Jul 302018
 

ಈ ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ:

೧. ಮರದ ಬುಡದ ಪಾತಿ

೨. ನೆಲ್ಲಿಕಾಯಿ

೩. ನಗ್ನ ಸನ್ಯಾಸಿ

  10 Responses to “ಪದ್ಯಸಪ್ತಾಹ ೩೧೮: ವರ್ಣನೆ”

  1. ಸೀಸ|| “ಆಶೀರ್ವದಿಸಿರಿ ನಾಗಾ ಬಾಬ” ಎನ್ನುತ್ತೆ ಸಾಷ್ಟಾಂಗವೆರಗಿದೆನು ದಾರಿಗಡ್ಡಂ
    ಸಂಗಮದೆ ಮಿಂದು (ಕುಂಭ)ಮೇಳದೆಡೆ ಪೊರಟಿದ್ದ ಸನ್ಯಾಸಿಯೊಬ್ಬಗೆ, ಕೊಸರಿಕೊಂಡನಾತಂ|
    ಬೆಂಬಿಡದೆ ಸಾರುತವನನ್ನು ತಡೆತಡೆದು ಬೇಡಿರ್ದೊಡಾಶೀರ್ವಾದಮಂ ದೂಡಿದಂ
    ಕಡೆಗೊಮ್ಮೆ ಬಿಗಿಹಿಡಿಯುತವನ ಪಾದವನೆಂದೆ “ಪೋಗೆನಾಂ ಹರಸದಿರ್ದೊಡಮೀಗ ನೀಂ”||
    ’ಬಾಬ’ ಉವಾಚ:
    ತೇಟಗೀತಿ|| ಪೋಗೋ ಪೋಗೆಲೋ ಕಾಡದೆ ನನ್ನನಿಂದು
    ಸ್ನಾನಗೈವಾಗಲೆನ್ನ ಬಟ್ಟೆಯ ಕದ್ದಾತಂ|
    ಕುಂಭಿಪಾಕದೊಳ್ ಬೇಯಲಿ ನಗ್ನವಾಗಿ
    ನನ್ನ ಸಂಕಟ ನನಗಿಂತು ನಡಿಯೋ ನೀನು||

    • ನಮಸ್ತೇ ಸರ್
      ತೇಟಗೀತಿಯ ಮೊದಲ ಪದ ಪೋಗೊ ಎಂದಿರಬೇಕಿತ್ತಲ್ಲವೇ ಸರ್ (ಪೋಗೋ ಎಂದಿದೆ.)

      • ಬ್ರಹ್ಮಗಣವು ಶ್ರಾವ್ಯರೂಪದಲ್ಲಿ ನಾಲ್ಕುಮಾತ್ರೆಗಳಷ್ಟಿರಬೇಕು. ಹಾಗಾಗಿ ದೃಶ್ಯರೂಪದಲ್ಲೂ ನಾಲ್ಕುಮಾತ್ರೆಗಳಿರುವ ಶಬ್ದವನ್ನು ಬಳಸಿಕೊಂಡೆ. ಪೋಗೊ ಎಂದು ಲೇಖಿಸಿದರೂ ಪೋಗೊಽ (=ಪೋಗೋ) ಎಂದೇ ಉಚ್ಚರಿಸುತ್ತೇವಲ್ಲವೆ? ಈ ಗೀತಿಯಲ್ಲಿಯೇ ಇನ್ನಷ್ಟು ದೃಷ್ಟಾಂತಗಳಿವೆ: ಟೆಯ ಕದ್, ದಾತಂ & ನಡಿಯೋ. ನಾನು ಸೀಸವನ್ನು ಮಾತ್ರಾಸೀಸವಾಗಿಯೂ ಗೀತಿಯನ್ನು ಅಂಶವಾಗಿಯೂ ರಚಿಸುತ್ತೇನೆ; ಸೀಸಪದ್ಯ ಹಾಗೂ ಅನುಷ್ಟುಭ್‍ಗಳಲ್ಲಿ ಪ್ರಾಸವನ್ನು ಪಾಲಿಸುವುದಿಲ್ಲ.

  2. ಮಂಜುಭಾಷಿಣಿ|| ನರಮಾತೆಯಂತೆವೊಲೆ ಭೂಮಿಮಾತೆಯಂ-
    ಕುರಿಸಲ್ಕಮಾಸರೆಯನಿತ್ತು ಬೀಜಕಂ|
    ತ್ವರೆಯಿಂದೆ ವೃದ್ಧಿಗೊಳಲಾಗದಂತೆ ವೋಲ್
    ಕರದಿಂದೆ ಗಟ್ಟಿಪಿಡಿವಳ್ ಪ್ರಕಾಂಡಮಂ|| (ಪ್ರಕಾಂಡ=stem)

    ರಥೋದ್ಧತ|| ಲೋಭಕಾಗಿ ಸುತ-ಮಾತೆಯಂ ವಲಂ
    ಕ್ಷೋಭೆಯಂ ಬಗೆದು ಬೇರ್ಪಡಿಪ್ಪವೊಲ್|
    ಲಾಭಕಾಗಿ ಸಸಿಯಂ ಪ್ರವರ್ಧಿಸಲ್
    ಶೋಭೆಯಿಂ ನೆಲದೆ ಪಾತಿಗೈಯುವರ್||

    Mnemonic: ’ರಥೋದ್ಧತ’ದ ಎರಡು ಪೂರ್ವಾಂತ್ಯ (penultimate) ಅಕ್ಷರಗಳನ್ನು ಅದಲುಬದಲಾಗಿಸಿದರೆ ’ಸ್ವಾಗತ’ವಾಗುತ್ತದೆ. ಇವೆರಡರ:
    (೧) ಆದಿಯಲ್ಲಿ ಎರಡು ಲಘುಗಳನ್ನು ಸೇರಿಸಿದರೆ ಅವು ಅನುಕ್ರಮವಾಗಿ ಮಂಜುಭಾಷಿಣಿ ಮತ್ತು ಕಲಹಂಸಗಳಾಗುತ್ತವೆ.
    (೨) ಮೊದಲ ಅಕ್ಷರವನ್ನು ಒಡೆದರೆ (ಎರಡು ಲಘುಗಳನ್ನಾಗಿಸಿದರೆ) ಅವು ಅನುಕ್ರಮವಾಗಿ ಮತ್ತಕೋಕಿಲ (ಅಥವಾ ಪ್ರಿಯಂವದಾ) ಮತ್ತು ದ್ರುತಪದಗಳಾಗುತ್ತವೆ.

  3. ವೈದ್ಯದೊಳ್ ನೆಲ್ಲಿಯು ರಸಾಯನವು ತಿಳಿಯೆಯೇಂ
    ಖಾದ್ಯವದು ಸರ್ವಥಾ, ಇರಲಂತದು|
    ಚೋದ್ಯಮಿದು ಸಾಕೆನಗೆ, ಜಗಿದರ್ಧ ನೆಲ್ಲಿಯನು
    ಉದ್ಯುಕ್ತನಾಗುವುದು ನೀರ ಕುಡಿಯಲ್||

  4. ನಮಸ್ತೇ ಸರ್.
    ತೇಟಗೀತಿಯಲ್ಲಿ ಪೋಗೋ ಎಂಬುದು ಪೋಗೊ ಎಂದಿರಬೇಕಿತ್ತಲ್ಲವೇ ಸರ್!?!

  5. ಬಾಯಂ ಪೊಕ್ಕೊಡನೊಗರಂ
    ತೋಯದ ಜತೆಯಾದೊಡಿತ್ತು ಸವಿರುಚಿಯಂ ನೀ
    ನಾಯವನೀಯುತೆ ನುತಿಪ
    ರ್ಗಾಯುವನೀಯುವೆಯೊ ತಿಂದ ಭಕ್ತಚಯಕ್ಕಂ

    ತಿಂದೊಡನೆಯೇ ಒಗರನ್ನೂ,ನೀರಿನ ಜತೆ ಸೇರಿದಾಗ ಸವಿರುಚಿಯನ್ನೂ,ಸ್ತುತಿಸಿದಾಗ ಆಯ=ಸಂಪತ್ತನ್ನೂ(ಆದಿಶಂಕರರಿಗೆ ನೆಲ್ಲಿಕಾಯಿ ಭಿಕ್ಷೆಯಾಗಿ ಸಿಕ್ಕಾಗ ಅವರು ಕನಕಧಾರಾ ಸ್ತೋತ್ರವನ್ನು ರಚಿಸಿದ್ದು), ತಿಂದ ಭಕ್ತಸಮೂಹಕ್ಕೆ ತನ್ನ ಔಷಧೀಯ ಗುಣಗಳ ಮೂಲಕ(ನೆಲ್ಲಿಯು ದೇವಾಸುರ ಯುದ್ಧದಲ್ಲಿ ಭೂಮಿಗೆ ಬಿದ್ದ ಅಮೃತದ ಹನಿಗಳಿಂದಾದದ್ದು ಎನ್ನುವುದೊಂದು ಕತೆ) ಆಯುಷ್ಯವನ್ನೂ ನೆಲ್ಲಿಯರೂಪದಲ್ಲಿರುವ ನಾರಾಯಣನು ನೀಡುತ್ತಾನೆ ಎನ್ನುವ ಪ್ರಯತ್ನ.

    • ’ಆಯ’ಶಬ್ದದ ವಿವರಣೆಯಲ್ಲಿ ’ಭಿಕ್ಷೆ’ಶಬ್ದವನ್ನು ಬಳಸಿದ್ದೀರಿ. ’ಆಯ’ ಎಂದರೆ ’ಆಯ್ಕೊಂಡು ತಿನ್ನೋದು’ ಎಂದು ವಿವರಿಸಿದ್ದರೂ ಹೌದೇನೋ ಎಂದು ಗ್ರಹಿಸುತ್ತಿದ್ದೆವು 🙁

      • ಇಲ್ಲಿ ಭಿಕ್ಷೆ(ದಾನ)ಯಿತ್ತವರಿಗೇ ಸಂಪತ್ಪ್ರಾಪ್ತಿಯಾದದ್ದು. ಆಯ್ಕೊಂಡು ತಿಂದ ಸಂಪತ್ತು ಅಶಾಶ್ವತವೇ(ಅರವತ್ತು ವರ್ಷ ನಮ್ಮನ್ನಾಳಿದವರ ಈಗಿನ ಸ್ಥಿತಿ ನೋಡಿದ್ರೆ ಗೊತ್ತಾಗೋದಿಲ್ವೆ)

  6. ಹೀಗೊಂದು ಲೆಕ್ಕಾಚಾರದ ಪದ್ಯ !!

    ಅಡಗಿರ್ಪ ಬೀಜಮದು ನೆಲ-
    ದಡಿಯಿಂ ಮೊಳೆತು ಗಿಡಮಾಗೆ, ಕಾಂಡದ ಸುತ್ತುಂ
    ಮಡಿಯದುಂ ದುಂಡಗಿನ, ನಡು
    ಬುಡಕಂ ಕ್ಷೇತ್ರಫಲಮೀವ ಪಾತಿಯ ಪಾತ್ರಂ ||

    * ಕ್ಷೇತ್ರಫಲ = ವಿಸ್ತೀರ್ಣ / ನೆಲದ ಲಾಭ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)