Dec 022019
 

೧. ವಾಲ್ಮೀಕೀ-ವ್ಯಾಸರ ಸಂವಾದ

೨. ಕುದುರೆಯ ಓಟ

೩. ಅರಿಸಮಾಸ

  22 Responses to “ಪದ್ಯಸಪ್ತಾಹ ೩೮೬: ವರ್ಣನೆ”

  1. ಕುದುರೆಯ ಓಟ:
    ಧೂಳಿನ ಮಾರ್ಗಮೆನಿಕ್ಕುಂ ,
    ಬಾಲದ ತರಳತೆ ಪಥಾಕಮೆನೆ ತೋರ್ಗುಂ ದಲ್,
    ಕಾಲಂ ಸ್ಥಬ್ಧಂ, ಗೊರಸಿನ
    ಧಾಳಿಯೆನಿಕ್ಕುಂ ತುರಂಗಧಾವನಮಿದೆಯೇಂ?

  2. ವಾಲ್ಮೀಕೀ-ವ್ಯಾಸರ ಸಂವಾದ:
    ನೀತಿಯ ಮಾರ್ಗಮನೊರೆದೆಂ
    ಮಾತಂ ತಪ್ಪದ ವಿಶೇಷಮಂ ಗುಣಮೆಂದೆಂ
    ನೀತಿಯ ಕಟ್ಟಳೆಯುಳಿದುಂ
    ನೇತಾರಂ ಧರ್ಮವಿಜಯನೆಂಬುದನೊರೆದೆಂ

  3. ಅರಿಸಮಾಸದ ಬಗ್ಗೆ –

    ಕವಿಗರಿಸಮಾಸದೊಳಮು
    ದ್ಭವಿಸಿರ್ಪೊಡೆ ಶಂಕೆ ಕಾಣ್ಗೆ ಈ ದೃಷ್ಟಾಂತಂ
    ಶಿವಸೇನೆಯು ಕಾಂಗ್ರೆಸ್ಸೂ
    ಪವಾರನೂ ಕೂಡಿ ಗೈದುದಂ ಸರ್ಕಾರಂ

    • ಹಹ್ಹಹ್ಹ… ತುಂಬಾ ಚೆನ್ನಾಗಿದೆ ಜೀವೆಂ 🙂

      • ನೀವು ಬಿಟ್ಟ ಜಾಗವನ್ನು ತುಂಬಿದ್ದೇನೆ ಅಷ್ಟೆ 🙂

    • ಇಲ್ಲಿ ’ಸಮಾಸ’ವನ್ನು ಜಗಣವಾಗಿಸಿದಂತೆ ’ಪವಾರ’ನನ್ನೂ ಜಗಣವಾಗಿಸಬಹುದು – ಸಮಗಣಗಳು. ಕಂದಪದ್ಯನಿಯಮದಿಂದ ಇದು ಸಾಧುವಾದರೂ ಕನ್ನಡದ ಲಗಾದಿದೋಷವಾಗುತ್ತದೆ ಎಂಬ ವಾದವಿದೆ. ವಾಚನಕ್ಕೆ ಇದರಿಂದ ಯಾವ ಊನವೂ ಇಲ್ಲದಿರುವುದರಿಂದ, ಕಂದಕ್ಕೆ ಹೀಗೊಂದು ಅಪವಾದವನ್ನು/exception ಕೊಡಮಾಡಬಹುದೇನೋ.

      • ಕಂದ ಮೂಲತಃ ದ್ವಿಪದಿ – ಪ್ರಾಸಕ್ಕಾಗಿ ನಾಲ್ಕು ಪಾದಗಳನ್ನಾಗಿ ಮಾಡಿಕೊಂಡಿದ್ದಾಗಿದೆ – ಆಗಿ ’ಲಗಾದಿ ದೋಷ’ದ ವಾದಕ್ಕೆ ಬಲವಿಲ್ಲವೆನಿಸುತ್ತೆ.

      • ನೀವು ಮಾನಿಸಕಂದನನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿದ್ದೀರಿ. ಮಿಗಕಂದವು ಚತುಷ್ಪದಿಯಲ್ಲವೆ!

        • ಮಿಗಕಂದ ಚತುಷ್ಪದಿ ದಿಟ, ಆದರೆ ಅದಕ್ಕೆ ಪ್ರಾಸದ ಚಿಂತೆಯಿಲ್ಲವಲ್ಲ, ಹೇಗಿದ್ದರೂ ನಡೆಯುತ್ತೆ! ಮಾನಿಸಕಂದನೂ ಮೊದಮೊದಲು ಚತುಷ್ಪದಿಯೆ. ಆಮೇಲೆ, ದ್ವಿಪದಿಯಾದಮೇಲೆ, ಮಾತ್ರ ಪ್ರಾಸ, ಗ್ರಾಸ, ತ್ರಾಸ, ಹ್ರಾಸ ಇವೆಲ್ಲದರ ಚಿಂತೆ. ಅದಕ್ಕೆ ಮತ್ತೆ ಚತುಷ್ಪಾದಿಯಾಗಿದ್ದು.

  4. ವ್ಯಾಸ ವಾಲ್ಮೀಕಿಗಳ ಸಂವಾದ

    ಪುತ್ತಿನ ಪುತ್ರನೆ ನೀಂ ಪೆ
    ತ್ತಿತ್ತಶ್ಲೋಕದೊಳು ಬರೆದಪೆಂ ಭಾರತಮಂ
    ಪೆತ್ತುದಕಂ ನೀಂ ತೀವಿ ಜ
    ಗತ್ತಂ ದೀವಕುಲತಿಲಕನಿತ್ತಪೆ ಬೆಲೆಯಂ

    ಆದಿಕವಿಯೂ ಅನಾದಿಕವಿಯೂ ಮೊದಲಬಾರಿಗೆ ಸಂಧಿಸಿದಾಗ ಕೇಳಿಸಬಹುದಾದ ಪರಸ್ಪರ ಪ್ರಶಂಸೆ. ವ್ಯಾಸಕೂಟಪದ್ಯಗಳಲ್ಲಿ ಶ್ಲೋಕವಲ್ಲದೆ ಬೇರೆ ವೃತ್ತಗಳವೂ ಇವೆ ಎಂಬುದನ್ನು ಸದ್ಯಕ್ಕೆ ಮರೆಯೋಣ 🙂

  5. ಅಪವಾದಮೆನಿಪ ಪ್ರಮಾಣದೊಳ್ ಕಾವ್ಯದೊಳ್
    ಕೃಪೆಯಹುದರಿಸಮಾಸದುಪಯೋಗ ಕೇಳ್|
    ಅಪರಕಾವ್ಯಂ ವಿವಾಹವದಲ್ತೆ ನೀಂ ನೋಡು
    ಅಪವಾದಮಾ ಅರಿಗಳೊಳ್ ಸೌಖ್ಯಮೇ||

    • ಅವಪಾದ ಅಂದರೆ out-of-step ನಡೆಯುವುದು/ನಡೆದುಕೊಳ್ಳುವುದು ಎಂದೆ?

      • hhahha. ಟಂಕನದೋಷ. ಅದೂ ’ಅಪವಾದ’ವೆಂದಾಗಬೇಕು. ಸರಿಪಡಿಸಿದ್ದೇನೆ. ಬಲೆ ಜಾಣರು ನೀವು. ಪ್ರಾಸದೋಷವೆಂದು ಹೇಳಲಿಲ್ಲ.

  6. ರಾಮಾಯಣವು ನಡೆದುದು ಮಹಾಭಾರತಕ್ಕಿಂತ ಹಲವು ಸಹಸ್ರವರ್ಷಗಳ ಮುನ್ನ. ಆದರೆ ರಾಮಾಯಣಕಾವ್ಯವು ರಚಿತವಾದದ್ದು ಮಹಾಭಾರತಕಾವ್ಯರಚನೆಗಿಂತ ಸುಮಾರು ಒಂದು ಸಾವಿರವರ್ಷ ನಂತರ. ಒಂದೊಮ್ಮೆ ವ್ಯಾಸ-ವಾಲ್ಮೀಕಿಯರು ಆ ಕಾವ್ಯಗಳನ್ನು ರಚಿಸಿದ್ದು ಸಮಕಾಲೀನರಾಗಿ ಎಂದಾದರೆ, ರಾಮಾಯಣರಚನೆಯ ಒಂದು ಹಂತದಲ್ಲಿ ವಾಲ್ಮೀಕಿಗೆ ವ್ಯಾಸರು ಹೇಳಿದ ‘factor of 5’:

    (ಸೀತೆ) ಸಿತೆಯಂ ರಾವಣಗೀಯದಿರ್ ಕವಿಯೆ ನೀಂ, ಗಂಡಂದಿರಾಗಾಕೆಗಂ
    ದ್ಯುತಿಮಂತರ್ ಗಡ ಪತ್ತು ಮಂದಿಯೆನಿಪರ್, ಮೈಗಂತೆ ಮುಖ್ಯಂ ಶಿರಂ|
    ಗತಿಯಾಗೆನ್ನದುಮಪ್ಪುದೇನೆನುತೆ ನೀಂ ಆಲೋಚಿಸೈ ಯಾಚಿಪೆಂ
    ಪತಿಗಳ್ ದ್ರೌಪದಿಗಾಗ ಪೇಳು ತರಲಾನೈವತ್ತನೆಲ್ಲಿಂದಲೈ||

    • I have just recast a verse that I had penned in 2013 here for the samasyApAda ಪತಿಗಳ್ ಸೀತೆಗಮೆಷ್ಟು ಮಂದಿ ಗಣಿಸಲ್ಕೇನೊರ್ವರೇ ಇರ್ವರೇ

    • “ಆ ಕಾವ್ಯಗಳನ್ನು ರಚಿಸಿದ್ದು ಸಮಕಾಲೀನರಾಗಿ …” ಎನ್ನದಿದ್ದರೆ ಸಂವಾದವೇ ಅಸಾಧ್ಯ, ಹಾಗಾಗಿ … ಇನ್ನು ಪಾಂಚಾಲಿ ಪಚಾಸಾಲಿಯಾಗುವುದರಲ್ಲಿ ಕಷ್ಟವೇನೂ ಕಾಣದು; ಮರುದ್ಗಣವೇ ೪೮ ಮಂದಿ ಇದ್ದಾರೆ.

      • ೪೯ರ ಸ್ಥಾನಕ್ಕೆ ತಮ್ಮನ್ನೇ ನಿಯೋಜಿಸಿಕೊಂಡಿರೆಂದುಕೊಳ್ಳೋಣ. ೫೦ನೆಯವರು ಯಾರೋ? ಮುಗ್ಧ/obvious ಉತ್ತರವನ್ನು ನೀಡಬೇಡಿ.

        • ಹುಲಿಯಬಾಯಿಗೆ ನೀವೂ ನಾನೂ ತಲೆಹಾಕೋದ್ಯಾಕೆ? ಮಿಕ್ಕ ನಾಲ್ವರು ಒರಿಜಿನಲ್ ಗಂಡತಿಯರಲ್ಲಿ ಇಬ್ಬರನ್ನು ಆರಿಸಿಕೊಂಡಾಳು.

        • ತನ್ನ ಪಾಳಿಯಿಲ್ಲದಾಗಲೇ ಅರ್ಜುನ ಬಿಡಲಿಲ್ಲ. ಇನ್ನು ಅವನನ್ನು ಎಣಿಕೆಗೇ ತೆಗೆದುಕೊಳ್ಳದಿದ್ದರೆ ಬಿಟ್ಟಾನೆ?

          • ಎರಡು ಸ್ಥಾನಕ್ಕೆ (ಕ್ಷೇತ್ರ ಒಂದೇ, ವೋಟರೂ ಒಬ್ಬರೇ) ಮರುಚುನಾವಣೆ ನಡೆಯುತ್ತಲ್ಲ, ಎರಡೂ ಕಡೆ ನಿಲ್ಲಲಿ ಬಿಡಿ.

      • ಅವಧಾನವೊಂದರಲ್ಲಿ ಅಪ್ರಸ್ತುತಪ್ರಸಂಗಿಯು “ಈ ಅಪಾರ್ಟ್ಮೆಂಟ್ ವ್ಯವಸ್ಥೆಯು ದ್ರೌಪದೀಯವಲ್ಲವೆ? ಒಂದೇ ನಿವೇಶನ, ಹಲವಾರು ಮನೆಗಳು?” ಎಂದು ಕೇಳಿದ್ದಕ್ಕೆ ಗಣೇಶರು, “ಯೋಚಿಸಬೇಡಿ ಸ್ವಾಮಿ, ಎಲ್ಲರಿಗೂ ಪಾರ್ಕಿಂಗ್ ಸ್ಪೇಸ್ ಕೊಡುತ್ತೇವೆ.” ಎಂದರು!

  7. ಕುದುರೆಯ ಓಟ 50 mph
    ಓಟಮೇನ ನೋಡುವೆಯೊ ಕುದುರೆಯೊಳ್, ಮಾತ್ರಮರ್ಧಶತಕಂ
    ಸಾಟಿಯೇಂ ಚಿರತೆಗಹುದೆ, ಇದರದೆಪ್ಪತ್ತದಿಹುದು ವೇಗಂ|
    ಮೂಟೆವೊಲ್ ಕೂಡಲಳವೆ ಈ ಮಾಂಸಭಕ್ಷಿಪೃಷ್ಠದೊಳ್ ಪೇಳ್
    ಪಾಟವಂ ಕುದುರೆಯೋಟಮೇ ಸಲ್ಗು ಯಾನ-ಖೇಲಕೆಂದುಂ|| ಸಂತುಲಿತಮಧ್ಯಾವರ್ತಗತಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)