Oct 012018
 

೧. ದ್ವೀಪ
೨. ಕಂದಕ (ಕೋಟೆಯನ್ನ ಸುತ್ತುವರೆದ ಕಂದಕ)
೩. ಅರಿಶಿನ
೪. ವಿಮಾನ ಯಾತ್ರೆ

  33 Responses to “ಪದ್ಯಸಪ್ತಾಹ ೩೨೭: ವರ್ಣನೆ”

  1. ದ್ವೀಪ-
    ನೊರೆದಾಳದಿನಲೆಗಯ್ಗಳ
    ಶರಧಿಯ ಖೇಲನದ ಕೇಂದ್ರಮೇ ದ್ವೀಪಂ ದಲ್
    ತ್ವರೆಯಿಂ ನೆತ್ತಮನಾಡ-
    ಲ್ಕುರೆ ಮರಳೇ ಗಳಿಕೆ ಗಳಿತಮೆರಡಾ ಮರುಳ್ಗಂ

    ನೊರೆ ಎಂಬ ದಾಳದ ಅಲೆ ಎಂಬ ಕೈಗಳಿಂದ ಮರುಳನಾದ ಸಮುದ್ರನು ದ್ವೀಪವೆಂಬ ನೆತ್ತದಾಟಿಕೆಯಲ್ಲಿ ಮರಳನ್ನು ತ್ವರೆಯಿಂದ ಕಳೆದುಕೊಂಡು ಪಡೆದುಕೊಳ್ಳುತ್ತಿರುತ್ತಾನೆ.

  2. ಅರಿಶಿನ-
    ದೈವಾರ್ಚನೆಯೊಳ್ ಭೈಷಜ-
    ಸೇವಾಶ್ರಮಮಂತೆ ಪಾಕಶಾಲೆಯ ರಸದೊಳ್
    ಭಾವಕೆ ಪೊನ್ನನುಳಿಸಿತುಂ
    ತೀವುತೆ ಮೆರೆದಪುದು ಮಣ್ಣಬೇರಿರ್ದೊಡಮೇಂ?

    ದೇವರ ಪೂಜೆಯಲ್ಲಿ, ಆಯುರ್ವೇದದ ಸೇವಾಶ್ರಮದಲ್ಲಿ, ಪಾಕಶಾಲೆಯಲ್ಲಿ, (ತಾಳಿಗೆ) ಹೊನ್ನನ್ನೂ ಹಿಂದೆ ಹಾಕುತ ಮೆರೆಯುವುದು. ಮಣ್ಣಿನ ಬೇರಿದ್ದರೆ ಏನಂತೆ?

  3. ಕಂದಕ-
    ನೀಗಲ್ ಬಾಯಾರಿಕೆಯಂ,
    ಸಾಗಲ್, ಬೆಳೆಯಲ್ಕೆ ಬೆಳೆಯನೀಸಲ್ಕುಂ ನೀ-
    ನಾಗದೆ ದರ್ಪಕ್ಕಾಗಲ್
    ಪೋಗಯ್ ನಕ್ರಾಶ್ರುವೊಂದೆ ಸಲ್ಗುಂ ನಿನಗಂ

    ನೀರಿನ ನಿತ್ಯದ ಯಾವ ಕೆಲಸಕ್ಕೂ ಬಾರದೆ ಕೋಟೆಯ ದರ್ಪಕ್ಕಾಗಿರುವ ನಿನಗೆ (ಸಹಚರವಾದ) ಮೊಸಳೆಯ ಕಣ್ಣೀರೆ ಸರಿ

  4. ವಿಮಾನ ಯಾತ್ರೆ:
    ವೈಮಾನಿಕಯಾತ್ರೆಯೊಳಂ
    ಸೀಮಾತೀತಪ್ರವಾಸಮಂ ಗೆಯ್ವರ್ ದಲ್
    ನೇಮಂಗಳೆಯಲ್ ಕೇಳ್ ನಿ-
    ಸ್ಸೀಮತೆಯಾಂಪರ್ ಮಲೇಶಿಯದ ಯಾನದವೊಲ್

  5. ದ್ವೀಪ
    ’ಆಸಮುದ್ರಕ್ಷಿತೀಶರ್ಗಳ್’ ರಘುವಂಶದ ರಾಜರೈ|
    ’ದ್ವೀಪಮಾತ್ರವನಾಳಿರ್ಪರ್, ಸೋವಿ’ ಎನ್ನುವೆಯೇನೆಲೋ||

  6. ಕಂದಕ
    ಅಂದೇನು ಇತ್ತೇನು ಕೋಟೆಕಟ್ಟಲು ಗಾರೆ
    ಕೆಂದನೆಯ ಮಣ್ಣಲ್ತೆ ಅದಕು ಇದಕು|
    ಕಂದಕವ ತೋಡಿ ಆ ಮಣ್ಗೆ ನೀರನು ಬೆರೆಸಿ
    ಅಂದೆ ಕಟ್ಟಿದರಲ್ಲೆ ಕೋಟೆಯಂ ಕಾಣ್||

  7. ಬಲ್ಲರೆಲ್ಲರು ಕಾಂಚನಿಯ(Turmeric) ವೈದ್ಯಗುಣವನ್ನು
    ಪಲ್ಲೆ-ಗೊಜ್ಜಂ ಭಾವಿಪುದುಮೆಂದು ಮೇಣ್|
    ಬಲ್ಲರೇನದರ ಕಾಂಚನವರ್ಣದಿಂದಲದ
    ನಲ್ಲೆಗಂ ತಾಳಿಯಾಗಿಪ ಬಡವನುಂ||

    • ಕಾಂಚನವರ್ಣದಿಂದಲದ ಇಲ್ಲಿ ಅಲದ ಅಂದರೆ ಏನು ಪ್ರಸಾದು?

      • ಕಾಂಚನವರ್ಣದಿಂದಲ್+ಅದ(ನ್ನು) > ಬಂಗಾರದ ಬಣ್ಣದ್ದಾದ್ದರಿಂದ ಅದನ್ನು ನಲ್ಲೆಗೆ…

  8. ವಿಮಾನಯಾನ ಗೊತ್ತು. ವಿಮಾನಯಾತ್ರೆಯೆಂದರೇನು?

    ನಡೆದು ಮಾಡಿದೊಡೇನು, ಗಾಡಿಯೊಳು ಪೋಗೇನು
    ನಡುನಡುವೆ ನಿಂತು ಹಯವನ್ನೇರ್ದೊಡೇಂ (ವಿಮಾನದಲ್ಲಿ, ಹಡಗಿನಲ್ಲಿ ಹೋದೊಡೇಂ?)|
    ಗುಡಿಗಳಿಗೆ ಪೋಪುದುಂ ತೀರ್ಥಯಾತ್ರೆಯುಮಲ್ತೆ
    ಬಿಡಿಸಿ ಪೇಳೇನೀ ವಿಮಾನಯಾತ್ರಂ!!

    • ಮದ್ಯದ ದೊರೆ ಮಲ್ಯ ಸಾಲ ಮಾಡಿ ‘ವಿಗತ ಮಾನ’ನಾದ ಮೇಲೆ ಹೊರದೇಶಕ್ಕೆ ಮಾಡಿದ ಪಲಾಯನಯಾತ್ರೆಯೇ ವಿಮಾನಯಾತ್ರೆ. ಆತ ತೀರ್ಥಂಕರ(ತೀರ್ಥ(??)ದ ಬಾಟಲನ್ನು ಹಿಡಿಯುವವ)ನಾದ್ದರಿಂದ ಇದು ತೀರ್ಥಯಾತ್ರೆಯೂ ಹೌದು.

  9. ಜಗಮೇ ಕಾವ್ಯಮೆನಲ್ ತಾಂ
    ಸೊಗದಿಂದಂ ಮೂಡುತಿರ್ಪ ಭಾವದಲೆಗಳೇ
    ಒಗೆವ ತರಂಗಂಗಳೆನಲ್
    ಜಗುಳದ ರಸದಂತೆ ತೋರ್ಕುಮೀ ದ್ವೀಪಂ ದಲ್//
    ಜಗತ್ತೆಂಬ ಕಾವ್ಯದಲ್ಲಿ ಮೂಡುವ ಭಾವದ ಅಲೆಗಳೇ ಈ ಸಾಗರದ ಅಲೆಗಳಾದರೆ ಅದರ ಮಧ್ಯೆ ಸ್ಥಿರವಾಗುವ ರಸದಂತೆ ದ್ವೀಪವು ತೋರುತ್ತಿದೆ

  10. ದ್ವೀಪ
    ಧರಣಿಯಂ ಕಡಲೊಳಗೆ ರಕ್ಕಸನದೊಂದು ದಿನ-
    -ಮಿರಿಸಿರ್ದನೆಂದೆಂಬ ಕಥೆಯಿರ್ಪುದು
    ಪೊರೆವರಿಲ್ಲೆನ್ನೊಡಲನಿರಿವರೆಂದೆನುತಿಂದು
    ತೆರಳಿ ಕಡಲೊಳ್ ಪತಿಗೆ ಜತೆಯಾದಳೇಂ?

    ಹಿಂದೊಂದು ದಿನ ಹಿರಣ್ಯಾಕ್ಷ ಭೂದೇವಿಯನ್ನು ಅಪಹರಿಸಿ ಕಡಲೊಳಗೆ ಬಚ್ಚಿಟ್ಟಿದ್ದನಂತೆ..ಇಂದು ರಾಕ್ಷಸಸದೃಶರಾದ ಜನರು ತನ್ನ ಒಡಲನ್ನು ಬಗೆಯುತ್ತಾರೆಂಬ ಭಯದಿಂದ ತಾನೇ ಕಡಲೊಳಗೆ ಹೋಗಿ ಕಡಲಲ್ಲಿ ಮಲಗಿರುವ ತನ್ನೊಡೆಯನನ್ನು ಸೇರಿದ್ದಾಳೆಯೇ?

  11. ಹಲಹತ್ತು ಪಾಳೆಗಾರರುಗಳಾಳಿದ ನಾಡಿ-
    ನಲಿ ಕೋಟೆ ಕೊತ್ತಲದ ಸುತ್ತಲಲಿ ಕಾಣ್
    ನೆಲೆನಿಂತು ಮಲೆತಗಳ ನೀರ ಪಳಯುಳಿಕೆಯೊಳು
    ತಲೆಕೆಳಗು ಕಂಡಿಹುದು ಬಿದ್ದ ಬುರುಜು ।।

    * ಅಗಳು = ಕಂದಕ

    ನಾಡನ್ನಾಳಿದ ಪಾಳೆಗಾರರ ಗತ ವೈಭವದ ಬಗೆಗಿನ ಪದ್ಯ .

    (ಪಾಳೇಗಾರರ ಊರು – ಶ್ರೀರಾಮಪುರ (ಹೊಸದುರ್ಗ ತಾಲೂಕು) ದ ಕೋಟೆ / ಬುರುಜು / ಸುತ್ತಲಿದ್ದ ಬತ್ತದ “ಅಗಳು” / ಮಂಟಪ … – ಬಾಲ್ಯದ ದಿನಗಳು ನೆನಪಾದುವು !!)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)