Nov 222021
೧. ಕನಕಭೂಷಣ
೨. ಕಿವಿಯಲ್ಲಿ ಸಿಕ್ಕಿದ ನೊಣ
೪. ಭಿತ್ತಿಚಿತ್ರ
ಮತ್ತೇಭದ ಸಮಸ್ಯೆ –
ಜಪಮಾಲಾಮಣಿಗಳ್ ಜಗುಳ್ದು ಸುರಿಯಲ್ ಜಪ್ಯಂ ಪದಂ ಸಿದ್ಧಿಕುಂ
स्रस्ते सिद्धिरवाप्यते जपमणीजालेत्र निःसंशयम्
೧. ಕನಕಭೂಷಣ
೨. ಕಿವಿಯಲ್ಲಿ ಸಿಕ್ಕಿದ ನೊಣ
೪. ಭಿತ್ತಿಚಿತ್ರ
ಮತ್ತೇಭದ ಸಮಸ್ಯೆ –
ಜಪಮಾಲಾಮಣಿಗಳ್ ಜಗುಳ್ದು ಸುರಿಯಲ್ ಜಪ್ಯಂ ಪದಂ ಸಿದ್ಧಿಕುಂ
स्रस्ते सिद्धिरवाप्यते जपमणीजालेत्र निःसंशयम्
ಕನಕಭೂಷಣ:
ಹಿಮವತ್ಪರ್ವತಮೊಪ್ಪೆಯುತ್ತರದೆ ಮೂರ್ಗೊಂಟೊಳ್ ಮಹಾಂಭೋಧಿ ವಿ
ಶ್ರಮಿಸುತ್ತಿರ್ಪೊಡೆ ಚಂಡಹಸ್ತನುದಯಾಸ್ತಂಗಳ್ ನೆಗಳ್ದಾಗಳೀ|
ಕ್ರಮದಿಂ ಮೌಳಿಯೊಳಂತೆ ಬಾಹುಗಳೊಳಂತಾ ಮೇಖಲಾಬಂಧದೊಳ್
ಕಮನೀಯಾಸ್ಪದಮಪ್ಪ ಪೊಂದೊಡುಗೆಯಂ ತೊಟ್ಟೊಪ್ಪುವಳ್ ಭಾರತೀ||
ಉತ್ತರದಲ್ಲಿ ಹಿಮಾಲಯವೂ, ಮಿಕ್ಕ ಮೂರು ದಿಕ್ಕುಗಳಲ್ಲಿ(ಗೊಂಟು) ಮಹಾಸಮುದ್ರವೂ ಇರುವಾಗ ಸೂರ್ಯನ ಉದಯಾಸ್ತಗಳ ಸಮಯದಲ್ಲಿ ಕಿರೀಟದಲ್ಲಿಯೂ, ಭುಜಗಳಲ್ಲಿಯೂ(ಭುಜಕೀರ್ತಿ), ಡಾಬಿನಲ್ಲಿಯೂ ಸೊಗಸಾದ ಕನಕಭೂಷಣವನ್ನು ತೊಟ್ಟು ಭಾರತಿಯು ಶೋಭಿಸುತ್ತಾಳೆ.
( ಸೂರ್ಯನ ಉದಯಾಸ್ತಕಾಲದ ಕಿರಣಗಳಿಂದ ಹಿಮವತ್ಪರ್ವತವೂ, ಸಮುದ್ರದ ನೀರೂ ಬಂಗಾರದ ಬಣ್ಣವನ್ನು ತಳೆದು ಹೊಳೆಯುತ್ತದೆ)
ಕಿವಿಯಲ್ಲಿ ಸಿಕ್ಕಿದ ನೊಣ:
ನೊಣದಿಂ ತುಳಿತಕ್ಕಾಗೆ ಮ
ಸಣಮಂ ನೀಂ ನೋಳ್ಪೆಯೆಂದ ಜಾನಿಯ ಮನೆಯಿಂ
ಗೊಣಗುತೆ ಬರೆ ದಾರಿಯ ಮೆರ
ವಣಿಗೆಯ ಕರಿಕರ್ಣದೊಳಗೆ ನೊಣವೊಕ್ಕಿದುದಯ್||
ಒಬ್ಬ ಜ್ಞಾನಿಯು ನೀನು ನೊಣದಿಂದ ತುಳಿತಕ್ಕೊಳಗಾಗಿ ಸ್ಮಶಾನವನ್ನು ಸೇರುವೆ ಎಂದಾಗ ಈತನು ಅವನನ್ನು ಬಯ್ಯುತ್ತಾ ದಾರಿಯಲ್ಲಿ ಬರುವಾಗ ಅಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿದ್ದ ಆನೆಯ ಕಿವಿಯಲ್ಲಿ ನೊಣವೊಂದು ಹೊಕ್ಕಿತು.
ಭಿತ್ತಿಚಿತ್ರ:
ಚಿತ್ತಭಿತ್ತಿಯನಾಂತು ರಾಜಿಸೆ ಚಿತ್ರದಂತುಟೆಯಾಶೆಗಳ್
ಮತ್ತೆ ಮಾಸದವೋಲೆ ಲೋಕದ ಪಾಶಸಂತತಿ ವರ್ಣಮಂ|
ಪತ್ತಿಸುತ್ತಿದೊ ನೂಂಕುತಿರ್ಪುದು ಬಂಧಕೂಪಕೆ ನೀನದಂ
ಹೃತ್ತಮೋಹರ! ವರ್ಣಶೂನ್ಯನೆ! ಮಾಯಿಸಲ್ಕೆ ನೆರಂಗುಡಯ್||
ಮನಸ್ಸಿನ ಭಿತ್ತಿಯನ್ನು ಆಶೆಗಳೆಂಬ ಚಿತ್ರಗಳು ಆವರಿಸಿಕೊಂಡಿವೆ. ಅವುಗಳು ಮಾಸದಂತೆ ಲೋಕದ ಪಾಶಸಂತತಿ ಮತ್ತೆ ಮತ್ತೆ ಬಣ್ಣವನ್ನು ಹಚ್ಚಿ ಬಂಧನವೆಂಬ ಕೂಪಕ್ಕೆ ತಳ್ಳುತ್ತಿವೆ. ಹೃದಯದ ಕತ್ತಲನ್ನು ನೀಗಿಸುವ ವರ್ಣಶೂನ್ಯನೇ! ಅವುಗಳನ್ನು ಮಾಸುವಂತೆ ಮಾಡಲು ನೀನೇ ನೆರವೀಯಬೇಕು.
ಭಿತ್ತಿಚಿತ್ರ ಅತ್ಯುತ್ತಮ
ಧನ್ಯವಾದಗಳು
“ಕಪಿವೊಲ್ ಕೀಟಲೆಯಿಂದೆ ಮೊಮ್ಮಗನಿದೋ ಕಿತ್ತಿಟ್ಟು ಚೆಲ್ಲಾಡಿಹಂ
ಕೃಪೆದೋರಯ್ ಸಿಗುವಂದದೆಲ್ಲ ಮಣಿಗಳ್ ನಾನಾವಿಧಂ ಸಂಚಿತಂ|
ಕಪಿಮಿತ್ರಾ! ವರರಾಮ-ರಾಮ-ರಘುರಾಮಾ ರಾಮನೇ ರಾಮನೇ”
ಜಪಮಾಲಾಮಣಿಗಳ್ ಜಗುಳ್ದು ಸುರಿಯಲ್ ಜಪ್ಯಂ ಪದಂ ಸಿದ್ಧಿಕುಂ||
ಕನಕದಾಸೆಯು ಸಲ್ಲ, ಕಳ್ಳಕಾಕರೆ ಎಲ್ಲು
ಕೊನೆಗೆ ಬರಿಗತ್ತೆ, ಬರಿಗೈಯೆ ನೋಡೆ|
ಕನಕಮಯವಾಗಿ ಮೆರೆದಿತ್ತಲ್ತೆ ಹಿಂದೆಂದೊ
ಮಿನುಗೆಲ್ಲ ಕಳೆಯಿತಾ ಕೋಲಾರದ||
ವಾಚಾಲರಪರಿಮಿತರೀ ಲೋಕದೊಳಗಿಹರು
ಕೀಚು-ಕಾಚೆಂದೊದರುವವರು ಕೂಡ|
ರಾಚೆ ಕಿವಿಗೇನೆಲ್ಲವದ ನಾಲಗೆಗೆ ತರರು
ಯೋಚಿಸುವರಿನಿತಸಹ್ಯವನವುಗಳ||
ಮೊದಲಿಗಿದ್ದದ್ದು ಶಿಲ್ಪ ಮಾತ್ರ. ಆನಂತರ ಚಿತ್ರಕ್ಕೆ ಗೋಡೆ/ಕಲ್ಲೇ ಭಿತ್ತಿಯಾಯ್ತು. ಈಗ ಕಾಗದ ಬಂದಿದೆ. ಒಮ್ಮೆ ಚಿತ್ರಿಸಿದ ಮೇಲೆ, ಆ ಚಿತ್ರವು ಎಲ್ಲೆಲ್ಲಿಗೋ ಪಯಣಿಸಿ, ಒಮ್ಮೆ ನೋಡಬೇಕೆಂದರೂ ಚಿತ್ರಕಾರನಿಗೆ ಸಿಗದಂತಾಯಿತು.
ಕಲ್ಲನಿದ್ದಲ್ಲೆ ಕೆತ್ತಿದರು, ನಂತರದೊಳದೆ
ಕಲ್ಲೊಳೇ ಚಿತ್ರವನು ’ಬಣ್ಣಿ’ಸಿದರು|
ಸಲ್ಲಿರಲು ಕಾಗದವು, ಬಣ್ಣವೆಲ್ಲಿಯದೊ ಕ-
ಲ್ಲೆಲ್ಲಿಯದೊ ಎಲ್ಲಿಯವನೋ ಚಿತ್ರಕ||