Sep 032018
 

ಜಲೋದ್ಧತಗತಿಯ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:

ಸುವಾಸಿನಿಯರೇ ವಿಲಾಸಿನಿಯರಯ್

ಮತ್ತೇಭದ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ:

ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ

  20 Responses to “ಪದ್ಯಸಪ್ತಾಹ ೩೨೩: ಸಮಸ್ಯಾಪೂರಣ”

  1. ವಿನೋದವಾಗಿ !!

    ಕವುಂಕುಳಡಿಗಂ ತುವಾಲುತುದಿಗಂ
    ಸವರ್ದ ಗಮದಿಂದಲಂಕೃತಗೊಳಲ್
    ಪವಾಡಸದೃಶಂ ಸದಾ ಸೆಳೆವವರ್
    “ಸುವಾಸಿನಿ”ಯರೇ ವಿಲಾಸಿನಿಯರೈ !!

    • ವಾಸನೆಸೂಸುವವಳು ವಾಸಿನಿ ಹ್ಹಹ್ಹ! ಹಾಗಾದರೆ, ಪೂರ್ವಜನ್ಮವಾಸನೆಯವಳು ಎಂದೂ ಚಿತ್ರಿಸಬಹುದಲ್ಲವೆ?

  2. ಸವಂಗದೊಡನೊಪ್ಪು ಸೀರೆಯುಡುತುಂ
    ಸವರ್ದಿಹ ಹರಿದ್ರ-ಕುಂಕುಮಗಳೊಳ್
    ಪವಾಡಸದೃಶಂ ದಿಟಂ ಸೆಳೆವವರ್
    ಸುವಾಸಿನಿಯರೇ ವಿಲಾಸಿನಿಯರೈ !!

    ಸವಂಗ = ಕುಪ್ಪಸ
    ಲಕ್ಷಣವಾಗಿ ಸೀರೆಯುಟ್ಟ ಹರಿದ್ರಾಕುಂಕುಮ ಶೋಭಿತೆಯರಾದ ಸುಮಂಗಲೆಯರೇ ಸುಂದರಯುವತಿಯರಲ್ಲವೇ ?

  3. ಪೃಥ್ವೀಯಲ್ಲಿ ಗರ್ಭೀಕೃತ
    ವಿವಾಹಪರಿಬಂಧದಿಂದಿರದ ಕನ್ಯೆಯರ್ ಮೇಣಿನಿಂ
    ನಿವಾಸದೊಳಗಾವಗಂ ಸುಖದಿನಿರ್ಪ ಶಿಶ್ವಗ್ರಜರ್ (ಶಿಶು+ಅಗ್ರಜರ್ = girl babies+elderly women)|
    ವಿವೇಕದೊಳಗಿರ್ಪರೈ ಮಿತಿಯ ಮೀರರೆಂದುಂ ವಲಂ
    ಸುವಾಸಿನಿಯರೇ ವಿಲಾಸಿನಿಯರಯ್ ಪ್ರಿಯಂಕರ್ತೃವೊಳ್ (ಪ್ರಿಯಕರ=husband)||

    • ಜಲೋದ್ಧತ ಸಮಸ್ಯೆಗೆ ಯತಿ ಪಾಲಿಪ ಪೃಥ್ವಿ ಪರಿಹಾರ !! ಸೊಗಸಾಗಿದೆ ಪ್ರಸಾದ್ ಸರ್ .

  4. ಗವಾಕ್ಷವದನರ್ ನಿರೀಕ್ಷಿಸಿದಪರ್
    ಗವಾಗ್ರಸಖನಂ ಯಶೋಧಸುತನಂ
    ಪ್ರವೇಶಿಸಿರೆ ಕಣ್ಬೊಲಂಗಳೊಳವಂ
    ಸುವಾಸಿನಿಯರೇ ವಿಲಾಸಿನಿಯರೈ
    [ ಹಸುಗಳ ಅಗ್ರಸಖನಾದ ಯಶೋಧೆಯ ಮಗನನ್ನು ಕಿಟಕಿಯಲ್ಲಿ ಮುಖವಿಟ್ಟು ನಿರೀಕ್ಷಿಸಿದ ಸುವಾಸಿನಿಯರು, ಅವನು ದೃಷ್ಟನಾದಾಗ ವಿಲಾಸಿನಿಯರಾದರು ]

  5. ಅವಾಚ್ಯಪದಗಳ್ ಸುವಾಚ್ಯಮೆನಿಕುಂ
    ಭವಿಷ್ಯದೊಳಗಂ ವಿರೂಪಗೊಳುತುಂ
    ಪ್ರವಾದಿಯೆನಿಪಂ ಪವಾಡಮೆಸೆವಂ
    ಸುವಾಸಿನಿಯರೇ ವಿಲಾಸಿನಿಯರೈ
    [ ಭವಿಷ್ಯದಲ್ಲಿ ಅವಾಚ್ಯಪದಗಳೂ ವಿರೂಪಗೊಂಡು ಸುವಾಚ್ಯವಾಗಬಹುದು. ಪವಾಡ ಮಾಡುವವನು ಪ್ರವಾದಿಯೆನಿಸುವನು. ವಿಲಾಸಿನಿಯರೂ ಸುವಾಸಿನಿಯರೆನಿಸಬಹುದು ]

  6. ಪೆಸರೆಂತುಂ ಕೊಡುಕೊಳ್ಳುವಾಗೆ ವಿಷಯಾಸಕ್ತoಗೆನಲ್ ತಕ್ಕುದೌ ,
    ಪುಸಿದುಂ ಕೊಳ್ಳುತಿಹಂ ಗಡಾ ನಿರತವುo ಸಾಲಾನುಸಾಲಂಗಳಂ
    ಪೊಸದಲ್ಲಂ ಪೊಸೆದಿರ್ಪ ಮೇಣ್ ಕಳುವನುಂಗೈಯ್ಯಲ್ ಕಥಾಲಾಪವಂ
    ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯೊಡ್ಡಿದಂ ” ಭೋಗಿ ” ತಾಂ !!

    ವಿಷಯಾಸಕ್ತನ beg – borrow – steal ಗುಣಗಳ ಅನಾವರಣ !! ಅವನಿಗೊಂದು ತಕ್ಕ ಹೆಸರು ಕೊಡುವುದಾದರೆ – ” ಭೋಗಿ ” ತಾಂ

  7. ಸುವಾಸಿನಿಯರೇ!!ವಿಲಾಸಿನಿಯರೈ
    ವಿವಾಹದೊಳು ತಾಂ ಪ್ರವೇಶಿಸಿ ಮಹಾ
    ನ್ವಿವಾದಗಳನುಂ ವಿಕಲ್ಪಿಸುತಿರಲ್,
    ನಿವಾರಿಸಿದನೀಮ್ ಕುಶಾಗ್ರಮತಿಯರ್!
    *ಎಚ್ಚರಿಕೆ*

    • ಸುವೇದ್ಯ ಪೂರಣದೊಂದಿಗೆ , ದಂಪತಿ ಸಮೇತರಾಗಿ ಬಂದ ಕಾಂಚನರಿಗೆ ಸುಸ್ವಾಗತ !!

  8. ಹಸನಾಗಿರ್ಪುದವಲ್ತೆ ವೈರಿಗುಣಗಳ್ ಜೀವರ್ಕಳೊಳ್ ಸಂಗದಿಂ
    ವಸನಂ ಸ್ವಾರ್ಥಕಮಂತೆ ಬಾಗಗೊಡದಿರ್ಪಾ ಸ್ವಾಭಿಮಾನಕ್ಕೆ ದಲ್
    ಕಸದೊಲ್ ನೀಳ್ದೊಡೆ ಗರ್ವದಿಂದಲುಣಿಸಂ ಸಂಕಷ್ಟಮಾಂತರ್ಯದೊಳ್
    ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ
    [ಒಬ್ಬನಲ್ಲೇ ವೈರಿಗುಣಗಳು ಸಂಗದಿಂದಿರುತ್ತವೆ. ಸ್ವಾರ್ಥ ಹಾಗು (ಬಾಗಗೊಡದ) ಸ್ವಾಭಿಮಾನಗಳು ಒಟ್ಟಿಗೆ ನೆಲೆಸಿರುತ್ತವೆ. ಗರ್ವದಿಂದ ಕಸದಂತೆ ಉಣಿಸನ್ನು ನೀಡಿದಾಗ, ಭಿಕ್ಷುಕನಲ್ಲಿರುವ ಆರ್ತನು ನಿರಾಕರಿಸುತ್ತಿರಲು, ಅವನಲ್ಲಿನ ಭೋಗಿ ಕೈಯೊಡ್ಡಿದನು]

  9. ನೊಸಲಂ ಚುಂಬಿಸೆ ಪತ್ನಿಯನ್ನೆಳಸಿದಂ ಮೃಷ್ಟಾನ್ನಮನ್ನುಂಡವಂ
    ಬಿಸಿಲೊಳ್ ದ್ವಾರದ ಬಾಹಿರಂ ಪಳಸಿದನ್ನಕ್ಕೊರ್ವನೇಗಿರ್ದಪಂ
    ಅಸಮಂ ಲೋಕವಿಚಾರನೀತಿಯಕಟಾ ಕಜ್ಜಕ್ಕೆ ಬೀಸಾಡಿರಲ್
    ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ
    [ ಮೃಷ್ಟಾನ್ನವನ್ನು ಊಟಮಾಡಿ ರಮಿಸಲು ಪತ್ನಿಯನ್ನೆಳಸುತ್ತಿದ್ದವನೊಬ್ಬ. ಹೊರಗೆ ಬಿಸಿಲಿನಲ್ಲಿ ಹಳಸು ಅನ್ಕಕ್ಕಾಗಿ ಕೆಲಸಮಾಡುತ್ತಿದ್ದನೊಬ್ಬ. ಈ ಸಮಾನತೆಯಿಲ್ಲದ ಲೋಕದಲ್ಲಿ, ದುಡಿತಕ್ಕೆ ಬಿಸಾಕಿದ ಭಿಕ್ಷೆಯನ್ನು ಹಸಿದವನು ತೃಣವೆನ್ನುತ್ತಿರಲು, ಭೋಗಿ (ಪತ್ನಿಯೆಡೆಗೆ) ಕೈಯೊಡ್ಡಿದ್ದ ]

  10. ನಸುಕೊಳ್ ಜಾಠರತಾಪತಪ್ತಯುಗಳರ್ ಭಿಕ್ಷಾಟನಂಗೈದಿರ-
    -ಲ್ಕಸುವಂ ನೂಂಕುವ ವಿಪ್ರನೊರ್ವನವರೊಳ್ ಚಂಡಾಲನಿನ್ನೊರ್ವನಾ
    ದಿಸೆಯೊಳ್ ಗೇಹಮದೊಂದರೊಳ್ ನೆಲೆಸಿದಳ್ ಮಾಂಸಾನ್ನಮಂ ತಂದೊಡಂ
    ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯೊಡ್ಡಿದಂ ಭೋಗಿ ತಾಂ

    ದರಿದ್ರಬ್ರಾಹ್ಮಣನೂ ಚಂಡಾಲನೂ ಜತೆಯಾಗಿ ಭಿಕ್ಷೆಬೇಡುತ್ತಿರಲಾಗಿ, ಮನೆಯೊಂದರಲ್ಲಿ ಮಾಂಸಾನ್ನವನ್ನು ಭಿಕ್ಷೆಯಾಗಿ ಇತ್ತಾಗ ಬ್ರಾಹ್ಮಣನು ನಿರಾಕರಿಸಿದರೆ ಚಂಡಾಲ ಸಂತಸದಿಂದ ಕೈಯೊಡ್ಡಿದ ಅನ್ನುವ ಯತ್ನ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)