Aug 312020
ವರ್ಣನೆಯ ವಸ್ತುಗಳು:
೧. ಋಷ್ಯಾಶ್ರಮ
೨. ಕುರಿಯ ತಲೆ
೩. ಸುಳ್ಳಿನ ಸ್ವಗತ
ಸಮಸ್ಯೆಯ ವಸ್ತು:
ಪೊಳೆವುದೆಲ್ಲವು ಚಿನ್ನಮೇ
(ಪಲ್ಲವ, ಭಾಮಿನೀಷಟ್ಪದಿ, ಪಂಚಮಾತ್ರಾ ಚೌಪದಿ ಮುಂತಾದ ಛಂದಸ್ಸಿನಲ್ಲಿ ಅಳವಡಿಸಿ ಪೂರ್ಣ ಮಾಡಿ)
ವರ್ಣನೆಯ ವಸ್ತುಗಳು:
೧. ಋಷ್ಯಾಶ್ರಮ
೨. ಕುರಿಯ ತಲೆ
೩. ಸುಳ್ಳಿನ ಸ್ವಗತ
ಸಮಸ್ಯೆಯ ವಸ್ತು:
ಪೊಳೆವುದೆಲ್ಲವು ಚಿನ್ನಮೇ
(ಪಲ್ಲವ, ಭಾಮಿನೀಷಟ್ಪದಿ, ಪಂಚಮಾತ್ರಾ ಚೌಪದಿ ಮುಂತಾದ ಛಂದಸ್ಸಿನಲ್ಲಿ ಅಳವಡಿಸಿ ಪೂರ್ಣ ಮಾಡಿ)
೧. ಋಷ್ಯಾಶ್ರಮ-
ರಮಣೀಯತೆಯಿಂ ಋಷ್ಯಾ-
ಶ್ರಮಂಗಳೆಂತೆಂತೊ ಮೆರೆಯುತಿರ್ಕೆ ಜಗತ್ತೊಳ್
ಕಮನೀಯತೆಯಿಂ ಕಣ್ವಾ-
ಶ್ರಮಮೇ ಶಾಶ್ವತಮದಾಯ್ತು ಕಾವ್ಯಜಗತ್ತೊಳ್
*
ಕಲಹಂ ಕೋಪಂ ತಾಯಿಯ
ತಲೆಯಂ ಕಡಿದಿರ್ಪುದಂತೆ ಭೂಪಾಲರೊಡಂ
ಕೊಳುಗುಳಮುಂ ಸುಲಿಗೆಯುಮೇಂ
ಸಲಲಾಶ್ರಮಮಿಂತು ಲೋಕಕುಪಮೆಯೆನಿಕ್ಕುಂ
೨.ಕುರಿಯ ತಲೆ-
ತರಿದ ಕೈದುವುಂ ನೆತ್ತರಿಂ ಮಿಂದುದಲ್ತೇ
ಚಿರದೆ ಕೆಂಪಾಗೆ ಕಾಳಿಯಾ ಮುಖಮದಾಗಳ್
ಪೊರಳುತಿರ್ದಪುದ ತನ್ನಯಾ ಕಾಯಮಂ ತಾಂ
ಕುರಿಯ ತಲೆಯೆ ಬಿಡುಗಣ್ಣಿಂದೆ ಕಾಣುತಿರ್ಕುಂ
೩. ಸಮಸ್ಯೆ-
ಅಳಲಿನಿಂ ಪತಿಯಿಂದ ಬಯ್ಯಿಸಿ-
ಕೊಳುತೆ ದಿಕ್ಕನೆ ಕಾಣದಾಗಿರೆ
ಕಳೆದುದಂ ಪುಡುಕುತ್ತಮಿರ್ದೊಡೆ
ಪೊಳೆದುದೆಲ್ಲಂ ಚಿನ್ನಮೈ
*
ಕೊಳುವ ಬಯಕೆಯು ಮನದೆ ತುಂಬಿರೆ
ಬೆಲೆಯ ಕಟ್ಟುವ ಶಕ್ತಿಯಿರದಿರೆ
ಕಳವುಮಾಲನು ಮಾರುವೆಡೆಯೊಳು
ಪೊಳೆವುದೆಲ್ಲಂ ಚಿನ್ನಮೈ
೪. ಸುಳ್ಳಿನ ಸ್ವಗತ-
ಬಿಸಿಯನೆ ಮೈಯೊಳು ಪೆರ್ಚಿಸುತಿರ್ಪೆನಾ-
ನುಸಿರಿನೇರಿಳಿತದಿಂ ಮತ್ತೆ
ಜಸಮನೆ ಜವದಿಂದ ಕರ್ಪನಾಗಿಸುತಿರ್ಪೆಂ
ಪುಸಿಯೆಂಬುದೆನ್ನಯ ಪೆಸರು
ಋಷ್ಯಾಶ್ರಮಪದ್ಯಗಳು ಚೆನ್ನಿವೆ
ಋಷ್ಯಾಶ್ರಮ.
ಪುರದಿಂ ದೂರದೊಳಿರುತುಂ
ವರಗೇಹಂ ರಾಜಪುತ್ರರಿಂಗಾಗುತ್ತುಂ
ನೆರವಪ್ಪುದಲ್ತೆನಾಶ್ರಮ
ವರಿಯಲ್ ಜೀವಿಪುದನಿಳೆಯನಾಳ್ವವರ್ಗಂ
ಸಮಸ್ಯೆ.
ಕಳಿತ ಪಣ್ಣೆನೆ ದೀಪಮಂ
ಬಳಸಿ ಬೀಳುವ ಕೀಟದೊಲ್
ತಿಳಿವದಿಲ್ಲದ ಮೂರ್ಖಗಂ
ಪೊಳೆವುದೆಲ್ಲವು ಚಿನ್ನವೈ
ಸುಳ್ಳಿನ ಸ್ವಗತ.
ಬೆದರಿಕೆಯಿಲ್ಲಂ ಬಾಳ್ತೆಗದೆಂದಿಗು
ಮುದುಡದಲಿರ್ದಪೆ ಕೊನೆತನಕ
ಬದುಕುವ ಸತ್ಯದ ಪರಮುಖಮಾಗಿರ
ಲದರೆನು ಕೊಂಚಂ! ಬಿಡು ಮರುಕ!
ಸಮಸ್ಯಾಪರಿಹಾರ ಚೆನ್ನಿದೆ
ಆಶ್ರಮ:
ಬಣ್ಣಿಪುದೇಮಾಶ್ರಮಮಂ
ತಣ್ಣನೆ ತಾಮಿರ್ದು ತಪವ ಗೈಯುವುದೊಂದೇಂ||
ಮಣ್ಣಿನೊಡೆಯನುಡೆ ಕಾವಿಯ
ಚಿಣ್ಣಂ ಯತಿಯ ಪಿಡಿದದ್ದು ಕೊಡಲಿಯಮಿದರಿಂ ||
ಸಮಸ್ಯೆ:
ಗಳಿಸಲಾಗದೆಯಂಕಮಂತಾಂ
ಕೊಳೆತು ಕೂತಿರೆ ಕಕ್ಷೆಯಲ್ಲಿಯೆ
ಅಳುತ ಬರೆದಗೆ ಕಡೆಯ ಪರಿಕೆಯ
ಹೊಳೆದುದೆಲ್ಲಂ ಚಿನ್ನಮೈ
ಆಹಾ! ಸಮಸ್ಯೆಗೆ ಪರಿಹಾರ ತುಂಬಾ ಚೆನ್ನಾಗಿದೆ ಶ್ರೀಶ..
ಧನ್ಯವಾದಗಳು ಛೀದಿ.
ಋಷ್ಯಾಶ್ರಮ:
ಕಾಡಿನೊಳಿರ್ದೊಡಂ ಬೆದರದಿರ್ಪುವುದಿಲ್ಲಿಮಿಗಂಗಳೆಲ್ಲಮುಂ
ಪಾಡುತೆ ಸೋಗೆಗಳ್ ಗರಿಯನುರ್ಚಿಸುತಾಡುವುವಿಲ್ಲಿ ತೋಷದಿಂ
ಕೇಡೆಮಗಿಲ್ಲಮೆನ್ನುತೆ ಮೊಲಂಗಳುಮಿಲ್ಲೆಯೆ ಶಾಂತಿಯಿಂದಿರಲ್
ನೋಡಿದೊ ಮೌನಿಯಾಶ್ರಮದೆ ಸಗ್ಗಮೆ ಕಾನನ ಜೀವಿಗಳ್ಗಲಾ
ಕುರಿಯ ತಲೆ:
ಮಿದುಳೋ ಮಾಂಸಮನರೆದಿ-
ಟ್ಟಿದ ಪಿಂಡಮನಿಂತು ಬುರುಡೆಯೊಳಗಿರಿಸಿದುದೆಂ-
ಬುದು ದಿಟಮೆಂದದನರಿಯಲ್-
ಲ್ಕಿದೊ ಕುರಿಕುರಿಯೆಂದು ಪೆದ್ದರಂ ಕರೆಸುವದಯ್
ಸಮಸ್ಯೆ:
ಖಳನು ತನ್ನಯ ಕಾರ್ಯದೊಳಿರ-
ಲ್ಕುಳಿಸದೆಯೆ ದೋಚುತ್ತಿರಲ್ ಕಂ-
ಗಳಿಗೆ ಕಾಂಬುದನೊಯ್ದೊಡವಗಂ
ಪೊಳೆದುದೆಲ್ಲಮೆ ಚಿನ್ನಮಯ್
ಸುಳ್ಳಿನ ಸ್ವಗತ:
ಉನ್ನತಿಗೊಯ್ಯುವೆನೆನ್ನಾಶ್ರಿತರಂ
ಬನ್ನವ ಕಳೆಯುವೆನೆಂದರಿತುಂ
ಮುನ್ನಮೆ ಸತ್ಯ ಹರಿಶ್ಚಂದ್ರನ ಗೆಲು-
ವಿನ್ನುಂ ಭಾದಿಪುದೆನ್ನೊಳಗಂ
ಋಷ್ಯಾಶ್ರಮ ::
ಆನೆಯ ಕುಂಭವನೊಡೆಯ –
ಲ್ಕಾ ನಾಗನ ಪೆಡೆಯನುಡಿಯೆ ರತ್ನಂ ಸಿಗುಗುಂ
ವಾನಪ್ರಸ್ಥಮೆ ಕಾಣ್ಗುಂ
ಕಾನೊಳ್ ಸಿಗದೆಂದುಮೊಂದು ಋಷ್ಯಾಶ್ರಮಮುಂ
ಕುರಿಯ ತಲೆ ::
ನರರೆಲ್ಲರವಿವೇಕದಿಂ ಮೆರೆಯೆ ಲೋಕದೊಳ –
ಗರಿಯದೆಯೆ ನಾಯಕರ ಪಿಂದೆ ಪೋಪರ್
ಮರೆತು ಮತಿಶಕ್ತಿಯನು ನೆರೆದಿರ್ಪ ಶಿರಗಳಿವು
ಕುರಿಯ ತಲೆಗಳಿಗುಪಮೆಯಾಗವೇನು ?
ಸಮಸ್ಯೆ – ಪೊಳೆದುದೆಲ್ಲವು ಚಿನ್ನಮೈ
1.
ಒಳಿತ ಮಾಡುತೆ ಧರ್ಮಮಾರ್ಗದೆ
ತಳಿತ ಸದ್ಭಾವನೆಗಳೂಡಿದ
ತಳೆಯಲಂತಃಕರಣದೊಳಗಡೆ
ಪೊಳೆದುದೆಲ್ಲವು ಚಿನ್ನಮೈ
2.
ಒಲಿದು ಬಂದಿರೆ ಕೃಷ್ಣ ಸಂಧಿಗೆ
ಮುಳಿಯೆ ಕೌರವರಾಯ ಗರ್ವದೆ
ತಳೆದ ಕುರುಡಿನ ಪುತ್ರಮೋಹದೆ
ಪೊಳೆದುದೆಲ್ಲವು ಚಿನ್ನಮೈ
ಸುಳ್ಳಿನ ಸ್ವಗತ ::
[ ಜಾನಪದ ಗೀತೆಯ ಕೃಪೆಯಿಂದ]
ಸತ್ಯವೇ ನಮ್ಮ ತಾಯಿ ತಂದೆಯು
ಸತ್ಯವೇ ನಮ್ಮ ಬಂಧು ಬಳಗವು
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು
ಸತ್ಯವೇ ಜಯಿಸುವುದು ಘಂಟಾಘೋಷದಿಂದಲೆ ಸಾರುವೆಂ 😉
ಋಷ್ಯಾಶ್ರಮಸ್ಥಿತಿಸುಧಾರಣೆ:
ಕಾನಿಂ ನಾಡಿಂಗೈದಿರೆ
ಮಾನಿನಿ-ಮದಿರಂಗಳಾಸೆಯಿಂ ಮುನಿಸಂಘಂ|
ಸೌನಿಕನಿಂ ’ಪೆಡೆಯನುಡಿಸೆ’
(ಆ) ಹೀನರೊಳೊರ್ವನ, ವನಕ್ಕುಳಿದರೈದಿರರೇಂ??
ಕುರಿಯ ತಲೆ – Fine
ಸುಳ್ಳಿನ ಸ್ವಗತ:
ಸರಳವಿದೆ ಸತ್ಯವದು ತಿಳಿವರದನೆಲ್ಲರುಂ
ಬೆರಗಿಲ್ಲ ಸತ್ಯಾನುಸಂಧಾನದೊಳ್|
ಕುರಿತೆನ್ನನೆಂತೆಂತು ಬಣ್ಣಿಪರೆನುತ್ತೆ ನೀಂ
ಪರಿಕಿಸೆಲೊ ನ್ಯಾಯಾಲಯದ ವಾದದೊಳ್||
ಋಷ್ಯಾಶ್ರಮ:
ಅಧೀನಮಿರರಾವುದೇ ನರಪರಿಂಗೆ ತಾಂ ವಾದಿಶರ್ (sages)
ವಿಧೇಯತೆಯಿನೈದುವರ್ ಋಷಿಗಳಾಶ್ರಮಕ್ಕೀಶ್ವರರ್ (Kings)|
ಬುಧಂ ಋಷಿಗಳೀಶನೈ ಅವನಿಗರ್ಪಿಪರ್ ನೇಮಮಂ
(Giver) ವಿಧಾತೃಗಳಿವರ್ ವಲಂ ಕುಡೆನುತೇನನುಂ ಕೇಳರೈ|| ಪೃಥ್ವೀ
ತಲೆ ಅಂದರೆ ತಲೆ!
ತಪ್ಪಿಸಿಕೊಳ್ಳದೆ ಸೇರುವುದೆಂತೋ
ರೊಪ್ಪವನೆನ್ನುತೆ ಯೋಚಿಸಿ ತಾಂ|
ಒಪ್ಪಿಂ ನಡೆದಿರೆ ಮೈಗಂಟಿಸಿ ಮೈ
ಟಿಪ್ಪಣಿಗೈದೆಂ: ’ಕುರಿಯ ತಲೆ’!!
ಸಮಸ್ಯಾಪೂರಣ:
ತೊಳಗುತಿರೆ ಲಂಕಾನಗರಮೆಂ-
ಬಿಳೆಯೊಳಿಹ ಸಾಮ್ರಾಜ್ಯದೆಲ್ಲವು
ಒಳಗು ಹೊರಗುಂ ಭವನ-ಪಥಗಳ್ ಪೊಳೆವುದೆಲ್ಲವು ಚಿನ್ನಮೇ| (…ಪೊಳೆವುದು. ಎಲ್ಲವೂ…)
ನಳನಳಿಸುತಿರಲೇಕತಾನದೆ
ಪುಳಕಮಂ ಗೈಯುವುವವೆಂತೋ?
ಬಳೆಯ ಮಾಡಿಸಿ ಕಬ್ಬಿಣದ, ತಾನಿತ್ತ ತಂಗಿಗೆ ರಾವಣಂ||
अनृतस्वगतम् ;
अतिपरिचयादवज्ञा
मामुपयुज्य प्रशंसते नाः सत्यम् ।
वितथं विरुध्य चैतद्
कार्यः सत्याग्रहो मया नूनमिह॥
ಚೆನ್ನಾಗಿದೆ.
ಕುರಿಯ ತಲೆ :
दक्षोsदक्षः क्षणं यावन्मेषशीर्षमवाप ह ।
कति मेषशिरांसि त्वां प्रतीक्षेरन् सखे वद ।।
ಸಮಸ್ಯಾಪೂರಣ:
ಪೊಳೆವುದೆಲ್ಲವು ಚಿನ್ನಮೇ ಪಳೆ-
ಯುಳಿಕೆಯೆಲ್ಲವು ಭೂಮಿತೈಲವೆ
ತೊಳಗುವಾ ಹಣೆಬರಹದಿಂದಾನಂದದಿಂದಿರಲು
ಘಳಿಗೆಯೇಳಾಯ್ತೇಳಿರೆನ್ನುತ
ಬಳೆಯ ಸದ್ದೊಡನುಲಿಯೆ ಮಡದಿಯು
ಕಳವಳಿಸುತೂಳಿಗಕೆ ಮರಳಿದ ವೇಳೆಯಾಯ್ತೆಂದು
ಋಷ್ಯಾಶ್ರಮ
अत्रास्ते गणयन् शिशुर्विगतभीः पञ्चास्यदंष्ट्राङ्कुरान्
पार्श्वे नव्यसुमस्य नामकरणं कुर्वन् कुमारः कृती ।
मा गास्तत्र तपोरताः श्रुतिविदः मन्त्रं यतन्तो नवम् ।
भान्तीत्थं पृथिवीतले मुनिकुलं देवप्रयोगालयः ॥