Jun 242019
ಮತ್ತೇಭವಿಕ್ರೀಡಿತದ ಸಮಸ್ಯೆ-
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ
ಕಂದಪದ್ಯದ ಸಮಸ್ಯೆ –
ಕಣೆಗಳನೆಚ್ಚುವುದು ಬಿಲ್ಲ ಹೆದೆಯುಳಿದಿರಲೇಂ
ಮತ್ತೇಭವಿಕ್ರೀಡಿತದ ಸಮಸ್ಯೆ-
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ
ಕಂದಪದ್ಯದ ಸಮಸ್ಯೆ –
ಕಣೆಗಳನೆಚ್ಚುವುದು ಬಿಲ್ಲ ಹೆದೆಯುಳಿದಿರಲೇಂ
terrorist:
ಪುಸಿಯಾದರ್ಶದ ಗೂಢಚರ್ಯಕೆನುತುಂ ತಾಂ ಮಾರುವೇಶಂಗೊಳಲ್
ಪೊಸವಾಳ್ಗಂ ಪೆಸರಿಕ್ಕಿ ನೂತ್ನಮತದೊಳ್ ಶತ್ರುಪ್ರದೇಶಕ್ಕಮಾ-
ಗಸದಿಂ ಗೋಪ್ಯದೆ ಪೋಗಿ ವೈರಿ ಪಡೆಯಂ ಸಾರ್ದಳ್ ಸ್ವಭಾವಂಗಳಾ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ
ಚನ್ನಾಗಿದೆ ಸೋಮಣ್ಣ. ಪುಸಿಯಾದರ್ಶ ಅರಿಸಮಾಸ ಅಲ್ವೇ?
ಧನ್ಯವಾದ ಅನಂತಕೃಷ್ಣ, ಪುಸಿಯ(ಷಷ್ಥೀ) + ಆದರ್ಶ ಸಂಧಿ ಆಗುತ್ತದೆ
Oh..
but ಮಾರುವೇಶಂ and ವೈರಿ ಪಡೆಯಂ are ari-samasa’s as were discussing the other day 🙂
ಹೌದು ಸವರಣೆ ಮಾಡ್ತೀನಿ:)
ಅರಿಸಮಾಸ ಸರಿ, ಆದರೆ ಬಳಕೆಯಲ್ಲಿ ತಳವೂರಿ ನಿಂತ ಪದಗಳಲ್ಲವೆ? ರೂಢಿಗೂ ಬೆಲೆಯುಂಟು 🙂
ನಮಸ್ಕಾರ ಜೀವೆಂ, ಬಹಳ ದಿನದ ನಂತರ 🙂
ಅದೇ ರೂಢಿಯಲ್ಲಿ ಇರುವುದರಿಂದ ಬಳೆಸಿಬಿಟ್ಟೆ. ವೈರಿಪಡೆ – ವೈರಿಗಣ/ವೈರಿಯೊಡಲ್ ಎಂದು, ಮಾರುವೇಶವನ್ನ ಗೂಢವೇಶವೆಂದು ಮಾಡಬಹುದು
ಹೌದು, ರೂಢಿಗೂ ಬೆಲೆಯಿದೆ. ಆದರೂ ನಾವು ಇಲ್ಲಿ ರೂಢಿಗಿಂತ ಶಾಸ್ತ್ರಕ್ಕೆ ಜಾಸ್ತಿ ಬೆಲೆ ಕೊಡುತ್ತೇವಲ್ಲವೆ? ಅದಕ್ಕೆ 🙂 ಅಷ್ಟಕ್ಕೂ ರೂಢಿಯನ್ನು ಎಣಿಸಹೋದರೆ ಏನೆಲ್ಲ ತೆರನ ರೂಢಿಗಳು ಬಂದೆರಗುತ್ತವೆ. ಸಾಮಾನ್ಯಜನರ ಮಾತು, ವೃತ್ತಪತ್ರಿಕೆಗಳ ಬರೆಹ, ರೇಡಿಯೊ ಜಾಕಿಗಳ ಮಾತಿನ ರೂಢಿ… ಇವನ್ನೆಲ್ಲ ಗಣಿಸಲಾದೀತೆ?
ಅಸಮಾನ್ಯಂ ಶ್ರಮಿಸಿರ್ಪೊಡಂ ತ್ರಿವಳಿತಲ್ಲಾಕಂ ನಿಷಿದ್ಧಂಗುಡಲ್
ಬುಸುಗುಟ್ಟಿರ್ಪೊಡದೆಂತು ಮೇಣ್ ಮಹಮದೀಯಾಳ್ಗಳ್ ಮತಾಂದರ್ಗಳುಂ
ಎಸಗಲ್ಮುಕ್ತೆ ಚುನಾಯಿಸಿಂ ಗೆಲಿಸಲುಂತಾಂ ಮೋದಿಗಂ ಮೋದದಿಂ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂವಧೂಟಿಸ್ವಯಂ ||
ಈ ಬಾರಿ ಚುನಾವಣೆಯಲ್ಲಿ ಮುಕ್ತವಾಗಿ ವೋಟುಮಾಡಿ (~ಮುಸುಗಂ ನೀಗಿದ ಮತಾನುರಕ್ತೆ !!) ಮೋದಿಯವರನ್ನು ಗೆಲ್ಲಿಸಿದ ಮುಸ್ಲಿಂಮಹಿಳೆಯ ಬಗೆಗಿನ ಪೂರಣ
olle kalpane madam! But needs some corrections, ಅಸಮಾನ್ಯಂ – should be ಅಸಾಮಾನ್ಯಂ. ನಿಷಿದ್ಧಂಗುಡಲ್ – ನಿಷೇಧಂಗೊಳಲ್. ಮತಾಂದರ್ಗಳುಂ – ಮತಾಂಧರ್ಕಳುಂ,
ಚುನಾಯಿಸಿಂ ಗೆಲಿಸಲುಂತಾಂ ಮೋದಿಗಂ – ಚುನಾಯಿಸಲ್ಕೆಳಸಿರಲ್ ತಾಂ ಮೋದಿಯಂ …
ಧನ್ಯವಾದಗಳು ನೀಲಕಂಠ.
ತಿದ್ದಿದ ಪದ್ಯ :
ಪಸನಂಪಾರ್ದೆಣಿಸಿರ್ಪೊಡಂ ತ್ರಿವಳಿತಲ್ಲಾಕಂ ನಿಷೇಧಂಗೊಳಲ್
ಬುಸುಗುಟ್ಟಿರ್ಪೊಡದೆಂತು ಮೇಣ್ ಮಹಮದೀಯಾಳ್ಗಳ್ ಮತಾಂಧರ್ಕಳುಂ
ಎಸಗಲ್ಮುಕ್ತೆ ಚುನಾಯಿಸಲ್ಕೆಳಸಿರಲ್ ತಾಂ ಮೋದಿಯಂ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂವಧೂಟಿಸ್ವಯಂ ||
* ಪಸನಂಪಾರ್ = ಒಳ್ಳೆಯದನ್ನು ಇಚ್ಛಿಸು
ಸಮಸ್ಯಾಪಾದದಲ್ಲಿರುವ ’ಮತ’ಶಬ್ದವು ಇಸ್ಲಾಂಮತವನ್ನೇ ನಿರ್ದೇಶಿಸಬೇಕೆಂದಿಲ್ಲ.
ಉಸುರುತ್ತುಂ ತವೆ ಮೂರುಬಾರಿ ತೊಲಗೆಂದುತ್ಸರ್ಗಮಂ(abandon) ಗೈವರೇಂ
ಬೆಸನಂ ದಲ್ ಮತಿಹೀನಕಲ್ಪಮಿದು ಕೇಳ್ ಸನ್ಮಾನಿನೀ ಪಾಲಿಗಂ|
(Talaq ban) ಪೊಸತೀ ಧರ್ಮಕೆ ಸ್ವಾಗತಂ ಬಗೆದಿಹಳ್ ಪೊಂದಿರ್ಪ ಸಮ್ಮಾನಕಂ
ಮುಸುಗಂ ನೀಗಿ (‘ಮಹಿಳಾಸ್ವಾತಂತ್ರ್ಯ’ವೆಂಬ)ಮತಾನುರಕ್ತೆಯೆನಿಪಳ್ ಮುಸ್ಲಿಂವಧೂಟಿ ಸ್ವಯಂ||
ಸನ್ಮಾನಿನೀ ಪಾಲಿಗಂ – ಅರಿಸಮಾಸವಾಗುತ್ತದೆ. ಸನ್ಮಾನಿನೀಭಾಗಕಂ ಎನಬಹುದು. ಮೇಲಾಗಿ ಮಾನಿನಿಗೆ ಸತ್ ಎಂದು ಹೇಳುವುದು ಅನಗತ್ಯ. ಪೆಣ್ಗಳ್ಗೆ ನಿಚ್ಚಂ ವಲಂ.. ಅಂತೇನಾದರೂ ಮಾಡಬಹುದು
ನೀವಲ್ಲದೆ ನಮಗೆ ಅರಿಸಮಾಸಪ್ರಜ್ಞೆಯೇ ಇರುವುದಿಲ್ಲ. ಬೋಧಪ್ರದಸೂಚನೆಗಳಿಗಾಗಿ ಧನ್ಯವಾದಗಳು.
ನಸುಕೊಳ್ ಮುಚ್ಚುತೆ ದೇಹಮಂ ಮುಸುಕಿನಿಂದಿರ್ದುಂ ಸದಾ ಕಳ್ತಲೊಳ್
ಮಸಿಯಂತಾಗಿಯುಮೋಡಿಪಳ್ ಜತನದಿಂ ಸಂಸಾರದಾ ಬಂಡಿಯಂ
ಪಸಿವಂಬೋಲುವ ಭರ್ತೃಕಾಮತೃಷೆಯಂ ದೂರಾಗಿಸಲ್ ಮಾತ್ರಮೇ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿ ಸ್ವಯಂ
ಮುಸುಗಂ ಮಾತ್ರಮೆ ನೀಗುತುಂ ಬಯಸಿಹಳ್ ಸ್ವಾತಂತ್ರ್ಯಮಂ ಸೂಚ್ಯದಿಂ(ಸಾಂಕೇತಿಕವಾಗಿ)
ಕಸಿದೈ ಸೀಸದ ಕಡ್ಡಿಯಿಂದವಳ ನೀಂ ವಸ್ತ್ರಂಗಳನ್ನೆಲ್ಲಮಂ!
ಪಸಿವಂ ಭರ್ತನ ಕಾಲಮೆಷ್ಟರವರಂ ದೂರಾಗಿಸಿರ್ಪಳ್ ವಲಂ
ಕೊಸೆವಂ ಮತ್ತದೆ ವಾರದೊಳ್* ಸತಿಯ ತಾನಾಜೀವಪರ್ಯಂತಮುಂ||
* Say every Fry-day
chennagide! ತೃಶೆ – ತೃಷೆ
ಧನ್ಯವಾದಗಳು.ತಿದ್ದಿದ್ದೇನೆ
ಅಸಿಯಂ ಕೈಗಳೊಳೆತ್ತಿ ದುರ್ಜನರಿವರ್, ಧೂರ್ತರ್ ಮಹಾಪಾತಕರ್
ಮಸಣಂ ಮಾತ್ರಮಿವರ್ಗೆ ತಕ್ಕುದೆನುತುಂ ಕೊಲ್ಲಲ್ಕೆ ತಾವನ್ಯರಂ
ಮಸಕಂಗೈವರ ಬುದ್ಧಿಗೇಡಿತನದಿಂ ಕೂಡಿರ್ಪ ದುರ್ಜ್ಞಾನದೀ
ಮುಸುಕಂ ಬಿಚ್ಚಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿ ಸ್ವಯಂ
ಚೆನ್ನಾಗಿದೆ. ನನ್ನದೂ ಇದೇ ತೆರನ ಪೂರಣವಾಗಿತ್ತು. ಕೊಲ್ಲಲ್ಕೆ – should be ಕೊಲಲ್ಕೆ
ನೀಲತಂಠರೆ, ನಿಮ್ಮ ಪರಿಹಾರವನ್ನು ಹಾಕಿ ಹಾಗಾದರೆ 🙂
ಪಳಗನ್ನಡವೆಮ್ಮಯ ಕಯ್ಯೊಳ್
ಪಳತಾಗಿಯೆ ತೋರ್ಪುದಲ್ತೆ ಮೇಣದೊ ನಿಮ್ಮೊಳ್
ಪೊಳೆವ ಪ್ರಾಚೀನಕನಕ
ದಳಿಯದ ಸೊಬಗನ್ನೆ ತಳೆಯೆ ಪೇಳುವುದೆಂತೇಮ್||
ಪಳಗನ್ನಡಮಪ್ಪೊಡೆ ನಿ-
ಮ್ಮೊಳಗಂ ಪಳತಾಗಿ, ಮತ್ತಮದು ಪ್ರಾಚೀನಂ
ತೊಳಗುವ ಕನಕಂ ಗಡಮೆ-
ನ್ನೊಳಗಂ ವ್ಯತ್ಯಾಸಮೆಂತು? ಪಳತೀರ್ವರೊಳಂ! 🙂
(ನಿಮ್ಮ ಕಂದದ ಮೊದಲ ಚರಣದಲ್ಲಿ ಗುರುತ್ವ ಜಾಸ್ತಿ ಆಗಿ ನನಗೆ ಸ್ವಲ್ಪ ಗಲಿಬಿಲಿಯುಂಟುಮಾಡಿತು 🙂
ಧನ್ಯವಾದಗಳು.ಹೊಳ್ಳರು ಹೇಳಿದಂತೆ ನಿಮ್ಮ ಪರಿಹಾರವನ್ನೂ ಹಾಕಿ. ಗೋಷ್ಠಿಗೆ ಬರದ ನನ್ನಂಥವರಿಗೂ ಉಪಕಾರವಾಗುತ್ತೆ
ಚೆನ್ನಾಗಿದೆ
_/\_ಧನ್ಯವಾದಗಳು
ಗಣಿಕೆಯ ಕೋಪದ ಪರಿಯೇಮ್!
ಚಣದೊಳ್ ಪುರ್ಬೇರಿ ಬಿಲ್ಲಿನೋಲಿರಿನೋಟಂ
ರಣದಂಬುವಾಗೆ ವಿಟಗಿದೊ
ಕಣೆಗಳನೆಚ್ಚುವುದು ಬಿಲ್ಲ ಹೆದೆಯುಳಿದಿರಲೇಂ||
ವೇಶ್ಯೆಗೆ ಕೋಪಬಂದಾಗ, ಅವಳ ೨ ಹುಬ್ಬುಗಳೇ ಬಿಲ್ಲು, ನೋಟವೇ ಅಂಬುವಾಗಿ ವಿಟನನ್ನು ಇರಿಯುತ್ತದೆ.
ಚಣದೊಳ್ ಪುರ್ಬೇರಿ ಧನುವಿನೋಲಿರಿನೋಟಂ – ಮಾಡಿದರೆ ಬಿಲ್ಲಿನ ಪುನರುಕ್ತಿ ತಪ್ಪುತ್ತದೆ.
ಅಳಿಯ ಅಲ್ಲ, ಮಗಳ ಗಂಡ! ಇರಲಿ. ಕಲ್ಪನೆ ಮನೋಜ್ಞವಾಗಿದೆ.
Thanks sir.. In my understanding… if you use different words with same meaning it is not considered as punarukti…
ಗಣಿಕೆಯಲ್ಲವೆ? Repetition is permissible 😉
sogasaagide!
ಧನ್ಯವಾದಗಳು ನೀಲಕಂಠರೆ.
ಚೆನ್ನಾಗಿದೆ
ಧನ್ಯವಾದಗಳು ಸೋಮ.
ತಣಿಸದ ಮೇಘಂಗಳನಾಂ
ಮಣಿಸುವೆನೆಂದಾ ವಿರಿಂಚಿ (ಮರೀಚಿ) ಕಾಮನ ಬಿಲ್ಲ-
ನ್ನಣಿಗೊಳಿಸುತೆ ಕೋಲ್ಮಿಂಚಿನ
ಕಣೆಗಳನೆಚ್ಚುವುದು ಬಿಲ್ಲ ಹೆದೆಯುಳಿದಿರಲೇಂ||
ಮಳೆಯನ್ನು ಸುರಿಸದ ಮೋಡಗಳಿಗೆ ಮಿಂಚುಗಳೆಂಬ ಬಾಣವನ್ನು ಕಾಮನ ಬಿಲ್ಲಿಗೆ ಹೂಡಿ ಕರ್ತೃ ಎಸೆಯುತ್ತಿದ್ದಾನೆ. (ನಾಸ್ತಿಕರು ವಿರಿಂಚಿಯ ಬದಲಿಗೆ ಮರೀಚಿ = ಸೂರ್ಯ ಎಂದು ತೆಗೆದುಕೊಳ್ಳ ಬಹುದು 🙂 )
ಆಸ್ತಿಕನಾಗಿಯೂ ಎರಡೂ ಬಗೆಗಳಿಗೆ ಮೆಚ್ಚುಗೆಯನ್ನ ಸೂಚಿಸುತ್ತಿದ್ದೇನೆ 🙂
ಪುಸಿನಾಮಂಗಳ ನೀಡಿ ನಿಂತರೆನಿತೋ ಕು ಸ್ಲಂ ನಿವಾಸಿಜನಂ
ಬಿಸಿಯಾಗಿರ್ಪುದು ಚರ್ಚೆ ಛದ್ಮರೆನಿಪರ್ ಒತ್ತಾಯಿತೋ ಗುಂಡಿಯಂ
ಕಿಸುಗಣ್ಣೋಟಕೆ ಶಂಕೆ ವಕ್ತ್ರದೆರೆಯೊಳ್ ಶಕ್ಯಂ ನ ನಾರಿ ನರಂ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ
ತಾತ್ಪರ್ಯವಾಗಲಿಲ್ಲ. ದಯವಿಟ್ಟು ವಿವರಿಸಿ.
ಸುಳ್ಳು ಹೆಸರುಗಳನ್ನು ನೀಡಿ ನಿಂತರು ಎಷ್ಟೋ ಸ್ಲಂ ನಿವಾಸಿಗಳು
ಮಾರುವೇಷದಲ್ಲಿ (ಪರದೆ ಧರಿಸಿ, ಇತ್ಯಾದಿ) ಎಷ್ಟು ಜನ ಬಂದು ಮತಗುಂಡಿ ಒತ್ತಿದ್ದಾಯಿತೋ ಎಂದು ಚರ್ಚೆ ನಡೆಯುತ್ತಿದೆ
ಕಿಸುಗಣ್ಣಿನ ನೋಟಕ್ಕೆ ಮುಖಕ್ಕೆ ಹಾಕಿದ ತೆರೆಯಲ್ಲಿ ನಾರಿಯೂ ಇರಬಹುದು, ನರನೂ ಇರಬಹುದೆಂಬ ಸಾಧ್ಯತೆ ತೋರುತ್ತಿದೆ
(ಆಗ) ತಾನೇ ಮುಸುಗನ್ನು ತೆಗೆದು ಓಟ್ ಹಾಕವತ್ತ ತನ್ನ ಒಲವಿದೆ ಎಂದು ಆ ಮುಸ್ಲಿಮ್ ಹೆಣ್ಣು
1. ಅನ್ಯಭಾಷಾಶಬ್ದಗಳನ್ನು ಬಳಸುವಂತಿಲ್ಲ: ಸ್ಲಂ ಎಂಬ ಆಂಗ್ಲಪದ, ನ (ನಾರಿ ನರಂ) ಎಂಬ ಶುದ್ಧಸಂಸ್ಕೃತಪದ. ಹೊಸಗನ್ನಡದ ಚಾಟುಪದ್ಯಗಳಲ್ಲಿ ಬಳಸಬಹುದು.
2. ’ನ ನಾರಿ ನರಂ’ ಎಂಬುದಕ್ಕೆ ನೀವು ಕೊಟ್ಟಿರುವ ವಿವರಣೆಯಲ್ಲಿ ’ನ’ ಎಂಬ ವಿರುದ್ಧಾರ್ಥವೇನೂ ಇಲ್ಲವಲ್ಲ.
3. ಸಿಜನಂ, ರಿ ನರಂ: ಛಂದಸ್ಸು ತಪ್ಪಿದೆ.
ಪುಸಿನಾಮಂಗಳ ನೀಡಿ ನಿಂತರೆನಿತೋ ಖೂಳರ್ ಸುರಾಪಾನಿಗಳ್
ಬಿಸಿಯಾಗಿರ್ಪುದು ಚರ್ಚೆ ಛದ್ಮರೆನಿಪರ್ ಒತ್ತಾಯಿತೋ ಗುಂಡಿಯಂ
ಕಿಸುಗಣ್ಣೋಟಕೆ ಶಂಕೆ ವಕ್ತ್ರದೆರೆಯೊಳ್ ನಿಂದಿರ್ಕುಮೇಂ ಗಂಡಸೇ
ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ