Feb 172020
 

೧. ಅನುಷ್ಟುಪ್  ಛಂದಸ್ಸಿನಸಮಸ್ಯೆ:

ಪ್ರಿಯಮಪ್ರಿಯಮಾದುದಯ್ 

೨. ಕಂದಪದ್ಯದ ಸಮಸ್ಯೆ:

ವಾರವಧೂ ಸಂಗಮಂ ಶುಭಾವಹಮಲ್ತೇ 

  13 Responses to “ಪದ್ಯಸಪ್ತಾಹ ೪೦೦: ಸಮಸ್ಯಾಪೂರಣ”

  1. ಗೌರವಮೇಂ ಪುರುಷರವೊಲ್
    ನಾರಿಯರುಂ ವಸ್ತ್ರಮಂ ಧರಿಸಲೀ ದಿನದೊಳ್|
    ಸೀರೆಗಳವಗುಂಠನಸಂ-
    ವಾರವಧೂಸಂಗಮಂ ಶುಭಾವಹಮಲ್ತೇ||
    (ಸೀರೆಯ ಅವಗುಂಠನಸಂವೃತ)

  2. ಸೇರೇಂ ತಲ್ಪದೊಳೇಗಳ್
    ತೀರಿಪುದಾಸಕ್ತಿಯನ್ನನಿತರೊಳೆ ನೋಡಲ್|
    ಕೋರುವೊಲೊರ್ಮಾಸದೊಳೆ ತ್ರಿ- (ಶಿ.ದ್ವಿ.)
    ವಾರವಧೂಸಂಗಮಂ ಶುಭಾವಹಮಲ್ತೇ||

  3. ಶಂತನು ಉವಾಚ:
    ನೀರಸರಲ್ತೇಂ ವರಿಸಲ್
    ನೀರೆಯರೀ ಸತ್ಯವತಿಯನುಳಿದೆಲ್ಲರ್ ಪೇಳ್|
    ವಾರಿಸುಗೇಂ ಪೇಳ್ ಗಂಧ-
    ದ್ವಾರವಧೂಸಂಗಮಂ ಶುಭಾವಹಮಲ್ತೇ|| (ಗಂಧದ್ವಾರವಧೂ – One who attracts by her aroma)

  4. A dog called Capri bitten by a venomous insect

    ಏನನಿತ್ತೊಡಮೇಂ ಪೊಡೆಗಂ ವಲಂ
    ಬೋನಮೌಷಧಗಳ್ ಫಲಮಿಲ್ಲಮೈ|
    ಫೇನಧಾರೆಯೆ ನಿಲ್ಲದೆ ಬಾಯೊಳಿಂ
    ಶ್ವಾನ ’ಕಪ್ರಿ’ ಯಮಪ್ರಿಯಮಾದುದೈ|| ಹಿತವಿಲಂಬಿತ

  5. ಷಷ್ಟ್ಯಬ್ದಪೂರ್ತಿ ಮತ್ತು ಭೀಮರಥಿಶಾಂತಿ

    ತಾರುಣ್ಯದೊಳೊರ್ಮೆ ಮಗುಳ್
    ಪೂರೈಸಿರೆ ಷಷ್ಟಿ-ಸಪ್ತತಿಸಮಂಗಳ್ ಕೇಳ್|
    ಮೂರೈ ವಿವಾಹಗಳ್, ಬಹು-
    ವಾರವಧೂಸಂಗಮಂ ಶುಭಾವಹಮಲ್ತೇ||

  6. ಮೆರೆದು ಕಾನನದೊಳ್ ಖರದೂಷಣಾ-
    ಧ್ವರದೆ ಗೆಲ್ದ ರಘೂದ್ವಹವಾರ್ತೆಯಿಂ
    ಮುರಿದ ರಾವಣಚಿತ್ತಕೆ ರಾಗಮಾ
    ಖರಹರಪ್ರಿಯಮಪ್ರಿಯಮಾದುದಯ್

    ಕಾಡಿನಲ್ಲಿ ಖರದೂಷಣರ ಯುದ್ಧದಲ್ಲಿ ರಾಮನು ಜಯಿಸಿದ್ದು ಕೇಳಿ ರಾವಣನಿಗೆ ಖರಹರಪ್ರಿಯರಾಗ ಅಪ್ರಿಯವಾಯಿತು.

  7. ಮೀರಿರೆ ಚಂಡಿಯುಪಟಳಂ
    ತಾರದ ದನಿಯಿಂ ಮುನೀಂದ್ರನೇರಿಸಿ ಬೆಯ್ದಂ
    ಮಾರಿಯ ಜತೆಗಿಂ ಮಿಗಿಲೆನೆ
    ವಾರವಧೂಸಂಗಮಂ ಶುಭಾವಹಮಲ್ತೇ

  8. ಊರಿಂ ದೂರಕೆ ಪೋಗಿರೆ
    ಮೀರಲ್ ಸೈನಿಕರ ಬಾಳ್ತೆ ಕಷ್ಟಮದಲ್ತೇ
    ಶೂರರ್ಗಂ ರಣರಂಗದೆ
    ವಾರವಧೂಸಂಗಮಂ ಶುಭಾವಹಮಲ್ತೇ

    ಸಾರಿರೆ ಜನ್ಮದ ಭಾಗ್ಯಂ
    ಪೋರಂ ಪಡೆದಿರ್ದನಲ್ತೆ ವಾರಾಂಗನೆಯಾ
    ಸೇರಿದನಾಮಿಕ ನರನೊಳ್
    ವಾರವಧೂಸಂಗಮಂ ಶುಭಾವಹಮಲ್ತೇ

  9. 1.
    ರಾಜಿಸಲ್ ಶಿರದೊಳ್ ಕೇಶಂ
    ಪೂಜ್ಯಂ ಸರ್ವರ್ಗದೆಂದಿಗುಂ
    ತ್ಯಜಿಸಲ್ಕದಸಹ್ಯಂ ದಲ್
    ಪ್ರಿಯಮಪ್ರಿಯಮಾದುದೈ

    2.
    ಪದ್ಯಂ ಬರೆಯಲಾನಗ್ರಂ
    ಪೊಗಳಲ್ ಸಖರಿರ್ದೊಡಂ
    ರಂದ್ರಾನ್ವೇಶಕರಿರ್ದಾಗಳ್
    ಪ್ರಿಯಮಪ್ರಿಯಮಾದುದೈ

    3.
    ನಿಶೆಯೊಳ್ ಸಖ್ಯದಿಂ ಸೌಖ್ಯಂ
    ದಿನದೊಳ್ ಜಗಳಂ ಗಡಾ
    ಸೂರ್ಯಂ ತಾನೆದ್ದು ಬಂದಾಗಳ್
    ಪ್ರಿಯಮಪ್ರಿಯಮಾದುದೈ

    4.
    ಛಂದಂ ಪೆರ್ಚಾದುದೀಗಳ್ ದಲ್
    ಪೂರಣಕ್ಕೀ ಸಮಸ್ಯೆಗಂ
    ಅತಿಯಾದೊಡೆ ಸಾನಿಧ್ಯಂ
    ಪ್ರಿಯಮಪ್ರಿಯಮಾದುದೈ

  10. ನೀಲಕಂಠ, ರಾಮಣ್ಣ, ಪ್ರಸಾದು ಎಲ್ಲರ ಪೂರಣಗಳು ಬಹಳ ಚೆನ್ನಾಗಿವೆ

  11. ಘೋರಂ ಯುದ್ಧಂ, ಗೆಲ್ದಪು-
    ದೋರೆಯ ಜಾಲಂಗಳಿಂದೆ ಮರೆಯೊಳ್ ಸೆಳೆಯ-
    ಲ್ಕಾರಾತೀಯಭಟರ್ಕಳ
    ವಾರವಧೂ ಸಂಗಮಂ ಶುಭಾವಹಮಲ್ತೇ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)