಪ್ರಭಂಗಂ
  ಶ್ರಮಮೆ ಸಮಮಿಡಲ್ಕಾ ಮಾತ್ರಮೀರ್ ಚಿತ್ರಮಂ ಪೇಳ್||

 2. ರಚಿಸಬಲ್ಲೆನುಮೊಂದ ಪದ್ಯವನು ವಾರಕ್ಕೆ
  ಪ್ರಚುರಗೊಳಿಸೀರ್-ಮೂರು-ನಾಲ್ಕನೆನ್ನೆ|
  ಅಚಲಗೊಂಬುದು ಲೇಖನಿಯು, ಹರಿವ ಬೆಮರಾಗ-
  ಳಚಿರದಿಂ ಕದರುವುದದಕ್ಕರವನೇ||

 3. ಬಾಲ = Boy, tail, hair
  ನಾಂ ರಚಿಪ ಪದ್ಯದೊಳು ಮಾತ್ರ ನೀಂ ನಿರುಕಿಪುದು
  ಸಂರಂಜನೆಯ ಸರಿಯೆ ಪೇಳುಗೀಗಳ್|
  ನೀಂ ರಚಿಪ ವಸ್ತುವೊಳು ತ್ರಿವಿಧವಿಂತೇತಕೋ
  ಸಂರುಹವೊ ಶಿರದೆ, ಕೂಸೋ, ತೋಕೆಯೋ??

 4. ರಾಮನ ಅವತಾರ… ಧನುವೋ? ಜನಕನ ಮಮತೆಯ ಕುಡಿಯೋ? … ಧಾಟಿಯಲ್ಲಿ
  ಗಾಜೋ? ಬಲಬದಿ ಕಡ್ಡಿಯೊ? ಬದಲಿಂ-
  ಗೆಡಗಿವಿಮೇಲಣ ಕಡ್ಡಿಯೊ ತಾಂ?
  ಗಾಜೆರಡರ ನಡುವಿಹ ಸೇತುವೆಯೋ?
  ಮುರಿದುದು ಮುದಿಯನ ಚಶ್ಮದೊಳುಽಽ||ಚ||
  ಏನಿದು ಅವತಾರಽಽ….||ಪ||

 5. ಕನ್ನಡಿಯೊಳ್ ಮೊಗಗಾಣದು
  ಭಿನ್ನ ವ್ಯಕ್ತಿಗಳೊಳಂತರಮಿರದೆನಗೆ ಕಾಣ್ |
  ಚಿನ್ನಕಳೆದ ಹೆಂಗಸಿನೋಲ್
  ಕನ್ನಡಕಂ ಮುರಿದೊಡೆನ್ನಿರವು ದುರ್ಭರಮೈ ! ||

  ಕನ್ನಡಕ ಮುರಿದರೆ ನನಗಾಗುವ ತೊಂದರೆಗಳು!

  • ಭಿನ್ನರೊಳಗಂತರವು ಕಾಣದೊಡಮೇನೀಗ
   ಖಿನ್ನನಾಗುವೆಯೇಕೆ ಶ್ರೀಹರಿಯೆ ಕೇಳ್|
   ಚೆನ್ನೆಯೆಂದೆನುತೆ ಸಲ್ಲಾಪವನು ಗೈಗುಮೈ
   ನಿನ್ನ ಪೆಂಡಿರೊಲಿರ್ಪ ನಾದಿನಿಯೊಳು!!

   • ಎನ್ನ ತೊಡಕ ಪೇಳ್ದೊಡ‌ದನು ಚೆನ್ನೆನ್ನುವಿರೇ ಶ್ರೀಮಾನ್!

    ಆದರೂ, ನಾನಿನ್ನೂ ಅವಿವಾಹಿತ 🙂

  • Padya chennagide. kadeya saalina kadeya pada durbhara endu maadidare innoochenna annisutte

 6. ಸೋಲೋ ಗೆಲುವೋ ತರತಮ-
  ವೇಲಾತೀತಂ ಸಮಸ್ತರೊಳಜಸ್ರಂ
  ಕೇಲಿಯ ಪರ್ಯವಸಾನದ
  ಮಾಲೆಯಿದು ಸ್ವೇದಬಿಂದು ಸಂಸ್ಯೂತಂ||

  (ಸೋಲುಗೆಲವುಗಳೆಂಬ ತಾರತಮ್ಯವಿಲ್ಲದೇ ಆಟದ ಕೊನೆಯಲ್ಲಿ ಎಲ್ಲರಿಗೂ ಯಾವಾಗಲೂ ಸಿಗುವ ಮಾಲೆಯೇ ಬೆವರ ಹನಿಗಳಿಂದ ಸಂಸ್ಯೂತವಾಗಿರುವುದಾಗಿರುತ್ತದೆ)

 7. ಅಂಚೆ ಬಂದಿರಲಾಗೆ ಹೊಂಚು ಹಾಕಿರುವವಗೆ
  ಹಂಚಿ ಹೋಗಿರೆ ತನುಜರೀರ್ವರೊಳು ತಾವ್ |
  ಕೊಂಚ ನಡುಗಲು ಜರದೆ ಬೀಳ್ದೊಡೆಯೆ ಕನ್ನಡಕ
  ಇಂಚು ಗಾಜಿಗೆ ತಡಕಲೆದೆ ಮಿಡಿದುದೌ ||

  ( ವಯಸ್ಸಾದ ಕಾಲಕ್ಕೆ , ಅಪ್ಪ ಒಬ್ಬ ಮಗನ ಮನೆ – ಅಮ್ಮ ಮತ್ತೊಬ್ಬನ ಮನೆಯಲ್ಲಿ ವಾಸ , ಬಹಳ ದಿನಗಳ ಬಳಿಕ ಪತ್ನಿಯಿಂದ ಪತ್ರ ಬಂದಿರಲು , ಅದನ್ನೋದುವ ತವಕದಲ್ಲಿ ಕೈ ನಡುದಿ ಕನ್ನಡಕ ಬಿದ್ದು ಒಡೆದಿರಲು , ಆಗ ಗಾಜಿನ ಚೂರಿಗಾಗಿ ತಡಕಾಡುವ ಹೃದಯ ಮಿಡಿಯುವ ದೃಶ್ಯ )
  “ಸ್ಕೂಲ್ ಮಾಸ್ಟರ್” ಚಿತ್ರದ ಈ ದೃಶ್ಯಕ್ಕೆ ಪದ್ಯರೂಪ ಕೊಡುವ ಪ್ರಯತ್ನ .

  • ಪದ್ಯ ಚೆನ್ನಾಗಿದೆ ಮೇಡಂ. ಚಿತ್ರ “ಈ ಬಂಧನ” ಹಿಂದಿಯ ಭಾಗ್ಬಾನ್ ಚಿತ್ರದ ಪುನರ್ನಿರ್ಮಿತಿ 🙂

   • ಧನ್ಯವಾದಗಳು ಮಂಜು , ಹೌದೇ, ಆ ಚಿತ್ರದಲ್ಲೂ ಈ ದೃಶ್ಯವಿದೆಯೇ ?! ಇತ್ತೀಚಿನದಲ್ಲವೇ ?

 8. ಉತ್ತಿರ್ಪಂ ಬದುಕನೆ ಕಾ-
  ಣೊತ್ತಿರ್ಪಂ ನೆಲಕೆ ನೇಗಿಲಂ ಗಡ ಬಲದಿಂ !
  ಬಿತ್ತಿರ್ಪಂ ಬೆಮರನೆ ಮೇ-
  ಣಿತ್ತಿರ್ಪಂ ಜಗಕೆ ತುತ್ತನುಂ ಭಲ ನಲವಿಂ !!

  ಬೆಳವಳದ ಮಡಿಲಲ್ಲಿ … ಬೆವರ ಹನಿ ಬಿದ್ದಾಗ …!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)