ಯಮನು ಗೈದ ಹವನದಿಂದ ಹುಟ್ಟಿದೆಯೋ ಎಂಬಂತೆ ಮೈದೋರಿ ಲೋಕಕ್ಕೆ ವಿಪತ್ತಿನಂತೆನಿಸಿದ್ದರೂ ಈಗ ತಣ್ಣಗಾಗಿರುವ ಪಾಟಿಯನ್ನು ಸ್ವಲ್ಪ ಕುಚೋದ್ಯ ಮಾಡುತ್ತ ನಕ್ಕು ಶಿವನ ಕೊರಳಿನಲ್ಲಿರುವ ಆ ವಿಷವನ್ನು ಬಾಲಚಂದ್ರನು ಕಂಡನು.
ಗಣೇಶನು ಶಿವನ ಮಡಿಲಿನಲ್ಲಿ ಆಟವಾಡುತ್ತಿರುವಾಗ ತನ್ನ ಸೊಂಡಿಲಿಗೆ ಸಿಕ್ಕ ಚಂದ್ರನನ್ನು ಕಿತ್ತಾಗ ಉರುಳಿ ಬೀಳುತ್ತಿದ್ದ ಚಂದ್ರ ಅದರ ಕೊಂಡಿಯಾಕಾರದಿಂದ ಶಿವನ ಕತ್ತಿನಲ್ಲಿ ಸಿಲುಕಿಕೊಂಡಾಗ……
ವಿಷ ಕುಡಿದಾಗ, ಕುಡಿದಾತನ ಜೀವವುಳಿಸಲು ಗೌರಿ ಹೌಹಾರಿ ಬಂದು ತನ್ನ ಕಾಂತಿಮಯಧವಳಹಸ್ತ ನೀಡಿ ಅವನ ಕತ್ತನ್ನು ಒತ್ತಿದಾಗ, ಶಿವನ ಕೊರಳಲ್ಲಿ ಬಾಲಚಂದ್ರ ಕಂಡ. (ಗೌರಿಯ ಅಗಲಿಸಿದ ಹಸ್ತದ ರೂಪದಿಂದ)
ಗಂಗೆಯ ಪವಿತ್ರಸ್ಥಾನವಾದ ಮುಡಿ ಕಲಂಕಿತನಾದ ನನಗೆ ಸರಿಯಲ್ಲ ಎಂದು ಕಂಠಕ್ಕಿಳಿದ ಚಂದ್ರ. (ಕಂಠವೂ ಕಲಂಕಿತವಾದ್ದರಿಂದ) ಸಾಧರ್ಮ್ಯದಿಂದ ಸಾಹಚರ್ಯ, ಸ್ನೇಹವಲ್ಲವೇ! ಹೀಗಾಗಿ ಶಿವನ ಕೊರಳಲ್ಲಿ ಚಂದ್ರ ಕಂಡುಬಂದ.
ಶುಕ್ಲಪಕ್ಷದಲ್ಲಿ ದಿನವೊಂದು ಕಳೆದಾಗ (ರಾತ್ರಿಯಲ್ಲಿ), ಆಕಾಶದಲ್ಲಿ ಮೇಘವು ಕವಿದು ಶಂಕರನ ರೂಪವು ಮೂಡಲು, ಭೂಮಿಯಿಂದ ವೀಕ್ಷಿಸಲು ಅದು ಸಂಭ್ರಮಾಶ್ಚರ್ಯದ ದೃಶ್ಯ!.( ಮೋಡದಿಂದಾದ) ಶಿವನ ಕೊರಳಿನಲ್ಲಿ (ಆಗಸದಲ್ಲಿರುವ) ಬಾಲಚಂದ್ರನು ಈ ಸಂದರ್ಭದಲ್ಲಿ ಕಂಡನು.
ಧವಳಮಣಿಗಳಿಂದಂ ಕೂಡಿರಲ್ ಕಂಠಹಾರಂ,
ಪವನಕೊಲೆದು ಸುತ್ತಂ,ರತ್ನದಿಂ ರಾಜಿಸುತ್ತುಂ,|
ವಿವರಣದಿನೆ ತೋರಲ್ ಬಿಂಬಮಂ ನೆತ್ತಿಯಿಂದಂ,
ಶಿವನ ಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ ||
ಬಿಂಬದ ಪೂರಣ ಚೆನ್ನಾಗಿದೆ
ಚೆನ್ನಾದ ಪೂರಣ
ಧನ್ಯವಾದಗಳು ಮಂಜ, ಸೋಮರಿಗೆ.
ಜವನ ಹವನದಿಂದೆಂಬಂತೆ ಮೈದೋರ್ದು ಲೋಕ-
ಕ್ಕವಘಡಮೆನಿಸಿರ್ದುಂ ತಣ್ಣಗಾಗಿರ್ಪ ಪಾಂಗಂ
ಲವದನಿತೆ ಕುಚೋದ್ಯಂದೋರುತುಂ ನಕ್ಕು ನಂಜಂ
ಶಿವನ ಕೊರೊಳೊಳೀಗಳ್ ಕಂಡನಯ್ ಬಾಲಚಂದ್ರಂ
ಯಮನು ಗೈದ ಹವನದಿಂದ ಹುಟ್ಟಿದೆಯೋ ಎಂಬಂತೆ ಮೈದೋರಿ ಲೋಕಕ್ಕೆ ವಿಪತ್ತಿನಂತೆನಿಸಿದ್ದರೂ ಈಗ ತಣ್ಣಗಾಗಿರುವ ಪಾಟಿಯನ್ನು ಸ್ವಲ್ಪ ಕುಚೋದ್ಯ ಮಾಡುತ್ತ ನಕ್ಕು ಶಿವನ ಕೊರಳಿನಲ್ಲಿರುವ ಆ ವಿಷವನ್ನು ಬಾಲಚಂದ್ರನು ಕಂಡನು.
ಸೊಗಸಾಗಿದೆ ಪದ್ಯ, ಚಂದ್ರನೇ ನೋಡಿದನು ಎನ್ನುವ ಪೂರಣ ವಿಧಾನ
ತುಂಬಾ ಇಷ್ಟವಾಯ್ತು
ಧನ್ಯವಾದಗಳು 🙂
Ahaa… Your lateral thinking is much appreciated!!
ಬಹಳ ಸುಂದರವಾದ ಪೂರಣ ನೀಲಕಂಠರೇ
ಜವದಿನಡಿಗಳಂ ತಾಂ ಚಚ್ಚುತಾಡಲ್ ಕಳಲ್ದಾಹ್
ಕವಿದ ಜಡೆಯೊಳಯ್ಯೋ ಗಂಗೆಯಂ ಕಂಡು ಕೋಪಂ
ಕವರಿ ಗಿರಿಜೆ ಕಂಸಾಕಾರದಿಂ ಕೈಯನೌಂಕಲ್
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ ॥
ಕಂಸಾಕಾರದ ಸವತಿಯರ ಮಾತ್ಸರ್ಯವನ್ನವಲಂಬಿಸಿದ ಪೂರಣ ಬಹಳ ಚೆನ್ನಾಗಿದೆ 🙂
ತುಂಬ ಚೆನ್ನಾಗಿದೆ ಸರ್
ಭವನಣುಗರ ಪಂದ್ಯಂಗೆಲ್ದವಂಗೆಂದೆ ಶರ್ವಂ
ಜವದೆ ಸೆಳೆದು ತಬ್ಬಲ್ ವಾರಣಾಸ್ಯಂ ಸಹಾಸ್ಯಂ
ಧವಲಿಮರದಮೊಂದಂ ತೋರ್ದ ಪಾಂಗಿಂದೆ ನೋಡಯ್
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ
ಚೆನ್ನಾಗಿದೆ ಸೋಮಣ್ಣ
ಭುವನಕಿಡುತೆ ಕಿರ್ಚಂ ತಾಂಡವಂಗೈದಿರಲ್ಕಾ
ಧವಳಗಿರಿವಿಭೂಷಂ, ವ್ಯಾವೃತವ್ಯೋಮಕೇಶಂ
ಕಿವಿಯಿನಿಳಿದು ಕತ್ತೊಳ್ ಸಿಲ್ಕುತುಂ ನಿಂದಿರಲ್ ತಾಂ
ಶಿವನ ಕೊರಳೊಳೀಗಳ್ ಕಂಡನಾ ಬಾಲಚಂದ್ರಂ
ಶಿವತಾಂಡವದ ಸಮಯದಲ್ಲಿ ಜಟೆಬಿಚ್ಚಿ,ಚಂದ್ರ ಕಿವಿಯ ಮೂಲಕ ಜಾರಿ ಕೊರಳ ಬಳಿ ಸಿಕ್ಕಿಹಾಕಿಕೊಂಡ ಅನ್ನುವ ಯತ್ನ
ಚೆನ್ನು
DhanyavaadagaLu
ಸ್ಥವಿರಗಿರಿಯ ಶೃಂಗಕ್ಕಾಂತ ಹೈಮಾಭ್ರದಿಂದಂ
ಸ್ರವಿಪ ತುಹಿನಖಂಡಂ ತೇಲ್ದು ಕೈಲಾಸಕೈದಲ್
ಭವನವೆರೆತು ನೀಲವ್ಯೋಮದೊಳ್ ಸಾಗುವಂದಂ
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ
ಕವಿದ ಕುರುಳನುಂ ಸಂಬಾಳಿಸಿಂ ಸುತ್ತಿ ಕಟ್ಟಿಂ
ಸವರಿ ತುರುಬ ಸುತ್ತಲ್ ಮಲ್ಲಿಕಾ ದಂಡೆಯಿಂದಲ್
ಸವಣಿಸುವೊಡೆ ಬಿಳ್ಪಿಂದರ್ಧಕಂ ಕರ್ಪು ಗುಂಡಂ
ಶಿವನ ಕೊರಳೊಳೀಗಳ್ ಕಂಡನೈ ಬಾಲಚಂದ್ರಂ !!
ತುರುಬಿಗೆ ಮುಡಿದ ಮಲ್ಲಿಗೆ ದಂಡೆ – ಕಪ್ಪು ಗುಂಡಿಗೆ ಅರ್ಧ ಬಿಳಿಯ ಸುತ್ತು – ಶಿವಲಿಂಗದ ಕೊರಳ ಸುತ್ತಿದ ಚಂದ್ರನಂತೆ ಕಂಡ ಕಲ್ಪನೆ !!
ಕಲ್ಪನೆ ಚೆನ್ನಾಗಿದೆ ಮೇಡಂ. ‘ಕಟ್ಟಿಂ’ ಅಂದರೆ ‘ಕಟ್ಟಿರಿ’ ಎಂದು ಅರ್ಥವಾಗುತ್ತದೆ. ಹಾಗೆಯೇ ‘ಮಲ್ಲಿಕಾದಂಡೆ’ ಆರಿಸಮಾಸ. ‘ಮಲ್ಲಿಕಾಮಾಲೆ’ ಎನ್ನಬಹುದು
ಧನ್ಯವಾದಗಳು ಮಂಜು , “ಮಾಲಿನಿ”ಗೆ ಹೆರಳು ಕಟ್ಟಿ – ಮಲ್ಲಿಗೆ ದಂಡೆ ಮುಡಿಸುವಹೊತ್ತಿಗೆ ಸಾಕಾಗಿ ಹೋಯಿತು ! (ನನ್ನ ಭಾಷಾಜ್ಞಾನದ ಕೊರತೆಯಿಂದಾಗಿ ವೃತ್ತದಲ್ಲಿ ಪದ್ಯ ರಚನೆ ಕಷ್ಟವಾಗುತ್ತಿದೆ.)
ತಿದ್ದಿದ ಪದ್ಯ :
ಕವಿದ ಕುರುಳನುಂ ಸಂಬಾಳಿಸಿಂ ಸುತ್ತಿಕಟ್ಟಲ್
ಸವರಿ ತುರುಬ ಸುತ್ತಲ್ ಮಲ್ಲಿಕಾಮಾಲೆಯಿಂದಲ್
ಸವಣಿಸುವೊಡೆ ಬಿಳ್ಪಿಂದರ್ಧಕಂ ಕರ್ಪು ಗುಂಡಂ
ಶಿವನ ಕೊರಳೊಳೀಗಳ್ ಕಂಡನೈ ಬಾಲಚಂದ್ರಂ !!
ಕುವರಬೆನಕನೇರುತ್ತುಂ ಮಹೇಶಾಂಕಮಂ ಶುಂ
ಡವಲಯಕೆ ಸಿಗಲ್ಕಾ ಚಂದ್ರನಂ ಕಿಳ್ತೊಡಂ ತಾಂ
ಜವದಿನೆ ಉರುಳುತ್ತುಂ ಕೊಂಡಿಯೆಂಬಂತೆ ಸಿಲ್ಕಲ್
ಶಿವನ ಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ//
ಗಣೇಶನು ಶಿವನ ಮಡಿಲಿನಲ್ಲಿ ಆಟವಾಡುತ್ತಿರುವಾಗ ತನ್ನ ಸೊಂಡಿಲಿಗೆ ಸಿಕ್ಕ ಚಂದ್ರನನ್ನು ಕಿತ್ತಾಗ ಉರುಳಿ ಬೀಳುತ್ತಿದ್ದ ಚಂದ್ರ ಅದರ ಕೊಂಡಿಯಾಕಾರದಿಂದ ಶಿವನ ಕತ್ತಿನಲ್ಲಿ ಸಿಲುಕಿಕೊಂಡಾಗ……
ತೆವಳುತುಮಿರೆ ನಾಗಂ ಹಾರದಂತಿರ್ದು ಸುತ್ತಂ,
ಸವರುತೆ ಮಣಿರುಂಡಂ ಭೂಷಿಸುತ್ತಿರ್ಪ ಕತ್ತಂ,|
ನವವಿಧದಿನೆ ವಿನ್ಯಾಸಂಗೊಳುತ್ತಂತ್ಯಭಾಗಂ,
ಶಿವನ ಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ ||
ಮಣಿರುಂಡದಿಂದ ಭೂಷಿಸುತ್ತಿರುವ ಕತ್ತನ್ನು ಸವರುತ,ಶಿವನ ಕೊರಳಿನ ಹಾರದಂತಿರುವ ನಾಗನು
ಕೊರಳಿನ ಸುತ್ತ ತೆವಳುತಿರಲು, ನಾಗನ ದೇಹದ ಅಂತ್ಯಭಾಗವು (ಬಾಲವು) ನೂತನರೀತಿಯಿಂದ
ವಿನ್ಯಾಸಗೊಳುತ್ತ ಶಿವನ ಕೊರಳಿನಲ್ಲಿ ಬಾಲಚಂದ್ರನು ಕಂಡನು.
ಕವಿದ ಭಯವನೀಡಾಡಲ್ಕೆ ಹಾಲಾಹಲಂ ಪೀ-
ರ್ದವನುಳಿವಿಗೆನುತ್ತುಂ ಗೌರಿ ಹೌಹಾರಿ ಶುಭ್ರ-
ಚ್ಛವಿಮಯನಿಜಹಸ್ತಂ ನೀಳುತುಂ ಕತ್ತನೊತ್ತಲ್
ಶಿವನ ಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ
ವಿಷ ಕುಡಿದಾಗ, ಕುಡಿದಾತನ ಜೀವವುಳಿಸಲು ಗೌರಿ ಹೌಹಾರಿ ಬಂದು ತನ್ನ ಕಾಂತಿಮಯಧವಳಹಸ್ತ ನೀಡಿ ಅವನ ಕತ್ತನ್ನು ಒತ್ತಿದಾಗ, ಶಿವನ ಕೊರಳಲ್ಲಿ ಬಾಲಚಂದ್ರ ಕಂಡ. (ಗೌರಿಯ ಅಗಲಿಸಿದ ಹಸ್ತದ ರೂಪದಿಂದ)
ದಿವಿಜನದಿಯನೊಂದಿರ್ಪುತ್ತಮಾಂಗಂ ಕಲಂಕ-
ಪ್ರವರನೆನಗಮೆಂತುಂ ತಕ್ಕುದೆಂದಿಂದು ಕಂಠ-
ಕ್ಕವತರಿಸಿದನಯ್, ಸಾಧರ್ಮ್ಯದಿಂ ಸ್ನೇಹಮಲ್ತೇಂ
ಶಿವನ ಕೊರೊಳೊಳೀಗಳ್ ಕಂಡನಯ್ ಬಾಲಚಂದ್ರಂ
ಗಂಗೆಯ ಪವಿತ್ರಸ್ಥಾನವಾದ ಮುಡಿ ಕಲಂಕಿತನಾದ ನನಗೆ ಸರಿಯಲ್ಲ ಎಂದು ಕಂಠಕ್ಕಿಳಿದ ಚಂದ್ರ. (ಕಂಠವೂ ಕಲಂಕಿತವಾದ್ದರಿಂದ) ಸಾಧರ್ಮ್ಯದಿಂದ ಸಾಹಚರ್ಯ, ಸ್ನೇಹವಲ್ಲವೇ! ಹೀಗಾಗಿ ಶಿವನ ಕೊರಳಲ್ಲಿ ಚಂದ್ರ ಕಂಡುಬಂದ.
ಭವಭಯ ಭಕುತಿ ಪ್ರಾಧಾನ್ಯಮಿಂತೀ ಪ್ರಸಂಗಂ,
ಪ್ರವಸನಮೆನೆ ಮಾರ್ಕಂಡೇಯ ನಿಂತಾಂತುಕೊಳ್ಳಲ್
ಜವನ ಜಡಿತದಿಂ ಪಾರಾಗೆ ಕಾಲಾಂತಕಂಗಂ ,
ಶಿವನ ಕೊರೊಳೊಳೀಗಳ್ ಕಂಡನಯ್ ಬಾಲಚಂದ್ರಂ !!
*ಪ್ರವಸನ = ಮರಣ
ಯಮನಿಂದ ಪಾರಾಗಲು ಶಿವಲಿಂಗವನ್ನು ಅಪ್ಪಿದ ಬಾಲ ಮಾರ್ಕಂಡೇಯ – ಬಾಲಚಂದ್ರನಂತೆ ಕಂಡ ಕಲ್ಪನೆಯಲ್ಲಿ !!
ಸವೆದಿರೆ ದಿನಮಾಗಳ್, ಶುಕ್ಲದಿಂ ಕೂಡಿ ಪಕ್ಷಂ,
ಕವಿಯುತೆ ನಭಮೇಘಂ,ಶಂಕರಂ ಮೂಡೆ ರೂಪಿಂ,|
ಬುವಿಯಿನದನೆ ನೋಡಲ್, ಸಂಭ್ರಮಾಶ್ಚರ್ಯದೃಶ್ಯಂ,!
ಶಿವನ ಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ ||
ಶುಕ್ಲಪಕ್ಷದಲ್ಲಿ ದಿನವೊಂದು ಕಳೆದಾಗ (ರಾತ್ರಿಯಲ್ಲಿ), ಆಕಾಶದಲ್ಲಿ ಮೇಘವು ಕವಿದು ಶಂಕರನ ರೂಪವು ಮೂಡಲು, ಭೂಮಿಯಿಂದ ವೀಕ್ಷಿಸಲು ಅದು ಸಂಭ್ರಮಾಶ್ಚರ್ಯದ ದೃಶ್ಯ!.( ಮೋಡದಿಂದಾದ) ಶಿವನ ಕೊರಳಿನಲ್ಲಿ (ಆಗಸದಲ್ಲಿರುವ) ಬಾಲಚಂದ್ರನು ಈ ಸಂದರ್ಭದಲ್ಲಿ ಕಂಡನು.
ಸರಿಯೆ, ನಿರುಕಿಪಾಗಳ್ ನೀಮದಿತ್ತಂತುಮೆಂದುಂ
ಬರೆದು ಕವನಮೊಂದಂ ಪದ್ಯಪಾನಕ್ಕಮಿತ್ತೇಂ?
ಸರದಿಯೊಳಗಮಾನುಂ ನೋಡೆ ಜೀಮೂತಮಾಗಳ್
ಜರುಗುತಸುರೆಯಾಗಿತ್ತಲ್ತೆ ಹೈಡಿಂಬಳೊಲ್ ಹಾ!!
ದೊರಕಿರೆನಗೆ ಸಯ್ಪಿಂದೀಶನಂ ಕಾಂಬ ಭಾಗ್ಯಂ,
ಸುರರ ಗುಣಮನೊಂದಿರ್ಪರ್ಗೆ ದೈವಾವಲೋಕಂ 🙂
ಹ್ಹಹ್ಹಹ್ಹ. ದೊರಕಿರೆನಗೆ is not = ದೊರಕಿರೆ+ಎನಗೆ. ನನಗೆ ಗೊತ್ತು, ದೊರಕಿ’ತೆ’ನಗೆ ಎಂದು ತಿದ್ದಿ, ’ಟೈಪೋ ಅಷ್ಟೆ’ ಎನ್ನುವಿರಿ 😉
ಪ್ರಸಾದ್ ಸರ್ , ಶಕುಂತಲಾಗೆ ದೊರಕಿರೆ “ನಗೆ” – ನಿಮಗೆ ದೊರಕಿತೆ “ನಗೆ” ?!!
ನನಗೆ ದೊರಕಲೆ “ನಗೆ” !!
ಪವನ-ದವನಮೆಂದುಂ ಶ್ವಾನಕಂ ನಾಮಮೀವರ್
ಚ್ಯವನ-ಕವನಮೆಂದುಂ ಬೆಕ್ಕಿನೆಂತೋ ಪೆಸರ್ಗಳ್|
ನವಿಲ ರಿಪುವಿಗಂತೇ ನಾಮಗಳ್ ಸಾಸಿರಂ ಕೇಳ್ (This snake is christened ‘Balachandra’)
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ||
wow..simple and effective 🙂
ವಿನೋದವಾಗಿ :
ಸವರೆನೆ ಜಟೆಯಂ ಬಿಚ್ಚಲ್ ಗಡಾ ಹೇರುಪಿನ್ನೆ-
ತ್ತವನದೊ ಸೆಗಿಸಲ್ ಕತ್ತಿಂಗದಂ ನಾರಿಯೋಲ್ ಮೇಣ್
ಭವದೊಳು ಪರಿಪಾಟಂ ಕಾಣದಂ ಕಾವುದಿಂತೌ
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ !!
ಶಿವನು ಜಟೆಯಲ್ಲಿ ಧರಿಸಿರುವ “ಚಂದ್ರಾಕಾರ”ದ ಸ್ಪೆಷಲ್ “ಹೇರ್ ಪಿನ್” ಬಗೆಗಿನ ಪದ್ಯ !
ಹೆಣ್ಣುಮಕ್ಕಳು ತೆಲೆಬಾಚುವಾಗ ಪಿನ್ / ಬಾಚಣಿಗೆ ಮುಂತಾದುವನ್ನು ಕತ್ತು /ತುಟಿಯಲ್ಲಿ ಹಿಡಿದಿಟ್ಟುಕೊಳ್ಳುವುದು ರೂಢಿ , ಶಿವನೂ ಅರ್ಧನಾರಿ ತಾನೇ ?!!
Clap clap. But the word ‘ardhanArIShvara’ doesn’t appear in the verse. The third line can be modified to accommodate this.
ಚಪ್ಪಾಳೆ ತಟ್ಟಿ ಎಚ್ಚರಿಸಿದ ನಿಮಗೂ, ಕಳೆದೆರಡು ವಾರಗಳಿಂದ ಶಿವಧ್ಯಾನ ಕರುಣಿಸಿದ ಪದ್ಯಪಾನಕ್ಕೂ ಧನ್ಯವಾದಗಳು .
ತಿದ್ದಿದ ಪದ್ಯ :
ಸವರೆನೆ ಜಟೆಯಂ ಬಿಚ್ಚಲ್ ಗಡಾ ಹೇರುಪಿನ್ನೆ-
ತ್ತವನದೊ ಸೆಗಿಸಲ್ ಕತ್ತಿಂಗದಂ ನಾರಿಯೋಲ್ ಮೇ-
ಣವಯವ ಪಡೆಯಲ್ ಕಾಣರ್ಧನಾರೀಶ ತಾನುಂ
ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ !!
*ಅವಯವ = ಸೌಲಭ್ಯ