Jul 092018
 

ಈ ವಾರದ ವರ್ಣನೆಯ ವಸ್ತುಗಳು

೧. ಅಂಕುಶ
೨. ಪರಶುರಾಮನ ಪರಾಭವ
೩. ಅಂಕದ ಕೋಳಿಯ ಜಗಳ

  5 Responses to “ಪದ್ಯಸಪ್ತಾಹ ೩೧೫: ವರ್ಣನೆ”

  1. ವಿನೋದವಾಗಿ !!

    ಬಲು ಚತುರಂ ಗಜವದನಂ
    ಸಲುವಳಿ ಕಾಣ್ ಸಿದ್ಧಿಬುದ್ಧಿಯೆನುವಾನೆಗಳಂ
    ಭಲ! ತಾಂ ಪಾಣಿಗ್ರಹಿಸಲ್
    ಪಲವೆಣಿಕೆಯೊಳೆ ಧರಿಸಿರ್ಪ ಪಾಶಾಂಕುಶವಂ !!

    ಗಜಮುಖ ತಾನೇ “ಅಂಕುಶ ” ಹಿಡಿದಿರುವ ಔಚಿತ್ಯದ ಕಲ್ಪನೆಯ ಪದ್ಯ !!

    • ಘನವಾದ ಕಲ್ಪನೆ!

      • ಧನ್ಯವಾದಗಳು ಪ್ರಸಾದ್ ಸರ್,

        ಪ್ರಾಸ ಹೊಂದುವಂತಿದ್ದರೂ “ಇಲಿ”ಯನ್ನು ತರಲಾಗಿರಲಿಲ್ಲ, ಹಾಗಾಗಿ ಈ ಪದ್ಯ !!

        ಸಂಕೆಯಾದುsದೆಮಗೆ ವಂಕುಬಾಲದ ಸುಂಡ-
        ದಂಕವಣೆ ನಿನಗೆಂತು ಸಮವೊ ಟೊಣಪ !
        ತಂಕ, ಆನೆದಲೆಗಂ ! ಅಂಕಿಯಿಡಲಿಲಿಗಿಂತು
        ಅಂಕುಸವ ಪಿಡಿದುsದು ತರವೆ ಗಣಪ !!

        ಅಂಕವಣೆ = ಆಸನ , ತಂಕ = ಜಾಣ

  2. ಪರಶುರಾಮನು ರಾಮನ ಅವತಾರನೇ. ಕೋಪಪ್ರತೀಕನಾದ ಅವನನ್ನು ಪರಾಭವಗೊಳಿಸುವುದೆಂದರೆ, ರಾಮನು ತನ್ನ ಕೋಪವನ್ನು ತಾನೇ ಗೆದ್ದಂತೆ.
    ರುಚಿರಾ|| ನಿಜಾವತಾರವುಮದು* ರಾಮನಿಂಗೆ ಕೇಳ್
    ಸಜೀವದಿಂ ಕೊಲುವನೆ ತನ್ನ ತಾನೇ ಪೇಳ್?
    ಪ್ರಜಾಗರಂಗೊಳುತಲಿ ಗೆದ್ದು ಕೋಪಮಂ
    ವೀಜೇತನಪ್ಪೊಲುಮದು ಸಂಜ್ಞೆಯಲ್ಲಮೇಂ??
    *ಅದು=ಪರಶುರಾಮಾವತಾರ

  3. ಅಂಕದಲ್ಲಿ ಕಾದಾಡಿ ವೈರಿಕುಕ್ಕುಟಕ್ಕೆ ವೀರಮರಣವನ್ನಿತ್ತರೂ ತಾನು ಒಡೆಯನಿಗೆ ಭೋಜನವಾದ ಹುಂಜನ ಬಗ್ಗೆ
    ಭಾಮಿನಿ

    ಧರಿಸಿ ಶಿರದೊಳು ನಿಜಕಿರೀಟವ-
    -ನಿರಿಸಿ ಕಾಲೊಳು ನಿಶಿತಖಡ್ಗವ-
    -ನುರಿವ ಬಿಸಿಲನು ಲೆಕ್ಕಿಸದೆ ಕಾದಾಡಿ ಕದನದೊಳು
    ಇರಿದು ವೈರಿಯನಿಕ್ಕಿ ಬೊಬ್ಬಿರಿ-
    -ದುರವನುಬ್ಬಿಸಿ ಮೆರೆದೊಡೆಯುತಾ-
    -ನರಿಯ ಜೊತೆಯಲೆ ಸೇರಿದನು ತನ್ನೊಡೆಯನುದರವನು

    ಪಂ ಮಾ ಚೌ
    ಹಾರಾಡಿ, ಚೀರಾಡಿ, ಚಿಮ್ಮಿ ಛಂಗನೆ ನಭಕೆ,
    ವೀರಮರಣವನಿತ್ತು ವೈರಿಕುಕ್ಕುಟಗಂ
    ಬೀರಿ ಜಂಭದ ನಗೆಯ ಜಯಘೋಷ ಮೊಳಗಿಸಿರೆ
    ಭೂರಿಭೋಜನವಾದನೊಡೆಯಂಗೆ ತಾಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)