Aug 202018
 

೧. ಕೊಕ್ಕರೆ

೨. ಬೇತಾಳ

೩. ಅಣೇಕಟ್ಟು

  34 Responses to “ಪದ್ಯಸಪ್ತಾಹ ೩೨೧: ವರ್ಣನೆ”

 1. ಶ್ರೀ ಜಿ. ಪಿ. ರಾಜರತ್ನಂರವರ ಕವನವೊಂದು ನೆನಪಾಗುತ್ತೆ. ಇಲ್ಲಿಗೆ ಪ್ರಸ್ತುತವಾದ ಚರಣ ಇದು: ಫಳ್ಳ೦ತ್ ಅಲ್ಲಿನ್ ಬೆಳ್ಕುಕ್ತೈತೆ ನನ್ ಪುಟ್ನಂಜಿ ನಕ್ರೆ!
  ರೆಕ್ಕೆ ಬಿಳ್ಪಿನ್ ತೆಗ್ದೆರ್ಚ್ದಂಗೆ ಸಾನ ಮಾಡಿದ್ ಕೊಕ್ರೆ…
  ನನ್ ಪುಟ್ನಂಜಿ ನಕ್ರೆ… ಹೊಯ್ ಹೊಯ್ ನನ್ ಪುಟ್ನಂಜಿ ನಕ್ರೆ…
  ಪೂರ್ಣಕವನವನ್ನು ಇಲ್ಲಿ ನೋಡಿ: http://www.sallapa.com/2013/09/blog-post_3702.html

 2. ಕೊಕ್ಕರೆಯಂದಕ್ಕೊಲಿದಾ-
  ನಕ್ಕರೆಗೊಂಡು ಬಳಿ ಸಾರ್ದು ತಬ್ಬಲೆಳಸಿರಲ್,|
  ಕೊಕ್ಕಿಂದೆ ಕುಕ್ಕುತೆನ್ನಂ,
  ಸೊಕ್ಕೊಳ್ ದೂರದ ದಡಕ್ಕೆ ಪಾರ್ದತ್ತಕಟಾ || 🙁

  • “ಕೊಂದು ತಿಂಬರೆ ಎಲ್ಲ, ಈ ಹೆಣ್ಣು ಬಂದಿಹಳು
   ಮಿಂದು ಶುಚಿಯಾಗಲೆಂ”ದದು ತಿಳಿಯುತುಂ|
   ಚಂದವಿಹ ಸ್ಪಾಂಜೆಂದು ಬಳಸುವಿರಿ ಅದನೆಂದು
   ಒಂದೆ ಓಟಕೆ ಹಾರಿತಾ ದಡಕದು||

   • ಹ ಹ್ಹ .. ಚೆನ್ನಾಗಿದೆ. 🙂

    ಹಾದಿರಂಪರೆ, ಬಕದ ಯೋಚನೆಯೊಳಿರ್ಪಂತೆ ,
    ಬೀದಿಬದಿಕೆರೆಯೊಳಾಂ ಮೀಯಲೊಲ್ಲೆಂ|
    ಕಾದನೀರೊಳ್ ಸ್ನಾನಗೃಹದೆ ಜಳಕಂಗೈವೆ-
    ನೋದಲರಿಯದು ಪಕ್ಕಿ ಪೆಣ್ಣ ಮನಮಂ ||

  • ಸಿಂಗದ ಮರಿಯಂಗೂಡುತೆ
   ದಂಗಾಗಿಪ ಪಾಂಗೊಳಾಟವಾಡಿರೆ ಸುತನಾ
   ಲಿಂಗಿಪೆನೆನುತುಂ ಬಕಮಂ
   ಭಂಗಕ್ಕೊಳಗಾಗೆ ಯತ್ನಮಳುವಿರೆ ಮೇಡಂ? 🙂

   (ಮೊದಲೇ ನಿಮ್ಮ ಕ್ಷಮೆ ಕೇಳುತ್ತಿದ್ದೇನೆ. ಈ ಪದ್ಯ,ಪ್ರತಿಕ್ರಿಯೆ ತಮಾಷೆಗಷ್ಟೇ..ಬೇಜಾರಾದಲ್ಲಿ ದಯವಿಟ್ಟು ಕ್ಷಮಿಸಿ)
   ಶಕುಂತಲೆಯ ಮಗ ಭರತ ಸಿಂಹದ ಮರಿಗಳೊಂದಿಗೆ ಆಟವಾಡುತ್ತಿದ್ದನಂತೆ. ಹಾಗಿರುವಾಗ ಅಮ್ಮ ಕೊಕ್ಕರೆ ಸಿಗಲಿಲ್ಲವೆಂದು ಅಳುವುದುಂಟೆ?

   • ಪದ್ಯವು ಚೆನ್ನಾಗಿದೆ ಅನಂತಕೃಷ್ಣರೆ. ತಮಾಷೆಯ ಪದ್ಯಕ್ಕೂ ಬೇಜಾರಾದಲ್ಲಿ ಬದುಕುವುದೇ ಕಷ್ಟವಾಗಬಹುದು. 🙂

    ಪತಿಯಿಂ ಮರೆಯಲ್ಪಟ್ಟಾ
    ಸತಿ ಸಂಕಷ್ಟದೊಳೆ ಜೀವಿಸಿದ್ದಂ ಬಲ್ಲೆಂ |
    ಬೆತೆಯಿಲ್ಲದಿರ್ಪೆನೊಂದಿರೆ,
    ಪಿತನಿಟ್ಟ ಪೆಸರನೆ, ಬರೆದು “ಶಾಕುಂತಲ”ಮಂ || 🙂

    • 🙂 ನಿಮ್ಮ ಹೆಸರಿನ ಹಿಂದೆ ಗಣಪತಿ ಮೊಳೆಯಾರರ ಕೃತಿಯ ಕಥೆಯಿರಬಹುದೆಂದು ಹೊಳೆದಿರಲಿಲ್ಲ.

  • ಕುಕ್ಕಿದೊಡೇo ಕೊಕ್ಕರೆಯುo
   ದಕ್ಕಿದುದಕ್ಕರವು ಪದ್ಯಪಾನದೊಳಲ್ತೇ
   ಶಕ್ಕು! ಬಿಡು ಕೊಕ್ಕರಿಕೆಯನು –
   ಷಕ್ಕನೆಣಿಸಿಹಳಣೆಕಟ್ಟನೊಂದನು ಕಟ್ಟೌ !!

   *ಕೊಕ್ಕರಿಕೆ = ಬೇಸರ

   • ಆಹಾ.. ಉಷಕ್ಕ.. ನಿಮ್ಮ ಪದ್ಯದ ಸೊಗಮಂ ಬಣ್ಣಿಸಲಸದಳಂ ! 🙂

    ಚಿಕ್ಕ ತೊರೆಗಳಂ ಪೋಲುತು-
    ಮಕ್ಕಣ್ಣಂದಿರಿರೆ ಬೆರೆಯುತುಂ,ಬರೆಯುತ್ತುಂ, |
    ಚೊಕ್ಕದಣೆಕಟ್ಟವೋಲೇ
    ಪಕ್ಕನೆ ತೋರ್ಕುಂ,ವಿರಾಜಿಸಲ್ ಪದಪಾನಂ ||

    • ಆಹಾ …. ! ಅಪೂರ್ವ ” ರಕ್ಷಾಬಂಧನ ” ಶಕುಂತಲಾ !! ಇದಕ್ಕೆ ಉಡುಗೊರೆ ಖಂಡಿತ ದೊರೆಯಲಿದೆ !!!

     • ಹಾ.. ತಿಳಿಯಿತು. ನಿಮ್ಮ ಪದ್ಯದ ಉಡುಗೊರೆಗೆ ಕಾಯುತ್ತಿರುತ್ತೇನೆ ಉಷಕ್ಕ. ಬೇತಾಳನನ್ನು ನೀಡುವುದು ಮಾತ್ರ ಬೇಡ . 🙂

     • ಬಾಳ ಬವಣೆಗಳೊಡಂ ಗಡ
      ಮೇಳಯಿಸಿರೆ ಮಂದ್ರ ರಾಗದನುರಾಗಂ ಮೇಣ್
      ತಾಳಂ ಲಯಭಾವಂ , ಬೇ-
      ತಾಳ ಪದದುಡುಗೊರೆಯದಕೆ ದಿಟ್ಟಿ ಪರಿಹಾರಂ !!

     • ಚೆನ್ನಾಗಿದೆ. ಧನ್ಯವಾದಗಳು. ನೀವು ದೃಷ್ಟಿ ತೆಗೆಯುವುದಕ್ಕೆ ದೊರಕಿದ್ದು ನನ್ನ ಭಾಗ್ಯ. (ಪದ್ಯದಲ್ಲಿ ಸಣ್ಣ ತಿದ್ದಪಡಿಯಾ್ಗಬೇಕಿದೆ.ಕೊನೆಯ ಪಾದದಲ್ಲಿ ಛಂದಸ್ಸು ತಪ್ಪಿದ್ದನ್ನು ಗಮನಿಸಿರಿ )

 3. ಅಣೆಕಟ್ಟು ಕಟ್ಟಿದರು ಹರಿಯುವ ನದಿ ನೀರಿಗೆ,
  ಎಣಿಕೆಗೆಟುಕದ ಮೀನು ಮನೆಮಾಡಿತಲ್ಲಿ,
  ಕುಣಿಕುಣಿದು ಬಂತೊಂದು,ಕೊಕ್ಕರೆಯದಕ್ಕರದಿ,
  ಅಣೆಯಲಣಿಗೊಂಡಿತ್ತು ಕೊಕ್ಕಿನ ತುದಿ!!
  (ಅಣೆಯಲು=ತಿವಿಯಲು)

  • ಚೆನ್ನಾಗಿದೆ ಮಲ್ಲಿಭಾಗವತರೆ. ಛಂದಸ್ಸನ್ನು ಗಮನಿಸಿ ಸರಿಪಡಿಸಿರಿ.

   • ಧನ್ಯವಾದಗಳು, ಶಕುಂತಲಾರವರೇ.
    ನಿಮಗೆ ಕಂಡು ಬಂದ ಛಂದೋದೋಷವೇನೆಂದು ತಿಳಿಸಿ, ದಯವಿಟ್ಟು.

   • ಅಣೆಕಟ್ಟು/ಕಟ್ಟಿದರು/
    UU-U/-UUU/
    ಹರಿಯುವ ನ/ದಿ ನೀರಿಗೆ,/
    UUUUU/U-UU,
    ಎಣಿಕೆಗೆಟು/ಕದ ಮೀನು/
    UUUUU/UU-U
    ಮನೆಮಾಡಿ/ತಲ್ಲಿ,I
    UU-U/-U!
    ಕುಣಿಕುಣಿದು/ ಬಂತೊಂದು,/
    UUUUU/- -U
    ಕೊಕ್ಕರೆಯ/ದಕ್ಕರದಿ,/
    -UUU/-UUU
    ಅಣೆಯಲಣಿ/ಗೊಂಡಿತ್ತು/ಕೊಕ್ಕಿನ ತುದಿ!!
    UUUUU/- – U /
    -UUUU II

    • ಮಲ್ಲಿಭಾಗವತರೇ,ಪದ್ಯ ಚೆನ್ನಾಗಿದೆ. ಒಂದೇ ಪದ್ಯದಲ್ಲಿ ಎರಡೂ ವಸ್ತುಗಳನ್ನು ತಂದ ರೀತಿಯೂ ಸೊಗಸಾಗಿದೆ. ಇದು ಲೆಕ್ಕ ತಪ್ಪಿದುದರಿಂದಾದ ಛಂದೋದೋಷವಲ್ಲ. ‘/ದಿ ನೀರಿಗೆ /’ ಎಂಬಲ್ಲಿ ಗಣದಾರಂಭದಲ್ಲಿ ಲಗಂ(U _) ವಿನ್ಯಾಸ ಬಂದಿದೆ. ಮಾತ್ರಾಗಣ ಛಂದಸ್ಸುಗಳಲ್ಲಿ ಈ ಬಗೆಯ ವಿನ್ಯಾಸದಿಂದ ಗಣವು ಪ್ರಾರಂಭವಾಗುವಂತಿಲ್ಲ(ಷಟ್ಪದಿ,ಚೌಪದಿ ಇತ್ಯಾದಿಗಳಲ್ಲಿ). “ಅಣೆಕಟ್ಟು ಕಟ್ಟಿದರು ಪರಿವ ನದಿಗಿಂತಿದೋ” ಎಂದೇನಾದರೂ ಮಾಡಿ ತಿದ್ದಬಹುದು.

     • ಅನಂತ ವಂದನೆಗಳು ತಮ್ಮ ತಿದ್ದುಪಡಿಗೆ,ಮಂಜರವರೇ.
      ಹರಿವ ನದಿ ನೀರಿಂಗೆ ಎಂದು ಮಾಡಬಹುದೇ?!!

  • @ಮಲ್ಲಿಭಾಗವತರೇ..ನೀವಂದಂತೆ ಹರಿವ ನದಿ ನೀರಿಂಗೆ ಅಂತ ಮಾಡಿದರೆ ಲಗಂ ಪರಿಹಾರವಾಗುತ್ತದೆ

   • ಅನಂತಕೃಷ್ಣ ರಿಗೆ ಅನಂತ ಧನ್ಯವಾದಗಳು

   • “ಹರಿವ ನದಿಯುದಕಕ್ಕೆ” ಎಂದು ಸವರಿದಲ್ಲಿ ಮಲ್ಲಿಯವರ ಹೊಸಗನ್ನಡದ ಪದ್ಯಕ್ಕೆ ಹೆಚ್ಚು ಸೂಕ್ತವಾಗುವುದು. ತಿದ್ದಿದ ಮಂಜರಿಗೆ ಹಾಗೂ ಅನಂತಕೃಷ್ಣರಿಗೆ ಧನ್ಯವಾದಗಳು.

 4. ಹರಿವ ನೀರೆನುವ ನೀರೆಯನು ಬಿಗಿದಪ್ಪುತುಂ
  ಕರವಿಡಿದು ಕಾಯ್ಪಿಡುವ ಸಖನಲ್ತೆ ನೀಂ?
  ಸರಿತೆ ನಿನ್ನೊಳು ಮುನಿಯೆ, ನಿನ್ನೆದೆಯ ಗೂಡೊಡೆದು
  ತರಿವಳೇಕೈ ನಮ್ಮ ನಾಡಿನೊಡಲಂ?

  (ಅಣೆಕಟ್ಟಿನ ಬಗ್ಗೆ)

 5. ಕೆರೆಯಮ್ಮನಾ ಕತ್ತಿಗುರೆಮುತ್ತಿನಿಂ ಕೋದ
  ಸರಮೆಂಬವೋಲೇ ತೋರುತ್ತುಂ – ಬಕತತಿ
  ಕರಮೊಪ್ಪುತಿರ್ಕುಂ ಧ್ಯಾನದೊಳಂ/

 6. ಸುಂದರವಾದ ಕಲ್ಪನೆ ಮಂಜರದು !

 7. ದಿಕ್ಕುತೋಚದೆಲಿಂದು ಪ್ರಾಸ್ತುತ್ಯವೇನೆಂದು
  ಕೊಕ್ಕರೆಯ ವಿಷಯಮಂ ಬೆದಕಿದೆಂ ನಾಂ|
  ಚೊಕ್ಕವಿಹ ಜೀವಿತಾಂಶಗಳೊಳೊಂದವುಗಳೊಳ-
  ಗುಕ್ಕುವಾಜೀವದಾಂಪತ್ಯವಹುದೈ||

 8. ಬೆಂಬಿಡದಿರುವುದೊಂದೆ ಗುಣವ ಬೇರ್ಪಡಿಸಿದೊಡೆ
  ಒಂಬತ್ತು ವೇತಾಲವರ್ಗವಿಹವು|
  ಅಂಬುಜಾನನೆ, ಸಾಲಗಾರ, ಪೀಡಿಪ ಸುತರು,
  ಸಂಬಳಕೆ ಕಾದಿರುವ ಆಳುಕಾಳು, …..||

  • 🙂 ಒಟ್ಟು ಒಂಬತ್ತು ಜನ ಅಂದ್ರಲ್ಲ..ಯಾರ್ಯಾರು ಎಷ್ಟೆಷ್ಟು ಜನ ಅನ್ನೋದನ್ನೂ ತಿಳಿಸಿಬಿಡಿ

   • ಆಗಲಿ, ನಿಮ್ಮ ಮನಸ್ಸಿನಲ್ಲಿರುವುದನ್ನೇ ನಿಮಗೆ ಇಷ್ಟವಾದುದನ್ನೇ ಹೇಳೋಣ. ಸಾಲಗಾರ, ಪೀಡಿಪ ಸುತರು ಇಬ್ಬರು, ಸಂಬಳಕೆ ಕಾದಿರುವ ಆಳುಕಾಳು ಮೂವರು ಮತ್ತು ಮೂವರು ಅಂಬುಜಾನನೆಯರು. ಸಂಖ್ಯೆಯನ್ನು ವರ್ಗವೆನ್ನಲಾಗದು ಎಂಬ ತಗಾದೆ ಸಲ್ಲದು. ಒಬ್ಬೊಬ್ಬ ಸುತನೂ ಒಬ್ಬೊಬ್ಬ ಅಂಬುಜಾನನೆಯೂ ಒಂದೊಂದು type/funda 🙁

  • ಓ …ಬೇತಾಳದ ಪ್ರಶ್ನೆಗೆ ಉತ್ತರಿಸಿಬಿಟ್ಟಿರಾ ಪ್ರಸಾದ್ ಸರ್ ? ನಿಮ್ಮ ತಲೆಯೊಡೆದು ಸಾವಿರ ಹೋಳಾಗಿ ಬಿಡಬಹುದೇನೋ ಎಂದು ಭಾವಿಸಿದ್ದೆ ! ಬೆಂಬಿಡದ ಬೇತಾಳವೊಂದನಾಡಲು ಒಂಬತ್ತನಾಡಿದ್ದು ಪ್ರಾಸಕ್ಕಾಗಿ ಎಂದುಕೊಡಿದ್ದೆ . ಇವೆಲ್ಲಕ್ಕೇನಾದರೂ ರೆಫರೆನ್ಸ್ ಇದಯೇ ? ನಿಮ್ಮ ಪದ್ಯ / ವಿವರಣೆ ಎರಡೂ ಬಹಳ ಇಷ್ಟವಾಯಿತು . ಅಲ್ಲದೆ ಒಂಬತ್ತು ಸಂಖ್ಯೆ ಒಂದು ವರ್ಗವೇ !

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)