Jun 122018
೧. ಶಾರ್ದೂಲವಿಕ್ರೀಡಿತದ ಸಮಸ್ಯೆಯನ್ನು ಪರಿಹರಿಸಿ
ಕನ್ಯಾದಾನಮನಿತ್ತನಲ್ತೆ ನಲವಿಂ ಶ್ರೀರಾಮನಿಂದ್ರಂಗಿದೋ
೨. ವಂಶಸ್ಥದ ಸಮಸ್ಯೆಯನ್ನು ಪರಿಹರಿಸಿ
ಹಿಮಾಲಯಂ ಕೆಂಪನೆ ವರ್ಣಮಾಂತುದೈ
೧. ಶಾರ್ದೂಲವಿಕ್ರೀಡಿತದ ಸಮಸ್ಯೆಯನ್ನು ಪರಿಹರಿಸಿ
ಕನ್ಯಾದಾನಮನಿತ್ತನಲ್ತೆ ನಲವಿಂ ಶ್ರೀರಾಮನಿಂದ್ರಂಗಿದೋ
ಹಿಮಾಲಯಂ ಕೆಂಪನೆ ವರ್ಣಮಾಂತುದೈ
ವರ್ಣಮಾಂತುದೈ ಎಂದರೆ ವರ್ಣವನ್ನು ಹೊಂದಿತು ಎಂಬ ಅರ್ಥವಲ್ಲವೇ? ಹಾಗೆಂದುಕೊಂಡು ಒಂದು ಪರಿಹಾರ ಮಾಡಿದ್ದೇನೆ.
–
ಸಮಸ್ತಲೋಕೋದ್ಧರಣೈಕಕಾಮಿಯಾ
ರಮಾಸುತಂ ಶಂಕರಪೀಡನೋದ್ಯತಂ
ಉಮಾಪತಿಕ್ರೋಧಭವಾಗ್ನಿಜಿಹ್ವೆಯಿಂ
ಹಿಮಾಲಯಂ ಕೆಂಪನೆ ವರ್ಣಮಾಂತುದೈ||
(ಮನ್ಮಥನದ ದಹನದ ಸಂದರ್ಭದಲ್ಲಿ ಶಿವನ ನೇತ್ರಾಗ್ನಿಯಿಂದ ಹಿಮಾಲಯವು ಕೆಂಪಾಯಿತು. ಉಮೆಯ ವಿವಾಹವಾಗಿರದಿದ್ದರೂ ಉಮಾಪತಿ ಎಂದು ಬಳಸಿದ್ದು ತಪ್ಪಾಗಲಾರದು ಎಂದುಕೊಂಡಿರುವೆ.)
ಸೊಗಸಾದ ಪರಿಹಾರ. ಇನ್ನೊಂದು ಸ್ವಲ್ಪ ಪದ್ಯಭಾವ ಸ್ಪಷ್ಟವಾದರೆ ಒಳ್ಳೆಯದು. ಅಲ್ಲಿ ಉಮಾಪತಿ ಎಂದು ಬಳಸುವುದು ಅಷ್ಟು ಸೂಕ್ತವಲ್ಲ. ಔಚಿತ್ಯವನ್ನು ಮೀರಿದಂತಾಗುತ್ತದೆ.
ಸಮಸ್ತಲೋಕೋದ್ಧರಣೈಕಕಾಮಿಯ
ಪ್ರಮೇಯಬಾಣಾಹತಿತಾಪದಿಂ ಶಿವಂ
ಸುಮೇಷುವಂ ಕೋಪದೆ ಸುಟ್ಟ ಕಾಲದೊಳ್
ಹಿಮಾಲಯಂ…….
ಇಂತು ಸವರ್ದೊಡಂ ಸ್ಪಷ್ಟಮಕ್ಕುಂ… 🙂
ತಿದ್ದುಪಡಿಗೆ ಧನ್ಯವಾದಗಳು ಸರ್.
ಮೂರನೇ ಸಾಲಿನಲ್ಲಿ ಆ ಅಗ್ನಿ ಜ್ವಾಲೆಯಿಂದ ಎಂದು ಬರಬೇಕಲ್ಲವೇ! ಇಲ್ಲದಿದ್ದರೆ ಹೇಗೆ ಕೆಂಪಾಯಿತು ಎಂದು ಸ್ಪಷ್ಟವಾಗುವುದಿಲ್ಲ ಎನಿಸಿತು.
ಹಾಗಾಗಿ
ಸಮಸ್ತಲೋಕೋದ್ಧರಣೈಕಕಾಮಿಯಾ
ರಮಾಸುತಂ ಶಂಕರಪೀಡನೋದ್ಯತಂ
ಸಮೇತರಾಕ್ಷಾಕ್ಷಿಭವಾಗ್ನಿಜಿಹ್ವೆಯಿಂ
ಹಿಮಾಲಯಂ …..
ಹೀಗೆ ಮಾಡಿದರೆ ಇನ್ನೂ ಸರಿಯಾಗಬಹುದಲ್ಲವೇ?
ಸರಿ.
ಧನ್ಯವಾದಗಳು
ಅನ್ಯರ್ ರಾವಣನಿಗ್ರಹೋದ್ಯಮದೊಳೌಡಂಗಚ್ಚಿ ಪಾರುತ್ತಿರಲ್
ಧನ್ಯಂ ಸಾಸಿರಗಣ್ಣನಲ್ತೆ ರಥಮಂ ಕುಟ್ಟಿರ್ಪೊಡಂ ರಾಮನೋ
ಮಾನ್ಯಂ ಸಂದುಪಕಾರಕಂ ಮರಳಿ ನೀಡುತ್ತುಂ ಲಸದ್ಕೀರ್ತಿಯಾ
ಕನ್ಯಾದಾನಮನಿತ್ತನಲ್ತೆ ನಲವಿಂ ಶ್ರೀರಾಮನಿಂದ್ರಂಗಿದೋ//
—————————————————————
ಬೇರೆ ದೇವತೆಗಳು ರಾಮರಾವಣಯುದ್ಧವನ್ನು ನೋಡುತ್ತಿರಲು, ಧನ್ಯನಾದ ದೇವೇಂದ್ರನು ರಥವನ್ನು ಕೊಟ್ಟು ಸಹಕರಿಸಲಾಗಿ ಮಾನ್ಯನಾದ ರಾಮನು ಆತನಿಗೆ ಪ್ರತ್ಯುಪಕಾರಮೆಂಬಂತೆ ಕೀರ್ತಿಕನ್ಯೆಯನ್ನು ದಾನಮಾಡಿದನು
————————————————————–
ಕ್ರಮಕ್ಕೆ ಬದ್ಧಂ ರವಿಯೆನ್ನೆ ಬಾನಿನೊಳ್
ಸಮಂತುರೂವಿಂದಲೆ ಮೂಡಿರಲ್ಕೆ ತಾ
ನಮೇಯಮೆಂಬೀ ಕಿರಣಂಗಳಿಂದಲೇ
ಹಿಮಾಲಯಂ ಕೆಂಪನೆ ವರ್ಣಮಾಂತುದೈ //
———————————————–
ಎಂದಿನಂತೆ ಚೆಲ್ವಾಗಿ ಸೂರ್ಯೋದಯವಾದಾಗ ಕಿರಣಗಳ ಕಾಂತಿಯಿಂದ ಹಿಮಾಲಯವು ಕೆಂಬಣ್ಣವನ್ನು ತಾಳಿತು.
ಅನ್ಯತ್ರಂ ಗಡಮೆಲ್ಲಿ ಕಾಂಬುವೆಯೋ ನೀಂ ಪಾಕೋನ್ಮುಖಾಬಾಲನಂ(Mature lad/ಅಬಾಲ)
ದೈನ್ಯತ್ವಂ ಕಳೆಯುತ್ತಹಲ್ಯೆಯೊಳು ಮೇಣಿಂ ಗೌತಮಂಗಂ ಪುನಃ-
ಕನ್ಯಾದಾನಮನಿತ್ತನಲ್ತೆ ನಲವಿಂ; ಶ್ರೀರಾಮನಿಂದ್ರಂ”ಗಿದೋ,
ನಾನ್ಯರ್ಗೀ ಪರಿತಾಪಮಂ ಕುಡುಗುಮೆಂ“ದಾದೇಶಿಪಂ ನೀತಿಯಂ||
ಪರಿಹಾರ ಚೆನ್ನಾಗಿದೆ. ಕಾಂಬುವೆಯೊ ಎನ್ನುವದಕ್ಕಿಂತ ಕಾಣುವೆಯೊ ಎನ್ನುವುದೇ ಹೆಚ್ಚು ಸೂಕ್ತವೆನ್ನಿಸುತ್ತದೆ.
Thanks. But ಕಾಮ್ಬ and ಕಾಮ್ಬುವ are both listed in Kittel. Please clarify.
ಉಮೇಶನೆಂಬೊಬ್ಬ ಪ್ರವಾಸಿಯಕ್ಷಿಗಂ
ಧಿಮಾಕಿನಿಂ ತೊಟ್ಟಿರೆ ಕೆಂಪುಕಾಚನುಂ|
ಸಮಾನದಿಂದೆಲ್ಲವುಮೊಂದೆ ವರ್ಣ ಕೇಳ್
ಹಿಮಾಲಯಂ ಕೆಂಪನೆ ವರ್ಣಮಾಂತುದೈ||
(ಘನಪರಿಹಾರವಲ್ಲದ್ದರಿಂದ ’ಧಿಮಾಕು’ ಎಂಬ ಚಾಟುಶಬ್ದವನ್ನು ಬಳಸಿದ್ದೇನೆ)
ಪರಿಹಾರವೇನೋ ಚೆನ್ನಾಗಿದೆ ಪ್ರಸಾದ್ ಸರ್ , ಆದರೆ ನಮ್ಮೆಜಮಾನರೊಬ್ಬರನ್ನೇ ಹಿಮಾಲಯ ಪ್ರವಾಸ ಕಳುಹಿಸಿ , ತಂಪು ಕನ್ನಡಕ ಹಾಕಿಸಿರುವುದು ಎಷ್ಟುಸರಿ ?!!
ಅಯ್ಯೋ! ಇದೆಲ್ಲ ಆಗ ನನಗೆ ಹೊಳೆಯಲೇ ಇಲ್ಲ.
ಹಿಮಮಾತ್ರಮೇಂ (ಅವರ)ಪ್ರಿಯತಮೆಯು ತಾಂ ಕೆಂಪಲ್ತೆ
ಬೆಮರುತ್ತಲಿಹರು ಭಯದಿಂದೆ| ಪೋಗಿರಿ
ರಮಿಸುತ್ತೆ ತೆಗೆಯೆ ಚಶ್ಮವ||
ಇದೇನಿದು ಹಾದಿರಂಪರಿಗೆ ಮಾತ್ರ ಕಾಣಿಸುವಂತಹ ಬೈಗುಳವೆ?
ಉಷಾರವರು ಬೈದರೋ ಇಲ್ಲವೋ ತಿಳಿಯದು. ನೀವಂತೂ ಬೈದಿರಿ.
ತಂಪಾಗಿರ್ಪಳನಿಂತು | ಕೆಂಪಾಗಿಸಿರಲಿಂಪು
ರಂಪsವ ಮಾಡಲೊಲ್ಲೆನೆಲೊ | ಕೃಷ್ಣಯ್ಯ
ಸೊಂಪಾಗಿ ಕಂಡಿರೆ ಪತಿರಾಯ !!
(ಹೃದಯದಾಕೃತಿಯ ಕೆಂಪು ಕನ್ನಡಕ ಧರಿಸಿದ (ನಾಚಿದ)ನಗುಮೊಗವನ್ನು ಅಂಟಿಸಲು ಪ್ರಯತ್ನಿಸಿದ್ದು , ಅದು ಹೇಗೆ ಕೈ ತಪ್ಪಿದೆಯೋ ತಿಳಿಯದಾಗಿದೆ !!)
‘ನಾನನನ'(ಲೊಲ್ಲೆನೆಲೊ)ವು ಸಪ್ರಮಾಣವಿಷ್ಣುಗಣವೆನಿಸದು. ಲೊಲ್ಲೆಽನೋ ಎಂದು ಸವರಬಹುದು.
ಪತಿ ಉವಾಚ:
ಸಂದಾಯ್ತು ಸಾಜದೆ-ಕೆಂದಾಗೊ ಕಾಲವು
ಇಂದಿಗದನ್ನು ನೆನೆಯುವ| ಪರಿಯಿದೆ
ಕಂದಾದ ಗಾಜ ಧರಿಪುದು||
ನಿಮ್ಮ ತ್ರಿಪದಿ /ಪ್ರತಿಪದಿ /ಪತಿಪದಿ ಗೆ ಧನ್ಯವಾದಗಳು ಪ್ರಸಾದ್ ಸರ್.
ತಿದ್ದಿದ ಪದ್ಯ :
ತಂಪಾಗಿರ್ಪಳನಿಂತು | ಕೆಂಪಾಗಿಸಿರಲಿಂಪು
ರಂಪsವ ಮಾಡಲೊಲ್ಲೆsನೋ | ಕೃಷ್ಣಯ್ಯ
ಸೊಂಪಾಗಿ ಕಂಡಿರೆ ಪತಿರಾಯ !!
ಸಮಸ್ತಮತ್ತೇಭಕುಲಾಂತಕೀಯವೈ
ಕ್ರಮಕ್ರಮಚ್ಛಿನ್ನಕರೀಂದ್ರಸಚ್ಛಿರೋ
ವಿಮುಕ್ತಮುಕ್ತಾಫಲಲಿಪ್ತರಕ್ತದಿಂ
ಹಿಮಾಲಯಂ ಕೆಂಪನೆ ವರ್ಣಮಾಂತುದೈ||
(ಕಾಲಿದಾಸನ ಕಲ್ಪನೆಯಿಂದ ಪ್ರೇರಿತವಾದದ್ದು- ಎಲ್ಲಾ ಮದ ಬಂದ ಆನೆಗಳನ್ನು ಕೊಲ್ಲುವ ಕುಲೀನನಾದ ಸಿಂಹದ ವಿಕ್ರಮದಿಂದ ಆನೆಯೊಂದರ ತಲೆ ಒಡೆದು ಅದರಿಂದ ಮುತ್ತುಗಳು ಹೊರಬಿದ್ದಾಗ ಅದಕ್ಕೆ ಅಂಟಿಕೊಂಡ ರಕ್ತದಿಂದ ಹಿಮಾಲಯ ಕೆಂಪಾಯಿತು )
ಕವಿಕಾಳಿದಾಸನುಕ್ತಿಯೊಳರ್ಧಮಾತ್ರವದು
ಛವಿಯದರ ವಿಸ್ತರಿಸಿ ನೋಡುಗೀಗಳ್|
ಕವರಿರಲು ದುಂಬಿಗಳು ಪೀರಲಾ ಮದವನಾ-
ಗುವುದು ಹಿಮದಾಲಯವು ಕಪ್ಪುಬಣ್ಣಂ!!
🙂 ನಿಮ್ಮ ಪದ್ಯ ಚೆನ್ನಾಗಿದೆ
Super
ಉಭಯರಿಗೂ ಧನ್ಯವಾದಗಳು 🙂
ಸಮಾಜವಾದಂ ದೆಸೆಗೆಟ್ಟು ,ಮೀರೆ ಸಂ-
ಯಮಂ, ಭಯೋತ್ಪಾದನದೊಳ್ ಕರಂಗಿರಲ್
ಪ್ರಮೀಳೆಯರ್ಗಳ್ಪಣೆ ಕುಂಕುಮಂ ಗಡಾ
ಹಿಮಾಲಯಂ ಕೆಂಪನೆ ವರ್ಣಮಾಂತುದೈ !!
ಭಯೋತ್ಪಾದನೆಯಿಂದ ವಿಧವೆಯರಾದ ಸ್ತ್ರೀಯರ ಕರಗಿದ ಹಣೆಕುಂಕುಮದಿಂದಾಗಿ ಹಿಮಾಲಯ ಪರ್ವತ ಕೆಂಪಾಗಿದೆ.
ಕಲ್ಪನೆ,ಪದ್ಯಗಳೆರಡೂ ಇಷ್ಟವಾದುವು ಮೇಡಂ
Burning current topic. Fine.
ಧನ್ಯವಾದಗಳು ಪ್ರಸಾದ್ ಸರ್ , ಅನಂತ
ಅನ್ಯಾಯಂ ಮಿತಿಮೀರಿರಲ್ಕೆ ಧರೆಯೊಳ್ ಗೋಪಾಲನಾಗುತ್ತೆ ತಾ-
-ನನ್ಯೋನ್ಯಪ್ರಿಯಮಿತ್ರನಾಗಿಸುತುಮಾ ದೇವೇಂದ್ರನಂ ಚೆಲ್ವಿನಿಂ
ಧನ್ಯಳ್,ಸಜ್ಜನಮಾನ್ಯಳಪ್ಪನುಜೆಯಂ ಸೌಭದ್ರೆಯಂ ಭದ್ರೆಯಂ
ಕನ್ಯಾದಾನಮನಿತ್ತನಲ್ತೆ ನಲವಿಂ ಶ್ರೀರಾಮನಿಂದ್ರಂಗಿದೋ
ದ್ವಾಪರಯುಗದಲ್ಲಿ ಅನ್ಯಾಯ ಮಿತಿಮೀರಿದಾಗ ತಾನು ಶ್ರೀಕೃಷ್ಣನಾಗಿ ಹುಟ್ಟಿ,ದೇವೇಂದ್ರನನ್ನು ಅರ್ಜುನನಾಗಿ ಹುಟ್ಟಿಸಿ, ಸುಭದ್ರೆಯನ್ನು ಕನ್ಯಾದಾನವಿತ್ತ ಅನ್ನುವ ಪ್ರಯತ್ನ
Fine interpretation.
Thank you Sir_/\_
ವಿನೋದವಾಗಿ ,
ಸಮಸ್ಯೆಯಿಂತೈ , ಬಹುಕಾಲ ಸಾಗಲೆ-
ಮ್ಮ ಮೆಟ್ರೊಗೆಂದೀಬಗೆ ಕಾಮಗಾರಿಯುಂ |
ಅಮರ್ದಿರಲ್ ಕಾಣ್ ಹರಿಹಾಯ್ದ ಧೂಳಿಯಿಂ
” ಹಿಮಾಲಯಂ ” ಕೆಂಪನೆ ವರ್ಣಮಾಂತುದೈ !!
ಮೆಟ್ರೋ ಕಾಮಗಾರಿಯಿಂದಾಗಿ ಧೂಳು ಮೆತ್ತಿ ಕೆಂಪಗಾಗಿರುವ “ಹಿಮಾಲಯ ಕಂಪನಿ ” ಬಗಗಿನ ಪದ್ಯ !!
ವೈವಿಧ್ಯಮಯ ಪೂರಣಗಳು! ಹಿಮಾಲಯಸಂಸ್ಥೆಯಲ್ಲಿದ್ದ ನಿಮ್ಮ ಅಳಿಯ ಅದನ್ನು ಬಿಟ್ಟು ತಾವೂ ಕೆಂಪಾಗುವುದರಿಂದ ತಪ್ಪಿಸಿಕೊಂಡರೆಂದು ಹರ್ಷಿಸದಿರಿ. ಅಲ್ಲಿಂದ ಅವರು ಹೋದುದು ’(ಮುನಿದರೆ)ಮಾರಿ’ಕೋ(Marico) ಕಂಪೆನಿಗೆ!
ಧನ್ಯವಾದಗಳು ಪ್ರಸಾದ್ ಸರ್ , “ಹಿಮಾಲಯ”ದ ಬಗೆಗಿನ ಈ ಪ್ರಸಂಗವನ್ನು ಹಂಚಿಕೊಳ್ಳಲೇ ಬೇಕು ,
ನಮ್ಮ ಮಗಳ ಮದುವೆ ನಿಶ್ಚಯವಾದ ಸಂದರ್ಭ , ಹುಡುಗ ಎಲ್ಲಿ ಕೆಲಸ ಮಾಡುವನೆಂದು ಕೇಳುವವರು , “ಹಿಮಾಲಯ”ದಲ್ಲಿ(ಸೈಂಟಿಸ್ಟ್ ) ಎಂದು ಹೇಳಿದರೆ , ಅಷ್ಟು ದೂರ ಏಕೆ ಮಗಳನ್ನು ಕೊಟ್ಟಿರಿ? ಎಂದು ಆಶ್ಚರ್ಯದಿಂದ ಕೇಳಿದ್ದುಂಟು !!
ಸೋಮ, ಕನ್ಯದಾನಮನಿತ್ತ ಎಂಬಲ್ಲಿ ದಾನ ಹಾಗೂ ಇತ್ತಗಳು ಸಮಾನಾರ್ಥಕಗಳಲ್ಲವೆ? ’ಕನ್ಯೆಯನಿತ್ತ’ ಅಥವಾ ’ಕನ್ಯಾದಾನವ ಗೈದ’ ಎಂದಾಗಬೇಕಲ್ಲವೆ? ಪಾನಿಗಳ ಅಭಿಪ್ರಾಯವೇನೋ?
ಒಂದರ್ಥದಲ್ಲಿ ಹೌದು..ಆದರೆ ಲೋಕರೂಢಿಯಲ್ಲಿ “ದಾನವನ್ನು ಕೊಡು” ಎಂಬ ಬಳಕೆಯೂ ಇದೆಯಲ್ಲವೇ..? ಹಾಗಾಗಿ ಸಮಸ್ಯಾಪಾದ ಸರಿಯಾಗಿಯೇ ಇದೆಯೆಂಬುದು ನನ್ನ ಅಭಿಪ್ರಾಯ……
ಮಾತುಕೊಡು ಎನ್ನುತ್ತೇವೆಯೇ ಹೊರತು ಆಣೆ ಕೊಡು ಎನ್ನೆವು; ಆಣೆ ಮಾಡು ಎನ್ನಬೇಕು. ಅನ್ನ ತಿನ್ನು ಎನ್ನುತ್ತೇವೆ, ಊಟ ತಿನ್ನು ಎನ್ನೆವು; ಊಟ ಮಾಡು ಎನ್ನುತ್ತೇವೆ. ಏಟು ಹಾಕು ಎನ್ನಬಹುದು, ಪ್ರಹಾರ ಹಾಕು ತಪ್ಪು; ಪ್ರಹಾರ ಮಾಡು ಎನ್ನಬೇಕು. ನನ್ನ ಅನುಮಾನವು ಈ ನಿಟ್ಟಿನಲ್ಲಿತ್ತು.
’ದಾನ ಕೊಡು’ ಎಂಬುದು ವಸ್ತುತಃ ’……..ನ್ನು ದಾನ ಕೊಡು’. ಸದರಿ ಪದಾರ್ಥವು ಇಲ್ಲಿ ಅಧ್ಯಾಹಾರವಾಗಿ ಇದೆ. ’ಪದಾರ್ಥವನ್ನು ಕೊಡು’ ಎಂದೇ ಹೇಳಿದಂತಾಯಿತಲ್ಲವೆ? ಪದಾರ್ಥನಿರಪೇಕ್ಷವಾಗಿ ಹೇಳುವಾಗೆಲ್ಲ ’ದಾನ ಮಾಡಿರಣ್ಣ’ ಎಂದೇ ಹೇಳುತ್ತೇವೆ.
ಗಣೇಶರಲ್ಲೂ ಕೇಳಿದೆ. ’ದೇಯಸಾಮಗ್ರಿ’ ದಾನವೆನಿಸಿಕೊಳ್ಳುತ್ತದೆ, ’ದಾತುಂ ಅರ್ಹಂ ಯತ್ ತದ್ದಾನಂ’ ಎಂದು ಸ್ಪಷ್ಟೀಕರಣವನ್ನು ನೀಡಿದರು. ಅದೀಗ ಪರ್ಯಾಪ್ತವಾದ ಸಂಶಯನಿವಾರಣೆ.
ಧನ್ಯವಾದ