ಪದ್ಯಸಪ್ತಾಹ ೩೨೪: ವರ್ಣನೆ ಪದ್ಯ ಕಲೆ, ವರ್ಣನೆ Add comments Sep 112018 ೧. ಶಿವನ ತಾಂಡವವನ್ನು ಕಂಡು ಪಾರ್ವತಿಯ ಸ್ವಗತ ೨. ಮುಸುಕಿನ ಜೋಳ ೩. ಗುಡಿಸಲ ಗುಟ್ಟು ೪. ಹದ 6 Responses to “ಪದ್ಯಸಪ್ತಾಹ ೩೨೪: ವರ್ಣನೆ” ಮಂಜ says: September 13, 2018 at 5:31 pm ದೇಹದ ಪರಿವೆಯುಮಿಲ್ಲದೆ ಮೋಹವಿಹೀನಂ ಪದಂಗಳಂ ಘಾತಿಸೆ ಮ ನ್ಮೋಹಕಸುತ-ವಿಘ್ನೇಶ್ವರ ವಾಹನಮೊಂದಲ್ಲಿ ಸಿಲ್ಕದಿರಲಕಟಕಟಾ! ದೇಹದ ಪರಿವೆಯೇ ಇಲ್ಲದೆ ಶಿವನು ತಾಂಡವದಲ್ಲಿ ಪಾದಗಳನ್ನು ನೆಲಕ್ಕೆ ಘಟ್ಟಿಸುವಾಗ ಪಾರ್ವತಿ ತನ್ನ ಪ್ರಿಯಪುತ್ರ ಗಣೇಶನ ವಾಹನವು ಅವನ ಕಾಲುಗಳಿಗೆ ಸಿಲುಕದಿರಲಿ ಎಂದುಕೊಳ್ಳುತ್ತಾಳೆ. Reply ಹಾದಿರಂಪ says: September 14, 2018 at 3:30 pm ಶ್ರೀ ನೀಲಕಂಠಕುಲಕರ್ಣಿಯವರ ಪದ್ಯಗಳು (From fb) ಗುಡಿಸಲ ಗುಟ್ಟು: ಭಿಕ್ಷಾನ್ನ, ಬಿಳಲು ಬಿದ್ದ ಜಡೆ, ಕರಿದೊಗಲುಡುಗೆ, ಬೂದಿಬಡಿದ ಮೈ ಇವೆಲ್ಲ ಜಗತ್ತಿಗೆ ತಿಳಿದಿದ್ದರೂ ಗೌರಿ ಇವನರ್ಧಶರೀರವನ್ನು ಹೊಂದಿದಾಗ ಆ ಬಡವ ಶಿವನ ಗುಡಿಸಲಿನ ಗುಟ್ಟು ರಟ್ಟಾಯಿತು – ಅಲ್ಲಿ ಇಬ್ಬರು ಮಲಗಲೂ ಜಾಗವಿಲ್ಲವೆಂಬುದು! ಚಂಪಕಮಾಲೆ|| ತಿರುಪೆಯನೆತ್ತಿ ತಿಂಬ ಪರಿ, ಎಣ್ಣೆಯನುಣ್ಣದ ಕೂಂದಲೊಡ್ಡವಂ ಕರಿದೊಗಲುಟ್ಟು ಸುಟ್ಟೆಡೆಯ ಬೂದಿಯ ಮೆತ್ತಿದ ಮೈ ಇದೆಲ್ಲಮಂ ಧರೆಯರಿತಿರ್ದುಮಂಬೆ ತನುವರ್ಧವನೊಂದೆ ಕುಟೀರಹಸ್ಯಮಿ- ನ್ನಿರದವೊಲಾದುದಿರ್ವರೊರಗಲ್ಕಿರದಿರ್ಪನಿತೊಂದು ತಾವಮುಂ! ——- ಶಿವನ ತಾಂಡವಕ್ಕೆ ಪಾರ್ವತಿಯ ಪ್ರತಿಕ್ರಿಯೆ: ಹಾಲಾಹಲದಿಂದಾಗಿ ನೀಲಕಂಠ ಎನಿಸಿಕೊಂಡದ್ದರಲ್ಲಿ ಏನು ಭಾಗ್ಯವಿದೆ?! ಇಂದು ತನ್ನ ಜಟೆಗಳೆಂಬ ಮೋಡಗಳನ್ನು ನೋಡಿ ನೀಲಕಂಠದಂತೆ (ನವಿಲಿನಂತೆ) ನರ್ತನ ಮಾಡಿದ್ದು ಲೀಲೆಯಾಯ್ತು! ರಥೋದ್ಧತ|| ಕಾಲಕೂಟಗರವೀರ್ದ ಕಾಲದಿಂ ನೀಲಕಂಠನೆನಿಸಿರ್ಪ ಭಾಗ್ಯಮೇಂ?! ಲೀಲೆಯಯ್ ನಿಜಜಟಾಬ್ದವೀಕ್ಷೆಯಿಂ ನೀಲಕಂಠಸಮನೃತ್ಯವಾಡಿದಂ! Reply ನೀಲಕಂಠ says: September 17, 2018 at 3:32 pm ಹಂಚಿದ್ದಕ್ಕೆ ಧನ್ಯವಾದಗಳು! ಆದರೆ ಇದೇನು, ನಾನಿಷ್ಟು ದಿನ ಇತ್ತಕಡೆ ಸುಳಿದಿಲ್ಲವಾದ ಮಾತ್ರಕ್ಕೆ ನನಗೆ ಶ್ರೀಕಾರ ಓಂಕಾರಗಳ ಹಾಹಾಕಾರವೆಬ್ಬಿಸಿಬಿಟ್ಟಿದ್ದೀರಿ! Reply ಹಾದಿರಂಪ says: September 23, 2018 at 10:35 pm ಈಗಳೆಲ್ಲ ಮಠಾಧಿಪತಿಯಾಗುವುದು ಸರ್ವವಿಧದಲ್ಲೂ ಪ್ರಯೋಜನಕಾರಿಯಲ್ಲವೆ? ಒಂದು ಶ್ರೀ ಸಾಲದೇನೋ! ಶ್ರೀಶ್ರೀಶ್ರೀ ಎನ್ನಲೆ. ಆನುಷಂಗಿಕವಾಗಿ ಒಂದು ಅಲೋಚನೆ ಮೂಡಿದೆ. ಅಭಿಜಾತಕಾವ್ಯಗಳಲ್ಲಿ ’ಮಠ’ವೆಂದರೆ ಗುರುಕುಲವಲ್ಲವೆ? ಈಚೆಗೆ, ಮಠವೆಂದರೆ ಏನೇನೋ ಅರ್ಥ! ಆಗ ಇದ್ದುದು ಬರಿಯ ಋಷ್ಯಾಶ್ರಮಗಳು. Reply ಅನಂತಕೃಷ್ಣ says: September 18, 2018 at 8:50 pm ನೀವು ಅಸಾಧ್ಯರೇ ಸರಿ. ಭಗೀರಥ ಬರಿಯ ಗಂಗೆಯನ್ನು ಭೂಮಿಗರಳೆತಂದರೆ ನೀವು ಕಾವ್ಯಗಂಗಾಸಮೇತರಾದ ಗಂಗಾಧರ(ನೀಲಕಂಠ)ರನ್ನೇ ಪದ್ಯಪಾನಕ್ಕೆ ಎಳೆತಂದಿದ್ದೀರ _/\_ Reply ಹಾದಿರಂಪ says: September 23, 2018 at 10:16 pm ಮುಸುಕಿನ ಜೋಳ – ಬಿ.ಜಿ.ಎಲ್. ಸ್ವಾಮಿಯವರ ಶಾಸ್ತ್ರವಿಚಾರದ ಪದ್ಯರೂಪ: ಗಂಡುಪೂಗೊಂಚಲದು ಪಿಂಛಶಿಖದೊಲ್ ಕೊನರಿ ಕಾಂಡಾಗ್ರಭಾಗದಿಂ ಕೆದರಿರ್ಪುದು| ಕಾಂಡದೆಲೆಪರ್ವಕೋನದೊಳುಂಟು ಪೆಣ್ಪೂವ ಜೊಂಡವೊಲ್ ರೇಣುವಾಹಿಯ ರಾಜಿಯುಂ|| ಘಾತಿಸಲ್ ಗಾಳಿಯದು, ಮಕರಂದವುದುರಲಾ- ಧೂತರೇಣುಕಣವೆಲ್ಲವು ಮೊಳೆಯುತುಂ| (ಆಧೂತ=ತೂಗಾಡುವ) ರೇತಸ್ಸು ಗರ್ಭಾಶಯದೊಳಿರ್ಪ ತತ್ತಿಯಂ ಚೈತನ್ಯವಾಗಿಸಲು ಕಾಳಾದುದೈ|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ದೇಹದ ಪರಿವೆಯುಮಿಲ್ಲದೆ
ಮೋಹವಿಹೀನಂ ಪದಂಗಳಂ ಘಾತಿಸೆ ಮ
ನ್ಮೋಹಕಸುತ-ವಿಘ್ನೇಶ್ವರ
ವಾಹನಮೊಂದಲ್ಲಿ ಸಿಲ್ಕದಿರಲಕಟಕಟಾ!
ದೇಹದ ಪರಿವೆಯೇ ಇಲ್ಲದೆ ಶಿವನು ತಾಂಡವದಲ್ಲಿ ಪಾದಗಳನ್ನು ನೆಲಕ್ಕೆ ಘಟ್ಟಿಸುವಾಗ ಪಾರ್ವತಿ ತನ್ನ ಪ್ರಿಯಪುತ್ರ ಗಣೇಶನ ವಾಹನವು ಅವನ ಕಾಲುಗಳಿಗೆ ಸಿಲುಕದಿರಲಿ ಎಂದುಕೊಳ್ಳುತ್ತಾಳೆ.
ಶ್ರೀ ನೀಲಕಂಠಕುಲಕರ್ಣಿಯವರ ಪದ್ಯಗಳು (From fb)
ಗುಡಿಸಲ ಗುಟ್ಟು: ಭಿಕ್ಷಾನ್ನ, ಬಿಳಲು ಬಿದ್ದ ಜಡೆ, ಕರಿದೊಗಲುಡುಗೆ, ಬೂದಿಬಡಿದ ಮೈ ಇವೆಲ್ಲ ಜಗತ್ತಿಗೆ ತಿಳಿದಿದ್ದರೂ ಗೌರಿ ಇವನರ್ಧಶರೀರವನ್ನು ಹೊಂದಿದಾಗ ಆ ಬಡವ ಶಿವನ ಗುಡಿಸಲಿನ ಗುಟ್ಟು ರಟ್ಟಾಯಿತು – ಅಲ್ಲಿ ಇಬ್ಬರು ಮಲಗಲೂ ಜಾಗವಿಲ್ಲವೆಂಬುದು!
ಚಂಪಕಮಾಲೆ|| ತಿರುಪೆಯನೆತ್ತಿ ತಿಂಬ ಪರಿ, ಎಣ್ಣೆಯನುಣ್ಣದ ಕೂಂದಲೊಡ್ಡವಂ
ಕರಿದೊಗಲುಟ್ಟು ಸುಟ್ಟೆಡೆಯ ಬೂದಿಯ ಮೆತ್ತಿದ ಮೈ ಇದೆಲ್ಲಮಂ
ಧರೆಯರಿತಿರ್ದುಮಂಬೆ ತನುವರ್ಧವನೊಂದೆ ಕುಟೀರಹಸ್ಯಮಿ-
ನ್ನಿರದವೊಲಾದುದಿರ್ವರೊರಗಲ್ಕಿರದಿರ್ಪನಿತೊಂದು ತಾವಮುಂ!
——-
ಶಿವನ ತಾಂಡವಕ್ಕೆ ಪಾರ್ವತಿಯ ಪ್ರತಿಕ್ರಿಯೆ: ಹಾಲಾಹಲದಿಂದಾಗಿ ನೀಲಕಂಠ ಎನಿಸಿಕೊಂಡದ್ದರಲ್ಲಿ ಏನು ಭಾಗ್ಯವಿದೆ?! ಇಂದು ತನ್ನ ಜಟೆಗಳೆಂಬ ಮೋಡಗಳನ್ನು ನೋಡಿ ನೀಲಕಂಠದಂತೆ (ನವಿಲಿನಂತೆ) ನರ್ತನ ಮಾಡಿದ್ದು ಲೀಲೆಯಾಯ್ತು!
ರಥೋದ್ಧತ|| ಕಾಲಕೂಟಗರವೀರ್ದ ಕಾಲದಿಂ
ನೀಲಕಂಠನೆನಿಸಿರ್ಪ ಭಾಗ್ಯಮೇಂ?!
ಲೀಲೆಯಯ್ ನಿಜಜಟಾಬ್ದವೀಕ್ಷೆಯಿಂ
ನೀಲಕಂಠಸಮನೃತ್ಯವಾಡಿದಂ!
ಹಂಚಿದ್ದಕ್ಕೆ ಧನ್ಯವಾದಗಳು! ಆದರೆ ಇದೇನು, ನಾನಿಷ್ಟು ದಿನ ಇತ್ತಕಡೆ ಸುಳಿದಿಲ್ಲವಾದ ಮಾತ್ರಕ್ಕೆ ನನಗೆ ಶ್ರೀಕಾರ ಓಂಕಾರಗಳ ಹಾಹಾಕಾರವೆಬ್ಬಿಸಿಬಿಟ್ಟಿದ್ದೀರಿ!
ಈಗಳೆಲ್ಲ ಮಠಾಧಿಪತಿಯಾಗುವುದು ಸರ್ವವಿಧದಲ್ಲೂ ಪ್ರಯೋಜನಕಾರಿಯಲ್ಲವೆ? ಒಂದು ಶ್ರೀ ಸಾಲದೇನೋ! ಶ್ರೀಶ್ರೀಶ್ರೀ ಎನ್ನಲೆ. ಆನುಷಂಗಿಕವಾಗಿ ಒಂದು ಅಲೋಚನೆ ಮೂಡಿದೆ. ಅಭಿಜಾತಕಾವ್ಯಗಳಲ್ಲಿ ’ಮಠ’ವೆಂದರೆ ಗುರುಕುಲವಲ್ಲವೆ? ಈಚೆಗೆ, ಮಠವೆಂದರೆ ಏನೇನೋ ಅರ್ಥ! ಆಗ ಇದ್ದುದು ಬರಿಯ ಋಷ್ಯಾಶ್ರಮಗಳು.
ನೀವು ಅಸಾಧ್ಯರೇ ಸರಿ. ಭಗೀರಥ ಬರಿಯ ಗಂಗೆಯನ್ನು ಭೂಮಿಗರಳೆತಂದರೆ ನೀವು ಕಾವ್ಯಗಂಗಾಸಮೇತರಾದ ಗಂಗಾಧರ(ನೀಲಕಂಠ)ರನ್ನೇ ಪದ್ಯಪಾನಕ್ಕೆ ಎಳೆತಂದಿದ್ದೀರ _/\_
ಮುಸುಕಿನ ಜೋಳ – ಬಿ.ಜಿ.ಎಲ್. ಸ್ವಾಮಿಯವರ ಶಾಸ್ತ್ರವಿಚಾರದ ಪದ್ಯರೂಪ:
ಗಂಡುಪೂಗೊಂಚಲದು ಪಿಂಛಶಿಖದೊಲ್ ಕೊನರಿ
ಕಾಂಡಾಗ್ರಭಾಗದಿಂ ಕೆದರಿರ್ಪುದು|
ಕಾಂಡದೆಲೆಪರ್ವಕೋನದೊಳುಂಟು ಪೆಣ್ಪೂವ
ಜೊಂಡವೊಲ್ ರೇಣುವಾಹಿಯ ರಾಜಿಯುಂ||
ಘಾತಿಸಲ್ ಗಾಳಿಯದು, ಮಕರಂದವುದುರಲಾ-
ಧೂತರೇಣುಕಣವೆಲ್ಲವು ಮೊಳೆಯುತುಂ| (ಆಧೂತ=ತೂಗಾಡುವ)
ರೇತಸ್ಸು ಗರ್ಭಾಶಯದೊಳಿರ್ಪ ತತ್ತಿಯಂ
ಚೈತನ್ಯವಾಗಿಸಲು ಕಾಳಾದುದೈ||