Oct 122021
 


ವರ್ಣನೆ:
೧. ಕಿಚ್ಚಿಲ್ಲದ ಕದನ
೨. ನರಕದ ಒಂದು ವಿಭಾಗದ ವರ್ಣನೆ
೩. ಮೂರು ಕಾಲಿನ ಓಟ

ಸಮಸ್ಯೆ:
(ಕಂದ) ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್
(ಇಂದ್ರವಜ್ರ) वह्निश्चकम्पे बहुशैत्यशीर्णः

  21 Responses to “ಪದ್ಯಸಪ್ತಾಹ ೪೪೨”

  1. ಮೂರು ಕಾಲಿನ ಓಟ
    ನಾವೆತ್ತ ಸಾರುವೆವು? ಲಕ್ಷ್ಯವುಂಟೇನೆಮಗೆ?
    ಗಾವುದದ ಮಾರುಕಟ್ಟೆಗೆ ಮತ್ತೆ ಮನೆಗೆ|
    ತಾವಾವುದಕ್ಕೋಡಿಸುವವೊ ತಾಪತ್ರಯವು
    ಜೀವನದೆ ಗಮ್ಯವೆಮ್ಮಯದದುವೆ ಕೇಳ್||

  2. 1. ಇನ್ನೊಬ್ಬನಿಗೆ ಮೋಸಮಾಡಿ ಅವನ ಹೆಂಡತಿಯನ್ನು ವಶದಲ್ಲಿಟ್ಟುಕೊಂಡು ಆಕೆಯ ಸಂಗಮಾಡುವವರಿಗೆ ಅಂಧತಾಮಿಸ್ರನರಕ.
    2. ಕಂಡವರ ಹೆಂಡತಿ-ಮಕ್ಕಳನ್ನು ಅಪಹರಿಸುವವರಿಗೆ ತಾಮಿಸ್ರನರಕ.

    ಸರಿಯಹುದು ಅಂಧತಾಮಿಸ್ರವದು, ಪರಸತಿಯ
    ಹರಣಗೈದವಗದುವೆ ತಕ್ಕ ನರಕ|
    ಪರಸತಿಯ ಜೊತೆಗವಳ ಮಕ್ಕಳನ್ನೂ ಒಯ್ವ
    ಮರುಕವುಳ್ಳವಗೇಕೆ ತಾಮಿಸ್ರವು??

  3. ಕಿಚ್ಚಿಲ್ಲದ ಕದನ

    ಕದನಕ್ಕೆ ಕಾಲಾಳುಗಳು ಮಾತ್ರವಿರೆ ಸಾಕೆ
    ಸದೆಬಡಿಯುವಾಯುಧಗಳೆನಿತೊ ಬೇಕು|
    ಕುದಿಯುತಿಹುದೊಬ್ಬೊಬ್ಬರೆದೆಗಳೊಂದೊಂದು ತೆರ
    ಮುದುರಿಕೊಂಡುರಿವರಾಯುಧವಿಲ್ಲದೆ||

  4. ಸಮಸ್ಯಾಪೂರಣ: ವಡವಾಗ್ನಿ. Not all submarine fires reach the water surface. Many die out deep in the ocean

    ಇಳೆಯಂ ಸುಟ್ಟಾಯ್ತೀಗಳ್
    ತಳಮಂ ಸಾಗರದ ದಹಿಪೆನೆನುತೆಳಸುತ್ತುಂ|
    ಬಳಲುತ್ತರಸುತೆ ವಾಯುವ
    ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್||
    ——–
    (ಇಳೆವೆಸರಳ = ಭೂಮಿಯ ಹೆಸರುಳ್ಳವಳ = ಪೃಥಾ = ಕುಂತಿ)
    ಇಳೆವೆಸರಳ ಪುತ್ರಂ ತಾಂ (ಕರ್ಣ)
    ಬಳಸಿರಲಾಹವದೊಳರ್ಜುನಂಗಗ್ನ್ಯಸ್ತ್ರಂ|
    ಮಳೆಯಸ್ತ್ರವ ವಿಡೆ ಪಾರ್ಥಂ
    ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್||

  5. गङ्गाभिषिक्तः सुषिवातभीतः
    करैः सितांशोः प्रहतः पुनश्च ।
    हिमाद्रिजा-सौभग-नेत्र-जन्मा
    वह्निश्चकम्पे बहुशैत्यशीर्णः॥

  6. ಮಹಾಭಾರತದ ಆದಿಪರ್ವದಲ್ಲಿ ಬರುವ ಖಾಂಡವದಹನದ ಪ್ರಸಂಗವನ್ನಿಟ್ಟುಕೊಂಡು ಸಮಾಸ್ಯಾಪೂರಣ ಮಾಡಲು ಯತ್ನಿಸಿರುವೆನು. ಅಗ್ನಿಯು ಶ್ವೇತಾಕಿ ರಾಜನ ಯಜ್ಞದಲ್ಲಿ ಸೇವಿಸಿದ ತುಪ್ಪದಿಂದ ಹೊಟ್ಟೆಗೆಟ್ಟು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವಾಗಲೆಲ್ಲ ಇಂದ್ರನು ಮಳೆಗರೆಯುತ್ತಿರುತ್ತಾನೆ, ಅದರಿಂದ ಅಗ್ನಿಯು ತೋಯಲ್ಪಟ್ಟು ಚಳಿಯಿಂದ ನಡುಗುತ್ತಿರುವನೆಂದು.

    ಕಳೆಯಲ್ ತಾಪಮುದರದೊಳ್
    ಬಳಸುತ್ತುಂ ಖಾಂಡವಾಟವಿಯನುರಿಸಿರಲೇಂ|
    ಮಳೆಗರೆಯಲಿಂದ್ರನಾಗಾ
    ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್||

  7. ಬಳಲುತೆ ವಾಯುವೆ ಕುಂಟಿರ-
    ಲಳುಕಿರಲಮರರ್ ಹಿರಣ್ಯಕಶಿಪುವ ನೆನೆದಾ
    ಗಳೆ ಬಾಯಾರಿರೆ ವರುಣಂ
    ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್||

    • ಲಕ್ಷ್ಮೀಶ ನೆನಪಾದ. ಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ ಪೊತ್ತುವೆಳಗಂ ಬೇರೆ ತೋರ್ಪರಾರ್, ಬಿಡದ ಘರ್ಮೋತ್ತರಕೆ ಮಾರುತಂ ಬೆಮರ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದೆ…

      • ಧನ್ಯವಾದಗಳು, ಮಹಾಕವಿಯ ಸಾಲಿನ ಸೌಂದರ್ಯವೇ ಸೌಂದರ್ಯ!

  8. ಮಹಾಭಾರತದ ಆದಿಪರ್ವದಲ್ಲಿ ಬರುವ ಖಾಂಡವದಹನದ ಪ್ರಸಂಗವನ್ನಿಟ್ಟುಕೊಂಡು ಸಮಾಸ್ಯಾಪೂರಣ ಮಾಡಲು ಯತ್ನಿಸಿರುವೆನು. ಅಗ್ನಿಯು ಶ್ವೇತಾಕಿ ರಾಜನ ಯಜ್ಞದಲ್ಲಿ ಸೇವಿಸಿದ ತುಪ್ಪದಿಂದ ಹೊಟ್ಟೆಗೆಟ್ಟು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವಾಗಲೆಲ್ಲ ಇಂದ್ರನು ಮಳೆಗರೆಯುತ್ತಿರುತ್ತಾನೆ, ಅದರಿಂದ ಅಗ್ನಿಯು ತೋಯಲ್ಪಟ್ಟು ಚಳಿಯಿಂದ ನಡುಗುತ್ತಿರುವನೆಂದು.

    ———

    ಕಳೆಯಲ್ ತಾಪಮುದರದೊಳ್
    ಬಳಸುತ್ತುಂ ಖಾಂಡವಾಟವಿಯನುರಿಸಿರಲೇಂ|
    ಮಳೆಗರೆಯಲ್ ಪರ್ಜನ್ಯಂ
    ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್||

  9. ಕಿಚ್ಚಿಲ್ಲದ ಕದನ:
    क्रीडायुद्धेषु योद्धारो कागदासिगदाशुगैः ।
    किलन्तो मोदयन्तीह नरा नारायणं यथा ॥

  10. ಸೀಸ ಪದ್ಯ:
    ಸತಿಗೆ ಮೋಸವ ಮಾಡಿ ಬಂದಾತಂ ಶಿಕ್ಷೆಯ ನಡುವಲ್ಲಿ ಪರಸತಿಯನ್ನೇ ನೆನೆಯಲ್
    ಸರ್ಕಾರದುದ್ಯೋಗಿ ಯಮನನ್ನೇ ವಂಚಿಸಲುಪಮಾರ್ಗಗಳಿಗಾಗಿ ಶೋಧಂ ನಡೆಸಲ್|
    ನ್ಯಾಯಪಾಲಕನೋರ್ವ ಧರ್ಮನ ರಾಜ್ಯದಿ ಧರ್ಮವಿಕ್ಷೇಪಕ್ಕೆ ತಂತ್ರ ಮಸೆಯಲ್
    ಲೋಭಿ ದಲ್ ವ್ಯಾಪಾರಿ ನರಕಯಾತನೆಯಲ್ಲು ಸಾಲವಸೂಲಿಯ ಚಿಂತೆಗಾದಂ||

    ಚಿಂತಾಕ್ರಾಂತಂ ಧರ್ಮಂ ಪರಿಪಾಕವೆಂತೆಂದು
    ವ್ಯರ್ಥವಾಯ್ತಯ್ ನರಕಯುಕ್ತಿಯೆಲ್ಲಂ
    ಖಳರ ಪಳಗಿಸಲ್ ತಾನ್ ನಿರ್ಮಿಸಲೆಸೆದನು
    ಕಠಿಣ ನವವಿಭಾಗಂ ಶಿಕ್ಷಣಾರ್ಥಂ|| ಆಟವೆಲದಿ

    ( ಸ್ವಲ್ಪ off topic ಆಯ್ತು. ಭೈರಪ್ಪನವರ ಸಾಕ್ಷಿಯಲ್ಲಿ ಬರುವ ಪಾತ್ರದ ಪ್ರೇರಣೆಯಿಂದ)

    • ಕಲ್ಪನೆ/ ಪದ್ಯ ಚೆನ್ನಿವೆ. ವಿಷ್ಣುಗಣದ ಶ್ರವ್ಯರೂಪದಲ್ಲಿ ನನನಾನಾ ನಾನಾನಾ ಇವೆರಡಕ್ಕಷ್ಟೆ ಅನುಮತಿಯಿದೆ. /ಯನ್ನೇ ನೆನೆ/, /ಶೋಧಂ ನಡೆ/, ಮತ್ತು /ತಂತ್ರ ಮಸೆ/ ಇವು ಹೊಂದವು.

      • ೧ ರಿಂದ ೪ನೆ ಸಾಲಿನವರೆಗೆ:: ವಿಷ್ಣು ವಿಷ್ಣು ವಿಷ್ಣು ವಿಷ್ಣು ವಿಷ್ಣು ವಿಷ್ಣು ಬ್ರಹ್ಮ ಬ್ರಹ್ಮ

        ಸತಿಗೆ ಮೋ|ಸವ ಮಾಡಿ| ಬಂದಾತಂ| ಶಿಕ್ಷೆಯ| ನಡುವಲ್ಲಿ| ಪರಸತಿ|ಯನ್ನೇ| ನೆನೆಯಲ್|
        ಸರ್ಕಾರ|ದುದ್ಯೋಗಿ| ಯಮನನ್ನೇ| ವಂಚಿಸ|ಲುಪಮಾರ್ಗ|ಗಳಿಗಾಗಿ| ಶೋಧಂ| ನಡೆಸಲ್|
        ನ್ಯಾಯಪಾ|ಲಕನೋರ್ವ| ಧರ್ಮನ| ರಾಜ್ಯದಿ| ಧರ್ಮವಿ|ಕ್ಷೇಪಕ್ಕೆ| ತಂತ್ರ| ಮಸೆಯಲ್|
        ಲೋಭಿ ದಲ್| ವ್ಯಾಪಾರಿ| ನರಕಯಾ|ತನೆಯಲ್ಲು| ಸಾಲವ|ಸೂಲಿಯ| ಚಿಂತೆ|ಗಾದಂ||

        • ಓ ಕ್ಷಮಿಸಿ, ನಾನು ಮಾತ್ರಾಸೀಸವನ್ನು ಮನಸ್ಸಿನಲ್ಲಿಟ್ಟುಕೊಂಡು ಗಲಿಬಿಲಿಗೊಂಡೆ. ನಿಮ್ಮ ನಿರ್ವಹಣೆ ತೀರ ಸರಿಯಾಗಿದೆ. ’ಶ್ರುತಿಕಟುತ್ವವಿಲ್ಲವಲ್ಲಽಽ’ ಎಂಬ ಆಲೋಚನೆ ಬಂದರೂ ತಗಾದೆ ತೆಗೆದೆ. ಕ್ಷಮೆಯಿರಲಿ.

          • ಮತ್ತೆ ಮತ್ತೆ ಓದಿ, ಸರಿ ಮಾಡಿ ಕೊಂಡೆ. ಧನ್ಯವಾದಗಳು.

  11. ರೊಚ್ಚಿಂದಲೆದ್ದು ಹೊರಟಂ ಭರದಿಂದಮಾತ್ಯಂ
    ಪೆಚ್ಚಾದರುಂ ಮಣಿಯನಯ್ ಗಡ ಚಂದ್ರಗುಪ್ತಂ|
    ಬೆಚ್ಚಿರ್ದುದೆಂದು ನಗರಂ ಭಳಿರೇಂ ಭವಿಷ್ಯಂ?
    ಕಿಚ್ಚಿಲ್ಲದೀ ಕದನದೊಳ್ ನೆಲನಾಡೆ ಗೆಲ್ಗುಂ||

    (ಚಾಣಕ್ಯ-ಚಂದ್ರಗುಪ್ತರ ಕದನದ ನಾಟಕದಲ್ಲಿ ನಾಡು ನೆಲವೇ ಗೆಲ್ಲುವುದು)

  12. ಮೂರು ಕಾಲಿನ ಓಟ –
    ಮಾರಾಯ್ತಿ ಮಾರಾಯರೂರೆಲ್ಲ ಸುತ್ತಿ ಸಂ-
    ಸಾರಬಂಧನದಲ್ಲಿ ಸಿಲುಕಲ್
    ದಾರವು ಬಿಗಿದಿರಲೆಡಬಲ ಕಾಲ್ಗಳ
    ಮೂರುಕಾಲೋಟವೆ ಚಂದಂ||ಸಾಂಗತ್ಯ||
    (ಸಂಸಾರದಲ್ಲಿ ಒಂದೊಂದು ಕಾಲಷ್ಟೇ free. ಉಳಿದೆರಡು ಕಾಲು ಅಂಟಿಕೊಂಡಿರುತ್ತದೆ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)