May 132020
 

೧. ದಾಹ

೨. ಫಲಕ

೩. ಶರ-ಸೇತುವೆಯನ್ನು ಹನುಮಂತ ಮುರಿದಾಗ 

  12 Responses to “ಪದ್ಯಸಪ್ತಾಹ ೪೧೦: ವರ್ಣನೆ”

 1. ದಾಹ
  ನೀರಡಿಕೆ ಗಂಟಲೊಳು ಮೇಣ್ ಪಸಿವು ಉದರದೊಳು
  ಆರ ಕಾಡವಿವು ಪೇಳ್, ಸಾಜವಂತೆ|
  ಭೋರೆಂದು ಮೊರೆವ ರತಿದಾಹ ತಾನನ್ಯಮೇಂ
  ವಾರಿಸೆಂಬರದೇಕೋ ಮಾತ್ರಮಿದ ಪೇಳ್||

 2. ಫಲಕ
  (Online purchases) ವ್ಯಥೆಯಿಲ್ಲದೆ ಮನೆಗೆಲ್ಲವು ಬಹುದಂಗಡಿಗಳೊಳಿಂ
  (Google map) ಪಥಭೂಪಟವಿರುವೀ ಸಮಯದೆ ಯಾನವು ಸುಭಗಂ|
  (Vehicles)ರಥವೋಗುವೆಡೆಗದೇತಕೊ ಮಗುಳಂಗಡಿಗವುಗಳ್ (ಫಲಕ)
  ಮಥನಂ ಗಡ ಬಹುಗೈಯುತಲುಲಿಯೆಲ್ಲದು(=ನೀನು ಹೇಳು) ಸಲುಗುಂ|| ಚರ್ಚರೀ

 3. ದಾಹ:

  ಸಕ್ಕರೆಯ ರುಚಿಯಿಹುದು ಪಾಯಸಕ್ಕೆ ಮೇ-
  ಣಕ್ಕರೆಯ ಸವಿಯಮ್ಮನ ಪಾ-
  ಕಕ್ಕೆ, ನೀರಿನ ರುಚಿಯೀಯೆಲ್ಲವುಗಳ ಮುಂ-
  ದಕ್ಕದರ ಕೃಪೆಯು ದಾಹಕ್ಕೆ!

  ಬಾಯಾರಿಕೆಯಾದಾಗ ನೀರಿನ ರುಚಿಗೆ ಮಿಗಿಲಿಲ್ಲ ಎಂಬ ಅಭಿಪ್ರಾಯ.

  • ಶ್ರೀಹರಿಯವರಿಗೆ ಸ್ವಾಗತ. ಇದು ಯಾವ ಛಂದಸ್ಸಿನಲ್ಲಿದೆ ತಿಳಿಸಿ.

   • ಧನ್ಯವಾದಗಳು ಸರ್. ಇದು ಸಾಂಗತ್ಯದಲ್ಲಿದೆ.

  • ಅಂಶಛಂದಸ್ಸಿನ ವಿಷ್ಣು-ಬ್ರಹ್ಮಗಣಗಳಲ್ಲಿ ಎರಡು ವಿಷಯಗಳುಂಟು: ಶ್ರವ್ಯರೂಪ ಹಾಗೂ ದೃಶ್ಯರೂಪ.

   • ವಿಷ್ಣುಗಣವು ಶ್ರವ್ಯರೂಪದಲ್ಲಿ ನನನಾನಾ ಹಾಗೂ ನಾನಾನಾ ಎರಡೇ ರೂಪಗಳನ್ನು ಉಳ್ಳದ್ದು. ದೃಶ್ಯರೂಪದಲ್ಲಿ ನನನಾನಾ, ನಾನಾನಾ, ನನನಾನs, ನನನsನs, ನನನsನಾ, ನಾನಾನs, ನಾನsನs ಮತ್ತು ನಾನsನಾ. ಇಲ್ಲಿ ಗಮನಿಸಬೇಕಾದ್ದೆಂದರೆ ಎಲ್ಲಿಯೂ ಐದು ಅಕ್ಷರಗಳಿಲ್ಲ ಮತ್ತು ನಾಲ್ಕಕ್ಷರಗಳ ನಾನನನಾ ಮತ್ತು ನಾನನನ ಗಣಗಳು ಆ ಶ್ರವ್ಯರೂಪಕ್ಕೆ ಹೊಂದವು ಎಂಬುದನ್ನು ಗಮನಿಸಿ. ಶ್ರವ್ಯದಲ್ಲಿ ಕರ್ಷಣಕ್ಕೆ ಅವಕಾಶವಿದ್ದರೂ ದೃಶ್ಯರೂಪದಲ್ಲಿ ಲಗಂ ಬಳಸುವಂತಿಲ್ಲ.

   • ಬ್ರಹ್ಮಗಣವು ಶ್ರವ್ಯರೂಪದಲ್ಲಿ ನನನಾ ಹಾಗೂ ನಾನಾ ಎರಡೇ ರೂಪಗಳನ್ನು ಉಳ್ಳದ್ದು. ದೃಶ್ಯರೂಪದಲ್ಲಿ ನನನಾ, ನಾನಾ, ನಾನs ಮತ್ತು ನನನs. ಇಲ್ಲಿ ಗಮನಿಸಬೇಕಾದ್ದೆಂದರೆ ಎಲ್ಲಿಯೂ ನಾಲ್ಕು ಅಕ್ಷರಗಳಿಲ್ಲ. ಮೂರು ಅಕ್ಷರಗಳ ನಾನನ ಗಣವು ಆ ಶ್ರವ್ಯರೂಪಕ್ಕೆ ಹೊಂದದು ಎಂಬುದನ್ನು ಗಮನಿಸಿ. ಶ್ರವ್ಯದಲ್ಲಿ ಕರ್ಷಣಕ್ಕೆ ಅವಕಾಶವಿದ್ದರೂ ದೃಶ್ಯರೂಪದಲ್ಲಿ ಲಗಂ ಬಳಸುವಂತಿಲ್ಲ.

   ನಿಮ್ಮ ಪದ್ಯದವನ್ನು ಹೀಗೆ ಗಣವಿಭಜನೆ ಮಾಡಿದರೆ,
   ಸಕ್ಕರೆಯ1/ ರುಚಿಯಿಹುದು2/ ಪಾಯಸ3/ಕ್ಕೆ ಮೇ-4
   ಣಕ್ಕರೆಯ5/ ಸವಿಯಮ್ಮ6/ನ ಪಾ-7
   ಕಕ್ಕೆ, ನೀ8/ರಿನ ರುಚಿ9/ಯೀಯೆಲ್ಲ10/ವುಗಳ ಮುಂ-11
   ದಕ್ಕದರ12/ ಕೃಪೆಯು ದಾ13/ಹಕ್ಕೆ14!

   • 1, 2, 5, 7 ಮತ್ತು 12ನೆಯ ಗಣಗಳು ನಿಷಿದ್ಧ.
   • 3ನೆಯ ಗಣವು ಲಗಾದಿಯಾಗಿದೆ
   • 4ನೆಯ ಗಣವು ಅಪೂರ್ಣವಾಗಿದೆ (ಲಗಾದಿಯೂ ಆಗಿದೆ)

   ದಯವಿಟ್ಟು ಸರಿಪಡಿಸಿ.

   • ವಿವರಣೆಗೆ ಧನ್ಯವಾದಗಳು ಸರ್. ನಾನು ಪದ್ಯ ಬರೆಯುವಾಗ ಈ ಕೆಳಗಿನಂತೆ ವಿಂಗಡಿಸಿದ್ದೆ:

    ಸಕ್ಕರೆ1/ಯ ರುಚಿಯಿ1/ಹು ದುಪಾಯ3/ಸಕ್ಕೆ ಮೇ-4
    ಣಕ್ಕರೆ5/ಯ ಸವಿಯ6/ಮ್ಮನ ಪಾ-7
    ಕಕ್ಕೆ, ನೀ8/ರಿನ ರುಚಿ9/ಯೀಯೆಲ್ಲ10/ವುಗಳ ಮುಂ-11
    ದಕ್ಕದ12/ರ ಕೃಪೆಯು13/ದಾಹಕ್ಕೆ14!

    ಇಲ್ಲೇನಾದರೂ ತಪ್ಪಿದೆಯೇ? ಅಥವಾ ಬರೆಯುವಾಗ ಕೇವಲ ದೃಶ್ಯರೂಪದ ಗಣಗಳನ್ನಷ್ಟೇ ಬಳಸಬೇಕೇ? ದಯವಿಟ್ಟು ತಿಳಿಸಿ.

  • ಉತ್ತರಕ್ಕಾಗಿ ಧನ್ಯವಾದಗಳು. ಮೊದಲೆರಡು ಪಾದಗಳನ್ನು ನೀವು ವಿಭಜಿಸಿರುವುದು ಸರಿಯಿದೆ. ಗಣದ ಮೊದಲನೆಯ ಅಕ್ಷರಕ್ಕೆ ಯತಿಯಿದ್ದರೆ (ಯ ರುಚಿಯಿ, ಯ ಸವಿಯ, ರ ಕೃಪೆಯು) ಶ್ರುತಿಕಟುವಾಗುತ್ತದೆ ಎಂದಷ್ಟೇ ನನ್ನ ತಾತ್ಪರ್ಯ. 12ನೆಯ ಗಣವನ್ನು ಹಾಗೆ ವಿಂಗಡಿಸಬಹುದು, ಆದರೆ ಆಗ 14ನೆಯದು ಬ್ರಹ್ಮಗಣವಾಗದು. ಇರಲಿ. ಬಿಡದೆ ಪ್ರತಿವಾರವೂ ಪಾಲ್ಗೊಳ್ಳಿ. ವಾರಕ್ಕೆ ಒಂದೆರಡು ಪದ್ಯಗಳು ಭಾರವೆನಿಸವು. ಮತ್ತೊಮ್ಮೆ ಧನ್ಯವಾದ.

 4. ದಾಹ
  ಲೋಕಕ್ಕಂ ಹಿತಮೀಯ
  ಲ್ಕಾಕಾಶದೊಳಿರ್ದುಮೀಂಟಿ ಶರಧಿಯ ಜಲಮಂ|
  ಭೇಕಂಗಳನುಂ ತಣಿಪುದಿ
  ದೇಕಂ ಕಲ್ಯಾಣಕಪ್ಪ ದಾಹಂ ರವಿಯಾ||

  ಲೋಕಕ್ಕೆ ಹಿತವನ್ನು ಕೊಡಲು ಆಕಾಶದಲ್ಲಿದ್ದುಕೊಂಡೇ ಸಮುದ್ರದ ನೀರನ್ನೆಲ್ಲ ರವಿಯು ದಾಹದಿಂದ ಹೀರಿಬಿಡುತ್ತಾನೆ. ಈ ದಾಹದ ಕಾರಣದಿಂದ ಕಪ್ಪೆಗಳೂ ತಣಿಯುತ್ತವೆ(ಸಣ್ಣ ಜೀವಿಗಳಾದರೂ). ಜಗತ್ತಿನ ಕಲ್ಯಾಣಕ್ಕಾಗಿರುವ ಒಂದೇ ದಾಹ ಈ ರವಿಯ ದಾಹ.

 5. ದೇಹಂ ಸಮಾಜೋನ್ಮುಖಕಾರ್ಯಭಾರದೊಳ್
  ಸ್ನೇಹಂ ಸದಾಚಾರಿಗಳೊಳ್ ಸಲುತ್ತೆ, ‘ದಾ-
  ಸೋಹಂ’ ಮನೋಭಾವದೆ ಜೀವಿಸಲ್ ವಿನಾ
  ದಾಹಂ ಜಗತ್ಸಾಗರದಿಂದೆ ತೀರ್ವುದೇಂ||
  (ಒಂದು ಸಣ್ಣ ವಿಶೇಷವೆಂದರೆ, ಸಾಗರದಿಂದ ದಾಹ(ಬಾಯಾರಿಕೆ) ತೀರುವುದಿಲ್ಲ, ಬದಲಿಗೆ ಹೆಚ್ಚುವುದು.) ತೀರ್ವುದು ಸರಿಯಿದೆಯಾ?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)