Nov 062018
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ಕಂದಪದ್ಯದ ಈ ಸಮಸ್ಯೆಗಳನ್ನು ಪರಿಹರಿಸಿ:
೧. ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್
೨. ದೀಪಾವಳಿ ಕಲ್ತಲೆಂದೆ ಭಾಸಿಕುಮಲ್ತೇ
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ಕಂದಪದ್ಯದ ಈ ಸಮಸ್ಯೆಗಳನ್ನು ಪರಿಹರಿಸಿ:
೧. ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್
೨. ದೀಪಾವಳಿ ಕಲ್ತಲೆಂದೆ ಭಾಸಿಕುಮಲ್ತೇ
ಚೆನ್ನಿರದಿರೆ ರಮಣಂ ಮ
ತ್ತನ್ನೆವರಂ ಕಾಯುತಾಕೆ ವಿಚ್ಛೇದನಕೆಂ
ದಿನ್ನೆನಗಂ ನೆವಮಾಯ್ತೆನೆ
ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್//
ಗಂಡ ಚೆನ್ನಾಗಿರದಿದ್ದರಿಂದ ವಿಚ್ಛೇದನಕ್ಕಾಗಿ ಕಾಯುತ್ತಿರುವವಳು ಗಂಡ ಮುನಿಸಿಕೊಂಡದ್ದು ಒಳ್ಳೆಯ ನೆಪ ಸಿಕ್ಕಿದಂತಾಯ್ತೆಂದು ಸಂತೋಷಪಟ್ಟಳು.
ಶಾಪವನಿತ್ತಿರೆ ದೇವಂ
ಕೋಪದೆ ದೂರಾಗಿ ಪೋಗೆ ತನ್ನವರೆಲ್ಲರ್
ತಾಪದೆ ಬೆಂದಿರೆ ಮನಮಾ
ದೀಪಾವಳಿ ಕಲ್ತಲೆಂದೆ ಭಾಸಿಕುಮಲ್ತೇ?
ಬನ್ನಂಬಡುವುದಿದೇಕೌ?
ಸನ್ನಿಹಿತಂ ನಾನುಮಾಗಲೋಡುವುದೇಕೌ?
ನಿನ್ನೊಳ್ ಮುನಿದಪೆನೆನ್ನಲ್
ತನ್ನೊಳ್ ಮುನಿದಾಣ್ಮನಿಂದೆ ಸತಿಸಂತಸಿಪಳ್
ಮನ್ನೆಯವಟ್ಟದವಂ ತಾಂ
ಪಿನ್ನಣುಕಿರಲಬ್ಬೆ ಕುಪಿತಗೊಳುವಂ ಕಂದಂ
ಬನ್ನಂಪಡಿಪಂ ಗಡ ಮೇಣ್
ತನ್ನೊಳ್ ಮುನಿದಾಣ್ಮನಿಂದೆ ಸತಿಸಂತಸಿಪಳ್ !!
*ಮನ್ನೆಯವಟ್ಟ = ಬುದ್ಧಿವಂತಿಕೆಯ ಪಟ್ಟ
ಪಿನ್ನಣುಕು = ಹಿಂಬಾಲಿಸು
ಬನ್ನಂಪಡಿಸು = ಸತಾಯಿಸು
ಸತಾಯಿಸುವ – ಹಿಂಬಾಲಿಸಿರೆ ಕೋಪಗೊಳ್ಳುವ – ಜಾಣ ಕಂದನ ಜೊತೆ ಸಂಭ್ರಮಿಸುವ ತಾಯಿಯ ಬಗೆಗಿನ ಪದ್ಯ !!
ಸಮಯಕ್ಕೆ ಸರಿಯಾಗಿ ಉಣ್ಣು, ನನ್ನನ್ನು ಕಾಯಬೇಡ, ಭ್ರೂಣವನ್ನು ಬಾಡಿಸಬೇಡ ಎಂದು ಗರ್ಭಿಣಿಯಾದ ಹೆಂಡತಿಯಲ್ಲಿ ಮುನಿಯೆ ಆಣ್ಮಂ….
ಎನ್ನಂ ನೀಂ ಕಾಯದಿರೌ
ಅನ್ನಂ ಸೇರಲಿ ಸಕಾಲಕೆಂದುಂ ಪೊಡೆಯಂ|
ಕುನ್ನಿಯ ಬಾಡಿಸದಿರೆನುತೆ
ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್||