Sep 162018
 

ಈ ಬಾರಿಯ ಗಣೇಶಚತುರ್ಥಿಯ ಅಂಗವಾಗಿ ನಮ್ಮ ರಾಮಣ್ಣನ ತಮ್ಮನ ಮಗ ಮಾಡಿದ ಅತಿಸುಂದರವಾದ ಮಣ್ಣಿನ ಗಣೇಶನನ್ನು ಕುರಿತು ಪದ್ಯ ರಚಿಸಿರಿ

  50 Responses to “ಪದ್ಯಸಪ್ತಾಹ ೩೨೫: ಚಿತ್ರಕ್ಕೆ ಪದ್ಯ”

  1. ಮಣ್ಣಾಟಕ್ಕೊಲವೀವುದರ್ಭಕರಿಗಂ ಸಾಮಾನ್ಯಮಾಗಿರ್ದೊಡಂ
    ಮಣ್ಣಂ ನೀನೆಲೆ ಮೈಯದುಂಬುವ ತೆರಂ ಮೆತ್ತಾಡಿಕೊಂಡಿರ್ಪೆಯೇಂ!
    ಚಿಣ್ಣಾ ನಿನ್ನಯ ತಾಯ ಮೈಗೊಳೆಯದೇಂ ಸಾಕಾಗದಾಯ್ತೇನೊ ಮು-
    ಕ್ಕಣ್ಣಂಬೋಲ್ವ ವಿಶೇಷವೇಷಕೆನುತೇನಿಂತಪ್ಪುದೋ ಒಪ್ಪಿನಿಂ?!

    ಮಣ್ಣಾಟವಾಡುವುದು ಮಕ್ಕಳಿಗೆ ಸಾಮಾನ್ಯ. ಆದರೆ ಈ ರೀತಿ ಇಡೀ ಮೈದುಂಬುವಂತೆ ಮಣ್ಣ ಬಳಿದುಕೊಂಬುವುದೇ! ನಿನ್ನ ತಾಯಿಯ ಮೈಗೊಳೆಯ ಮಣ್ಣು ನಿನಗೆ ಸಾಕಾಗದೇ ಹೋಯಿತೇ ಅಥವಾ ಮುಕ್ಕಣ್ಣನ ವೇಷ ತಾಳಲು ಈ ರೀತಿ ಬಳಿದುಕೊಂಡೆಯಾ?!

  2. ಶಿವಪಾರ್ವತಿಯರ ಅಂಶವನ್ನು ಧರಿಸಿದ ಮೂರ್ತಿ ತುಂಬಾ ಚೆನ್ನಾಗಿದೆ . ಚತುರಮತಿಯಾದ ಗಣೇಶನು ಒಮ್ಮೆ ನಿಬ್ಬೆರಗಾಗುವಂತಿದೆ 🙂

  3. ಅಪ್ಪನು ಮೀಯಲು ನದಿಗಿಳಿದಾಗಲೆ-
    ಯಪ್ಪಿದೆನಪ್ಪನ ಬಟ್ಟೆಯ ತುಂಡ-
    ನ್ನೊಪ್ಪುತಲಮ್ಮನ ವಾಹನವನ್ನೀಮಣ್ಣಿನ ರೂಪದೊಳು
    ಅಪ್ಪನ ಶೂಲವ ಹಿಡಿಯಲು ನಾನಿದೊ
    ದಪ್ಪನೆ ನಾಗರವೇರಿತು ಶಿರವನು
    ತುಪ್ಪದ ಪರಿಮಳ ಬೀರುವ ಮೋದಕ ನೆಚ್ಚಿತು ಸೊಂಡಿಲನು

    • Hahaa
      ಉತ್ತರಾರ್ಧ ಹೀಗೆ ಮಾಡಿದರೆ ಚೆನ್ನಾಗಿರುತ್ತೆ

      ಅಪ್ಪನ ಶೂಲವ ಹಿಡಿಯಲು ನಾನಿದೊ
      ದಪ್ಪನೆ ನಾಗರವೇರಿತು ಶಿರವನು
      “ಬೆಪ್ಪನೆ ಎನ್ನೊಡೆಯನ ಶಸ್ತ್ರವನೇಕೆಲೆ ಧರಿಸಿದೆ” ಎಂದು

    • ಬಹಳ ಚೆನ್ನಾಗಿದೆ ಬಾಲಗಣೇಶನ ಸಲುಗೆ

    • ಮುದ್ದಾಗಿದೆ

  4. ಎನ್ನ ಶಿರಮನಂದು ತೆಗೆದ
    ನಿನ್ನಿಂದಾಂ ಗಜಮುಖಂ ಕರಿಯ ಮುಖವಾಡಂ
    ಚೆನ್ನಂ ನಿನಗುಂ ತೊಡೆನಲ್
    ತನ್ನಾನನಮಂ ಗಿರೀಶನೀಪರಿ ತೋರ್ದಂ

    • ಸೋಮರೆ, ಚೆನ್ನಾಗಿದೆ ಕಲ್ಪನೆ! ಮೊದಲೆರಡು ಸಾಲುಗಳಲ್ಲಿ ಕಂದಪದ್ಯದ ಗತಿ ಸರಿಯಾಗಿ‌ ಬಂದಿಲ್ಲ. ತಿದ್ದಬೇಕು. ಮುಖವಾಡ – ಮೊಗವಾಡ.

    • ಕಲ್ಪನೆ ಬಲುಚೆನ್ನ

  5. ಚಿತ್ತವಿಭ್ರಾಂತಿಯಿಂ ಕತ್ತುಕುಯ್ದಲ್ಲದೇ
    ಮತ್ತಮಾ ಮತ್ತಮಾತಂಗವಕ್ತ್ರೋದ್ಧತಂ-
    ಬೊತ್ತಿರಲ್ಕೊತ್ತಿದಂ ಕೃತ್ತಿವಾಸಂ ಸ್ವಕೀ-
    ಯಾತ್ತಘೋರತ್ವಮೊಂದಿತ್ತನೇಂ ದೌಷ್ಟ್ಯದಿಂ!

    ತಲೆಕೆಟ್ಟು ನಿನ್ನ ಕತ್ತು ಕತ್ತರಿಸಿದ್ದಲ್ಲದೇ ಮದ್ದಾನೆಯ ತೆಲೆಯನ್ನು ಬೇರೆ ಹೊತ್ತುತಿರುಗುವಂತೆ ಮಾಡಿದ ನಿನಗೆ ನಿಮ್ಮಪ್ಪ. ಈಗ ತನ್ನ ಘೋರರೂಪವನ್ನೂ ನಿನಗೆಯೇ ಇತ್ತನೇ ದುಷ್ಟತನದಿಂದ!

    • ನೀಲಕಂಠತ್ವಮೇ ಘೋರರೂಪಾಸ್ಪದಂ
      ಭಾಲಚಂದ್ರಗದಿಲ್ಲಿಲ್ಲಮೈ ನೋಳ್ಪೊಡಂ 😉

  6. ಅಂಗಾಂಗಗಳೊರ್ಧಮಂ ತಾಯಿಗಿತ್ತಿರ್ಪೆ
    ಗಂಗಮ್ಮನಂ ಮುಡಿಯೊಳಿಟ್ಟಿರ್ಪೆ ನೀಂ
    ಸಂಗಾತಿಗಳಿಗಿತ್ತ ಕೂರ್ಮೆಯೆನಗಿಲ್ಲೆನಲು
    ದಂಗಾಗಿ ದೇಹಮನೆ ನಿನಗಿತ್ತನೆ?

    ಬಾಲಗಣಪ -“ಅಮ್ಮನಿಗೆ ಅರ್ಧದೇಹವನ್ನು ಕೊಟ್ಟು,ಗಂಗಮ್ಮನನ್ನು ತಲೆಯ ಮೇಲೆ ಹೊತ್ತಿರುವೆ.ಹೆಂಡತಿಯರ ಮೇಲಿರುವ ಪ್ರೀತಿ ನನ್ನ ಮೇಲೆ ನಿನಗಿಲ್ಲ” ಎಂದಾಗ ಶಿವನು ದಂಗಾಗಿ ತನ್ನ ಪೂರ್ಣದೇಹವನ್ನೇ ಮಗನಿಗಿತ್ತನೆ? ಅನ್ನುವ ಪ್ರಯತ್ನ

    • ಆಹಾ! ಎಂಥ ಸೊಗಸಾದ ಕಲ್ಪನೆ ಹಾಗು ಪದ್ಯ!!
      (ಮೊದಲ ಸಾಲಿನಲ್ಲೊಂದು ಮಾತ್ರೆ ಎರಡನೆ ಸಾಲಿನಲ್ಲೊಂದು ಕೊನೆಯ ಗುರು ಹಾಕಿ)

      • ಧನ್ಯವಾದಗಳು_/\_. ನೀವಂದಂತೆ ಎರಡನೆಯ ಸಾಲನ್ನು ತಿದ್ದಿದ್ದೇನೆ. ಮೊದಲನೆಯ ಸಾಲು ಸರಿಯಾಗಿದೆ ಅನ್ನಿಸಿತು. ದಯವಿಟ್ಟು ಎಲ್ಲಿ ತಪ್ಪಿದೆ ಅಂತ ತಿಳಿಸಿ.
        ಅಂಗಾಂಗ| ಗಳೊಳರ್ಧ| ಮಂತಾಯಿ|ಗಿತ್ತಿರ್ಪೆ

        • ಅಂಗಾಂಗ | ಗಳೊರ್ಧ | ಮಂ ತಾಯಿ | ಗಿತ್ತಿರ್ಪೆ

          tappiruvudu okkaNikeyalli, padyadalli alla 🙂

    • ತುಂಬ ಚೆನ್ನಾಗಿದೆ ಪದ್ಯ

    • ಬಹಳ ಚೆನ್ನಾದ ಕಲ್ಪನೆ

    • ಭಳಾ

  7. ರೂಪಿಂ ಶೈವರನಂತೆಯೇ ವದನದಿಂದಂ ಗಾಣಪತ್ಯರ್ಕಳಂ
    ಸೋಪಾನಂ ಹರಪತ್ನಿವಾಹನಮೆ ತಾನಾಗಿರ್ದೊಡಂ ಶಾಕ್ತರಂ
    ಸೈಪಿಂದಿಂತೊಡಗೂಡುವಂದದಿನೆ ತಾಂ ಗೈದಿರ್ಪ ಶಿಲ್ಪಂ ಸದಾ
    ಶಾಪಂಬೋಲ್ವ ರಿಪುತ್ವಮಂ ಕಳೆಯುತೇಗಳ್ ಸಲ್ಗುಮೀ ಲೋಕದೊಳ್/

    ರೂಪವು ಶಿವನಂತಿರಲು ಶೈವರನ್ನು, ವದನವು ಗಣಪತಿಯದ್ದಾಗಿರಲು ಗಾಣಪತ್ಯರನ್ನು, ಸೋಪಾನವು ಸಿಂಹವಾಗಿರಲು ಶಾಕ್ತ್ಯರನ್ನು ಒಂದಾಗಿಸಿದ ಈ ಶಿಲ್ಪವು ಶಾಪದಂತಿರುವ ಶತ್ರುತ್ವವನ್ನು ಕಳೆಯುತ್ತಾ ಲೋಕದಲ್ಲಿ ಯಾವಾಗಲೂ ಸಲ್ಲಲಿ

  8. ಪೆತ್ತವನೋಡನೊಡ್ಡಿ ತಿರೆಯೊಳ್ ತಿರಿಯುತ್ತಿರೆ ದಮ್ಮ ದತ್ತಯೆಂ
    ದೆತ್ತಣಿನಾಡಲಾಟಿಗೆಗಳಂ ಕೊಡಲಾರ್ಪನದರ್ಕೆಯಾತನಿಂ
    ಕಿತ್ತುರೆ ಪಾವು ಸೂಡಿ ಪೆರೆ ಸೂಲಮನೆತ್ತಿ ಹುಡುಕ್ಕೆಗಿಕ್ಕಿ ತಾಯ್
    ಪತ್ತುಮಿಭಾರಿಯಂ ಕಳಭಮೌಂಕುತೆ ಬಿಜ್ಜೆ ಪದಸ್ಸಿಕುಂ ಕಣಾ॥

    ಪದಸ್ಸಿಕುಂ- ಪ್ರದರ್ಶಿಸುವುದು

    • ತುಂಬಾ ಚೆನ್ನಾಗಿದೆ ಸರ್

    • ಮತ್ತೊಮ್ಮೆ ಸ್ವಾಗತ. ಮತ್ತೊಮ್ಮೆ ನಾಪತ್ತೆಯಾಗಬೇಡಿ. ಹೆಚ್ಚೇನು, ನಿಮ್ಮ ಪದ್ಯವನ್ನು ನನಗೆ ವಿವರಿಸಿದ್ದು ಮಂಜ.

    • bahaLa chennagide

    • ಮಂಜ, ಸೋಮ- ಧನ್ಯವಾದಗಳು.
      ಪ್ರಸಾದು- ಪುನಃ ಪರಾರುಯಾಗದಿರಲು ಪ್ರಯತ್ನಿಸುತ್ತೇನೆ

    • ತುಂಬ ಇಷ್ಟವಾಯ್ತು..(ನನಗೂ ಪೂರ್ತಿ ಅರ್ಥವಾದ್ದು ಹಂಸಾನಂದಿಯವರ ಹೊಸಗನ್ನಡ ಪದ್ಯವನ್ನು ಓದಿದ ನಂತರವೇ ..) ನಿಮ್ಮ ಪಾಂಡಿತ್ಯ,ಕಲ್ಪನೆಗಳೆರಡಕ್ಕೂ _/\__/\_

    • ಆಹಾ! ಏನು ಸೊಗಸಾಗಿದೆ!!

  9. ಧರೆಗಿಳಿದ ಸತಿಸುತಗೆ ಸಂದಿರಲು ಬಗೆ ಭಕ್ಷ್ಯ
    ಕರಿಗಡುಬ ಮೆಲುವಾಸೆಯೊಳು ಶಿವನು ಕಾಣ್
    ಕರಿಯ ಮೊಗವಡ ಧರಿಸಿ ಬಂದಿಹನು ಗಣಪನೋಲ್
    ಮರೆದು ತೆಗೆದಿಡೆ ಮುಡಿದ ಚಂದಿರನ ತಾಂ !!

    “ಸೋಮ”ಶೇಖರನು “ಗಣೇಶ”ನ ರೂಪದಲ್ಲಿ ಬಂದು ಕಡುಬು ಮೆಲ್ಲುತ್ತಿರುವ ಕಲ್ಪನೆಯ ಪದ್ಯ !!

  10. ಕೈಯೊಂದರೊಳು ಮೋದಕದ ಭಾಂಡವನೆ ಪಿಡಿವ
    (ಹೇ) ಜೀಯ, ಒಂದನೆ ಪಿಡಿದೆ ನೀ ಶುಂಡದೊಳ್|
    ಪೇಯ-ಖಾದ್ಯದೊಳೀಗ ಸಾಧಿಸಿಹೆ ನಿಗ್ರಹವ
    ಕಾಯವದರಿಂದೆ ಕೃಶವಿರ್ಪುದಲ್ತೆ||

  11. ಬಲು ಸೋಜಿಗಂ ಗಡಾ ಪ್ರತಿ –
    ಸಲದಂತುಟೆ ಗಣಪಮೂರ್ತಿಯಂ ರಚಿಸಿರೆನಲ್
    ಭಲ! ಮವನಪ್ಪಂಗಪ್ಪುದು ,
    ಸುಲಭಮದಲ್ತೆ ಕುಡೆ ಲಿಂಗರೂಪಮನುಂ ಮೇಣ್ !!

    ಗಣೇಶನನ್ನು ಮಾಡೆಂದರೆ ಅವನಪ್ಪನನ್ನು ಮಾಡಿರುವನೇ ?!
    ಹಾಗಿದ್ದಲ್ಲಿ ಸುಲಭದಲ್ಲಿ ಶಿವಲಿಂಗವನ್ನೇ ಮಾಡಬಹುದಿತ್ತಲ್ಲ !!

  12. ಶ್ರೀಕಾಂತನು ಬರೆದ ಪದ್ಯಕ್ಕೆ ನನ್ನ ಹೊಸಗನ್ನಡ ಛಾಯೆ:

    ಹೆತ್ತ ಅಪ್ಪನು ದಮ್ಮದತ್ತಯೆನುತ್ತ ಬಿಕ್ಕೆಯ ಬೇಡಿರೆ
    ಇತ್ತ ಮಗನಿಗೆ ಆಟಕೋಸುಗ ಏನ ತಾನೇ ಕೊಡಿಸುವ?
    ಮತ್ತದಕೆ ಅವನಿಂದ ಡಮರುಗ ಹಾವು ಶೂಲವ ಚಂದ್ರನ
    ಕಿತ್ತುಕೊಟ್ಟಳು ಜಾಣೆ ಮಗುವಿಗೆ ತನ್ನ ಸಿಂಹದ ಜೊತೆಯಲಿ

    #ಮಾತ್ರಾಮಲ್ಲಿಕಾಮಾಲೆ

    • ’ಮತ್ತದಕೆ ಅವನಿಂದ’ ವಿಸಂಧಿಯಾಗುತ್ತೇನೋ! ’ಮತ್ತದಕ್ಕವನಿಂದೆ’ ಎಂದು ಸವರಬಹುದು. ಪುನಃಕವನಿಕೆ ಚೆನ್ನಾಗಿದೆ.

  13. ಪ್ರಸಾದು, ಉಷಾ ಅವರೆ, ಹಂಸಾನಂದಿ, ಎಲ್ಲರ ಪದ್ಯಗಳೂ ಚೆನ್ನಾಗಿವೆ

  14. ಚಂಡಿ ಚಾಮುಂಡಿ ವರ ಡುಂಡಿ ಗಣಪ ಪ್ರಿಯನೆ
    ರುಂಡs ಕಪಾಲಿ ನೀ ಶಿವನೆ
    ಕಂಡರಿಯೆ ಮುಕ್ಕಣ್ಣ ತುಂಡಿರುವ ಮುಕೈಯೊ –
    ಳುಂಡಿsಯನೆಂತು ನೀ ತಿನುವೆ?!

    ಮುಕ್ಕಣ್ಣ ಶಿವ ಮೂರನೆ ಕೈಯಲ್ಲಿ ಉಂಡೆ ತಿನ್ನುತ್ತಿರುವನಲ್ಲ !! (ಮುಕೈ ಯವನಾಗಿರುವ ಅಲ್ಲವೇ ?!)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)